Thursday, July 14, 2011

ತುಳುನಾಡಿನಲ್ಲಿದೆ, ಅನಂತಪದ್ಮನಾಭನ ಮೂಲ ನೆಲೆ

ಗರ್ಭ ಗುಡಿಯಲ್ಲಿರುವ ಸಸ್ಯಜನ್ಯ ಬಣ್ಣಗಳಿಂದ ಬಿಡಿಸಿದ ವರ್ಣಚಿತ್ರ
ಅನಂತಪುರದ ಅನಂತಪದ್ಮನಾಭ ಕ್ಷೇತ್ರ
ಸರ್ಪ ಕೋಟೆ
ವಿಗ್ರಹದ ಅನಾಟಮಿ-ಪೀಠ ಪ್ರತಿಷ್ಟಾಪನೆ
ಶ್ರೀದೇವಿ ಭೂದೇವಿಯರೊಡನೆ ಕಡುಶರ್ಕರ ಪಾಕದಲ್ಲಿ ರಚನೆಯಾಗುತ್ತಿರುವ ಅನಂತಪದ್ಮನಾಭ
ತಿರುವನಂತಪುರದ ಅನಂತ ಪದ್ಮನಾಭ ಈಗ ಕುಬೇರನಾಗಿದ್ದಾನೆ. ಅವನ ಭಂಡಾರದಲ್ಲಿ ಮೊಗೆದಷ್ಟು ಚಿನ್ನ ಸಿಗುತ್ತಿದೆ. ಅವನ ಪಾದಮೂಲದಲ್ಲಿ ಸಿಕ್ಕಿದ ಚಿನ್ನ ಕರ್ನಾಟಕದ ವಾರ್ಷಿಕ ಬಜೆಟ್ ಅನ್ನು ಮೀರಿ ಮುಂದೆ ಸಾಗುತ್ತಿದೆ. ತಿರುಪತಿ ತಿಮ್ಮಪ್ಪನಿಗಿಂತ ಮೂರುಪಟ್ಟು ಶ್ರೀಮಂತನೀಗ ಅನಂತಪದ್ಮನಾಭ. ಆತನೀಗ ಲಕ್ಷ ಕೋಟಿ ರೂಪಾಯಿಗಳ ಸಂಪತ್ತಿಗೆ ಒಡೆಯ.


ಆದರೆ ಆತನ ಮೂಲಸ್ಥಾನವಾದ ಅನಂತಪುರದಲ್ಲಿ ಆತ ಹೇಗಿದ್ದಾನೆ ಗೊತ್ತೇ?


ಐದು ವರ್ಷಗಳ ಹಿಂದೆ ಟೀವಿ ಕಾರ್ಯಕ್ರಮವೊಂದರ ಶೂಟಿಂಗ್ ಗಾಗಿ ನಾನು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರಕ್ಕೆ ಹೋಗಿದ್ದೆ. ನನ್ನನ್ನು ಅಲ್ಲಿಗೆ ಸೆಳೆದದ್ದು ಅನಂತಪದ್ಮನಾಭ ದೇವನಲ್ಲ. ದೇವಸ್ಥಾನದ ಕೊಳದಲ್ಲಿರುವ ಒಂದು ಅಪೂರ್ವವಾದ ಮೊಸಳೆ. ಬಬಿಯ ಎಂಬ ಹೆಸರಿನ ಮೊಸಳೆಗೆ ಅರುವತ್ತು ವರ್ಷವಾಗಿತ್ತು. ತನ್ನ ಸಾಧು ಸ್ವಭಾವದಿಂದಾಗಿ ಅಲ್ಲಿಗೆ ಬರುವ ಭಕ್ತರನ್ನು ಅದು ಆಕರ್ಷಿಸುತ್ತಿತ್ತು. ಜನ್ಮಜಾತವಾಗಿ ಕ್ರೂರವಾಗಿದ್ದ ಪ್ರಾಣಿಯೊಂದು ಅನಂತಪದ್ಮನಾಭನ ಸನ್ನಿಧಿಯಲ್ಲಿ ಸಾಧು ಪ್ರಾಣಿಯಾಗಿ ಆರ್ಚಕರ ಕೈಯಿಂದ ನೈವೇದ್ಯವನ್ನು ಸ್ವೀಕರಿಸುತ್ತದೆಯೆಂಬ ವದಂತಿಯೇ ನನ್ನನ್ನು ಅಲ್ಲಿಗೆ ಎಳೆದು ತಂದಿತು.


ಆದರೆ ಅನಂತಪದ್ಮನಾಭನ ಸನ್ನಿದಿಗೆ ಬಂದ ಮೇಲೆ ನನ್ನ ಇರಾದೆಯೇ ಬದಲಾಯಿತು. ಅನಂತಪದ್ಮನಾಭನ ಕಡುಶರ್ಕರ ಪಾಕದ ಮೂಲವಿಗ್ರಹ, ಆತನ ಗರ್ಭ ಗುಡಿಯಲ್ಲಿರುವ ಸಾವಿರಾರು ವರ್ಷಗಳ ಹಿಂದಿನ ಬಣ್ಣದ ಚಿತ್ರ ಚಿತ್ತಾರಗಳು, ದೇವಸ್ಥಾನದ ಸುತ್ತ ಇರುವ ಸರ್ಪಕೋಟೆ, ಗುಂಡಿ ಬಟ್ಟಲಿನಾಕಾರದ ಅಲ್ಲಿನ ಪರಿಸರ ಎಲ್ಲವೂ ನನ್ನನ್ನು ಸಂಪೂರ್ಣ ಆವರಿಸಿಕೊಂಡುಬಿಟ್ಟಿತು.


ಜನವಸತಿಯಿಂದ ಬಹು ದೂರದಲ್ಲಿರುವ, ವಾಹನ ಸೌಕರ್ಯವಿಲ್ಲದ, ಒಂದು ಪುಟ್ಟ ಅಂಗಡಿಯನ್ನು ಹೊರತುಪಡಿಸಿದರೆ ಇನ್ನೇನೂ ಅನುಕೂಲತೆಗಳಿಲ್ಲದ ಪ್ರಶಾಂತ ದೇಗುಲಕ್ಕೆ ನಾನು ಭೇಟಿ ಕೊಟ್ಟದ್ದು ನಟ್ಟ ಮಳೆಗಾಲದಲ್ಲಿ, ಅಂದರೆ ಜಡಿಮಳೆಯ ಜುಲೈ ತಿಂಗಳಲ್ಲಿ.ಮೊದಲ ನೋಟಕ್ಕೇ ಅದು ಪುರಾತನ ದೇವಾಲಯ ಅನ್ನಿಸಿತು. ಹಾಗಾಗಿ ಅದರ ಪುರಾಣ ಮತ್ತು ಇತಿಹಾಸದ ಬಗ್ಗೆ ವಿಚಾರಿಸಿಕೊಂಡೆ.


ಬಲ್ಲವರ ಪ್ರಕಾರ ಇಲ್ಲಿ ಬಹಳ ಹಿಂದೆ ಬಿಲ್ವಮಂಗಲ ಸ್ವಾಮಿಗಳೆಂಬ ಮಹಾತ್ಮರು ತಪಸ್ಸು ಮಾಡುತ್ತಿದ್ದರಂತೆ. ಮಹಾವಿಷ್ಣುವಿನ ಭಕ್ತರಾಗಿದ್ದ ಇವರು ಒಮ್ಮೆ ಪೂಜಾ ಕೈಂಕರ್ಯದಲ್ಲಿ ನಿರತರಾಗಿದ್ದ ಸಮಯದಲ್ಲಿ ಬಾಲಕನೊಬ್ಬ ಅವರ ಏಕಾಗ್ರತೆಗೆ ಅಡ್ಡಿ ತಂದನಂತೆ. ಆಗ ಮುನಿಗಳು ಅವನನ್ನು ಎಡದ ಕೈನಿಂದ ದೂಡಿಬಿಟ್ಟರಂತೆ. ಆಗ ಬಾಲಕ ಈಗ ದೇವಸ್ಥಾನದ ಈಶಾನ್ಯ ಭಾಗದಲ್ಲಿರುವ ಗುಹೆಯ ಹತ್ತಿರ ಬಿದ್ದ. ಹಾಗೆ ಬಿದ್ದ ಬಾಲಕ ಒಂದು ಪ್ರಕಾಶಮಾನವಾದ ಗೋಳವಾಗಿ ಗುಹೆಯನ್ನು ಪ್ರವೇಶಿಸಿದ. ಆಗ ಬಿಲ್ವಮಂಗಲ ಮಹರ್ಷಿಗಳಿಗೆ ಈತ ಸಾಮಾನ್ಯನಾದ ಬಾಲಕನಲ್ಲ, ತಾನು ಅರ್ಚಿಸುತ್ತದ್ದ ಮಹಾವಿಷ್ಣುವೇ ಇರಬೇಕೆಂದು ತಿಳಿದು ಅತನನ್ನು ಹಿಂಬಾಲಿಸುತ್ತಾ ಹೋದರರು. ಹಾಗೆ ಹೋಗುತ್ತಾ ಅನಂತನ ಕಾಡು ಎಂಬ ಪ್ರದೇಶವನ್ನು ತಲುಪುತ್ತಾರೆ. ಅದೇ ಇಂದಿನ ತಿರುವನಂತಪುರ. ಅಲ್ಲಿ ಪ್ರಕಾಶಗೋಳವು ಪದ್ಮನಾಭನಾಗಿ ಪ್ರತ್ಯಕ್ಷವಾಗುತ್ತದೆ. ಇದನ್ನು ಕಂಡು ಪಶ್ಚತ್ತಾಪದಿಂದ ಕ್ಷಮೆ ಯಾಚಿಸಿದ ಮುನಿಗಳಿಗೆ, ಇದರಲ್ಲಿ ನಿನ್ನದೇನೂ ತಪ್ಪಿಲ್ಲ ಎಂದು ಸಂತೈಸಿ ತನಗೆ ಆಯಾಸವಾಗಿದೆ ಹಾಗು ಹಸಿವಾಗಿದೆ ಎನ್ನಲು ಮುನಿಗಳು ಸಮೀಪದಲ್ಲೇ ಇದ್ದ ಮಾವಿನ ಮರದಿಂದ ಹಣ್ಣೊಂದನ್ನು ಕಿತ್ತು ತೆಂಗಿನ ಚಿಪ್ಪಿನಲ್ಲಿಟ್ಟು ಕೊಟ್ಟರಂತೆ. [ಇಂದಿಗೂ ತಿರುವನಂತಪುರದ ಅನಂತಪದ್ಮನಾಭನಿಗೆ ಚಿನ್ನದ ಗೆರಟೆಯಲ್ಲಿ ಮಾವಿನ ಹಣ್ಣನ್ನಿಟ್ಟು ನೈವೇದ್ಯ ಮಾಡುವ ಸಂಪ್ರದಾಯವಿದೆ] ಹಣ್ಣನ್ನು ತಿಂದ ಪದ್ಮನಾಭ, ತಾನು ಸ್ವಲ್ಪ ಶಯನ ಮಾಡುತ್ತೇನೆ ಎಂದು ಮಲಗಲು ಅಣಿಯಾದ. ಆಗ ಅಲ್ಲಿಗೆ ಬಂದ ಆದಿಶೇಷ ಆತನಿಗೆ ಹಾಸುಗೆಯಾದ. ಆದಿಶೇಷನ ಇನ್ನೊಂದು ಹೆಸರು ಅನಂತ. ಹಾಗಾಗಿ ಹಿಂದೆ ತುಳುನಾಡಾಗಿದ್ದ, ಇಂದಿನ ಕೇರಳ ರಾಜ್ಯದ ಉತ್ತರ ತುದಿಯಲ್ಲಿರುವ ಅನಂತಪುರದ ಅನಂತ ಪದ್ಮನಾಭ ಕೇರಳದ ದಕ್ಷಿಣತುದಿಯಲ್ಲಿರುವ ತಿರುವನಂತಪುರದಲ್ಲಿ ಅನಂತಶಯನ ಪದ್ಮನಾಭನಾದ. ಇದುವೇ ಮಹಾವಿಷ್ಣುವಿನ ಸುಪ್ರಸಿದ್ಧವಾದ ಯೋಗನಿದ್ರಾಭಂಗಿ. ಕಾಲಕ್ರಮೇಣಶಯನಲೋಪವಾಗಿ ಅನಂತಪದ್ಮನಾಭನಾದ. ಬಿಲ್ವಮಂಗಲ ಮುನಿಗಳು ಇಲ್ಲಿ ದಿವಾಕರ ಮುನಿಗಳಾದರು. ಅವರ ಮೂರ್ತಿಯೂ ದೇವಸ್ಥಾನದ ಅವರಣದಲ್ಲಿದೆ.


ಮಂಗಳೂರಿನಿಂದ ಅನಂತಪುರಕ್ಕೆ ಸುಮಾರು ನಲ್ವತ್ತು ಕಿ.ಮೀ ಅಂತರವಿದೆ. ಕರ್ನಾಟಕ-ಕೇರಳ ಗಡಿಯಿಂದ ಸುಮಾರು ಇಪ್ಪತ್ತು ಕಿ.ಮೀ. ಒಳಗಡೆ ಹೋಗಬೇಕು. ಆದರೆ ಅನಂತಪುರ ಮತ್ತು ತಿರುವನಂತಪುರಗಳ ನಡುವೆ ಏಳುನೂರು ಕಿ.ಮೀ.ಗಳ ಅಂತರವಿದೆ.ಬಿಲ್ವ ಮಂಗಲ ಮುನಿಗಳು ಅನಂತಪದ್ಮನಾಭನನ್ನು ಹಿಂಬಾಲಿಸಿದ ಗುಹೆಯನ್ನು ಈಗ ಕಬ್ಬಿಣದ ಸರಳುಗಳಿಂದ ಮುಚ್ಚಲಾಗಿದೆ. ಈಗಲೂ ಸ್ವಲ್ಪ ದೂರದವರೆಗೆ ಗುಹೆಯಲ್ಲಿ ಸಾಗಬಹುದಾಗಿದೆ. ಮುಂದೆ ಹೋದಂತೆಲ್ಲಾ ದಾರಿ ಕಿರಿದಾಗುತ್ತಾ ಹೋಗಿ ತೆವಳಿಕೊಂಡು ಹೋಗಬೇಕಾಗುತ್ತಂತೆ. ಅನಂತಪುರದಿಂದ ತಿರುವನಂತಪುರಕ್ಕೆ ಪದ್ಮನಾಭ ಹೋದನೆನ್ನಲಾದ ಗುಹೆಯನ್ನು ನಾವು ನೋಡಬಹುದಾಗಿದೆ. ಆದರೆ ಅನಂತಪುರದಿಂದ ಬಂದನೆನ್ನಲಾದ ಗುಹೆಯನ್ನುತಿರುವನಂತಪುರದಲ್ಲಿ ಕಂಡವರಿಲ್ಲ. ಅಂದರೆ ಈಗ ತೆರೆಯದೆ ಉಳಿದಿರುವ ಬಿ ನೆಲಮಾಳಿಗೆಯಲ್ಲಿ ಸುರಂಗಮಾರ್ಗವಿರಬಹುದೇ? ಅನುಮಾನಕ್ಕೆ ಆಸ್ಪದವಿದೆ.


