Friday, April 8, 2011

ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು




ಹಿರಿಯ ಗಾಂಧೀವಾದಿ ಹಾಗು ಸಮಾಜಸೇವಕ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಉಪಾವಾಸ ಸತ್ಯಾಗ್ರಹ ಅಂದೋಲನದ ರೂಪ ಪಡೆಯುತ್ತಿದೆ.

ಯುವಕರು ಅಂದೋಲನಕ್ಕೆ ದುಮುಕ್ಕುತ್ತಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ. ಹಿಂದಿ ಚಿತ್ರರಂಗದ ಸದಭಿರುಚಿಯ ನಿರ್ದೇಶಕರು, ನಟರು ಚಳುವಳಿಗೆ ಬೆಂಬಲ ಸೂಚಿಸಿದ್ದಾರೆ. ಮುಖ್ಯವಾಗಿ ಯುವ ನಟ ಅಮಿರ್ ಖಾನ್ ಎಲ್ಲರಿಗಿಂತಲೂ ಮೊದಲು ತನ್ನ ಬೆಂಬಲ ವ್ಯಕ್ತಪಡಿದ್ದಾನೆ. ಆತ ’ಲಗಾನ್’ ಚಿತ್ರದ ಮೂಲಕ ಯುವಕರ ಹೃದಯದಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸಿದವನು. ರೈತರ ಆತ್ಮಹತ್ಯೆ ಸಮಸ್ಯೆಗಳನ್ನೆತ್ತಿಕೊಂದು, ದೃಶ್ಯ ಮಾಧ್ಯಮದ ಕ್ರೌರ್ಯವು ಸೇರಿದಂತೆ ಅಧಿಕಾರಿಶಾಯಿಯ ದಬ್ಬಾಳಿಕೆಯನ್ನು ’ಪಿಪ್ಲಿ ಲೈವ್..’ ಸಿನೇಮಾದಲ್ಲಿ ತೋರಿಸಿದ್ದಾನೆ. ಆತನ ಬೆಂಬಲ ಈ ಆಂದೋಲನಕ್ಕೆ ಅಥೆಂಟಿಸಿಟಿಯನ್ನು ತಂದು ಕೊಟ್ಟಿದೆ.

ನಮಗೆ ಭರವಸೆಯಿರಲಿಲ್ಲ, ನಾವು ಅಸಹಾಯಕರಾಗಿದ್ದೆವು; ಗ್ರಾಮ ಲೆಕ್ಕಿಗನಿಂದ ಹಿಡಿದು ಎಲ್ಲಾ ಅಧಿಕಾರಶಾಹಿಗಳು, ಜನಪ್ರತಿನಿಧಿಗಳು ಭ್ರಷ್ಟಾಚಾರದ ಪೋಷಕರಾಗಿದ್ದರು. ಭ್ರಷ್ಟಾಚಾರ ನಮ್ಮ ಜೀವನಕ್ರಮದ ಭಾಗವೇ ಆಗಿಹೋಗಿದೆ. ಅದನ್ನು ನಾವು ಒಪ್ಪಿಕೊಂಡಿದ್ದೇವೆ.

ನೀತಿನಿರೂಪಕರ ಸ್ಥಾನದಲ್ಲಿರುವ ಮಠಾದೀಶರು, ಅಧಿಕಾರಿಶಾಹಿವರ್ಗ
ಜನಪ್ರತಿನಿಧಿಗಳು ಮತ್ತು ಪತ್ರಿಕಾವಲಯ ಎಲ್ಲವೂ ಬ್ರಷ್ಟಾಚಾರದಲ್ಲಿ ಮುಳುಗಿ ಹೋಗಿ ನೈತಿಕ ಅದಃಪತನದತ್ತ ಜಾರಿ ಹೋಗಿದ್ದಾರೆ. ಇವರೇ ಇಂದು ಅಣ್ಣಾ ಹಜಾರೆಯ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲು ಮುಂದೆ ಬಂದಿದ್ದಾರೆ. ಆದರೆ ಹೋರಾಟಗಾರರು ಅವರನ್ನೆಲ್ಲಾ ದೂರವಿಟ್ಟಿದ್ದಾರೆ. ಮಂಗಳವಾರ, ಹಜಾರೆ ಸತ್ಯಾಗ್ರಹ ಅರಂಭಿಸಿದ ದಿನದಂದೇ ಅವರಿಗೆ ಬೆಂಬಲ ವ್ಯಕ್ತಪಡಿಸಲು ಬಂದ ಉಮಾಭಾರತಿ ಮತ್ತು ಓಂಪ್ರಕಾಶ್ ಚೌತಾಲ ಅವರನ್ನು ಹೋರಾಟಗಾರರು ಹತ್ತಿರಕ್ಕೂ ಸೇರಿಸಿಕೊಳ್ಳಲಿಲ್ಲ. ಬ್ರಷ್ಟಾಚಾರ ವಿರೋಧಿ ಅಂದೋಲನಕ್ಕೆ ಬ್ರಷ್ಟಾಚಾರದ ಮೂಟೆಗಳಂತಿರುವ ರಾಜಕಾರಣಿಗಳು ಬೆಂಬಲ ವ್ಯಕ್ತಪಡಿಸುವುದು ವ್ಯಂಗ್ಯವಲ್ಲವೇ?

ಈ ವ್ಯಂಗ್ಯ ಕನ್ನಡದ ಪತ್ರಿಕಾ ರಂಗಕ್ಕೂ ಅನ್ವಯವಾಗುತ್ತದೆ. ಕೆಲವು ಪತ್ರಕರ್ತರು ದುಡ್ಡು-ಆಸ್ತಿ ಸಂಪಾದನೆಯಲ್ಲಿ, ಗುಂಪುಗಾರಿಕೆಯಲ್ಲಿ ರಾಜಕಾರಣಿಗಳನ್ನೂ ಮೀರಿಸುತ್ತಿದ್ದಾರೆ. ಅಣ್ಣಾ ಹಜಾರೆಯ ಜನಾಂದೋಲನವನ್ನು ಬೆಂಬಲಿಸಿ ಪ್ಲಾಪ್ ಅಪ್ ಹಾಕುತ್ತಿರುವ ಕೆಲವು ಚಾನಲ್ ಗಳು ರಾಜಕಾರಣಿಗಳ ಹಿಡಿತದಲ್ಲಿವೆ. ’ಭ್ರಷ್ಟರ ಬೆನ್ನತ್ತಿ ಸುವರ್ಣ ನ್ಯೂಸ್’ ಎನ್ನುವ ಸುವರ್ಣ ಚಾನಲ್ ಮೊದಲು ಬೆಂಬೆತ್ತಬೇಕಾದದ್ದು ಅದರ ಮಾಲೀಕ ರಾಜೀವ ಚಂದ್ರಶೇಖರ್ ಅವರನ್ನು. ಯಾಕೆಂದರೆ ದುಡ್ಡುಕೊಟ್ಟು ಎಂಪಿ ಸೀಟ್ ಖರೀದಿಸಿದವರು ಅವರು. ಅದರಲ್ಲೂ ಜನಶ್ರೀ ಚಾನಲ್ ಒಡೆಯರು ಪತ್ರಕರ್ತರನ್ನೂ ಬ್ರಷ್ಟಾಚಾರದ ತೆಕ್ಕೆಯೊಳಗೆ ತೆಗೆದುಕೊಂಡ ಮಹಾನುಭಾವರು. ಪಾಳೆಗಾರಿಕೆ ಪದ್ದತಿಯ ಪಳೆಯುಳಿಕೆಯಂತಿರುವ ಇವರು ತಮ್ಮದೇ ಹೆಸರಿನಲ್ಲಿ ಚಾನಲ್ ತೆರೆದು ವ್ಯಕ್ತಿಪೂಜೆ ಮಾಡಿಸಿಕೊಂಡವರು. ಅಂತಹ ಚಾನಲ್ ’ಭ್ರಷ್ಟಾಚಾರದ ವಿರುದ್ಧ ಜನಶ್ರೀ ಅಭಿಯಾನ’ ಎಂದು ಹಾಕಿಕೊಂಡರೆ ಅದಕ್ಕಿಂತ ದೊಡ್ಡ ವ್ಯಂಗ್ಯ ಇನ್ನೊಂದಿರಬಹುದೇ? ಇಂದು ಪ್ರೀಡಂ ಪಾರ್ಕಿನಲ್ಲಿ ಧರಣಿ ಕುಳಿತಿರುವ ಜ್ನಾನಪೀಠ ಪ್ರಶಸ್ತಿ ವಿಜೇತರಾದ ಯು.ಆರ್. ಅನಂತಮೂರ್ತಿಯವರು, ’ಗಣಿ ಧಣಿಗಳ ಚಾನಲ್ ಒಂದಿದೆ. ಅದಕ್ಕೆ ನಾನು ಮಾತಾಡುವುದಿಲ್ಲ’ ಎಂದು ಲೈವ್ ಟೆಲಿಕಾಸ್ಟ್ ನಲ್ಲಿ ಹೇಳಿದರು. ಅಂತಹ ಧಿಕ್ಕಾರದ ಧ್ವನಿ ಜನಸಾಮಾನ್ಯರಿಂದಲೂ ಬರಬೇಕಾಗಿದೆ.

ಕನ್ನಡ ಪತ್ರಿಕೋಧ್ಯಮ ನಮಗೆ ಸುದ್ದಿಗಳನ್ನಷ್ಟೇ ನೀಡಲಿ. ಅದರ ವ್ಯಾಖ್ಯಾನ ಬೇಡ. ಸುದ್ದಿಯ ಹಿಂದಿನ ಸುದ್ದಿಯನ್ನು ನಾವು ಅರ್ಥ ಮಾಡಿಕೊಳ್ಳುತ್ತವೆ. ನಿಜ, ದೃಶ್ಯ ಮತ್ತು ಪ್ರಿಂಟ್ ಮೀಡಿಯಾಗಳು ಬ್ರಷ್ಟಾಚಾರ ವಿರುದ್ಧ ಆಂದೋಲನಕ್ಕೆ ವ್ಯಾಪಕ ಪ್ರಚಾರ ನೀಡುತ್ತಿವೆ. ಆದರೆ ಅದು ಅವರ ಉದ್ಯೋಗದ ಒಂದು ಭಾಗ ಎಂಬುದನ್ನು ನಾವು ಮರೆಯಬಾರದು. ನಾಳೆ ಇದಕ್ಕಿಂತ ರೋಚಕವಾದ ಘಟನೆಯೊಂದು ದೊರೆತರೆ ಮೀಡಿಯಾದ ಗಮನ ಅತ್ತ ಹೋಗುತ್ತದೆ. ಆದರೆ ಆಂದೋಲನ ಮುಂದುವರೆಯುತ್ತದೆ.

ನಮ್ಮ ಯುವಕರಿಗೆ ಕನಸುಗಳಿವೆ; ಆದರ್ಶಗಳಿವೆ; ಬ್ರಷ್ಟಾಚಾರ ಮುಕ್ತ ದೇಶ ಕಟ್ಟುವ ಹುಮ್ಮಸಿದೆ ಎಂಬುದು ಜಂತರ್ ಮಂತರ್ ನತ್ತ ಹರಿದು ಬರುತ್ತಿರುವ ವಿದ್ಯಾರ್ಥಿ ವೃಂದವನ್ನು ನೋಡಿದರೆ ಗೊತ್ತಾಗುತ್ತದೆ. ದೇಶದಾದ್ಯಂತ ಮತ್ತು ಹೊರದೇಶಗಳಲ್ಲಿರುವ ಯುವವೃಂದ ಈ ಆಂದೋಲನಕ್ಕೆ ಪೂರಕ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿರುವ ರೀತಿ ನೋಡಿದರೆ ರೋಮಾಂಚನವಾಗುತ್ತಿದೆ. ನಮ್ಮ ಯುವ ಜನಾಂಗ ಸ್ವಕೇಂದ್ರಿತ ವ್ಯಕ್ತಿತ್ವನ್ ಹೊಂದಿದ್ದಾರೆ.ಅವರಲ್ಲಿ ಸಾಮಾಜಿಕ ಹೊಣೆಗಾರಿಕೆ ಇಲ್ಲಾ ಎನ್ನುತ್ತಿದ್ದವರಿಗೆಲಾ ಅವರೀಗ ತಮ್ಮ ನಡವಳಿಕೆಗಳಿಂದಲೇ ಸೂಕ್ತ ಉತ್ತರ ಕೊಡುತ್ತಿದ್ದಾರೆ. ಅವರಿಗೆ ನಾಯಕತ್ವದ ಕೊರತೆಯಿತ್ತು; ಮಾರ್ಗದರ್ಶಕರು ಬೇಕಾಗಿತ್ತು. ಅವರಿಗೆ ಸಮರ್ಥ ಗುರು ಸಿಕ್ಕಿದ.

ಸಮಾಜದ ಕೆಳಸ್ತರದಲ್ಲಿ. ಮಧ್ಯಮವರ್ಗದಲ್ಲಿ ಕುದಿಯುವ ಅಸಹನೆಯಿತ್ತು. ಅದು ಅಂಡರ್ ಕರೆಂಟ್ ನಂತೆ ಒಳಗೊಳಗೆ ಪ್ರವಾಹಿಸುತ್ತಿತ್ತು. ಅದಕ್ಕೆ ಹಜಾರೆ ಕಿಡಿ ತಾಗಿಸಿದರು. ಅದೀಗ ಮೆಲ್ಪದರಕ್ಕೆ ಬಂದಿದೆ. ಸ್ಫೋಟಗೊಳ್ಳುವ ಹಂತ ತಲುಪಿದೆ. ಅದನ್ನು ತಣಿಸದಿದ್ದರೆ ಖಂಡಿತವಾಗಿಯೂ ಅದು ಕಾಡ್ಗಿಚ್ಚಿನಂತೆ ಹಬ್ಬಿ ಸಿಕ್ಕಿದ್ದೆಲ್ಲವನ್ನೂ ಆಪೋಶನ ತೆಗೆದುಕೊಳ್ಳಬಹುದು. ನಮ್ಮ ಕಣ್ಣ ಮುಂದೆ ಈಜಿಪ್ಟ್, ಲಿಬಿಯಾಗಳ ಉದಾಹರಣೆಯಿದೆ.

ತುರ್ತುಪರಿಸ್ಥಿತಿಯ ನಂತರ ಇಡೀ ದೇಶವನ್ನು ಒಂದಾಗಿ ಬೆಸೆಯುವ ಯಾವ ಆಂದೋಲನವೂ ನಡೆದಿರಲಿಲ್ಲ. ಜಾಗತೀಕರಣದ ಮುಕ್ತ ಆರ್ಥಿಕತೆಗೆ ತೆರೆದುಕೊಂಡ ನಂತರವಂತೂ ಎಲ್ಲರೂ ಹಣದ ಹಿಂದೆ ಓಡತೋಡಗಿದರು. ಹೇಗಾದರೂ ಸೇರಿ ಆಸ್ತಿ ಸಂಪಾದಿಸುವುದು, ದುಡ್ಡು ಮಾಡುವುದೇ ಮುಖ್ಯವೆನಿಸತೊಡಗಿತು.ಇಂಥ ಸ್ಥಿತಿಯಲ್ಲಿ ಜನಾಂದೋಲನ ಸಾಧ್ಯವೇ? ಸಾಮಾಜಿಕ ಸಮಸ್ಯೆಯೊಂದು ಭಾರತವನ್ನು ಮತ್ತೆ ಒಂದಾಗಿ ಬೆಸೆದು ಹೋರಾಟಕ್ಕೆ ಅಣಿಗೊಳಿಸಲಲು ಸಾಧ್ಯವೇ? ಎಂದು ಅಂದುಕೊಳ್ಳುವ ಹೊತ್ತಿನಲ್ಲೇ ಗಾಂಧೀವಾದಿ ಅಣ್ಣಾಹಜಾರೆ ದೇವದೂತನಂತೆ ಅವತರಿಸಿದ್ದಾರೆ.

ಇಂದು ಇಡೀ ದೇಶ ಅವರತ್ತ ನೋಡುತ್ತಿದೆ. ಯುವ ಜನಾಂಗ ಅವರೆಡೆಗೆ ಸ್ವಯಂ ಪ್ರೇರಿತರಾಗಿ ಹರಿದು ಬರುತ್ತಿದೆ. ಜನಾಂದೋಲನಕ್ಕೆ ಚಾಲನೆ ದೊರೆತಿದೆ. ಒಂದು ಒಳ್ಳೆಯ ಉದ್ದೇಶಕ್ಕಾಗಿ ಜನ ಒಟ್ಟಾಗುತ್ತಿದ್ದಾರೆ. ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಧರಣಿಯಲ್ಲಿ ನಾನೂ ಭಾಗಿಯಾಗುತ್ತಿದ್ದೇನೆ.

