
ಆಧ್ಯಾತ್ಮ ಸಾಧನೆಗೆ ಸಂಬಂಧಪಟ್ಟಂತೆ ಭಾರತೀಯರು ಏರಿದ ಎತ್ತರಕ್ಕೆ ಎತ್ತರಕ್ಕೆ ಸರಿಸಾಟಿಯಿಲ್ಲ. ಅವರ ಸಾಧನೆಯ ಫಲಶ್ರುತಿಯಲ್ಲಿ ಸದಾ ಆನಂದದ ಪ್ರೇಮರಸ. ಆದರೆ ಗಂಡು-ಹೆಣ್ಣಿನ ಪ್ರೇಮಕ್ಕೆ ಸಂಬಂಧಪಟ್ಟಂತೆ ಭಾರತೀಯರ ದೃಷ್ಟಿಕೋನ ವಿಶಾಲವಾಗಿಲ್ಲ.. ನಮಗೆ ಪ್ರೇಮದ ಉತ್ಕಟತೆಯನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲವೇನೋ ಎಂಬ ಗುಮಾನಿ ಬಹಳ ಹಿಂದಿನಿಂದಲೂ ನನಗಿದೆ. ಇಲ್ಲಿ ಪ್ರೇಮವೆಂಬುದು ದಾಸ್ಯದ ಹೊದಿಕೆಯಡಿ ಅಡಗಿ ಕುಳಿತಿದೆ.
ಪ್ರೇಮದ ಉತ್ಕಟತೆ ಎಂದರೆ ಎರಡು ದೇಹಗಳು, ಎರಡು ಮನಸುಗಳು ಒಂದಾಗಿ ಕರಗಿ ಹೋಗುವುದು; ಐಕ್ಯವಾಗುವುದು; ತನ್ನತನವನ್ನು ಕಳೆದುಕೊಳ್ಳುವುದು; ಶೂನ್ಯ ಸ್ಥಿತಿಯನ್ನು ತಲುಪುವುದು. ಅಂದರೆ ವರ್ತಮಾನವನ್ನು ಸಂಪೂರ್ಣವಾಗಿ ಮರೆಯುವುದು.
ಇಂತಹ ಮರೆಯುವಿಕೆ ನಮ್ಮ ಪುರಾಣ, ಇತಿಹಾಸಗಳಲ್ಲಿ ಎಲ್ಲಿಯಾದರೂ ದಾಖಲಾಗಿದೆಯೇ? ಹಾಗೆ, ಪ್ರೇಮದ ದಾಖಲಾತಿಯೆಂದು ನಮಗೆ ಅಲ್ಲಿ ಇಲ್ಲಿ ಸಿಗುವ ಒಂದೆರಡು ಉದಾಹರಣೆಗಳು ಪ್ರೇಮದ ಗಾಢವಾದ ಅನುಭವವನ್ನು ನೀಡಬಲ್ಲಷ್ಟು ಶಕ್ತವಾದುದೇ?
ದುಶ್ಯಂತ-ಶಕುಂತಲೆಯರದ್ದು ಪ್ರೇಮ ವಿವಾಹ. ಅವರದ್ದು ಮೊದಲ ನೋಟದ ಪ್ರೇಮ ಎಂದೆಲ್ಲಾ ಬಣ್ಣಿಸುವುದುಂಟು. ಆದರೆ ಅದು ನಿಜವೇ? ನಿಜವಿದ್ದಿದ್ದರೆ ಶಕುಂತಲೆಯ ದೈಹಿಕ ಸಂಪರ್ಕ ಮಾಡಿ ಅವಳನ್ನು ದುಶ್ಯಂತ ಮರೆತುಬಿಡುತ್ತಿರಲಿಲ್ಲ. ಕಾಮ ವಿಜೃಂಭಿಸಿದ ಕ್ಷಣಗಳಲ್ಲಿ ಅವರಿಬ್ಬರು ಒಂದಾಗಿದ್ದರು. ಅನಂತರ ಪುರುಷ ಸಹಜ ಗುಣದಂತೆ ಆತ ಅವಳನ್ನು ಮರೆತುಬಿಟ್ಟಿದ್ದ.
ನಳ-ದಮಯಂತಿಯನ್ನು ಅನುರೂಪ ಜೋಡಿಯೆಂದು ಹೇಳುವುದುಂಟು. ಆದರೆ ದಮಯಂತಿಗೆ ನಳ ಮಾಡಿದ್ದೇನು? ತನ್ನ ಕಷ್ಟ ಸುಖಗಳಲ್ಲಿ ನೆರಳಿನಂತೆ ಹಿಂಬಾಲಿಸಿದ್ದ ಸತಿಯನ್ನು ದಟ್ಟಡವಿಯಲ್ಲಿ ಒಂಟಿಯಾಗಿ ಬಿಟ್ಟು ಓಡಿಹೋಗಿಬಿಟ್ಟ. ಸಾಲದೆಂಬಂತೆ, ಹೋಗುವಾಗ ಅವಳುಟ್ಟ ಸೀರೆಯಲ್ಲಿ ಅರ್ಧ ಭಾಗವನ್ನೇ ಹರಿದುಕೊಂಡು ಹೋದದ್ದು ಬೇರೆ!!. ಇಂಥವನನ್ನು ದಮಯಂತಿ ಮತ್ತೆ ಹುಡುಕಿ ಯಾಕೆ ಮರು ಮದುವೆಯಾದಳೋ!
ಯಾಕೋ. ಪ್ರೇಮದ ಉತ್ಕಟತೆಯ ಬಗ್ಗೆ ಮಾತಾಡುವಾಗಲೆಲ್ಲಾ ನನಗೆ ನಮ್ಮ ಪುರಾಣಗಳ ಸಾತ್ವಿಕ ಹಿರೋಗಳು, ಆದರ್ಶಪುರುಷರು ಕಣ್ಣ ಮುಂದೆ ಬರುವುದೇ ಇಲ್ಲ. ನಮ್ಮ ಪುರಾಣಗಳ ಕಥಾ ನಾಯಕರಿಗೆ, ಪ್ರೇಮ ಎಂಬುದು ತುಂಬಾ ಕೋಮಲವಾದುದು, ಅದು ಭಾವಕೋಶಕ್ಕೆ ಸಂಬಂಧಪಟ್ಟದ್ದು ಎಂಬ ಅರಿವೇ ಇದ್ದಂತಿರಲಿಲ್ಲ.
ಹೆಣ್ಣೆಂಬುದು ಪಣಕ್ಕಿಟ್ಟ ವಸ್ತು. ಯಾರು ಬೇಕಾದರೂ ಅದಕ್ಕೆ ಆಸೆ ಪಡಬಹುದು, ಅದನ್ನು ಗೆದ್ದು ತರುವುದೇ ನ್ಯಾಯೋಚಿತವಾದುದು ಎಂಬುದು ಪ್ರಚಲಿತದಲ್ಲಿದ್ದಂತಿತ್ತು. ನಮ್ಮ ಗಂಡಸರಿಗೆ ಪ್ರೇಮ ಮತ್ತು ಯುದ್ಧದಲ್ಲಿ ಅಂತಹ ವ್ಯತ್ಯಾಸವೇನೂ ಇದ್ದಂತಿರಲಿಲ್ಲ. ಇಲ್ಲಿ ಗೆಲುವೇ ಮುಖ್ಯ. ಅದನ್ನು ಪಡೆಯುವ ದಾರಿ ಮುಖ್ಯವಾಗಿರಲಿಲ್ಲ.
ಅದರೆ ಪ್ರೇಮದಲ್ಲಿ ಸೋಲೇ ಗೆಲುವು. ಅದನ್ನು ಚೆನ್ನಾಗಿ ಅರಿತುಕೊಂಡವರು ನಮ್ಮ ಪುರಾಣಗಳಲ್ಲಿ ರಾಕ್ಷಸರೆಂದು ಬಿಂಬಿತರಾದ ರಾವಣ, ಭಸ್ಮಾಸುರ, ಕೀಚಕ, ಶರ್ಮಿಸ್ಠೆ, ಶೂರ್ಪನಖಿ,ಹಿಡಿಂಬೆ…ಮುಂತಾದವರು. ಪ್ರೇಮಕ್ಕಾಗಿ ಪ್ರಾಣವನ್ನೇ ಕಳೆದುಕೊಂಡ ಇಂತವರ ಮುಂದೆ ರಾಮ, ದುಷ್ಯಂತರದ್ದು ಪೇಲವ ವ್ಯಕ್ತಿತ್ವವೇ.
ರಾಕ್ಷಸರೆಲ್ಲಾ ಹಾಗೆಯೇ. ಅವರು ಅತ್ಯಂತ ಮೋಹಿತರು. ಅವರು ಮೆಚ್ಚಿದವರನ್ನು ಜೀವದುಂಬಿ ಪ್ರೀತಿಸಬಲ್ಲರು. ಹಾಗೆಯೇ ಪೋಷಿಸಬಲ್ಲರು ಕೂಡಾ. ಅವರಿಗೆ ನಗರ ಸಂಸ್ಕೃತಿಯ ನಯ -ನಾಜೂಕು, ಕಪಟ-ಮೋಸಗಳು ತಿಳಿಯುತ್ತಿರಲಿಲ್ಲ. ರಾಕ್ಷಸರ ಪ್ರೇಮದ ತೀವ್ರತೆಯನ್ನು, ಆ ಉತ್ಕಟತೆಯನ್ನು ನೆನೆಸಿಕೊಂಡಾಗಲೆಲ್ಲಾ ನನಗೆ ಅಕ್ಕ ಮಹಾದೇವಿಯ ’ಅಪ್ಪಿದರೆ ಅಸ್ತಿಗಳು ನುಗ್ಗಿ ನುರಿಯಾಗಬೇಕು…ಮಚ್ಚು ಅಚ್ಚುಗವಾಗಿ ಗರಿದೊರದಂತಿರಬೇಕು’ ಎಂಬ ವಚನವೇ ನೆನಪಿಗೆ ಬರುತ್ತದೆ.. ಆ ಕ್ಷಣದ ಬದುಕನ್ನು ಅನುಭವಿಸುವಲ್ಲಿ ರಾಕ್ಷಸರೇ ಮುಂದು.
ಪುರಾಣಗಳಲ್ಲಿ ಚಿತ್ರಿತರಾದ ರಾಕ್ಷಸರೆಲ್ಲಾ ಈ ನೆಲದ ಮೂಲನಿವಾಸಿಗಳಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಇದ್ದರೂ ಇರಬಹುದು. ಕಾಡಿನಲ್ಲಿ ವಾಸಿಸುತ್ತಿದ್ದ ಅವರ ಮೇಲೆ ನಗರ ಸಂಸ್ಕೃತಿಯ ಜನತೆ ಆಗಾಗ ದಾಳಿ ನಡೆಸುತ್ತಿದ್ದಿರಬಹುದು. ಅದಕ್ಕಾಗಿ ರಾಕ್ಷಸರು ಕೂಡಾ ಪ್ರತಿ ದಾಳಿ ಕೈಗೊಂಡಿರಬಹುದು. ಆದರೆ ಅಕ್ಷರ ಒಡೆತನ ಹೊಂದಿದ ಪುರಾಣಗಳ ಸೃಷ್ಟಿಕರ್ತರು, ತಮ್ಮ ಕೃತಿಗಳಲ್ಲಿ ಅವರನ್ನು ರಾಕ್ಷಸರೆಂದು ಅಮಾನುಷವಾಗಿ ಚಿತ್ರಿಸಿರಬಹುದು.
