Friday, July 20, 2012

ಅಂತರ್ಜಾತೀಯ ಮದುವೆ; ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯೆಡೆಗೆ ನಿರಂತರ ಪಯಣ
ಅಂತರ್ಜಾತೀಯ ಮದುವೆಗೆ ಸಂಬಂಧಪಟ್ಟಂತೆ ಈ ಬರಹ ಇರಬಹುದಾದರೂ ಕೇವಲ ಜಾತೀಯ ನೆಲೆಯಿಂದಲೇ ನನ್ನ ಮದುವೆಯನ್ನು ನಾನು ನೋಡಲಿಚ್ಛಿಸುವುದಿಲ್ಲ. ಯಾಕೆಂದರೆ ನನ್ನನ್ನು ಒಂದು ಹುಡುಗ ಮೆಚ್ಚಿದ. ನಾನವನನ್ನು ಒಪ್ಪಿಕೊಂಡೆ. ಆಗ ನನಗೆ ಅವನ ಜಾತಿ, ಅಂತಸ್ತು, ಮನೆತನ, ಅರ್ಥಿಕ ಸ್ಥಿತಿ-ಗತಿ, ವಿದ್ಯಾಭ್ಯಾಸ ಯಾವುದೂ ಗೊತ್ತಿರಲಿಲ್ಲ.

ಆ ಕಾಲವೇ ಹಾಗಿತ್ತು.ನನ್ನೂರು ಸುಳ್ಯ ತಾಲೂಕಿನ ಒಂದು ಹಳ್ಳಿ. ಆ ಕಾಲದಲ್ಲಿ ಸುಳ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಂತರ್ಜಾತೀಯ ಮದುವೆಗಳಾಗುತ್ತಿದ್ದವು. ನನ್ನ ಆತ್ಮೀಯ ವಲಯದಲ್ಲಿದ್ದ ಎಂ.ಜಿ.ಕಜೆ, ಪುರುಷೋತ್ತಮ ಬಿಳಿಮಲೆ, ಪ್ರಭಾಕರ ಶಿಶಿಲ, ಕುಮಾರಸ್ವಾಮಿ…ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಬಂಡಾಯ, ದಲಿತ ಮತ್ತು ರೈತ ಚಳ್ವಳಿಯ ಸಿದ್ದಾಂತ, ಆದರ್ಶಗಳು ನಮ್ಮ ದೈನಂದಿನ ಬದುಕನ್ನು ನಿರ್ದೇಶಿಸುತ್ತಿದ್ದವು. ನಾಟ್ಕ, ವಿಚಾರಸಂಕಿರಣ, ಸಾಹಿತ್ಯಕ ಸಮಾರಂಭಗಳು ಅದಕ್ಕೆ ಪೂರಕವಾಗಿದ್ದವು. ಲಂಕೇಶ್ ಪತ್ರಿಕೆ ನಮ್ಮ ವಿಚಾರ ಶಕ್ತಿಯನ್ನು ಮೊನಚುಗೊಳಿಸುತ್ತಿತ್ತು. ಇದೆಲ್ಲದರ ಪರಿಣಾಮವಾಗಿ ಏನನ್ನಾದರೂ ಎದುರಿಸಿ ಗೆಲ್ಲಬಲ್ಲೆವು; ಸಾಧಿಸಬಲ್ಲೆವು ಎಂಬ ಹುಮ್ಮಸ್ಸು ಎದೆಯಾಳದಿಂದಲೇ ಒದ್ದುಕೊಂಡು ಬರುತ್ತಿತ್ತು. ಸುತ್ತಮುತ್ತ ಇದ್ದ ಗೆಳೆಯರು, ಒಡನಾಡಿಗಳು ನಿಜವಾದ ಅರ್ಥದಲ್ಲಿ ಸಂಗಾತಿಗಳಾಗಿದ್ದರು. ಸಮಾಜವನ್ನು ಎದುರು ಹಾಕಿಕೊಂಡು ಮದುವೆಯಾದವರಿಗೆ ಆಸರೆಯಾಗುತ್ತಿದ್ದರು; ಕಷ್ಟ-ಸುಖದಲ್ಲಿ ಹೆಗಲಾಗುತ್ತಿದ್ದರು.

ಇವರೆಲ್ಲರ ಪ್ರಭಾವಲಯದಲ್ಲಿ ಬೆಳೆದ ಕಾರಣದಿಂದಲೋ ಏನೋ ನಾನು ಜಾತ್ಯಾತೀತ ಮನೋಭವನೆಯನ್ನು ನನಗರಿವಿಲ್ಲದಂತೆ ಮೈಗೂಢಿಸಿಕೊಂಡೆ. ಮುಂದೆ ನಾನು ಅನ್ಯ ಜಾತೀಯ ಹುಡುಗನೊಬ್ಬನನ್ನು ಪ್ರೀತಿಸಿ, ಅದನ್ನು ಮನೆಯಲ್ಲಿ ಹೇಳಬೇಕೆಂದ ಸಂದರ್ಭ ಬಂದಾಗ ಅದನ್ನು ಧೈರ್ಯದಿಂದ ಹೇಳಲು ಸಾಧ್ಯವಾಯಿತು. ಆಗ ನನ್ನ ಮನೆಯಲ್ಲಿ ಹೇಳಿಕೊಳ್ಳಬಹುದಾದ ಪ್ರತಿರೋಧವೇನೂ ವ್ಯಕ್ತವಾಗಲಿಲ್ಲ. ಅವರು ಹೇಳಿದ್ದು ಇಷ್ಟೇ. ’ಅವರನ್ನು ಒಮ್ಮೆ ಮನೆಗೆ ಕರೆದುಕೊಂಡು ಬಾ.’ ನಾನು ಕರೆದುಕೊಂಡು ಹೋದೆ. ಅವರು ಅವನನ್ನು ನೋಡಿದರು. ಮದುವೆಗೆ ಒಪ್ಪಿಗೆ ಕೊಟ್ಟರು.

