Tuesday, August 7, 2012

ಸಂಸ್ಕೃತಿ ಕಳಶವನ್ನು ಹೊತ್ತ ದೇವದಾಸಿಯರಲ್ಲ ನಾವು..!
ಇದನ್ನು ಬರೆಯುತ್ತಿರುವಾಗ ನನ್ನಲ್ಲೊಂದು ವಿಷಣ್ಣ ಭಾವವಿದೆ.
ನಾನಿದನ್ನು ಬರೆಯುತ್ತೇನೆ..ಆದರೆ ಓದುವವರು ಯಾರು? ನಮ್ಮ ಹಾಗೆ ಯೊಚಿಸುವ ನೀವು.
ಅಂದರೆ ಯಾರಿಗಿದು ತಲುಪಬೇಕೆಂದು ನಾವು ಬರೆಯುತ್ತೇವೆಯೋ ಅವರಿದನ್ನು ಓದುವುದಿಲ್ಲ. ಹಾಗೆಂದುಕೊಂಡು ಬರೆಯದೇ ಇರಲಾದೀತೆ?

ಮಂಗಳೂರಿನ ”ಮಾರ್ನಿಂಗ್ ಮಿಸ್ಟ್’ ಹೋಂ ಸ್ಟೇ ಯ ಮೇಲೆ ಹಿಂದೂ ಜಾಗರಣ ಸಮಿತಿಯೆಂಬ ಖೂಳ ಪಡೆ ಧಾಳಿ ನಡೆಸಿ ಅಲ್ಲಿದ್ದ ಹುಡುಗ-ಹುಡುಗಿಯನ್ನು ಅಟ್ಟಾಡಿಸಿಕೊಂಡು ಹೊಡೆದ ಪೈಶಾಚಿಕ  ದೃಶ್ಯಗಳನ್ನು ನೀವೆಲ್ಲಾ ಟೀವಿಯಲ್ಲಿ ನೋಡಿದ್ದೀರಿ. ಆದರೆ ಆ ಖೂಳ ಪಡೆಯನ್ನು ಕೂಳು ಸಾಕಿ ವಿಧ್ವಂಸಕ ಕೃತ್ಯಗಳಿಗೆ ಹುಚ್ಚೆಬ್ಬಿಸಿ ಕಳುಹಿಸುವ ಸೂತ್ರದಾರರು ಯಾರು?ಅದು ಯೋಚಿಸಬೇಕಾದ ವಿಷಯ.

ಇದೇ ವರ್ಷ ಜನವರಿಯಲ್ಲಿ ದ.ಕ.ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯಿತು.  ಅಗ ಅದರ ನೇತೃತ್ವ ವಹಿಸಿಕೊಂಡಿದ್ದ ಕಲ್ಲಡ್ಕ ಪ್ರಭಾಕರ ಭಟ್ ಉಗ್ರವಾದ, ಪ್ರಚೋಧನಾತ್ಮಕವಾದ ಭಾಷಣ ಮಾಡಿದರು.  ಹಿಂದೂ ಸಂಸ್ಕೃತಿ ಮತ್ತು ಧರ್ಮದ ಉದ್ಧಾರ ಮಹಿಳೆಯರಿಂದ ಮಾತ್ರ. ಹಾಗಾಗಿ ಅವರು ಹರಿದ್ರಾ ಕುಂಕುಮ ಶೋಭಿತೆಯರಾಗಿ ಮೈತುಂಬಾ ಸೆರಗನ್ನು ಹೊದ್ದು ಇರುವಂತೆಯೂ, ಅವರು ಹಾಗಿಲ್ಲದೆ ಅನ್ಯ ಕೋಮಿನ ಯುವಕರೊಡನೆ ಒಡನಾಟವಿಟ್ಟುಕೊಂಡರೆ ಅವರನ್ನು ಸದೆ ಬಡಿಯಿರಿ ಎಂದು ಕರೆನೀಡಿದ್ದರು. ಬಹುಶಃ ಅವರು ನೀಡಿದ ಕರೆ ಆರು ತಿಂಗಳ ನಂತರ ತನ್ನ ವಿರಾಟ್ ಸ್ವರೂಪವನ್ನು ಮೊನ್ನೆನ ಧಾಳಿಯಲ್ಲಿ ಮೆರೆದಿದೆ. ’ಅನ್ಯ ಕೋಮು’ ಎಂಬ ಕಲ್ಪನೆ ಇಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಮೊನ್ನೆನ ಧಾಳಿಯ ಹಿಂದಿನ ಹುನ್ನಾರಗಳನ್ನು ನಾವು ಚರ್ಚಿಸುವುದೇ ಬೇಡ..ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನಮಗೂ ಕೂಡಾ ಒಂದಷ್ಟು ವಿವರಗಳ ಅವಶ್ಯಕತೆಯಿದೆ. ದೃಶ್ಯ ಮಾಧ್ಯಮಗಳಲ್ಲಿ ಬಿತ್ತರಗೊಂಡ ಘಟನೆಗಳನ್ನಷ್ಟೆ ನೋಡೋಣ…ಅದು ಅನಕ್ಷರಸ್ತರಿಗೂ ಅರ್ಥವಾಗುತ್ತೆ….

 ಪುಂಡರೆಂದು ಮೇಲ್ನೋಟಕ್ಕೆ ಕಂಡುಬರುವ ಒಂದಷ್ಟು ಹುಡುಗರು ಏಕಾಏಕಿ ಒಂದು ಹೋಂ ಸ್ಟೇ ಒಳಗೆ ನುಗ್ಗಿ ಅಲ್ಲಿದ್ದ ಇನ್ನೂ ಎಳಸುತನ ಮಾಸದ, ಪ್ರಬುದ್ಧತೆಯ ಹಂತಕ್ಕೆ ಏರದಂತೆ ಕಾಣುತ್ತಿರುವ ಹುಡುಗ-ಹುಡುಗಿಯರ ಮೇಲೆ ಮುಗಿಬಿದ್ದು ಎಲ್ಲೆಂದರಲ್ಲಿ ಚಚ್ಚಿದ್ದಾರೆ. ಆಗ ಆ ಹುಡುಗ-ಹುಡುಗಿಯರು ಅರೆಬೆತ್ತಲೆಯಲ್ಲಿದ್ದರು; ಪಾನಮ್ಮತ್ತರಾಗಿದ್ದರು ಎಂಬುದು ದಾಳಿಕೋರರ ದೃಢನಂಬಿಕೆ. ಹಾಗಾಗಿ ಅದು ನಮ್ಮ ಸಂಸ್ಕೃತಿಗೆ ವಿರುದ್ಧವಾದುದು. ದಾರಿ ತಪ್ಪಿ ನಡೆಯುತ್ತಿರುವ ಅವರಿಗೆ ಬುದ್ಧಿ ಹೇಳಿ ಅವರನ್ನು ಸರಿ ದಾರಿಗೆ ತರುವುದು ತಮ್ಮ ಘನ ಉದ್ದೇಶ ಎಂಬುದು ಅವರ ಉವಾಚ…