ತಿರುವನಂತಪುರದಲ್ಲಿ ಅದಿಶೇಷನ ಮೇಲೆ ಮಲಗಿ ಅನಂತಶಯನನಾದ ಮಹಾವಿಷ್ಣು ಅನಂತಪುರದಲ್ಲಿ ಅದಿಶೇಷನ ಮೇಲೆ ಕುಳಿತ ಭಂಗಿಯಲ್ಲಿರುತ್ತಾನೆ. ಆದರೆ ಎರಡೂ ದೇವಸ್ಥಾನದ ಗರ್ಭಗುಡಿಯಲ್ಲಿರುವ ಮೂರ್ತಿಗಳು ಸಾಮಾನ್ಯವಾದುದಲ್ಲ. ಅವು ಕಡುಶರ್ಕರ ಪಾಕದಿಂದಾದ ರಚನೆಗಳು.


ಏನಿದು ಕಡುಶರ್ಕರ ಪಾಕ?


ವಿಗ್ರಹ ರಚನೆಯಲ್ಲಿ ಒಂಬತ್ತು ವಿಧಾನಗಳಿವೆ. ಅದರಲ್ಲಿ ಬಹು ಕ್ಲಿಷ್ಟಕರವಾದ ವಿಧಾನವೇ ಕಡುಶರ್ಕರ ಪಾಕ ವಿಧಾನ. ಇದು ಅತೀ ಪಾಚೀನವಾದ ಗ್ರಂಥಗಳಲ್ಲಿ ಉಲ್ಲೇಖವಾದ ವಿಗ್ರಹ ನಿರ್ಮಾಣ ವಿಧಾನ. ಪ್ರಸ್ತುತ ನಮ್ಮ ದೇಶದಲ್ಲಿ, ಬಹುಶಃ ವಿಶ್ವದಲ್ಲೇ ಕೇವಲ ಮೂರು ಕಡೆ ಮಾತ್ರ ರೀತಿಯ ವಿಗ್ರಹಗಳಿವೆ. ಒಂದು ಅನಂತಪುರದಲ್ಲಿರುವ ಅನಂತಪದ್ಮನಾಭ. ಇನ್ನೊಂದು ತಿರುವನಂತಪುರದಲ್ಲಿರುವ ಅನಂತಪದ್ಮನಾಭ. ಮತ್ತೊಂದು ಇದೇ ರಾಜ್ಯದ ಕಣ್ಣೂರು ಸಮೀಪದಲ್ಲಿರುವ ಮಾಡಾಯಿಕಾವು ಮಹಾಕಾಳಿಯ ವಿಗ್ರಹ. ಇದೇ ಭಗವತಿ ಕ್ಷೇತ್ರದಲ್ಲಿ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಶತ್ರು ಸಂಹಾರ ಯಾಗ ಮಾಡಿದ್ದು. ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದಾಗಲೆಲ್ಲ ಅವರು ಅಮ್ಮನ ಮೊರೆ ಹೋಗುತ್ತಾರೆ.


ಕಡುಶರ್ಕರಾ ಪಾಕವಿಧಾನದ ಮೊದಲ ಹಂತ ಎಂದರೆ ಪೀಠ ಪ್ರತಿಷ್ಟಾಪನೆ. ಎರಡನೆಯದು ನರ ಸಂಕಲ್ಪ. ಮೂರನೆಯದು ಮಜ್ಜೆಸಂಕಲ್ಪ. ನಾಲ್ಕನೆಯದು ಮಾಂಸ ಸಂಕಲ್ಪ. ಇದೆಲ್ಲಾ ಆದ ಮೇಲೆ ಅದಕ್ಕೆ ೨೩ ರೀತಿಯ ಲೇಪನಗಳನ್ನು ಒಂದು ತಿಂಗಳ ಅಂತರದಲ್ಲಿ ಲೇಪಿಸುತ್ತಾ ಹೋಗುತ್ತಾರೆ. ಕೊನೆಯಲ್ಲಿ ೨೪ನೇ ಲೇಪನವಾಗಿ ಬೆಳ್ಳಿ ಮತ್ತು ಚಿನ್ನದ ಲೇಪನ ಮಾಡಿ ಅನಂತರದಲ್ಲಿ ಪ್ರಾಣ ಪ್ರತಿಷ್ಟೆ ಮಾಡುತ್ತಾರೆ.


ಮನುಷ್ಯನ ದೇಹ ರಚನೆ ಯಾವ ರೀತಿಯಲ್ಲಿದೆಯೋ ಅದೇ ರೀತಿಯಾಗಿ ವಿಗ್ರಹವೂ ರಚನೆಯಾಗುತ್ತದೆ. ಮೊಟ್ಟಮೊದಲನೆಯದಾಗಿ ಪೀಠ ಪ್ರತಿಷ್ಠಾಪನೆಗಾಗಿ ಕಾಚಿಮರದ [ಕದಿರಮರ] ತಿರುಳನ್ನು ತೆಗೆದು ಅಸ್ಥಿಪಂಜರ ತಯಾರಿಸುತ್ತಾರೆ. ಅದಕ್ಕೆ ಮನುಷ್ಯ ಶರೀರದಲ್ಲಿರುವಂತೆ ೨೦೬ ಎಲುಬುಗಳ ಜೋಡಣೆ ಮಾಡಿ ಪೀಠದಲ್ಲಿ ಕುಳ್ಳಿರಿಸುವುದೇ ಪೀಠ ಪ್ರತಿಷ್ಟಾಪನೆ.


ಅನಂತರ ಹಣ್ಣು ತೆಂಗಿನಕಾಯಿಯ ಒಂದೊಂದು ನಾರನ್ನೂ ಶುದ್ದೀಕರಿಸಿ ನಾಜೂಕಾಗಿ ಹಣೆದು ಸುಮಾರು ಮುನ್ನೂರು ಮೀಟರ್ ಉದ್ದದ ಹುರಿಹಗ್ಗವನ್ನು ತಯಾರಿಸಿ ಸುಷುಮ್ನನಾಡಿಯಿಂದ ಮಣಿಶಿರದತನಕ ಅಸ್ಥಿಪಂಜರದ ಮೇಲೆ ಸುತ್ತುತ್ತಾರೆ. ಇದು ನರ ಸಂಕಲ್ಪ.


ಇದಾದ ನಂತರದ್ದು ಮಜ್ಜೆ ಸಂಕಲ್ಪ. ಇದಕ್ಕಾಗಿ ತ್ರಿವೇಣಿ ಸಂಗಮದಿಂದ ತಂದಂಥ ಬಿಳಿಕಲ್ಲು, ಕೆಂಪುಕಲ್ಲು, ಕಪ್ಪುಕಲ್ಲುಗಳನ್ನು ಪುಡಿಮಾಡಿ ,ಅರೆದು, ಪ್ರಕೃತಿಯಲ್ಲಿ ಸಿಗುವ ಮೇಣದೊಡನೆ ಕಾಯಿಸಿ ಸುಗಂಧಬರಿತವಾದ ಕೆಂಪಾದ ಪಾಕವೊಂದನ್ನು ಸಿದ್ದ ಪಡಿಸುತ್ತಾರೆ. ಅದು ಬಿಸಿಬಿಸಿಯಾಗಿರುವಾಗಲೇ ನರಸಂಕಲ್ಪವಾದ ಅಸ್ಥಿಪಂಜರದ ಮೇಲೆ ಲೇಪಿಸಿದಾಗ ಅದು ತಕ್ಷಣವೇ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ. ಇದು ಪ್ರಾರಂಭದ ಕೋಟಿಂಗ್.


