
ಅಂದು ನಮ್ಮ ಮದುವೆಯ ವಾರ್ಷಿಕೋತ್ಸವ. ಅದು ನಮಗೇನೂ ವಿಶೇಷ ದಿನವಲ್ಲ. ಆದರೆ ಆ ದಿನ ಭಾನುವಾರ ಬಂದಿದ್ದರಿಂದ ನಮ್ಮ ಮನೆಗೆ ಇಬ್ಬರು ಕಿರಿಯ ಸ್ನೇಹಿತರು ಬಂದಿದ್ದರು.
ಈ ಘಟನೆ ನಡೆದು ಹಲವಾರು ವರ್ಷಗಳು ಕಳೆದಿವೆ. ಆದರೂ ಅದಿನ್ನೂ ನಿನ್ನೆ ಮೊನ್ನೆ ನಡೆದಿದೆಯೆನೋ ಎಂಬಷ್ಟು ಹಸಿರಾಗಿ ನನ್ನ ಮನದಲ್ಲಿ ಅಚ್ಚೊತ್ತಿಬಿಟ್ಟಿದೆ.
ನಾನು ಅಡುಗೆ ಮನೆಯಲ್ಲಿ ಸಾರಿಗೆ ಒಗ್ಗರಣೆ ಹಾಕುವುದರಲ್ಲಿ ನಿರತಳಾಗಿದ್ದೆ. ಆಗ ಆ ಹುಡುಗ ಅಡುಗೆ ಮನೆಗೆ ಬಂದ. ಬಂದವನೇ ನನ್ನೆಡೆಗೆ ಪ್ರಶೆಯೊಂದನ್ನು ಎಸೆದ. ತುಂಬಾ ಸರಳವಾದ ಪ್ರಶ್ನೆಯದು; ’ನೀವು ಕೂಡಾ ಹೂ ಮುಡಿಯುತ್ತಿರಾ?’ ’ನೀವು ಕೂಡಾ’ ಎಂಬ ಪದಗಳನ್ನು ಆತ ಒತ್ತಿ ಹೇಳಿದ ರೀತಿಯಲ್ಲಿ ನಾನೇನೋ ಮಾಡಬಾರದ್ದನ್ನು ಮಾಡಿದ್ದೇನೆನೋ ಎಂಬುದನ್ನು ಧ್ವನಿಸುತ್ತಿತ್ತು.
ಆ ಹುಡುಗ ಪ್ರಶ್ನೆ ಮಾಡಿದ ರೀತಿ, ಅದರ ಹಿಂದಿನ ಭಾವವನ್ನು ಅರ್ಥ ಮಾಡಿಕೊಳ್ಳಲು ನನಗಿ ಒಂದೆರಡು ನಿಮಿಷ ಬೇಕಾಯಿತು. ಹಾಗಿದ್ದರೂ ಸಮಯಸ್ಪೂರ್ತಿಯಿಂದ ಉತ್ತರಿಸಿದೆ, ’ಯಾಕೆ ನಾನು ಹೆಣ್ಣಲ್ಲವೇ?’
