![]() |
ಚಿತ್ರಕೃಪೆ; ಅಂತರ್ಜಾಲ. |
ಅದೊಂದು ಸರ್ಕಾರಿ ಬಂಗಲೆ. ಅವನೊಬ್ಬನೇ ಇದ್ದಾನೆ. ಅವನ ಹೆಂಡತಿ ಮಕ್ಕಳು ದೂರದ ಊರಿನಲ್ಲಿದ್ದಾರೆ. ರಾತ್ರಿಯ ನೀರವತೆ. ನಗರ ಮೆಲ್ಲ ಮೆಲ್ಲನೆ ಸದ್ದು ಕಳೆದುಕೊಳ್ಳುತ್ತದೆ. ಒಂಟಿತನ ಅವನೊಳಕ್ಕೆ ಇಳಿಯುತ್ತಿದೆ. ಜ್ವರದ ಕಾವು ಇನ್ನೂ ಇದೆ. ಫೋನ್ ಎತ್ತಿಕೊಂಡು ಅವಳೊಡನೆ ಮಾತಾಡುತ್ತಾನೆ. ಇಪ್ಪತ್ತು ವರ್ಷಗಳ ಹಿಂದಿನ ನೆನಪುಗಳಿಗೆ ಮೆಲ್ಲ ಮೆಲ್ಲನೆ ಜಾರುತ್ತಾನೆ. “ಯಾಕೆ ನನ್ನನ್ನು ತಿರಸ್ಕರಿದೆ?” ಎಂದು ಬಿಕ್ಕಳಿಸುತ್ತಾನೆ. ಅವಳಿಗಿಲ್ಲಿ ಮೈಯ್ಯೆಲ್ಲ ಬಿಸಿಯಾಗುತ್ತದೆ. ತಲೆ ಭಾರವಾಗುತ್ತದೆ. ಅವನನ್ನು ಹೇಗೆ ಸಂತೈಸುವುದೆಂದು ಗೊತ್ತಾಗದೆ ಕುಸಿದು ಕುಳಿತವಳಿಗೆ….ಮುಂದೇನೂ ಕಾಣಿಸುತ್ತಿಲ್ಲ…..
ಅವನಂದ ಎರಡು ಮಾತುಗಳು ಆಕೆಯನ್ನು ಚೂರಿಯಂತೆ ಇರಿದವು; ಕ್ಷಮಿಸಿ, “ಆಕೆ” ಎಂದು ನಾನೇಕೆ ನನ್ನನ್ನು ವಂಚಿಸಿಕೊಳ್ಳಲಿ? ಈ ಕಥೆಯ ನಾಯಕಿ ನಾನೇ..! ಅವನು ಮಾತಾಡಿದ್ದು ನನ್ನೊಡನೆಯೇ…
“ನಾನು ಕಪ್ಪಗಿದ್ದೆ, ಕೆಳಜಾತಿಯವನಾಗಿದ್ದೆ, ಬಡವನಾಗಿದ್ದೆ. ಹಾಗಾಗಿ ನನ್ನನ್ನು ತಿರಸ್ಕರಿದ್ದೆ ಅಲ್ವಾ?”
