Thursday, January 3, 2013

ಶಂಕೆಯೆನಗೀಗ; ಈತನೊಳಗೊಬ್ಬ ಅತ್ಯಚಾರಿ ಅಡಗಿರಬಹುದೇ?

ಚಿತ್ರಕೃಪೆ; ಅಂತರ್ಜಾಲ


 ಒಂದು ವೈಯಕ್ತಿಕ ಅನುಭವದಿಂದ ನಾನೀ ಲೇಖನವನ್ನು ಆರಂಭಿಸುತ್ತೇನೆ;

ಇದು ಎರಡು ದಶಕಗಳ ಹಿಂದಿನ ಮಾತು. ನಾನು ಆಗತಾನೇ ಕನ್ನಡ ಎಂ.ಎ ಮುಗಿಸಿದ್ದೆ. ಉಡುಪಿಯಲ್ಲಿ ಕನ್ನಡ ಉಪನ್ಯಾಸಕ ಹುದ್ದೆಯೊಂದರ ಸಂದರ್ಶನಕ್ಕೆ ಹೋದವಳು ಅದನ್ನು ಮುಗಿಸಿಕೊಂಡು ಮಂಗಳೂರಿಗೆ ಬರುವಾಗ ನಾನು ನಮ್ಮೂರಿಗೆ ಹೋಗಬೇಕಾದ ಬಸ್ಸು ಹೊರಟು ಹೋಗಿಯಾಗಿತ್ತು. ಹೇಗಿದ್ದರೂ ಕೊಣಾಜೆಯಲ್ಲಿ ಅಣ್ಣನ ರೂಂ ಇದೆಯೆಲ್ಲಾ ಎಂದುಕೊಂಡು ಬಂದರೆ ಆತ ಅಂದೇ ಯಾವುದೋ ಕಾರ್ಯನಿಮಿತ್ತವಾಗಿ ಇನ್ನೊಂದು ಊರಿಗೆ ಹೊರಟು ಹೋಗಿದ್ದ. ಆಗಲೇ ಕತ್ತಲೆಯಾಗತೊಡಗಿತು. ಏನು ಮಾಡುವುದೆಂದು ಯೋಚಿಸುತ್ತಿದ್ದಾಗ ಅಲ್ಲೇ ಪಕ್ಕದ ರೂಂನಲ್ಲಿ ನಮ್ಮ ಡಿಪಾರ್ಟ್ ಮೆಂಟಿನಲ್ಲಿ ರಿಸರ್ಚ್ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದ ಕಾರಣದಿಂದಾಗಿ ನನಗೆ ಪಾಠ ಮಾಡಿದ ಗುರುಗಳೂ ಆದ ನನ್ನ ಗೆಳೆಯನಂತಿರುವ ಆತನ ರೂಂನ ಬಾಗಿಲು ತಟ್ಟಿದೆ. ಆತನ ಪುಟ್ಟ ರೂಂನಲ್ಲಿ ಅಂದು ನಾನು ತಂಗಿದೆ.

ಅದನ್ನು ನಾನು  ಮರೆತೆ. ಆತ ಇತ್ತೀಚೆಗೆ ಕಾದಂಬರಿಯೊಂದನ್ನು ಬರೆದ. ಅದರಲ್ಲಿ  ಈ ಘಟನೆಯನ್ನು ಉಲ್ಲೇಖಿಸಿದ. ಮಾತ್ರವಲ್ಲ ಪೋನ್ ಮಾಡಿ ಕಾದಂಬರಿ ಬಗ್ಗೆ ಹೇಳುತ್ತಾ ; ’ಅಂದು ನಿನ್ನನ್ನು ನಾನು ಹಾಗೇ ಯಾಕೆ ಬಿಟ್ಟೆ? ನೀನಾದರೂ ನನ್ನನ್ನು ಹಾಳು ಮಾಡಬಾರದಿತ್ತೇ? ಈಗ ಬಾ ನೋಡೋಣ’ ಅಂದುಬಿಟ್ಟ.

ಆ ಘಟನೆಯನ್ನು ಈಗಿನ ಸಂದರ್ಭದಲ್ಲಿಟ್ಟು ನಾನು ನೋಡಬಯಸಿದರೆ....

ಇಂದು ನನಗೆ ಭುಜದೆತ್ತರ ಬೆಳೆದು ನಿಂತ ಮಗಳಿದ್ದಾಳೆ. ಆದರೂ ಒಬ್ಬಂಟಿ ಪುರುಷನಿರುವೆಡೆ, ಆತ ಪರಿಚಿತನಾಗಿದ್ದರೂ ನಾನು ಹೋಗಲಾರೆ. ಆತನನ್ನು ನಾನು ನಂಬಲಾರೆ ಎನ್ನುವುದಕ್ಕಿಂತಲೂ ನನ್ನನ್ನು ನಾನೇ ನಂಬದಿರುವಂತ  ಸ್ಥಿತಿ ನನ್ನದು. ಅದಕ್ಕೆ ಕಾರಣ ಬದಲಾದ ಸಾಮಾಜಿಕ ಸ್ಥಿತ್ಯಂತರಗಳು.  ಈಗ ನೋಡಿ, ದೆಹಲಿಯ ಘಟನೆ ನಡೆದ ನಂತರ ಪತ್ರಿಕೆಗಳಲ್ಲಿ ವರದಿಯಾಗುತ್ತಿರುವ ಅತ್ಯಚಾರದ ವರದಿಗಳನ್ನು ಓದುತ್ತಿದ್ದರೆ ನಮ್ಮ ಮಹಿಳೆಯರು ಎಂತಹ ದುರ್ಭರ ಬದುಕನ್ನು ಬದುಕುತ್ತಿದ್ದಾರೆ ಎಂಬ ಝಳಕ್ ಸಿಕ್ಕಿಬಿಡುತ್ತದೆ. ನಮ್ಮ ನಡುವೆಯೇ, ನಮ್ಮ ಅಪ್ಪ, ಅಣ್ಣ-ತಮ್ಮ, ಗಂಡ ಸೇರಿದಂತೆ ನಮ್ಮ ಸ್ನೇಹ ಸಂಬಂಧಗಳಲ್ಲೇ ಅತ್ಯಚಾರಿಯೊಬ್ಬ ಹೊಂಚು ಹಾಕುತ್ತಾ ಕಾಯುತ್ತಿರಬಹುದೇ ಎಂಬ ಆತಂಕ ಮೂಡುತ್ತದೆ. ಯಾರನ್ನೂ ನಂಬಲಾಗದಂತಹ ಭಯದ ವಾತಾವರಣದಲ್ಲಿ ನಾವಿಂದು ಬದುಕುತ್ತಿದ್ದೇವೆ.

 ಮಹಿಳೆಯೊಬ್ಬಳ ಮೇಲೆ ಲೈಂಗಿಕ ಅತ್ಯಚಾರ ನಡೆದಾಗ ಪುರುಷರಂತೆ ಯೋಚಿಸುವ ಮಹಿಳೆಯರನ್ನೂ ಒಳಗೊಂಡಂತೆ, ಇಡೀ ಪುರುಷ ಜಗತ್ತು ಅದನ್ನು ಬಣ್ಣಿಸುವುದು ’ಶೀಲ ಕಳೆದುಕೊಳ್ಳುವುದು’ ಆದರೆ ಸ್ತ್ರೀ ಮನಸ್ಸು ಗ್ರಹಿಸುವುದು ’ಬದುಕು ಕಳೆದುಕೊಳ್ಳುವುದು’ ಗಂಡಿನ ದೃಷ್ಟಿಯಲ್ಲಿ ಕಳೆದುಕೊಂಡದ್ದನ್ನು ಮತ್ತೆ ಪಡೆಯಲಾಗದು. ಆದರೆ ಹೆಣ್ಣಿನ ದೃಷ್ಟಿಯಲ್ಲಿ ಮತ್ತೆ ಬದುಕನ್ನು ಕಟ್ಟಿಕೊಳ್ಳಬಹುದು.

ಡಿಸೆಂಬರ್ ೧೬ರ ಭಾನುವಾರ ರಾತ್ರಿ ಕಾಮಾಂಧರ ಪೈಶಾಚಿಕ ಕ್ರೌಯಕ್ಕೆ ತುತ್ತಾಗಿ ಜೀವಚ್ಛವವಾಗಿ ಸಪ್ತರ್ ಜಂಗ್ ಆಸ್ಪತ್ರೆಯಲ್ಲಿ ಮಲಗಿದ್ದಾಗ ಆ ವಿದ್ಯಾರ್ಥಿನಿ ಮತ್ತೆ ಬದುಕಿನ ಬಗ್ಗೆ ಆಶಾವಾದಿಯಾಗಲು ಕಾರಣವೇ ಆಕೆಯಲ್ಲಿನ ”ಬದುಕನ್ನು ಕಟ್ಟಿಕೊಳ್ಳುವ’ ಛಲ. ಅದನ್ನಾಕೆ ಪೋಲಿಸರಿಗೆ ನೀಡಿದ ಹೇಳಿಕೆಯಲ್ಲೇ ಗೊತ್ತಾಗಿದೆ. ’ನನ್ನನ್ನು ಈ ಸ್ಥಿತಿಗೆ ತಂದವರಿಗೆ ಶಿಕ್ಷೆಯಾಗುತ್ತದೆಯಲ್ಲವೇ?’  ಆಸ್ಪತ್ರೆಯ ವೈದ್ಯಾಧಿಕಾರಿಗಳು ಆಕೆಯ ದೈಹಿಕ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಪತ್ರಿಕಾ ಗೋಷ್ಟಿಯಲ್ಲಿ ವಿವರಿಸಿದ್ದರು. ಆಕೆಯ ಮಾನಸಿಕ ಸ್ಥಿಮಿತ ಮತ್ತು ಜೀವನ ಪ್ರೀತಿಗೆ ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ ಮನುಷ್ಯ ಪ್ರಯತ್ನಗಳ್ಯಾವುದೂ ಅವಳನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಆಕೆ ಮರಣಶಯ್ಯೆಯಲ್ಲಿ ಕೇಳಿದ ಪ್ರಶ್ನೆಗೆ ಇಂದು ಸಮಸ್ತ ಭಾರತವೇ ದನಿಗೂಡಿಸುತ್ತಿದೆ. ಪ್ರತಿಭಟನೆ ಆಂದೋಲದ ಸ್ವರೂಪ ಪಡೆದುಕೊಂಡಿದೆ. ಇದು ಇತರ ಪ್ರತಿಭಟನೆಗಳಂತೆ ಪ್ರಾಯೋಜಿತ ಕಾರ್ಯಕ್ರಮ ಅಲ್ಲ ಎಂಬುದಕ್ಕೇ ಇದರ ಫಲಶ್ರುತಿಯ ಬಗ್ಗೆ ದೇಶಕ್ಕೆ ದೇಶವೇ ಕಾತರದಿಂದ ಕಾದಿದೆ.
ಚಿತ್ರ ಕೃಪೆ; ಅಂತರ್ಜಾಲ
ನಮಗೆ ಗೊತ್ತಿದೆ; ಅತ್ಯಾಚಾರ ಪ್ರಕರಣಗಳಲ್ಲಿ ಅದು ಬಲತ್ಕಾರದ ದೈಹಿಕ ಸಂಪರ್ಕವೋ ಅಥವಾ ಒಪ್ಪಿತ ಲೈಂಗಿಕ ಕ್ರಿಯೆಯೋ ಎಂದು ನಿರ್ಧರಿಸುವುದು ಕಷ್ಟ ಸಾಧ್ಯ. ಹಾಗಾಗಿ ಅದರ ವಿಚಾರಣೆಯ ಪ್ರಕ್ರಿಯೆ ದೀರ್ಘವಾಗಿರುತ್ತದೆ. ಆದರೆ ಸಾಮೂಹಿಕ ಅತ್ಯಾಚಾರದಲ್ಲಿ ಘಟನೆ ಸ್ಪಷ್ಟವಿರುತ್ತದೆ. ಅಲ್ಲಿ ನಿಸ್ಸಂದೇಹವಾಗಿ ಹೆಣ್ಣು ಬಲಿಪಶುವಾಗಿರುತ್ತಾಳೆ. ಅಲ್ಲೊಂದು ಮೃಗೀಯ ವರ್ತನೆ ನಡೆದಿರುತ್ತದೆ.

ಪುರುಷಪುಂಗವನೆಂದು ತನ್ನನ್ನು ತಾನು ಹೆಮ್ಮೆಯಿಂದ ಕರೆದುಕೊಳ್ಳುವ ಗಂಡಸಿನ ಆಯುಧವೇ ’ಅದು’. ಅದೇ ಇಲ್ಲದಿದ್ದರೆ ಅವನೊಂದು ಹುಳು.ಕಾಲಲ್ಲಿ ಹೊಸಕಿ ಹಾಕಬಹುದಾದ ಜಂತು.ಸೆಕ್ಸ್ ವಿಚಾರದಲ್ಲಿ ಆತನಿಗೆ ವಿವೇಚನೆಯಿಲ್ಲ. ಕಂಡಲ್ಲಿ ನುಗ್ಗುವ ಗೂಳಿ ಅವನು.ಹೆಣ್ಣು ಸಿಗದಿದ್ದರೆ ಅವನಿಗೆ ಇನ್ನೊಂದು ಗಂಡೂ ಆದೀತು..ಕೊನೆಗೆ ಪ್ರಾಣಿಯಾದರೂ ಓಕೆ. ಅದಕ್ಕಾಗಿ ಅತ್ಯಚಾರ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುವ ಬಗ್ಗೆ ಈಗಿರುವ ಕಾನೂನಿಗೆ ತಿದ್ದುಪಡಿಯಾಗಬೇಕು. ಇದರ ವಿಚಾರಣೆ ಅತೀ ಕ್ಷಿಪ್ರವಾಗಿ ನಡೆದು ಶಿಕ್ಷೆ ಶೀಘ್ರವೇ ಜಾರಿಯಾಗಬೇಕು. ಇಂಥ ಕ್ರೂರಿಗಳಿಗೆ ಗಲ್ಲು ಶಿಕ್ಷೆಯಂತ ಶಿಕ್ಷೆಯನ್ನು ನೀಡಿ ಅವರಿಗೆ ಮುಕ್ತಿ ನೀಡಬಾರದು ಅವರು ಬದುಕಿದ್ದೂ ಸತ್ತಂತಿರಬೇಕು.  ”ಇಂತವರು ನೀವು’ ಎಂದು ಸಮಾಜ ಅವರನ್ನು ಪ್ರತಿಕ್ಷಣವೂ ಚುಚ್ಚಿ ಚುಚ್ಚಿ ಸಾಯುಸುತ್ತಲಿರಬೇಕು. ಹಾಗಾಗಿ ಅವರಿಗೆ ಪುರುಷತ್ವ ಹರಣದ ಶಿಕ್ಷೆಯನ್ನೇ ಜಾರಿಗೆ ತರಬೇಕು.

ನಾನು ಮತ್ತೆ ಮತ್ತೆ ನಂಬುವುದು ’ಪರಿಸರ ವ್ಯಕ್ತಿತ್ವವನ್ನು ರೂಪಿಸುತ್ತದೆ’ ಎಂಬುದನ್ನು. ನಾವು ನಮ್ಮ ಮಕ್ಕಳನ್ನು ಅವರ ಹದಿಹರೆಯದ ತನಕ ಯಾವ ಪರಿಸರದಲ್ಲಿ, ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ಅವರ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಪೋಷಕರು ಸ್ವತಃ ಮಾದರಿಯಾಗಿರದಿದ್ದಲ್ಲಿ ಮಕ್ಕಳಲ್ಲಿ ಆರೋಗ್ಯವಂತ ಮನಸ್ಸು ರೂಪುಗೊಳ್ಳಲು ಸಾಧ್ಯವಿಲ್ಲ. ಮಕ್ಕಳು ಬಹುಬೇಗನೆ ಎಲ್ಲವನ್ನೂ ಗ್ರಹಿಸಿಕೊಳ್ಳುತ್ತಾರೆ. ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಸ್ವಾಭಿಮಾನದ ಜೊತೆಗೆ ಸ್ವರಕ್ಷಣೆಯ ಕಲೆಯನ್ನು ಸಂದರ್ಭಕ್ಕನುಗುಣವಾಗಿ ಹೇಳಿಕೊಡಬೇಕು. ಹಾಗೆಯೇ ಗಂಡು ಮಕ್ಕಳಿಗೂ ಸ್ತ್ರೀಯರನ್ನು ಗೌರವದಿಂದ ಕಾಣುವುದನ್ನು ಅವರಿಗೆ ಅರಿವಿಲ್ಲದಂತೆ ಮನಗಾಣಿಸುತ್ತಿರಬೇಕು. ಯಾಕೆಂದರೆ ಪುರುಷ ಪ್ರಧಾನ ಯೋಚನೆಯನ್ನು ಅಷ್ಟು ಸುಲಭದಲ್ಲಿ ಬದಲಾಯಿಸುವುದು ಸಾಧ್ಯವಿಲ್ಲ.

ನನಗೀಗಲೂ ನೆನಪಿದೆ. ನನ್ನ ಮಗನೊಮ್ಮೆ ಮಾತಿನ ಮಧ್ಯೆ ”ಹೆಂಗಸು’ ಎಂಬ ಪದವನ್ನು ಉಪಯೋಗಿಸಿದ. ನನಗೆ ಆ ಪದವನ್ನು ಕೇಳಿದರಾಗದು. ನಾನು ಎಂದೂ ಆ ಪದವನ್ನು ಉಪಯೋಗಿಸುವುದಿಲ್ಲ. ಹೆಂಗಸು ಅಂದರೆ ಹೆಣ್ಣು ಕೂಸು. ಹೆರುವವಳು ಎಂಬ ಅರ್ಥ ಅದರಿಂದ ಸ್ಫುರಿಸುತ್ತದೆಯೆಂಬುದು ನನ್ನ ಭಾವನೆ., ಮಹಿಳೆಯ ಅಸ್ತಿತ್ವವನ್ನು ಅದು ಸೀಮಿತಗೊಳಿಸುತ್ತದೆಯೆಂಬುದು ನನ್ನ ಗ್ರಹಿಕೆ. ನನ್ನನ್ನು ಯಾರಾದರೂ ’ಆಯಮ್ಮ’ ಎಂದು ಸಂಭೋದಿಸಿದರೆ ನನ್ನ ಸಿಟ್ಟು ನೆತ್ತಿಗೇರುತ್ತದೆ!  ನನ್ನ ಮಗನಿನ್ನೂ ತುಂಬಾ ಚಿಕ್ಕವನು, ಆದರೂ ನಾನವನಿಗೆ ಹೇಳಿದೆ ’ಹೆಂಗಸು ಅನ್ನಬಾರದು, ಮಹಿಳೆ ಅನ್ನು’ ಅಂತ ಆಮೇಲೆ ನಾನದನ್ನು ಮರೆತು ಬಿಟೆ. ಆದರೆ ಒಂದೆರಡು ವರ್ಷಗಳ ಹಿಂದೆ ನಾನೇ ಬಾಯಿತಪ್ಪಿ ’ಆ ಹೆಂಗಸು..’ ಅಂದುಬಿಟ್ಟೆ. ಆಗ ಅಲ್ಲೇ ಇದ್ದ ನನ್ನ ಮಗ ’ ಅಮ್ಮಾ ಗೌರವ..ಮಹಿಳೆ ಅನ್ನು’ ಅಂದುಬಿಟ್ಟ..ನಾನು ಒಂದು ಕ್ಷಣ ಅವಕ್ಕಾಗಿ ನಿಂತು ಬಿಟ್ಟೆ!

 ಟೈಮ್ಸ್ ನೌ ಚಾನಲ್ಲಿನ ವರದಿಗಾರ ಹೇಳುತ್ತಿದ್ದ, ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಕಾರರ ಸರಾಸರಿ ವಯಸ್ಸು ೨೨. ಅಂದರೆ ಅದು ಲೈಂಗಿಕ ಪರ್ವಕಾಲ. ಶರೀರದಲ್ಲಿ ಲೈಂಗಿಕ ಹಾರ್ಮೋನ್ ಗಳು ಅತ್ಯಧಿಕವಾಗಿ ಸ್ರವಿಸುವ ಕಾಲಘಟ್ಟ.ಆದರೂ ಮನುಷ್ಯನ ಮೂಲಭೂತ ಅವಶ್ಯಕತೆಯಲ್ಲಿ ಒಂದಾದ ಸೆಕ್ಸ್ ಅನ್ನು ನಿಯಂತ್ರಣ್ದಲ್ಲಿ ಇಟ್ಟುಕೊಳ್ಳಲು ಇವರಿಗೆಲ್ಲಾ ಹೇಗೆ ಸಾಧ್ಯವಾಯಿತು? ಅದು ಸಂಸ್ಕಾರದಿಂದ, ಶಿಕ್ಷಣದಿಂದ, ವೈಯಕ್ತಿಕ ಬದುಕಿನಲ್ಲಿ ನೈತಿಕ ಮೊಲ್ಯಗಳನ್ನು ಅಳವಡಿಕೊಂಡಿರುವುದರಿಂದ ಸಾಧ್ಯವಾಗಿದೆ. ಅಲ್ಲಿ ಅವರೆಲ್ಲಾ ಸೇರಿ ಸಮಾಜಮುಖಿ ಹೋರಾಟವೊಂದರಲ್ಲಿ ತೊಡಗಿಕೊಂಡಿರುವುದನ್ನು ನೋಡಿದಾಗ ಭವಿಷ್ಯದ ಬಗ್ಗೆ ಆಶಾವಾದ ಮೂಡುತ್ತದೆ. ಇಂತಹ ಮನಸ್ಸುಗಳು ರಾಜಕೀಯಕ್ಕೆ ಬರಬೇಕು; ಕಾನೂನು ರಚನೆಯಲ್ಲಿ ