ನನ್ನ ನಿನ್ನ ಸಂಬಂಧ ಕಡಿಯಿತು ಎಂದಳಾಕೆ
ಆ ಕ್ಷಣಕ್ಕಾಗಿಯೇ ಹಸಿದವನಂತೆ ’ತಥಾಸ್ತು’ ಎಂದವನು
ಬೆನ್ನು ತಿರುಗಿಸಿ ಹೋಗಿಯೇಬಿಟ್ಟ
ಅವಳು ಶಿಲೆಯಾಗಿ ನಿಂತಳು
ಎಂಥವನಿಗೊಲಿದೆನಯ್ಯಾ...ಎನ್ನಬೇಕಾದವಳು
ಇಂಥವನಿಗೊಲಿದೆಯಲ್ಲಾ...!
ಅವನತಮುಖಿ,
ಹೆಬ್ಬೆರಳ ತುದಿಯಲ್ಲಿ ಕೊಂಚ ಕೆಂಪು
ಎಲ್ಲವನ್ನೂ ಹೇಳಿಬಿಟ್ಟಾಗಿದೆ, ನೀರವ ನಿರಾಳತೆ.
ಕೋಟೆ ಕಟ್ಟುವುದಿದೆ,
ತನ್ನ ಶಿಲುಬೆಯ ತಾನೇ ಹೊತ್ತು.
ಹಂಬಲಗಳಿಗೋ ಆಯುಸ್ಸಿದೆ; ದಿನಗಳು ಮುಗಿದವು.
ಜಂಗಮಕ್ಕಳಿವುಂಟು; ಸ್ಥಾವರಕ್ಕಳಿವಿಲ್ಲ.
ಒಳಗೊಳಗೇ ಇಳಿದಳು, ಮೇಲೇರಿದಳು
ಚಂದಮಾಮನ ಮುಟ್ಟಲು ಐದೇ ಮೆಟ್ಟಲು.
ಕೋಟೆ ಕಟ್ಟಬೇಕು, ಅಲ್ಲಲ್ಲಿ ಕಳ್ಳಗಿಂಡಿಗಳನ್ನಿಟ್ಟು ಕಾಯಬೇಕು;
ಖಂಡಾಂತರ ಕ್ಷಿಪಣಿಗಳ ಯುಗ, ಎದೆಯೊಳಗೂ ಇಳಿದು ಬಿಟ್ಟಾವು!
ಸ್ವಚ್ಛಂದ ಆಕಾಶ, ಮಾಯಾಕಂಬಳಿಯಲ್ಲಿ ಕುಳಿತ ರಾಜಕುಮಾರಿ.
ಬಿಂಬಗಳೆಲ್ಲಾ ಜೀವತಳೆದು ನಕ್ಷತ್ರ ಮಾಲೆಯನು ಹಿಡಿದು ನಿಂತವು
ಬದುಕು ಕಾಮನಬಿಲ್ಲು.
ದಶದಿಕ್ಕಿನ ಹಾದಿ, ಒಬ್ಬಂಟಿ ಪಯಣ
ನನ್ನ ಶಿಲುಬೆಯ ನಾನೇ ಹೊರಬೇಕು.
ಎಲ್ಲವನ್ನೂ ಮುರಿಯಬೇಕು, ಮುರಿದು ಕಟ್ಟಬೇಕು
ಮಾತಿನಲ್ಲಿ ಜಾರಿದ್ದು ಮೌನದಲ್ಲಿ ಆಪ್ಪಿದೆ
ಹೊತ್ತ ಶಿಲುಬೆಗೆ ಏಳೇ ಮಲ್ಲಿಗೆಯ ತೂಕ!
8 comments:
ತುಂಬ ಇಷ್ಟವಾಯ್ತು ಮೇಡಮ್. ಚೆಂದದ ಕವಿತೆಯನೋದಿಸಿದ್ದಕ್ಕೆ ಪ್ರೀತಿಯ ವಂದನೆ.
ಪ್ರೀತಿಯಿಂದ,
-ಶಾಂತಲಾ ಭಂಡಿ
ಅರ್ಥಪೂರ್ಣ ಮನನದ ಕವನ.