ಪ್ರಜ್ನಾವಂತ ನಾಗರಿಕ ಸಮೂಹ, ಸಾಹಿತಿ-ಕಲಾವಿದರು, ಸಂಸ್ಕೃತಿ ಚಿಂತಕರು, ನಾಟಕ ರಂಗ, ಸಿನೇಮಾಕ್ಷೇತ್ರ, ಪ್ರಗತಿಪರ ಸಂಘಟನೆಗಳು, ವಿದ್ಯಾರ್ಥಿ ಸಮೂಹ, ಐಟಿ-ಬಿಟಿ ಸೇರಿದಂತೆ ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡವರೆಲ್ಲಾ ಅಣ್ಣಾಹಜಾರೆಯವರ ಭ್ರಷ್ಟಾಚಾರ ವಿರೋಧಿ ಅಂದೋಲನಕ್ಕೆ ಬೆಂಬಲ ಸೂಚಿಸಿದ್ದಾರೆ. ಅದು ತೋರಿಕೆಯ ಬೆಂಬಲ ಅಲ್ಲ ಎಂಬುದು ಸತ್ಯಾಗ್ರಹದ ನಾಲ್ಕನೆಯ ದಿನವಾದ ಇಂದು ನಿಚ್ಚಳವಾಗಿ ಗೊತ್ತಾಗುತ್ತಲಿದೆ.

ಈ ಆಂದೋಲನ ತಾರ್ಕಿಕ ಅಂತ್ಯವನ್ನು ಕಾಣುವಂತಾಗಲಿ

ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು.

5 comments:

ಆಸು ಹೆಗ್ಡೆ said...

ಗಣಿಧಣಿಗಳ ಭ್ರಷ್ಟಾಚಾರದ ವಿಷಯ ಜಗಜ್ಜಾಹೀರು ಆಗಿದೆ. ಒಪ್ಪೋಣ. ಆದರೆ, ಶ್ರೀಯುತ ಅನಂತಮೂರ್ತಿಯವರಿಗೆ ಗಣಿಧಣಿಗಳ ಭ್ರಷ್ಟಾಚಾರ ಮಾತ್ರ ಗಮನಕ್ಕೆ ಬರುತ್ತದೆ, ಗೌಡರ ಕುಟುಂಬದವರ ಭ್ರಷ್ಟಾಚಾರ ಗಮನಕ್ಕೆ ಬರುವುದಿಲ್ಲ ಅನ್ನುವುದು ವಿಚಿತ್ರ ಅನಿಸುತ್ತದೆ. ಬುದ್ಧಿಜೀವಿಗಳೆಂದು ಕರೆದುಕೊಳ್ಳುವವರು ಒಂದು ರಾಜಕೀಯ ಪಕ್ಷದತ್ತ ಮತ್ತು ಆ ಪಕ್ಷದ ಮೊದಲನೇ ಕುಟುಂಬ ಸದಸ್ಯರತ್ತ ತಮ್ಮ ಒಲವನ್ನು ತೋರಿಸಿದ್ದು ಹಳೆಯ ವಿಷಯವೇನಲ್ಲ. ಅದಿನ್ನೂ ನಮ್ಮ ನೆನಪಿಂದ ಮಾಸಿಲ್ಲ. ಧಿಕ್ಕಾರದ ದನಿ ಯಾವಾಗಲೂ ಪಕ್ಷಾತೀತವಾಗಿರಬೇಕು. ನಡೆಗೂ ನುಡಿಗೂ ವ್ಯತ್ಯಾಸ ಇರದಂತಿರಬೇಕು. ಆಗ ಮಾತಿಗೂ ಮತ್ತು ಆ ವ್ಯಕ್ತಿಗೂ ಗೌರವ ದೊರೆಯುತ್ತದೆ

sunaath said...

ಆಸು ಹೆಗಡೆಯವರ ಮಾತಿಗೆ ನನ್ನ ಸಹಮತವಿದೆ.

Dinesh Patwardhan said...

reaily good. but why hid some chanel name ?

www.kumararaitha.com said...