”ಇದಿಷ್ಟು ಸಲೀಸೇ’ ಎಂದು ನಿಮಗೆ ಅನ್ನಿಸಬಹುದು. ಹೌದು ಸಲೀಸು. ಹಾಗೇ ನಮ್ಮ ನಡೆ-ನುಡಿಯಿರಬೇಕು. ತಮ್ಮ ಮಗ/ಮಗಳು ಎಂತಹ ಸಂದರ್ಭದಲ್ಲೂ ತಪ್ಪು ಹೆಜ್ಜೆ ಇಡಲಾರರು ಎಂಬ ರೀತಿಯಲ್ಲಿ ನಾವು ಅವರಿಗೆ ಬದುಕಿ ತೋರಿಸಿರಬೇಕು..ಹಾಗಾದಾಗ ಅವರಿಗೆ ನೋವು, ಅವಮಾನಗಳಾದರೂ ಅದನ್ನವರು ತೋರಿಸಿಕೊಳ್ಳಲಾರರು  ಹೆಚ್ಚೆಂದರೆ ಮಗ/ಮಗಲೊಂದಿಗಿನ ಸಂಪರ್ಕವನ್ನು ಅವರು ಕಡಿದುಕೊಳ್ಳಬಹುದು. ’ಎಲ್ಲಿದ್ದರೂ ಸುಖವಾಗಿರಲಿ’ ಎಂದು ಮನದಲ್ಲಿಯೇ ಹರಸಬಹುದು. ಆದರೆ    ತಮ್ಮ ಮಕ್ಕಳು ಕಷ್ಟದಲ್ಲಿದ್ದಾರೆಂದು ಅವರಿಗೆ ತಿಳಿದರೆ ಇದೇ ತಂದೆ-ತಾಯಿ ಖಂಡಿತವಾಗಿಯೂ ಧಾವಿಸಿ ಬರುತ್ತಾರೆ. ಇದಕ್ಕೆ ಅಪವಾದಗಳು ಇಲ್ಲವೆಂದಲ್ಲ. ಆದರೆ ಅಂತವರ ಸಂಖ್ಯೆ ಕಡಿಮೆ. ಮಾನವೀಯತೆಯ ಬರ ಇರುವವರು ಎಲ್ಲಾ ಕಾಲದಲ್ಲಿಯೂ ಇದ್ದೇ ಇರುತ್ತಾರೆ. ಅಂತಹ ಕರ್ಮಠ ಮನದವರು ಹಿಂದೆಯೂ ಇದ್ದರು. ಈಗಲೂ ಇದ್ದಾರೆ. ಮುಂದೆಯೂ ಇರುತ್ತಾರೆ.

ಜಾತಿಯನ್ನು ಮೆಟ್ಟಿನಿಂತು ಮದುವೆಯಾಗುವುದು ದೊಡ್ಡ ಸಮಸ್ಯೆಯೇ ಅಲ್ಲ. ಅದಕ್ಕೆ ಸಹಾಯ ಹಸ್ತ ನೀಡುವವರು ದೊಡ್ಡ ಸಂಖ್ಯೆಯಲ್ಲಿ ನಮ್ಮ ನಡುವೆ ಇದ್ದಾರೆ. ಆದರೆ ಸಂಸಾರ ಮಾಡುವವರು ಆ ಗಂಡು ಹೆಣ್ಣು ತಾನೇ?  ಅದ ಕಾರಣ ಸದಾ ಎಚ್ಚರದಿಂದ ಇರಬೇಕಾದ ಜವಾಬ್ದಾರಿ ಆ ಜೋಡಿಯ ಮೇಲಿರುತ್ತದೆ. ಅದು ಸಾಮಾಜಿಕ ಜವಾಬ್ದಾರಿ ಕೂಡಾ ಆಗಿರುತ್ತದೆ. ಯಾವುದೇ ಮದುವೆ ವರ್ಷಗಳು ಉರುಳಿದಂತೆಲ್ಲಾ ತನ್ನ ಮೊದಲಿನ ಮಾರ್ಧವತೆಯನ್ನು ಕಳೆದುಕೊಳ್ಳುವುದು ಸಹಜ. ಹಾಗಾಗಿ ಒಂದು ಗಂಡು-ಹೆಣ್ಣು ಮದುವೆ ಮಾಡಿಕೊಳ್ಳಬೇಕ್ಂದು ತೀರ್ಮಾನಿಸಿದಾಗ ಅವರು ತಮ್ಮೊಳಗೆ ವಿಮರ್ಶಿಸಿಕೊಳ್ಳಬೇಕಾದ ವಿಚಾರ ಏನೆಂದರೆ, ಇನ್ನು ಹತ್ತು ವರ್ಷಗಳು ಕಳೆದ ಮೇಲೆ ತಾವಿಬ್ಬರೂ ಇದೇ ರೀತಿ ಪರಸ್ಪರ ಎದುರುಬದುರು ಕೂತು ಹಂಚಿಕೊಳ್ಳಬಹುದಾದ ವಿಷಯಗಳು ಇವೆಯೇ ಎಂಬುದನ್ನು… ಇವೆ ಎಂದಾದರೆ ಆ ಮದುವೆ ಅರ್ಧ ಸಕ್ಶಸ್ ಆದ ಹಾಗೆಯೇ.

