Friday, May 13, 2011

’ಸಂವೇದಿ’ಯಲ್ಲಿ ಪರಿವರ್ತನೆಯ ಬೀಜ
ಪತ್ರಿಕಾರಂಗ ಈಗ ಸೇವಾ ಕ್ಷೇತ್ರವಲ್ಲ. ಅದೊಂದು ಉದ್ಯಮವಾಗಿದೆ. ಉದ್ಯಮ ಅಂದಮೇಲೆ ಅಲ್ಲಿ ಲಾಭ-ನಷ್ಟದ ಲೆಖ್ಖಾಚಾರ ನಡೆಯುತ್ತದೆ. ಮಾರುಕಟ್ಟೆಯ ಶಕ್ತಿಗಳು ಸಂಪಾದಕೀಯ ನೀತಿಯನ್ನು ನಿಯಂತ್ರಿಸುತ್ತವೆ; ನಿರ್ದೇಶಿಸುತ್ತವೆ. ಹಾಗಾಗಿ ಸಾಮಾಜಿಕ ನ್ಯಾಯ, ಸಾಮಾಜಿಕ ಹೊಣೆಗಾರಿಕೆ, ಮಹಿಳಾ ಕಾಳಜಿ ಎನ್ನುವ ಆದರ್ಶಗಳೆಲ್ಲಾ ಸಮೂಹ ಮಾಧ್ಯಮಗಳಿಂದ ದೂರವಾಗುತ್ತಿದೆ.

ಅದಕ್ಕಾಗಿಯೇ ಸಮಾಜ ಬದಲಾವಣೆಯ ಕನಸು ಕಾಣುತ್ತಿದ್ದ ಜನಪರ ಮನಸ್ಸುಗಳು ಪರ್ಯಾಯ ವೇದಿಕೆಗಳತ್ತ ಹೊರಳತೊಡಗಿದರು. ಯುವಮನಸುಗಳು ಅಂತರ್ಜಾಲವನ್ನು ಹೆಚ್ಚೆಚ್ಚಾಗಿ ಬಳಸತೊಡಗಿದರು. ಟ್ವೀಟ್ಟರ್, ಪೇಸ್ ಬುಕ್, ಬ್ಲಾಗ್ ಗಳು ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ,ಯಾವುದೇ ಅಳುಕಿಲ್ಲದೆ ಅಭಿಪ್ರಾಯ, ಚಿಂತನೆಗಳನ್ನು ಹಂಚಿಕೊಳ್ಳುವ ವೇದಿಕೆಗಳಾಗಿವೆ. ಮೊನ್ನೆ ಮೊನ್ನೆ ನಡೆದ ಈಜಿಪ್ತಿನ ಜನ ಬಂಡಾಯಕ್ಕೆ ಪೋನ್, ಪೇಸ್ ಬುಕ್ ಗಳ ಮುಖಾಂತರ ಜನಜಾಗೃತಿಯನ್ನು ಮೂಡಿಸಲಾಗಿದ್ದೇ ಕಾರಣವೆನ್ನಲಾಗುತ್ತಿದೆ.

ಕೇವಲ ’ವಿಕಿಲೀಕ್ಸ್’ ಎಂಬ ವೆಬ್ ಸೈಟ್ ಮುಖಾಂತರ ಜಗತ್ತಿನಾದ್ಯಂತ ರಾಜಕೀಯ ಸಂಚಲನವನ್ನುಂಟುಮಾಡಿದ್ದು ಜ್ಯೂಲಿಯನ ಅಸಾಂಜೆ ಎಂಬ ಒಬ್ಬ ಖಾಸಾಗಿ ವ್ಯಕ್ತಿ. ಸಮಾಜ ಬದಲಾವಣೆಯ ಕನಸು ಕಾಣುತ್ತಿರುವ ಕೋಟ್ಯಾಂತರ ಜನಗಳ ಪಾಲಿಗೆ ಇಂದು ಆತ ಆರಾಧ್ಯ ದೈವ.
ನಮ್ಮ ಮುಂದೆ ಸಮಸ್ಯೆಗಳಿವೆ; ಸವಾಲುಗಳಿವೆ ನಿಜ. ಆದರೆ ದಾರಿಯೂ ಇರುತ್ತದೆ. ಅದನ್ನು ನಾವು ಹುಡುಕಿಕೊಳ್ಳಬೇಕು ಅಷ್ಟೇ. ಹಾಗೆ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡು ಹೊರಟ ಮಂಗಳೂರಿನ ಮಾನಿನಿಯರ ಮನದಲ್ಲಿ ಹುಟ್ಟಿದ್ದು ’ಸಂವೇದಿ’

