Saturday, January 28, 2012

ಗಂಡಸರಿಗೆ ’ಅಮ್ಮ' ಯಾಕೆ ಕಾಡುತ್ತಾಳೆ?
ನನಗೊಬ್ಬ ಗೆಳೆಯನಿದ್ದಾನೆ. ಆತನಿಗೆ ತುಂಬಾ ದುಃಖವಾದಾಗ ಅಥವಾ ಒಳಗಿಂದೊಳಗೆ ಯಾವುದೋ ಯಾತನೆ ಒದ್ದುಕೊಂಡು ಬರುತ್ತಿರುವಾಗ ಆತ ಎರಡು ಪೆಗ್ ಏರಿಸುತ್ತಾನೆ. ಅನಂತರದ್ದೆಲ್ಲಾ ಸ್ವಗತವೇ….ಕೊನೆ ಕೊನೆಗೆ ಆತ, ’ಅಮ್ಮಾ…ಅಮ್ಮಾ..ಎಂದು ಹಲುಬಲು ಪ್ರಾರಂಭಿಸಿಬಿಡುತ್ತಾನೆ. ಅದರ ಅಂತಿಮ ದೃಶ್ಯವೆಂದರೆ, ದೂರದ ಊರಿನಲ್ಲಿರುವ ಅವನ ಅಮ್ಮನಿಗೆ ಪೋನ್ ಮಾಡಿ ಮಾತಾಡುವುದು.

ಕನ್ನಡದ ಹಿರಿಯ ಹಾಸ್ಯ ನಟರೊಬ್ಬರಿದ್ದರು.ಅವರು ಗುಂಡು ಜಾಸ್ತಿಯಾದಂತೆಲ್ಲಾ, ’ಅಮ್ಮಾ..ಅಮ್ಮಾ…’ಎಂದು ಕಣ್ಣೀರು ಹಾಕುತ್ತಾ ಭೋರಿಟ್ಟು ಆಳುತ್ತಿದ್ದರಂತೆ. ಸಿನೇಮಾ ಪತ್ರಕರ್ತರೊಬ್ಬರ ಬಾಯಿಂದ ಈ ಕುರಿತು ರಸವತ್ತಾದ ವರ್ಣನೆಯನ್ನು ನಾನು ಕೇಳಿದ್ದೇನೆ.

ನಮ್ಮ ಹೆಣ್ಣುಮಕ್ಕಳಿಗೆ ಅಮ್ಮ ಮತ್ತು ಅಮ್ಮನ ಮನೆಯೆಂದರೆ ವಿಪರೀತ ಮೋಹ ಎಂದು ಹೇಖುತ್ತಾರೆ. ಕಲಾ ಮಾಧ್ಯಮಗಳಲ್ಲಿ ಅದನ್ನೇ ಬಿಂಬಿಸಲಾಗಿದೆ. ಚಿತ್ರರಂಗದ ಅರ್ಧಕರ್ಧ ಸಿನೇಮಾಗಳು ನಿಂತಿರುವುದೇ ಮಾತೃಪ್ರೇಮದ ಮೇಲೆ.ಅಂತಹದೊಂದು ಅನ್ಯೂಹ ಕಲ್ಪನೆ ಇಲ್ಲದಿರುತ್ತಿದ್ದರೆ ಅಬ್ಬಯ್ಯನಾಯುಡು ಸಿನೇಮಾ ನಿರ್ಮಾಪಕರಾಗುತ್ತಲೇ ಇರಲಿಲ್ಲ!

ಅದರೆ ನನ್ನ ಗ್ರಹಿಕೆಗೆ ಸಿಕ್ಕಷ್ಟು ಹೇಳುವುದಾದರೆ, ’ಅಮ್ಮ’ ಎನ್ನುವ ಪರಿಕಲ್ಪನೆ ಗಂಡಸರನ್ನು ಕಾಡಿದಷ್ಟು ಹೆಣ್ಣು ಮಕ್ಕಳನ್ನು ಕಾಡಿಲ್ಲ! ಹೆಣ್ಣು ಮಕ್ಕಳಿಗೆ ಅಮ್ಮ ಎನ್ನುವುದು ವಾಸ್ತವ. ಗಂಡಸರಿಗೆ ಅದು ಆದರ್ಶ. ಹೆಣ್ಣು ಎಂದಾದರೊಮ್ಮೆ ತಾಯಿಯಾಗಬಹುದು. ಗಂಡು ಎಂದೂ ಅಮ್ಮನಾಗಲಾರ. ಆಕೆ ಅವನಿಗೊಂದು ವಿಸ್ಮಯ.

ಕನ್ನಡದ ಪ್ರಮುಖ ಸೃಜನಶೀಲ ಬರಹಗಾರರಾಗಿದ್ದ ಲಂಕೇಶರ ’ಅವ್ವ’ ಕವನ ಎಲ್ಲಾ ಪ್ರಜ್ನಾವಂತ ಮನಸ್ಸುಗಳ ಪ್ರಾತಿನಿಧಿಕ ಕವಿತೆಯಂತಿದೆ. ’ನನ್ನವ್ವ ಫಲವತ್ತಾದ ಕಪ್ಪು ನೆಲ’ ಎಂದೇ ಆರಂಭವಾಗುವ ಈ ಕವನದಲ್ಲಿ ಅಮ್ಮನನ್ನು ಭೂಮಿತಾಯಿಯೊಡನೆ ಸಮೀಕರಿಸುತ್ತಾ ಇಡೀ ಕವನವೇ ಒಂದು ಸಶಕ್ತ ರೂಪಕವಾಗಿ ಮೈದಳೆಯುತ್ತದೆ.

ಯಾಕೆ ಅಮ್ಮ ಎಲ್ಲರನ್ನೂ ನಿರಂತರವಾಗಿ ಕಾಡುತ್ತಾಳೆ? ಅತ್ಯಂತ ಯಾತನೆಯ ನೋವಿನ ಘಳಿಗೆಯಲ್ಲಿ ನಮ್ಮ ಬಾಯಿಯಿಂದ ’ಅಮ್ಮಾ!’ ಎಂಬ ಉದ್ಗಾರ ಯಾಕೆ ಹೊರಹೊಮ್ಮುತ್ತದೆ?