ನಮ್ಮ ಪುರಾಣ ಪ್ರಪಂಚದಲ್ಲಿ ರಾವಣನಿಗಿಂತ ಮಿಗಿಲಾದ ಪ್ರತಿ ನಾಯಕರಿಲ್ಲ. ಯಾರನ್ನಾದರೂ ಅತ್ಯಂತ ಹೀನಾಯವಾಗಿ, ನಿಕೃಷ್ಟವಾಗಿ ಕಾಣಬೇಕೆಂದರೆ ’ ಅವನೊಬ್ಬ ರಾವಣ’ ಎಂದುಬಿಡುತ್ತೇವೆ. ಆದರೆ, ನೀವೇ ಹೇಳಿ; ಅಂತಹ ದುಷ್ಟಕಾರ್ಯವನ್ನು ಅವನೇನು ಮಾಡಿದ್ದಾನೆ?
ಶ್ರೀರಾಮನ ಮಡದಿಯಾದ ಸೀತೆಯನ್ನು ಅಪಹರಿಸಿದ್ದು ರಾವಣನ ಮೇಲಿರುವ ಬಹುದೊಡ್ಡ ಆರೋಪ. ಸೀತೆಯನ್ನು ದೈಹಿಕವಾಗಿ ಹೊಂದಲೇ ಬೇಕೆಂಬ ಅಭೀಪ್ಸೆಯಿಂದ ಅಪಹರಿಸಿದ್ದರೆ ಅವಳನ್ನು ಬಲತ್ಕಾರ ಮಾಡಬಹುದಿತ್ತಲ್ಲವೇ? ಯಾಕೆಂದರೆ ಅವನಿಗೆ ಆ ಇತಿಹಾಸ ಇದೆ. ಹಿಂದೆ ಕುಶಧ್ವಜನ ಪುತ್ರಿಯಾದ ವೇದವತಿಯನ್ನು ಹಾಗೂ ದೇವಲೋಕದ ನರ್ತಕಿ ರಂಭೆಯನ್ನು ಆತ ಬಲತ್ಕಾರದಿಂದ ಭೋಗಿಸಿದ್ದ. ಆತ ಮಹಾ ಪರಾಕ್ರಮಿಯಾಗಿದ್ದ; ದಶಕಂಠನಾಗಿದ್ದ,ಅಂದರೆ ಸಾಮಾನ್ಯ ಮನುಷ್ಯನಿಗಿಂತ ಬುದ್ಧಿವಂತನಾಗಿದ್ದ.-ಎಂಟೆದೆಯ ಬಂಟನಂತೆ. ತೀವ್ರ ವ್ಯಾಮೋಹಿಯಾಗಿದ್ದ.
ರಾವಣನಲ್ಲಿ ಸಾತ್ವಿಕ, ರಜೋ ಮತ್ತು ತಮೋ ಗುಣಗಳು ಮೇಳೈಸಿದ್ದವು. ಅದಕ್ಕೆ ಕಾರಣವೂ ಇತ್ತು. ಆತನ ತಂದೆ ವಿಶ್ವವಸು-ಆತನ ಇನ್ನೊಂದು ಹೆಸರು ಪುಲಸ್ತ್ಯ-ಬ್ರಹ್ಮನ ಮಾನಸ ಪುತ್ರ. ತಾಯಿ ಕೈಕಸಿ. ಆಕೆ ಸುಮಾಲಿ ಎಂಬ ರಾಕ್ಷಸನ ಮಗಳು. ಇನ್ನು ರಾವಣನ ಪಟ್ಟದರಸಿ ಮಂಡೋದರಿ ರಾಕ್ಷಸರ ಶಿಲ್ಪಿಯಾದ ಮಯನ ಮಗಳು. ಆಕೆಯ ತಾಯಿ ಹೇಮೆ ಎಂಬ ಅಪ್ಸರೆ. ಇಂತಹ ಹೈಬ್ರೀಡ್ ತಳಿಯ, ವಿಭಿನ್ನ ಹಿನ್ನೆಲೆಯ ರಾವಣ ಸಹಜವಾಗಿಯೇ ಧೀರೋದಾತ್ತ ನಾಯಕನಾಗಿದ್ದ.