ಹೌದಾ..ನಾನಂದು ಹಾಗೆ ಯೋಚಿಸಿದ್ದೆನಾ? ನನಗೆ ಬುದ್ಧಿ ಬಂದಾಗಿನಿಂದ, ಬದುಕಿನುದ್ದಕ್ಕೂ ಜಾತಿ ಭೇದದ ಬಗ್ಗೆ ಯೋಚಿಸಿದವಳೇ ಅಲ್ಲ. ಅರೇ ಈಗ ತಾನೇ ಹೊಳೆದದ್ದು. ನನಗಿಂದಿಗೂ ಅವನ ಜಾತಿ ಯಾವುದೆಂದೂ ಗೊತ್ತಿಲ್ವಲ್ಲಾ..! ಕಪ್ಪಗಿದ್ದಾನೆ, ಜೊತೆಗೆ ನಡೆ-ನುಡಿಯಲ್ಲಿ ನಾಜೂಕುತನವಿಲ್ಲ. ಹಾಗಾಗಿ ಆತ ಬ್ರಾಹ್ಮಣನಾಗಿರಲಾರ. ಗೌಡರ ಗತ್ತು ಅವನಲಿಲ್ಲ. ಪರ ಊರಿನವನಾಗಿರುವ ಕಾರಣ ಬಂಟನಾಗಿರಲಾರ. ಲಿಂಗಾಯಿತ ಎಂಬ ಜಾತಿ ಇದೆ ಎಂಬುದರ ಬಗ್ಗೆ ಆಗ ನನಗೆ ಗೊತ್ತೇ ಇರಲಿಲ್ಲ. ದ.ಕ ದ ಹಳ್ಳಿಯೊಂದರಲ್ಲಿ ಹುಟ್ಟಿದ ನನಗೆ ಜಾತಿಯ ಬಗ್ಗೆ ಯಾವುದೇ ಪೂರ್ವಾಗ್ರಹಗಳಿರಲಿಲ್ಲ. ಬಡವನಾಗಿದ್ದನೇ ಆತ…? ಇಲ್ವಲ್ಲ. ನನಗೆ ತಿಳಿದಂತೆ ಆತನ ಅಪ್ಪ ಸರಕಾರದ ಒಳ್ಳೆಯ ಹುದ್ದೆಯಲ್ಲಿದ್ದರು. ಅಣ್ಣ ಇಂಜಿನಿಯರಿಂಗ್ ಓದುತ್ತಿದ್ದ. ಅವನ ತಂಗಿಯರಿಬ್ಬರು ಸುಂದರಿಯರು; ಓದಿನಲ್ಲಿ ಜಾಣೆಯರು. ನಾನು ಬಡವಳಾಗಿದ್ದೆ, ಕಪ್ಪಗಿದ್ದೆ ಎಂಬುದು ಸತ್ಯ….ಮತ್ತೆ..?
ನನ್ನ, ಅವನ ಪ್ರಥಮ ಭೇಟಿಯನ್ನು ನೆನಪಿಸಿಕೊಂಡೆ. ನನ್ನ ಅಣ್ಣನ ಮುಖಾಂತರ ಪರಿಚಯವಾದವನು ಅವನು. ನಂತರ ಪತ್ರಗಳ ಮುಖಾಂತರ ಅಭಿರುಚಿಗಳ ವಿನಿಮಯವಾಯ್ತು. ಒಂದು ದಿನ ನನ್ನನ್ನು ಭೇಟಿಯಾಗಬೇಕೆಂದು ಪಕ್ಕದ ಜಿಲ್ಲೆಯಿಂದ ನನ್ನ ಕಾಲೇಜಿಗೆ ಬಂದ. ನನಗೆ ಹುಡುಗರನ್ನು ಭೇಟಿಯಾಗುವುದು ಹೊಸತೇನೂ ಅಲ್ಲ. ಅದಾಗಲೇ ನನ್ನ ನೇರ ನಡೆ ನುಡಿಗಳಿಂದ ನನ್ನ ಮನೆಯವರಿಂದ, ಬಂಧು ಬಾಂಧವರಿಂದ, ಕೊನೆಗೆ ಕಾಲೇಜಿನಲ್ಲಿಯೂ “ಗಂಡುಬೀರಿ” ಎಂದು ಹೆಸರು ಪಡೆದಿದ್ದೆ.
![]() |
ಚಿತ್ರಕೃಪೆ; ಅಂತರ್ಜಾಲ. |
ಆಗೆಲ್ಲಾ ಭೇಟಿ ಹೋಟೇಲಿನಲ್ಲಿ ತಾನೇ? ಹೋಟೇಲ್ ಅಂದ್ರೆ ಈಗ ಬೇರೆಯೇ ಅರ್ಥ ಬರುತ್ತೆ..! ಅದು ಆ ಕಾಲ. ಬಸ್ ಸ್ಟ್ಯಾಂಡಿನಲ್ಲಿ ನಾನು ಕಾದಿದ್ದೆ. ಪೇಟೆಯ ಯಾವುದೋ ಹೋಟೇಲಿನಲ್ಲಿ ಎದುರಾ ಬದುರಾ ಕೂತು ಅವನು ಅವನು ಚಹಾ-ತಿಂಡಿಗೆ ಆರ್ಡರ್ ಮಾಡಿದ.. ನನಗೆ ಬರೀ ಚಾ ಮಾತ್ರ ಸಾಕು ಅಂದೆ. ಅವನು ತಾನು ಇತ್ತೀಚೆಗೆ ಬರೆದ ಕವನಗಳ ಬಗ್ಗೆ ಮಾತಾಡುತ್ತಿದ್ದ. ಬೆಳದಿಂಗಳ ರಾತ್ರಿಯಲ್ಲಿ ತನ್ನ ಪ್ರಿಯತಮೆಯ ಜೊತೆ ಕಳೆಯಲಿರುವ ರಮ್ಯ ಕಲ್ಪನೆಯ ಬಗ್ಗೆ ಹೇಳುತ್ತಿದ್ದ….