ಅನಂತರದ್ದು ಮಾಂಸ ಸಂಕಲ್ಪ. ನಮ್ಮ ಪರಿಸರದಲ್ಲಿ ಸಿಗುವ ಅರುವತ್ತನಾಲ್ಕು ಆಯುರ್ವೇದದ ಗುಣಗಳಿರುವ ಸಸ್ಯಜನ್ಯ, ಪ್ರಾಣಿಜನ್ಯ ವಸ್ತುಗಳನ್ನು ನಿಶ್ಚಿತ ಪ್ರಮಾಣದಲ್ಲಿ ಅರೆದು,ಪುಡಿಮಾಡಿ, ಪಾಕಬರಿಸಿ ಒಂದೊಂದೇ ಕೋಟಿಂಗ್ ಕೊಡುತ್ತಾ ಹೋಗುತ್ತಾರೆ. ಒಂದೊಂದು ತಿಂಗಳ ಅಂತರದಲ್ಲಿ ಇಂತಹ ಇಪ್ಪತ್ತಮೂರು ಲೇಪನಗಳನ್ನು ಬಳಿಯಲಾಗುತ್ತದೆ. ಪ್ರತಿ ಲೇಪನಕ್ಕೂ ಅದರದೇ ಆದ ಬಣ್ಣ, ಪರಿಮಳಗಳಿರುತ್ತದೆ.


ಕೊನೆಯ ಹಾಗೂ ಇಪ್ಪತ್ತನಾಲ್ಕನೆಯ ಲೇಪನವೇ ಚಿನ್ನ ಮತ್ತು ಬೆಳ್ಳಿಯ ಲೇಪನ.


ದೇವಸ್ಥಾನಕ್ಕೆ ಬರುವ ಭಕ್ತರು ಸಾಮಾನ್ಯವಾಗಿ ದೇವರಲ್ಲಿ ಕೇಳಿಕೊಳ್ಳ್ವುದು ಆರೋಗ್ಯ ಮತ್ತುಐಶ್ವರ್ಯ. ಅವೆರಡೂ ಅನಂತಪದ್ಮನಾಭನ ದೇಹರಚನೆಯಲ್ಲೇ ಇದೆ. ಅದನ್ನು ಆತ ತನ್ನ ಭಕ್ತರಿಗೆ ಧಾರಾಳವಾಗಿ ಹಂಚುತ್ತಾನೆ ಎಂದುಇಲ್ಲಿಗೆಬರುತ್ತಿರುವ ಭಕ್ತರು ನಂಬಿಕೊಂಡಿದ್ದಾರೆ

ವಿಗ್ರಹವಲ್ಲದೆ ಇನ್ನೂ ಹಲವಾರು ವಿಷಯಗಳಲ್ಲೂ ಸಾಮ್ಯತೆಯಿದೆ.ಎರಡೂ ಕಡೆಯಲ್ಲಿಯೂ ಅನಂತಪದ್ಮನಾಭನ ಅರ್ಚಕರು ತುಳುನಾಡು ಮೂಲದ ಶಿವಳ್ಳಿ ಬ್ರಾಹ್ಮಣರು. ಎರಡೂ ಕಡೆಯಲ್ಲಿಯೂ ಮೂಲ ವಿಗ್ರಹಕ್ಕೆ ಅಭಿಷೇಕವಿಲ್ಲ. ಬದಲಾಗಿ ಪುರಾತನವಾದ ಪಂಚಲೋಹದ ಅರ್ಚನ ಬಿಂಬ, ಅಭಿಷೇಕ ಬಿಂಬ, ಉತ್ಸವ ಬಿಂಬಗಳಿವೆ. ಮೂರು ಬಿಂಬಗಳನ್ನು ಮುಖಮಂಟಪದಲ್ಲಿಟ್ಟು ಅಭಿಷೇಕ ಮಾಡಿ ಮತ್ತೆ ಗರ್ಭಗುಡಿಯಲ್ಲಿಡುತ್ತಾರೆ.


ಗರ್ಭಗುಡಿಯಲ್ಲಿ ಪದ್ಮನಾಭನ ಜೊತೆ ಶ್ರೀದೇವಿ, ಭೂದೇವಿ, ಗರುಡ, ಹನುಮಂತ ಮತ್ತು ಎರಡು ನಾಗಕನ್ನಿಕೆಗಳ ವಿಗ್ರಹಗಳಿವೆ.


ಈ ದೇವಾಲಯ ೯ನೇ ಶತಮಾನದಲ್ಲಿ ನಿರ್ಮಾಣವಾಗಿರಬೇಕೆಂದು ಅಂದಾಜಿಸಲಾಗಿದೆ.ಅನಂತ ಪದ್ಮನಾಭನ ಗರ್ಭಗುಡಿ ತುಂಬಾ ವಿಶಿಷ್ಟವಾದುದು. ಅಲ್ಲಿಯ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾಗಿರುವ ಕರುಣಾಕರ ಅನಂತಪುರ ಹೇಳುವ ಪ್ರಕಾರ ಗರ್ಭಗುಡಿ ಸಾವಿರದ ಇನ್ನೂರು ವರ್ಷಗಳ ಹಳೆಯದು. ದೇವಸ್ಥಾನವನ್ನು ಹಲವು ಬಾರಿ ಜೀರ್ಣೋದ್ಧಾರ ಮಾಡಿದ್ದರೂ ಗರ್ಭಗುಡಿಯನ್ನು ಇದುವರೆಗೂ ಬದಲಾಯಿಸಿಲ್ಲ. ಅದಕ್ಕವರು ಗರ್ಭಗುಡಿಯ ಮೇಲ್ಛಾವಣಿಗೆ ಹಾಕಿದ ತ್ರಿಕೋನಾಕೃತಿಯ ಕಲ್ಲುಗಳನ್ನು ತೋರಿಸುತ್ತಾರೆ.


ಇದರ ಹೊರತಾಗಿಯೂ ದೇವಾಲಯದ ಪ್ರಾಚೀನತೆಯನ್ನು ಸಾರುವ ಇನ್ನೊಂದು ಕುರುಹು ಅನ್ನು ಗರ್ಭಗುಡಿಯ ಗೋಡೆಗಳಲ್ಲೇ ಕಾಣಬಹುದು. ಸಿಂಧು ನಾಗರೀಕತೆಯಲ್ಲಿ ಸಸ್ಯ ಜನ್ಯ ಬಣ್ಣಗಳನ್ನು ಉಪಯೋಗಿಸಿ ವರ್ಣಚಿತ್ರಗಳನ್ನು ರಚಿಸುತ್ತಿದ್ದರೆಂದು ನಾವು ಕೇಳಿದ್ದೇವೆ. ಅಜಂತ ಗುಹೆಗಳಲ್ಲಿಯೂ ವರ್ಣಚಿತ್ರಗಳಿವೆ. ಅಂಥ ಸುಂದರವಾದ ರಚನೆಗಳನ್ನು ನಾವಿಲ್ಲಿ ಕಾಣಬಹುದು. ಗರ್ಭಗುಡಿಯಲ್ಲಿರುವ ದೇವರು ಸಸ್ಯಜನ್ಯ ವಸ್ತುಗಳಿಂದ ಮಾಡಿರುವ ಕಡುಶರ್ಕರ ಪಾಕದ ವಿಗ್ರಹ. ತನ್ನ ಶರೀರದಲ್ಲೇ ಔಷಧ ಮತ್ತು ಚಿನ್ನ ಬೆಳ್ಳಿ ಹೊಂದಿದ್ದು ತನ್ನಲ್ಲಿಗೆ ಬರುವ ಭಕ್ತರಿಗೆ ಆಯುಸ್ಸು ಮತ್ತು ಐಶ್ವರ್ಯವನ್ನು ದಯ ಪಾಲಿಸುವ ದೇವನಾಗಿದ್ದಾನೆ ಅನಂತ ಪದ್ಮನಾಭ. ಇಂತವನ ಸನ್ನಿದಾನದಲ್ಲಿ ಸಸ್ಯಜನ್ಯವಾದ ಬಣ್ಣಗಳಿಂದಲೇ ಚಿತ್ರ ರಚನೆಯಾಗಿರಬಹುದೆಂದು ನಾವು ತಾರ್ಕಿಕವಾಗಿಯೂ ಚಿಂತಿಸಬಹುದು. ಇದು ನಿಜವೇ ಆಗಿದ್ದಲ್ಲಿ ಇದರ ಪ್ರಾಚೀನತೆಯನ್ನು ಕ್ರಿಸ್ತಪೂರ್ವದಂಚಿಗೆ ತಂದು ನಿಲ್ಲಿಸಬಹುದು

.