ಅಲ್ಲಿದ್ದ ಹುಡುಗ-ಹುಡುಗಿಯರನ್ನು ಕ್ಯಾಮಾರ ಮುಂದೆ ತೋರಿಸುವ ಮೊದಲು ಆ ಕಿರಾತಕರು ಮಾಡಿದ್ದ ಘನಕಾರ್ಯ ಏನೆಂದರೆ ಸ್ವತಹ ತಾವೇ ಪಾನಮತ್ತರಾಗಿ, ಆ ಹೋಂ ಸ್ಟೇಯಲ್ಲಿ ಅಲ್ಲಲ್ಲಿ ತಮ್ಮಷ್ಟಕ್ಕೆ ಹರಟುತ್ತಿದ್ದ ಆ ಹುಡುಗ ಹುಡುಗಿಯರನ್ನೆಲ್ಲಾ ದರದರನೆ ಎಳೆದೊಯ್ದು ಒಂದೇ ರೂಮಿನಲ್ಲಿ ಕೂಡಿ ಹಾಕಿ ಅವರನ್ನು ಅರೆಬೆತ್ತಲೆಯಾಗಿಸಿ [ ಒಬ್ಬನಂತೂ ಹುಡುಗಿಯೊಬ್ಬಳ ಕೆಂಪು ಜಾಕೇಟನ್ನು ಅರೆಸ್ಟ್ ಆಗುವ ತನಕ ಹಾಕಿಕೊಂಡೇ ಇದ್ದ] ಅವರ ಬೆಲೆಬಾಳುವ ಮೊಬೈಲ್, ವಾಚ್, ಬಂಗಾರದ ಚೈನ್, ಹಣ ಮುಂತಾದುವುಗಳನ್ನು ಲಪಾಟಯಿಸಿದರು. ಇದೆಲ್ಲಾ ಆದ ಮೇಲೆ ಅವರನ್ನು ಕ್ಯಾಮಾರ ಮುಂದೆ ತಳ್ಳಿದರು. ಆಮೇಲಿನದೆಲ್ಲಾ ಪೈಶಾಚಿಕ ವಿಜೃಂಬಣೆ.

ಟೀವಿ ಕ್ಯಾಮಾರಾ ಯಾರ ಮೇಲೆ ಪೋಕಸ್ ಆಗಿತ್ತು? ಪೇಪರ್ ಗಳು ಯಾರ ಪೋಟೊವನ್ನು ಟ್ಯಾಗ್ ಲೈನ್ ತರ ಉಪಯೋಗಿಕೊಂಡವು ಎಂಬುದನ್ನು ನಾನು ಹೇಳಲು ಹೋಗುವುದಿಲ್ಲ. ಅದು ಸೂಕ್ಷ ಮನಸ್ಸಿನವರಿಗೆ ಅರ್ಥವಾಗುತ್ತದೆ. ಆದರೆ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ? ಇಡೀ ವ್ಯವಸ್ಥೆಯೇ ಸರಕಾರದ ಕೈಯಿಂದ ಹೇಗೆ ಜಾರಿ ಹೋಗಿದೆ? ನೈತಿಕ ಪೋಲಿಸರ ಹೇಗೆ ವಿಜೃಂಭಿಸುತ್ತಿದ್ದಾರೆ? ಅಲ್ಲಲ್ಲಿ, ಆಗಾಗ ಕೇಳಿ ಬರುತ್ತಿದ್ದ ಪ್ರತಿಭಟನೆಯ ಸಣ್ಣ ಸಣ್ಣ ಧ್ವನಿಗಳು ಈಗ ಸಂಪೂರ್ಣವಾಗಿ ಉಡುಗಿ ಹೋಗಲು ಕಾರಣವೇನಿರಬಹುದು ಎಂಬುದನ್ನು ದ.ಕನ್ನಡದಿಂದ ಹೊರಗಿರುವವರು ಈಗ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದು..

ಇದೆಲ್ಲಾ ಹೋಗಲಿ, ನಮ್ಮರಾಜ್ಯದಲ್ಲೊಂದು ಮಹಿಳಾ ಆಯೋಗವಿದೆ. ಅದಕ್ಕೊಂದು ಅಧ್ಯಕ್ಷರಿದ್ದಾರೆ. ಮಹಿಳೆಯರ ಘನತೆಗೆ ಧಕ್ಕೆ ಆದಾಗ ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂದು ಅದು ಧಾವಿಸಿ ಬರಬೇಕು.  ಆದರೆ ಅಧ್ಯಕ್ಷೆಗೆ  ಶೋಭಾಕ್ಕನ ಜೊತೆ ನಂಜನಗೂಡಿಗೆ ತೆರಳಿ ಎಡಿಯೂರಪ್ಪನವರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳಲು ಪುರುಸೋತ್ತಿದೆ. ಆದರೆ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಒಳಹುನ್ನಾರಗಳನ್ನು ಅರ್ಥೈಸಿಕೊಂಡು ಅದಕ್ಕೆ ಸ್ಪಂದಿಸುವ ಸಹನೆಯಿಲ್ಲ. ಆಕೆ ಮೊನ್ನೆ ಮಂಗಳೂರಿನಲ್ಲಿ ಹೇಳಿದ್ದಾದರೂ ಏನು? ಹೋಂ ಸ್ಟೇಯಲ್ಲಿದ್ದ ವಿದ್ಯಾರ್ಥಿಗಳ ಚಾರಿತ್ರ್ಯದ ಬಗ್ಗೆಯೇ ಆಕೆ ಸಂಶಯವಂತೆ..ಆಕೆ ಮತ್ತೂ ಮುಂದುವರಿದು ಹೇಳುತ್ತಾರೆ. ಒಬ್ಬ ವಿದ್ಯಾರ್ಥಿಯ ತಾಯಿಯ ಮೇಲೆ ಕೂಡಾ ಕಳಂಕದ ಆರೋಪವಿದೆಯಂತೆ. ಆರೋಪಕ್ಕೇನು ಸ್ವಾಮಿ? ಪೋಲಿಸ್ ವ್ಯವಸ್ಥೆ ಮತ್ತು ಲೋಕಲ್ ಪೇಪರಿನವರು ಸೇರಿಕೊಂಡರೆ ಏನು ಬೇಕಾದರೂ ಮಾಡಬಹುದು.. ಇದೇ ಪೋಲಿಸರು ತಾನೇ  ತಾವೇ ಕಾಂಡೋಮ್ ಅನ್ನು ಬ್ಯೂಟಿ ಪಾಲರ್ ಒಂದರಲ್ಲಿ ಇಟ್ಟು ಅಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆಯೆಂದು ಬಿಂಬಿಸಲು ಪ್ರಯತ್ನಿಸಿದ್ದು..?!  
ಅಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಹುಡುಗ-ಹುಡುಗಿಯರನ್ನು ಹಿಗ್ಗಾ ಮುಗ್ಗಾ ಥಳಿಸಿ.ಅವರ ಸ್ವಾಭಿಮಾನಕ್ಕೆ, ಸಂವಿಧಾನದತ್ತವಾದ ಘನತಯ ಬಾಳ್ವೆಗೆ ಧಕ್ಕೆ ತಂದದ್ದು ನಿಜ ತಾನೇ? ಅದನ್ನು ನಾವೆಲ್ಲಾ ಪ್ರತ್ಯಕ್ಷ ಕಂಡಿದ್ದೇವಲ್ಲವೇ? ಅದು ಆ ಅಧ್ಯಕ್ಷರ ಅರಿವಿಗೆ ಬರಲಿಲ್ಲವೇ? ’ಅರಸನ ಅಂಕೆಯಿಲ್ಲದಿದ್ದರೆ ಹೀಗೆಯೇ ಆಗುತ್ತದೆ. ಆಳುವ ಪ್ರಭುಗಳು ಮೊದಲು ತಮ್ಮ ಜೀವನದಲ್ಲಿ ಕನಿಷ್ಟ ನೈತಿಕತೆಯನ್ನಾದರೂ ಉಳಿಕೊಳ್ಳಬೇಕು.ಆಗ ಪ್ರಜೆಗಳೂ ನೀತಿವಂತರಾಗುತ್ತಾರೆ.