ಅವನು ತಿಂಡಿ ತಿನ್ನುತ್ತಿದ್ದ..ಆದರಲ್ಲಿ ನಾಜೂಕು ಇರಲಿಲ್ಲ; ಒರಟುತನವಿತ್ತು. ಕೊನೆಗೆ ತಟ್ಟೆಯಲ್ಲೇ ಕೈ ತೊಳೆದುಕೊಂಡ. (ನನ್ನ ಗಂಡನೂ ಹೀಗೇ ಮಾಡುತ್ತಾನೆ.) ನನಗೆ ತಟ್ಟೆಯಲ್ಲೇ ಕೈ ತೊಳೆದುಕೊಳ್ಳುವವರ ಬಗ್ಗೆ ಕೊಂಚ ಅಸಹನೆಯಿದೆ. ನನ್ನ ಮನೆಯಲ್ಲಿ ಊಟ ಮಾಡಿದವರು ತಟ್ಟೆಯಲ್ಲೇ ಕೈ ತೊಳೆದುಕೊಂಡರೆ ಇನ್ನೊಮ್ಮೆ ಅವರನ್ನು ಊಟ ಮಾಡಿ ಎನ್ನಲು ನಾನು ಸ್ವಲ್ಪ ಹಿಂದೆ ಮುಂದೆ ನೋಡುತ್ತೇನೆ.
ಸ್ವಲ್ಪ ಹೊತ್ತು ಅದೂ-ಇದೂ ಮಾತಾಡಿ ಅವನು ತನ್ನೂರಿಗೆ ಹೊರಡಲು ಸಿದ್ಧನಾದ. ನಾನು ಬಸ್ಟ್ಯಾಂಡ್ ತನಕ ಹೋಗಿ, ಅವನನ್ನು ಬಸ್ ಹತ್ತಿಸಿ, ಬಸ್ ಹೊರಟ ಮೇಲೆ ಕೈ ಬೀಸಿ ಹಾಸ್ಟೇಲಿಗೆ ಬಂದೆ…
ಅವನು ಆಗಾಗ ಕಾಗದ ಬರೆಯುತ್ತಿದ್ದ. ನೀವು ನಂಬುತ್ತೀರೋ ಇಲ್ಲವೋ…ಅವನೊಮ್ಮೆ ಫುಲ್ ಸ್ಕೇಪ್ ಹಾಳೆಯಲ್ಲಿ ಮೂವತ್ತೈದು ಪುಟಗಳ ಕಾಗದ ಬರೆದಿದ್ದ. ಅದರಲ್ಲಿ ಏನು ಬರೆದಿದ್ದ ಎಂಬುದು ನನಗೀಗ ನೆನಪಿಲ್ಲವಾದರೂ ಅದರಲ್ಲಿ “ರಾಜಾ ಪಾರ್ವೈ” ಎಂಬ ತಮಿಳು ಸಿನೇಮಾದ ಬಗ್ಗೆ ಪುಟಗಟ್ಟಲೆ ಬರೆದಿದ್ದ. ಅದರಲ್ಲಿ ಕಮಲ್ ಹಾಸನ್ ಒಬ್ಬ ಅಂಧ ವಯಲಿನ್ ವಾದಕ. ಮಾಧವಿ ಒಬ್ಬಳು ಶ್ರೀಮಂತಳಾದ ಚೆಲುವೆ. ಎಲ್ಲರ ವಿರೋಧದ ನಡುವೆ ಅವರ ಪ್ರೇಮ ಗೆಲ್ಲುವ ಪರಿಯನ್ನು ವಿವರವಾಗಿ ಬರೆದಿದ್ದ..