’ಸಂವೇದಿ’ ಎಂಬ ಸುಂದರ ಹೆಸರಿನ ನಿಯತಕಾಲಿಕವನ್ನು ನಾನು ನೋಡಿದ್ದು ಕೆಲವು ತಿಂಗಳುಗಳ ಹಿಂದೆ. ಮೊದಲ ನೋಟಕ್ಕೆ ನನ್ನನ್ನು ಆಕರ್ಷಿಸಿದ್ದು ಅದರ ಮುಖಪುಟಗಳು. ತುಂಬಾ ಸಾಂಕೇತಿಕವಾದ, ತನ್ನೊಳಗೆ ಹಲವು ಅರ್ಥಗಳನ್ನು ಹುದುಗಿಸಿಕೊಂಡ ವಿಶಿಷ್ಠ ರಚನೆಗಳಿವು.

ಖಾಸಗಿ ಪ್ರಸಾರಕ್ಕಾಗಿ ಮೀಸಲಾದ ಈ ಪತ್ರಿಕೆ ಹದಿನಾರು ಪುಟಗಳನ್ನೊಳಗೊಂಡಿದೆ. ’ಡೀಡ್ಸ್’ ಎನ್ನುವ ಸರ್ಕಾರೇತರ ಸೇವಾ ಸಂಸ್ಥೆಯೊಂದು ಈ ನಿಯತಕಾಲಿಕವನ್ನು ಹೊರತರುತ್ತಿದೆ.
’ಕಿರಿದರೊಳ್ ಪಿರಿದರ್ಥವನ್ ಪೇಳುವ’ ಇದು ಮೊದಲ ಓದಿನಲ್ಲಿಯೇ ನನ್ನಲ್ಲಿ ಕುತೂಹಲ ಮೂಡಿಸಿತು. ಇದಕ್ಕೆ ಹಲವು ಕಾರಣಗಳಿವೆ.
ಮೊತ್ತಮೊದಲನೆಯ ಕಾರಣವೆಂದರೆ ಸಂವೇದಿ, ಮಹಿಳೆಯರ ಕಷ್ಟ-ಕಾರ್ಪಣ್ಯಗಳನ್ನು, ನೋವು-ನಲಿವುಗಳನ್ನು ಅವಳ ನೆಲೆಯಲ್ಲಿಯೇ ನಿಂತು ಗ್ರಹಿಸುತ್ತದೆ. ಹಾಗಾಗಿಯೇ ಅದರ ಹೆಸರಿನಂತೆಯೇ ಒಳಗಿನ ಬರಹಗಳು ಕೂಡ ಆಪ್ತವಾಗಿ ನಮ್ಮನ್ನು ತಟ್ಟುತ್ತದೆ.

ಎರಡನೆಯ ಕಾರಣ ಅದರ ಸ್ಪಷ್ಟತೆ ಮತ್ತು ನಿಖರತೆ. ತಾನು ಏನನ್ನು ಹೇಳುತ್ತಿದ್ದೇನೆ? ಯಾರಿಗೆ ಹೇಳುತ್ತಿದ್ದೇನೆ? ಹೇಗೆ ಹೇಳುತ್ತಿದ್ದೇನೆ? ಎಂಬುದರ ಸ್ಪಷ್ಟ ಅರಿವು ಸಂವೇದಿ ಬಳಗಕ್ಕಿದೆ. ಅದರಲ್ಲಿನ ಲೇಖನಗಳನ್ನು ಓದುತ್ತಾ ಹೋದಂತೆಲ್ಲಾ ಆ ನಿಯತಕಾಲಿಕದ ಹಿಂದೆ ಎಂಥ ಮನಸ್ಸುಗಳು ಕೆಲಸ ಮಾಡುತ್ತಿವೆ ಎಂಬುದು ನಮಗೆ ಅರಿವಾಗುತ್ತಾ ಹೋಗುತ್ತದೆ.