ನಾನು ಕುಕ್ಕೆ ಸುಬ್ರಹ್ಮಣ್ಯದ ಸುತ್ತಮುತ್ತಲಿನ ಪರಿಸರದಲ್ಲಿ ನನ್ನ ಬಾಲ್ಯವನ್ನು ಕಳೆದವಳು.ಹಾಡುವ ಸ್ವಾಮಿಗಳೆಂದೇ ಪ್ರಖ್ಯಾತರಾಗಿದ್ದ, ನಂತರ ಗೃಹಸ್ಥಾಶ್ರಮ ಸೇರಿದ ವಿದ್ಯಾಭೂಷಣ ತೀರ್ಥ ಸ್ವಾಮೀಜಿಯವರ ತಂಗಿ ನಮ್ಮ ಗೆಳತಿಯರ ಬಳಗದಲ್ಲಿ ಒಬ್ಬಳಾಗಿದ್ದಳು. ಅವಳು ಆಗೀಗ ಮಠದಲ್ಲಿ ನಡೆಯುತ್ತಿದ್ದ ಸಣ್ಣಪುಟ್ಟ ವಿಷಯಗಳನ್ನು ನಮ್ಮಲ್ಲಿ ಹಂಚಿಕೊಳ್ಳುತ್ತಿದ್ದಳು. ಅವುಗಳ್ಯಾವುವೂ ಈಗ ನನಗೆ ನೆನಪಿಲ್ಲ. ಆದರೆ ಚಿಕ್ಕ ಪ್ರಾಯದಲ್ಲಿ ಸ್ವಾಮಿಯಾದ ಅವಳಣ್ಣ ತನಗೆ ಭಕ್ತರು ತಂದುಕೊಟ್ಟ ಕೆಲವು ಕಾಣಿಕೆಗಳನ್ನು ತನ್ನಮ್ಮನ ಕೈಯಲ್ಲಿ ಕೊಡುತ್ತಿದ್ದರಂತೆ. ಇದು ನಮಗೆ ಆಶ್ಚರ್ಯದ ವಿಷಯವಾಗಿರಲಿಲ್ಲ. ಆದರೆ, ಆವರು ತನ್ನ ’ತಾಯಿಗೆ ನಮಸ್ಕರಿಸುತ್ತಿದ್ದರಂತೆ’ ಅನ್ನುವುದು ಮಾತ್ರ ನಮಗೆ ಸೋಜಿಗದ ವಿಷಯವಾಗಿತ್ತು.

ಸನ್ಯಾಸಿಯಾದವರು ಎಳೆಯ ಪ್ರಾಯದವರಾಗಿದ್ದರೂ, ಮುಪ್ಪಾನ ಮುದುಕರೂ ಕೂಡಾ ಅವರ ಕಾಲಿಗೆ ಬಿದ್ದು ನಮಸ್ಕರಿಸುವುದನ್ನು ನಾವು ನೋಡುತ್ತೇವೆ. ಸನ್ಯಾಸಿ ಸರ್ವಸಂಗ ಪರಿತ್ಯಾಗಿ. ಆತ ಮಠದ ಪೀಠವನ್ನೇರಿದಾಗ ಉತ್ತರ ಕ್ರಿಯಾದಿ ಕರ್ಮಗಳನ್ನು ಮಾಡಿಸಿಕೊಂಡು ಲೌಕಿಕದ ಎಲ್ಲಾ ಬಂಧನಗಳನ್ನು ಹರಿದುಕೊಂಡಿರುತ್ತಾನೆ. ಅಂಥ ಸ್ವಾಮೀಜಿ ತನ್ನ ಅಮ್ಮನ ಕಾಲಿಗೆ ನಮಸ್ಕರಿಸುತ್ತಾನೆಂದರೆ..? ಅದು ನಿಜವಿದ್ದಿರಬಹುದೇ? ಆ ಬಗ್ಗೆ ನಾವ್ಯಾರೂ ವಿಚಾರಿಸಲಿಲ್ಲ. ಆದರೆ ಬಾಲ್ಯದ ಆ ಸಂಗತಿ ನನ್ನ ಮನಸ್ಸಿನಲ್ಲಿ ಹಾಗೆಯೇ ಉಳಿದುಬಿಟ್ಟಿದೆ.

ಯಾರ ಅಳವಿಗೂ ನಿಲುಕಲಾರದೆ ಅತ್ಯುನ್ನತ ಸ್ಥಾನದಲ್ಲಿರುವ ಈ ’ಅಮ್ಮ’ ಯಾರು? ಅವಳ, ಆ ಪದದ ಅರ್ಥವ್ಯಾಪ್ತಿ ಏನು? ಯಾಕೆ ಈ ಅಮ್ಮ ನಿರಂತರವಾಗಿ ಎಲ್ಲರನ್ನೂ ಕಾಡುತ್ತಲೇ ಇರುತ್ತಾಳೆ? ಅಮ್ಮನ ಬಗ್ಗೆ ಬರೆಯುವಾಗ ಎಲ್ಲಿಂದ ಆರಂಭಿಸಲಿ?- ಈ ಪ್ರಶ್ನೆಗಳು, ಸಂದೇಹಗಳು ನನ್ನ ಮುಂದಿದೆ.

ನಾನೊಬ್ಬಳು ಅಮ್ಮ. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಇಬ್ಬರು ಮಕ್ಕಳಿದ್ದಾರೆ. ತಾಯ್ತನ ನನ್ನಲ್ಲಿ ಊಹೆಗೂ ಮೀರಿದ ಬದಲಾವಣೆಯನ್ನು ತಂದಿದೆ ಎಂಬುದು ನಾನು ಕಂಡುಕೊಂಡ ಸತ್ಯ. ತೀರಾ ಒರಟಳಾದ, ಜಗಳಗಂಟಿಯಾದ ನನ್ನನ್ನು ಅದು ಸಹನಾಶೀಲಳನ್ನಾಗಿ ಮಾಡಿದೆ. ಕ್ಷಮಾವಂತಳನ್ನಾಗಿ ಮಾಡಿದೆ.

ನನ್ನ ಹೊಟ್ಟೆಯಿಂದ ಮಗು ಜಾರಿ, ಅದು ನನ್ನ ಕಿಬ್ಬೊಟ್ಟೆಯಲ್ಲಿ ಕರುಳಬಳ್ಳಿ ಸಮೇತವಾಗಿ ಸ್ಪರ್ಶಿಸಿದ ಕ್ಷಣವಿದೆಯಲ್ಲಾ…, ಅದು ನನ್ನ ಬದುಕಿನ ಅತ್ಯಂತ ಸಾರ್ಥಕ ಕ್ಷಣ…ಕಾಲ ಚಲಿಸದೆ ಸ್ಥಗಿತಗೊಂಡ ಕ್ಷಣ. ನನ್ನನ್ನು ಹೆಣ್ಣಾಗಿ ಹುಟ್ಟಿಸಿದ ನಿಸರ್ಗಕ್ಕ್ರ್ ಕೃತಜ್ನತೆಗಳನ್ನರ್ಪಿಸಿದ ಕ್ಷಣ.