ಊಟವೆಲ್ಲಾ ಮುಗಿದು ಹರಟೆ ಹೊಡೆಯುತ್ತಾ ಕೂತಿದ್ದರೂ ಆ ಪ್ರಶ್ನೆಯ ಗುಂಗಿನಲ್ಲೇ ನಾನಿದ್ದೆ. ನನಗಿಂತ ತುಂಬಾ ಚಿಕ್ಕವನಾದ ಆ ಹುಡುಗನ ಬಳಿ ಆ ಪ್ರಶ್ನೆ ಮೂಡಿಸಿದ ಗೊಂದಲವನ್ನು ಚರ್ಚಿಸುವಂತಿರಲಿಲ್ಲ. ಅವನಿಗಿಂತ ಸ್ವಲ್ಪ ಭಿನ್ನವಾಗಿ ಯೋಚಿಸಬಲ್ಲ ನನ್ನ ಕಿರಿಯ ಸ್ನೇಹಿತೆಯ ಬಳಿ ಆತ ಕೇಳಿದ ಪ್ರಶ್ನೆಯನ್ನು ಹೇಳಿ ’ನಾನು ಅಸ್ಟೊಂದು ವಿಲಕ್ಷಣವಾಗಿ ಕಾಣಿಸ್ತಿನೇನೆ’ ಎಂದೆ, ಎಂದೆ ತಲೆಯಲ್ಲಿನ ಮಲ್ಲಿಗೆ ಹೂವನ್ನು ಮುಟ್ಟಿ ನೋಡಿಕೊಳ್ಳುತಾ. ಅದಕ್ಕವಳು ’ಹೂ ಮುಡಿದುಕೊಂಡರೆ ನೀನು ತುಂಬಾ ಚೆನ್ನಾಗಿ ಕಾಣಿಸ್ತಿಯಾ, ಅದೊಂದು ಚೈಲ್ಡ್. ಅದಕ್ಕೇನು ಗೊತ್ತಾಗುತ್ತೆ ಹೆಣ್ತನದ ವಿಸ್ತಾರತೆ’ ಎಂದವಳೇ ಸ್ವಲ್ಪ ಹೊತ್ತು ಸುಮ್ಮನಿದ್ದು, ’ನಾವು ಸ್ತ್ರೀಪರವಾಗಿ ಮಾತಾಡ್ತೀವಿ, ಅವರ ಬಗ್ಗೆ ಲೇಖನಗಳನ್ನು ಬರೀತೇವೆ. ಮಹಿಳಾ ಹಕ್ಕುಗಳ ಬಗ್ಗೆ ಹೋರಾಡುತ್ತಿರುವ ಸಂಘಟನೆಗಳ ಬಗ್ಗೆ ಸಾಪ್ಟ್ ಕಾರ್ನರ್ ಹೊಂದಿದ್ದೇವೆ. ನೀನಂತೂ ಗಂಡನನ್ನು ಸೇಹಿತನ ತರಹ ನೋಡ್ತಿದ್ದೀಯಾ. ಹಾಗಿರುವಾಗ ಸ್ತ್ರೀಯ ಗುಲಾಮಗಿರಿಯ ಸಂಖೆತವಾದ ಬಳೆ, ಕುಂಕುಮ, ಹೂಗಳನ್ನು ತೊಟ್ಟು ಭಾರತೀಯ ಸಂಪ್ರದಾಯಸ್ಥ ಮುತ್ತೈದೆ ತರಹ ನಡೆದುಕೊಂಡರೆ ಆ ಗಂಡು ಜೀವ ಹೇಗೆ ತಡೆದುಕೊಂಡೀತು’ ಎಂದು ಕಣ್ಣು ಮಿಟುಕಿಸಿ ನಕ್ಕಳು.
ಅಂದು ಆ ಹುಡುಗ ಕೇಳಿದ ಪ್ರಶ್ನೆ ಇಂದಿಗೂ ನನ್ನನ್ನು ಕಾಡುತ್ತಲೇ ಇದೆ. ಹೂ ಮೃದು ಭಾವನೆಗಳ ಸಂಕೇತ; ಹೆಣ್ಣಿನ ಮನಸ್ಸಿನಂತೆ. ಈಗೀಗ ನನ್ನಂತವಳು, ನನ್ನ ಹಾಗೆ ಯೋಚಿಸುವ ಮಹಿಳೆಯರು ಹೂವನ್ನು ತಮ್ಮ ಬದುಕಿನಿಂದ ದೂರ ಇಡುತ್ತಿದ್ದಾರೆಯೇ? ಹೂವಿನಂಥ ಹೆಣ್ಣು ಬದಲಾಗುತ್ತಿದ್ದಾಳೆಯೇ?