ಈ ಸಂಸ್ಕೃತಿ ರಕ್ಷಕರಲ್ಲಿ ನನ್ನದೊಂದು ಪ್ರಶ್ನೆಯಿದೆ. ವೇಶ್ಯಾವಾಟಿಕೆಯನ್ನೇ ನಮ್ಮ ಸಂಸ್ಕೃತಿಯ ಒಂದು ಭಾಗವನ್ನಾಗಿ ಒಪ್ಪಿಕೊಂಡ ಉದಾತ್ತ ಸಂಸ್ಕೃತಿ ನಮ್ಮದು..ನಮ್ಮ ಪುರಾಣ ಕಾವ್ಯ ಪರಂಪರೆಯನ್ನೇ ನೋಡಿ.ಅಷ್ಟಾದಶಾವರ್ಣನೆಗಳಲ್ಲಿ ವೇಶ್ಯಾವಾಟಿಕೆಯ ವರ್ಣನೆಯೂ ಒಂದು. ಗಂಡಸರೇ, ನೀವಿಲ್ಲದಿದ್ದರೆ, ನಿಮ್ಮ ತೆವಲುಗಳಿಲ್ಲದಿದ್ದರೆ ಆ ಪುರಾತನ ವೃತ್ತಿ ಇಂದು ಹಲವು ಬಣ್ಣಗಳಲ್ಲಿ ಹೇಗೆ ವಿಜೃಂಭಿಸಲು ಸಾಧ್ಯವಿತ್ತು?

ಯುವಜನಾಂಗ ಬದುಕನ್ನು ಒಂದು ಉತ್ಸವ [ಸೆಲೆಬ್ರೇಷನ್] ವನ್ನಾಗಿ ನೋಡಲು,ಅನುಭವಿಸಲು ಬಯಸುತ್ತದೆ. ಅನುಭವಿಸಲಿ ಬಿಡಿ. ನಿಮಗ್ಯಾಕೆ ಹೊಟ್ಟೆಕಿಚ್ಚು? ಅಷ್ಟಕ್ಕೂ ಉತ್ಸವ ಎನ್ನುವುದು ಒಂದೆರಡು ದಿನದ ಮೋಜು ತಾನೇ? ಅನಂತರ ಇದ್ದೇ ಇದೆಯಲ್ಲಾ ಬದುಕಿನ ಗೋಳು. ಯಾರಿಗ್ಗೊತ್ತು.ಅದನ್ನು ಎದುರಿಸಲು ಅವರಿಲ್ಲಿ ತಾಲೀಮ್ ನಡೆಸುತ್ತಿರಬಹುದು..ಅವರು ನಿಜದ ರಂಗಕ್ಕೆ ಬರಲಿ, ಅಲ್ಲಿ ಅವರನ್ನು ಎದುರಿಸಿ ಗೆಲ್ಲಿ. ಹಾಗೆ ಗೆಲ್ಲಬೇಕಾದರೆ ನೀವು ಅವರಿಗಿಂತಲೂ ನೈತಿಕವಾಗಿ ಎತ್ತರದಲ್ಲಿರಿ ಎಂಬುದನ್ನು ಸಾಧಿಸಿ ತೋರಿಸಿ. ಅದು ನಿಮ್ಮಲ್ಲಿ ಇಲ್ಲದೆ ಹೋದರೆ ಈ ಕಳ್ಳದಾರಿಗಳೆಲ್ಲ ಯಾಕೆ? ನೀವು ನಿಮ್ಮನ್ನು, ನಿಮ್ಮ ಪುರುಷಾಧಿಪತ್ಯವನ್ನು ರಕ್ಷಿಸಿಕೊಳ್ಳಲು ನೀವೇ ನಮ್ಮ ರಕ್ತದಲ್ಲಿ ಬೆರೆಸಿದ  ಪೊಳ್ಳು ಮೌಲ್ಯಗಳನ್ನು ಈಗಿನ ಯುವ ಜನಾಂಗ ಪ್ರಶ್ನಿಸಿದರೆ ಅವರ ನಾಲಗೆಯನ್ನೇ ಬಲಿ ಪಡೆಯವ ಹುನ್ನಾರವೇಕೆ ಸ್ವಾಮಿ?