ರಾವಣನಿಗೆ ಸೀತೆಯಲ್ಲಿ ನಿಜವಾದ ಪ್ರೀತಿ ಹುಟ್ಟಿರಬೇಕು. ಹಾಗಾಗಿ ಅವಳನ್ನು ಅಪಹರಿಸಿ ತಂದು ಅತ್ಯಂತ ಸುಂದರ ಉದ್ಯಾನವನವಾದ ಆಶೋಕ ವನದಲ್ಲಿರಿಸಿದ. ಅವಳಿಗೆ ಇಷ್ಟವಾಗುವ ರೀತಿಯಲ್ಲಿ ತಾನು ಬದಲಾಗಲು ಯತ್ನಿಸಿದ. ತನ್ನ ನಡೆ-ನುಡಿ, ವೇಷ-ಭೂಷಣಗಳನ್ನು ಬದಲಾಯಿಸಿಕೊಂಡ. ಈ ರೀತಿಯಲ್ಲಿ ಬದಲಾದ ರಾವಣನಿಗೆ’ ಶೃಂಗಾರ ರಾವಣ’ ವೆಂಬ ಪ್ರತ್ಯೇಕ ಅಭಿದಾನವೇ ಯಕ್ಷಗಾನ ಪ್ರಸಂಗಗಳಲ್ಲಿದೆ. ಈ ಶೃಂಗಾರ ರಾವಣ ಅಪ್ಪಟ ಪ್ರೇಮಿ. ಪ್ರೇಮಿಸುತ್ತಲೇ ಕೊನೆಗೆ ಅವಳಿಗಾಗಿ ಪ್ರಾಣವನ್ನು ಕೂಡಾ ತೆರುತ್ತಾನೆ.
ಈ ರಾಕ್ಷಸರು ಛದ್ಮವೇಷಧಾರಿಗಳು. ಮೋಹಕ್ಕೆ ಒಳಗಾದಾಗ, ಪ್ರೀತಿಗೆ ಬಿದ್ದಾಗ ತಾವು ಮೆಚ್ಚಿದವರ ಕಣ್ಮನಗಳಿಗೆ ಹಿತವಾಗುವಂತೆ ಬೇಕಾದಂಥಹ ರೂಪವನ್ನು ಹೊಂದುತ್ತಿದ್ದರು. ಶೂರ್ಪನಖಿಯ ಉದಾಹರಣೆಯೇ ಸಾಕಲ್ಲ? ಅವಳದ್ದು ಪ್ರಥಮ ನೋಟದ ಪ್ರೇಮ. ಶ್ರೀರಾಮನ ರೂಪಕ್ಕೆ ಮನಸೋತಳು. ಮದುವೆಯಾಗೆಂದು ಪೀಡಿಸಿದಳು. ಪ್ರೇಮದ ಕೋಮಲ ಭಾವನೆಗಳನ್ನು ಅರ್ಥ ಮಾಡಿಕೊಳ್ಳದ ಶ್ರೀರಾಮ ಅವಳೋಡನೆ ಕ್ರೂರವಾಗಿ ವರ್ತಿಸಿದ. ಅವಳ ಕಿವಿ ಮೂಗುಗಳನ್ನು ಕತ್ತರಿಸಿ ವಿರೂಪಗೊಳಿಸಿದ. ಹೆಣ್ತನದ ದ್ಯೋತಕವಾದ ಸ್ತನಗಳನ್ನು ಕತ್ತರಿಸಿ ಸ್ತ್ರೀತ್ವಕ್ಕೆ ಅವಮಾನ ಮಾಡಿದ ಸ್ಯಾಡಿಸ್ಟ್ ಅವನು. ಅವಮಾನಿತಳಾಗಿ, ಅಂಗಭಂಗಿತಳಾದ ಆಕೆ ತನ್ನಣ್ಣ ರಾವಣನಲ್ಲಿಗೆ ಬಂದು ರಾಮನ ಬಗ್ಗೆ ಚಾಡಿ ಹೇಳಿದಳು. ಒಬ್ಬ ಗಂಡಸನ್ನು ಕೆಣಕಬೇಕಾದರೆ, ಅವಮಾನಿಸಬೇಕಾದರೆ ಅವನ ಬಳಗಕ್ಕೆ ಸೇರಿದ ಸ್ತ್ರೀಯನ್ನು ಅಪಹರಿಸುವುದು, ಅತ್ಯಾಚಾರ ಮಾಡುವುದು, ಬೆತ್ತಲೆ ಮೆರವಣಿಗೆ ಮಾಡುವುದು ಈ ಮಣ್ಣಿನಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ರೀತಿಯಲ್ಲವೇ? ರಾವಣನೂ ಅದನ್ನೇ ಮಾಡಿದ್ದಾನೆ.