![]() |
ಚಿತ್ರಕೃಪೆ; ಅಂತರ್ಜಾಲ. |
ಅವನೊಮ್ಮೆ ನನ್ನನ್ನು ಹುಡುಕಿಕೊಂಡು ನಮ್ಮ ಮನೆಗೂ ಬಂದಿದ್ದ. ನಮ್ಮ ಮನೆಗೆ ಯಾರೇ ಬಂದರೂ, ಅವರು ಅಪರಿಚಿತರಾದರೂ ಆತ್ಮೀಯವಾದ ಆತಿಥ್ಯವಿರುತ್ತದೆ. ನಿನ್ನೆ ಕೂಡಾ ಅದನ್ನು ಫೋನಿನಲ್ಲಿ ನೆನಪಿಸಿಕೊಂಡ. “ನಿನ್ನಮ್ಮ..ಆ ತಾಯಿ ಮಾಡಿದ ಕೋಳಿ ಪದಾರ್ಥ, ಅವರು ಪ್ರೀತಿಯಿಂದ ಮಾಡಿ ಬಡಿಸಿದ ಆ ರೊಟ್ಟಿಯ ಸ್ವಾದ ಇವತ್ತಿಗೂ ನನ್ನ ನಾಲಗೆಯಲ್ಲಿ ಇದೆ…ಆದರೆ ನೀನು ಮಾತ್ರ…” ಎಂದು ಮೌನವಾಗಿದ್ದ.
ಹೌದು. ನನಗೆ ಆತ ಯಾಕೆ ಇಷ್ಟವಾಗಲಿಲ್ಲ.? ನನ್ನ ಮುಂದೆ ಒಂದು ಅಸ್ಪಷ್ಟ ಗುರಿಯಿತ್ತು. ಅದನ್ನು ನಾನು ಸಾಧಿಸಬೇಕಾಗಿತ್ತು. ಅಷ್ಟು ಬೇಗನೆ ನನಗೆ ಪ್ರೇಮದಲ್ಲಿ ಬೀಳುವುದು ಬೇಕಾಗಿರಲಿಲ್ಲ. “ದ್ವಂದ್ವಮಾನ- ಭೌತಿಕವಾದ”ದ ಓದು ಹೃದಯದ ಮಾತಿಗಿಂತ ಬುದ್ಧಿಯ ಮಾತಿಗೆ ಹೆಚ್ಚು ಒತ್ತು ಕೊಡುತ್ತಿತ್ತು. ಹಾಗಾಗಿಯೇ ಮುಂದೆ ಗಂಗೋತ್ರಿಯ ಕ್ಯಾಂಪಸ್ಸಿನಲ್ಲಿ ನಾವು ಎರಡು ವರ್ಷ ಜೊತೆಯಾಗಿಯೇ ಇದ್ದರೂ “ಹಲೋ” “ಹಾಯ್” ಬಿಟ್ಟರೆ ಒಂದು ಟೀ ಗೂ ನಾವು ಜೊತೆಯಾಗಲಿಲ್ಲ.
ಆಮೇಲೆ ಹದಿನೆಂಟು ವರ್ಷ ಹಾಗೊಬ್ಬ ಪರಿಚಿತ ನನಗಿದ್ದ ಎಂಬುದನ್ನು ಮರೆತು ನಾನು ಬದುಕಿದ್ದೆ.