 ಜನಪ್ರಿಯ ಸಾಮಾಜಿಕ ಸಂಪರ್ಕ ತಾಣವಾದ ’ಪೇಸ್ ಬುಕ್’ ನಲ್ಲಿ ನಾವು ಮಹಿಳೆಯರೇ ಸೇರಿಕೊಂಡು ರಚಿಸಿಕೊಂಡ ವೇದಿಕೆ;ಗ್ರೂಪ್ ಒಂದಿದೆ. ಅದು ”ಅಂತಃಪುರ’. ಅಲ್ಲಿ ಸಖಿಯರಿಗೆ ಮಾತ್ರ ಪ್ರವೇಶ. ಅಲ್ಲಿ ನಾವು ನಿರ್ಭಯದಿಂದ ನಾವು ನಮ್ಮ ವ್ಯಯ್ಯಕ್ತಿಕ ಸಮಸ್ಯೆಯಿಂದ ಹಿಡಿದು ಅಂತರಾಷ್ಟ್ರೀಯ ಸಮಸ್ಯೆಗಳ ತನಕ ಚರ್ಚಿಸುತ್ತೇವೆ. ಅಲ್ಲಿ ಹಾಸ್ಯವಿದೆ; ನೋವಿದೆ, ನಲಿವಿದೆ., ವಿಮರ್ಶೆಯಿದೆ,ಪರಸ್ಪರ ಹೆಗಲಿದೆ. ಆದರೆ ನಾವೆಲ್ಲಾ ಮೌಖಿಕವಾಗಿ ಪರಿಚಿತರಲ್ಲ. ಹಾಗಾಗಿ  ಮೊನ್ನೆ ಆಗಸ್ಟ್ ೪ರ ಶನಿವಾರದಂದು ಬೆಂಗಳೂರಿನ ಜಯನಗರದ ಹೋಟೇಲ್ ಒಂದರಲ್ಲಿ  ನಾವು ಸುಮಾರು ಮೂವತ್ತು ಮಹಿಳೆಯರು ಒಟ್ಟು ಸೇರಿದೆವು. ನಾವಲ್ಲಿ ಸೇರುವುದೆಂದು ನಿರ್ಧರಿಸಿದ್ದಾಗ ಅಲ್ಲಿ ಭಾಗವಹಿಸಲು ಸಾಧ್ಯವಾಗದ ದೂರದಲ್ಲಿರುವ, ವಿದೇಶಗಳಲ್ಲಿರುವ ನಮ್ಮ ಸಖಿಯರು ನಮಗೆ ಎಚ್ಚರಿಕೆಯನ್ನೂ ನೀಡಿದ್ದರು ’ ಜಾಗ್ರತೆ ಕಣ್ರಮ್ಮಾ..ಅಲ್ಲಿಗೇನಾದರೂ ಸಂಸ್ಕೃತಿ ರಕ್ಷಕರು ದಾಳಿ-ಗೀಳಿ ಮಾಡಿಬಿಟ್ಟಾರು..!’
ಇದು ಎಷ್ಟು ನಿಜ ಅಲ್ವಾ? ನಿಜವಾಗಿಯೂ ನಮಗೆ ಭಯವಾಗುತ್ತಿದೆ. ನಮ್ಮ ಚಟುವಟಿಕೆಗಳನ್ನು ಯಾರೋ ಹದ್ದಿನ ಕಣ್ಣುಗಳಿಂದ ಗಮನಿಸುತ್ತಿದ್ದಾರೆ; ನಮ್ಮನ್ನು ನಿಯಂತ್ರಿಸುತ್ತಿದ್ದಾರೆ ಅಂದರೆ ನಾವು ಸಂಕೋಚ, ಭಯದಿಂದ ಮುದುಡಿ ಹೋಗುವುದಿಲ್ಲವೇ? ಅಲ್ಲಿ ಊಟ ಮಾಡುತ್ತಿದ್ದಾಗ ಮಂಗಳೂರಿನ ಸುದ್ದಿ ಚಾನಲ್ ಒಂದರ ವರದಿಗಾರರೊಬ್ಬರಿಂದ ನನಗೊಂದು ಪೋನ್ ಬಂತು. ಅವರು ಹೇಳುತ್ತಿದ್ದರು.’ಮೇಡಂ, ಇಲ್ಲಿ ದಾಳಿಯಲ್ಲಿ ಸಿಲುಕಿದ ಯಾವ ಹುಡುಗಿಯೂ ನಮಗೆ ಮಾತಾಡಿಸಲು ಸಿಗುತ್ತಿಲ್ಲ. ನೀವೇನಾದರೂ ಈಕಡೆ ಬರುವುದಿದೆಯಾ?’.

ಹೌದು ಸ್ವಾಮಿ. ಅವರು ನಿಮಗೇಕೆ ಸಿಗಬೇಕು? ಎಲ್ಲರೂ ಸೇರಿ ನಮ್ಮ ಚಾರಿತ್ರ್ಯ ವಧೆ ಮಾಡುತ್ತೀರಿಲ್ಲಾ.... ’ನೀವೆಲ್ಲಾ ನಮ್ಮ ಅಕ್ಕ-ತಂಗಿಯರು; ತಾಯಂದಿರು” ಎನ್ನುತ್ತಾ  ನಮ್ಮನ್ನು ಮಾರಾಟದ ಸರಕುಗಳಂತೆಯೋ, ಶೋಕೇಸಿನಲ್ಲಿರುವ ಬೊಂಬೆಗಳಂತೆಯೋ,ಸಂಸ್ಕೃತಿ ಕಲಶವನ್ನು ಹೊರುವ ದೇವದಾಸಿಯಂತೆಯೋ ಚಿತ್ರಿಸಿದರೆ..? ನಾವು ಯಾರಿಗಾದರೂ ಯಾಕೆ ಸಿಗಬೇಕು?
 ನಾವು ನಮ್ಮನ್ನು ತಮ್ಮ  ಸಹಜೀವಿಗಳು ಎಂಬಂತೆ ಕಾಣುವವರಿಗಾಗಿ ಕಾಯುತ್ತಿದ್ದೇವೆ.
 [ಮಂಗಳೂರಿನಿಂದ ಪ್ರಕಟವಾಗುವ ’ಸಂವೇದಿ’ ಎಂಬ ನಿಯತಕಾಲಿಕಕ್ಕಾಗಿ ಬರೆದಿರುವ ಲೇಖನ ]

13 comments:

Badarinath Palavalli said...

ಒಂದು ದರೋಡೆ ಪ್ರಕರಣ ದಾಖಲಾಗಬೇಕಿದ್ದ, ರಾಜ್ಯ ಸರ್ಕಾರ ತನ್ನ ಸೋಗಲಾಡಿ ಕಣ್ಣ್ಕಾಪನ್ನು ಎತ್ತಿಟ್ಟು ನೋಡಬೇಕಾದ ಪ್ರಕರಣವಿದು.

ಮಹಿಳಾ ಆಯೋಗದ ಅಧ್ಯಕ್ಷರು ಊರು ಕೊಳ್ಳೆ ಹೋದ ಮೇಲೆ ಸಂತಾಪಕ್ಕೆಂದು ಯಾವಾಗಲೋ ಹೋದರೆ, ಆಯೋಗವಾದರೂ ಏತಕ್ಕೆ?

