Monday, December 5, 2011

ಮಡೆ ಮಡೆಸ್ನಾನ- ’ಗ್ರಹಿಕೆ’ ಮತ್ತು ’ಸಂವಹನ”ದ ಸಮಸ್ಯೆ

ಇಂದು ಸುಬ್ರಹ್ಮಣ್ಯದ ರಥ ಬೀದಿಯಲ್ಲಿ ನಡೆದ ಪ್ರತಿಭಟನಾ ಸಭೆ.

”ಮಡೆ ಮಡೆಸ್ನಾನ’ವೆಂಬ ಆಚರಣೆಯ ಮುಖಾಂತರ ಈಗ ಮಾಧ್ಯಮಗಳಲ್ಲಿ ಕುಖ್ಯಾತಿ ಪಡೆಯುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ನನ್ನೂರು.ಚಿಕ್ಕಂದಿನಿಂದಲೂ ಆ ಆಚರಣೆಯನ್ನು ನೋಡುತ್ತಾ ಬೆಳೆದು ಬಂದವಳು ನಾನು. ಹಾಗೆಯೇ ಈ ಆಚರಣೆಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿರುವ ಅಲ್ಲಿಯ ಮೂಲನಿವಾಸಿಗಳು ಹಾಗೂ ಗಿರಿಜನರಾದ ಮಲೆಕುಡಿಯ ಜನಾಂಗದವರನ್ನು ಹತ್ತಿರದಿಂದ ಬಲ್ಲವಳು. ಇದಲ್ಲದೆ ಇಂಥ ನಿಗೂಢ ಆಚರಣೆಗಳ ಬಗ್ಗೆ ಕನ್ನಡದ ಚಾನಲ್ಲೊಂದರಲ್ಲಿ ಟೀವಿ ಸಿರಿಯಲ್ಲನ್ನು ನಿರ್ಮಿಸಿದ ಕಾರಣದಿಂದಾಗಿ ಕರ್ನಾಟಕದಾದ್ಯಂತ ಸುತ್ತಾಡಿದವಳು ನಾನು. ಆ ಹಿನ್ನೆಲೆಯಲ್ಲಿ ಇದನ್ನು ಬರೆಯುತ್ತಿದ್ದೇನೆ.

ಋಣಾತ್ಮಕವಾದ ಕ್ರಿಯೆಯನ್ನು ಮಾಡುವುದರ ಮುಖಾಂತರ ಧನಾತ್ಮಕವಾದ ಶಕ್ತಿಯನ್ನು ಪಡೆಯುವ ಒಂದು ಪರಂಪರೆ ಭಾರತದಲ್ಲಿದೆ. ಅದಕ್ಕೆ ಉದಾಹರಣೆಯಾಗಿ ಅಘೋರಿಗಳ ಆಚರಣೆಗಳನ್ನು ಉಲ್ಲೇಖಿಸಬಹುದು. ಹಾಗೆಯೇ ದೇವರ ಸಾನಿದ್ಯವನ್ನು ಹೊಂದಲು, ಮೋಕ್ಷವನ್ನು ಪಡೆಯಲು ತನ್ನ ದೇಹವನ್ನು ದಂಡಿಸಿಕೊಳ್ಳುವುದೂ ಒಂದು ವಿಧಾನ. ಋಷಿಮುನಿಗಳು ಅದನ್ನು ಮಾಡುತ್ತಿದ್ದರು. ಅದೆಲ್ಲಾ ಸಾಧಕರ ಮಾತಾಯಿತು. ಸಾಮಾನ್ಯ ಸಂಸಾರಿಯೂ ತನ್ನ ತಿಳುವಳಿಕೆಯ ಮಿತಿಯಲ್ಲಿ ದೇವರನ್ನು ಒಲಿಸಿಕೊಳ್ಳುವುದಕ್ಕಾಗಿ, ಅವನ ಕೃಪಾಕಟಾಕ್ಷವನ್ನು ಪಡೆದುಕೊಳ್ಳುವುದಕ್ಕಾಗಿ ಸಮೂಹದೊಂದಿಗೆ ಕೆಲವು ಆಚರಣೆಗಳನ್ನು ಹುಟ್ಟು ಹಾಕಿಕೊಂಡಿದ್ದಾನೆ. ಅದವನ ನಂಬಿಕೆಯ ಜಗತ್ತು; ನೆಮ್ಮದಿಯ ಹುಡುಕಾಟ.

ನಾನು ಮಡೆಸ್ನಾದ ಪರವಾಗಿ ಮಾತಾಡುತ್ತಿಲ್ಲ. ಆದರೆ ’ನಾನು’ ಎಂಬುದರಲ್ಲೇ ತನ್ನ ಅಸ್ತಿತ್ವವನ್ನು ಕಂಡುಕೊಂಡಿರುವ ಮನುಷ್ಯ ತನ್ನ ದೇಹದ ಮೇಲಿನ ಮೋಹವನ್ನು ಕಳೆದುಕೊಂಡು ತಾನು ’ಏನೂ ಅಲ್ಲ’ವಾಗಿ ಅನ್ಯರು ಉಂಡು ಬಿಟ್ಟೆದ್ದ ಉಚ್ಛಿಷ್ಟದ ಮೇಲೆ ಉರುಳಾಡುವುದಕ್ಕೆ ಸರ್ವ ಸಮರ್ಪಣಾ ಭಾವ ಬೇಕು.