ಒಬ್ಬ ಶಿವ ಮತ್ತು ಒಬ್ಬ ಕೃಷ್ಣನ ಹೊರತಾಗಿ ಪುರಾಣದ ಯಾವ ನಾಯಕ ತಾನೆ ಸ್ತ್ರೀಯನ್ನು ಸಮಾನ ಗೌರವದಿಂದ ಕಂಡಿದ್ದಾರೆ? ರಾಮನಂತೂ ಅಲ್ಲ. ಅವನು ವಿಶ್ವಾಮಿತ್ರ ಹೇಳಿದನೆಂದು ಸ್ವಯಂವರದಲ್ಲಿ ಶೌರ್ಯ ಪ್ರದರ್ಶನ ಮಾಡಿ ಸೀತೆಯನ್ನು ಗೆದ್ದು ತಂದ. ಜೀವನದುದ್ದಕ್ಕೂ ಆ ಸುಕೋಮಲೆಯನ್ನು ಕಷ್ಟ ಕೋಟಲೆಗಳಿಗೆ ಈಡು ಮಾಡಿದ. ಕೊನೆಗೆ ಆಕೆ ಆತ್ಮಹತ್ಯೆಗೆ ಶರಣಾಗುವಷ್ಟು ಅವಮಾನಿಸಿದ. ಪಾಂಡವರು ಕೂಡಾ ಆಕಸ್ಮಿಕವಾಗಿ ದ್ರೌಪದಿಯನ್ನು ಸ್ವಯಂವರದಲ್ಲಿ ಗೆದ್ದು ತಂದವರು. ಮಾಹಾವಿಷ್ಣುವಿಗೆ ಲಕ್ಷ್ಮಿ ಸಮುದ್ರ ಮಥನದಲ್ಲಿ ಅನಾಯಸವಾಗಿ ದೊರೆತವಳು.
ಸೀತೆ, ದ್ರೌಪದಿ,ಅಹಲ್ಯೆ, ದಮಯಂತಿ ಮಂಡೋದರಿ ಸೇರಿದಂತೆ ನಮ್ಮ ಪುರಾಣದ ಯಾವ ಮಹಿಳೆಯ ಬದುಕೂ ಪ್ರೇಮಮಯ ಆಗಿರಲಿಲ್ಲ.ವಿಷಾಧದ ಎಳೆಯೊಂದು ಸದಾ ಅವರ ಬದುಕಿನಲ್ಲಿತ್ತು. ಅಂಬೆಯಂತೂ ಪುರುಷ ಸಮಾಜದಲ್ಲಿ ಪುಟ್ ಬಾಲಿನಂತೆ ಅಲ್ಲಿಂದಿಲ್ಲಿಗೆ ಒದೆಯಲ್ಪಟ್ಟವಳು. ಪ್ರತಿಭಟನೆಯ ಕುಂಡದಂತಿದ್ದರೂ ನಿಷ್ಕಾರಣವಾಗಿ ಉರಿದು ಹೋದವಳು.