ಒಟ್ಟಾರೆ ತಲೆ ತಗ್ಗಿಸಬಲ್ಲ ಪ್ರಕರಣ, ಇದರಲ್ಲಿ ಮಾಧ್ಯಮದ ಪಾತ್ರವೆಷ್ಟು?

ಮೌನರಾಗ said...

ನಿಮ್ಮ ಹರಿತವಾದ ಬರಹಕ್ಕೊಂದು ಸಲಾಂ ಮೇಡಂ....
ಸಂಸ್ಕ್ರತಿ ಹೆಸರಲ್ಲಿ ಅನಾಗರಿಕರಾಗಿ ವರ್ತಿಸುತ್ತಿರುವ ದುಷ್ಕರ್ಮಿಗಳಿಗೆ ದಿಕ್ಕಾರವಿರಲಿ....
ಅರ್ಥಪೂರ್ಣ ಲೇಖನ. ನಮ್ಮ ಜಿಲ್ಲೆಯ ಅವಸ್ಥೆಗೆ ದುಃಖವಾಗುತ್ತಿದೆ....

ಸುಮ said...

" ಸಂಸ್ಕೃತಿಯ ಕಲಶ ಹೊತ್ತ ದೇವದಾಸಿಯರಲ್ಲ ನಾವು " ನಿಜಕ್ಕೂ ಸತ್ಯ. ಆದರೆ ಗಂಡು ಪ್ರಪಂಚ ಭಾವಿಸಿರೋದೆ ಹಾಗೆ. ಸಮಾಜದ ಅಥವಾ ಕುಟುಂಬದ ಎಲ್ಲಾ ತಪ್ಪು, ಓರೆ ಕೋರೆಗಳಿಗೂ ಅವಳೇ ಕಾರಣ ಎಂದು ಹೇಳುವ ಗಂಡಸರ ಮನಸ್ಥಿತಿ ಹೇವರಿಕೆ ಹುಟ್ಟಿಸುತ್ತದೆ. ಎಷ್ಟೋ ಹೆಂಗಸರೂ ಕೂಡ ಹಾಗೇ ಅಂದುಕೊಳ್ಳುತ್ತಾರಲ್ಲ ಅಂಥವರಿಗೇನನ್ನುವುದು?

sandhya rani said...

ಉಷಾ, ಇ೦ತಹ ಸ೦ವೇದನಾಪೂರ್ಣ ಬರಹಗಳಿ೦ದಲೇ ಬೇಟಿಯಾಗುವ ಮೊದಲೇ ಗೆಳತಿ ಅನ್ನಿಸಿದವರು ನೀವು, ಯಾವುದೇ stand ತೆಗೆದುಕೊಳ್ಳದೆ ಬರೆಯುವುದೇ ಬುದ್ಧಿವ೦ತಿಕೆಯಾಗಿರುವಾಗ ನೀವು ತೆಗೆದುಕೊ೦ಡ ದಿಟ್ಟನಿಲುವು ನನಗೆ ಇಷ್ಟವಾಯಿತು. ಮೊನ್ನೆ ಬಶೀರ್ ಸಹ ಹೇಗೆ ಕೆಲವು ಹಿತಾಸಕ್ತಿಗಳು ಸಮಾಜದ ಮಧ್ಯಮ ಮತ್ತು ಕೆಳಮಧ್ಯಮ ವರ್ಗದವರನ್ನು ಬಳಸಿಕೊ೦ಡು, ಈ ಧಾಳಿ ನಡೆಸಿ, ಅವರನ್ನು ಜೈಲಿಗಿ ಕಳಿಸಿ, ತಮ್ಮ ಮನೆ ಮಕ್ಕಳನ್ನು ಉನ್ನತ ವಿದ್ಯಾಭ್ಯಾಸಕ್ಕೆ, ಕೆಲಸಗಳಿಗೆ ಕಳಿಸ್ತಾರೆ ಅ೦ತ ಬರೆದಿದ್ದರು, ನಿನ್ನೆ ಇನ್ನೊಬ್ಬ ಫ಼ೇಸ್ ಬುಕ್ ಮಿತ್ರ ನವೀನ್ ಶೆಟ್ಟಿಯವರು ಮ೦ಗಳೂರಿನ ಸಿಟಿಮಾಲ್ ನಲ್ಲಿ ಹೇಗೆ ಈ ’ಸ೦ಸ್ಕೃತಿ ರಕ್ಷಕರ’ ಎರಡುಮುಖ ಅನಾವರಣಗೊ೦ಡಿದೆ ಅ೦ತ ಬರೆದಿದ್ದರು. ಬುದ್ಧಿವ೦ತ ಜಿಲ್ಲೆ ಎ೦ದು ಕರೆಸಿಕೊಳ್ಳುವ ಮ೦ಗಳೂರು ಇದೇನಾಗಿ ಹೋಗಿದೆ...?

mohan said...

Great article madam..

ashok kr said...

ಇಲ್ಲಿ ಬರೆಯುವುದನ್ನು ಯಾರು ಓದಬೇಕೋ ಅವರು ಓದುವುದಿಲ್ಲ ಎಂದ ಮೇಲೆ ಬರೆಯುವುದ್ಯಾಕೆ ಎಂಬ ನಿಮ್ಮ ಮನದಲ್ಲಿ ಮೂಡಿದ ಭಾವನೆ ನನಗೂ ಬಹಳಷ್ಟು ಸಲ ಬಂದಿದೆ. ಆದರೆ ಆ ನೆಪದಿಂದ ಬರೆಯದಿದ್ದರೆ ನಮಗೆ ನಾವೇ ದ್ರೋಹ ಮಾಡಿಕೊಂಡಂತೆ ಅಲ್ಲವೇ? ನಮ್ಮ ಪರಿಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಮಾಡಲೇಬೇಕು.
ನಿಮ್ಮ ಬರಹ ಉತ್ತಮವಾಗಿ ಮೂಡಿಬಂದಿದೆ. ಸಮಾಜ ಉತ್ತಮವಾಗುತ್ತ ಸಾಗಲಿ ಎಂದು ಆಶಿಸುವ - ಡಾ ಅಶೋಕ್. ಕೆ. ಆರ್

sunaath said...

