Monday, February 28, 2011

ಹೇಮಳನ್ನು ’ದಡ್ಡಿ’ಯನ್ನಾಗಿ ಮಾಡಿದ್ದು ಯಾರು?
ಪತ್ರಿಕಾರಂಗ ಹೀಗಾಗಿ ಹೋಯ್ತಲ್ಲಾ... ಎಂದು ವ್ಯಥೆಪಡುತ್ತಿರುವ ಹೊತ್ತಿನಲ್ಲೇ ಮಾರ್ಚ್ ೩ರಂದು ನಮ್ಮ ರಾಜ್ಯದಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಾಲಿವುಡ್ ನಟಿ ಹೇಮಮಾಲಿನಿಯನ್ನು ಆಯ್ಕೆ ಮಾಡಲಾಗಿದೆ.

ದೆಹಲಿಯಲ್ಲಿ ರಾಜ್ಯ ಸರಕಾರದ ವಿಶೇಷ ಪ್ರತಿನಿಧಿಯಾಗಿರುವ ಧನಂಜಯಕುಮಾರ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಮುಖ್ಯಮಂತ್ರಿಗಳು ಶಿಫಾರಸ್ಸು ಮಾಡಿದ್ದರು. ಆದರೆ ಕೇಂದ್ರ ಹೈಕಮಾಂಡ್ ತನ್ನ ಅಬ್ಯರ್ಥಿ ಹೇಮಮಾಲಿನಿಯ ಹೆಸರನ್ನು ರಾಜ್ಯದ ಮೇಲೆ ಹೇರಿದೆ.

ಇದು ಬಿಜೆಪಿಯ ಆಂತರಿಕ ಭಿನ್ನಮತದ ಒಂದು ಝಳಕ್. ಅದು ನಮಗೆ ಬೇಕಾಗಿಲ್ಲ. ನಮ್ಮ ಮುಂದಿರುವ ಪ್ರಶ್ನೆ; ಆರು ಕೋಟಿ ಜನಸಂಖ್ಯೆಯಿರುವ ನಮ್ಮ ರಾಜ್ಯದಲ್ಲಿ ಒಬ್ಬ ಕನ್ನಡಿಗನಿಗೂ ಈ ಯೋಗ್ಯತೆಯಿರಲಿಲ್ಲವೇ?
ಕನ್ನಡನಾಡಿಗೆ ಇಷ್ಟೊಂದು ಬೌದ್ಧಿಕ ದಾರಿದ್ರ್ಯ ಅಡರಿದೆಯಾ? ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿರುವ ಶುಭ ಸಂದರ್ಭದಲ್ಲೇ ಕನ್ನಡೇತರರೊಬ್ಬರನ್ನು ರಾಜ್ಯಸಭೆಗೆ ಆಯ್ಕೆ ಮಾಡುತ್ತಿರುವುದು ಕನ್ನಡ ನಾಡಿನ ಸ್ಥಿತಿಗೆ ಹಿಡಿದ ಕೈಗನ್ನಡಿಯಲ್ಲವೇ? ಕನ್ನಡತನವೆಂಬುದು ಕೇವಲ ಉತ್ಸವಮೂರ್ತಿಯಾಗಿರಬೇಕೇ?

ವಿಧಾನಸಭೆಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತಾಡಿದ ಹೇಮಮಾಲಿನಿ, ”ನನಗೆ ಕರ್ನಾಟಕದ ಸಮಸ್ಯೆಗಳ ಬಗ್ಗೆ ಏನೇನೂ ಗೊತ್ತಿಲ್ಲ. ಆದರೆ ಎಲ್ಲವನ್ನೂ ಅರಿತುಕೊಂಡು ಅವುಗಳ ಪರಿಹಾರಕ್ಕಾಗಿ ಹೋರಾಡುವೆ” ಎಂದು ಪ್ರಾಮಾಣಿಕವಾಗಿ ಹೇಳಿದ್ದಾರೆ.
ಅಂದರೆ ಅದರ ಅರ್ಥ ಸ್ಪಷ್ಟ; ಒಂದು, ಆಕೆಗೇ ಈ ಆಯ್ಕೆ ಅನಿರೀಕ್ಷಿತವಾಗಿರಬೇಕು. ಧನಂಜಯಕುಮಾರ್ ಅವರನ್ನು, ಆ ಮೂಲಕ ಮುಖ್ಯಮಂತ್ರಿಗಳನ್ನು ಉಪೇಕ್ಷಿಸಲು ಹೇಮಮಾಲೀನಿಯವರನ್ನು ಬಿಜೆಪಿ ಹೈಕಮಾಂಡ್ ಇಲ್ಲಿ ದಾಳವಾಗಿ ಬಳಸಿಕೊಂಡಿದೆ. ಇನ್ನೊಂದು, ಆಕೆಗೆ ತಾನು ಪ್ರತಿನಿಧಿಸಲಿರುವ ಸ್ಥಾನಮಹತ್ವದ ಅರಿವಿಲ್ಲದಿರುವುದು ಅಥವಾ ಸ್ಥಾನ ಗೌರವದ ಅರಿವಿದ್ದೂ ಅದರ ಬಗ್ಗೆ ಉಡಾಫೆಯ ಭಾವ ಪ್ರದರ್ಶಿಸಿರುವುದು.
ಯಾಕೆಂದರೆ ಯಾವನೇ ಒಬ್ಬ ಮನುಷ್ಯ ತಾನು ಒಂದು ಕಾರ್ಯವನ್ನು ಕೈಗೊಳ್ಳುವ ಮುನ್ನ ಫೂರ್ವಸಿದ್ದತೆಯನ್ನು ಮಾಡಿಕೊಳ್ಳುತ್ತಾನೆ. ಕಾರ್ಯದ ಗಂಭೀರತೆಯನ್ನು ಹೊಂದಿಕೊಂಡು ಪೂರ್ವಸಿದ್ದತೆಯ ತಯಾರಿ ಇರುತ್ತದೆ. ಅದರೆ ಹೇಮಮಾಲಿನಿಯ ಮಾತುಗಳಲ್ಲಿ ಯಾವುದೇ ಪೂರ್ವಸಿದ್ದತೆಯ ಸುಳಿವೂ ಇರಲಿಲ್ಲ. ಆಕೆಗೆ ಕರ್ನಾಟಕ ಎಂದರೆ ಶೋಲೆ ಸಿನೇಮಾದ ಶೂಟಿಂಗ್ ನೆನಪುಗಳು ಮಾತ್ರ.

ಹೇಮಮಾಲಿನಿಗೆ ವಿಶ್ವಪ್ರಸಿದ್ಧವಾದ ಶ್ರೀಗಂಧ ನೆನಪಿಗೆ ಬರುವುದಿಲ್ಲ. ಕೋಲಾರದ ಚಿನ್ನದ ಗಣಿ ನೆನಪಾಗುವುದಿಲ್ಲ. ಮೈಸೂರು ದಸರಾ ನೆನಪಾಗುವುದಿಲ್ಲ. ಇತಿಹಾಸ ಪ್ರಸಿದ್ಧವಾದ ಹಂಪಿ ನೆನಪಾಗುವುದಿಲ್ಲ. ನಮ್ಮ ನಾಡಿನ ಜೀವನದಿಗಳಾದ ಕೃಷ್ಣೆ-ಕಾವೇರಿಯರು ನೆನಪಾಗುವುದಿಲ್ಲ. ಶ್ರೀಮಂತ ಕಲೆಯಾದ ಯಕ್ಷಗಾನವೂ ನೆನಪಾಗುವುದಿಲ್ಲ. ಸಾಂಸ್ಕೃತಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳಿಗೆ ಇದು ಗೊತ್ತಿರಲೇಬೇಕು. ಗೊತ್ತಿಲ್ಲವಾದರೆ ಅವರಿಗೆ ಸಾಂಸ್ಕೃತಿಕ ಕ್ಷೇತ್ರವನ್ನು ಪ್ರತಿನಿಧಿಸುವ ಯೋಗ್ಯತೆ ಖಂಡಿತಾ ಇಲ್ಲ. ಏಕೆಂದರೆ ಇವೆಲ್ಲಾ ಭಾರತದ ಮಟ್ಟಿಗೆ ಹೆಮ್ಮೆ ತರುವ ಏಕಮೇವಾದ್ವೀತಿಯಾಗಳೇ. ಒಬ್ಬ ನೃತ್ಯಗಾತಿ ಹೇಮಮಾಲಿನಿಗೆ, ಒಬ್ಬ ಸಿನೇಮಾ ನಟಿ ಹೇಮಮಾಲಿನಿಗೆ ಇವುಗಳ ಅರಿವಿಲ್ಲದಿದ್ದರೂ ನಡೆದೀತು. ಆದರೆ ಸಂಸತ್ತಿನಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸಲಿರುವ ಒಬ್ಬ ರಾಜಕಾರಣಿಗೆ ಇದೆಲ್ಲದರ ಅರಿವಿರಲೇಬೇಕು. ಯಾಕೆಂದರೆ ನಾಳೆ ಇವುಗಳ ಅಸ್ತಿತ್ವಕ್ಕೆ ದಕ್ಕೆ ಬಂದಾಗ ಇವರು ಇವುಗಳೆಲ್ಲದರ ಪರವಾಗಿ ಧ್ವನಿ ಎತ್ತಬೇಕು. ಅದು ಹೇಮಮಾಲಿನಿಯೆಂಬ ಉತ್ತರ ಭಾರತೀಯ ನಟಿಯಿಂದ ಸಾಧ್ಯವೇ?

ನಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಅನ್ಯ ರಾಜ್ಯದವರಾದ ರಾಜೀವ ಚಂದ್ರಶೇಖರ್, ವೆಂಕಯ್ಯನಾಯ್ಡು, ಕನ್ನಡದವರಾಗಿದ್ದೂ ಕನ್ನಡ ಮಾತಾಡದ ವಿಜಯಮಲ್ಯ ಇವರೆಲ್ಲರ ಜೊತೆ ಈಗ ಹೇಮಮಾಲಿನಿ ಸೇರಿಬಿಡುತ್ತಾರೆ. ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಒಟ್ಟು ಹನ್ನೆರಡು ಸ್ಥಾನಗಳಲ್ಲಿ ನಾಲ್ಕು ಜನರಿಗೆ ಕನ್ನಡವೇಬಾರದು.
ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ ೨೪೫. ಅದರಲ್ಲಿ ೨೩೩ ಸದಸ್ಯರನ್ನು ಅಯಾಯ ರಾಜ್ಯಗಳ ವಿಧಾನ ಸಭ ಸದಸ್ಯರು ಆರಿಸಿ ಕಳುಹಿಸುತ್ತಾರೆ. ರಾಜ್ಯಗಳ ಜನಸಂಖ್ಯೆಯನ್ನು ಆಧರಿಸಿ ಸೀಟು ನಿಗದಿಗೊಳಿಸಲಾಗುತ್ತದೆ. ಕರ್ನಾಟಕಕ್ಕೆ ನಿಗದಿಗೊಳಿಸಲಾದ ಸೀಟು ೧೨. ಉಳಿದ ೧೨ ಸದಸ್ಯರನ್ನು ಕಲೆ, ಸಾಹಿತ್ಯ, ವಿಜ್ನಾನ, ಸಮಾಜ ಸೇವೆಯಂತಹ ಮಾನವಿಕ ಕ್ಷೇತ್ರಗಳಿಂದ ರಾಷ್ಟ್ರಪತಿಗಳೇ ನೇರ ನೇಮಕಾತಿ ಮಾಡುತ್ತಾರೆ. ಹಾಗೆ ನೇಮಕಗೊಂಡವರೇ ನಮ್ಮ ನೆಚ್ಚಿನ, ಹೆಮ್ಮೆಯ ರಂಗ ನಟಿ ಬಿ. ಜಯಶ್ರೀ ಅವರು.
ಹೀಗೆ ಇವರು ನಮ್ಮವರೆಂದು ಹೆಮ್ಮೆಯಿಂದ ಹೇಳಿಕೊಳ್ಳಲಾಗದ, ಕನ್ನಡ ಸಂಸ್ಕೃತಿ ತಿಳಿಯದ ಸಂಸದರಿಂದ ನಮಗೇನು ಪ್ರಯೋಜನವಿದೆ?

ಈ ಪ್ರಶ್ನೆ ನಮ್ಮ ನಾಡಿನ ಬುದ್ಧಿಜೀವಿಗಳಲ್ಲಿ, ವಿಚಾರವಂತರಲ್ಲಿ, ಕನ್ನಡದ ಸಂಸ್ಕೃತಿಯ ಬಗ್ಗೆ ಕಾಳಜಿಯುಳ್ಳವರಲ್ಲಿ ಮೂಡಿದೆ. ಅವರ ಸ್ವಾಭಿಮಾನ ಕೆರಳಿದೆ. ಹಾಗಾಗಿ ನಾಡಿನ ಚಿಂತಕರಲ್ಲಿ ಒಬ್ಬರಾದ ಕೆ. ಮರುಳಸಿದ್ದಪ್ಪನವರನ್ನು ಹೇಮಮಾಲಿನಿಯ ವಿರುದ್ಧ ಕಣಕ್ಕಿಳಿಸಲಾಗಿದೆ. ’ಕನಸಿನ ಕನ್ಯೆ’ಯ ಅವಿರೋಧ ಆಯ್ಕೆಯ ಲೆಖ್ಖಾಚಾರ ಹಾಕಿದ್ದ ಬಿಜೆಪಿಗೆ ಸಣ್ಣದೊಂದು ತಡೆಗೋಡೆಯನ್ನು ಈ ನಾಡಿನ ಪ್ರಜ್ನಾವಂತರು ಸೃಷ್ಟಿಸಿದ್ದಾರೆ. ಪ್ರತಿಪಕ್ಷಗಳು ಅವರನ್ನು ಬೆಂಬಲಿಸಿವೆ.

