Thursday, August 11, 2011

ನಾವೆಷ್ಟು ಸ್ವತಂತ್ರರು?



ನಾವೆಷ್ಟು ಸ್ವತಂತ್ರರು ಎಂಬ ಪ್ರಶ್ನೆ ಮೂಲಭೂತವಾಗಿ ಅಧ್ಯಾತ್ಮದ ಜಿಜ್ನಾಸೆ. ಆದರೆ ಈ ಪ್ರಶ್ನೆಯನ್ನು ಸಾಮಾಜಿಕ ಮತ್ತು ರಾಜಕೀಯದ ಹಿನ್ನೆಲೆಯಲ್ಲಿಟ್ಟು ನೋಡಿದರೆ ನಾವೆಷ್ಟು ಅಸಹಾಯಕರು ಎಂಬುದು ಅರಿವಾಗುತ್ತದೆ. ಮಾನವನ ನೆಲೆಯಲ್ಲಿ ನಿಂತು ಸ್ವಾತಂತ್ರ್ಯದ ಬಗ್ಗೆ ಯೋಚಿಸಿದಾಗ ವ್ಯಕ್ತಿಯೊಬ್ಬನಿಗೆ ಮೂರು ರೀತಿಯ ಸ್ವಾತಂತ್ರ್ಯದ ಅಪೇಕ್ಷೆ ಇರುತ್ತದೆ. ಅದು ವೈಯಕ್ತಿಕ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಮತ್ತು ರಾಜಕೀಯ ಸ್ವಾತಂತ್ರ್ಯ. ಇದು ಅಪೇಕ್ಷೆ ಮಾತ್ರ. ಯಾಕೆಂದರೆ ನಾವೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ಅವಲಂಬಿತರೇ.

ಮೊನ್ನೆ ಮೊನ್ನೆ ಚಿಕ್ಕ ಬಳ್ಳಾಪುರದ ಚಿಂತಾಮಣಿ ತಾಲೂಕಿನ ಎರ್ರಾಕೋಟೆ ಮತ್ತು ಬಾರ್ಲಹಳ್ಳಿಯಲ್ಲಿ ನಡೆದ ಹತ್ತು ಮಂದಿಯ ಧಾರುಣ ಹತ್ಯೆಯನ್ನೇ ಗಮನಿಸಿ, ಅಲ್ಲಿ ನಾವು ಯಾರನ್ನು ತಪ್ಪಿತಸ್ಥರನ್ನಾಗಿ ನೋಡಬೇಕು? ನಾವು ಒಪ್ಪಿಕೊಂಡ ರಾಜಕೀಯ ವ್ಯವಸ್ಥೆಯನ್ನೇ? ಆ ರಾಜಕೀಯ ವ್ಯವಸ್ಥೆಯ ಭಾಗವಾಗಿರುವ ಪೋಲಿಸರ ನಿಷ್ಕ್ರೀಯತೆಯನ್ನೇ? ಅಥವಾ ಮನುಷ್ಯನ ಮನದಾಳದಲ್ಲಿ ಹುದುಗಿರುವ ಕ್ರೌರ್ಯದ ವಿಜೃಂಭಣೆಯೇ? ಇದನ್ನು ನೋಡುತ್ತಿರುವಾಗ ಸ್ವಾತಂತ್ರ್ಯದ ಜೊತೆಯಲ್ಲಿಯೇ ಜವಾಬ್ದಾರಿಯೂ ಇರಬೇಕು ಅನ್ನಿಸುತ್ತದೆಯಲ್ಲವೇ? ನಮ್ಮ ಸಂವಿಧಾನದಲ್ಲಿ ಅದು ಉಲ್ಲೇಖಿತವಾಗಿದೆ. ಆದರೆ ಅದನ್ನು ನಾವು ಪರಿಪಾಲಿಸುತ್ತಿದ್ದೇವೆಯೇ?