ಉಷಾ,
ನಿಮ್ಮ ಲೇಖನವನ್ನು ನಾನು ನೂರಕ್ಕೆ ನೂರರಷ್ಟು ಒಪ್ಪುತ್ತೇನೆ. ಆದರೆ, ಈ ಎಲ್ಲದರ ಹಿಂದೆ ಇನ್ನೂ ಒಂದು ಸತ್ಯವಿದೆ. ಅದು ಏನು? ‘ಹಿಂದೂ ಸಂಸ್ಕೃತಿ ರಕ್ಷಣೆ’ ಎನ್ನುವುದು ಒಂದು ಪ್ರತಿಕ್ರಿಯೆ ಅಲ್ಲವೆ? ಇಂತಹ ಪ್ರತಿಕ್ರಿಯಾತ್ಮಕ ನೀಚತನವನ್ನು ಹುಟ್ಟಿಸಿದವರು ಯಾರು? "‘ಆತ’ ಕೆಸರಲ್ಲಿ ಬಿದ್ದಿದ್ದಾನೆ; ಆದುದರಿಂದ ನಾನೂ ಕೆಸರಲ್ಲಿ ಬೀಳುತ್ತೇನೆ" ಎನ್ನುವ ರಾಜಕೀಯವನ್ನು ಬೆಳೆಸಿದವರು ನಮ್ಮ ಮತ-ರಾಜಕಾರಣಿಗಳೇ ಅಲ್ಲವೆ?
ಈ ಎಲ್ಲ ಧಾಂಧಲೆಗಳಲ್ಲಿ ಬಲಿಪಶು ಆಗುವವರು ಹೆಣ್ಣುಮಕ್ಕಳು. ಅದು ನಮ್ಮ ದೇಶದ ದುರಂತ.

NANJUNDARAJU said...

ಮಾನ್ಯರೇ, ಒಳ್ಳೆಯ ಲೇಖನ. ಮನ ಮುಟ್ಟುವಂತಿದೆ. ಇಂತಹ ಸಾಮಾಜಿಕ ಪಿಡುಗುಗಳನ್ನು ಹತ್ತಿಕ್ಕಲು ಇಂತಹ ಲೇಖನಗಳು ಸೂಕ್ತ. ಪ್ರತಿಭಟನೆಯೂ ಸೂಕ್ತ. ವಂದನೆಗಳೊಡನೆ.

NANJUNDARAJU said...

ಮಾನ್ಯರೇ ಮತ್ತೊಂದು ವಿಷಯ ಹೇಳಲು ಇಚ್ಚಿಸುತ್ತೇನೆ. ಹಿಂದೂ ಸಂಸ್ಕೃತಿ ರಕ್ಷಣೆ ಎಂದು ಹೇಳಿಕೊಂಡು ಈ ರೀತಿಯ ಘಟನೆಗಳು ನಡೆಯುತ್ತಿದ್ದರೆ. ಸಂಸ್ಕೃತಿಯ ರಕ್ಷಣೆ ಹೇಗಾಗುತ್ತದೆ ಹಿಡು ಧರ್ಮ ಉಳಿಯುತ್ತದೆಯೆ? ತಿಳಿದವರೆ ಹೇಳಬೇಕು?

ushakattemane said...

ಈ ಲೇಖನವನ್ನು ಅವಧಿ ಹಂಚಿಕೊಂಡಿತ್ತು. ಅಲ್ಲಿ ಬಂದ ಕಾಮೆಂಟ್ ಗಳು ಕೆಳಗಿವೆ
D.RAVI VARMA says:
August 9, 2012 at 7:59 am
ಅವರು ನಿಮಗೇಕೆ ಸಿಗಬೇಕು? ಎಲ್ಲರೂ ಸೇರಿ ನಮ್ಮ ಚಾರಿತ್ರ್ಯ ವಧೆ ಮಾಡುತ್ತೀರಿಲ್ಲಾ…. ’ನೀವೆಲ್ಲಾ ನಮ್ಮ ಅಕ್ಕ-ತಂಗಿಯರು; ತಾಯಂದಿರು” ಎನ್ನುತ್ತಾ ನಮ್ಮನ್ನು ಮಾರಾಟದ ಸರಕುಗಳಂತೆಯೋ, ಶೋಕೇಸಿನಲ್ಲಿರುವ ಬೊಂಬೆಗಳಂತೆಯೋ,ಸಂಸ್ಕೃತಿ ಕಲಶವನ್ನು ಹೊರುವ ದೇವದಾಸಿಯಂತೆಯೋ ಚಿತ್ರಿಸಿದರೆ..? ನಾವು ಯಾರಿಗಾದರೂ ಯಾಕೆ ಸಿಗಬೇಕು?
ನಾವು ನಮ್ಮನ್ನು ತಮ್ಮ ಸಹಜೀವಿಗಳು ಎಂಬಂತೆ ಕಾಣುವವರಿಗಾಗಿ ಕಾಯುತ್ತಿದ್ದೇವೆ…….

ನಿಮ್ಮ ಅಂತರಾಳದ ನೋವು, ಸಿಟ್ಟು ,ಹಳಹಳಿಕೆ ,ಎಲ್ಲವನ್ನು ನಿಮ್ಮ ಈ ಚಿಂತನೆಯಲ್ಲಿ ,ಹೊಯ್ದಾಟದಲ್ಲಿ ಮನಮುಟ್ಟುವ ಹಾಗೆ ಬರೆದಿದ್ದೀರಿ, ನೀವೇ ಕೇಳುವ ಹಾಗೆ ಇದು ಯಾರಿಗೆ ತಲುಪಬೇಕೋ ಅವರಿಗೆ ತಲುಪುವುದಿಲ್ಲ, ಅವರು ಒಂದಿಸ್ತು ಬರಹಗಾರರ ಚಿಂತನೆಗಳನ್ನಸ್ತೆ ಅಲ್ಲ, ಬರಹಗಾರರನ್ನು ಕೂಡ ದ್ವೆಸಿಸುವ ಮೌಡ್ಯರು….
ಈ ಜ್ವಲಂತ ಸಮಸ್ಯೆ ಇದರಹಿಂದಿರುವ ಕ್ರೂರ ಕುಟಿಲೋಪಾಯ, ಯುವಜನಾಂಗವನ್ನು ಧರ್ಮದ mattinede ಎಲೆದೊಯ್ಯುತಿರುವ, ಅವರ ಭಾವನೆಗಳನ್ನು ,ಅಸಹಾಯಕ ಸ್ತಿತಿಯನ್ನು ,ತಮ್ಮ ಬೆಲೆ ಬೇಯಿಸಿಕೊಳ್ಳಲು , ವ್ಯವಸ್ತಿತವಾಗಿ ಬಳಸಿಕೊಳ್ಳುವ ರಾಜಕೀಯ ದ ಹಿಂದಿರುವ ಅಜೆಂಡಾ ವನ್ನು ಈ ಪಡ್ಡೆಗಳು ಅರ್ಥಿಸಿಕೊಲ್ಲದಿರುವುದು ದುರಂತವಲ್ಲದೆ ಮತ್ತೇನು . ಸ್ವಾಮಿ ವಿವೇಕಾನಂದರನ್ನು ನ್ನು ತಮ್ಮ ಗುರು ಎಂದು ಹೇಳಿಕೊಳ್ಳುವ ಇವರು ವಿವೇಕಾನಂದರ ಅಂತರ್ಸತ್ವ ವನ್ನು ಏಕೆ ಅರ್ಥಿಸ್ಕೊಲ್ಲುತ್ತಿಲ್ಲ ….