ಒಂದು ನಂಬಿಕೆ ಒಬ್ಬ ಮನುಷ್ಯನಿಗೆ ಮಾನಸಿಕ ನೆಮ್ಮದಿಯನ್ನು ತಂದು ಕೊಡುವುದಾದರೆ, ಅದರಿಂದ ಬೇರೆಯವರಿಗೆ ತೊಂದರೆಯಿಲ್ಲವಾದರೆ ’ಅದನ್ನು ಮಾಡಬೇಡ’ ಎಂದು ತಡೆಯಲು ನಾವ್ಯಾರು? ’ಅದು ನಿನ್ನ ಆತ್ಮ ಗೌರವಕ್ಕೆ ಕುಂದು’ ಎಂದು ನಾವು ಹೇಳಬಹುದಷ್ಟೆ. ಆದರೆ ಅವನಿಗೆ ಬೇಕಾದ ಮಾನಸಿಕ ನೆಮ್ಮದಿಯನ್ನು ನಾವು ತುಂಬಿಕೊಡಲಾರೆವು. ನಾನು ಕಂಡಂತೆ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಜನರು ಭಯ ಭಕ್ತಿಯಿಂದ ಆಚರಿಸುತ್ತಿರುವ ಹಲವು ಆಚರಣೆಗಳು ’ಮಾನಸಿಕ ಚಿಕಿತ್ಸಾ ಕೇಂದ್ರ’ಗಳಂತೆ ಕೆಲಸ ಮಾಡುವುದನ್ನು ನಾನು ಕಂಡಿದ್ದೇನೆ. ವೈದಿಕ ಸಂಸ್ಕೃತಿಕ ತೀರಾ ಭಿನ್ನವಾದ ಜಾನಪದೀಯ ಆಚರಣೆಗಳಿವು.

ಆಚರಣೆ, ಜಾತ್ರೆ, ಉರೂಸ್, ನೇಮ, ಭೂತಕೋಲ, ನಾಗಮಂಡಲ- ಇಂತಹ ಸಾರ್ವಜನಿಕ ಸಮಾರಂಭಗಳು ಒಂದು ಊರನ್ನು ಜಾತಿ ಭೇದವಿಲ್ಲದೆ ಭಾವನಾತ್ಮಕವಾಗಿ ಬೆಸೆಯುವುದಾದರೆ ಅಲ್ಲಿ ಸೇರುವ ಮನಸುಗಳ ಬಗ್ಗೆ ನನಗೆ ಗೌರವವಿದೆ. ಆ ಅಚರಣೆಗಳಿಗೆ ವೈಜ್ನಾನಿಕ ಹಿನ್ನೆಲೆಯಿಲ್ಲದಿರಬಹುದು. ಆದರೆ ನಂಬಿಕೆಯ ಬದ್ರಕೋಟೆಯಿರುತ್ತದೆ. ಸಾಮಾನ್ಯವಾಗಿ ಈ ನಂಬಿಕೆಗಳು ಬಿತ್ತಿದ ಬೆಳೆ, ಜನ, ಜಾನುವಾರುಗಳ ಸಂರಕ್ಷಣೆ ಮತ್ತು ಧೈನಂದಿನ ಕಷ್ಟಕೋಟಲೆಗಳಿಂದ ತನ್ನನ್ನು”ರಕ್ಷೀಸಪ್ಪಾ’ ಎಂದು ಕಾಣದ ಶಕ್ತಿಯಲ್ಲಿ ಮೊರೆಯಿಡುವುದೇ ಆಗಿರುತ್ತದೆ.

ಮೊಸರಲ್ಲೂ ಕಲ್ಲನ್ನು ಹುಡುಕುವ ಸ್ವಭಾವದವರು ಜನರ ನಂಬಿಕೆಯ ಜಗತ್ತನ್ನು ಒಡೆಯುವ ಪ್ರಯತ್ನ ಮಾಡುತ್ತಲೇ ಹೋಗುತ್ತಾರೆ. ಆದಕ್ಕೆ ಪರ್ಯಾಯವಾಗಿ ಇನ್ನೊಂದನ್ನು ಕಟ್ಟಿಕೊಡಲು ಇವರಿಂದ ಸಾಧ್ಯವಾಗುತ್ತಿಲ್ಲ. ಅಂದಮೇಲೆ ಆ ’ಭಂಜಕ ಪ್ರವೃತ್ತಿ’ ಸರಿ ಎನ್ನುವುದಾದರೂ ಹೇಗೆ?

ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಆಚರಣೆಯೊಂದನ್ನು ಅಷ್ಟು ಸುಲಭವಾಗಿ ನಿಷೇಧಿಸಲು ಸಾಧ್ಯವಾಗದು. ಅದು ಟೀವಿ ಕ್ಯಾಮಾರಗಳೆದುರು, ವಿಧಾನಸೌಧದ ರಾಜಬೀದಿಯಲ್ಲಿ, ದುಡ್ಡುಕೊಟ್ಟು ತಂದ ಬಾಳೆ ಎಲೆಯನ್ನು, ವಂಧಿವಾಗದರ ಕಯ್ಯಲ್ಲಿ ಹರಡಿಸಿಕೊಂಡು ಅದರ ಮೇಲೆ”ಕೇರೆ ಪೊರಳ್ದಂತೆ ಪೊರಳ್ದು’ ಯೋಗ ನಿದ್ರೆಯ ಭಂಗಿಯನ್ನು ಅಭಿನಯಿಸಿದಷ್ಟು ಸುಲಭವಲ್ಲ.

ಕಳೆದ ವರ್ಷವೇ ಮಡೆಮಡೆಸ್ನಾನ ರಾಜ್ಯಾದ್ಯಾಂತ ಸುದ್ದಿ ಮಾಡಿತ್ತು ನಾಡಿನ ಹೆಸರಾಂತ ಬರಹಗಾರರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರು. ಎಂದಿನಂತೆ ಒಂದಷ್ಟು ಜನ ವಿಚಾರವಾದಿಗಳು ಅವರನ್ನು ಜಾತೀಯ ಕನ್ನಡಕದಿಂದ ನೋಡಿ ಅವರ ಬಾಯ್ಮುಚಿಸಿದ್ದರು. ಅದೇ ವಿಚಾರವಾದಿಗಳಿಗೆ ಆ ಆಚರಣೆಯನ್ನು ನಿಲ್ಲಿಸಲೇಬೇಕೆಂಬ ಇರಾದೆಯಿದ್ದಿದ್ದರೆ ಕುಕ್ಕೆಗೆ ಹೋಗಿ ಮಲೆಕುಡಿಯರು ಸೇರಿದಂತೆ ಅಲ್ಲಿ ಕ್ಷೇತ್ರ ಕಾರ್ಯ ನಡೆಸಿ, ಅಧ್ಯಯನ ವರದಿಯನ್ನು ಸಿದ್ಧಪಡಿಸಿ ಅದನ್ನು ಸರಕಾರಕ್ಕೆ, ಮಾಧ್ಯಮಗಳಿಗೆ ಒಪ್ಪಿಸಿ ಆ ಕುರಿತು ಜನ ಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳಬೇಕಾಗಿತ್ತು. ಬದಲಾವಣೆಯೆಂಬುದು ಒಂದು ನಿಧಾನಗತಿಯ ಪ್ರಕ್ರಿಯೆ. ಅದು ಸರಕಾರದ ನಿಷೇಧದಿಂದಾಗಲಿ ನೇರ ಪ್ರತಿಭಟನೆಯಿಂದಾಗಲಿ ಸಾಧ್ಯವಾಗಲಾರದು. ಅದಕ್ಕೆ ಮನಃ ಪರಿವರ್ತನೆ ಆಗಬೇಕು.

ಎಂಜಲೆಲೆಯ ಮೇಲೆ ಹೊರಳಾಡುವುದು ಆ ಆಚರಣೆಯ ಹೊರಗಿನಿಂದ ನಿಂತು ನೋಡುವವರಿಗೆ ಅಸಹ್ಯವಾಗಿ ಕಾಣಬಹುದು ಆದರೆ ಅದರಲ್ಲಿ ಭಾಗವಹಿಸುವವರಿಗೆ ಅಲ್ಲ.

ಮೊನ್ನೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಟಿಯಂದು ಮೈಸೂರಿನ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಗಳ ಅಧ್ಯಕ್ಷರಾದ ಶಿವರಾಮ್ ಮೇಲೆ ಹಲ್ಲೆ ನಡೆಯಿತು. ಅವರು ಬಂದಿದ್ದು ಯಾಕೆ? ಸತ್ಯಶೋಧನೆಗಾಗಿ. ಸತ್ಯ ಶೋಧನೆಗಾಗಿ ಬರುವವರು ಬಿರುದು ಬಾವಲಿಗಳ ಸಮೇತ ದಾಂ ದೂಂ ಎಂದು ಬರಬಾರದು. ಹಾಗೆ ಬರಲು ಇದೇನೂ ಪವಾಡ ಬಯಲು ಮಾಡುವ ಕಾರ್ಯಕ್ರಮ ಅಲ್ಲ. ನಮ್ಮ ಕನ್ನಡ ಪಂಡಿತರು ಹೇಳುತ್ತಿದ್ದ ಮಲೆಯಾಳಿ ಗಾದೆಯೊಂದು ನೆನಪಾಗುತ್ತದೆ, ಅವರು ಹೇಳುತ್ತಿದ್ದರು; ’ಕೇರೆ ತಿನ್ನುವ ಊರಿಗೆ ಹೋದಾಗ ಮಧ್ಯಕ್ಕೆ ಕೈ ಹಾಕು’ ಅಂಥ. ಕೇರೆ ಅಂದರೆ ಕೇರೆ ಹಾವು. ಅಂದರೆ ಅಲ್ಲಿ ಸೇರಿರುವ ಬಹುಸಂಖ್ಯಾತರ ಮಧ್ಯೆ ನೀನೊಬ್ಬ ಬಿನ್ನವಾಗಿ ಕಾಣಿಸಿಕೊಂಡರೆ ಅಲ್ಲಿ ಸೇರಿದವರು ನಿಮ್ಮನ್ನು ಅನುಮಾನದಿಂದ ಕಾಣುತ್ತಾರೆ. ನಿಮಗೆ ಬೇಕಾದ್ದು ಸಿಗುವುದಿಲ್ಲ. ನಾವು ಇಂಥ ಆಚರಣೆಗಳ ಚಿತ್ರಿಕರಣಕ್ಕೆ ಹೋದಾಗ ಭಕ್ತರಲ್ಲಿ ಒಬ್ಬಳಾಗಿ ಮಿಳಿತಗೊಂಡಿದ್ದೇನೆ. ಅವುಗಳನ್ನು ಎಂದೂ ಅವಹೇಳನ ಮಾಡುವುದಾಗಲಿ ಅಥವಾ ಪ್ರಶ್ನಿಸುವುದಾಗಲಿ ಮಾಡಿಲ್ಲ. ತುಳುನಾಡಿನಲ್ಲಿ ಭೂತ ಸ್ಥಾನಗಳಿಗೆ ಮಹಿಳೆಯರ ಪ್ರವೇಶವಿಲ್ಲ. ಅಲ್ಲಿ ಚಿತ್ರಿಕರಣ ಮಾಡುವಾಗ ನಾನು ನಮ್ಮ ಕ್ಯಾಮಾರಮ್ಯಾನ್ ಗೆ ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ ಹೊರತು ನಮಗೂ ಅಲ್ಲಿ ಪ್ರವೇಶ ನೀಡಿ ಎನ್ನಲಿಲ್ಲ. ಪಣೋಲಿಯಂತ ಕಲ್ಲುರ್ಟಿ ಭೂತ ಸ್ತಾನದಲ್ಲಿ ನನ್ನ ಕಣ್ಣಳತೆಯಲ್ಲೇ ಸಾವಿರಾರು ಕೋಳಿಗಳನ್ನು ಕತ್ತು ಹಿಸುಕಿ ಕೊಂದು, ಅದನ್ನು ಪದಾರ್ಥ ಮಾಡಿ,ದೈವಕ್ಕೆ ಎಡೆ ಇಟ್ಟು, ಅದನ್ನೇ ಪ್ರಸಾದವೆಂದು ಕೊಟ್ಟಾಗ ಅದನ್ನು ತಿರಸ್ಕರಿಸಿ ಬರಲು ನನಗಾಗಲಿಲ್ಲ