ನನ್ನ ಮನಸ್ಸು ಬಾಲ್ಯ ಕಾಲದ್ದತ್ತ ಚಲಿಸಿತು. ನನ್ನೂರು ಬಾಳುಗೋಡಿನಿಂದ ಕುಕ್ಕೆಸುಬ್ರಹ್ಮಣ್ಯಕ್ಕೆ ಎಂಟು ಮೈಲಿಗಳ ಹಾದಿ. ದಟ್ಟ ಕಾಡು. ಒಮ್ಮೊಮ್ಮೆ ಕಾಡಾನೆಗಳ ದರ್ಶನವಾಗುದೂ ಉಂಟು. ವಿವಿಧ ರೀತಿಯ ಪಕ್ಷಿ, ಪ್ರಾಣಿಗಳು ದಾರಿಯಲ್ಲಿ ಕಾಣಿಸುತ್ತಿದ್ದವು. ಅದರಲ್ಲಿ ’ಕುಪ್ಪುಳು’ ಅಂದರೆ ಕೆಂಬೂತವೂ ಒಂದು. ಅದಕ್ಕೆ ನಾವನ್ನುತ್ತಿದ್ದುದು-ಗುಡ್ ಲಕ್. ಯಾಕೆಂದರೆ ಅದನ್ನು ನೋಡುವುದು ಶುಭಶಕುನವಂತೆ. ನಾವು ದಿನದಲ್ಲಿ ಕನಿಷ್ಟ ಹತ್ತಾದರೂ ಗುಡ್ ಲಕ್ ನೋಡುತ್ತಿದ್ದೆವು. ಅದನ್ನು ಶಾಲೆಗೆ ಬಂದು ಇತರ ಗುಡ್ ಲಕ್ ವೀಕ್ಷಕರ ಜೊತೆ ತಾಳೆ ಹಾಕುತ್ತಿದ್ದೆವು.
ನಾವು ನಡೆದು ಹೋಗುತ್ತಿದ್ದ ಹಾದಿಯಲ್ಲಿ ಮಾವಿನಕಟ್ಟೆ ಗುಡ್ಡ ಇಳಿದು ಅಜ್ಜಿಗುಡ್ಡೆ ಹತ್ತುವ ಮಧ್ಯದಲ್ಲಿನ ಸ್ವಲ್ಪ ಸಮತಟ್ಟಾದ ಜಾಗದಲ್ಲಿ ಒಂದು ರೆಂಜಾಳ ಹೂವಿನ ಮರವಿತ್ತು. ಮೊದಲು ಬಂದ ಹುಡುಗ-ಹುಡುಗಿಯರೆಲ್ಲಾ ಈ ಮರದಡಿಯಲ್ಲಿ ಸೇರಿ ರೆಂಜಾಳ ಹೂ ಹೆಕ್ಕಿ ಅದನ್ನು ಪೋಣಿಸುವುದು ನಿತ್ಯ ಸಂಪ್ರದಾಯ. ಈ ಹೂ ಇಡೀ ಕಾಡಿಗೆಲ್ಲಾ ಪರಿಮಳ ಬೀರುತ್ತಿತ್ತು. ಅದನ್ನು ಮುಡಿದೇ ನಾವು ಶಾಲೆಗೆ ಹೋಗುತ್ತಿದ್ದುದ್ದು.
ತಲೆಗೆ ಮುಡಿಯಲು ನಮಗೆ ಹೂವೇ ಆಗಬೇಕೆಂದಿರಲಿಲ್ಲ. ಕಾಸರಕನ ಮರದ ಚಿಗುರು [ ಈ ಮರ ತೆಂಗಿನ ಮರಕ್ಕೆ ಒಳ್ಳೆ ಗೊಬ್ಬರ.ಇದನ್ನು ನಾಲ್ಕು ವರ್ಷಕ್ಕೊಮ್ಮೆ ಇದರ ಸೊಪ್ಪನ್ನು ಕಡಿದು ತೆಂಗಿನ ಮರದ ಬುಡಕ್ಕೆ ಹಾಕಿದರೆ ಸಮೃದ್ಧಿಯಾಗಿ ಕಾಯಿ ಬಿಡುತ್ತದೆ.]. ಇದನ್ನು ಮುಡಿದರೆ ದೃಷ್ಟಿ ತಾಗುವುದಿಲ್ಲವೆಂಬ ನಂಬಿಕೆಯಿದೆ.