 ಯೌವನದಲ್ಲಿ ಎಲ್ಲರೂ ಪ್ರೇಮಿಗಳೇ…ಆದರೆ ಬರಬರುತ್ತಾ…..?!
ಯಾವ ಸಂಸಾರವೂ ಸುಖದ ಹಾಸಿಗೆಯಾಗಿರುವುದಿಲ್ಲ. ಕನಸುಗಳೇ ಬೇರೆ ವಾಸ್ತವವೇ ಬೇರೆ. ಅದಲ್ಲದೆ ಪ್ರೀತಿಸಿ ಮದುವೆಯಾದವರ ಮನಸ್ಥಿತಿ ಸಾಮಾನ್ಯ ದಂಪತಿಗಳಿಗಿಂತ ಭಿನ್ನವಾಗಿರುತ್ತೆ.. ಸ್ವತಂತ್ರವಾಗಿ ಯೋಚಿಸಬಲ್ಲ ಎರಡು ವ್ಯಕ್ತಿಗಳು ಅವರು. ಆದ ಕಾರಣದಿಂದಲೇ ಮದುವೆಯ ವಿಚಾರದಲ್ಲಿ ಪ್ರವಾಹಕ್ಕೆ ವಿರುದ್ಧವಾಗಿ ಈಜಲು ಹೊರಟಿದ್ದಾರೆ. ಆದರೂ ಒಂದೇ ಸೂರಿನಡಿ ಕಷ್ಟ-ಸುಖಗಳಲ್ಲಿ ಪರಸ್ಪರ ಆಸರೆಯಾಗುತ್ತಾ ಬದುಕುತ್ತೇವೆಂದು ನಿರ್ಧರಿಸಿದಾಗ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಲೇಬೇಕಾಗುತ್ತೆ. ಅರೇಂಜ್ಡ್ ಮದುವೆಗಳಲ್ಲಿ ಈ ಹೊಂದಾಣಿಕೆ ಸುಲಭವಾಗುತ್ತೆ. ಯಾಕೆಂದರೆ ಇಲ್ಲಿ ಬಹಳಷ್ಟು ಸಂದರ್ಭಗಳಲ್ಲಿ ಪುರುಷಪ್ರದಾನ ಸಮಾಜದ ಮೌಲ್ಯಗಳೇ ಇವರ ದಾಂಪತ್ಯದ ಮೌಲ್ಯಗಳನ್ನು ಆಳುತ್ತಿರುತ್ತದೆ. ಅಂದರೆ ಅದು ’ಅತ್ತೆ ಮಾವರಿಗಂಜಿ, ಸುತ್ತೇಳು ನೆರೆಗಂಜಿ, ಮತ್ತೆ ಆಳುವ ದೊರೆಗಂಜಿ ಗಂಡನ ಮನೆಯಲ್ಲಿ ನೀ ಬಾಳು ಮಗಳೇ’ ಎಂಬುದಾಗಿತ್ತು. ಅಂದರೆ ಅಲ್ಲೊಂದು ಪೂರ್ವ ಸಿದ್ಧತೆ ಇರುತ್ತಿತ್ತು.

ಆದರೆ ಅಂತರ್ಜಾತೀಯ ಮತ್ತು ಅಂತರ್ಮತೀಯ ವಿವಾಹದಲ್ಲಿ ಇಬ್ಬರು ಸ್ವತಂತ್ರರು; ಎರಡು ಸರಳ ರೇಖೆಗಳು ಹೇಗೆ ಒಂದನ್ನೊಂದು ಸಂದಿಸುವುದಿಲ್ಲವೋ ಹಾಗೆಯೇ ಇಲ್ಲಿ ಕೂಡಾ ಆಗುವ ಸಾಧ್ಯತೆ ಇದೆ. ಆದರೆ ಪರಸ್ಪರ ಬಾಗುವಿಕೆಯಿಂದ, ಬಳುವಿಕೆಯಿಂದ ಇಬ್ಬರೂ ಕೆಲವು ಬಿಂದುಗಳಲ್ಲಿ ಒಂದಾಗಬೇಕು. ಆ ಬಿಂದುಗಳನ್ನು ಗುರುತಿಸಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ, ಅದನ್ನು ಸ್ಥಾಯಿಯಾಗಿ ಹಿಡಿದಿಟ್ಟುಕೊಳ್ಳುವ ಜಾಣ್ಮೆ ಆ ದಂಪತಿಗಳಲ್ಲಿರಬೇಕು ಅಷ್ಟೇ.

ಪ್ರೇಮ ವಿವಾಹಗಳು ಅಥವಾ ಯಾವುದೇ ದಾಂಪತ್ಯ ಯಶಸ್ಸನ್ನು ಕಾಣಬೇಕಾದರೆ ಇರಬೇಕಾದು ಒಂದೇ ಸೂತ್ರ. ಅದು ಪರಸ್ಪರ ನಂಬಿಕೆ. ಒಮ್ಮೊಮ್ಮೆ ಈ ನಂಬಿಕೆಯ ಕೋಟೆ ಯಾವ್ಯವುದೋ ಕಾರಣಗಳಿಂದಾಗಿ ಕುಸಿಯಬಹುದು. ಆಗ ಇಬ್ಬರು ಒಟ್ಟಾಗಿ ಕೂತು ಸಮಚಿತ್ತದಿಂದ ಚರ್ಚಿಸಿ ಇದಕ್ಕೇನು ಕಾರಣ ಅಂತ ಕಂಡುಕೊಳ್ಳಬಹುದು. ಒಂದು ವೇಳೆ ಅದನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗದೇ ಹೋದರೆ ಪರಸ್ಪರ ಗೌರವಗಳಿಂದ ಬೇರೆಯಾಗಬಹುದು. ಆದರೆ ಯಾವ ಕಾರಣಕ್ಕೂ ಅದನ್ನು ಹಾದಿ ರಂಪ ಬೀದಿರಂಪ ಮಾಡಿಕೊಳ್ಳುವ ಮಟ್ಟಕ್ಕೆ ಹೋಗಬಾರದು. ಯಾಕೆಂದರೆ ಯಾವಾಗಲೂ ಪ್ರವಾಹದ ವಿರುದ್ಧ ಈಜಲು ಹೊರಟವರನ್ನು ಸಮಾಜ ಹದ್ದಿನ ಕಣ್ಣುಗಳಿಂದ ಗಮನಿಸುತ್ತಿರುತ್ತದೆ; ತಪ್ಪು ಮಾಡುವುದನ್ನೇ ಕಾಯುತ್ತಿರುತ್ತದೆ. ಅದಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಅರೆಂಜ್ಡ್ ಮದುವೆಗಳು ಕೊಳೆತು ನಾರುತ್ತಾ ಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿರುವುದು ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಎಲ್ಲೋ ಒಂದು ಪ್ರೇಮ ವಿವಾಹ ವಿಫಲವಾದರೆ ಅದನ್ನು ಕುಕ್ಕಿ ಕುಕ್ಕಿ ವ್ರಣವಾಗಿಸಲು ಅದು ಹೊಂಚು ಹಾಕಿ ಕೂತಿರುತ್ತದೆ.