ಅದೊಂದು ಸಂಜೆ ನನಗೊಂದು ಫೋನ್ ಬಂದಿತ್ತು. ನಾನು ಆಫೀಸಿನಲ್ಲಿದ್ದೆ. ಅವನು ಸಂಭ್ರಮದಿಂದ ತನ್ನನ್ನು ಪರಿಚಯಿಸಿಕೊಂಡಿದ್ದ. ತಾನು ಬೆಂಗಳೂರಿನ ಹೊರವಲಯದಲ್ಲಿ ಒಂದು ಮನೆ ಕಟ್ಟಿರುವುದಾಗಿ ಅದರ ಗೃಹ ಪ್ರವೇಶ ದಿನಾಂಕ ತಿಳಿಸಿ, ತನ್ನ ಪತ್ನಿಯ ಕೈಗೂ ಫೋನ್ ಕೊಟ್ಟು ಅವಳ ಕೈಯ್ಯಿಂದಲೂ ಆಮಂತ್ರಿಸಿದ್ದ. ಕಾಲೇಜು ಗೆಳೆಯನೊಬ್ಬ ಈ ಮಹಾನಗರದಲ್ಲಿ ಸಿಕ್ಕಿದ್ದು ನನಗೆ ನಿಜಕ್ಕೂ ಖುಷಿಯಾಗಿತ್ತು.
ಆಫೀಸಿಗೆ ರಜೆ ಹಾಕಿ, ಒಂದು ಸುಂದರವಾದ ಬುದ್ಧನ ವಿಗ್ರಹವನ್ನು ಖರೀದಿಸಿ ಅವನ ಮನೆಗೆ ಹೋಗಿದ್ದೆ. ಅವನ ಮನೆಯವರೆಲ್ಲಾ ತುಂಬಾ ಆದರದಿಂದ ನನ್ನನ್ನು ಬರಮಾಡಿಕೊಂಡರು. ಅವನ ಪತ್ನಿ ಅಪ್ರತಿಮ ಚೆಲುವೆಯಾಗಿದ್ದಳು. ಅವನ ಮಗನಂತೂ ನನ್ನನ್ನು ನೋಡಿ “ಅಪ್ಪನ ಗರ್ಲ್ ಫ್ರೆಂಡ್ ನೀವೇನಾ?” ಎಂದು ನನ್ನಲ್ಲಿ ಅಚ್ಚರಿ ಮೂಡಿಸಿದ. ಆತನ ಪತ್ನಿಯ ಮೊಗದಲ್ಲೂ ಮೂಡಿದ ಮಂದಹಾಸ ನನ್ನನ್ನು ನಿರಾಳವಾಗಿಸಿತ್ತು. ಅವನ ತಂದೆ ಮತ್ತು ಅಣ್ಣ ನನ್ನನ್ನು ನೋಡಿ ತುಂಬಾ ಸಂತಸಪಟ್ಟರು. ನಮ್ಮೂರಿನ ಬಗ್ಗೆ ನಾವು ಪರಸ್ಪರ ತುಂಬಾ ಮಾತಾಡಿಕೊಂಡೆವು. ಬ್ಲಡ್ ಕ್ಯಾನ್ಸರಿನಿಂದ ಒಬ್ಬ ಮಗಳನ್ನು ಕಳೆದುಕೊಂಡ ಸಂಗತಿಯನ್ನು ಹೇಳುತ್ತಲೇ ಆ ತಂದೆ ಕಣ್ಣೀರಾಗುತ್ತಾ ನನ್ನನ್ನೂ ಭಾವುಕರನ್ನಾಗಿಸಿದರು.
ಆಮೇಲೆ ನಾವೆಲ್ಲ ಆಗಾಗ ಫೋನಿನಲ್ಲಿ ಮಾತಾಡಿಕೊಳ್ಳುತ್ತಿದ್ದೆವು. ಆದರೆ ನಾನು ಅವನ ಮನೆಗೆ ಹೋಗಲಿಲ್ಲ. ಒಂದೆರಡು ಸಾರಿ ಆತ ನಮ್ಮ ಮನೆಗೆ ಬಂದಿದ್ದ. ಒಂದೆರಡು ಪುಸ್ತಕಗಳನ್ನು ಕೊಂಡು ಹೋಗಿದ್ದ.
ಒಂದು ಇಳಿಸಂಜೆ ನನಗವನ ಪತ್ನಿ ಫೋನ್ ಮಾಡಿದ್ದಳು. “ಅವರ ಸ್ಥಿತಿ ಚಿಂತಾಜನಕವಾಗಿದೆ. ನಿಮ್ಮನ್ನು ನೋಡಬೇಕೆಂದು ಹಂಬಲಿಸುತ್ತಿದ್ದಾರೆ. ನೀವು ಅವರಿಗಿರುವ ಏಕೈಕ ಫ್ರೆಂಡ್ ಅಂತೆ. ದಯಮಾಡಿ ಒಮ್ಮೆ ಮನೆಗೆ ಬರ್ತೀರಾ?” ಹೇಳುತ್ತಲೇ ಆಕೆ ಬಿಕ್ಕಳಿಸಿದಳು.