ವಿಗ್ರಹದ ಪಾವಿತ್ರ್ಯತೆಗೆ ಸೂಕ್ಮತೆಗೆ ಧಕ್ಕೆಯಾದರೆ ಅವಘಡಗಳು ಸಂಭವಿಸುತ್ತವೆ ಎಂಬುದನ್ನು ಅಲ್ಲಿನ ಭಕ್ತರು ನಂಬುತ್ತಾರೆ. ಹಾಗೆಯೇ ಅನಂತಪದ್ಮನಾಭ ಕಡುಶರ್ಕರ ಪಾಕದ ವಿಗ್ರಹದಲ್ಲದೆ ಬೇರೆ ವಿಗ್ರಹದಲ್ಲಿ ನೆಲೆಗೊಳ್ಳುವುದಿಲ್ಲ. ಅದಕ್ಕವರು ಉದಾಹರಣೆಯನ್ನು ಕೊಡುತ್ತಾರೆ; ಸಾವಿರದ ಇನ್ನೂರು ವರ್ಷಗಳ ಹಳೆಯದಾದ ಕಡುಶರ್ಕರ ಪಾಕದ ವಿಗ್ರಹ ಅಲ್ಲಲ್ಲಿ ಭಿನ್ನವಾದ ಕಾರಣ ಅದನ್ನು ಪುನಃ ತಯಾರಿಸಲು ತೀರ್ಮಾನಿಸಿ ಬದಲಿಗೆ ಪಂಚಲೋಹದ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಆದರೆ ಅದರಿಂದ ಹಲವಾರು ದೋಷಗಳು ಕಂಡುಬಂದವು. ಅಷ್ಟ ಮಂಗಲ ಜ್ಯೋತಿಷ್ಯ ಪ್ರಶ್ನೆಯ ವಿಧಿ ವಿಧಾನದಲ್ಲಿ ದೇವ ಪ್ರಶ್ನೆಯನ್ನಿಟ್ಟಾಗ, ದೇವರು, ತನ್ನ ಹಳೆಯ ರೂಪವನ್ನು ಪ್ರತಿಷ್ಟಾಪನೆ ಮಾಡಿದರೆ ಮಾತ್ರ ತಾನಿಲ್ಲಿ ನೆಲೆಗೊಂಡು ಭಕ್ತರಿಗೆ ಅಭಯ ನೋಡುತ್ತೇನೆ ಎಂಬುದಾಗಿ ಗೋಚರಿಸಿದ ಕಾರಣ ಮತ್ತೆ ಹೊಸವಿಗ್ರಹದ ರಚನೆಯ ಪ್ರಕ್ರಿಯೆಗಳು ಆರಂಭಗೊಂಡವು. ಕೊಟ್ಟಾಯಂ ಜಿಲ್ಲೆಯ ವಿಶ್ವಕರ್ಮ ಶಿಲ್ಪಿಗಳ ಬಳಗ ಏಳು ವರ್ಷಗಳ ಕಾಲ ಶ್ರಮ ವಹಿಸಿ ವಿಗ್ರಹಗಳನ್ನು ರಚಿಸಿದೆ,


೧೯೭೬ರಿಂದಲೇ ಆರಂಭಗೊಂಡ ಗೋಪುರದ ನಿರ್ಮಾಣ ಕಾರ್ಯ ಎರಡು ವರ್ಶಗಳ ಹಿಂದಷ್ಟೇ ಮುಗಿದು ಕಡುಶರ್ಕರಪಾಕದ ಹೊಸ ಮೂರ್ತಿಗಳ ಪ್ರತಿಶ್ಟಾಪನೆ ಆಗಿದೆ. ಸ್ವತಃ ತಿರುವಾಂಕೂರಿನ ರಾಜಮನೆತನದ ಹಿರಿಯ ಉತ್ತರಾಧಿಕಾರಿ ಉತ್ತರಾಡಂ ತಿರುನಾಳ್ ಮಾರ್ತಾಂಡವರ್ಮ ಅವರು ಗೋಪುರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದರು. ಇವರೀಗೀಗ ತೊಂಬತ್ತರ ಹರೆಯ. ಟಿ.ಪಿ ಸುಂದರರಾಜನ್ ಎಂಬವರು ತಿರುವನಂತಪುರದ ದೇವಸ್ಥಾನದ ಆಡಳಿತ ಪಾರದರ್ಶಕವಾಗಿರಬೇಕೆಂದು ಹೈಕೋರ್ಟ್ ಮೊರೆ ಹೋದಾಗ ಕೋರ್ಟ್ ದೇವಸ್ಥಾನದ ನಿರ್ವಹಣೆಯನ್ನು ಸರಕಾರ ತೆಗೆದುಕೊಳ್ಳಬೇಕೆಂದು ಆದೇಶ ನೀಡಿತ್ತು. ಅದನ್ನೇ ಈ ವಯೋವೃದ್ಧ ಮಾರ್ತಾಂಡವರ್ಮರು ಸುಪ್ರಿಂಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಅದರ ಪರಿಣಾಮವಾಗಿ ಸುಪ್ರಿಂ ಕೋರ್ಟ್ ತಜ್ನರ ಸಮಿತಿಯೊಂದನ್ನು ನೇಮಿಸಿ ನೆಲಮಾಳಿಗೆಯನ್ನು ತೆರೆದು ಅಪಾರ ಸಂಪತ್ತನ್ನು ಹೊರಜಗತ್ತಿನ ಮುಂದಿಡುತ್ತಿರುವುದು ಈಗ ಜಗತ್ತಿನಾದ್ಯಂತ ಸುದ್ದಿ ಮಾಡುತ್ತಿದೆ.


ಈ ಸುದ್ದಿಯ ಹಿನ್ನೆಲೆಯಲ್ಲಿ ಮತ್ತೆ ಅನಂತಪುರದೆಡೆ ನೋಡಿದರೆ ಅನಂತಪದ್ಮನಾಭನ ತವರು ನೆಲೆ ನಿಜವಾಗಿಯೂ ಬಡವಾಗಿದೆ. ಅದರೆ ಅದು ಒಂದು ಕಾಲದಲ್ಲಿ ಮಹಾಕ್ಷೇತ್ರವಾಗಿತ್ತೆಂದು ಅದರ ಕುರುಹುಗಳನ್ನು ನೋಡಿದರೆ ಗೊತ್ತಾಗುತ್ತದೆ. ಹಿಂದೆಯೇ ಹೇಳಿದಂತೆ ದೇವಸ್ಥ್ಹಾನದ ಪರಿಸರ ಅಗಲವಾದ ಗುಂಡಿ ಪಾತ್ರೆಯ ಆಕಾರದಲ್ಲಿದೆ.ತಳ ಭಾಗದಲ್ಲಿ ಕ್ಷೀರ ಸಮುದ್ರದ ಮಾದರಿಯ ವಿಶಾಲವಾದ ಕೊಳವಿದೆ. ಅದರ ಮಧ್ಯದಲ್ಲಿ ಅನಂತಪದ್ಮನಾಭ ಕುಳಿತಿದ್ದಾನೆ. ಸುತ್ತಲೂ ಗಟ್ಟಿಯಾದ ಕಪ್ಪಗಿನ ಸ್ಥಳಿಯವಾಗಿ ಮುರಕಲ್ಲು ಎಂದು ಕರೆಯಲ್ಪಡುವ ಗುಡ್ಡವಿದೆ. ಆ ಗುಡ್ಡದ ಮೇಲೆಯೇ ವಿಶಿಷ್ಟ ವಿನ್ಯಾಸದ ’ಸರ್ಪಕೋಟೆ’ಯೆಂಬ ಕೋಟೆಯಿದೆ. ಇಂತಹ ಕೋಟೆಗಳನ್ನು ಕೇರಳದ ಪ್ರಾಚೀನ ಮಹಾಕ್ಷೇತ್ರಗಳಲ್ಲಿ ಮಾತ್ರ ಕಾಣಬಹುದು. ಕ್ರೂರ ಸರ್ಪಗಳು ಇದನ್ನು ಹತ್ತಿ ಒಳಬಾರದಂತೆ ಅದನ್ನು ವಿನ್ಯಾಸ ಮಾಡಲಾಗಿದೆ. ಕೇರಳಮತ್ತು ದಕ್ಷಿಣಕನ್ನಡದ ಬಹುತೇಕ ಭಾಗಗಳು ದಟ್ಟ ಅರಣ್ಯದಿಂದ ಕೂಡಿದ್ದು ಹಾವು ಮತ್ತು ಇತರ ಕ್ರೂರ ಜಂತುಗಳು ಹಿಂದೆ ಇಲ್ಲಿ ಸಾಮಾನ್ಯವಾಗಿತ್ತು ಎಂಬುದನ್ನು ನಾವಿಲ್ಲಿ ಜ್ನಾಪಿಸಿಕೊಳ್ಳಬಹುದು