ಕೆಲವು ಸೂಕ್ಷ್ಮ ವಿಷಯಗಳಿಗೆ ನಾವು ಸೂಕ್ಷ್ಮವಾಗಿಯೇ ಸ್ಪಂದಿಸಬೇಕಾಗುತ್ತದೆ. ನನಗೆ ತಿಳಿದ ಮಟ್ಟಿಗೆ ಇಲ್ಲಿರುವುದು ’ಗ್ರಹಿಕೆ’ ಮತ್ತು ’ಸಂವಹನ’ ದ ಸಮಸ್ಯೆ. ಹೇಳಿಕೆಗಳು ಗ್ರಹಿಕೆಗಳಾಗುವುದಿಲ್ಲ.

ಈಗ ಮಾಡಬಹುದಾದದ್ದು ಇಷ್ಟೇ; ಮುಂದಿನ ವರ್ಷ ದೇವಸ್ಥಾನ ಒಳಪ್ರಾಂಗಣದಲ್ಲಿ ಬ್ರಾಹ್ಮಣರಿಗಾಗಿಯೇ ನಡೆಸುವ ವಿಶೇಷ ಭೋಜನವನ್ನು ನಿಲ್ಲಿಸಲು ಪ್ರಯತ್ನಿಸಬೇಕು. ಅವರು ಊಟ ಮಾಡಿದ ಎಂಜಲೆಲೆಯ ಮೇಲೆ ತಾನೇ ಭಕ್ತರು ಉರುಳುವುದು? ಬ್ರಾಹ್ಮಣರು ಅಲ್ಲಿ ಊಟ ಮಾಡದ ಮೇಲೆ ಭಕ್ತರು ಇನ್ನೆಲ್ಲಿ ಉರುಳುತ್ತಾರೆ?. ಹೇಗಿದ್ದರೂ ಅಲ್ಲಿಗೆ ಬರುವ ಲಕ್ಷಾಂತರ ಭಕ್ತರಿಗಾಗಿಯೇ ಸುಸಜ್ಜಿತವಾದ ವಿಶಾಲ ಭೋಜನ ಶಾಲೆ ಇರುವಾಗ ವಿಷೇಶ ಪಂಕ್ತಿಯ ಅವಶ್ಯಕತೆ ಇಲ್ಲ. ಒಂದು ವೇಳೆ ಭಕ್ತರು ಈಗಾಗಲೇ ಹರಕೆ ಹೇಳಿಕೊಂಡಿದ್ದರೆ, ಅವರಿಗೆ ಉರುಳಲೇಬೇಕೆಂದರೆ, ಅವರಿಗೆ ಪಾಪಪ್ರಜ್ನೆ ಕಾಡಿದರೆ ಒಳಪ್ರಾಂಗಣದಲ್ಲಿ ನೆಲದ ಮೇಲೆಯೇ ಉರುಳಿದರಾಯ್ತು. ಕಾಲಕ್ರಮೇಣ ಭಕ್ತರಲ್ಲಿ ತಿಳುವಳಿಕೆ ಮೂಡಿ ಅದು ನಿಂತು ಹೋಗಬಹುದು. ಇಲ್ಲವೇ ರೂಪಾಂತರ ಹೊಂದಬಹುದು.ಶಿರಸಿಯ ಮಾರಿಕಾಂಬ ದೇವಸ್ಥಾನದಲ್ಲಿ ಕೋಣ ಕಡಿಯುವುದರ ಬದಲು ಸಿರಿಂಜ್ ನಲ್ಲಿ ಸ್ವಲ್ಪ ರಕ್ತ ತೆಗೆದು ದೇವಿಗೆ ಅಭಿಶೇಕ ಮಾಡುವುದಿಲ್ಲವೇ?