ಅದುವರೆಗೆ ಪುರುಷ ಸಮಾಜದ ಬಗ್ಗೆ ಒಂದು ರೀತಿಯ ಅಸೂಯೆ, ಅಸಹನೆ,ಮತ್ಸರಗಳನ್ನಿಟ್ಟುಕೊಂಡು ಹೆಣ್ಣಾಗಿ ಹುಟ್ಟಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದೆ. ನಿಸರ್ಗವು ಪುರುಷ ಪಕ್ಷಪಾತಿ ಎಂದು ರೇಗುತ್ತಿದ್ದೆ. ಆದರೆ ಒಡಲ ಒಳಗೇ ಇನ್ನೊಂದು ಜೀವವನ್ನು ಸೃಷ್ಠಿಸಿ ಅದನ್ನು ಪೋಷಿಸುವ ಅವಕಾಶವನ್ನು ನೀಡಿದ ನಿಸರ್ಗ ಖಂಡಿತವಾಗಿಯೂ ಸ್ತ್ರೀ ಪಕ್ಷಪಾತಿಯೇ! ಏನೇ ಮಾಡಿದರೂ ಒಬ್ಬ ಗಂಡಸು ಇನ್ನೊಂದು ಜೀವಕ್ಕೆ ಜನ್ಮ ಕೊಡಲಾರ!!

ಈ ವಿಸ್ಮಯ ಬಹುಶಃ ನಮ್ಮ ಹಿಂದಿನ ಪುರುಷವರ್ಗಕ್ಕೂ ಕಾಡಿರಬೇಕು. ಆದ ಕಾರಣವೇ ಅವರು ಸ್ತ್ರೀಯನ್ನು ಬ್ರಹ್ಮಾಂಡದ ಶಕ್ತಿಗೆ ಹೊಲಿಸಿದ್ದಾರೆ. ಆಕೆಯನ್ನು ಆದಿಶಕ್ತಿ ಎಂದು ಕರೆದಿದ್ದರೆ.’ಅಮ್ಮಾ’ ಎಂದು ಅವಳೆದುರು ಮೊಣಕಾಲೂರಿದ್ದಾರೆ.ಪ್ರಪಂಚದ ಎಲ್ಲಾ ಜನಾಂಗಗಳೂ ಅತ್ಯುನ್ನತ ಶಕ್ತಿಯನ್ನು ಹೆಣ್ಣಿನ ರೂಪದಲ್ಲಿಯೇ ಕಂಡುಕೊಂಡಿವೆ.

ಸ್ತ್ರೀಯನ್ನು ಆದಿಶಕ್ತಿಗೆ ಪುರುಷನೇ ಹೋಲಿಸಿರಬೇಕು. ಯಾಕೆಂದರೆ ಅವಳು ಅವನಿಗೆ ಎಂದೆಂದೂ ನಿಗೂಢವೇ. ಹಾಗೆಯೇ ತಾಯಿಯನ್ನು ಭೂಮಿಯ ಜೊತೆ ಅತನೇ ಸಮೀಕರಿಸಿದ್ದಾನೆ.ಸೃಸ್ಟಿಸುವ, ಪಾಲಿಸುವ ಮತ್ತು ಪೊರೆಯುವ ಗುಣ ಪ್ರಕೃತಿಯದ್ದೇ ತಾನೇ? ಇದೇ ಗುಣ ತಾನೇ ಅಮ್ಮನಲ್ಲಿರುವುದು? ತನ್ನ ಸಂತತಿಯನ್ನು ರಕ್ಷಿಸಿಕೊಳ್ಳಲು, ಪಾಲಿಸಲು, ಪೊರೆಯಲು,ಅವಳು ಏನನ್ನು ಬೇಕಾದರೂ ಮಾಡಬಲ್ಲಳು. ಈ ದಾರಿಯಲ್ಲಿ ಅವಳಿಗೆ ಪುರುಷ ನೆರವಾಗುತ್ತಾನೆ. ನೆರವಾಗದಿದ್ದರೂ ಏಕಾಂಗಿಯಾಗಿ ಅವಳು ಸಾಗಬಲ್ಲಳು.

ಸ್ತ್ರೀಯನ್ನು ಆದಿಶಕ್ತಿಗೆ ಮತ್ತು ಭೂಮಿಗೆ ಹೋಲಿಸಿದ ಆ ಮೊದಲ ಪುರುಷ ನನ್ನೆದುರಿಗೇನಾದರೂ ಬಂದರೆ ಆತನ ಪಾದಕ್ಕೆ ಹಣೆ ಹಚ್ಚಿ ನಮಸ್ಕರಿಸಲೂ ನಾನು ಸಿದ್ಧಳಿದ್ದೇನೆ.ಯಾಕೆಂದರೆ ಹೆಣ್ಣಿನ ಕರ್ತೃತ್ವ ಶಕ್ತಿಗೆ ಸಿಕ್ಕಿದ ಮೊದಲ ಮತ್ತು ಕೊನೆಯ ಹೋಲಿಕೆ ಅದು. ಆ ಮೊದಲ ಪುರುಷ ಪರಂಪರೆಯೇ ’ಶಕ್ತಿ ಪೂಜೆ’ಗೆ ನಾಂದಿ ಹಾಡಿರಬೇಕು. ಭಾರತೀಯ ಪರಂಪರೆಯಲ್ಲಿ ಬೆಳೆದು ಬಂದ ಈ ತಾಂತ್ರಿಕ ಪೂಜೆಯಲ್ಲಿ ಹೆಣ್ಣಿನ ಆರಾಧನೆಯೇ ಪ್ರಮುಖವಾದುದು.