ಅಂತರ್ಜಾತೀಯ ವಿವಾಹವಾದ ಹೆಣ್ಣುಮಕ್ಕಳು ಯಾವಾಗಲೂ ಎಚ್ಚರದಿಂದಿರಬೇಕು. ಯಾವ ಕಾರಣಕ್ಕೂ ತಮ್ಮ ನೌಕರಿಯನ್ನು ಕಳೆದುಕೊಳ್ಳಬಾರದು. ಉಪ ಉದ್ಯೋಗವಾದರೂ ಸರಿ ದುಡ್ಡು ಗಳಿಸಬಹುದಾದ ಯಾವುದೇ ನ್ಯಾಯಯುತ ದಾರಿಗಳದ್ದರೂ ಅದನ್ನು ಮುಚ್ಚಿಕೊಳ್ಳಬಾರದು. ಹೇಗೆ ಹೇಳುವುದು್? ನಾಳೆ ಹೀಗೆಯೇ ಆಗಬಹುದು ಎಂಬುದನ್ನು ಈಗ ಊಹಿಸಲು ಸಾಧ್ಯವಿಲ್ಲ ಅಲ್ಲವೇ..!  ಎಂತಹ ಕಷ್ಟ ಬಂದರೂ ಎದುರಿಸಬಲ್ಲೆ ಎಂಬ  ದೈರ್ಯವನ್ನು ಒಳಗಿಂದೊಳಗೆ ತುಂಬಿಕೊಳ್ಳಬೇಕು.’ ನಿನಗೆ ನೀನೇ ಗೆಳೆಯ’ ಎಂಬ ಮಾತನ್ನು ಆಗಾಗ ಮೆಲುಕು ಹಾಕುತ್ತಿರಬೇಕು. ಏನನ್ನು ನಾವು ಸದಾ ’ಯೋಚಿಸುತ್ತೆವೆಯೋ” ಅದು ವಾಸ್ತವದಲ್ಲಿ”ಆಗುತ್ತದೆ’. ಅರ್ಥಿಕ ಸ್ವಾತಂತ್ರ್ಯ, ಮಾನಸಿಕ ಮತ್ತು ದೈಹಿಕ ಆರೋಗ್ಯ ಇದ್ದರೆ ಜಗತ್ತನ್ನೇ ಎದುರಿಸುವ  ಎದೆಗಾರಿಕೆ ಒಳಗಿಂದೊಳಗೆ ಪುಟಿದು ಬರುತ್ತದೆ. ಇದರ ಬಗ್ಗೆ ಹುಡುಗಿಯರು ವಿಶೇಷ ಗಮನ ಕೊಡಬೇಕು. ತಮ್ಮದೇ ಆದ ಪುಟ್ಟ ಸ್ಪೇಸ್ [ಖಾಸಾಗಿ ಒಳಜಗತ್ತು] ಅನ್ನು ನಿರ್ಮಿಸಿಕೊಳ್ಳಬೇಕು. ಅದು ಹವ್ಯಾಸದ ರೂಪದಲ್ಲಿದ್ದರೆ ಇನ್ನೂ ಚೆನ್ನ.

ಹೆತ್ತವರ ವಿರೋಧಿಸಿ ಮದುವೆಯಾದವರು ಕುಗ್ಗಿ ಹೋಗುವ ಕೆಲವು ಸಂದರ್ಭಗಳು ಬದುಕಿನಲ್ಲಿ ಬಂದೆ ಬರುತ್ತವೆ. ಅದು ಹುಡುಗಿ ತಾಯಿಯಾಗುವ ಸಂದರ್ಭ ಬಂದಾಗ, ತಮ್ಮ ತಮ್ಮ ಮನೆಗಳಲ್ಲಿ ಶುಭ ಕಾರ್ಯಗಳು ನಡೆದಾಗ ಅಥವಾ ಆಕಸ್ಮಿಕವಾಗಿ ಹತ್ತಿರದ ಬಂಧುಗಳು ತೀರಿಕೊಂಡಾಗ, ತೀವ್ರ ಅರ್ಥಿಕ ಸಂಕಷ್ಟ ಎದುರಾದಾಗ- ಇಂಥ ಸಂದರ್ಭಗಳಲ್ಲಿ ಮಾನಸಿಕವಾಗಿ ಕುಸಿದು ಹೋಗುವ ಸಂದರ್ಭಗಳು ಎದುರಾಗಬಹುದು. ಇಂತಹ ಸಂದರ್ಭಗಳಲೆಲ್ಲಾ- ಧೈರ್ಯಂ ಸರ್ವತ್ರ ಸಾಧನಂ.