ಉದಾಹರಣೆಗೆ ೨೦೦೯ರಲ್ಲಿ ಮಂಗಳೂರಿನಲ್ಲಿ ಭಜರಂಗದಳದವರಿಂದ ಪಬ್ ದಾಳಿ ನಡೆಯಿತು. ಅದಕ್ಕೆ ಈ ಪುಟ್ಟ ಪತ್ರಿಕೆ ಪ್ರತಿಕ್ರಿಯಿಸಿದ್ದು ಹೀಗೆ;
ಅದರ ಮುಖಪುಟದಲ್ಲಿ ಒಬ್ಬ ಮಹಿಳೆಯ ಮುಖದ ಕ್ಯಾರಿಕೇಚರ್ ಇದೆ. ಹಿಂದಿನಿಂದ ಬಂದ ಬಲಿಷ್ಟ ಕೈಯೊಂದು ಅವಳ ಬಾಯನ್ನು ಮುಚ್ಚಿದೆ. ಆ ಕೈಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಮಂದಿರ, ಮಸಿದಿ ಮತ್ತು ಚರ್ಚ್ ಗಳಿಂದ ಬಂದಿರುತ್ತದೆ. ದೆಹಲಿಯ ಸಹೇಲಿ ಪತ್ರಿಕೆಯಿಂದ ಈ ಚಿತ್ರವನ್ನು ಎರವಲು ಪಡೆಯಲಾಗಿದೆಯೆಂದು ಸಂಪಾದಕೀಯದ ಎರಡನೆ ಪುಟದಲ್ಲಿ ನಮೂದಿಸಲಾಗಿದೆ.
ಪುಟ ತೆರೆಯುತ್ತಿದ್ದಂತೆ ಕಣ್ಣಿಗೆ ಬೀಳುವ ಮೊದಲ ಲೇಖನ’ ಭಯೋತ್ಪಾದನೆ ಏನೆಂದು ತಿಳಿಯಬೇಕೆ? ಬನ್ನಿ ಮಂಗಳೂರಿಗೆ’ ಎಂಬ ಲೇಖನ. ಸಂದರ್ಶನ ಆಧಾರಿತವಾದ ಈ ಲೇಖನದಲ್ಲಿ ನೈತಿಕ ಪೋಲಿಸ್ ಪಡೆ ವಿದ್ಯಾರ್ಥಿವೃಂದವನ್ನು ಹೇಗೆ ಹೆದರಿಸಿ ಬೆದರಿಸಿ ವಿದ್ಯಾಸಂಸ್ಥೆಗಳ ವಾತಾವರಣವನ್ನು ಹಾಳುಗೆಡವುತ್ತಿದೆ ಎಂಬುದನ್ನು ಸರಳವಾಗಿ ಹೇಳಲಾಗಿದೆ.

ಎರಡನೆಯ ಲೇಖನ ’ನಾವು ಪಬ್ ದಾಳಿಯನ್ನು ವಿರೋಧಿಸುತ್ತೇವೆ ಯಾಕೆಂದರೆ......’
ಮೂರನೆಯ ಲೇಖನ ’ಕೋಮು ಗಲಭೆ [ಪ್ರತಿಬಂಧ, ನಿಯಂತ್ರಣ ಮತ್ತು ಸಂತ್ರಸ್ತರ ಪುನರ್ವಸತಿ] ಮಸೂದೆ ೨೦೦೫’
ನಾಲ್ಕನೆಯ ಲೇಖನ ’ಜಿಲ್ಲಾ ಮಹಿಳಾ ನ್ಯಾಯಾಲಯ’ದ ಉದ್ಘಾಟನಾ ವರದಿ.
ಕೊನೆಯ ಪುಟದ ಹಿಂದಿನ ಪುಟದಲ್ಲಿ, ಅಂದರೆ ಹದಿನೈದನೆ ಪುಟದಲ್ಲಿ ’ಡೀಡ್ಸ್ ಸುತ್ತ’ದಲ್ಲಿ ಮಂಗಳೂರಿನ ಸುತ್ತಮುತ್ತದಲ್ಲಿ ನಡೆದ ಮಹಿಳಾಪರವಾದ ಚಟುವಟಿಕೆಗಳ ಪುಟ್ಟ ವರದಿಗಳಿರುತ್ತವೆ.
ಕೊನೆಯ ಪುಟ ’ಸಂವಾದ ಸಾಂತ್ವನ’. ಇದು ಬಹಳ ಮಹತ್ವದ ಪುಟ. ಒಂದು ದೃಷ್ಟಿಯಲ್ಲಿ ಇದು ಸಂವೇದಿಯ ಆತ್ಮ ಇದ್ದಂತೆ. ಯಾಕೆಂದರೆ ಇದು ಓದುಗರ ಜೊತೆ ನೇರ ಸಂವಾದವನ್ನು ನಡೆಸುತ್ತದೆ. ಇದು ಶಾಶ್ವತವಾದ ಅಂಕಣ. ಪ್ರತಿಬಾರಿಯೂ ಇಲ್ಲಿ ಒಂದು ಸಮಸ್ಯೆಯನ್ನು ಎತ್ತಿಕೊಳ್ಳಲಾಗುತ್ತದೆ. ಆ ಸಮಸ್ಯೆಯ ಬಗ್ಗೆ ಮಾನವೀಯವಾದ ವರಿದಿಯನ್ನು ನೀಡಲಾಗುತ್ತದೆ. ಆ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬುದರ ಬಗ್ಗೆ ಕೆಲವು ಪ್ರಶ್ನೆಗಳನ್ನು ಓದುಗರ ಮುಂದಿಡುತ್ತದೆ. ಅದಕ್ಕೆ ಓದುಗರಿಂದ ಬಂದ ಅಭಿಪ್ರಾಯಗಳನ್ನು ಸಂವೇದಿ ತನ್ನ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುತ್ತದೆ. ಅದಕ್ಕೆ ಕೊನೆಯ ಪುಟದ ಹಿಂದಿನ ಪುಟವನ್ನು ಬಳಸಿಕೊಳ್ಳುತ್ತದೆ. ಓದುಗರು ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ ಎಂಬುದು ಅಲ್ಲಿ ಪ್ರಕಟವಾದ ಪತ್ರಗಳನ್ನು ಓದಿದರೆ ತಿಳಿಯುತ್ತದೆ.

ಇಡೀ ಸಂವೇದಿಯೇ ಒಂದು ಸಮಸ್ಯೆಯ ಗುಚ್ಚದಂತೆ ಕಲಾತ್ಮವಾಗಿ ರೂಪಗೊಳ್ಳುತ್ತದೆ. ಹಾಗೆ ರೂಪುಗೊಂಡು ನಿಗದಿತ ಸಮಯಕ್ಕೇ ಓದುಗರ ಮುಂದೆ ಬರುತ್ತದೆ. ಆಗ ಆ ಸಮಸ್ಯೆ ಓದುಗರದೂ ಆಗಿಬಿಡುತ್ತದೆ. ಸಮೂಹದ ಪಾಲ್ಗೊಳ್ಳುವಿಕೆ ಇಲ್ಲಿ ಬಹು ಮುಖ್ಯವಾದುದು