ಪುರುಷನ ಅತ್ಯುನ್ನತ ಕಲ್ಪನೆಯಲ್ಲಿ ಹೆಣ್ಣು ಆಧಿಶಕ್ತಿಯಾಗಿ ಮೈದಾಳಿದರೆ, ಅವನ ಭಾವುಕ ಕಲ್ಪನೆಯಲ್ಲಿ ಆಕೆ ಮಮತಾಮಯಿ ಅಮ್ಮ. ಈ ಕಥೆ ಗೊತ್ತಲ್ಲ? ತನ್ನ ಪತ್ನಿಯ ಬಯಕೆಯಂತೆ ತನ್ನ ಹೆತ್ತಮ್ಮನ ಎದೆ ಬಗೆದು ಅವಳ ಹೃದಯವನ್ನು ಕೊಂಡೊಯ್ಯುತ್ತಿದ್ದವನು, ಎಡವಿ ಬಿದ್ದಾಗ ಆ ತಾಯಿ ಹೃದಯ ’ಮಗೂ ಪೆಟ್ಟಾಯ್ತೇ?’ ಎಂದು ಕೇಳಿತಂತೆ-ಇದು ಭಾವುಕ ಮನಸ್ಸೊಂದು ಅಮ್ಮನನ್ನೌ ಕಂಡುಕೊಂಡ ಬಗೆ.

ಇನ್ನು ಜನಸಾಮಾನ್ಯರ ಮಟ್ಟಕ್ಕಿಳಿದು ನಮ್ಮ ನಿಮ್ಮಂತೆ ಯೋಚಿಸಿದರೆ ’ಅಮ್ಮ’ ಎಂಬುದು ಗಂಡಸರಿಗೆ ಬೆಚ್ಚನೆಯ ತೋಳು, ನೆಮ್ಮದಿಯ ಮಡಿಲು; ಹೆಂಗಸರಿಗೆ ನಿಭಾಯಿಸಲೇ ಬೇಕಾದ ಜವಾಬ್ದಾರಿ.

ತನ್ನೊಡನ್ನು ಸೀಳಿಕೊಂಡು ಬಂದ, ಅಂಗೈನಲ್ಲಿ ತೂಗಬಲ್ಲಂಥ, ಮಾಂಸದ ಮುದ್ದೆಯಂತಿರುವ ಜೀವವೊಂದನ್ನು ಸ್ವತಂತ್ರವಾಗಿ ನಡೆದಾಡುವಷ್ಟರಮಟ್ಟಿಗೆ ಮಾಡುವ ದೀರ್ಘಸ್ರಮವಿದೆಯಲ್ಲಾ, ಆ ಜವಾಬ್ದಾರಿಗಳಿಗೆ ಹೋಲಿಕೆಗಳಿಲ್ಲ. ರಾತ್ರಿಯ ನೀರವತೆಯಲ್ಲಿ ಎಚ್ಚೆತ್ತ ಮಗು ಅತ್ತಿತ್ತಾ ಮುಲುಗಾಡುತ್ತಾ ಕರಾರುವಕ್ಕಾಗಿ ತಾಯಿಯ ಎದೆಗೇ ಬಾಯಿ ಹಾಕಿ ತನ್ನ ಒಸಡುಗಳಲ್ಲಿ ಮೊಲೆತೊಟ್ಟನ್ನು ಕಚ್ಚಿ ಹಿಡಿದು ಹಾಲು ಹೀರುವುದು್; ಎಳೆಮಗು ಎಂದೂತನ್ನ ಮೈಮೇಲೆ ಹೊದಿಕೆಯನ್ನಿಟ್ಟುಕೊಳ್ಳುವುದಿಲ್ಲ. ಅದನ್ನು ತಾಯಿ ಮತ್ತೆ ಮತ್ತೆ ಸರಿಪಡಿಸುವುದು, ಒದ್ದೆ ಬಟ್ಟೆ ಬದಲಾಯಿಸುವುದು- ಪ್ರತಿ ರಾತ್ರಿಯೂ ಪುನರಾವರ್ತನೆಗೊಳ್ಳುವ ಈ ಕ್ರಿಯೆಗಳೆಲ್ಲಾ ನಡೆಯುವುದು ಅರೆ ಎಚ್ಚರದ ಮಂಪರಿನ ಸ್ಥಿತಿಯಲ್ಲೇ. ತಾಯಿ ಮಗುವಿನ ಈ ಅನುಬಂಧ, ಅವಲಂಬನೆಯ ಅವಧಿ ಹೆಚ್ಚೆಂದರೆ ಎರಡೂರು ವರ್ಷಗಳು ಮಾತ್ರ. ಅಮೇಲೆಯೂ ಮಗು ರಚ್ಚೆ ಹಿಡಿದರೆ, ತಾಯಿ ಬೆನ್ನಿಗೊಂದು ಬಾರಿಸುತ್ತಾಳೆ.. ಮಗು ಮತ್ತಷ್ಟು ಕಿರುಚಿ, ಅರಚಿ ತನ್ನ ಬೇಡಿಕೆಗಳನ್ನು ಪೂರೈಸಿಕೊಳ್ಳುತ್ತದೆ. ಮಗುವಿನ ಸ್ವತಂತ್ರ ಬುದ್ಧಿ ಬಲಿಯಲಾರಂಭಿಸುತ್ತಿದ್ದಂತೆ ತಾಯಿ ಅದರ ಮೇಲೆ ನಿಯಂತ್ರಣ ಸಾಧಿಸಲು ನೋಡುತ್ತಾಳೆ. ಆಗ ತಾಯಿ-ಮಗುವಿನ ನಡುವೆ ತಿಕ್ಕಾಟ ಆರಂಭವಾಗುತ್ತದೆ.

ಈ ಹಂತದಲ್ಲೇ ತಂದೆತನದ ಪ್ರವೇಶ ಬೇಕಾಗುತ್ತದೆ.ಒಳ್ಳೆಯ ಅಂದರೆ ತಾಳ್ಮೆಯುಳ್ಳ, ಮುಂದಾಲೋಚನೆಯುಳ್ಳ ಜವಾಬ್ದಾರಿಯುಳ್ಳ ತಾಯ್ತಂದೆಯರಾದರೆ ಮಕ್ಕಳು ಸನ್ಮಾರ್ಗದಲ್ಲಿ ಮುಂದುವರಿಯುತ್ತಾರೆ.ಇಲ್ಲವಾದರೆ ಮುಂಗೋಪಿಗಳೂ, ಹಟವಾದಿಗಳೂ,ನಿಷ್ಪ್ರಯೋಜಕರೂ ಆಗಿಬಿಡುತ್ತಾರೆ. ಜಗತ್ತಿನ ಬಹುತೇಕ ಹೆಣ್ಣು-ಗಂಡುಗಳು ಅಪ್ಪ ಅಮ್ಮ ಆಗುತ್ತಾರೆ. ಆದರೆ ಒಳ್ಳೆಯ ಅಪ್ಪ ಅಮ್ಮ ಆಗುವುದಕ್ಕೆ ಒಂದಷ್ಟು ತಯಾರಿ ಬೇಕು. ಮುಖ್ಯವಾಗಿ ಬೇಕಾದ್ದು ತಾಳ್ಮೆ, ನಮ್ಮ ಕಾಲಘಟ್ಟಕ್ಕೆ ಮಕ್ಕಳನ್ನು ಎಳೆದು ತರುವುದಲ್ಲ.ಅವರ ಕಾಲಕ್ಕೆ ಹೋಗಿ ಅವರನ್ನು ಅರಿತುಕೊಳ್ಳುವುದು ಮುಖ್ಯ.