ನಾನೊಬ್ಬಳು ಮಹಿಳೆ.ನನ್ನ ಸ್ವಾತಂತ್ರ್ಯದ ಕಲ್ಪನೆಗೂ ಪುರುಷನೊಬ್ಬನ ಸ್ವಾತಂತ್ರ್ಯದ ಕಲ್ಪನೆಗೂ ಸಾಮಾಜಿಕ ನೆಲೆಯಲ್ಲಿ ಅಪಾರ ವ್ಯತ್ಯಾಸವಿದೆ. ನಾನು ಬದುಕನ್ನು ಅರ್ಥೈಸಿಕೊಳ್ಳುವ ರೀತಿಯೇ ಬೇರೆ ಆತನ ರೀತಿಯೇ ಬೇರೆ. ನನಗೆ ಆತ ಪ್ರತಿಸ್ಪರ್ಧಿಯಲ್ಲ. ಯಾಕೆಂದರೆ ಪ್ರಕೃತಿ ಇಬ್ಬರನ್ನೂ ಅನನ್ಯ ರೀತಿಯಲ್ಲಿ ಸೃಷ್ಟಿಸಿದೆ. ಇಬ್ಬರೂ ಸ್ವತಂತ್ರವಾಗಿ ಆದರೆ ಪೂರಕವಾಗಿ ಬದುಕಿ ಎಂದಿದೆ. ಆದರೆ ನಾವು ಹಾಗಿದ್ದೇವೆಯೇ?

ವ್ಯಯಕ್ತಿಕ ಮಟ್ಟದಲ್ಲಿ ನಾವು ನಮ್ಮ ಭಾವನೆಗಳಿಗೆ ದಾಸರಾಗಿರುತ್ತೇವೆ. ನಮ್ಮ ಹೆತ್ತವರಿಗೆ, ಬಂಧುಗಳಿಗೆ,ಸೇಹಿತರಿಗೆ ಮತ್ತು ಪ್ರೀತಿ ಪಾತ್ರರಿಗಾಗಿ ಹಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತೇವೆ. ಈ ಹೊಂದಾಣಿಕೆಗಳು ಹಲವು ಬಾರಿ ನಮಗೆ ನೆಮ್ಮದಿಯ ಬದುಕನ್ನು ಸಹಾ ಕಟ್ಟಿ ಕೊಡಬಲ್ಲುವು. ಆದರೆ ಇದರಿಂದಾಚೆಯ ಸಾಮಾಜಿಕ ಸಾತಂತ್ರ್ಯಕ್ಕಾಗಿ ಕೈಚಾಚಿದರೆ ಹಿಂದಿನಿಂದಲೂ ನಡೆದುಬಂದಿರುವ ರೂಢಿಗತ ಕಟ್ಟುಪಾಡುಗಳು ನಮ್ಮ ಸ್ವಾತಂತ್ಯವನ್ನು ನಿಯಂತ್ರಿಸುತ್ತವೆ. ಇದನ್ನು ಮೀರುವುದು ತುಂಬಾ ಸಾಹಸದ ಕೆಲಸವೇ ಸರಿ. ಇದಕ್ಕೆ ಒಳನೋಟದ ಮತ್ತು ಚಾಣಕ್ಷತೆಯ ನಡೆ ಬೇಕಾಗುತ್ತದೆ. ಇಲ್ಲವಾದರೆ ಅದು ಸ್ವೇಛ್ಚಾಚಾರವೆಂಬ ಮೂದಲಿಕೆಗೆ ಕಾರಣವಾಗಬಹುದು.

ಆದರೆ ರಾಜಕೀಯ ಸ್ವಾತಂತ್ರ್ಯದ ಮಾತು ಬಂದಾಗ ನಾವು ಇದೆಲ್ಲಕ್ಕಿಂತಲೂ ಹೆಚ್ಚು ಗೊಂದಲಕ್ಕಿಡಾದಂತೆ ನನಗೆ ಭಾಸವಾಗುತ್ತೇನೆ. ಯಾಕೆಂದರೆ ನಾವು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡವರು. ಅಂದರೆ ಇಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಎಂತಹ ಪ್ರಜೆಗಳು? ಎಂತಹ ಪ್ರಭುಗಳು?