ಪ್ರತಿಷ್ಟಿತ, ಜನಪ್ರಿಯ ಪತ್ರಿಕೆಗಳು ಸಾಮಾನ್ಯವಾಗಿ ಯಾವುದೋ ಒಂದು ವ್ಯಕ್ತಿಯ ಜೋತೆ, ಇಲ್ಲವೇ ಪಕ್ಷರಾಜಕಾರಣದ ಜೊತೆ ಪ್ರತ್ಯಕ್ಷವಾಗಿ ಇಲ್ಲವೇ ಅಪ್ರತ್ಯಕ್ಷವಾಗಿ ಗುರುತಿಸಿಕೊಂಡಿರುತ್ತವೆ. ಅವು ಕಾಲಕ್ಕನುಗುಣವಾಗಿ ವ್ಯವಸ್ಥೆಯೊಡನೆ ರಾಜಿ ಮಾಡಿಕೊಳ್ಳುತ್ತವೆ. ಆದರೆ ಸಾಮಾಜಿಕ ಸಮಸ್ಯೆಗಳೊಡನೆ ಸೆಣಸಾಡುತ್ತಾ ಪರಿವರ್ತನೆಯ ಕನಸನ್ನು ಹುಟ್ಟುಹಾಕುತ್ತಾ, ಮನಸ್ಸುಗಳನ್ನು ಕಟ್ಟುವ ಕಾಯಕದಲ್ಲಿ ಸಂವೇದಿ, ಸಂವಾದ, ಮಾನಸ, ಶೈನಿ[ಕೈಬರಹದ ಪತ್ರಿಕೆ]ಯಂಥ ಪತ್ರಿಕೆಗಳು ತೊಡಗಿಕೊಂಡಿರುವುದು ಭರವಸೆಗೆ ಕಾರಣವಾಗಿದೆ.

ಸಂವೇದಿಯಂಥ ಪತ್ರಿಕೆಗಳು ಸಮಾಜದ ಪಿಸುನುಡಿಗಳಿದ್ದಂತೆ. ಅವು ಪಿಸುನುಡಿಗಳೇ ಆಗಿದ್ದರೂ ಸಮಾಜದ ನಡುವಿನಿಂದ ಎಳುತ್ತಿರುವ ಶಕ್ತಿಯುತವಾದ ಧ್ವನಿಗಳು. ಸ್ವಸ್ಥ ಸಮಾಜ ರಚನೆಯಲ್ಲಿ ಇಂಥ ಸಶಕ್ತ ಪಿಸುನುಡಿಗಳು ಮಹತ್ವದ ಪಾತ್ರ ವಹಿಸುತ್ತವೆ. ಯಾಕೆಂದರೆ ಸಮಾಜ ಪರಿವರ್ತನೆಯ ಬೀಜಗಳು ಇಂಥ ಪಿಸುನುಡಿಗಳಲ್ಲಿ ಅಡಗಿರುತ್ತವೆ.

[ಮಂಗಳೂರಿನಿಂದ ಪ್ರಕಟವಾಗುತ್ತಿರುವ ’ಸಂವೇದಿ’ಯ ದಶಮಾನೋತ್ಸವ ಸಂಚಿಕೆಗಾಗಿ ಬರೆದ ಲೇಖನ]

2 comments:

ವಿ.ರಾ.ಹೆ. said...
This comment has been removed by the author.
ವಿ.ರಾ.ಹೆ. said...

"ಸಾಮಾಜಿಕ ನ್ಯಾಯ, ಸಾಮಾಜಿಕ ಹೊಣೆಗಾರಿಕೆ, ಮಹಿಳಾ ಕಾಳಜಿ ಎನ್ನುವ ಆದರ್ಶಗಳೆಲ್ಲಾ ಸಮೂಹ ಮಾಧ್ಯಮಗಳಿಂದ ದೂರವಾಗುತ್ತಿದೆ."

ಇವು ಸಮೂಹ ಮಾಧ್ಯಮಗಳಿಗೆ ಇರಲೇಬೇಕಾದ ಆದರ್ಶಗಳು ಅಂತಲೂ ಅಥವಾ ಆದರ್ಶಗಳೆಂದರೇ ಇದೇ ಅಂತಲೂ ನಂಬಿಕೊಳ್ಳದಿರುವಷ್ಟು ಜನ 'ಪ್ರಜ್ಞಾವಂತ'ರಾಗಿದ್ದಾರೆ, ಮತ್ತು ಸಮೂಹ ಮಾಧ್ಯಮಗಳು ಅವರನ್ನು ಪ್ರತಿನಿಧಿಸುತ್ತಿವೆ ಅನ್ನಬಹುದು.