ಆದರೆ ಜನರನ್ನು ಸರಿ ದಾರಿಯಲ್ಲಿ ಮುನ್ನಡೆಸಬೇಕಾದ ಸರಕಾರವೇ ಇಂಥ ಹೀನ ಆಚರಣೆಗಳನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಕ್ಕೆ ಇಳಿಯಬಾರದು. ಡಾ. ವಿ.ಎಸ್. ಆಚಾರ್ಯ ಪ್ರಕಾರ ಮಡೆಸ್ನಾನದಿಂದ ಚರ್ಮ ರೋಗ ವಾಸಿಯಾಗುತ್ತದೆ. ಜನಾರ್ಧನ ಪೂಜಾರಿಯವರ ಹೇಳಿಕೆ ಇನ್ನೂ ಮಜವಾಗಿದೆ. ಅವರ ಪ್ರಕಾರ ಎಂಜಲೆಲೆಯ ಮೇಲೆ ಉರುಳಿದರೆ ಏಡ್ಸ್ ಬರುತ್ತದೆಯಂತೆ!.ಅವರ ಈ ಹೇಳಿಕೆ ಇಂಟರ್ನೆಟ್ ನಲ್ಲಿ ಜೋಕ್ ಆಗಿ ಹರಿದಾಡುತ್ತಿದೆ.

ಇಲ್ಲಿ ಸರಕಾರ ಇನ್ನೊಂದು ಕೆಲಸ ಮಾಡಬಹುದು; ಧಾರ್ಮಿಕ ಧತ್ತಿ ಇಲಾಖೆಗೆ ಸೇರಿದ ಎಲ್ಲಾ ದೇವಸ್ಥಾನಗಳಿಗೆ ಹರಿಜನ ಮತ್ತು ಹಿಂದುಳಿದ ವರ್ಗಗಳ ಪೂಜಾರಿಗಳನ್ನೇ ನೇಮಿಸುವುದರ ಬಗ್ಗೆಯೂ ಚಿಂತನೆ ನಡೆಸಬಹುದು. ಇದರ ಜೊತೆಗೆ ದೇವಾಲಯದ ಆಡಳಿತ ಮಂಡಳಿಗಳಿಗೆ ಸರಕಾರವೇ ನಿಗಮ ಮಂಡಳಿಗಳ ಮಾದರಿಯಲ್ಲಿ ಸದಸ್ಯರ ನಾಮನಿರ್ದೇಶನ ಮಾಡಬಹುದು.

ಇದಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಬಹುದು. ಅವರ ಮನವೊಲಿಕೆಯ ಪ್ರಯತ್ನ ಈಗಿನಿಂದಲೇ ನಡೆಯಬೇಕು. ವಿಚಾರವಾದಿಗಳು ಟೀವಿ, ಪತ್ರಿಕೆಗಳಲ್ಲಿ ಹೇಳಿಕೆ ಕೊಟ್ಟು, ಪ್ರೀಡಂ ಪಾರ್ಕ್ ನಲ್ಲಿ ಧರಣಿ ಕೂರುವುದಕ್ಕಷ್ಟೇ ತಮ್ಮ ಹೋರಾಟವನ್ನು ಸೀಮಿತಗೊಳಿಸಬಾರದು. ಎಲ್ಲಾ ದಲಿತ ಪರ ಹೋರಾಟಗಾರರು, ಎಡಪಂಥೀಯ ಚಿಂತಕರು ಹೀನ ಆಚರಣೆಗಳಲ್ಲಿ ತೊಡಗಿಕಿಕೊಂಡಿರುವ, ಮೌಡ್ಯದಲ್ಲಿ ಬಿದ್ದಿರುವ ತಮ್ಮ ಬಂಧುಗಳಲ್ಲಿ ಅರಿವನ್ನು ಬಿತ್ತುವ, ಅವರನ್ನು ಎಜ್ಯುಕೇಟ್ ಮಾಡುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ಪರಿಸ್ಥಿತಿ ಎಷ್ಟೊಂದು ಸೂಕ್ಷ್ಮವಾಗಿದೆಯೆಂದರೆ ಮೇಲ್ಜಾತಿಯವರೇನಾದರೂ ಈ ಕ್ರಿಯೆಯಲ್ಲಿ ತೊಡಗಿಕೊಂಡರೆ ಅವರು ಯಾವ ಪಕ್ಷಕ್ಕೆ ಸೇರಿದವರು? ಅವರಿಗೆ ಇದರಿಂದೇನು ಲಾಭ? ಇದು ಕೂಡಾ ಕೆಳಜಾತಿಯವರನ್ನು ಬ್ರೈನ್ ವಾಶ್ ಮಾಡುವ ತಂತ್ರವಿರಬಹುದೇ ಎಂಬ ಗುಮಾನಿಯಿಂದಲೇ ನೋಡುವ ಸನ್ನಿವೇಶ ಈಗ ಎಲ್ಲೆಲ್ಲಿಯೂ ಕಾಣುತ್ತಿದೆ. ಹಾಗಾಗಿ ಸೂಕ್ಷ್ಮ ಸಂವೇದಿ ಮನಸ್ಸಿನವರು ತಮ್ಮ ಅಭಿಪ್ರಾಯವನ್ನು ಹೇಳುವುದಕ್ಕೇ ಹೆದರುವ ಪರಿಸ್ಥಿತಿ ಈಗ ಉಂಟಾಗಿದೆ. ಪರ- ವಿರೋಧದಾಚೆ ಒಂದು ಸಮನ್ವಯದ ದೂರಗಾಮಿ ವಿಚಾರಧಾರೆಯೂ ಇರುತ್ತದೆ ಎಂಬುದನ್ನೇ ಕೆಲವರು ಮರೆತಂತಿದೆ.

