Wednesday, February 22, 2012

ಅಶ್ಲೀಲ ಚಿತ್ರ ವೀಕ್ಷಣೆ ಶಿಕ್ಷಾರ್ಹ ಅಪರಾಧ.
ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣ ಹಲವು ಮುಖಗಳನ್ನು ಹೊಂದಿದೆ. ನಿಜ. ಅಶ್ಲೀಲ ಎನ್ನುವದನ್ನು ಹೆಣ್ಣಿನ ದೇಹಕ್ಕೆ ಮಾತ್ರ ಸೀಮಿತಗೊಳಿಸಿ ಚರ್ಚಿಸುವ ವಿಷಯ ಅಲ್ಲವೇ ಅಲ್ಲ. ಅದನ್ನು ನಾನೂ ಒಪ್ಪುತ್ತೇನೆ. ಆದರೆ….

ಮಾನ್ಯ ಮಹಾಬಲಮೂರ್ತಿ ಕೊಡ್ಲೆಕೆರೆಯವರಿಗಾಗಲಿ ಅಥವಾ ಡಾ.ನಟರಾಜ ಹುಳಿಯಾರ್ ಅವರಿಗಾಗಲಿ ಸದನ ನಡೆಯುತ್ತಿರುವಾಗಲೇ ಸಚಿವರು ಅಶ್ಲೀಲ ವಿಡಿಯೋ ವೀಕ್ಷಿಸಿದ ಪ್ರಕರಣದ ಗಂಭೀರತೆಯ ಅರಿವಾದಂತಿಲ್ಲ.
ಯಾಕೆಂದರೆ ಭಾರತೀಯ ದಂಡ ಸಂಹಿತೆ[IPC] ಪ್ರಕಾರ ಅಶೀಲ ಚಿತ್ರ ವೀಕ್ಷಣೆ ಶಿಕ್ಷಾರ್ಹ ಅಪರಾಧ. ಕಾನೂನಿನ ಪ್ರಕಾರ ಅದು ಅಪರಾಧ ಎಂದಾದರೆ ಅಂಥ ಕಾನೂನುಗಳು ರೂಪುಗೊಳ್ಳುವ ಜಾಗದಲ್ಲೇ ಆ ಕಾನೂನಿನ ಉಲ್ಲಂಘನೆಯಾದರೆ?.. ಉಲ್ಲಂಘಿಸಿದವರಿಗೆ ಶಿಕ್ಷೇಯಾಗಬೇಡವೇ ಅದು ಈಗಿರುವ ಪ್ರಶ್ನೆ. ಡಿ.ಉಮಾಪತಿಯವರು ಇದನ್ನು ಸರಿಯಾಗಿ ಗ್ರಹಿಸಿದ್ದಾರೆ. ಅವರು ತಮ್ಮ ಬರಹದ ಕೊನೆಯಲ್ಲಿ ’ಆರು ವರ್ಷದ ಬಾಲೆಯನ್ನು ಭೋಗಿಸಿದ ಮೂವತ್ತರ ಮರಳನಿಗೆ ಮೊನ್ನೆ ಶಿಕ್ಷೆ ವಿಧಿಸಿದ ದಿಲ್ಲಿಯ ನ್ಯಾಯಾಲಯವೊಂದು ಇಂತಹ ಗಡವಗಳ ಗಂಡಸತ್ವವನ್ನೇ ನಾಶ ಮಾಡುವ ಕಾನೂನು ನಮ್ಮ ದೇಶದಲ್ಲಿ ಇಲ್ಲವಲ್ಲ ಎಂದು ಪರಿತಪಿಸಿತು’ ಎಂದು ಹೇಳಿದ್ದಾರೆ. ಹೌದು, ಅಂಥ ಕಾನೂನೊಂದು ರೂಪುಗೊಳ್ಳುವುದು ಜನಪ್ರತಿನಿಧಿಗಳು ಪಾಲ್ಗೊಳ್ಳುವ ಸಂಸತ್ತಿನಲ್ಲಿ ಮತ್ತು ಶಾಸನ ಸಭೆಗಳಲ್ಲಿ. ಅಂತಹ ಶಾಸನ ಸಭೆಗಳಲ್ಲಿ ಪಾಲ್ಗೊಳ್ಳುವ ಜನಪ್ರತಿನಿಧಿಗಳಿಗೆ ಹೆಣ್ಣು ಎಂದೊಡನೆ ಯೋನಿಯ ಚಿತ್ರ ಮಾತ್ರ ಕಣುಂದೆ ಬಂದರೆ..? ಚಿಂತಿಸಬೇಕಾದ ವಿಷಯ.ಸಮಾಜವನ್ನು ಮುನ್ನಡೆಸುವ ಹೊಣೆಗಾರಿಕೆಯನ್ನು ಹೊತ್ತಿರುವ, ನೀತಿ ನಿರೂಪಕರ ಸ್ಥಾನದಲ್ಲಿರುವ ವ್ಯಕ್ತಿಯೇ ನೈತಿಕವಾಗಿ ಕೆಳಮಟ್ಟದಲ್ಲಿದ್ದರೆ?