.

ಇದರ ಪ್ರಾಚೀನತೆಯನ್ನು ದೃಢಪಡಿಸುವ ಇನ್ನೊಂದು ಕುರುಹು ಕೂಡಾ ಇಲ್ಲಿದೆ. ದೇವಸ್ಥಾನವನ್ನು ಇಳಿದು ಪ್ರವೇಶಿಸುವ ದಾರಿಯಲ್ಲಿ ಬಲ ಭಾಗದಲ್ಲಿ ಒಂದು ಶಿಲಾಶಾಸನವಿದೆ. ಅದನ್ನು ಪೂರ್ತಿಯಾಗಿ ಇದುವರೆಗೂ ಯಾರಿಂದಲೂ ಓದಲಾಗಿಲ್ಲ. ಉಡುಪಿಯ ಇತಿಹಾಸತಜ್ನರಾದ ಗುರುರಾಜ ಭಟ್ಟರು ಇದನ್ನು ಓದಲು ಪ್ರಯತ್ನಿಸಿದ್ದಾರೆ. ಅವರ ಪ್ರಕಾರ ಇದು ಹಲವಾರು ಭಾಷೆಗಳ ಮತ್ತು ಲಿಪಿಗಳ ಮಿಶ್ರಣ. ತುಳುಲಿಪಿಯ ಕೆಲವು ಶಬ್ದಗಳನ್ನು ಅವರು ಗುರುತಿಸಿದ್ದರಂತೆ. ತುಳು ಭಾಷೆಗೆ ತಿಗಾಳಾರಿ ಎಂಬ ಲಿಪಿಯಿತ್ತೆಂದು ನಾವು ಭಾಷಾ ಚರಿತ್ರೆಯಲ್ಲಿ ಓದಿದ್ದೇವೆ.ಅದೊಂದು ರಹಸ್ಯ ಲಿಪಿಯೆಂಬ ವಾದವೂ ಇದೆ. ಬಹುಶಃ ಇದನ್ನು ಓದಲು ಸಾಧ್ಯವಾಗುತ್ತಿದ್ದರೆ ಅನಂತಪದ್ಮನಾಭನ ಇತಿಹಾಸದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಾಧ್ಯವಾಗುತ್ತಿತ್ತೇನೋ.


ದೇವಸ್ಥಾನದ ನೈಋತ್ಯ ದಿಕ್ಕಿನಲ್ಲಿ ಬಿಲ್ವ ಮಂಗಳ ಸ್ವಾಮಿಗಳು ಪ್ರಾರಂಭದಲ್ಲಿ ಪೂಜಿಸುತ್ತಿದ್ದ ಪಾರ್ಥಸಾರಥಿಯ ಮಂದಿರವಿದೆ. ಅಲ್ಲಿ ಪುರಾತನವಾದ ಪಾರ್ಥ ಸಾರಥಿಯ ವಿಗ್ರಹವಿದೆ. ಇನ್ನೊಂದು ಕುತೂಹಲದ ವಿಷಯವೆಂದರೆ ಇಲ್ಲಿಗೆ ಸುಮಾರು ಹದಿನೈದು ಕಿ.ಮೀ ದುರದಲ್ಲಿ ಮುಜುಂಗಾವು ಎಂಬ ಪುರಾಣಪ್ರಸಿದ್ದವಾದ ಕ್ಷೇತ್ರವಿದೆ. ಅಲ್ಲಿಯ ಒಡೆಯ ಪಾರ್ಥ ಸಾರಥಿ.


ತಿರುವನಂತಪುರದ ಅನಂತಪದ್ಮನಾಭನಿಗೆ ಇದು ಆದಿ ಎಂಬುದಕ್ಕೆ ಇನ್ನೂ ಒಂದು ಪುಷ್ಟಿಯಿದೆ.ಮಲೆಯಾಳದಲ್ಲಿ ತಿರು ಎನ್ನುವುದಕ್ಕೆ ಚಿಕ್ಕ, ಸಣ್ಣದು ಎಂಬ ಅರ್ಥವಿದೆ. ಓಣಂ ಅಲ್ಲಿನ ಬಹುದೊಡ್ಡ ಹಬ್ಬ. ಒಂದು ವೇಳೆ ಹಬ್ಬ ಆಚರಿಸುವುದಕ್ಕೆ ಸೂತಕ ಬಂದರೆ ಆಗ ಅಂತವರು ತಿರು ಓಣಂನಲ್ಲಿ ಹಬ್ಬ ಮಾಡುತ್ತಾರೆ. ಹಾಗೆಯೇ ’ತಿರು ಮಂತ್ರ’ ಎಂಬ ಪದ ಜನ ಮಾನಸದಲ್ಲಿ ಹಾಸುಹೊಕ್ಕಾಗಿದೆ. ಉದಾಹರಣೆಗೆ ’ಗುರುವಿಗೇ ತಿರುಮಂತ್ರ ಹಾಕುವವನು’ ಇಲ್ಲಿ ಮಂತ್ರ ಮೊದಲು ತಿರು ಮಂತ್ರ ಅದಕ್ಕೆ ಪ್ರತಿಯಾಗಿ ಬರುವಂಥದು, ಅನಂತರದ್ದು.


ತಿರುವನಂತಪುರದಲ್ಲಿ ಪದ್ಮನಾಭನಿಗೆ ರಾಜಾಶ್ರಯ ದೊರಕಿ ಆತನಿಗೆ ಉತ್ತರೋತ್ತರ ಶ್ರೇಯಸ್ಸಾಗಿರಬಹುದು.ಅದು ಪುಣ್ಯನದಿಗಳ ಉಗಮ ಸ್ಥಾನದಂತೆ. ವೈಭವ, ಆಡಂಬರ, ಆರಾಧನೆಗಳೆಲ್ಲಾ ಅನಂತರದಲ್ಲಿ ಲಬಿಸುವಂತಹದು.