ಇಲ್ಲಿ ನನ್ನ ಅನುಭವವೊಂದನ್ನು ನಿಮಗೆ ಹೇಳಲಿಚ್ಛಿಸುತ್ತೇನೆ.  ಹೆರಿಗೆಗೆ ಇನ್ನೇನು ಒಂದು ವಾರವಿದೆ. ಎಂದಿನಂತೆ ಚೆಕ್ ಅಪ್ ಗೆಂದು ಗೌಸಿಯಾ ಆಸ್ಪತ್ರ್ಗೆ ಹೋದೆ. ಅಲ್ಲಿ ನನ್ನ ಡಾಕ್ಟರ್ ಎಚ್.ಗಿರಿಜಮ್ಮ ಇದ್ದರು. ನನ್ನನ್ನು ಚೆಕ್ ಮಾಡಿದವರೇ , ಎಂತಹ ಹುಡುಗಿಯೇ ನೀನು.. ರಕ್ತಸ್ರಾವ ಆರಂಬ ಆಗಿದೆ..  ನಿನಗೆ ಗೊತ್ತೇ ಆಗ್ಲಿಲ್ವಾ? ಹೊಟ್ಟೆನೋವು ಬರ್ತಿಲ್ವಾ..? ಎಂದು ಗದರುತ್ತಾ ಕೈಗಂಟಿದ ರಕ್ತ ತೋರಿಸಿದರು. ನನಗೆ ಗಾಬರಿಯೇನೂ ಆಗಲಿಲ್ಲ. ಒಂದು ಅಟೋ ಮಾಡಿಕೊಂಡು ಮನೆಗೆ ಬಂದೆ. ಒಂದು ತಿಂಗಳ ಹಿಂದೆಯೇ ನನಗೆ ಮತ್ತು ನವಜಾತ ಶಿಶುವಿಗೆ ಬೇಕಾದ ಬಟ್ಟೆ ಇನ್ನಿತರ ವಸ್ತುಗಳನ್ನು ಒಂದು ದೊಡ್ಡ ಬ್ಯಾಗಿನಲ್ಲಿ ತುಂಬಿಸಿ ಇಟ್ಟಿದ್ದೆ. ಅದನ್ನೆಲ್ಲ ಸರಿಯಾಗಿದೆಯೋ ಎಂದು ನೋಡಿ ನಂತರ ನಮ್ಮ ಮನೆ ಪಕ್ಕದ ಪಬ್ಲಿಕ್ ತೆಲಿಪೋನ್ ಬೂತಿನಿಂದ ನನ್ನ ಪತಿಗೆ ಪೋನ್ ಮಾಡಿದೆ. ನನ್ನ ಪತಿ ಆಗ ಕನ್ನಡ ಪ್ರಭಾದಲ್ಲಿ ವರದಿಗಾರಗಿದ್ದರು. ಆಗ ಮೊಬೈಲ್ ಪೋನ್ ಬಂದಿರಲಿಲ್ಲ. ನಮ್ಮನೆಯಲ್ಲಿ ಪೋನ್ ಇರಲಿಲ್ಲ.  ಅವರು ಅವರ ಗೆಳೆಯರೊಬ್ಬರ ಕಾರಿನಲ್ಲಿ ಮನೆಗೆ ಬಂದು ನನ್ನನ್ನು ಆಸ್ಪತ್ರ್ಗೆ ಕರೆದುಕೊಂದು ಹೋದರು. ಆಸ್ಪತ್ರೆಯಲ್ಲಿ ಗಿರಿಜಮ್ಮ ನನ್ನನ್ನು ಸ್ವಂತ ಮಗಳಂತೆ ನೋಡಿಕೊಂಡರು. ಅವರ ಮನೆಯಿಂದಲೇ ಊಟ ತಂದುಕೊಡುತ್ತಿದ್ದರು ಮೂರನೆಯ ದಿನ ಆಸ್ಪತೆಯಿಂದ ಮನೆಗೆ ಬಂದವಳೇ, ನಾನೇ ಅಡುಗೆ ಮಾಡಿದೆ. ಮಗುವಿಗೆ ಮೊದಲ ಸ್ನಾನ ಮಾಡಿಸಿದೆ.  ಅವಳ ಮತ್ತು ನನ್ನ ಬಟ್ಟೆ ತೊಳೆದೆ. ಅನಂತರ ನಾನು ಸ್ನಾನ ಮಾಡಿ ಊಟ ಮಾಡಿ ಮಲಗಿದೆ.
ನನ್ನ ಪತಿಯೊಬ್ಬ ಪತ್ರಕರ್ತ. ಹಾಗಾಗಿ ಅವನಿಂದ ನಾನು ದೈಹಿಕವಾದ ಯಾವ ಸಹಾಯವನ್ನು ನಿರೀಕ್ಷಿಸಿರಲಿಲ್ಲ.. ಆದರೆ ಆತನ ನೈತಿಕ ಬೆಂಬಲವಿಲ್ಲದೆ ನನಗೆ ಏನನ್ನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಸ್ಪಟಿಕದಷ್ಟೇ ಸತ್ಯ.  ಒಂದು ಕಠಿಣವಾದ ಪರಿಸ್ಥಿತಿಯನ್ನು ಹೇಗೆ ಸುಲಲಿತವಾಗಿ, ಸಮರ್ಥವಾಗಿ ಎದುರಿಸಬೇಕೆಂಬುದು ನಮ್ಮ ವಿವೇಚನೆಗೆ ಬಿಟ್ಟ ವಿಚಾರ. ಅದು ನನ್ನ ಮಕ್ಕಳನ್ನು ಬೆಳೆಸುವುದರಲ್ಲಿ ನಾನು ಕಂಡುಕೊಂಡ ಸತ್ಯ. ನನ್ನ ತಾಯ್ತನ ನನ್ನನ್ನು ಮಾಗಿಸಿದೆ. ಬೇರೆಯವರು ಎಷ್ಟೆ ಸಲಹೆ-ಸೂಚನೆ ಕೊಟ್ಟರೂ ಅದು ಹೊರಗಿನಿಂದ ಬಂದುದಾಗಿರುತ್ತದೆ. ಸ್ವಾನುಭವವೇ ಎಲ್ಲಕ್ಕ್ಂತ ಶ್ರೇಷ್ಟವಾದುದು
.
ಜಾತಿಪದ್ಧತಿ ವಿಜೃಂಬಿಸುವುದು ಎರಡು ಸಂದರ್ಭಗಳಲ್ಲಿ ಒಂದು ಧಾರ್ಮಿಕ ಸಮಾರಂಭಗಳಲ್ಲಿ. ಇನ್ನೊಂದು ಹುಟ್ಟು-ಸಾವು, ಮದುವೆ-ಮುಂಜಿ ಮುಂತಾದ ಕೌಟುಂಬಿಕ ಸಮಾರಂಭಗಳಲ್ಲಿ. ಹಗಾಗಿ ಅಂತಹ ಸಂದರ್ಭಗಳಲ್ಲಿ ಭಾಗವಹಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿಕೊಳ್ಳಬೇಕು.  ಅಲ್ಲದೆ ಇಂತಹ ಸಂದರ್ಭಗಳಲ್ಲೇ ನಮ್ಮ  ದುಡ್ಡು, ಚಿನ್ನ,ಅಂತಸ್ತಿನ ಪ್ರದರ್ಶನ ಆಗುವುದು. ಇಂತಹ ಸಮಾರಂಭಗಳಲ್ಲಿ ಭಾಗವಹಿಸದ ಕಾರಣದಿಂದಾಗಿಯೋ ಏನೋ ನನ್ನಲ್ಲಿ ಬಂಗಾರದ ಒಡವೆಗಳಿಲ್ಲ; ರೇಷ್ಮೆ ಸೀರೆಗಳಿಲ್ಲ. ನನ್ನ ಗಂಡ ಇದೂವರೆಗೂ ನನಗೆ ಒಂದು ಗ್ರಾಂ ಚಿನ್ನವನ್ನೂ ತಂದು ಕೊಟ್ಟಿಲ್ಲ; ನಾನೂ ಖರೀದಿ ಮಾಡಿಲ್ಲ!