![]() |
ಚಿತ್ರಕೃಪೆ; ಅಂತರ್ಜಾಲ. |
ನಾನು ತಕ್ಷಣ ನಮ್ಮ ಡ್ರೈವರನ್ನು ಕರೆದು ಅವನ ಮನೆಗೆ ಧಾವಿಸಿದ್ದೆ. ಅದ್ಯಾವುದೋ ವಿಚಿತ್ರ ಹೆಸರಿನ ಮಾರಣಾಂತಿಕ ಕಾಯಿಲೆಯಿಂದ ಆತ ನರಳುತ್ತಿದ್ದ. ನಾನು ತಡರಾತ್ರಿಯವರೆಗೂ ಅಲ್ಲಿದ್ದು ನಂತರ ಮನೆಗೆ ಬಂದಿದ್ದೆ. ಆಮೇಲೆ ಬಹು ಸಮಯ ಆ ಕುಟುಂಬದೊಡನೆ ನಿರಂತರ ಸಂಪರ್ಕದಲ್ಲಿದ್ದೆ. ನಾನು ಫೋನ್ ಮಾಡಿದಾಗಲೆಲ್ಲ “ಅಪ್ಪಾ.. ನಿನ್ನ ಗರ್ಲ್ ಫ್ರೆಂಡ್ ಫೋನ್..” ಎಂದು ಆತನ ಮಗ ರಾಗ ಎಳೆಯುತ್ತಾ ತನ್ನಪ್ಪನನ್ನು ಕರೆಯುತ್ತಿದ್ದುದು ನಮ್ಮ ಸಹಜ ಮಾತುಕತೆಗೆ ಮುನ್ನುಡಿಯಾಗುತ್ತಿತ್ತು. ಆತ ಕ್ರಮೇಣ ಚೇತರಿಸಿಕೊಂಡ. ಆತನ ಪತ್ನಿ ಅವನನ್ನು ಉಳಿಸಿಕೊಂಡಳು.
ಈಗ ಒಂದೆರಡು ವರ್ಷಗಳಿಂದ ಮತ್ತೆ ಅವನ ಸಂಪರ್ಕ ಕಡಿದು ಹೋಗಿತ್ತು. ಈಗ ಫೋನ್ ಮಾಡಿ ಈ ರೀತಿ ಪ್ರಶ್ನಿಸಿದ್ದಾನೆ.
ನಾನು ಏನೆಂದು ಉತ್ತರಿಸಲಿ?
ಅವನಿಗೆ ನನ್ನಲ್ಲಿ ಪ್ರೀತಿ ಮೂಡಿರಬಹುದು. ನನಗೂ ಹಾಗೆ ಅನ್ನಿಸಬೇಕಲ್ಲವೇ? ಪ್ರೀತಿ ಎಂಬುದು ಒಳಗಿನಿಂದ ಕಾರಂಜಿಯಂತೆ ಚಿಮ್ಮಬೇಕು. ಬೆಂಕಿಯ ಹಾಗೆ ಸುಡಬೇಕು. ಪ್ರತಿಕೂಲ ಸಂದರ್ಭ ಬಂದರೆ ಜ್ವಾಲಾಮುಖಿಯಂತೆ ಸ್ಫೋಟಿಸಬೇಕು. ನನಗೆ ಹಾಗೆ ಆಗಿಲ್ವೆ? ನಾನೇನು ಮಾಡಲಿ?
[ ಕಥೆಗಳ ಮಾರಾಣಿ ಎಂಬ
ಟ್ಯಾಗ್ ಲೈನ್ ಹೊತ್ತಿರುವ ”ಐರಾವತಿ’ ಬ್ಲಾಗ್ ನಲ್ಲಿ ನನ್ನ ಕಾಲಂ ’ ಪದ ಪಾರಿಜಾತ’ ಕ್ಕಾಗಿ ಬರೆದ
ಮೊದಲ ಕಥೆಯಿದು ]