ಅನಂತಪುರದ ಅನಂತಪದ್ಮನಾಭನ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ಮಾಯಿಪ್ಪಾಡಿ ಅರಸು ಮನೆತನ. ಕುಂಬಳೆ ಸೀಮೆಯನ್ನು ಆಳಿದ ಅರಸು ಮನೆತನ ಅದು. ಉತ್ತರದಲ್ಲಿ ಮಂಜೇಶ್ವರದಿಂದ ದಕ್ಷಿಣದಲ್ಲಿ ಚಂದ್ರಗಿರಿಯ ತನಕ ಪಶ್ಚಿಮ ಕರಾವಳಿಯ ಮೊಗ್ರಾಲ್ ನಿಂದ ಪೂರ್ವದಲ್ಲಿ ಅಡೂರು ತನಕ ಅವರ ಸೀಮೆಯು ಹರಡಿತ್ತು. ಆ ಸೀಮೆಯ ವ್ಯಾಪ್ತಿಗೆ ಬರುವ ಮದೂರಿನ ಗಣಪತಿ, ಮುಜುಂಗಾವಿನ ಪಾರ್ಥಸಾರಥಿ, ಅನಂತಪುರದ ಅನಂತಪದ್ಮನಾಭ, ಮತ್ತು ಅಡೂರಿನ ಕೃಷ್ಣ ದೇಗುಲಗಳಿಗೆ ಕುಂಬಳೆ ಅರಸರು ಪಾರಂಪರಿಕ ಟ್ರಷ್ಟಿಗಳಾಗಿದ್ದಾರೆ. ಅವರು ತಿರುವಾಂಕೂರು ರಾಜ ಮನೆತನದವರಷ್ಟು ಪ್ರಸಿದ್ದರಲ್ಲ. ಹಾಗಾಗಿ ಅನಂತ ಪದ್ಮನಾಭನೂ ಪ್ರಸಿದ್ದಿಗೆ ಬರಲಿಲ್ಲವೇನೋ!


ತಿರುವನಂತಪುರದ ಅನಂತಶಯನಪದ್ಮನಾಭ ಅಧ್ವೈತ ಕಲ್ಪನೆಯ ಮೂರ್ತರೂಪ ಎಂಬ ವಾದವೂ ಇದೆ. ಬ್ರಹ್ಮ, ವಿಷ್ಣು,ಮಹೇಶ್ವರನಲ್ಲಿ ಬೇಧವಿಲ್ಲ ಎಂಬ ಎಕ ಭಾವಕ್ಕೆ ಭಕ್ತರು ಹೇಳುವ ಕಥೆಯೆಂದರೆ ಅನಂತಶಯನನಾದ ಪದ್ಮನಾಭನನ್ನು ನೋಡಲೆಂದು ಕೈಲಾಸದಿಂದ ಶಿವನು ಬರುತ್ತಾನೆ. ಆಗ ಪದ್ಮನಾಭ ಆತನನ್ನು ಎದುರ್ಗೊಳ್ಳಲೆಂದು ಯೋಗನಿದ್ರೆಯಿಂದ ಎದ್ದು ಬರುತ್ತಾನೆ. ಆ ದಿನವೇ ಉತ್ಥಾನ ದ್ವಾದಶಿ. ಬ್ರಹ್ಮ ಹೇಗಿದ್ದರೂ ಪದ್ಮನಾಭನ [ಹೊಕ್ಕಳು] ನಾಭಿಯಲ್ಲೇ ಇದ್ದಾನೆ. ಹಾಗಾಗಿ ಉತ್ಥಾನ ದ್ವಾದಶಿಯಂದು ಬ್ರಹ್ಮ, ವಿಷ್ಣು, ಶಿವನ ಸಂಗಮವಾಗುತ್ತದೆ. ’ಅಹಂ ಬ್ರಹ್ಮಾಸ್ಮಿ’ ಎಂದು ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದ ಶಂಕರಾಚಾರ್ಯರು ಕೇರಳದವರು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.


ಸುತ್ತಲೂ ಬೆಟ್ಟಗುಡ್ಡಗಳಿಂದ ಅವೃತವಾಗಿ, ಅನೇಕ ಔಷದಿಯ ಸಸ್ಯಗಳ ಮೇಲೆ ಬಿದ್ದ ನೀರನ್ನು ತನ್ನೊಡಲಲ್ಲಿ ಗರ್ಭೀಕರಿಸಿಕೊಂಡು ಮತ್ತೆ ಇಲ್ಲಿಯ ಕಲ್ಲುಗಳೆಡೆಯಿಂದ ಹರಿದು ಬಂದು ಕೊಳವನ್ನು ಸೇರುವ ಈ ನೀರು ಸರ್ವರೋಗ ಪರಿಹಾರಕ ಎಂಬ ಭಾವನೆ ಭಕ್ತರಲ್ಲಿದೆ ಇಲ್ಲಿಯ ನೀರಲ್ಲಿ ಸಲ್ಫರ್ ಅಂಶ ಜಾಸ್ತಿಯಿರುವ ಕಾರಣದಿಂದಾಗಿ ಅದು ನಿಜವಿದ್ದರೂ ಇರಬಹುದು..

ಇಲ್ಲಿಗೆ ಬರುವ ಆಸ್ತಿಕರ ಮನಸ್ಸನ್ನು ತನ್ನ ಚಿನ್ನಾಟಗಳಿಂದ ಸೆಳೆಯುವ ಬಬಿಯಾ ಎಂಬ ಮೊಸಳೆಯ ಬಗ್ಗೆ ಹೇಳದೆ ಈ ಲೇಖನವನ್ನು ಮುಗಿಸುವಂತಿಲ್ಲ. ಬಬಿಯಾ ಈ ಕೊಳಕ್ಕೆ ಬಂದ ಬಗ್ಗೆಯೂ ಒಂದು ಕತೆಯಿದೆ. ೧೯೪೫ರಲ್ಲಿ ದೇವಸ್ಥಾನದ ಪಕ್ಕ ಬ್ರಿಟೀಶ್ ಸೈನಿಕರು ಕ್ಯಾಂಪ್ ಹಾಕಿದ್ದರು. ಕೆಲವು ಸೈನಿಕರು ಕೊಳದಲ್ಲಿರುವ ಅಪೂರ್ವ ಮೊಸಳೆಯನ್ನು ನೋಡಲೆಂದು ಬಂದಿದ್ದರು. ಸಾಧು ಸ್ವಭಾವದ ಆ ಮೊಸಳೆ ತನ್ನ ಹೆಸರನ್ನು ಯಾರೇ ಕೂಗಲಿ ಅವರ ಬಳಿ ಬರುತ್ತಿತ್ತು. ಹಾಗೆಯೇ ಸೈನಿಕರು ಕೊಳದ ಬಳಿ ನಿಂತು ’ಬಬಿಯಾ’ ಎಂದು ಕೂಗಿದರು. ಅದು ಚಿನ್ನಾಟವಾಡುತ್ತಾ ಪಲ್ಟಿ ಹೊಡೆಯುತ್ತಾ ಅವರೆಡೆಗೆ ಬರತೊಡಗಿತು. ಆಗ ಅವರಲ್ಲೊಬ್ಬ ಅದರೆಡೆಗೆ ಗುಂಡು ಹಾರಿಸಿದ. ಮೊಸಳೆ ಸತ್ತು ಹೋಯಿತು.ಆದರೆ ಅನಂತರದಲ್ಲಿ ಸರ್ಪವೊಂದು ಕಡಿದು ಆ ಸೈನಿಕನನ್ನು ಬಲಿ ತೆಗೆದುಕೊಂಡಿತೆಂಬ ಪ್ರತಿತಿಯಿದೆ.


ಈ ಘಟನೆ ನಡೆದ ಮರುದಿನ ದೇವರ ನೈವೇದ್ಯವನ್ನು ಯಾರಿಗೆ ನೀಡುವುದೆಂದು ಅರ್ಚಕರು ಚಿಂತಿತರಾಗಿ ನಿಂತಿದ್ದಾಗ ಇದ್ದಕ್ಕಿದ್ದಂತೆ ಕೊಳದಲ್ಲಿ ಮೊಸಳೆಯೊಂದು ಕಂಡಿತಂತೆ. ಆ ಮೊಸಳೆಯೇ ಇಂದಿಗೂ ಕೊಳದಲ್ಲಿದೆ.ಅದಕ್ಕೂ ’ಬಬಿಯಾ’ ಎಂದೇ ಹೆಸರಿಡಲಾಗಿದೆ. ಅದಕ್ಕೀಗ ಅರುವತ್ತು ವಯಸ್ಸು ದಾಟಿದೆ. ಹೆಸರಿಡಿದು ಕರೆದರೆ ಈಗಲೂ ಅದು ಮೆಲ್ಲನೆ ದಡಕ್ಕೆ ಬರುತ್ತದೆ ಪ್ರತಿನಿತ್ಯವೂ ಅರ್ಚಕರ ಕೈಯಿಂದ ನೈವೇದ್ಯ ಸ್ವೀಕರಿಸುತ್ತದೆ. ಹಾಗೆಯೇ ಭಕ್ತರು ಕೂಡಾ ತಮ್ಮ ಇಷ್ಟಾರ್ಥದ ನೆರವಿಗಾಗಿ ಮೊಸಳೆಗೆ ನೈವೇದ್ಯದ ಹರಕೆ ಹೇಳಿಕೊಳ್ಳುತ್ತಾರೆ. ಅದನ್ನು ಸಾಕ್ಷಾತ್ ವರುಣದೇವನೆಂದು ಭಾವಿಸುತ್ತಾರೆ.