ಪ್ರೇಮ ವಿವಾಹವಾಗುವ ಹೆಚ್ಚಿನ ಹುಡುಗ-ಹುಡುಗಿಯರು ಆರ್ತಿಕವಾಗಿಯೂ ಸ್ವತಂತ್ರರಿರುತ್ತಾರೆ.ಹಾಗಾಗಿ  ಪರಸ್ಪರ ಹೊಂದಾಣಿಕೆ ಸಾಧ್ಯವೇ ಇಲ್ಲವೆಂದಾದರೆ ದೈವೊರ್ಸ್ ಪಡೆದುಕೊಳ್ಳಬಹುದು. ಅಥವಾ ಒಂದೇ ಮನೆಯಲ್ಲಿದ್ದುಕೊಂಡು ಪ್ಯಾರಲಾಲ್ ಬದುಕನ್ನು ಬದುಕಬಹುದು. ಅಂದರೆ ಎರಡು ಅಪರಿಚಿತ ವ್ಯಕ್ತಿಗಳು ಒಂದೇ ಮನೆಯಲ್ಲಿದ್ದುಕೊಂಡು ಸ್ವತಂತ್ರವಾಗಿ ಬದುಕಿದಂತೆ ಬದುಕಬಹುದು. ಈ ರೀತಿಯ ಬದುಕು ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಸಾಮಾನ್ಯ ಅನಿಸಿಕೊಳ್ಳುತ್ತಿದೆ.

ಭಾರತದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಮದುವೆ ಎನ್ನುವುದು ಕೇವಲ ಗಂಡು-ಹೆಣ್ಣಿನ ನಡುವೆ ಏರ್ಪಡುವ ಸಂಬಂಧವಲ್ಲ. ಅದು ಎರಡು ಕುಟುಂಬಗಳ ನಡುವೆ ಏರ್ಪಡುವ ಬಾಂಧವ್ಯ..ಹಾಗಾಗಿ ಹೆತ್ತವರನ್ನು ವಿರೋಧಿಸಿ, ಅವರ ಇಚ್ಛೆಗೆ ವಿರೋಧವಾಗಿ ಮದುವೆಯಾದ ದಂಪತಿಗಳು ಕಾಲಾಂತರದಲ್ಲಿ ಸಾಧ್ಯವಾದರೆ ತಮ್ಮ ತಮ್ಮ ಹೆತ್ತವರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎರಡೂ ಕುಟುಂಬಗಳ ಮಧ್ಯೆ ಬಂದುತ್ವವನ್ನು ಬೆಸೆಯುವ ಪ್ರಯತ್ನ ಮಾಡಬೇಕು.. ಎಷ್ಟದರೂ ನೆಮ್ಮದಿಯ ಬದುಕಿಗೆ ಬೇಕಾಗಿರುವುದು ಪರಸ್ಪರ ಪ್ರೀತಿ, ವಿಶ್ವಾಸ. ನಂಬಿಕೆಗಳು ತಾನೇ? ನಮ್ಮ ಪ್ರಯತ್ನ ಯಾವಾಗಲೂ ಅದರೆಡೆಗೇ ಸಾಗುತ್ತಿರಬೇಕು.

[ ಈ ವಾರದ ’ಅಗ್ನಿ’ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ]

13 comments:

ushodaya said...

nimma lekhana thumbaa chennaagi moodibandide.anther jaathi vivaaha,adarallina novu nalivu,koneyalli preethi,vishvaasa,nambike iddare,samaajavannu yaava reethi edurisabahudu embudannu thumbaa chennaagi bimbisiddeera.

ಸುಮ said...

ಒಳ್ಳೆಯ ಲೇಖನ ಉಷ ..ದಾಂಪತ್ಯ ಯಶಸ್ವಿ ಎನ್ನಿಸಿಕೊಳ್ಳಲು ವಿವಾಹವಾಗುವ ರೀತಿ ಮುಖ್ಯವಲ್ಲ ,ನಂತರ ಹೇಗೆ ಬದುಕಬಲ್ಲರು ಎಂಬುದು ಮುಖ್ಯ.
ಅಂತರಜಾತೀಯ ಅಥವ ಅಂತರಧರ್ಮೀಯ ಮದುವೆಯಾಗಲು ಇಬ್ಬರಲ್ಲೂ ಕೆಲವು ಕ್ವಾಲಿಫಿಕೇಶನ್ ಬೇಕಾಗುತ್ತದೆ. ಅವರು ಪ್ರಬುದ್ಧರಾಗಿರಬೇಕು , ಸ್ವಾವಲಂಬಿಗಳಾಗಿರಬೇಕು , ಯಾವುದೇ ಅಂಧಶ್ರದ್ಧೆ ಇರಬಾರದು , ಪ್ರತಿಯೊಬ್ಬರ ಆಚಾರವಿಚಾರಗಳನ್ನು ಗೌರವಿಸುವ ಗುಣ ಇರಬೇಕಾಗುತ್ತದೆ. ಆಗ ಸಮಾಜವನ್ನೆದುರಿಸುವ , ಅಂತರಜಾತೀಯ ಮದುವೆಗಳಲ್ಲಿ ಎದುರಾಗುವ ಒಳಿತು ಕೆಡುಕುಗಳನ್ನು ಸರಿಯಾಗಿ ವಿಶ್ಲೇಷಿಸುವ ಅದನ್ನು ಯಶಸ್ವಿಯಾಗಿ ಎದುರಿಸುವ ಸಾಮರ್ಥ್ಯ ಇಬ್ಬರಲ್ಲೂ ಇರುತ್ತದೆ . ಆದರೆ ಇತ್ತೀಚಿನ ದಿನಗಳಲ್ಲಿ ಇನ್ನೂ ಬೌದ್ಧಿಕವಾಗಿ ಬೆಳೆಯದ ಸ್ವಾವಲಂಬಿಗಳಾಗದ ವಿದ್ಯಾರ್ಥಿಗಳು ಸುಮ್ಮನೇ ಆಕರ್ಷಣೆಗೊಳಗಾಗಿ ಒಂದಾಗಿ ನಂತರ ಕಷ್ಟಪಡುವ ಪ್ರಸಂಗಗಳೇ ಹೆಚ್ಚಿವೆ . ನಿಮ್ಮ ಲೇಖನ ಇಂತವರಿಗೊಂದು ದಾರಿದೀಪದಂತಿದೆ.