ಇದು ಎಲ್ಲರಿಗೂ ಸಾಧ್ಯವಿಲ್ಲ. ನಾನು ಮತ್ತು ನನ್ನ ಮಕ್ಕಳು ಎಷ್ಟೊಂದು ಜಗಳವಾಡುತ್ತೇವೆಂದರೆ ಪ್ರತಿ ಜನವರಿಯಲ್ಲೂ ಮಗಳನ್ನು ಯಾವ ರೆಸಿಡೆನ್ಸಿಯಲ್ ಸ್ಕೂಲಿಗೆ ಸೇರಿಸುವುದೆಂದು ಯೋಚಿಸುತ್ತೇನೆ! ಏಪ್ರಿಲ್ ನಲ್ಲಿ ಅವರ ಅಜ್ಜನ ಮನೆಗೆ ಅಟ್ಟಿಬಿಡುತ್ತೇನೆ. ಮನೆ ಭಣ ಭಣ ಅನ್ನತೊಡಗುತ್ತದೆ. ಮೇ ಮೊದಲ ವಾರದಲ್ಲಿ ಪುನಃ ಅವರನ್ನು ಕರೆದುಕೊಂಡು ಬರುತ್ತೇನೆ. ಜೂನ್ ನಲ್ಲಿ ಶಾಲೆ ಆರಂಭವಾದಾಗ ಪುನಃ ಜಗಳ ಸ್ಟಾರ್ಟ್. ಮತ್ತೆ ಯಥಾಪ್ರಕಾರ ರೆಸಿಡೆನ್ಸಿಯಲ್ ಸ್ಕೂಲ್ ಹುಡುಕಾಟ.ಇದು ಇಂದಿನವರೆಗೂ ಯಥಾಪ್ರಕಾರ ನಡೆದುಕೊಂಡು ಬರುತ್ತಿದೆ. ಬಹುಶಃ ಇದು ಎಲ್ಲಾ ಅಮ್ಮಂದಿರ ಅನುಭವವೂ ಆಗಿರಬಹುದು.

ನನ್ನ ಅಮ್ಮ ಮತ್ತು ನಾನು ಕೂಡಾ ಹೀಗೆಯೇ ಮಾರಾಮಾರಿ ಜಗಳ ಆಡುತ್ತಿದ್ದೆವು ಅವರು ಏನೂ ಹೇಳಿದರೂ ಅಲ್ಲ ಅನ್ನುವುದೇ ನನ್ನ ಅಭ್ಯಾಸವಾಗಿತ್ತು. ಅವರು ಬೇಡವೆಂದರೂ ದೂರದ ಊರಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದೆ. ಉದ್ಯೋಗ ಮಾಡಿದೆ. ಕೊನೆಗೆ ಅವರ ಮನಸ್ಸಿಗೆ ವಿರುದ್ಧವಾಗಿ ಅನ್ಯ ಜಾತೀಯ ಹುಡುಗನನ್ನು ಮದುವೆಯಾದೆ. ಆದರೆ ಮುಂದೆ ಇದೇ ಅಮ್ಮ ನನ್ನ ಮಗುವನೆತ್ತಿಕೊಂಡು ಎಲ್ಲಾ ದುಃಖ ದುಮ್ಮಾನಗಳನ್ನೂ ಮರೆತಳು. ನನ್ನ ಸಲುವಾಗಿ ಅಪ್ಪನೊಡನೆ, ಅಣ್ಣನೊಡನೆ ವಕಾಲತ್ತು ವಹಿಸಿದಳು. ಈ ಅಮ್ಮನ ಪರಂಪರೆಯನ್ನು ನಾನು ಅನುಭವಿಸುತ್ತಿದ್ದೇನೆ. ನಾಳೆ ನನ್ನ ಮ್ಗಳು ಅದನ್ನು ಮುಂದುವರಿಸುತ್ತಾಳೆ. ಇದಲ್ಲವೇ ಅಮ್ಮನ ಮಹಿಮೆ?

ಸ್ನೇಹಿತನಂತೆ, ಗುರುವಿನಂತೆ ಮಾರ್ಗದರ್ಶನ ಮಾಡಬಲ್ಲ ಒಳ್ಳೆಯ ಅಪ್ಪ ಸಿಕ್ಕಿದರೆ ಮಕ್ಕಳು ಮೆಧಾವಿಗಳಾಗಬಹುದು.ಇದರ ಜೊತೆಗೆ ಒಳ್ಳೆಯ ಅಮ್ಮ ದೊರಕಿದರೆ ಆ ಮಗು ಮೇಧಾವಿಯೂ, ಸಹೃದಯನೂ ಆಗುತ್ತಾನೆ. ಅಂತಹ ಭಾಗ್ಯಶಾಲಿಗಳು ಈ ಲೋಕದಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿರುತ್ತಾರೆ.

ಒಳ್ಳೆಯ ಅಮ್ಮನಾಗುವುದು ಎಷ್ಟು ಕಷ್ಟದ, ಜವಾಬ್ದಾರಿಯುತ ಕೆಲಸ ಎಂಬುದು ಅದನ್ನು ಅನುಭವಿಸಿದವರಿಗೆ ಗೊತ್ತು. ಮಕ್ಕಳಿಲ್ಲ ಎಂದರೆ ಮಕ್ಕಳಿಲ್ಲ ಎಂಬ ಒಂದೇ ಚಿಂತೆ ಇರುತ್ತದೆ. ಆದರೆ ಮಕ್ಕಳಿದ್ದವರಿಗೆ ನೂರೆಂಟು ಚಿಂತೆ. ಒಂದು ಹುಡುಗಿ ಒಮ್ಮೆ ಅಮ್ಮನಾಗುವ ಜವಾಬ್ದಾರಿ ಹೊತ್ತುಕೊಂಡಳೆಂದರೆ ಆಕೆ ತನ್ನ ಭೂತ, ವರ್ತಮಾನಕಾಲವನ್ನು ಹುಗಿದು ಗೋರಿ ಕಟ್ಟಿದಂತೆಯೇ ಆಕೆಯ ಕಣ್ಣೆಲ್ಲವೂ ಭವಿಷ್ಯದಲ್ಲಿ ನಾಟಿ ಬಿಡುತ್ತದೆ. ಯಾರ ಮುಂದೆಯೂ ಬಾಗದ ಮನಸ್ಸು ಮಕ್ಕಳ ಮುಂದೆ ಬಾಗಿಬಿಡುತ್ತದೆ. ಮೆತ್ತಗಾಗಿ ಬಿಡುತ್ತದೆ.

