Thursday, November 11, 2010

ಜಯಮಾಲಳಿಗೇಕೆ ಅಯ್ಯಪ್ಪನ ಮೋಹ?
ನಾಲ್ಕು ವರ್ಷಗಳ ಹಿಂದೆ ಅಂದರೆ ೨೦೦೬ರ ಆಗಸ್ಟ್೫ರಂದು ನಟಿ ಜಯಮಾಲಾ ಅವರು ತಾನು ತನ್ನ ೨೭ನೇ ವಯಸ್ಸಿನಲ್ಲಿ ಶಬರಿಮಲೆಯ ಅಯ್ಯಪ್ಪನ ದರ್ಶನ ಪಡೆದು ಆತನ ಪಾದಗಳನ್ನು ಸ್ಪರ್ಶಿಸಿದ್ದೇನೆ ಎಂದು ಮಾಧ್ಯಮಗಳೆದುರು ಹೇಳಿಕೊಂಡರು. ಅನಾರೋಗ್ಯಪೀಡಿತರಾದ ತಮ್ಮ ಪತಿಯ ಶ್ರೆಯೋಭಿಲಾಷೆಗಾಗಿ ಅವರು ಈ ಯಾತ್ರೆ ಕೈಗೊಂಡಿದ್ದರು.

ಅವರ ಹೇಳಿಕೆ ದೇಶಾದಾದ್ಯಂತ ಸಂಚಲನವನ್ನುಂಟು ಮಾಡಿತು. ಧಾರ್ಮಿಕ ಮನೋಭಾವದ ಜನರು ಛೇ ಆಕೆ ಹಾಗೆ ಮಾಡಬಾರದಿತ್ತು ಎಂದು ನೊಂದುಕೊಂಡರು.
ಜಯಮಾಲಾ ಹೇಳಿಕೆ ನೀಡಿದ ಬೆನ್ನಲ್ಲೆ ಇನ್ನೊಬ್ಬ ನಟಿ ಗಿರಿಜಾ ಲೋಕೆಶ್ ಕೂಡಾ ತಾವು ಅಯ್ಯಪ್ಪನ ದರ್ಶನ ಪಡೆದಿರುವುದಾಗಿ ಹೇಳಿಕೊಂಡರು.
ಕಾಕತಾಳಿಯವೆಂದರೆ ಇಬ್ಬರೂ ಒಂದೇ ವರ್ಷ ಅಯ್ಯಪ್ಪನ ದರ್ಶನ ಪಡೆದಿರುವುದಾಗಿ ಹೇಳಿಕೊಂಡಿದ್ದರು. ಅದು ೧೯೮೭ರಲ್ಲಿ.

ಅವತ್ತಿನ ಜಯಮಾಲರ ಹೇಳಿಕೆ ಈಗ ನಾಲ್ಕು ವರ್ಷಗಳ ನಂತರ ಮತ್ತೆ ಮರುಜೀವ ಪಡೆದುಕೊಂಡಿದೆ. ಆಕೆಯ ಮೇಲೆ ದೋಷಾರೋಪಣಾ ಪಟ್ಟಿ ಸಲ್ಲಿಸಲು ಕೇರಳ ಪೋಲಿಸರು ಮುಂದಾಗಿದ್ದಾರೆ. ಭಾರತೀಯ ದಂಡ ಸಂಹಿತೆಯ ೨೯೫ ಎ [ಇದು ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದನ್ನು ವಿವರಿಸುತ್ತದೆ.] ಕಲಮಿನಡಿ ದೋಷರೋಪಣಾ ಪಟ್ಟಿ ಸಲ್ಲಿಸಲು ನಿರ್ಧರಿಸಲಾಗಿದೆ.

ಜಯಮಾಲಾಗೆ ಇದೆಲ್ಲಾ ಬೇಕಿತ್ತೇ?

ಜಯಮಾಲಾ ತುಳುನಾಡಿನ ಹೆಣ್ಣುಮಗಳು. ಅದು ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಒಪ್ಪಿಕೊಂಡಿರುವ ನಾಡು. ಇಂದಿಗೂ ಅಲ್ಲಿನ ಮಹಿಳೆಯರು ಸ್ವಾಭಿಮಾನಿಗಳೂ, ಛಲವಂತರೂ, ಧೈರ್ಯಶಾಲಿಗಳೂ, ಆಧುನಿಕ ಮನೋಧರ್ಮದವರೂ ಆಗಿದ್ದಾರೆ. ನಿಜವಾದ ಅರ್ಥದಲ್ಲಿ ಅವರು ಸ್ತ್ರೀವಾದಿಗಳು. ಆದರೂ ಧಾರ್ಮಿಕ ವಿಧಿವಿಧಾನಗಳಲ್ಲಿ, ಆಚರಣೆಯಲ್ಲಿ ಅವರನ್ನು ಅಲ್ಲಿನ ಪುರುಷ ಸಮಾಜ ತಮ್ಮ ಸರಿಸಮಾನರಂತೆ ಕಾಣುವುದಿಲ್ಲ.