’ಹೇಮಮಾಲಿನಿ ರಾಷ್ಟ್ರೀಯ ಆಸ್ತಿ. ಅವರನ್ನು ಯಾವುದೇ ರಾಜ್ಯಕ್ಕೆ ಸೀಮಿತಗೊಳಿಸಬಾರದು’ ಎಂದು ಬಿ.ಜೆ.ಪಿಯ ರಾಜ್ಯಾಧ್ಯಕ್ಷ ಈಶ್ವರಪ್ಪನವರು ಹೇಳಿದ್ದಾರೆ. ಆ ಮಾತು ನಿಜ. ಆದರೆ..ರಾಜ್ಯಸಭಾ ಸದಸ್ಯತನವೆಂಬುದು ಕೇವಲ ಅಲಂಕಾರಿಕಾ ಹುದ್ದೆ ಅಲ್ವಲ್ಲಾ..

ನನಗೊಂದು ಕುತೂಹಲವಿದೆ; ಜಗತ್ತಿಗೇ ನೀತಿಪಾಠವನ್ನು ಹೇಳುತ್ತಿರುವ, ಸೋನಿಯಾರ ರಾಷ್ಟ್ರೀಯತೆಯನ್ನು ಉಗ್ರವಾಗಿ ಪ್ರಶ್ನಿಸಿದ , ಮತಾಂತರವನ್ನು ಸದಾ ವಿರೋಧಿಸುತ್ತಿರುವ ಬಿಜೆಪಿ ಹೇಮಮಾಲಿನಿಯನ್ನು ಹೇಗೆ ತನ್ನ ಅಬ್ಯರ್ಥಿಯನ್ನಾಗಿ ಆಯ್ಕೆ ಮಾಡಿತು? ಆಕೆ ದರ್ಮೇಂದ್ರನನ್ನು ಮದುವೆಯಾಗುವ ಸಂದರ್ಭದಲ್ಲಿ ಅವರಿಬ್ಬರೂ ಮುಸ್ಲಿಂ ದರ್ಮಕ್ಕೆ ಮತಾಂತರಗೊಂಡಿದ್ದರು. ಯಾಕೆಂದರೆ ಹಿಂದು ಧರ್ಮದಲ್ಲಿ ಮೊದಲನೇ ಹೆಂಡತಿ ಬದುಕಿರುವಾಗಲೇ ಎರಡನೇ ವಿವಾಹಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಇನ್ನೊಂದು ಅಸಕ್ತಿಕರ ವಿಷಯ ಗೊತ್ತಾ? ಹೇಮಮಾಲಿನಿಯನ್ನು ಸಂಜೀವ್ ಕುಮಾರ್ ನಂತೆ ಹಲವಾರು ಜನರು ಉನ್ಮತ್ತರಂತೆ ಪ್ರೀತಿಸಿರಬಹುದು. ಆದರೆ ಈ ಕನಸಿನ ಕನ್ಯೆ ಯಾರಿಗೆ ಮನಸೋತಿದ್ದಳು ಗೊತ್ತೆ? ನಮ್ಮ ಕನ್ನಡದ ರಂಗಕರ್ಮಿ, ಜ್ನಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರಿಗೆ. ಆದರೆ ಕಾರ್ನಾಡ್ ಆಕೆಯ ಪ್ರಪೋಸಲ್ ಅನ್ನು ಪುರಸ್ಕರಿಸಲಿಲ್ಲ. ಯಾಕೆಂದರೆ ಅದಾಗಲೇ ಕಾರ್ನಾಡ್ ಅವರಿಗೆ ಡಾ.ಸರಸ್ವತಿಯವರೊಡನೆ ಮದುವೆ ನಿಶ್ಚಯವಾಗಿತ್ತು. ಮೊನ್ನೆ ತಾನೇ ಈ ಸಂಗತಿಯನ್ನು ಯಾವುದೋ ಪೇಪರಿನಲ್ಲಿ ಓದಿದ ನೆನಪು.

’ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಸ್ವಾತಿಕ ಹಿನ್ನೆಲೆಯಿಂದ ಸ್ಪರ್ಧಿಸುತ್ತಿದ್ದೇನೆ. ಸೋಲು ಗೆಲುವಿನ ಬಗ್ಗೆ ನನಗೆ ಚಿಂತೆ ಇಲ್ಲ.’ ಎಂದಿದ್ದಾರೆ ರಂಗಭೂಮಿಯ ಹಿನ್ನೆಲೆಯುಳ್ಳ, ವಿಮರ್ಶಕ ಕೆ. ಮರುಳಸಿದ್ದಪ್ಪ ಅವರು.