ನಮ್ಮ ಪುರಾಣಗಳಲ್ಲಿ ,ಪ್ರೇಮ-ಪ್ರೀತಿಗಳನ್ನು ಹುಡುಕೋಣವೆಂದು ಹೊರಟರೆ ನಮಗೆ ಸಿಗುವುದು ಒಂದೋ, ಅನೈತಿಕ ಸಂಬಂಧಗಳು. ಇಲ್ಲವೇ, ಪುರುಷಸಿಂಹನ ಘರ್ಜನೆಗಳು. ಸ್ತೀಯರ ಕೋಮಲ ಭಾವನೆಗಳು ಎಲ್ಲೂ ದಾಖಲಾಗುವುದೇ ಇಲ್ಲ. ಹೆಣ್ಣು ಗಂಡಿಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾಳೆ; ಒಪ್ಪಿಸಿಕೊಳ್ಳುತ್ತಾಳೆ, ಗಂಡು ಅವಳನ್ನು ಸ್ವೀಕರಿಸುತ್ತಾನೆ. ಅರ್ಪಣೆಯ ಹಂತದಲ್ಲಿ ಆಕೆ ಆತನ ಪಾದ ಮೂಲದಲ್ಲಿ ಕುಸಿಯುತ್ತಾಳೆ. ಗಂಡು ಉದಾರತೆಯಿಂದ ಆಕೆಯನ್ನು ಮೇಲೆತ್ತುತ್ತಾನೆ. ಈ ಚಿತ್ರಣವೇ ಭಾರತೀಯರ ಚಿತ್ತ ಭಿತ್ತಿಯಲ್ಲಿ ಮೂಲ ಪ್ರತಿಮೆಯಾಗಿ ಉಳಿದುಕೊಂಡು ಬಂದಿದೆ. ಎಲ್ಲೋ ಒಂದು ಕಡೆ ಭೀಮ-ಹಿಡಿಂಬೆಯಂತ ಅಪರೂಪದ ಪ್ರೇಮ ಪ್ರಕರಣ ಇದಕ್ಕೆ ಅಪವಾದವಾಗಿ ಕಾಣುತ್ತದೆ. ಪಂಚಪಾಂಡವರಲ್ಲಿ ಮೊದಲು ಮದುವೆಯಾದವನು ಈ ಭೀಮ. ತನ್ನ ಅಣ್ಣ ಕಿಮ್ಮೀರನನ್ನು ಭೀಮ ಕೊಂದರೂ ಅವನ ಶೌರ್ಯಕ್ಕೆ ಒಲಿದು ಬಂದವಳು ಹಿಡಿಂಬೆ.
ಇನ್ನು ಕೃಷ್ಣನನ್ನು ಈ ಲೋಕದ ಯಾವ ಗಂಡಸಿಗೂ ಹೋಲಿಸುವಂತಿಲ್ಲ.ಅವನೊಬ್ಬ ಪರಿಪೂರ್ಣ ಮನುಷ್ಯ. ’ನಾನು ನಿನಗೆ ಒಲಿದಿದ್ದೇನೆ’ ಎಂದು ಬಯಸಿ ಬಂದ ರುಕ್ಮಿಣಿಯನ್ನು ಹೃದಯದರಸಿಯನ್ನಾಗಿ ಮಾಡಿಕೊಂಡರೂ ಸಮಾನತೆಯ ತುಡಿತವಿದ್ದ ಅಹಂಕಾರಿ ಸತ್ಯಭಾಮೆಯನ್ನು ಪ್ರೇಮದರಸಿಯಾಗಿ ಕಂಡ. ಸತ್ಯಭಾಮೆಯ ಸಹಚರ್ಯದಲ್ಲಿಯೇ ನರಕಾಸುರನನ್ನು ಕೊಂದು ಅವನು ಸೆರೆಯಲ್ಲಿಟ್ಟಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ಬಂಧವಿಮುಕ್ತಗೊಳಿಸಿ, ಅವರೆಲ್ಲರನ್ನೂ ತಾನೇ ಮದುವೆಯಾಗಿ ಅವರೆಲ್ಲರನ್ನೂ ಪ್ರೀತಿ ಜಲದಲ್ಲಿ ಮುಳುಗಿಸಿದ್ದ ಎನ್ನುತ್ತದೆ ಪುರಾಣ!