ಕೇರಳದ ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣಕನ್ನಡವನ್ನು ತುಳುನಾಡೆಂದು ಕರೆಯಲಾಗುತ್ತದೆ. ಇಲ್ಲಿ ದೇವರಿಗಿಂತಲೂ ದೈವಗಳು ಹೆಚ್ಚು ಪ್ರಭಾವಶಾಲಿ. ದೈವಗಳೆಂದರೆ ಭೂತಗಳು. ಹಿಂದೆ ಇದೇ ನೆಲದಲ್ಲಿ ಬದುಕಿ ಬಾಳಿದ್ದ ವ್ಯಕ್ತಿಗಳು ಸಹವ್ಯಕ್ತಿಗಳ ಕುತಂತ್ರದಿಂದಾಗಿ ದುರಂತಮರಣಕ್ಕಿಡಾಗಿ ಕಾಲಾಂತರದಲ್ಲಿ ದೈವಗಳಾಗಿ ಜನ- ಜಾನುವಾರುಗಳನ್ನು ರಕ್ಷಿಸುವ ರಕ್ಷಕ ದೈವಗಳಾಗಿ ಪೂಜನೀಯರಾಗುತ್ತಾರೆ.

ಇಂತಹ ದೈವಗಳಿರುವ ಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ.ನಮಗೂ ಅಲ್ಲಿಗೆ ಪ್ರವೇಶ ಬೇಕು ಎಂದು ತುಳುನಾಡಿನ ಯಾವ ಮಹಿಳೆಯೂ ಧ್ವನಿಯೆತ್ತಿದ ಉದಾಹರಣೆ ನನಗೆ ಗೊತ್ತಿಲ್ಲ.


ಇಂದಿಗೂ ಧರ್ಮಸ್ಥಳದಲ್ಲಿರುವ ಅಣ್ಣಪ್ಪ ಪಂಜುರ್ಲಿಯ ಬೆಟ್ಟಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ. ತೀರ ಇತ್ತೀಚಿನವರೆಗೂ ಕುಕ್ಕೆಸುಬ್ರಹ್ಮಣ್ಯದಲ್ಲಿರುವ ಕುಮಾರಪರ್ವತವನ್ನು ಮಹಿಳೆಯರು ಏರುವಂತಿರಲಿಲ್ಲ. ಈಗ ಮಹಿಳೆಯರು ಅಲ್ಲಿಗೆ ಟ್ರೆಕ್ಕಿಂಗ್ ಬರುತ್ತಾರೆ.

ಇಂತಹ ತುಳುನಾಡಿನ ಹೆಣ್ಣುಮಗಳು ಜಯಮಾಲಾ, ಹರಿಹರರ ಸಂಯೋಗದಿಂದ ಜನಿಸಿದ ಸ್ತೀ ದ್ವೇಷಿಯಾದ ಅಯ್ಯಪ್ಪನ ಪಾದವನ್ನು ಟಚ್ ಮಾಡಲು ಯಾಕಾದರೂ ಹೋದರೋ! ಹಾಗೊಂದು ವೇಳೆ ಪ್ರಾರ್ಥಿಸಲೇಬೇಕೆಂದಿದ್ದರೆ ಕರಾವಳಿಗೇ ವಿಶಿಷ್ಟ ದೇವರಾದ ಅವನಪ್ಪ ಮಹಾಲಿಂಗೇಶ್ವರನಿರಲಿಲ್ಲವೇ? ಸರ್ವಶಕ್ತೆಯಾದ ಭಗವತಿಯಿರಲಿಲ್ಲವೇ?

ದೈವ ನಂಬಿಕೆ ಎನ್ನುವುದು ತೀರಾ ವೈಯಕ್ತಿಕವಾದುದು. ಅನ್ಯಥಾ ಶರಣಂ ನಾಸ್ತಿ’ ಎಂದು ಮೊರೆಯಿಟ್ಟದ್ದನ್ನು ಜಗಜ್ಜಾಹೀರುಗೊಳಿಸಬಾರದು.