ನಿಜ. ತೋಳ್ಬಲ, ಹಣಬಲದ ರಾಜಕೀಯದ ಮುಂದೆ ಸ್ವಾತಿಕ ಹಿನ್ನೆಲೆಯ ಸಜ್ಜನನೊಬ್ಬ ಗೆಲ್ಲುವುದು ಕಷ್ಟ. ಪ್ರಗತಿಪರ ವಿಚಾರಧಾರೆಯ ಮರುಳಸಿದ್ದಪ್ಪನವರ ಬಂಧುವರ್ಗ ಕೂಡಾ ಶಕ್ತ ರಾಜಕಾರಣದ ಹೊರಗಿನ ವ್ಯಕ್ತಿಗಳೇ ಆಗಿದ್ದಾರೆ. ಅವರು ಸಮನ್ವಯ ಕವಿಯೆಂದೇ ಹೆಸರಾದ ರಾಷ್ಟ್ರಕವಿ ಶಿವರುದ್ರಪ್ಪನವರ ಅಳಿಯ. ಪತ್ನಿ ಜಯಂತಿ ಸುಪ್ರಸಿದ್ಧ ವಸ್ತ್ರವಿನ್ಯಾಸಕಿ. ಮಗ ಕೆ.ಎಂ.ಚೈತನ್ಯ ಸಿನೇಮಾ ಮತ್ತು ಡಾಕ್ಯುಮೆಂಟರಿ ನಿರ್ದೇಶಕ.

ಹೇಮಮಾಲಿನಿ ಕೂಡಾ ಶ್ರೇಷ್ಠ ನಟಿ, ಅದಕ್ಕಿಂತಲೂ ಮಿಗಿಲಾಗಿ ಆಕೆಯೊಬ್ಬ ಅಪ್ರತಿಮ ನೃತ್ಯಗಾತಿ. ಆಕೆಗೆ ರಾಜ್ಯಸಭೆಯ ಸದಸ್ಯಳಾಗುವ ಎಲ್ಲಾ ಅರ್ಹತೆ ಇದೆ. ಈ ಹಿಂದೆಯೂ ಒಮ್ಮೆ ಆಕೆ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದರು. ಆಕೆ ಯಾವುದೇ ರಾಜ್ಯದ ಹೆಮ್ಮೆಯ ಆಯ್ಕೆಯೇ. ಆದರೆ...
ನಮ್ಮ ನಾಡು-ನುಡಿ, ನೆಲ-ಜಲಗಳ ಬಗ್ಗೆ ಪ್ರೀತಿ-ಕಾಳಜಿಗಳಿಲ್ಲದ ಸಂಸದರಿಂದ ನಮಗೇನು ಪ್ರಯೋಜನವಿದೆ?

ನಮ್ಮ ರಾಜ್ಯದಲ್ಲಿ ಎಷ್ಟೊಂದು ಸಮಸ್ಯೆಗಳಿವೆ!
ನಿಜ, ನಾಡು, ನುಡಿ, ನೆಲ, ಜಲದ ಸಮಸ್ಯೆಗಳನ್ನು ನಾವು ಪರಸ್ಪರ ಸೌಹಾರ್ಧತೆಯಿಂದ ಮಾನವೀಯ ನೆಲೆಯಲ್ಲಿ ಪರಿಹರಿಸಿಕೊಳ್ಳಲು ಸಾಧ್ಯತೆಗಳಿವೆ.. ಆದರೆ ರಾಜಕಾರಣದೊಡನೆ ಸಂಲಗ್ನಗೊಂಡಿರುವ, ಮನುಕುಲವನ್ನು ಸಂಕಷ್ಟಕ್ಕೆ ದೂಡುತ್ತಿರುವ ಸಮಸ್ಯೆಗಳ ವಿರುದ್ದ ಹೊರಾಡಲು ಶಕ್ತ ರಾಜಕಾರಣದ ನೆರವೇ ಬೇಕಾಗುತ್ತದೆ. ನಮ್ಮ ರಾಜ್ಯದ ಮಟ್ಟಿಗೆ ಹೇಳುವುದಾದರೆ ಪರಿಸರ ನಾಶ ಎಂಬುದು ಮುಂಬರುವ ದಿನಗಳಲ್ಲಿ ನಮ್ಮ ಸಹಜ ಜೀವನಕ್ರಮಕ್ಕೆ ಬಹು ದೊಡ್ಡ ಶಾಪವಾಗಿ ಪರಿಣಮಿಸಲಿದೆ. ಅಕ್ರಮ ಗಣಿಗಾರಿಕೆ, ಜಲ ಮಾಲಿನ್ಯ, ಗೊತ್ತು ಗುರಿಯಿಲ್ಲದ ಕೈಗಾರಿಕೀಕರಣ, ರೈತರ ನಿರಂತರ ಶೋಷಣೆ, ರಾಜ್ಯಕ್ಕೆ ರಕ್ಷಣ ಗೋಡೆಯಂತಿರುವ ಪಶ್ಚಿಮ ಘಟ್ಟ ಶ್ರೇಣಿಯ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ. ಇವುಗಳ ವಿರುದ್ಧ ಶಾಸನಸಭೆಗಳಲ್ಲಿ ಧ್ವನಿಯೆತ್ತುವ, ಹೋರಾಡುವ ವ್ಯಕ್ತಿಗಳ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಅತೀ ತುರ್ತಾಗಿ ಬೇಕಾಗಿದೆ.