ರಾಜೀವ್ ಚಂದ್ರಶೇಖರ್ ಅವರ ಬಗ್ಗೆ ನೀವು ವ್ಯಕ್ತಪಡಿಸಿರುವ ನಿಲುವು ಸೂಕ್ತವಲ್ಲ. ಇವರ ನಿಲುವು-ಕಾಳಜಿ-ಕಾರ್ಯಕ್ರಮಗಳನ್ನು ಗಮನಿಸಿದಾಗ ಭ್ರಷ್ಟರಲ್ಲ ಎನ್ನುವ ಸಂಗತಿ ಅರಿವಾಗುತ್ತದೆ. ಇಂಟೆಲ್ ನ ಅತ್ಯಂತ ಪ್ರತಿಭಾನ್ವಿತ ತಂತ್ರಜ್ಞರಾಗಿದ್ದ ರಾಜೀವ್ ಚಂದ್ರಶೇಖರ್ ಅವರಿಗೆ ವಿದೇಶದಲ್ಲಿ ಅಪಾರ ಅವಕಾಶಗಳಿದ್ದವು. ಅದನ್ನೆಲ್ಲವನ್ನೂ ನಿರಾಕರಿಸಿ ಇವರು ಭಾರತಕ್ಕೆ ಮರಳಿ ಬಂದರು. ಭಾರತದ ಮಾಹಿತಿ-ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಲ್ಲಿ ಇವರ ಕೊಡುಗೆಯೂ ಗಮನಾರ್ಹ.
ರಾಜ್ಯಸಭಾ ಸದಸ್ಯರಾಗಿ ರಾಜ್ಯಸಭೆಯಲ್ಲಿ ರಾಷ್ಟ್ರ ಮತ್ತು ರಾಜ್ಯದ ಪ್ರಗತಿಗೆ ಸಂಬಂಧಿಸಿದಂತೆ ಅನೇಕ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಬಿಡುವಿಲ್ಲದ ಕಾರ್ಯಗಳ ನಡುವೆಯೂ ಬೆಂಗಳೂರಿನ ಪ್ರಗತಿಗೆ ಮತ್ತು ನೆರೆ ಸಂತ್ರಸ್ತರಿಗೆ ಆಸರೆ ಯೋಜನೆ ಅನುಷ್ಠಾನಗೊಳಿಸುವಲ್ಲಿ ಇವರು ವಹಿಸಿದ ಶ್ರಮ ಅಪಾರ. ಬೆಂಗಳೂರಿನ ನಿವಾಸಿಯೂ ಆಗಿರುವ ಇಲ್ಲಿನ ಪ್ರಗತಿಗೆ ತೋರಿಸಿರುವ ಕಾಳಜಿ ಮತ್ತು ವಹಿಸುತ್ತಿರುವ ಶ್ರಮ ಅಪಾರ. ಈ ಎಲ್ಲ ಕಾರ್ಯಗಳ ಹಿಂದೆ ಆರ್ಥಿಕ ಲಾಭವಿಲ್ಲ ಎನ್ನುವುದು ಗಮನಾರ್ಹ ಸಂಗತಿ
ಗಾಂಧೀವಾದಿ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಅಂದೋಲನಕ್ಕೆ ರಾಜೀವ್ ಚಂದ್ರಶೇಖರ್ ಅವರು ತುಟಿಯಂಚಿನ ಅನುಕಂಪ ವ್ಯಕ್ತಪಡಿಸದೇ ನಿಜವಾದ ಕಳಕಳಿ ತೋರಿದರು. ಅಣ್ಣಾ ಹಜಾರೆ ಅವರ ಹಕ್ಕೋತ್ತಾಯಗಳನ್ನು ಜಾರಿಗೊಳಿಸಲೇಬೇಕೆಂದು ಪ್ರಧಾನ ಮಂತ್ರಿ ಎಂ.ಸಿಂಗ್ ಅವರಿಗೆ ಪತ್ರ ಬರೆದು ಆಗ್ರಹಿಸಿದರು. ಜೊತೆಗೆ ತಮ್ಮ ಒಡೆತನದ ಸುದ್ದಿವಾಹಿನಿಗಳಲ್ಲಿ ಭ್ರಷ್ಟಾಚಾರ ವಿರೋಧಿ ಅಂದೋಲನ ಆರಂಭವಾಗುವಂತೆ ಮಾಡಿದರು. ಈ ಎಲ್ಲ ಕಾರ್ಯಗಳಿಗೂ ನಮ್ಮ ಮೆಚ್ಚುಗೆ ಸಲ್ಲಲ್ಲೇಬೇಕು.

Sahana said...

I partly differ with Kumar Raith on RC.
you are journalist.
1. Find out why he didn't completed ASARE houses promised by him Bagalkote district.
2. Why he allows corrupt journalists in Suvarna 24*7
3. What you say purchase of Kannada Prabha and recent developments ?