“ಬೇರೆಲ್ಲ ಧರ್ಮಗಳು ನಾಶವಾಗಿ ನನ್ನ ಧರ್ಮ ವೊಂದೇ ಉಳಿಯಲಿ ಎಂದು ಕನಸು ಕಾಣುವವರ ಬಗ್ಗೆ ನಾನು ಹೃದಯಾಂತರಾಳದಿಂದ ಕನಿಕರಪಡುತ್ತೇನೆ…ಪರಸ್ಪರ ನೇರವಾಗಿ ಕಿತ್ತಡಬೇಡಿ.ಒಂದಾಗಿ ಬೆರೆಯಿರಿ ,ಸಾಮರಸ್ಯವಿರಲಿ ” ಸ್ವಾಮಿ ವಿವೇಕಾನಂದ ರ ಈ ಅನ್ತಾಲದ ಮಾತುಗಳು ಇವರಿಗೆ ಅರಗುತ್ತಿಲ್ಲವೇಕೆ ….

“ನನ್ನ ರಾಮ ರಾಜ್ಯವೆಂದರೆ ,ಹಿಂದೂ ರಾಜ್ಯವಲ್ಲ …
ರಾಮರಾಜ್ಯವೆಂದರೆ ನನ್ನ ಅರ್ಥದಲ್ಲಿ ,
ದೇವರ ರಾಜ್ಯ ..
ನನಗೆ ರಾಮ -ರಹೀಮ ಎಲ್ಲರು ಒಂದೇ ” ಗಾಂಧಿಜೀ ..

ಪ್ರಕ್ಯಾತ ಬರಹಗಾರು ಹಾಗು ಸಮಾಜ ಮುಖಿ ಚಿಂತಕರಾದ ‘ಫಣಿಕ್ಕರ್ ‘ ಈ ಮಾತು ಇಲ್ಲಿ ಪ್ರಸ್ತುವೆನಿಸುತ್ತದೆ ..
“ಪಾಪಿಗಳು ಗೆಲ್ಲಲು ಪುಣ್ಯಾತ್ಮರು ಮೌನವಾಗಿದ್ದರೆ ಸಾಕು ”
ನಮ್ಮೆಲ್ಲರ ಮೌನ, ನಿಸ್ಕ್ರಿಯೆ ,ಮುಂದಿನ ದಿನಗಳ ಕರಾಳ ಬದುಕಿಗೆ ಹಾದಿಯಾಗಬಲ್ಲದೇನೋ…,
ನನಗೊಂದು ವಿಸ್ಮಯ ಕಾಡುತ್ತಿದೆ, ಕನ್ನಡ ಸಾಹಿತ್ಯದ ದಿಗ್ಗಜರುಗಳು, ಹತ್ತಾರು ಪ್ರಶಸ್ತಿ ಬಾಚಿಕೊಂಡವರು, ಹತ್ತಾರು ಪುಸ್ತಿಕೆ ಬರೆದವರು , ಈಗ ಅದೆಲ್ಲಿ ಮಾಯವಾಗಿದ್ದರೆ,
ಸಾಯಿನಾಥ್ ಹೇಳುವ ಹಾಗೆ “ಅದೆಲ್ಲಿ ನಿರೋ” ಗಳಾಗಿ ಪಾರ್ಟಿಗಳಲ್ಲಿ ಮುಳುಗಿಹೋಗಿದ್ದಾರೆ,…
ಅವರಿಗೆ ಈ ಅವಗಡಗಳು ಕಾಣುತ್ತಿಲ್ಲವೇ, ಕಾಡುತ್ತಿಲ್ಲವೇ,…. ಕುರುಡರಾಗಿದ್ದರೆಯೇ ಕಿವುಡರಾಗಿದ್ದರೆಯೇ … ಅಥವಾ ಇದು ಜಾಣ ಕಿವುಡೆ…. ಇದು ಜಾಣ ಕುರುಡೇ….

ಕೊನೆಗೂ ಮತ್ತೆ ಮತ್ತೆ ಶ್ರೀ ಶ್ರೀ ನೆನಪಾಗುತ್ತಾರೆ ,ಅವರ ಎಚ್ಚರದ ಈ ಮಾತು kaaduttade …..

“ಎವೊರೋ ವಸ್ತಾರನಿ ,ಇದೋ ಚೆಸ್ತಾರನಿ
ಎದುರು ಚೂಸಿ ಮೊಸಪೋಕುಮಾ
ನಿಜಂ ಮರೆಚಿ ನಿದ್ರಪೋಕುಮಾ “….

ರವಿವರ್ಮ …
ರವಿ ವರ್ಮ ಹೊಸಪೇಟೆ ,

ushakattemane said...

ಪರಶುರಾಮ ಕಲಾಲ್ says:
August 9, 2012 at 11:32 am
ಉಷಾ ನಿಮ್ಮ ಬರವಣಿಗೆ ತುಂಬಾ ಆಪ್ತವಾಗಿದೆ. ಕೊನೆಯ ಸಾಲುಗಳಂತೂ ಟಿಆರ್‍ಪಿಯ ಬೆನ್ನು ಬಿದ್ದಿರುವ ಮಾಧ್ಯಮದ ಹಪಾಹಪಿತನಕ್ಕೆ ಅಪ್ಪಳಿಸುವಂತೆ ಹೇಳಿದ್ದೀರಿ. ಸಂಘ ಪರಿವಾರದ ಹುನ್ನಾರವನ್ನು ನಾವು ಎದುರಿಸಲೇಬೇಕು. ಅನ್ಯ ಮಾರ್ಗವೇ ಇಲ್ಲ. ಸರ್ಕಾರ ನಂಬಿಕುಳಿತುಕೊಳ್ಳಲು ಸಾಧ್ಯವಿಲ್ಲ. ಅದು ಕೂಡಾ ಸಂಘ ಪರಿವಾರದ ಒಂದು ಭಾಗವಾಗಿದೆ.