ಕಣ್ಣೆದುರಿನಲ್ಲೇ ಇದೆ, ನಮ್ಮ ರಾಜ್ಯದ ರಾಜಕೀಯ ದೊಂಬರಾಟಗಳು. ಇದಕ್ಕೆ ನಾವು ಕೇವಲ ರಾಜಕಾರಣಿಗಳನ್ನು ದೂರಿ ಪ್ರಯೋಜನವಿಲ್ಲ. ಅವರು ನಾವು ಆರಿಸಿ ಕಳುಹಿಸಿರುವ ನಮ್ಮ ಪ್ರತಿನಿಧಿಗಳು. ಅವರು ತಪ್ಪು ಕಾರ್ಯಗಳನ್ನೆಸಗುತ್ತಿದ್ದರೆ ಅದರಲ್ಲಿ ನೈತಿಕವಾಗಿ ನಾವು ಕೂಡಾ ಪಾಲುದಾರರು!

ಒಂದು ದಶಕದಿಂದ ಈಚೆಗೆ ನಮ್ಮ ಆದ್ಯತೆಗಳು ಬದಲಾಗಿವೆ.ನಾವೀಗ ಜಾಗತೀಕರಣದ ಯುಗದಲ್ಲಿದ್ದೇವೆ. ಪ್ರಪಂಚವೇ ಒಂದು ಹಳ್ಳಿಯಾಗಿದೆ. ಇಲ್ಲಿ ಎಲ್ಲವೂ ಮಾರಟಕ್ಕಿಟ್ಟ ವಸ್ತುಗಳೇ. ಮೂರ್ತ ವಸ್ತುಗಳಾದ ಭೂಮಿ, ಚಿನ್ನ, ಕಬ್ಬಿಣ ಮುಂತಾದ ಖನಿಜ ಸಂಪತ್ತಿನ ಮಾತು ಹಾಗಿರಲಿ ,ಜಾತಿ, ಧರ್ಮ, ದೇವರು, ವೃತ್ತಿನಿಷ್ಟೆ, ಸೌಂದರ್ಯ ಕೊನೆಗೆ ಹೆಣ್ತತನದಂತಹ ಅಮೂರ್ತ ವಿಚಾರಗಳೂ ಕೂಡಾ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೈಪೋಟಿ ಬೆಲೆಗೆ ಮಾರಟವಾಗುತ್ತಿದೆ. ರಾಜಕಾರಣಿಗಳು ಇವುಗಳ ಪ್ರಮುಖ ದಲ್ಲಾಳಿಗಳಾಗುತ್ತಿದ್ದಾರೆ. ಹಣ ಎಲ್ಲವನ್ನೂ ಆಳುತ್ತಲಿದೆ. ಕುರುಡು ಕಾಂಚಾಣದ ಮೋಡಿ ಮನುಷ್ಯತ್ವವನ್ನೇ ಮಂಕಾಗಿಸಿದೆ.