ಕಳೆದ ವಾರ ನಮ್ಮ ರಿಯಾಲಿಟಿ ಶೋ ಒಂದರ ಶೂಟಿಂಗ್ ಗಾಗಿ ಉಳ್ಳಾಲ್ತಿ ಭೂತದ ಸ್ಥಾನಕ್ಕೆ ನಾನು ಹೋಗಿದ್ದೆ. ನಮ್ಮ ಕ್ಯಾಮರಮ್ಯಾನ್ ಗೆ ನಮಗೆ ಎಂತಹ ಶಾಟ್ಸ್ ಬೇಕೆಂದು ಸೂಚನೆ ಕೊಟ್ಟು ನಾನು ದೂರದಲ್ಲಿ ನಿಂತಿದ್ದೆ. ಆದರೂ ಉತ್ಸಾಹ, ಕುತೂಹಲ. ’ನಾನಲ್ಲಿಗೆ ಬರಬಹುದೇ’ ಎಂದು ಕೇಳಿದೆ. ’ನಮ್ಮ ಪೂಜಾರಿಯವರು ಮಹಿಳೆಯರೂ ಇಲ್ಲಿಗೆ ಬರಬಹುದು ಎಂದಿದ್ದಾರೆ’ ಎಂದರು.ನಾನು ದೈರ್ಯದಿಂದ ಮುಂದಡಿಯಿಟ್ಟೆ. ಆದರೆ ಶೂಟಿಂಗ್ ಮುಗಿಸಿ ಬರುತ್ತಿರುವಾಗ ಮಧ್ಯರಾತ್ರಿ, ಕಾಡಿನ ಮದ್ಯೆ ನಮ್ಮ ಕಾರು ಕೆಟ್ಟು ನಿಂತಿತು. ಹೇಗೋ ವಿಷಯ ತಿಳಿದ ಉಳ್ಳಾಲ್ತಿಯ ಪೂಜಾರಿ ಪೋನ್ ಮಾಡಿ ’ನಮ್ಮ ದೈವಕ್ಕೆ ನಿಮ್ಮಿಂದ ಎನೋ ಸೇವೆ ಆಗಬೇಕಾಗಿದೆ.ಒಂದು ಹರಕೆ ಹೇಳಿಕೊಳ್ಳಿ’ಎಂದರು. ಆದರೂ ಎರಡು ದಿನ ನಾವು ಅಲ್ಲಿಯೇ ಇರಬೇಕಾಯಿತು. ಅದೊಂದು ರೋಚಕ ಅನುಭವ .ಅದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.

ಅಹಂಕಾರಕ್ಕೆ ಉದಾಸೀನ ಮದ್ದಾಗಬೇಕು ಎಂಬುದು ಹಿಂದಿನಿಂದಲೂ ಬಂದ ನಾಣ್ಡುಡಿ. ನಾವು ಅವರಿಗೆ ಬೇಡವಾದರೆ ಅವರೂ ನಮಗೆ ಬೇಡ. ಅಷ್ಟೇ.ಅಯ್ಯಪ್ಪನ ವಿಷಯಕ್ಕೂ ಇದು ಅನ್ವಯಿಸುತ್ತದೆ.

5 comments:

ಮಹೇಶ ಭಟ್ಟ said...

ಇನ್ನೊಬ್ಬರ ನಂಬಿಕೆಗೆ ಧಕ್ಕೆಯುಂಟಾದರೂ ಸರಿ ತಮಗೆ ಪ್ರಚಾರ ಗಿಟ್ಟಿಸಿಕೊಳ್ಳುವ ಹುಚ್ಚು. ಸ್ತ್ರೀವಾದಿಗಳು ಈ ವಿಷಯದಲ್ಲಿ ಏನು ಹೇಳುತ್ತಾರೆ ಎನ್ನುವದು ಮುಖ್ಯ

ವಿ.ರಾ.ಹೆ. said...