Dhananjaya Kulkarni says:
August 9, 2012 at 11:37 am
ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಮಾತಿಗೆ ಹಿಂಜಾವೇ ಉತ್ತಮ ಉದಾಹರಣೆ. ನಮ್ಮ ಹಿಂದೂ ಇತಿಹಾಸವನ್ನೇ ತೆಗೆದುಕೊಂಡರೆ, ಪುರಾಣಕಾಲದಿಂದಲೂ ಹಿಂದೂ ಸಂಸ್ಕೃತಿಗೆ ಮದ್ಯಸೇವನೆ ಹೊಸದೇನಲ್ಲ. ಅದು ಬಿಡಿ, ಇಂದಿಗೂ ಕೂಡ ಅನೇಕ ಹಳ್ಳಿಗಳಲ್ಲಿ ಬುಡಕಟ್ಟು ಜನಾಂಗದ ಮಹಿಳೆಯರು ತಮ್ಮ ಸಂಸಾರ ಸಮೇತರಾಗಿ ಮದ್ಯ ಸೇವಿಸುತ್ತಾರೆ. ಕೇವಲ ಮದ್ಯ ಸೇವನೆ ಅಪರಾಧವೆನ್ನುವುದಾದರೆ, ಹಿಂಜಾವೇ ಘನ ಕಾರ್ಯಕರ್ತರು ಮದ್ಯಸೇವನೆ ಮಾಡಿಯೇ ಇಲ್ಲಿ ದಾಳಿನಡೆಸಿದ್ದು ಯಾಕೆ? ಸಮಾನತೆಯ ಬಗ್ಗೆ ಬೊಬ್ಬೆ ಹೊಡೆಯುತ್ತ, ನಿರಂತರವಾಗಿ ವಿಷಯ ಲಂಪಟತನವನ್ನು ಮಾಡುತ್ತ, ಈ ರೀತಿಯ ಗೂಂಡಾಗಿರಿಯಿಂದ ಹಿಂದೂ ಧರ್ಮವಲ್ಲ, ಯಾವುದೇ ಧರ್ಮದ ರಕ್ಷಣೆ ಸಾಧ್ಯವೇ ಇಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಮಾನಸಿಕ, ದೈಹಿಕ, ಬೌದ್ಧಿಕ ಭೃಷ್ಟಾಚಾರಗಳ ಬಗ್ಗೆ ಚಕಾರವೆತ್ತದ ಈ ಢೋಂಗೀ ಧರ್ಮಪಾಲಕರಿಗೆ ಸುದ್ದಿಯಲ್ಲಿರಲು ಇಂತಹ ಮಾರ್ಗ ಬೇಕಾಗಿದೆ ಅಷ್ಟೇ….


shama, nandibetta says:
August 9, 2012 at 11:53 am
ಎಂದಿನಂತೆ ಚಂದ ಬರೆದಿದ್ದೀರಿ…

“ನಾವು ನಮ್ಮನ್ನು ತಮ್ಮ ಸಹಜೀವಿಗಳು ಎಂಬಂತೆ ಕಾಣುವವರಿಗಾಗಿ ಕಾಯುತ್ತಿದ್ದೇವೆ.” ಉಷಕ್ಕಾ ಇದು ಎಷ್ಟು ಶತಮಾನಗಳ ಕಾಯುವಿಕೆಯೋ ಎಂಬ ವೇದನೆಯೊಂದೇ ಕೊನೆಗುಳಿಯುವ ಭಾವ ನನ್ನಲ್ಲಿ…

ushakattemane said...

shashi says:
August 9, 2012 at 12:00 pm
pls nannu nimma anthapurakke serisikolli nangu thumba hanchi kolluvdide………………

navellaru seri enthaa hedigalige buddi kalisona….. estu asahayaka hennu makkalu enthaha avamanavannu sahisikondu…………….. thirugibiddare namma maryade beedige elithare antha baimuchikondu sahisuthare …………chei hennagi huttedde thappa…………..gandasara hasivige… dahakke matra upyogisuva vasthugala navuuuuuuuuuuu. estu kopa baruthe andre…………entha ella gandasrannu onud argina manenalli koodihake benki kodabeku…………………..


sri says:
August 9, 2012 at 1:16 pm
ನಾನು ನಿಮ್ಮ ಅಂತಃಪುರದಲ್ಲಿ ಸೇರಿಕೊಳ್ಳಬಯಸುತ್ತೇನೆ.


prasad raxidi says:
August 9, 2012 at 2:18 pm
“ನಾನಿದನ್ನು ಬರೆಯುತ್ತೇನೆ ಓದುವವರು ಯಾರು…”- ಹೌದು ಓದಬೇಕಾದವರು ಓದುವದಿಲ್ಲ, ಓದಿದರೂ ಅರ್ಥಮಾಢಿಕೊಳ್ಳಬೇಕಾಗಿಲ್ಲ ನಾವಿರುವುದೇ ಹೀಗೆ ಅನ್ನುವವರಿಗೇನು ಮಾಡೋಣ..


shrinivas karkala says:
August 9, 2012 at 3:54 pm
ಲೇಖನ ಚೆನ್ನಾಗಿದೆ ಎಂದು ಹೇಳುವುದಿಲ್ಲ.. ಯಾಕೆಂದರೆ ಇದು ಖುಷಿಪಡುವ ಸಂಗತಿಯಲ್ಲ.. ನಾವೆಲ್ಲ ತಲೆತಗ್ಗಿಸಿ ಆತ್ಮಾವಲೋಕನ ನಡೆಸಬೇಕಾದ ಸಂಗತಿ. ಆ ದೃಷ್ಟಿಯಿಂದ ಲೇಖನ ಚೆನ್ನಾಗಿದೆ ಎಂದು ಹೇಳಲೇಬೇಕು.. ಅಭಿನಂದನೆಗಳು ಅತ್ತಿಗೆ..
- ಶ್ರೀನಿವಾಸ ಕಾರ್ಕಳ
ಮಂಗಳೂರು

ushakattemane said...

vasanth says:
August 9, 2012 at 9:07 pm
ನಿಮ್ಮ ಲೇಖನ ನಮ್ಮ ಸಮಾಜದ ವಸ್ತುಸ್ಥಿತಿಯನ್ನು ತೋರಿಸುತ್ತಿದೆ. ಈ ಸಮಾಜ ಹೆಣ್ಣು ಮಕ್ಕಳ ದೌಜ೵ನ್ಯದಲ್ಲಿ ಖುಷಿ ಪಡುವಂತಿದೆ.

vasanth says:
August 11, 2012 at 5:38 pm
I understand your concern for the victims. But please do not justify drinking, drug addiction,& merry making by young in the name of parties. It is a fact that the victims were not subjected to tests to rule out the use of drugs. Everyone has expressed his/her disgust on the incident.In this enthusiasm, never advised young to learn responsibilities


dhananjaya G.T says:
August 13, 2012 at 8:55 pm
hai madam youy have writting that mangalorina kirathakaru.title news pakage story was super and awarness to India peoples ,very gud subject also so we are fight to demolish bad socisl workers so i will appriciate your gud title and gud subject so keep it up wish youn all the best for feature story to making true INDIANS ok

THANKING YOU
your,s DHANANAJAYA
sound enggr,suvarna news channel
BANGALORE