ರುಕ್ಮಿಣಿ-ಸತ್ಯಭಾಮೆಯರ ನಡುವೆ ಕಣ್ಣುಮುಚ್ಚಾಲೆಯಾಡುವ ಕೃಷ್ಣ ಎಳೆಯ ದಂಪತಿಗಳಿಗೆ ಮಾದರಿಯಾದರೆ ಶಿವ ಮತ್ತು ಪಾರ್ವತಿ ಪ್ರಬುದ್ಧ ದಂಪತಿಗಳಿಗೆ ಮಾದರಿಯಾಗಿ ಕಾಣುತ್ತಾರೆ. ಅವರಲ್ಲಿ ಪರಸ್ಪರ ಗೌರವ ಇದೆ; ಪ್ರೇಮ ಇದೆ. ಅದ್ಯಾವನೋ ಋಷಿ ಸ್ತ್ರೀಯರಿಗೆ ಪೂಜೆ ಸಲ್ಲಿಸುವುದಿಲ್ಲ ಎಂದಾಗ ಪಾರ್ವತಿಗೆ ತನ್ನ ಎಡಪಾರ್ಶ್ವವನ್ನೇ ಬಿಟ್ಟುಕೊಟ್ಟು ಅರ್ಧನಾರೀಶ್ವರನಾದವನು ಶಿವ.
ರಾವಣ,ಭಸ್ಮಾಸುರರಂತಹ ರಾಕ್ಷಸರನ್ನು ಹೊರತು ಪಡಿಸಿದರೆ ತೀವ್ರ ಮೋಹಿತರಾಗಿ ಬದುಕಿದವರೆಂದರೆ ಕೃಷ್ಣ ಮತ್ತು ಶಿವ ಮಾತ್ರ. ಇವರನ್ನು ಬಿಟ್ಟರೆ ನಮ್ಮ ಪುರಾಣಗಳಲ್ಲಿ ಪ್ರೇಮವೇ ಇಲ್ಲ. ಇರುವುದೆಲ್ಲಾ ಕಾಮ ಮತ್ತು ಅಹಂ ಮಾತ್ರ.
ಮೋಹವಿಲ್ಲದ ಬದುಕೊಂದು ಬದುಕೇ? ಅದರಲ್ಲೂ ಗಂಡು ಹೆಣ್ಣಿನ ಪ್ರೇಮದ ವಿಷಯಕ್ಕೆ ಬಂದಾಗ ಒಂದು ಮಿತಿಯ ಒಳಗೆ ಪೊಸೆಸಿವ್ ನೆಸ್ ಇರಲೇಬೇಕು. ನನ್ನನ್ನೇ ಉದಾಹರಣೆಯಾಗಿ ತೆಗೆದುಕೊಂಡರೂ ನನಗೆ ನನ್ನ ಗಂಡ, ನನ್ನ ಗೆಳೆಯ ನನಗೆ ಸಂಪೂರ್ಣ ಬೇಕು. ಅವರನ್ನು ಶೇಖಡವಾರು ಲೆಕ್ಕದಲ್ಲಿ ಹಂಚಿಕೊಳ್ಳುವುದು ನನಗಂತೂ ಸಾಧ್ಯವಿಲ್ಲ. ತುಂಬಾ ಸಂಕುಚಿತವಾಗಿ ಯೋಚಿಸುತ್ತಿದ್ದೇನೆಂದು ಬೇರೆಯವರಿಗನಿಸಬಹುದು. ಆದರೆ ಗಮನಿಸಿ ನೋಡಿ; ನಮ್ಮ ಖಾಸಗಿ ಪ್ರಪಂಚ ತುಂಬಾ ಚಿಕ್ಕದಾಗುತ್ತಿದೆ. ನಮ್ಮನ್ನು ನಾವೇ ನಂಬದಿರುವಂಥ ಸ್ಥಿತಿಗೆ ತಲುಪಿದ್ದೇವೆ. ಹಾಗಿರುವಾಗ ನಮ್ಮವರೆಂದು ನಾವು ಒಪ್ಪಿಕೊಂಡ ಒಂದೆರಡು ಮಂದಿಯಾದರೂ ನಮ್ಮವರಾಗಿಯೇ ಉಳಿಯಬೇಕೆಂದು ಬಯಸುವುದರಲ್ಲಿ ತಪ್ಪೇನಿದೆ?
[ ’ಓ ಮನಸೇ’ ಯಲ್ಲಿ ಪ್ರಕಟವಾದ ಲೇಖನ