ನಮ್ಮದು ಪ್ರಜಾಪ್ರಭುತ್ವ ದೇಶ. ಸಂಖ್ಯಾಬಲವೇ ಶಾಸನಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಶಾಸನಸಭೆಗಳಲ್ಲಿ ರಾಜಕೀಯ ದೃಷ್ಟಿಕೋನವಿರುವ ಸಾಂಸ್ಕೃತಿಕ ಪ್ರತಿನಿಧಿಗಳ ಪ್ರಾತಿನಿಧ್ಯವಿರಬೇಕಾಗುತ್ತದೆ. ಆ ದೃಷ್ಟಿಕೋನವಿರುವ ವ್ಯಕ್ತಿಯೊಬ್ಬರು ಕೆಲವು ವರ್ಷಗಳ ಹಿಂದೆ ಕಲ್ಲು ಗಣಿಗಾರಿಕೆಯನ್ನು ವಿರೋಧಿಸಿ ಹೇಳಿದ ಮಾತುಗಳು ನನಗಿನ್ನೂ ನೆನಪಿವೆ; "ಈ ರಾಜಕಾರಣಿಗಳು ಬೇವಿನಸೊಪ್ಪು ಕಟ್ಟಿಕೊಂಡು ವಿಧಾನಸೌಧದ ಮುಂದೆ ಕುಣಿದಾಡಿದರೂ ಒಂದು ಚಿಕ್ಕ ಕಲ್ಲನ್ನಾದ್ರೂ ಬೆಳೆಯಲು ಸಾಧ್ಯವೇ" ಎಂದೂ ಪ್ರಶ್ನಿಸಿದ್ದರು. ಇದನ್ನು ಒಬ್ಬ ವೃತ್ತಿಪರ ರಾಜಕಾರಣಿಯೇ ಹೇಳಿರಬಹುದು. ಆದರೆ ಇದರಲ್ಲಿ ಎಷ್ಟೊಂದು ಸತ್ಯ ಅಡಗಿದೆ ಅಲ್ಲವೇ?ಮನಸ್ಸು ಮಾಡಿದರೆ ಕೇವಲ ಐವತ್ತು ವರ್ಷಗಳಲ್ಲಿ ನಾವು ಈ ಭೂಮಿಯಲ್ಲಿ ಮತ್ತೆ ದಟ್ಟವಾದ ಅರಣ್ಯ ಬೆಳೆಸಬಹುದು. ಆದರೆ ನೀರಿನ ಸೆಲೆಯನ್ನು ತನ್ನ ಹೊಟ್ಟೆಯಡಿಯಲ್ಲಿ ಬಚ್ಚಿಟ್ಟುಕೊಂಡಿರುವ ಕಲ್ಲು ಬಂಡೆಗಳನ್ನು ಬೆಳೆಯಲು ಸಾಧ್ಯವೇ? ಅಂದು ಗಾಳಿಯಲ್ಲಿ ಹಾರಿ ಹೋದ ಆ ಮಾತುಗಳನ್ನು ಯಾರಾದರು ಬೆಂಬಲಿಸುವ ವಾತಾವರಣವಿದ್ದಿದ್ದರೆ....?

ಸಮಾಜದ ಸಾಕ್ಷಿ ಪ್ರಜ್ನೆಯಂತೆ ಕೆಲಸ ಮಾಡಬೇಕಾದ ವ್ಯಕ್ತಿಗಳು ವಿಧಾನ ಸೌಧದಲ್ಲಿ ಹುಟ್ಟುವುದಿಲ್ಲ. ಅವರನ್ನು ನಾವು ಜನಸಾಮಾನ್ಯರ ಮಧ್ಯೆಯೇ ಹುಡುಕಬೇಕಾಗಿದೆ.ಕಳೆದ ಬಾರಿ ರಾಜೀವ ಚಂದ್ರಶೇಖರ್ ಎಂಬ ಉದ್ಯಮಿ ಬಿಜೆಪಿ ಬೆಂಬಲದೊಂದಿಗೆ ರಾಜ್ಯಸಭೆಗೆ ಸ್ಪರ್ಧಿಸಿದಾಗ ಅವರ ವಿರುದ್ಧ ಪ್ರತಿಪಕ್ಷಗಳು ಸಾಹಿತಿ ಅನಂತಮೂರ್ತಿಯವರನ್ನು ಕಣಕ್ಕಿಳಿಸಿದ್ದವು.