ಮಹಾಬಲಮೂರ್ತಿಯವರ ಪ್ರಕಾರ ಸಚಿವರು ಸದನದಲ್ಲಿ ವೀಕ್ಷಿಸಿದ್ದು ಅಶ್ಲೀಲ ವಿಡಿಯೋ ಅಲ್ಲ. ಅವರು ಬರೆಯುತ್ತಾರೆ, ’ಉಡುಪಿಯ ಬಳಿ ನಡೆಯಿತ್ತೆನ್ನಲಾದ ರೇವ್ ಪಾರ್ಟಿಯ ಉನ್ಮತ್ತ ದೃಶ್ಯಗಳನ್ನು ಸದನದಲ್ಲಿ ನೋಡಿ ಆನಂದಿಸಿದರು-ಆನಂದಿಸಲು ಅವಕಾಶ ಮಾಡಿಕೊಂಡರು ಎಂಬ ಆರೋಪ ಕುರಿತು ನಾಡಿದಾದ್ಯಂತ ದೊಡ್ಡ ಬೊಬ್ಬೆಯೇ ಕೇಳಿ ಬರುತ್ತಿದೆ.’ ಬಹುಶಃ ಕೊಡ್ಲೆಕೆರೆಯವರು ಸತತವಾಗಿ ತೌಡು ಕುಟ್ಟಿದ ಸುದ್ದಿವಾಹಿನಿಗಳನ್ನು ಗಮನಿಸಿಲ್ಲವೇನೋ!
ಅವರಲ್ಲಿರುವ ಗೊಂದಲಗಳನ್ನು ಮರೆತು ನಟರಾಜ್ ಹುಳಿಯಾರ ಅವರ ಬರಹವನ್ನು ಗಮನಿಸಿದರೆ ಅವರು ಹೇಳುವುದು ಹೀಗೆ, ’ಮನೆಮನೆಗಳಲ್ಲಿ ಟೀವಿ ಮೂಲಕ ತಡೆಯಿಲ್ಲದೆ ಬಂದು ಬೀಳುತ್ತಿರುವ ’ಅಶ್ಲೀಲ’ ಎನ್ನಲಾದ ಚಿತ್ರಗಳನ್ನು ಆರಾಮವಾಗಿ ಸವಿಯುತ್ತಾ ನಮ್ಮ ಜನಪ್ರತಿನಿಧಿಗಳು ಮಾತ್ರ ಅವನ್ನು ನೋಡಬಾರದು ಎಂದು ಚೀರುವುದು ಅನೈತಿಕವಾಗುತ್ತದೆ.’

ಈ ಎರಡು ಅಬಿಪ್ರಾಯಗಳ ಜೊತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಶಿವಮೊಗ್ಗಾದಲ್ಲಿ ಪತ್ರಕರ್ತರತ್ತ ಎಸೆದ ಪ್ರಶ್ನೆಯನ್ನು ನೋಡಿ.’ಸದನದಲ್ಲಿ ಕೆಲವರು ಆಕಸ್ಮಿಕವಾಗಿ ಅಶ್ಲೀಲ ಚಿತ್ರಗಳನ್ನು ನೋಡಿರಬಹುದು ಹಾಗೆಂದು ಎಲ್ಲಾ ಎಂಎಲ್ ಎಗಳು ಇದನ್ನೇ ಮಾಡ್ತಾರಾ? ನೀವು ಅದನ್ನೇ ವಾರಗಟ್ಟಲೆ ತೋರಿಸಿದ್ರಿ. ಅವರೂ ಮನುಷ್ಯರಲ್ವಾ? ನೀವು ಮನೆಯಲ್ಲಿ ಅಂಥ ಚಿತ್ರಗಳನ್ನು ನೋಡಿಲ್ವಾ?’ ಇದರ್ಥ ಏನು ಮುಖ್ಯ ಮಂತ್ರಿಗಳೂ ಮನೆಯಲ್ಲಿ ನೀಲಿ ಚಿತ್ರ ನೋಡ್ತಾರೆ ಎಂದಂತಾಯ್ತು.
ಯಾರು ಬೇಕಾದರೂ ನೀಲಿ ಚಿತ್ರ ನೋಡಿಕೊಳ್ಳಲಿ. ಅದವರ ವೈಯ್ಯಕಿಕ ಅಭಿರುಚಿ. ಆದರೆ ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಧ್ವನಿಯಾಗಬೇಕಾಗಿರುವ ಜನಪ್ರತಿನಿಧಿಗಳು ಪಾಲ್ಗೊಳ್ಳುವ ವಿಧಾನಸಭೆಯಲ್ಲಿ, ಸದನದಲ್ಲಿ ಕಲಾಪ ನಡೆಯುತ್ತಿರುವ ವೇಳೆಯಲ್ಲೇ, ನ್ಯಾಯಾಧೀಶರ ಅಧಿಕಾರವನ್ನು ಹೊಂದಿರುವ ಸ್ಪೀಕರ್ ಎದುರುಗಡೆ ಜವಾಬ್ದಾರಿಯುತ ಸಚಿವರು ಅಸಭ್ಯರಾಗಿ,ಸುಖಲೋಲುಪ್ತತೆಯಿಂದ ವರ್ತಿಸಿದ್ದು ಎಷ್ಟರಮಟ್ಟಿಗೆ ಸರಿ ? ಅದನ್ನು ಸಮರ್ಥಿಸಿಕೊಳ್ಳುವವರನ್ನು ಏನೆನ್ನಬೇಕು?
ಇಂತಹ ಸಚಿವರ ವರ್ತನೆಯನ್ನು ಅವರ ಕುಟುಂಬವರ್ಗ ಮತ್ತವರ ಆಪ್ತರು ಬೇಕಾದರೆ ಸಮರ್ಥಿಸಿಕೊಳ್ಳಲಿ ಮತ್ತು ಕ್ಷಮಿಸಿಬಿಡಲಿ. ಆದರೆ ನಾವ್ಯಾಕೆ ಕ್ಷಮಿಸಬೇಕು? ಅವರು ನಮ್ಮ ಪ್ರತಿನಿಧಿಗಳು. ಅವರ ಕ್ರಿಯೆಯಲ್ಲಿ ನಾವೂ ಕೂಡಾ ಪಾಲುದಾರರು. ಅವರು ಒಳ್ಳೆಯ ನಿರ್ಧಾರ ತೆಗೆದುಕೊಂಡಾಗ ಹೆಮ್ಮೆ ಪಡುವ ನಾವು ಅವರು ಸಮಾಜ ವಿರೋಧಿಯಾಗಿ ನಡೆದುಕೊಂಡಾಗ ಅದನ್ನು ಖಂಡಿಸುವ ದಿಟ್ಟತನ ತೋರಿಸಬೇಕು.