ಇಂದು ಬೆಂಗಳೂರಿನಲ್ಲಿ ನಿಡುಮಾಮಿಡಿಸ್ವಾಮೀಜಿ , ಜಿ.ಕೆ ಗೋವಿಂದರಾವ್, ಏ.ಕೆ ಸುಬ್ಬಯ್ಯ, ನಿವೃತ್ತ ನ್ಯಾಯಾದೀಶ ಎಂಎಫ಼್ ಸಾಲ್ದಾನ, ಬಿ.ಟಿ. ಲಲಿತಾನಾಯಕ್, ಬಂಜಗೆರೆ ಜಯಪ್ರಕಾಶ್, ಕೋಡಿಹೊಸಹಳ್ಳಿ ರಾಮಣ್ಣ, ಜಾಣಗೆರೆ ವೆಂಕಟರಾಮಯ್ಯ, ಡಾ.ಹಿ.ಶಿ.ರಾಮಚಂದ್ರಗೌಡ, , ಹಿಂದುಳಿದ ವರ್ಗಗಳ ಜಾಗೃತ ವೇದಿಕೆಗಳ ಅಧ್ಯಕ್ಷ ಶಿವರಾಮ್ ಸೇರಿದಂತೆ ಅನೇಕ ಪ್ರಗತಪರರು ಭಾಗವಹಿಸಿದ್ದರು. ಅನೇಕ ವಿಚಾರವಾದಿಗಳು ಮಡೆಸ್ನಾನದ ವಿರುದ್ದ ಪ್ರೆಡಂ ಪಾರ್ಕಿನಲ್ಲಿ ಧರಣಿ ನಡೆಸಿದರು.ಹಾಗೆಯೇ ಸುಬ್ರಹ್ಮಣ್ಯದಲ್ಲಿಯೂಈ ವಿವಾದದಿಂದ ನೊಂದ ಅಲ್ಲಿಯ ನಾಗರಿಕರು ಮತ್ತು ಭಕ್ತರು ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಬೇಕೆಂದು ಇಂದು ಸುಬ್ರಹ್ಮಣ್ಯ ಬಂದ್ ಆಚರಿಸಿದರು. ರಥಬೀದಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸುಮಾರು ಐದು ಸಾವಿರ ಜನ ಭಾಗವಹಿಸಿದ್ದರು.

ಇದು ಮುಂದೆ ಯಾವ್ಯಾವ ರೀತಿಯ ಸಂಘರ್ಷಗಳಿಗೆ ಕಾರಣವಾಗಬಹುದೋ ಈಗಲೇ ಹೇಳಲಾಗದು.

11 comments:

Badarinath Palavalli said...

ನಂಬಿಕೆ ಇದ್ದರೆ ವೈದ್ಯರು ನೀರಿನ ಇಂಜಕ್ಷನ್ ಕೊಟ್ಟರೂ ರೋಗ ವಾಸಿ, ಎನ್ನುವಂತೆ ಇಂತಹ ಆಚರಣೆಗಳಿಂದ ಮಾನಸಿಕ ನೆಮ್ಮದಿ ದೊರೆಯುವುದಾದರೆ ಮಾಡಿಕೊಳ್ಳಲಿ ಅಂತ ಬಿಡುವುದೇ ಇಲ್ಲ!

ಯಾರಿಗೋ ಪೇಪರ್ರು ಟೀವಿಗಳಲ್ಲಿ ಮಿಂಚಲು ಸದಾ ಯಾವುದಾದರೂ ಪ್ರಕರಣ ಇರಲೇ ಬೇಕು. ಯಾವುದೂ ಸಿಗದಿದ್ದರೆ ಗಣಪತಿಹಾಲು ಕುಡಿದರೂ ರೆಡಿ, ಸಾಯಿ ಬಾಬಾ ಫೋಟೋದಲ್ಲಿ ಕಣ್ಣು ಬಿಟ್ಟರೂ ಆದೀತು!

AKUVA said...

ತುಂಬಾ ಸಮಯೋಚಿತವಾದ ಮಾತು ಹೇಳಿದ್ದೀರಿ. ಇನ್ನಾದರೂ ನಾವುಗಳು ಎಚ್ಚೆತ್ತು ಕೊಂಡು ಸುಗಮ ಸಮಾಜಕ್ಕೆ ಮಾದರಿಯಾಗೋಣ. ಧನ್ಯವಾದಗಳು...............

VENU VINOD said...

ಸಮತೋಲಿತ ಲೇಖನ...ಅರಿವು ಮೂಡಿಸುವುದೇ ಉದ್ದೇಶ ಹೊರತು ವರ್ಷಕ್ಕೊಮ್ಮೆ ಗದ್ದಲ ಎಬ್ಬಿಸುವುದಲ್ಲ...

ಪುಚ್ಚಪ್ಪಾಡಿ said...