ಸ್ವಾತಂತ್ರ್ಯವನ್ನು ಯಾರೋ ನಮಗೆ ಧಾರೆಯೆರೆದು ಕೊಡುವುದಿಲ್ಲ. ಅದನ್ನು ನಾವೇ ಕಂಡುಕೊಳ್ಳಬೇಕು; ಪಡೆದುಕೊಳ್ಳಬೇಕು. ಸ್ವಾತಂತ್ರ್ಯದ ಹಂಬಲ ಮೂಡಬೇಕಾದರೆ ತಾನು ಬಂಧನದಲ್ಲಿದ್ದೇನೆ ಎಂಬ ಅರಿವು ಮೂಡಬೇಕಲ್ಲವೇ? ಗ್ರಾಮೀಣ ಪ್ರದೇಶದಲ್ಲಿರುವ ಮಹಿಳೆಯೊಬ್ಬಳಿಗೆ ಕೂಡಾ ಸ್ವಾತಂತ್ರ್ಯದ ಬಗ್ಗೆ ತನ್ನದೇ ಆದ ಕಲ್ಪನೆಯಿರುತ್ತದೆ. ಆದರೆ ಅದು ನಮ್ಮಂತಹ ನಗರ ಕೇಂದ್ರಿತ ಬದುಕಿನ ಅರ್ಥಿಕ ಸ್ವಾತಂತ್ರ್ಯದ ಕಲ್ಪನೆಯ ಮೇಲೆ ರೂಪಿತವಾದ ಸ್ವಾತಂತ್ರ್ಯಕಿಂತ ಭಿನ್ನ. ಆಕೆ ಕೌಟುಂಬಿಕ ಚೌಕಟ್ಟುಗಳನ್ನು ಮೀರಲಾರಳು. ಅಲ್ಲಿದ್ದುಕೊಂಡೇ ತನ್ನ ಅಸ್ತಿತ್ವಕ್ಕಾಗಿ ಹೊರಾಡುತ್ತಾಳೆ. ಆದರೆ ಗಂಡಸು ಹಾಗಲ್ಲ.

ಪ್ರಕೃತಿ ಗಂಡಸನ್ನು ಸ್ವಛ್ಚಂದವಾಗಿ, ಮುಕ್ತವಾಗಿ ಸೃಷ್ಟಿಸಿದೆ. ಆತನಿಗೆ ಯಾವುದೇ ಜವಾಬ್ದಾರಿಗಳಿಲ್ಲ. ಕುಟುಂಬ ವ್ಯವಸ್ಥೆ ಜಾರಿಗೆ ಬಂದ ಮೇಲೆ ಮನೆಯ ಯಜಮಾನನಾಗಿ, ಗೃಹಸ್ಥನಾಗಿ ಆತನಿಗೆ ಕೆಲವೊಂದು ಜವಾಬ್ದಾರಿಗಳನ್ನು ಸಮಾಜ ನೀಡಿತ್ತು. ಅದನ್ನಾತ ತೀರಾ ಇತ್ತೀಚಿನವರೆಗೂ ತಕ್ಕ ಮಟ್ಟಿಗ ನಿರ್ವಹಿಸುತ್ತಾನೂ ಬಂದಿದ್ದ. ಆದರೆ ಈಗ ಆತ ಆ ಜವಾಬ್ದಾರಿಯನ್ನೆಲ್ಲಾ ಪತ್ನಿಯ ಹೆಗಲ ಮೇಲೆ ಜಾರಿಸಿದ್ದಾನೆ. ನಗರದಲ್ಲಿ ಈ ಬದಲಾವಣೆ ನಮಗೆ ಎದ್ದು ಕಾಣುತ್ತದೆ. ಅಂದರೆ ಆಧುನಿಕ ಮಹಿಳೆಗೆ ಗಂಡನ ಅವಶ್ಯಕತೆ ಇದೆಯೇ? ಬಹುಶಃ ಇದ್ದಂತಿಲ್ಲ.