ಈಗೆಲ್ಲಿದ್ದಾರೆ ಪ್ರಗತಿಪರರು? ಮಠಾದೀಶರು? ಬುದ್ಧಿಜೀವಿಗಳು? ಮಹಿಳಾ ಆಯೋಗ? ಅಥವಾ ಅವರೆಲ್ಲಾ ಹತಾಶೆಯ ಅಂಚನ್ನು ತಲುಪಿರಬಹುದೇ? ಪ್ರಜಾಪ್ರಭುತ್ವದ ಹಿತದ ದೃಷ್ಟಿಯಿಂದ ಇಂತಹ ನಿಷ್ಕ್ರೀಯತೆ ಖಂಡಿತಾ ಶುಭ ಸೂಚಕವಲ್ಲ.
ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು ಮಾಡಿದ್ದು ತಪ್ಪು ಎಂಬುದು ಮೋಲ್ನೋಟಕ್ಕೆ ಮುಖ್ಯಮಂತ್ರಿಗಳಿಗೆ ಅರಿವಾಗಿದೆ. ಹಾಗಾಗಿ ಅವರು ಸಚಿವರ ರಾಜಿನಾಮೆ ಪಡೆದಿದ್ದಾರೆ. ಆದರೆ ಸ್ಪೀಕರ್ ಇನ್ನೂ ಮೀನ ಮೇಷ ಎಣಿಸುತ್ತಿದ್ದಾರೆ. ಯಾಕೆ? ಇದು ನಮ್ಮೆಲ್ಲರ ಪ್ರಶ್ನೆ. ಯಾಕೆಂದರೆ ವಿಧಾನ ಸಬೆಯೆಂಬುದು ಸ್ಪೀಕರ್ ಅವರ ಕಾರ್ಯಕ್ಷೇತ್ರ. ಅಲ್ಲಿ ಅವರದೇ ಪರಮಾಧಿಕಾರ. ಅವರು ಕೊಡುವ ತೀರ್ಮಾನಗಳು ನ್ಯಾಯಾಧೀಶರು ಕೊಡುವ ತೀರ್ಪುಗಳಿದ್ದಂತೆ. ಅವರು ಮನಸ್ಸು ಮಾಡಿದ್ದರೆ ಅಂದೇ ಅವರ ಶಾಸಕತ್ವವನ್ನು ರದ್ದು ಮಾಡಬಹುದಿತ್ತು. ಅದರೆ ಅವರು ಹಾಗೆ ಮಾಡಲಿಲ್ಲ, ಯಾಕೆ?
ಇನ್ನು ಶೀಲ ಅಶ್ಲೀಲತೆಯ ಪ್ರಶ್ನೆಗೆ ಬಂದರೆ ಅದು ಕೂಡಾ ನಮ್ಮ ನಡವಳಿಕೆಗಳಿಗೆ ಸಂಬಂಧಿಸಿದ್ದು. ನಾವು ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸುತ್ತೇವೆ ಎಂಬುದಕ್ಕೆ ಸಂಬಂಧಿಸಿದ್ದು. ಈ ದೃಷ್ಟಿಯಿಂದ ನೋಡಿದರೂ ಸಚಿವರ ವರ್ತನೆ ಅನಾಗರಿಕವಾದುದು. ಮತ್ತು ಅದನ್ನು ಸಮರ್ಥಿಸಿಕೊಂಡದ್ದು ಸದನದ ಪಾವಿತ್ರ್ಯದ ಬಗೆಗಿನ ಅರಿವಿನ ಕೊರತೆಯಿಂದ ಉಂಟಾದದ್ದು.
ಹಾಗೆಯೇ ಮಾಧ್ಯಮಗಳು ಈ ಪ್ರಕರಣವನ್ನು ಅತಿ ರಂಜಿತವಾಗಿ ಪ್ರಸಾರ ಮಾಡಿವೆ ಎಂಬುದು ನಿಜವಾದರೂ ಆ ಕಾರಣದಿಂದಾಗಿಯೇ ಇದರ ಗಂಭೀರತೆಯೇನೂ ಕಡಿಮೆಯಾಗದು.

ಬಿಜೆಪಿಯ ರಾಜಕಾರಣಿಗಳ ನೈತಿಕ ಅದಃಪತನದ ವೇಗವನ್ನು ಗಮನಿಸಿದರೆ ಅದೊಂದು ಬ್ಲಾಕ್ ಹೋಲ್ ಎನೋ ಎಂಬ ಅನುಮಾನ ಬರುತ್ತದೆ. ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಅದು ಸತ್ಯವೆನಿಸುತ್ತದೆ. ಪ್ರಾಮಾಣಿಕತೆ, ನಿಷ್ಠೆ, ನ್ಯಾಯ ನೀತಿ ದರ್ಮ, ಸತ್ಯ ಮುಂತಾದ ಎಲ್ಲಾ ಒಳ್ಳೆತನ ಮತ್ತು ಮಾನವೀಯ ಗುಣಗಳನ್ನು ಸ್ವಾಹ ಮಾಡುತ್ತಲೇ ಆ ಕಪ್ಪು ಕುಳಿ ಬೆಳೆಯುತ್ತಲೇ ಹೋಗುತ್ತಿದೆ. ಎಂದು ಬಿಗ್ ಬ್ಯಾಂಗ್ ನಡೆಯುತ್ತದೋ ಕಾದು ನೋಡೋಣ.
[ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಬರಹ ]

2 comments:

Gold13 said...

ಅದು ತಪ್ಪು ಎಂಬುದು ಕೆಲವರ ವಾದವಾದರೆ
ಅಲ್ಲಿ ಮಾಡಿದ್ದು ತಪ್ಪು ಎಂಬುದು ಮಿಕ್ಕವರ ವಾದ.
ಇನ್ನು ಸ್ವಲ್ಪ ಜನ, ಇರ್ಲಿ ಬಿಡಿ ಈ ಇಂಟರ್ನೆಟ್ ಯುಗದಲ್ಲಿ
ಸಣ್ಣ ಮಕ್ಕಳೇ ನೋಡೋವಾಗ ಇವರೇನು ಮಹಾ ಅಂತಾರೆ
ಧೃತರಾಷ್ಟ್ರನ ದರ್ಬಾರು ಮೇಡಂ. ಯಾವುದೂ ತಪ್ಪಲ್ಲ.
'ಸರ್ಕಾರದ ಕೆಲಸ ದೇವರ ಕೆಲಸ', ಇದನ್ನ ಯಾವ ದೇವರು ನೋಡಿ ಅಂತಾನೋ ಗೊತ್ತಿಲ್ಲ.
ಆದ್ರೆ ಮೇಡಂ, ಒಂದ್ ವೇಳೆ ಅವರು ಸಮಜಾಯಿಷಿ ಕೊಟ್ಟ ಹಾಗೆ, ಅಲ್ಲಿ ಏನಾಯ್ತು ಅಂತ ತಿಳಿಯೋಕೇ
ನೋಡಿದ್ದಾದ್ರೆ, ಸದನದ ಗಮನವನ್ನೂ ಅತ್ತ ಸೆಳೆದು ನೋಡಬಹುದಿತ್ತಲ್ವ?
ಅಲ್ಲಿ ಏನೋ ಚರ್ಚೆ ನಡೀವಾಗ ಇವರು ಇಲ್ಲಿ ನೋಡುವಂಥಹದೆನಿತ್ತು?
ಶಿವನೇ ಬಲ್ಲ.

Badarinath Palavalli said...

ಅಸಹ್ಯಕರ ರಾಜಕೀಯ ಬೆಳವಣಿಗೆ. ಸರ್ಕಾರದ ಮಾನ ಹರಾಜು ಹಾಕಿದ ಆ ಛಾಯಾಗ್ರಾಹಕನ ಪರಿಶ್ರಮ ಮತ್ತು ಗ್ರಹಿಕೆಗೆ ಶರಣು.

ನನ್ನ ಬ್ಲಾಗಿಗೂ ಸ್ವಾಗತ.