----------ತೀರ ಇತ್ತೀಚಿನವರೆಗೂ ಕುಕ್ಕೆಸುಬ್ರಹ್ಮಣ್ಯದಲ್ಲಿರುವ ಕುಮಾರಪರ್ವತವನ್ನು ಮಹಿಳೆಯರು ಏರುವಂತಿರಲಿಲ್ಲ. -------

ಹೌದಾ,?! ತೀರಾ ಇತ್ತೀಚಿನವರೆಗೆ ಅಂದರೆ ಎಲ್ಲಿಯವರೆಗೆ? ಕುಮಾರ ಪರ್ವತ ಹತ್ತದಂತೆ ಯಾರು ಎಲ್ಲಿ ನಿಂತು ತಡೆಯುತ್ತಿದ್ದರು ಮಹಿಳೆಯರನ್ನು? ಅಥವಾ ಅದೊಂದು ಬರೀ ನಂಬಿಕೆಯಾಗಿತ್ತಾ ಮತ್ತು ಮಹಿಳೆಯರಿಗೆ ಅದು ಗೊತ್ತಿದ್ದು ಪಾಲಿಸಲ್ಪಡುತ್ತಿತ್ತಾ?

sunaath said...

ಒಂದು ದೇವಸ್ಥಾನದ ರೀತಿ, ರಿವಾಜುಗಳು ತಪ್ಪೇ ಆಗಿದ್ದರೂ ಸಹ, ಅವನ್ನು ನಾವು ಪಾಲಿಸಬೇಕು. ಅಯ್ಯಪ್ಪಸ್ವಾಮಿಯ ಚಿತ್ರವನ್ನು ಮನೆಯಲ್ಲಿ ಪೂಜಿಸಿಕೊಳ್ಳಲಿ, ಅಲ್ಲಿಯ ಗುಡಿಗೆ ಹೋಗುತ್ತೇನೆ ಎನ್ನುವ ಹಟ ಯಾಕೆ? ಕ್ರಿಶ್ಚಿಯನ್ನರು ಚರ್ಚಿಗೆ ಚಪ್ಪಲಿ ಮೆಟ್ಟಿಕೊಂಡೇ ಹೋಗುತ್ತಾರೆ. ಆದರೆ ದೇವಸ್ಥಾನಗಳಿಗೆ ಹೋಗಬೇಕೆನಿಸಿದರೆ,ಚಪ್ಪಲಿ ತೆಗೆಯುವದಿಲ್ಲವೆ? ಗುರುದ್ವಾರಗಳಿಗೆ ಹೋಗುವ ಸೀಖರಲ್ಲದವರು ತಲೆಗೆ ವಸ್ತ್ರ ಕಟ್ಟಿಕೊಳ್ಳುವದಿಲ್ಲವೆ?

swati said...

ಇದೆಲ್ಲ ಈ ಶತಮಾನದ ಗಿಮಿಕ್ಕುಗಳು ....ತಂತಮ್ಮ ಮನದಲ್ಲಿರುವುದನ್ನು ಹೇಳಿದರೆ ಇವರೆಲ್ಲ ಮಹಾ ಸಂತರು ಅನ್ನುವ ಪೋಸು ಬೇರೆ .ಮನದ ತಲ್ಲಣಗಳು ಖುಷಿಗಳು ಅತ್ಯಂತ ವೈಯಕ್ತಿಕ.ಅವುಗಳನ್ನು ಜಗಜ್ಜಾಹೀರು
ಮಾಡುವುದು ಹೇಸಿಗೆ ಹುಟ್ಟಿಸುತ್ತದೆ.ಮಾಧ್ಯಮಗಳಲ್ಲಿ (ಟೀವಿ,ಪತ್ರಿಕೆ),ಅಲ್ಲದೆ ಇತ್ತೀಚೆಗಿನ ಬ್ಲಾಗ್ ,facebook.twitter,orkut, ಇವೆಲ್ಲದರಲ್ಲಿ ಇದೆ ರಾಮಾಯಣ...ಖಾಸಗಿ ಅನ್ನುವುದೇ ಇಲ್ಲಿ ಬೋರಿಂಗ್ ವಿಷಯ .ಬೆತ್ತಲಾಗಬೇಕು ನಿಜ ಆದರೆ ,ಯಾವರೀತಿ ಅನ್ನುವ ಜ್ಞಾನ ಹೊಂದುವುದು ಅಷ್ಟೇ ಅಗತ್ಯ ಇನ್ನು ಕರಾವಳಿಯ ಹೆಣ್ಣು ಮಕ್ಕಳು ಯಾವತ್ತಿಗೂ ಸುಂದರಿಯರು ,ಜಾಣೆಯರು..........

Anonymous said...

ನಂಗೆ ಒಂದು ಡೌಟು.ಈ ನಿಯಮ ಮಾಡಿರೋದು ದೇವರ ಇಲ್ಲ ಪೂಜಾರಿನ?

ರಾಕೇಶ್ ಶೆಟ್ಟಿ :)