ಭಾರತೀಯರ ದೈವ ಕಲ್ಪನೆಯೇ ಅದ್ಭುತವಾದುದು. ಅದು ಪ್ರಕೃತಿಯೊಡನೆ ಜೋಡಣೆ ಹೊಂದಿದೆ. ಪ್ರಕೃತಿ ನಿಗೂಢವಾದುದು. ಅನಂತಪದ್ಮನಾಭ ಯಾವಾಗಲೂ ನೀರಿನ ನಡುವೆಯೇ ಇರುತ್ತಾನೆ. ಮತ್ತು ದಟ್ಟ ಕಾಡಿನ ನಡುವೆ ಆದಿಶೇಷನ ಮೇಲೆ ಮಲಗಿರುವ ಯೋಗನಿದ್ರಾ ಭಂಗಿಯಲ್ಲಿರುತ್ತಾನೆ ಕಾವೇರಿ ನದಿ ಕ್ಷೇತ್ರಗಳಾದ ಆದಿರಂಗ, ಮಧ್ಯರಂಗ,ಮತ್ತು ಅಂತ್ಯರಂಗಳಲ್ಲಿಯೂ ಮಹಾವಿಷ್ಣು ಯೋಗ ನಿದ್ರಾ ಭಂಗಿಯಲ್ಲಿರುತ್ತಾನೆ.


ದೇವರ ಸ್ವಂತ ನಾಡು’ ಎಂದು ಕರೆಯಿಸಿಕೊಳ್ಳುವ ಕೇರಳ ರಾಜ್ಯದಲ್ಲಿರುವ ಸರೋವರ ನಡುವಿನ ಏಕೈಕ ದೇವಸ್ಥಾನವೆಂದರೆ ಅದು ಅನಂತಪುರದ ಅನಂತಪದ್ಮನಾಭ.ತಿರುವನಂತಪುರದ ಅನಂತಶಯನ ಪದ್ಮನಾಭನಿಗಿರುವ ಶ್ರೀಮಂತಿಕೆ ಅನಂತಪುರದ ಪದ್ಮನಾಭನಿಗಿಲ್ಲದಿರಬಹುದು ಆದರೆ ಶಾಂತಿಯನ್ನು ಅರಸಿ ಬರುವ ಆಸ್ತಿಕರಿಗೆ ಇದು ಶಾಂತಿ, ನೆಮ್ಮದಿಗಳನ್ನು ನೀಡುವ ಸಂಜೀವಿನಿ ತಾಣ ಎಂಬುದರಲ್ಲಿ ಸಂಶಯವಿಲ್ಲ.

.

[ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಅನಂತಪದ್ಮನಾಭನ ಸನ್ನಿಧಿಯಲ್ಲಿ ಅಷ್ಟೊಂದು ಸಂಪತ್ತು ಹೇಗೆ ಶೇಖರಣೆಗೊಂಡಿರಬಹುದು ಎಂಬುದನ್ನು ಮುಂದಿನ ಪೋಸ್ಟಿನಲ್ಲಿ ಬರೆಯಲು ಪ್ರಯತ್ನಿಸುತ್ತೇನೆ]

9 comments:

sunaath said...

ತುಂಬ ಉತ್ತಮ ಮಾಹಿತಿಯನ್ನು ಕೊಟ್ಟಿರುವಿರಿ. ಧನ್ಯವಾದಗಳು.

Ravi Mundkur said...

Mahiti tumba chennagide!

makara said...

ಕಟ್ಟಿಗೆಯಿಂದ ತಯಾರಿಸುವ ವಿಗ್ರಹಗಳ ಬಗ್ಗೆ ಗೊತ್ತಿತ್ತು ಆದರೆ ಈ ವಿಶಿಷ್ಠ ರೀತಿಯ ವಿಗ್ರಹ ತಯಾರಿಕೆ ಮತ್ತು ಅನಂತನ ಮೂಲನೆಲೆಯನ್ನು ತಿಳಿಸಿಕೊಟ್ಟಿದ್ದಕ್ಕೆ ಮತ್ತು ತುಳುನಾಡಿನ ಬಗ್ಗೆ ಕೂಡ ಹೆಚ್ಚಿನ ಮಾಹಿತಿ ಒದಗಿಸಿದ್ದಕ್ಕೆ ಧನ್ಯವಾದಗಳು.

ದಿವ್ಯಾ ಹೆಗಡೆ said...

Very beautiful write up mam...:-) thanks for sharing...

k.s.hegde said...

Very nice article ..

Manjunatha Kollegala said...

ಉತ್ತಮ ಮಾಹಿತಿ, ಅಪೂರ್ವ ವಿವರಗಳನ್ನು ಕಲೆಹಾಕಿ ಕೊಟ್ಟಿದ್ದೀರಿ, ಧನ್ಯವಾದಗಳು. ಕಡುಶರ್ಕರಾ ಪಾಕ - ಅದರ ತಾಂತ್ರಿಕ ಮಾಹಿತಿಗಳು ಕುತೂಹಲಕಾರಿಯಾಗಿವೆ. ತಿರುವನಂತಪುರಂನ ಪದ್ಮನಾಭ ಶಿಲಾವಿಗ್ರಹವೆಂದೇ ತಿಳಿದಿದ್ದೆ, ಆದರೆ ಅದು ಕಾಷ್ಠವಿಗ್ರಹವಿರಬಹುದೆಂಬ ನಿಮ್ಮ ಮಾಹಿತಿ ಬೆರಗುತಂದಿತು!

ishwarayya said...

1974ರ ವರೆಗೆ ಅನಂತಪುರ ದೇವಾಲಯದ ಆನುವಂಶಿಕ ಮೊಕ್ತೇಸರಿಕೆ ನಮ್ಮ ಕುಟುಂಬದ್ದಾಗಿತ್ತು. ಪ್ರಕೃತ ಕೇರಳ ಸರಕಾರದ ಎಚ್ ಆರ್ ಸಿ ಇ ಅದನ್ನು ನೋಡಿಕೊಳ್ಳುತ್ತಿದೆ.

ಸುಧೇಶ್ ಶೆಟ್ಟಿ said...

ತು೦ಬಾ ಆಸಕ್ತಿಯಿ೦ದ ಕೂಡಿತ್ತು.... ಸು೦ದರವಾದ ಮಾಹಿತಿ ಪೂರ್ಣ ಬರಹ.... ಮು೦ದಿನ ಬರಹಕ್ಕೆ ಕಾಯುತ್ತೇನೆ.

ವಿ.ಆರ್.ಭಟ್ said...

6-7 ವರ್ಷಗಳ ಹಿಂದೆ ಈ ಕಡುಶರ್ಕರ ಪಾಕದ ವಿಷಯವಾಗಿ ತುಳುನಾಡಿನ ದೇವಸ್ಥಾನದ ಬಗ್ಗೆ ಲೇಖನ ಬಂದಿತ್ತು. ಲೇಖನ ವಿಚಾರಯುಕ್ತ.