ಈ ಬಾರಿ ಮರುಳಸಿದ್ದಪ್ಪನವರ ಸರದಿ. ಅವರಿಗೆ ಗಿರೀಶ್ ಕಾರ್ನಾಡ್, ಬರಗೂರು ರಾಮಚಂದ್ರಪ್ಪ, ಜಿ.ಕೆ.ಗೋವಿಂದರಾವ್, ಚಂಪಾ, ಶೂದ್ರ ಶ್ರೀನಿವಾಸ ಸೇರಿದಂತೆ ಕನ್ನಡ ಸಾರಸ್ವತ ಲೋಕ ಬೆಂಬಲ ನೀಡಿದೆ. ಆದರೆ ಗೆಲ್ಲುವ ಸಾಧ್ಯತೆಯೇ ಇಲ್ಲದಾಗ ಮಾತ್ರ ಪಕ್ಷ ರಾಜಕಾರಣ ತಮ್ಮನ್ನು ಬೆಂಬಲಿಸುತ್ತದೆ ಎಂದು ಸಾಹಿತಿಗಳು ರಾಜಕಾರಣಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಮ್ಮ ಶಾಸಕರು ಆತ್ಮಸಾಕ್ಷಿಯಿಂದ ಮತ ನೀಡಬೇಕೆಂದು ಅವರೆಲ್ಲ ಕೋರಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಕಾರ್ನಾಡ್, ’ಹೇಮಾಗೆ ಜೀವನಾನುಭವ ಕಡಿಮೆ. ಜನಸ್ಪಂದನೆ ಗೊತ್ತಿಲ್ಲ. ಕಳೆದ ರಾಜ್ಯಸಭೆಯ ಆರು ವರ್ಷದ ಅವಧಿಯಲ್ಲಿ ಆಕೆ ಒಂದು ಪ್ರಶ್ನೆಯನ್ನೂ ಕೇಳಲಿಲ್ಲ. ಒಳ್ಳೆ ಹುಡ್ಗಿ.ಆದರೆ ದಡ್ಡಿ’ ಎಂದುಬಿಟ್ಟರು.

’ದಡ್ಡಿ’ ಎನ್ನುವ ಪದವನ್ನು ಯಾರೂ ವಾಚ್ಯಾರ್ಥದಲ್ಲಿ ತಗೊಳ್ಳಬೇಕಾಗಿಲ್ಲ. ಇಲ್ಲಿ ಅದು ಪ್ರೀತಿ, ಮಮತೆ ಮತ್ತು ಕಾಳಜಿಗಳಿಂದ ಕೂಡಿದ ಬೈಗಳ ಪದವಾಗಿದೆ. ಅದಕ್ಕೆ ಒಳ್ಳೆ ಹುಡ್ಗಿ ಎಂಬ ವಿಶೇಷಣ ಒತ್ತು ಕೊಡುತ್ತದೆ. ನಮ್ಮ ಅತೀ ಹತ್ತಿರದ ಪ್ರೀತಿಪಾತ್ರರ ಮೇಲೆ ಮಾತ್ರ ಈ ಪದವನ್ನು ಪ್ರಯೋಗಿಸುತ್ತೇವೆ. ಆಕೆ ನಮ್ಮೆಲ್ಲರಿಗೂ ಪ್ರೀತಿಪಾತ್ರಳೇ. ಆದರೆ ಆಕೆ ರಾಜಕಾರಣದಲ್ಲಿ ದಡ್ಡಿಯೇ. ಹಾಗಾಗಿಯೇ ಬಿಜೆಪಿ ಆಕೆಯ ತಾರಾವರ್ಚಸ್ಸನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿದೆ. ದಡ್ಡಿಯನ್ನಾಗಿ ಮಾಡಿದೆ.

ಪವಾಡಗಳೇನಾದರು ಸಂಭವಿಸದೆ ಇದ್ದಲ್ಲಿ ನಾಳೆ ಹೇಮಮಾಲಿನಿ ನಮ್ಮ ರಾಜ್ಯದ ಎಂಪಿಯಾಗುತ್ತಾಳೆ. ಚಿಂತಕರ ಮನೆಯೆಂದೇ ಹೆಸರಾದ ಮೆಲ್ಮನೆಯ ಸದಸ್ಯಳಾಗುತ್ತಾಳೆ. ಶಾಸನ ರಚನೆಯಲ್ಲಿ ತಾನೂ ಭಾಗಿಯಾಗುತ್ತಾಳೆ. ಆಕೆ ನಾಮಪತ್ರ ಸಲ್ಲಿಸಿದ ದಿನ ಪತ್ರಕರ್ತರೊಡನೆ ಮಾತಾಡುತ್ತಾ, "ರಾಜ್ಯ ಸಭೆಯಲ್ಲಿ ಕರ್ನಾಟಕದ ವಿಷಯ ಚರ್ಚೆಗೆ ಬಂದಾಗ ನಾನೂ ಕೂಡಾ ಅದರ ಧ್ವನಿಯಾಗುತ್ತೇನೆ. ರಾಜ್ಯದಲ್ಲಿ ಯಾವ ಸಮಸ್ಯೆಗಳಿವೆ ಎನ್ನುವುದು ಗೊತ್ತಿಲ್ಲ.ತಿಳಿದುಕೊಂಡು ಆ ಕುರಿತು ರಾಜ್ಯಸಭೆಯಲ್ಲಿ ಚರ್ಚೆ ನಡೆಸುತ್ತೇನೆ" ಎಂದು ಹೇಳಿದ್ದಾರೆ. ನುಡಿದಂತೆ ಆಕೆ ನಡೆದುಕೊಳ್ಳಲಿ ಎಂದು ಆಶಿಸೋಣ.