ಮಕ್ಕಳೂ ಅಷ್ಟೇ. ಮೊದಲ ಮೂರುವರ್ಷ ಹೆತ್ತವರಿಗೆ ಸ್ವರ್ಗ ಸುಖವನ್ನೇ ನೀಡಿ ಬಿಡುತ್ತಾರೆ. ಅವರ ಹೂನಗು, ತೊದಲ ನುಡಿ, ದುಂಡು ಕೈಗಳ ಹಾರದ ಮುಂದೆ ಯ್ಯಾವ ಸಾಧನೆಯ ಪ್ರಶಸ್ತಿ ಫಲಕಗಳೂ ತೃಣವೆನಿಸಿಬಿಡುತ್ತದೆ. ಈ ಖುಷಿಯ ಪಲಕುಗಳ ನೆನಪಲ್ಲೇ ’ಅಮ್ಮ’ ಬದುಕಿನ ಕೊನೆಗಾಲದವರೆಗೂ ಮಕ್ಕಳನ್ನು ಕಾಪಾಡುತ್ತಾಳೆ.

ಗಂಡಸರಿಗೆ ’ಅಮ್ಮ’ ನಿರಂತರವಾಗಿ ಕಾಡುವ ಮೂಲ ಪ್ರತಿಮೆ. ತಾನು ಕಂಡ ಮೊದಲ ಮುಖ; ತಾನು ಅನುಭವಿಸಿದ ಮೊದಲ ಸ್ಪರ್ಶ; ಅದವನ ಸ್ಥಾಯಿ ಭಾವ. ಮುಂದೆ ತನ್ನ ದೇಹದ ವಾಂಛೆಗಳನ್ನು ಪೂರೈಸಿಕೊಳ್ಳಲು ಹೆಣ್ಣೊಬ್ಬಳು ಪಕ್ಕಕ್ಕೆ ಬಂದಾಗಲೂ ಕೊನೆಗೆ ಆತ ಅವಳಲ್ಲಿ ಹುಡುಕುವುದು ತನ್ನ ’ಅಮ್ಮ’ನನ್ನೇ. ಹಾಗಾಗಿ ಒಬ್ಬ ಹೆಣ್ಣು ಒಂದು ಗಂಡಿಗೆ ತನ್ನ ದೇಹವನ್ನು ನೀಡಿ ಸಂಗಾತಿಯಾಗುವುದು ಎಷ್ಟು ಮುಖ್ಯವೋ ಅವನನ್ನು ತಾಯ್ತನದಿಂದ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ. ಜೊತೆಗೆ ಆತನ ಮಗುವಿಗೆ ಯಾಯಾಗಿ ಆತನಿಗೆ ತಂದೆತನದ ಅನುಭವವನ್ನು ಕೂಡಾ ಕಟ್ಟಿಕೊಡಬೇಕು. ತುಂಬಾ ಆಳವಾಗಿ ಯೋಚಿಸಿದರೆ ಗಂಡಿನದು ಅವಲಂಬನೆಯ ಬದುಕು.

ನನ್ನ ಸ್ನೇಹಿತರೊಬ್ಬರು ಹೇಳುತ್ತಿದ್ದರು; ’ನಮ್ಮ ಸಮಾಜ ಮಹಿಳೆಯರನ್ನು ಎಷ್ಟೊಂದು ಅದುಮಿಟ್ಟಿದೆ; ಅವರ ಆಸೆಗಳನ್ನು ಹತ್ತಿಕ್ಕಿದೆ. ಆದರೂ ಅವರು ಎಷ್ಟೊಂದು ಶಕ್ತಿಶಾಲಿಗಳು, ನಾವು ಅವರಿಗೆ ಎಷ್ಟೊಂದು ಅವಲಂಬಿತರಾಗಿದ್ದೇವೆ’ ಎಂದು ಅಚ್ಚರಿ ಪಡುತ್ತಾ, ’ಒಂದು ವೇಳೆ ಅವರ ಶಕ್ತಿ ಪೂರ್ತಿ ಹೊರಹೊಮ್ಮಲು ನಾವು ಅವಕಾಶ ಕೊಟ್ಟಿದ್ದರೆ ಈ ಭೂಮಿ ಮೇಲೆ ಗಂಡು ಸಂತತಿಯೇ ಇರುತ್ತಿರಲಿಲ್ಲ!’ ಎಂದು ಉದ್ಗಾರವೆತ್ತಿದ್ದರು. ಅವರ ಮಾತು ಎಷ್ಟು ನಿಜ ಅಲ್ಲವೇ?

”ಅಮ್ಮಾ’ ಎಂಬ ಪೂಜ್ಯ ಭಾವನೆಯನ್ನು ಇಟ್ಟುಕೊಳ್ಳುವುದು ತುಂಬಾ ಸುಲಭ. ಗಂಡಸರಿಗಂತೂ ಇನ್ನೂ ಸುಲಭ. ಅಲ್ಲಿ ಒಂದು ಅಂತರವಿರುತ್ತದೆ. ಆದರೆ ತಾಯಿ ಮಗಳ ಮಧ್ಯೆ ಅಂತಹ ಅಂತರವಿರುವುದಿಲ್ಲ. ಯಾಕೆಂದರೆ ಅವಳು ಒಂದು ದಿನ ಅಮ್ಮನಾಗುತ್ತಾಳೆ. ಅದವಳಿಗೆ ಗೊತ್ತು. ಬಯಸಿದರೆ ಅದವಳ ಭವಿಷ್ಯ.