minchulli said...

ಉಷಕ್ಕಾ

"ಆದರೆ ಅಂತರ್ಜಾತೀಯ ಮತ್ತು ಅಂತರ್ಮತೀಯ ವಿವಾಹದಲ್ಲಿ ಇಬ್ಬರು ಸ್ವತಂತ್ರರು; ಎರಡು ಸರಳ ರೇಖೆಗಳು ಹೇಗೆ ಒಂದನ್ನೊಂದು ಸಂದಿಸುವುದಿಲ್ಲವೋ ಹಾಗೆಯೇ ಇಲ್ಲಿ ಕೂಡಾ ಆಗುವ ಸಾಧ್ಯತೆ ಇದೆ. ಆದರೆ ಪರಸ್ಪರ ಬಾಗುವಿಕೆಯಿಂದ, ಬಳುವಿಕೆಯಿಂದ ಇಬ್ಬರೂ ಕೆಲವು ಬಿಂದುಗಳಲ್ಲಿ ಒಂದಾಗಬೇಕು. ಆ ಬಿಂದುಗಳನ್ನು ಗುರುತಿಸಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ, ಅದನ್ನು ಸ್ಥಾಯಿಯಾಗಿ ಹಿಡಿದಿಟ್ಟುಕೊಳ್ಳುವ ಜಾಣ್ಮೆ ಆ ದಂಪತಿಗಳಲ್ಲಿರಬೇಕು ಅಷ್ಟೇ."

"ಭಾರತದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಮದುವೆ ಎನ್ನುವುದು ಕೇವಲ ಗಂಡು-ಹೆಣ್ಣಿನ ನಡುವೆ ಏರ್ಪಡುವ ಸಂಬಂಧವಲ್ಲ. ಅದು ಎರಡು ಕುಟುಂಬಗಳ ನಡುವೆ ಏರ್ಪಡುವ ಬಾಂಧವ್ಯ..ಹಾಗಾಗಿ ಹೆತ್ತವರನ್ನು ವಿರೋಧಿಸಿ, ಅವರ ಇಚ್ಛೆಗೆ ವಿರೋಧವಾಗಿ ಮದುವೆಯಾದ ದಂಪತಿಗಳು ಕಾಲಾಂತರದಲ್ಲಿ ಸಾಧ್ಯವಾದರೆ ತಮ್ಮ ತಮ್ಮ ಹೆತ್ತವರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎರಡೂ ಕುಟುಂಬಗಳ ಮಧ್ಯೆ ಬಂದುತ್ವವನ್ನು ಬೆಸೆಯುವ ಪ್ರಯತ್ನ ಮಾಡಬೇಕು.. ಎಷ್ಟದರೂ ನೆಮ್ಮದಿಯ ಬದುಕಿಗೆ ಬೇಕಾಗಿರುವುದು ಪರಸ್ಪರ ಪ್ರೀತಿ, ವಿಶ್ವಾಸ. ನಂಬಿಕೆಗಳು ತಾನೇ? ನಮ್ಮ ಪ್ರಯತ್ನ ಯಾವಾಗಲೂ ಅದರೆಡೆಗೇ ಸಾಗುತ್ತಿರಬೇಕು."

ಇವಿಷ್ಟೂ ಸತ್ಯ... ಎಷ್ಟು ಚಂದದ ಲೇಖನ ಅಂತ ಹೇಳೋದಕ್ಕೇ ಸಾಧ್ಯವಿಲ್ಲ...

ಅವಧಿ said...

ನಿಮ್ಮ ಈ ಲೇಖನ ಪ್ರಾರ೦ಭದಲ್ಲಿ ಅ೦ತರ್ಜಾತೀಯ ಮದುವೆಗೆ ಸ೦ಬ೦ಧಿಸಿದ್ದಾಗಿ ಕ೦ಡರೂ, ಅದು ಎಲ್ಲಾ ಮದುವೆಗಳಿಗೂ ಅನ್ವಯಿಸುತ್ತದೆ ಎನ್ನುವುದು ಇದರ ಹಿರಿಮೆ, ಚನ್ನಾಗಿದೆ ಉಷಾ,

ಸ೦ಧ್ಯಾ ರಾಣಿ

Badarinath Palavalli said...

ಬದುಕನ್ನು ಕಟ್ಟಿಕೊಳ್ಳುವ ನವ ಜೋಡಿಗಳಿಗೆ ಪಠ್ಯವಾಗುವ ಮತ್ತು ಈಗಾಗಲೇ ಸಂಸಾರ ನೊಗ ಹೊತ್ತಿರುವ ಹಚ್ಚ ಹಳೇ ಜೋಡಿಗಳಿಗೆ ಸಂಗ್ರಹ ಯೋಗ್ಯವಾದ, ಪದೇ ಪದೇ ಓದಿಕೊಳ್ಳಲೇ ಬೇಕಾದ ಲೇಖನ.