ಮಲೆನಾಡಿನಲ್ಲಿ ಸುರಗಿ ಹೂವೆಂಬ ವಿಶಿಷ್ಟ ಜಾತೀಯ ಹೂವಿದೆ [ನನ್ನ ’ಮೌನಕಣಿವೆ’ ಬ್ಲಾಗನ್ನು ಎರಡು ವರ್ಷಗಳ ತನಕ ಸುರಗಿ ಎಂಬ ಹೆಸರಿನಲ್ಲಿ ನಿರ್ವಹಿಸುತ್ತಿದ್ದೆ!] ಪುರುಷ ಭೂತಕ್ಕೆ ಹರಕೆ ಒಪ್ಪಿಸುವ ಹೂವಿದು [ತುಳುನಾಡಿನ ಕಾರಣಿಕ ದೈವ ಪುರುಷಭೂತ] ಈ ಹೂವಿನಲ್ಲಿ ಮತ್ತೇರಿಸುವ ಸುಗಂಧವಿರುತ್ತದೆ. ಒಣಗಿದ ಮೇಲೂ ಈ ಸುಗಂಧ ತಿಂಗಳಾನುಗಟ್ಟಲೆ ಹಾಗೆಯೇ ಉಳಿದಿರುತ್ತದೆ. ನಮ್ಮ ಮನೆಯ ಹಿರಿಯರು ಈ ಮರಕ್ಕೆ ಹತ್ತಿ ಹೂ ಕೊಯ್ಯಲು ಬಿಡುವುದಿಲ್ಲ. ಬೇಡ ಎಂದುದ್ದನ್ನು ಮಾಡುವುದರಲ್ಲೇ ನಮಗೆ ಖುಷಿ. ಬಳ್ಳಿ ಪೊದೆಗಳಲ್ಲಿ ಸುಲಭವಾಗಿ ಸಿಗುವ ಹೂಗಳಲ್ಲಿ ನನಗೆ ಅಂಥಾ ಆಕರ್ಷಣೆಯೇನೂ ಇರಲಿಲ್ಲ. ಸೀತೆ ಹೂವನ್ನು ಕೊಯ್ಯಲು ಅಂದು ನಾನು ಹತ್ತುತ್ತಿದ್ದ ಮರಗಳನ್ನು ಈಗ ನೆನೆಸಿದರೆ ಅಚ್ಚರಿಯಾಗುತ್ತದೆ.
’ಹೂ ಕೊಯ್ಯುವುದು’ ಎಂಬುದು ಸರಿಯಾದ ಪದ ಅಲ್ಲ. ಅದರಲ್ಲಿ ಹಿಂಸೆ ಮತ್ತು ಕ್ರೌರ್ಯ ಇದೆ. ’ಹೂ ಬಿಡಿಸುವುದು’ ಎಂಬುದು ಸರಿಯಾದ ಪದ ಎಂದು ನಮ್ಮ ಗುರುಗಳಾದ ತಾಳ್ತಜೆ ವಸಂತ ಕುಮಾರರು ಹೇಳುತ್ತಿದ್ದರು. ಗುಲಾಬಿ ಹೂವಿನ ಹುಟ್ಟಿನ ಬಗ್ಗೆ ಅವರೇ ಹೇಳಿದ ಇನ್ನೊಂದು ಮಾತು ನನ್ನ ನೆನಪಿನಲ್ಲಿದೆ. ಒಮ್ಮೆ ರತಿ ಮನ್ಮಥರಿಬ್ಬರು ಆಕಾಶ ಮಾರ್ಗದಲ್ಲಿ ವಿಹರಿಸುತ್ತಿದ್ದರಂತೆ. ಆಗೊಮ್ಮೆ ರತಿಯ ಕೆಂಪಾದ ತುಟಿಗಳನ್ನು ಕಂಡ ಮನ್ಮಥ ಉನ್ಮತ್ತಗೊಂಡು ಪ್ರೇಮದಿಂದ ಕಚ್ಚಿದನಂತೆ. ಆಗ ರತಿಯ ತುಟಿಯಿಂದ ಒಸರಿದ ರಕ್ತದ ಬಿಂದುವೊಂದು ಧರೆಗೆ ಬಿದ್ದು ಗುಲಾಬಿ ಹೂವಾಗಿ ಅರಳಿತಂತೆ. ಇದು ಕುವೆಂಪು ಕಾವ್ಯವೊಂದರಲ್ಲಿ ಬಂದ ಸಾಲುಗಳೆಂದು ಅವರೇ ಹೇಳಿದ ನೆನೆಪು. ಎಂತಹ ಅದ್ಭುತ ಕಲ್ಪನೆಯಲ್ಲವೇ?