ನಿಸರ್ಗ ಸ್ತ್ರೀಗೆ ಪಾಲನೆಯ ಮತ್ತು ವಂಶಾಭಿವೃದ್ಧಿಯ ಜವಾಬ್ದಾರಿಯನ್ನು ನೀಡಿದೆ. ಆಕೆಯ ಗುಣಮಟ್ಟದ, ಅಮೂಲ್ಯ ಬದುಕು ಇದಕ್ಕಾಗಿಯೇ ಕಳೆದು ಹೋಗುತ್ತದೆ. ಹಾಗೆ ಕಳೆದು ಹೋಗುತ್ತಿರುವುದರ ಬಗ್ಗೆ ಹಿಂದಿನ ಕಾಲದ ಮಹಿಳೆಗೆ ಅರಿವಿರಲಿಲ್ಲ. ಆದರೆ ಇಂದಿನ ಮಹಿಳೆಗೆ ಅದು ಅರಿವಾಗುತ್ತಲಿದೆ. ಹಾಗಾಗಿ ಆಕೆ ತನಗೆ ಪ್ರಕೃತಿ ಹೊರಿಸಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿದ್ದಾಳೆ. ತನ್ನೊಳಗೆ ಕಂಪಾರ್ಟ್ ಮೆಂಟ್ ಗಳನ್ನು ಸೃಷ್ಟಿಸಿಕೊಂಡು ಅದರೊಳಗೇ ತನ್ನ ಸುಖದ ಹಾದಿಯನ್ನು ಕಂಡುಕೊಳ್ಳುತ್ತಿದ್ದಾಳೆ. ಅಲ್ಲಿ ಆಕೆ ಯಾರಿಗೂ ಅವಲಂಬಿತಳಲ್ಲ.

ಸ್ವತಂತ್ರನಾಗುವುದು ಎಂದರೆ ಬಂದನಗಳನ್ನು ಕಳಚಿಕೊಳ್ಳುತ್ತಾ ಮುನ್ನಡೆಯುವುದು ಎಂದರ್ಥ. ತೊಟ್ಟು ಕಳಚಿ ಹಣ್ಣು ಕೆಳಗೆ ಬಿದ್ದಂತೆ. ಒಮ್ಮೆ ನೆಲಕ್ಕೆ ಬಿದ್ದ ಮೇಲೆ ಮತ್ತೆಂದೂ ಅದು ತೊಟ್ಟಿಗೆ ಅಂಟಿಕೊಳ್ಳದು. ಅದು ಬಿಡುಗಡೆಯ ಸುಖ. ಆದರೆ ನಾವು ಹುಲುಮಾನವರು; ಸಂಸಾರವೆಂಬ ಮೋಹಪಾಶದಲ್ಲಿ ಬಿದ್ದು ಒದ್ದಾಡುತಿರುವೆವು. ಒಂದು ಹಂತದಲ್ಲಿ ಇದಲ್ಲದರಿಂದ ಮುಕ್ತಿಯನ್ನು ಪಡೆಯಬೇಕು. ಅದು ನಮ್ಮೊಳಗೆ ನಡೆಯುವ ಅಂತರ್ಯುದ್ಧ. ಆ ಯುದ್ಧವನ್ನು ನಿಭಾಯಿಸಲು ಗೊತ್ತಾದರೆ ನಾವು ಪರಮ ಸುಖಿಗಳು. ಹೊರಗಿನ ಯಾವ ಬಂಧನಗಳೂ ನಮ್ಮನ್ನು ಎನು ಮಾಡಲಾಗದು.

[ ವಿಜಯ ನೆಕ್ಸ್ಟ್ ಗಾಗಿ ಬರೆದ ಲೇಖನ ]

2 comments:

ಚುಕ್ಕಿಚಿತ್ತಾರ said...

liked..

sunaath said...

ಪ್ರಕೃತಿಯು ಹೆಣ್ಣಿನ ಮೇಲೆ ಕೆಲವೊಂದು ಬಂಧನಗಳನ್ನು ಹಾಕಿದೆ. ಆದರೆ ಈ ಬಂಧನಗಳ ಮೂಲಕವೇ ಗಂಡಸು ಹೆಣ್ಣನ್ನು ಶೋಷಿಸುತ್ತಿರುವದಕ್ಕಾಗಿ ವ್ಯಥೆಯಾಗುತ್ತಿದೆ. ಈ ಶೋಷಣೆಯನ್ನು ಮೀರುವ ಸ್ವಾತಂತ್ರ್ಯವು ಅವಳಿಗೆ ಬೇಕು. ನಿಮ್ಮ ಲೇಖನ ಹೃದ್ಯವಾಗಿದೆ.