ಅಮ್ಮನ ಬಗ್ಗೆ. ಅಮ್ಮನಾದ ಅನುಭವದ ಬಗ್ಗೆ ಎಷ್ಟು ಬರೆದರೂ ಅದು ಅಪೂರ್ಣವೇ. ಹಿಂದೆಯೇ ಹೇಳಿದಂತೆ ಅದು ಗಂಡಸರ ಪಾಲಿನ ಆದರ್ಶ. ಹೆಂಗಸರ ಪಾಲಿಗೆ ವಾಸ್ತವ. ಎರಡನ್ನೂ ಕೂಡಾ ಭಾಷೆಯಲ್ಲಿ, ಶಬ್ದದಲ್ಲಿ ಹಿಡಿದಿಡುವುದು ಕಷ್ಟ!.

[ ೨೦೦೫ ರಲ್ಲಿ”ಓ ಮನಸೇ’ ಯಲ್ಲಿ ಪ್ರಕಟವಾದ ಬರಹ. ]

8 comments:

ರವಿ ಮುರ್ನಾಡು said...

ನಾನು ಸುಳ್ಳಂತೂ ಹೇಳುವುದಿಲ್ಲ ತಾಯಿ.ನಾನೂ ಕೂಡ ತಾಯಿಯ ಹಾರೈಕೆಯ ದಿನಗಳನ್ನು ಅರಿತುಕೊಳ್ಳುವ ಮೊದಲೇ ಏನೂ ಇಲ್ಲವಾದವನು.ಆದರೆ,ಇದೇ ತಾಯಿಯ ಮನಸ್ಸು ಸುಳಿದಾಡಿದ ಅಪ್ಪ ಅಮ್ಮನಾದ ನನ್ನ ಮಾವನನ್ನು ನೋಡಿದ್ದೆ. ಅವರ ಮೂರು ಮಕ್ಕಳನ್ನು ಹೇಗೆ ನೋಡಿದ್ದರೆಂದರೆ, ಸಾಯುವ ಕೊನೇ ರಾತ್ರಿಯಲ್ಲಿಯೋ ಒಬ್ಬ ಮಗ ಅವರ ಎದೆಯ ಮೇಲೆಯೇ ಮಲಗಿದ್ದ. ಬೆಳಿಗ್ಗೆ ಎದ್ದ ಮಗು ಪಪ್ಪಾ ಏಳು, ಕಾಫಿ ಕೊಡು ಅನ್ನುವ ದೈನಂದಿನ ಮಾತು ಆ ಕೊನೆಯ ದಿನ ಹೇಗಿತ್ತು ಅನ್ನೋದನ್ನ ಊಹಿಸಿಕೊಳ್ಳಬಹುದು.
ಓದುತ್ತಿದ್ದಂತೆ ನನ್ನ ಬದುಕಿಗೆ ಭಾವವಾದ ನನ್ನ ಅಮ್ಮ ನೆನಪಿಗೆ ಬಂದಳು.ಏನಿಲ್ಲದಿದ್ದರೂ ಪರಿಚಯಕ್ಕಾದರೂ ಈ ಲೇಖನವನ್ನು ಮೆಚ್ಚುತ್ತೇನೆ ಅಂತ ಹೇಳಿದರೆ, ನನ್ನ ತಾಯಿಗೆ ಮಾಡಿದ ದ್ರೋಹವಾಗಬಹುದು.ನನ್ನ ಅಮ್ಮನೇ ಮೈವೆತ್ತ ಆಗಿದೆ ಬರಹಗಳು. ಸತ್ತು ಸ್ವರ್ಗ ಸೇರಿದ ಅಮ್ಮನನ್ನು ಮತ್ತೊಮ್ಮೆ ಎದೆಗೆ ಇಳಿಸಿದ ನಿಮಗೆ ಸಾಷ್ಠಾಂಗ ನಮಸ್ಕಾರಗಳು. ತುಂಬಾ ಭಾವುಕನಾಗಿಬಿಟ್ಟೆ.

DEW DROP (ಮಂಜಿನ ಹನಿ) said...

ಉಷಾ ಅಕ್ಕ, ತುಂಬಾ ಭಾವುಕವಾದ ಲೇಖನ.. ನಿಮ್ಮ
ಭಾಷೆ ತುಂಬಾ ಸುಂದರವಾಗಿ ಅಮ್ಮ ಎಂಬ ಪ್ರತಿಮೆಯನ್ನು ಅಷ್ಟೇ ಸುಂದರವಾಗಿ ಕಟ್ಟಿಕೊಟ್ಟಿದೆ.. ಅಮ್ಮ ಎಂಬ ಮೂರ್ತಿಯನ್ನು ನಿಜಕ್ಕೂ ಯಾವುದೇ ಚೌಕಟ್ಟಿನಲ್ಲೂ ಸಂಪೂರ್ಣವಾಗಿ ಕಟ್ಟಿಕೊಡಲು ಸಾಧ್ಯವಿಲ್ಲ, ಆದರೆ ಒಬ್ಬ ಅಮ್ಮನಾದ ನಿಮ್ಮದೇ ಮಾತುಗಳ ಅನುಭವದ ಲೇಖನ ತುಂಬಾ ಅರ್ಥಪೂರ್ಣವೂ, ಹೃದಯಸ್ಪರ್ಶಿಯೂ ಆಗಿ ಮೂಡಿ ಬಂದಿದೆ.. ಹೌದು ಗಂಡು ಮಕ್ಕಳಿಗೆ ತಂದೆಗಿಂತ ತಾಯಿ ತುಂಬಾ ಕಾಡುತ್ತಾಳೆ ಮತ್ತು ಹತ್ತಿರವೆನಿಸುತ್ತಾಳೆ ಕಾರಣ ನೀವೇ ಹೇಳಿದಂತೆ ಆಕೆ ನಮಗೆ ಒಂದು ವಿಸ್ಮಯಕಾರಿ ಪ್ರತಿಮೆ.. ತುಂಬಾ ಚೆಂದದ ಲೇಖನ..:))) ಲೇಖನದ ಕಡೆಯಲ್ಲಿ ಮನದಲ್ಲಿ ಉಳಿದ ಮಾತು ’ಅಮ್ಮ ಗಂಡಸರಿಗೆ ಆದರ್ಶ, ಹೆಂಗಸರಿಗೆ ವಾಸ್ತವ’..

Badarinath Palavalli said...

ಅಮ್ಮನ ಬಗ್ಗೆ ಒಬ್ಬ ಅಮ್ಮನಾಗಿ ಬರೆದ ಬರಹ ಮನೋಜ್ಞವಾಗಿದೆ ಮೇಡಂ.