ಪಂಪಭಾರತದಲ್ಲಿ ಪಂಪ ತನ್ನ ಹುಟ್ಟೂರಾದ ಬನವಾಸಿಯ ವರ್ಣನೆ ಮಾಡುವಾಗ ಅಲ್ಲಿಯ ಪುಷ್ಪ ಸಂಪತ್ತಿನ ಬಗ್ಗೆಯೂ ವರ್ಣಿಸುತ್ತಾನೆ. ಆದರೆ ಹರಿಹರನ ’ಪುಷ್ಪ ರಗಳೆ’ಯಲ್ಲಿ ಬರುವ ನೂರಾರು ಜಾತೀಯ ಹೂಗಳ ವರ್ಣನೆ ವಿಶಿಷ್ಟವಾದುದು.ಆತ ಉಷಃಕಾಲದಲ್ಲೇ ’ಅನಿಲ ನಲುಗದ, ರವಿಕರಂ ಪೊಗದ,ದುಂಬಿ ಎರಗದ’ ಪರಿಶುದ್ಧ ಹೂಗಳನ್ನು ಬಿಡಿಸಿ ತಂದು ತನ್ನ ಇಷ್ಟ ದೈವ ಶಿವನಿಗೆ ಸಮರ್ಪಿಸುತ್ತಿದ್ದ.
ಪುರಾಣದಲ್ಲಿ ಬರುವ ನಮ್ಮ ಪ್ರೇಮ ದೇವತೆ ಮನ್ಮಥ. ಅತನ ಬಿಲ್ಲು ಕಬ್ಬು. ಅದಕ್ಕೆ ಹೂಡುವ ಐದು ಬಾಣಗಳು; ಅರವಿಂದ, ಅಶೋಕ,ಚೂತ,ನವಮಲ್ಲಿಕಾ, ನಿಲೋತ್ಪಲಗಳೆಂಬ ಐದು ಬಗೆಯ ಹೂಗಳು. ಸಿಹಿ ಕಬ್ಬಿನ ಬಿಲ್ಲಿನಿಂದ ಹೂವಿನ ಬಾಣವನ್ನು ನಮ್ಮ ಎದೆಗೆ ನೆಟ್ಟು ಮೋಹ ಪಾಶದಲ್ಲಿ ಕೆಡವುತ್ತಾನೆ! ನಮ್ಮ ಪೂರ್ವಿಕರ ಶೃಂಗಾರಭಾವದಲ್ಲಿ ಎಂಥ ಲಾಲಿತ್ಯವಿದೆ ಅಲ್ಲವೇ?
ದ್ರೌಪದಿಗಾಗಿ ಸೌಗಂಧಿಕಾ ಪುಷ್ಪ ತರಲು ಪಾಡುಪಟ್ಟ ಭೀಮ, ತನ್ನ ಪ್ರೀಮದ ಮಡದಿ ಸತ್ಯಭಾಮೆಗಾಗಿ ದೇವಲೋಕದ ಪಾರಿಜಾತವನ್ನು ಭೂಮಿಗೆ ತಂದ ಶ್ರೀಕೃಷ್ಣ-ಇಬ್ಬರೂ ನನ್ನ ದೃಷ್ಟಿಯಲ್ಲಿ ಸಾರ್ವಕಾಲಿಕ ಹೀರೋಗಳೇ. ಯಾಕೆಂದರೆ ಅವರಿಬ್ಬರೂ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದವರು.
ಗದಾಯುದ್ಧದ ನಾಯಕ ಭೀಮ ದ್ರೌಪದಿಯ ಬಿಚ್ಚಿದ ಮುಡಿಯನ್ನು ದುರ್ಯೊಧನನ [ದುಶ್ಯಾಸನನ ಅಲ್ಲ] ರಕ್ತದಲ್ಲಿ ಅದ್ದಿ, ಅವನ ಹಲ್ಲನ್ನು ಕಿತ್ತು ಅದರಲ್ಲಿ ತಲೆಬಾಚಿ, ತುರುಬು ಕಟ್ಟಿ, ಕರುಳಮಾಲೆಯನ್ನು ಮುಡಿಸಿ ಧನ್ಯತೆಯ ಭಾವ ಪ್ರದರ್ಶಿಸುತ್ತಾನೆ.ತನ್ನ ಪ್ರತಿಜ್ನೆ ನೆರವೇರಿದ ಸಂತಸದಲ್ಲಿ ಬೀಗುತ್ತಿದ್ದ ದ್ರೌಪದಿಯನ್ನು ಕಂಡು ರನ್ನ ಉದ್ಘರಿಸಿದ ಮಾತು, ’ಸ್ಮರ ಸಂಜೀವನೆ ಕೃಷ್ಣೆ ಪೂ ಮುಡಿದಳ್’ ಇಂಥ ಹೂವನ್ನು ಮುಡಿಸಿದ ಭೀಮ ಯಾರಿಗೆ ತಾನೆ ಇಷ್ಟವಾಗಲಾರ?
ನಾನು ಮಂಗಳಗಂಗೋತ್ರಿಯಲ್ಲಿ ಓದುತ್ತಿದ್ದ ದಿನಗಳವು. ನಾವೆಲ್ಲಾ ರ್ಯಾಗಿಂಗ್ ವಿರೋಧಿಗಳು. ಆದರೂ ಜ್ಯೂನಿಯರ್ಸನ್ನು ಸಭ್ಯತೆಯ ಚೌಕಟ್ಟಿನೊಳಗೆ ಸ್ವಾಗತಿಸುವ ಪದ್ಧತಿಯಿತ್ತು. ಅದಕ್ಕಾಗಿ ನಮ್ಮ ಕ್ಲಾಸ್ ರೂಮಿನಲ್ಲೇ ಚಿಕ್ಕ ಸಮಾರಂಭ ಏರ್ಪಾಟಾಗಿತ್ತು. ಬಾಕ್ಸೊಂದರಲ್ಲಿ ಹಲವು ಚೀಟಿಗಳನ್ನಿಟ್ಟಿದ್ದೆವು. ಜ್ಯೂನಿಯರ್ಸ್ ಒಬ್ಬೊಬ್ಬಾರಾಗಿ ಬಂದು ಅದರಲ್ಲಿರುವ ಚೀಟಿಯಲ್ಲಿ ಒಂದನ್ನೆತ್ತಿಕೊಂಡು ಅದರಲ್ಲಿ ಬರೆದಂತೆ ಅಭಿನಯಿಸಬೇಕಾಗಿತ್ತು. ಮ್ಯಾಥ್ಯು ಎಂಬ ವಿದ್ಯಾರ್ಥಿಗೆ ಬಂದ ಚೀಟಿಯಲ್ಲಿ ’ಮೇಜಿನ ಮೇಲಿರುವ ಗುಲಾಬಿಗಳಲ್ಲಿ ಒಂದನ್ನು ನೀವು ಇಷ್ಟಪಡುವ ಸೀನಿಯರ್ ವಿದ್ಯಾರ್ಥಿನಿಗೆ ನೀಡಿ’ ಎಂದಿತ್ತು. ಆತ ಒಂದು ಕ್ಷಣ ನಮ್ಮೆಲ್ಲರನ್ನು ಕಣ್ಣಲ್ಲೇ ಅಳೆದ. ಹಳದಿ ಗುಲಾಬಿಯೊಂದನ್ನು ಕೈಗೆತ್ತಿಕೊಂಡು ಎದುರಿಗಿರುವ ಅಧ್ಯಾಪಕ ವೃಂದದತ್ತ ಒಮ್ಮೆ ನೋಡಿ, ನನ್ನ ಕೈಯಲ್ಲಿ ಹೂವಿಟ್ಟು ನಾಚುತ್ತಾ ಹೋದ.