3 comments:

Anonymous said...

ಶಾಸನ ಸಭೆಯಲ್ಲಿನ ಕನ್ನಡಿಗರ ಅಸಾಹಯಕತೆಯನ್ನು ಸರಿಯಾಗಿ ಹೇಳಿದ್ದೀರಾ..ಪಾರ್ಟಿ ವಿದ್ ಡಿಫೆರೆನ್ಸ್ ಈಗ ಪಾರ್ಟಿ ವಿದ್ ನೊಟ್ ಸೊ ಮಚ್ ಡಿಫೆರೆನ್ಸ್ ಆಗಿದೆ.

ನಮ್ಮ ಕರ್ನಾಟಕದ ವಿಧಿಯೇ

sunaath said...

ಹೇಮಾಮಾಲಿನಿಯವರು ಕರ್ನಾಟಕದಿಂದ ರಾಜ್ಯಸಭೆಗೆ ಹೋದರೆ, ಅದರಿಂದ ಕರ್ನಾಟಕಕ್ಕೆ ಏನೂ ಪ್ರಯೋಜನವಿಲ್ಲ ಎನ್ನುವದು ಮೊದಲನೆಯ ಮಾತು. ಇದು ಸರಿ ಇರಬಹುದು. ಆದರೆ ಕರ್ನಾಟಕದ ಲೋಕಸಭಾ ಸದಸ್ಯರು, ಮಂತ್ರಿಗಳು ಕರ್ನಾಟಕಕ್ಕೆ ಏನು ಮಾಡಿದ್ದಾರೆ? ಜಾಫರ ಶರೀಫರು ರೇಲವೇ ಮಂತ್ರಿಯಾದಾಗ, ದೇವೇಗೌಡರು ಪ್ರಧಾನಿಯಾದಾಗ ಕರ್ನಾಟಕಕ್ಕೆ ಏನು ಕೊಟ್ಟರು? ಎರಡನೆಯದಾಗಿ, ಓರ್ವ ಹೆಣ್ಣುಮಗಳನ್ನು ‘ದಡ್ಡಿ’ ಎಂದು ಸಾರ್ವಜನಿಕವಾಗಿ ಹೇಳುವದು ಅಸಭ್ಯ ವರ್ತನೆ. ಗಿರೀಶ ಕಾರ್ನಾಡರ ‘ಜಾಣತನ’ ಹೇಮಾಮಾಲಿನಿಯವರಲ್ಲಿ ಇರಲಿಕ್ಕಿಲ್ಲ. ಅವರ ಅಭಿನಯ ಹಾಗು ನೃತ್ಯಕೌಶಲ್ಯ ಕಾರ್ನಾಡರಲ್ಲಿ ಇದೆಯೆ?
ಹಾಗೆಂದು ನಾನು ಹೇಮಾಮಾಲಿನಿಯವರ ಅಭಿಮಾನಿ ಎಂದು ತಪ್ಪು ತಿಳಿಯಬೇಡಿ. ನನಗೇನಾದರೂ ಮತಾಧಿಕಾರವಿದ್ದರೆ ಮರಳುಸಿದ್ದಪ್ಪನವರಿಗೇ ಮತ ನೀಡುತ್ತಿದ್ದೆ. ಆದರೆ ಆ male chauvinist ಕಾರ್ನಾಡರಿಗೆ ಮಾತ್ರ ಖಂಡಿತವಾಗಿಯೂ ನೀಡುತ್ತಿರಲಿಲ್ಲ.

Govinda Nelyaru said...

ರಾಜ್ಯಸಭೆಯಲ್ಲಿ ಹೇಮಾ ಪ್ರಶ್ನೆ ಖಂಡಿತ ಕೇಳಿದ್ದಾರೆ - ಅದು water filter ಮಾರುಕಟ್ಟೆಗೆ ಸಂಬಂದಿಸಿದ್ದು. ಮಗಳೊಂದಿಗೆ ಆ ವಸ್ತುವ ಜಾಹಿರಾತಿನಲ್ಲೂ ಕಾಣಿಸಿಕೊಳ್ಳುತ್ತಾರೆ.