ತಾಯಿತನದ (+) (-) ಗಳನ್ನು ವಿವರವಾಗಿ ತೆರೆದಿಟ್ಟಿದ್ದೀರ.

ಕೆಲ ಮಕ್ಕಳು ಇಷ್ಟು ಅಕ್ಕರೆಯಿಂದ ಸಾಕಿದ ತಾಯಿಂದರನ್ನು ಕಡೆಗಣಿಸುವುದನ್ನು ನೀವು ಉಲ್ಲೇಖಿಸಿ ಖಂಡಿಸ ಬಹುದಿತ್ತೇನೋ ಅನಿಸಿತು.

ಒಟ್ಟಾರೆಯಾಗಿ ನನ್ನಂತ ಕಲ್ಲು ಮನಸ್ಸಿನ ಜಡ ವಸ್ತುವಿನ ಕಣ್ಣನ್ನೂ ತೇವವಾಗಿಸಿದ ಈ ಬರಹಕ್ಕೆ ಶರಣು...

ರಾಘವೇಂದ್ರ ಜೋಶಿ said...

ಹೊಸದಾಗಿ ಕೊಂಡ ಬೈಕಿನಲ್ಲಿ ತನ್ನ ಹುಡುಗಿಯನ್ನು ಸುತ್ತಾಡಿಸುತ್ತಿರುವ ಹುಡುಗ
ಬೈಕಿನ ಹಿಂದೆ ಬರೆದುಕೊಂಡಿದ್ದಾನೆ:
Mom say's
NO RACE!
:-)
ಇವತ್ತು ನಾವೆಲ್ಲ ಅಷ್ಟಿಷ್ಟು ಪ್ರಾಮಾಣಿಕರಾಗಿದ್ದರೆ,ಒಳ್ಳೆಯ ಮನಸ್ಸು ಹೊಂದಿದ್ದರೆ,ಜೊತೆಗೆ ಕೊಂಚ civic sense ಹೊಂದಿರುವ ಮನುಷ್ಯರಾಗಿದ್ದರೆ-
ಅದಕ್ಕೆ 'ಅಮ್ಮ'ನ ಕೊಡುಗೆ ನೇರ ಕಾರಣ.ಇಂಥ ಬರಹಗಳನ್ನು 'ಅಂಥ' ಅಮ್ಮ ಮಾತ್ರ ಬರೆಯಬಲ್ಲಳು..
ಥ್ಯಾಂಕ್ಸ್!
-RJ

ಮನಸು said...

’ನಮ್ಮ ಸಮಾಜ ಮಹಿಳೆಯರನ್ನು ಎಷ್ಟೊಂದು ಅದುಮಿಟ್ಟಿದೆ; ಅವರ ಆಸೆಗಳನ್ನು ಹತ್ತಿಕ್ಕಿದೆ. ಆದರೂ ಅವರು ಎಷ್ಟೊಂದು ಶಕ್ತಿಶಾಲಿಗಳು, ನಾವು ಅವರಿಗೆ ಎಷ್ಟೊಂದು ಅವಲಂಬಿತರಾಗಿದ್ದೇವೆ’ ಎಂದು ಅಚ್ಚರಿ ಪಡುತ್ತಾ, ’ಒಂದು ವೇಳೆ ಅವರ ಶಕ್ತಿ ಪೂರ್ತಿ ಹೊರಹೊಮ್ಮಲು ನಾವು ಅವಕಾಶ ಕೊಟ್ಟಿದ್ದರೆ ಈ ಭೂಮಿ ಮೇಲೆ ಗಂಡು ಸಂತತಿಯೇ ಇರುತ್ತಿರಲಿಲ್ಲ!’-ನಿಜ ಈ ಮಾತು

ಅಮ್ಮನಾಗಿ ಅಮ್ಮನ ಬಗ್ಗೆ ಬಹಳಷ್ಟು ಬರೆದಿದ್ದೀರಿ. ತುಂಬಾ ಚೆನ್ನಾಗಿದೆ ಲೇಖನ...

ಲೋಕೇಶ್ ಗೌಡ said...

ನಮ್ಮ ಸಮಸ್ಯೆಯನ್ನ ಹೆಂಡತಿಯಾಗಲಿ, ತಾಯಿಯ ಬಳಿ ಹೇಳಿಕೊಂಡರೇ ಒಂದು ರೀತಿ ಪರಿಹಾರ ಸಿಕ್ಕಿದಂತೆ. ಪರಿಹಾರ ಸಿಗದಿದ್ದರೂ ಅದೇನೋ ಒಂದು ರೀತಿ ಸಮಾಧಾನ. ನಿಜಕ್ಕೂ ಹೆಣ್ಣಿನ ಮಹತ್ವವನ್ನು ಪದಪುಂಜಗಳಲ್ಲಿ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದೀರಿ ಮೇಡಂ.

ಲೋಕೇಶ್ ಗೌಡ said...

ನಮ್ಮ ಸಮಸ್ಯೆಯನ್ನ ತಾಯಿಯ ಬಳಿ ಹೇಳಿಕೊಂಡರೇ ಒಂದು ರೀತಿ ಪರಿಹಾರ ಸಿಕ್ಕಿದಂತೆ. ಪರಿಹಾರ ಸಿಗದಿದ್ದರೂ ಅದೇನೋ ಒಂದು ರೀತಿ ಸಮಾಧಾನ. ನಿಜಕ್ಕೂ ಹೆಣ್ಣಿನ ಮಹತ್ವವನ್ನು ಪದಪುಂಜಗಳಲ್ಲಿ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದೀರಿ ಮೇಡಂ.

minchulli said...

"ಅಮ್ಮನ ಬಗ್ಗೆ. ಅಮ್ಮನಾದ ಅನುಭವದ ಬಗ್ಗೆ ಎಷ್ಟು ಬರೆದರೂ ಅದು ಅಪೂರ್ಣವೇ. ಹಿಂದೆಯೇ ಹೇಳಿದಂತೆ ಅದು ಗಂಡಸರ ಪಾಲಿನ ಆದರ್ಶ. ಹೆಂಗಸರ ಪಾಲಿಗೆ ವಾಸ್ತವ. ಎರಡನ್ನೂ ಕೂಡಾ ಭಾಷೆಯಲ್ಲಿ, ಶಬ್ದದಲ್ಲಿ ಹಿಡಿದಿಡುವುದು ಕಷ್ಟ!." wonderful...