ಮತ್ತೆ ನನ್ನ ಕೈಗೆ ಗುಲಾಬಿ ಹೂ ಬಂದದ್ದು ನಾನು ಪ್ರೀತಿಸಿದ ಹುಡುಗನಿಂದ. ಈಗ ಆತ ನನ್ನ ಪತಿ. ನನ್ನ ಸಹೋದ್ಯೋಗಿಯಾಗಿದ್ದ ಆತ ಪ್ರತಿದಿನ ನನ್ನ ಮೇಜಿನ ಮೇಲೆ ಗುಲಾಬಿ ಹೂವೊಂದನ್ನು ಇಟ್ಟಿರುತ್ತಿದ್ದ. ಮದುವೆಯಾದೊಡನೆ ಇದು ನಿಂತು ಹೋಯಿತು! ಮದುವೆಯಾದ ನಂತರವೂ ಇಂತಹ ಅಮೃತ ಘಳಿಗೆಗಳು ಮತ್ತೆ ಮತ್ತೆ ಸಂಭವಿಸುತ್ತಿರಲಿ ಎಂದು ಪ್ರತಿ ಸ್ತ್ರೀಯೂ ಅಂತರಂಗದಲ್ಲಿ ಬಯಸುತ್ತಿರುತ್ತಾಳೆ. ಆದರದು ಸಾಧ್ಯವಾಗುವುದಿಲ್ಲ.
ಒಮ್ಮೆ ಮಂಗಳೂರಿನ ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಹದಿನಾಲ್ಕು ವರ್ಷದ ನಂತರ ಭೇಟಿಯಾದ ಬಾಲ್ಯದ ಗೆಳೆಯ ಪಕ್ಕದಲ್ಲಿದ್ದ. ಸುತ್ತೆಲ್ಲಾ ಮಂಗಳೂರು ಮಲ್ಲಿಗೆ ಮಾರುವ ಹೆಂಗಸರಿದ್ದರು. ಬಾಲ್ಯದಲ್ಲಿ ಸೀತೆ ಹೂವನ್ನು ಕೈಗಿತ್ತ ಹುಡುಗನನ್ನು ಈಗ ತಲೆಯೆತ್ತಿ ನೋಡಬೇಕು.ಆದರೂ ಕೇಳಿದೆ, ’ಮಂಗಳೂರು ಮಲ್ಲಿಗೆಯ ಘಮ ಎಷ್ಟು ಚಂದ ಅಲ್ವಾ’ ಆತ ನಕ್ಕ. ಅವನ ಬಸ್ಸು ಬಂತು. ಓಡಿ ಹತ್ತಿ ಕೈ ಬೀಸಿದ. ಇದನ್ನು ಅವನನ್ನೇ ಹೋಲುವ ಇನ್ನೊಬ್ಬ ಗೆಳೆಯನೊಡನೆ ಹಂಚಿಕೊಂಡೆ. ಅವನಿಗದು ಅರ್ಥವಾಗಲೇ ಇಲ್ಲ. ಪೆಚ್ಚು ಪೆಚ್ಚಾಗಿ ನಕ್ಕ. ಅಥವಾ ನಕ್ಕಂತೆ ನಟಿಸಿರಬೇಕು!