Anuradha said...

ಹೆಚ್ಚಾಗಿ ಅಂತರ್ಜಾತಿ ಎನ್ನುವ ಭಾವನೆ ಮನೆಯ ಹಿರಿಯರು ಮೂಡಿಸುತ್ತಾರೆ ...ನನ್ನ ತಂದೆ ಆ ರೀತಿಯ ಭಾವನೆ ಮೂದಿಸದಿದ್ದುದಕ್ಕೆನೋ ನನ್ನ ಮಗ ಪಂಜಾಬಿ ಹುಡುಗಿನ ಇಷ್ಟಪಟ್ಟಿದ್ದೀನಿ..ಅಂದ ಕೂಡಲೇ ಮನೆಯಲ್ಲಿ ಸಿಹಿ ಮಾಡಿ ಹಂಚಿದೆ .ನೀವು ಹೇಳಿದಂತೆ ಎರಡೂ ಕಡೆಯ ಕುಟುಂಬಗಳ ಸಹಕಾರ ,ಪ್ರೀತಿ ,ವಿಶ್ವಾಸ ತುಂಬಾ ಮುಖ್ಯ .

sunaath said...

ಅಂತರ್ಜಾತೀಯ ವಿವಾಹವನ್ನು ಎಲ್ಲ ಕೋನಗಳಿಂದ ವಿಮರ್ಶಿಸುವ ಅತ್ಯುತ್ತಮ ಬರಹ. ಪ್ರೇಮವಿವಾಹಗಳೇ ವಾಡಿಕೆಯಾಗುತ್ತಿರುವ ಈ ದಿನಗಳಲ್ಲಿ, ಸ್ವಜಾತಿವಿವಾಹ ಎನ್ನುವುದು ಗೌಣವಾಗುತ್ತದೆ.

ಸಿಮೆಂಟು ಮರಳಿನ ಮಧ್ಯೆ said...

ತುಂಬಾ ಇಷ್ಟವಾಯ್ತು ....
ಲೇಖನ..
ನೀವು ಮತ್ತು ಶಶಿಧರ ಭಟ್ರು......

umesh desai said...

good one madam..

Srikanth Manjunath said...

ಎರಡು ರೇಖೆಗಳ ಮಧ್ಯೆ ನಡೆಯುವ ಸಂಬಂಧ ಈ ಮದುವೆಯ ಬಾಂಧವ್ಯ..ಎರಡು ಅಸ್ತಿತ್ವಗಳ ಮಿಲನ...ಬಹಳ ಚೆನ್ನಾಗಿದೇ ಲೇಖನ

ರಾಘವೇಂದ್ರ ಜೋಶಿ said...

ಕೌನ್ಸೆಲಿಂಗ್ ಮಾಡುವ ಕಡೆ ಒಂದು ಮಾತಿದೆ: ನಿನ್ನ ಗುಟ್ಟುಗಳನ್ನು ಬಿಟ್ಟುಕೊಡದೆ ನೀನು ಎದುರಿಗಿರುವವರ ಗುಟ್ಟನ್ನು ಬೇಧಿಸಲಾರೆ ಅಂತ.
ಹಾಗೆಯೇ ನೀವು ನಿಮ್ಮ ಅನುಭವವನ್ನು ಹೇಳಿಕೊಳ್ಳುತ್ತ,ಪ್ರೇಮವಿವಾಹಗಳ ಸಾರ್ಥಕತೆ/ನಿರರ್ಥಕತೆಗಳ ಬಗ್ಗೆ ಮಾತನಾಡಿದ್ದು ಇಷ್ಟವಾಯಿತು.ನೀವು ಇನ್ನಷ್ಟು ಒಳಗಿಳಿಯಬೇಕಿತ್ತು ಅಂತ ನನ್ನ ಆಸೆ ಮತ್ತು ಭಾವನೆ. :-)
-RJ

ವನಿತಾ / Vanitha said...

ನನ್ನದೂ ಕೂಡ ಅಂತರ್ಜಾತೀಯ ವಿವಾಹ..ನನ್ನ ಮನಸಲ್ಲಿದ್ದುದನ್ನೆಲ್ಲ ಒಳ್ಳೆಯ ರೀತಿಯಲ್ಲಿ ಬರೆದಿದ್ದೀರಿ..ಇಷ್ಟ ಆಯ್ತು

Praveen Kumar D said...

ನಾನು ಲಿಂಗಾಯತ ಅವಳು ಬ್ರಾಹ್ಮಿನ್ ಇಬ್ಬರದು ಇಂಜಿನಿಯರಿಂಗ್ ಮುಗಿದಿದೆ ನಾನು Mindtree ಗೆ , ಅವಳು TCS ಗೆ campuse ಆಗಿದ್ದೆವು . ಇಬ್ಬರದು ಬೇರೆ ಬೇರೆ college ಅವಳು TCS ಗೆ Join ಆದಳು ನಾನು ಇನ್ನು Joining Date ಗಾಗಿ ಕಾಯುತ್ತಿರುವೆ , ಅವಳಿಗೆ ಗಂಡು ನೋಡುತಿದ್ದಾರೆ .. ನನ್ನ ಮನೆಯಲ್ಲಿ ಒಪ್ಪಿಸಿದ್ದೇನೆ , ಅವರನ್ನು ಹೇಗೆ ಒಪ್ಪಿಸುವುದು .. ಬ್ರಾಹ್ಮಣರು ಲಿಂಗಯತರೊಡನೆ ಮದುವೆಯಾಗಲು ಬಿಡುತ್ತಾರಾ ? ಅವಳು ಪಾಲಕರು ಒಪ್ಪಿದರೆ ಮಾತ್ರ ಮದುವೆ ಆಗುತ್ತಲೇ ಅಂತೇ ??


ನಿಯಮ ಬದಿಕಿಗೋ ? ಅಥವಾ ಬದುಕೇ ನಿಯಮಕೋ ???? Help me ..prvn1321@gmail.com