'ದಶದಿಕ್ಕಿನ ಹಾದಿ, ಒಬ್ಬಂಟಿ ಪಯಣ
ನನ್ನ ಶಿಲುಬೆಯ ನಾನೇ ಹೊರಬೇಕು'
ಇಲ್ಲಿಯವರೆಗೂ ಕವನ ಬಿಗಿಯಾಗಿದೆ.
'ಎಲ್ಲವನ್ನೂ ಮುರಿಯಬೇಕು, ಮುರಿದು ಕಟ್ಟಬೇಕು
ಮಾತಿನಲ್ಲಿ ಜಾರಿದ್ದು ಮೌನದಲ್ಲಿ ಆಪ್ಪಿದೆ
ಹೊತ್ತ ಶಿಲುಬೆಗೆ ಏಳೇ ಮಲ್ಲಿಗೆಯ ತೂಕ!'
ಈ ಸಾಲುಗಳು ತುಂಬ ವಾಚ್ಯ ಆಯಿತು ಎನಿಸುತ್ತದೆ.
ಇವುಗಳು ಇಲ್ಲದಿದ್ದರೂ ಕವಿತೆ ಉಂಟು ಮಾಡುತ್ತಿರುವ ಪರಿಣಾಮಕ್ಕೆ ಧಕ್ಕೆಯಾಗುತ್ತಿರಲಿಲ್ಲ.
ಆಗಾಗ ನಿಮ್ಮ ಉತ್ತಮ ಕವಿತೆಗಳನ್ನು ಓದುವ ಅವಕಾಶ ಕಲ್ಪಿಸುತ್ತಿದ್ದೀರಿ. ಅಭಿನಂದನೆ
tumba ishta aayitu kavana... :)
ಇಷ್ಟವಾಯ್ತು :)
olle kavithe.
- hani
ಇದು ನಾನು ಇತ್ತೀಚೆ ಓದಿದ ಉತ್ತಮ ಪದ್ಯಗಳಲ್ಲೊಂದು.
"ಎಲ್ಲವನ್ನೂ ಮುರಿಯಬೇಕು, ಮುರಿದು ಕಟ್ಟಬೇಕು
ಮಾತಿನಲ್ಲಿ ಜಾರಿದ್ದು ಮೌನದಲ್ಲಿ ಆಪ್ಪಿದೆ
ಹೊತ್ತ ಶಿಲುಬೆಗೆ ಏಳೇ ಮಲ್ಲಿಗೆಯ ತೂಕ!"
ಈ ಸಾಲುಗಳು ವಾಸ್ತವದ ಮೌನ ಸ್ವೀಕೃತಿ ಮತ್ತು ನಿರ್ಧಾರದ ದೃಢತೆಯ ಮುಂದೆ ಅಸಾಧ್ಯವೆನ್ನಿಸುವದು ನಗಣ್ಯವಾಗುವದನ್ನು ಬಿಂಬಿಸಿದರೆ ಇಡೀ ಕವಿತೆಯಲ್ಲಿ ಅಂತರ್ಗತವಾಗಿರುವ ಆ ಸೀಕೃತಿಯ ಹಿಂದಿರುವ ನೋವು ಹೃದಯ ತಟ್ಟುತ್ತದೆ.
ಜಂಗಮಕ್ಕಳಿವುಂಟು; ಸ್ಥಾವರಕ್ಕಳಿವಿಲ್ಲ.
ಒಳಗೊಳಗೇ ಇಳಿದಳು, ಮೇಲೇರಿದಳು
ಚಂದಮಾಮನ ಮುಟ್ಟಲು ಐದೇ ಮೆಟ್ಟಲು.
ಸ್ವಚ್ಛಂದ ಆಕಾಶ, ಮಾಯಾಕಂಬಳಿಯಲ್ಲಿ ಕುಳಿತ ರಾಜಕುಮಾರಿ.
ಬಿಂಬಗಳೆಲ್ಲಾ ಜೀವತಳೆದು ನಕ್ಷತ್ರ ಮಾಲೆಯನು ಹಿಡಿದು ನಿಂತವು
ಬದುಕು ಕಾಮನಬಿಲ್ಲು.
ಇಷ್ಟವಾಯಿತು ಎಂದು ಹೇಳಲು ಇಷ್ಟು ಸಾಕಲ್ಲವಾ...
ಇಷ್ಟವಾಯಿತು ಎಂದಷ್ಟೇ ಹೇಳಬಲ್ಲೆ...
Post a Comment