ಸಮಯೋಚಿತ ಬರಹ, ನಿಜಕ್ಕೂ ಇದು ಬದಲಾವಣೆಯ ದಾರಿ ಅದು ಬಿಟ್ಟು ಏಕಾಏಕಿ ಬಂದು ನಂಬಿಕೆಯ ಮೇಲೆ ಧಾಳಿ ಮಾಡುವುದಲ್ಲ ಎಂಬುದು ನನ್ನ ಅಭಿಪ್ರಾಯ. ಇದನ್ನು ಪ್ರತಿಪಾದಿಸಿದರೇ ಇಂದು ತಪ್ಪಾಗುತ್ತದೆ. ಈ ಬರಹ ಸಕಾಲಿಕವಾಗಿದೆ

Nanda Kishor B said...

:)

sunaath said...

ಕುರುಡು ಶ್ರದ್ಧೆಯು ಮಾನಸಿಕ ಚಿಕಿತ್ಸೆಯನ್ನು ನೀಡಬಲ್ಲದು ಎನ್ನುವ ನಿಮ್ಮ ಮಾತನ್ನು ಒಪ್ಪಲೇಬೇಕು. ಆದರೂ ಸಹ ಕುರುಡತನವನ್ನೂ ಹೋಗಲಾಡಿಸಲೇ ಬೇಕಲ್ಲವೆ? ಅದರ ಸರಿಯಾದ ಬಗೆಯನ್ನೂ ನೀವು ವಿವರಿಸಿದ್ದೀರಿ. ಅಭಿನಂದನೆಗಳು.

MD said...

"ಈಗ ಮಾಡಬಹುದಾದದ್ದು ಇಷ್ಟೇ; ಮುಂದಿನ ವರ್ಷ ದೇವಸ್ಥಾನ ಒಳಪ್ರಾಂಗಣದಲ್ಲಿ ಬ್ರಾಹ್ಮಣರಿಗಾಗಿಯೇ ನಡೆಸುವ ವಿಶೇಷ ಭೋಜನವನ್ನು ನಿಲ್ಲಿಸಲು ಪ್ರಯತ್ನಿಸಬೇಕು. ಅವರು ಊಟ ಮಾಡಿದ ಎಂಜಲೆಲೆಯ ಮೇಲೆ ತಾನೇ ಭಕ್ತರು ಉರುಳುವುದು? ಬ್ರಾಹ್ಮಣರು ಅಲ್ಲಿ ಊಟ ಮಾಡದ ಮೇಲೆ ಭಕ್ತರು ಇನ್ನೆಲ್ಲಿ ಉರುಳುತ್ತಾರೆ?. ಹೇಗಿದ್ದರೂ ಅಲ್ಲಿಗೆ ಬರುವ ಲಕ್ಷಾಂತರ ಭಕ್ತರಿಗಾಗಿಯೇ ಸುಸಜ್ಜಿತವಾದ ವಿಶಾಲ ಭೋಜನ ಶಾಲೆ ಇರುವಾಗ ವಿಷೇಶ ಪಂಕ್ತಿಯ ಅವಶ್ಯಕತೆ ಇಲ್ಲ. ಒಂದು ವೇಳೆ ಭಕ್ತರು ಈಗಾಗಲೇ ಹರಕೆ ಹೇಳಿಕೊಂಡಿದ್ದರೆ, ಅವರಿಗೆ ಉರುಳಲೇಬೇಕೆಂದರೆ, ಅವರಿಗೆ ಪಾಪಪ್ರಜ್ನೆ ಕಾಡಿದರೆ ಒಳಪ್ರಾಂಗಣದಲ್ಲಿ ನೆಲದ ಮೇಲೆಯೇ ಉರುಳಿದರಾಯ್ತು. ಕಾಲಕ್ರಮೇಣ ಭಕ್ತರಲ್ಲಿ ತಿಳುವಳಿಕೆ ಮೂಡಿ ಅದು ನಿಂತು ಹೋಗಬಹುದು. ಇಲ್ಲವೇ ರೂಪಾಂತರ ಹೊಂದಬಹುದು.ಶಿರಸಿಯ ಮಾರಿಕಾಂಬ ದೇವಸ್ಥಾನದಲ್ಲಿ ಕೋಣ ಕಡಿಯುವುದರ ಬದಲು ಸಿರಿಂಜ್ ನಲ್ಲಿ ಸ್ವಲ್ಪ ರಕ್ತ ತೆಗೆದು ದೇವಿಗೆ ಅಭಿಶೇಕ ಮಾಡುವುದಿಲ್ಲವೇ?"

100% Agreed

ಸೀತಾರಾಮ. ಕೆ. / SITARAM.K said...

ತುಂಬಾ ಚೆನ್ನಾಗಿ ವಿಶ್ಲೆಶಿಸಿದ್ದಿರಾ...

ವಿ.ಆರ್.ಭಟ್ said...

ನನ್ನ ಮಂಡನೆಯನ್ನು ಆದಾಗಲೇ ತಾವು ಓದಿದ್ದೀರಿ. ನಿಮ್ಮ ಸಹವರ್ತಿಗಳಾಗಿ ನಿಮ್ಮ ಜೀವನ ಪಾಲ್ದಾರರೂ ಜೊತೆಗೇ ಇರುವುದರಿಂದ ಮೇಲ್ವರ್ಗದ ಒಳತೋಟಿ ನಿಜವಾಗಿಯೂ ಇತರೆ ಜನಾಂಗಗಳನ್ನು ಮರ್ದಿಸುವುದಲ್ಲ ಎಂಬುದನ್ನು ಅಂತರಂಗದಲ್ಲಿ ನೀವು ಮನಗಂಡಿರಲು ಸಾಕು. ನನ್ನ ಪ್ರಾರ್ಥನೆ ಇಷ್ಟೇ ಬ್ರಾಹ್ಮಣರು ಯಾರಿಗೂ ಬೇಡವಾದವರು, ಪರವಾಗಿಲ್ಲ, ಮಿಕ್ಕವರು ಅವರಿಗೆ ಅವರಪಾಡಿಗೆ ಪೂಜೆ-ಪುನಸ್ಕಾರ ಇತ್ಯಾದಿಗಳನ್ನು ಮಾಡಿಕೊಂಡಿರಲು ಬಿಡಲಿ, ನಮ್ಮಲ್ಲಿ ಗ್ರಾಮಾಂತರ ಹಲವು ಹಳೇ ದೇವಸ್ಥಾನಗಳಿವೆ, ಅಲ್ಲಿ ಯಾರೂ ಬರದಿದ್ದರೂ ಪೂಜೆಮಾತ್ರ ನಿಲ್ಲುವುದಿಲ್ಲ. ಅನ್ಯಥಾ ಭಾವಿಸಬೇಡಿ, ನನಗೆ ಎಲ್ಲಾ ಜನಾಂಗಗಳ ಮೇಲೂ ಅಷ್ಟಷ್ಟೇ ಗೌರವವಿದೆ, ಆದರೆ ಬ್ರಾಹ್ಮಣರನ್ನು ವಿನಾಕಾರಣ ದೂಷಿಸುವ ಕೃತ್ಯವನ್ನು ನಾನು ಖಂಡಿಸುತ್ತೇನೆ.

ushakattemane said...

ವಿ.ಅರ್. ನೀವು ಭಾವುಕರಾಗುವ ಅವಶ್ಯಕತೆಯಿಲ್ಲ.ವಿಚಾರವಾದಿಗಳೆನಿಸಿಕೊಂಡವರು ಅವರ ಜಿಗುಟುತನದಿಂದಾಗಿಯೇ ಮಾನವೀಯವಾಗಿ ಸ್ಪಂದಿಸುವವರಿಂದಲೂ ದೂರವಾಗುತ್ತಿದ್ದಾರೆ. ನಿನ್ನೆ ಒಬ್ಬರು ನನ್ನೊಡನೆ ಮಾತಾಡುತ್ತಾ ಹೇಳುತ್ತಿದ್ದರು;”ಎಲ್ಲಾ ಪ್ರಗತಿಪರ ಹೋರಾಟಗಳ ಮುಂಚೂಣಿಯಲ್ಲೂ ಒಬ್ಬರಾದರೂ ಬ್ರಾಹ್ಮಣ್ರಿರುತ್ತಿದ್ದರು ಈಗೀಗ ಅದೂ ಕಾಣಿಸುತ್ತಿಲ್ಲ’ ಅಂದರೆ ಏನರ್ಥ? ಇನ್ನೊಬ್ಬರು ನನಗೆ ಮೆಸೇಜ್ ಮಾಡಿ ’ನಿಮ್ಮ ಲೇಖದ ಮೊದಲ ಭಾಗವನ್ನು ನಾನು ಒಪ್ಪುವುದಿಲ್ಲ. ಕೊನೆಗೆ ಬರೆದದ್ದು ಸರಿಯಾಗಿಯೇ ಇದೆ.’ ಅಂದರು. ನಾನು ಮೊದಲು ಬರೆದದ್ದು ಗಂಭೀರವಾಗಿ. ಕೊನೆ ಕೊನೆಗೆ ಬರೆದದ್ದು ವ್ಯಂಗದಿಂದ ಎಂಬುದನ್ನು ಅರ್ಥೈಸಿಕೊಳ್ಳಲಾರದರಷ್ಟು ಮಟ್ಟಿಗೆ ಅವರು ಕಣ್ಣ ಪಟ್ಟಿಯನ್ನು ಕಟ್ಟಿಕೊಂಡಿದ್ದಾರೆ ಎಂದ ಮೇಲೆ ಅವರೊಡನೆ ಅರ್ಥಪೂರ್ಣ ಸಂವಾದವಾದರೂ ಹೇಗೆ ಸಾಧ್ಯ ಹೇಳಿ? ಕೊನೆಗೆ ನಾವು ತಿಳಿದುಕೊಳ್ಳಬಹುದಾದ್ದು ಇಷ್ಟೇ; ಅವರವರ ಬದುಕು,ಅವರವರ ನಂಭಿಕೆ ಅವರವರದೇ ಆಗಿರುತ್ತದೆ.

m v srinivasa said...

ಉಷಾ ಕಟ್ಟಿಮನಿಯವರೆ,

ನಿಮ್ಮ ಈ ಲೇಖನ ಓದಿದ ಬಳಿಕ ನಿಮ್ಮ ಬಗೆಗಿದ್ದ ನನ್ನ ಅಭಿಪ್ರಾಯಬದಲಾಗಿದೆ. ನಿಮ್ಮ ಲೇಖನವನ್ನು ನಾನು ಮೆಚ್ಚುತ್ತೇನೆ.

ಮಿ. ವೆಂ. ಶ್‌ರೀನಿವಾಸ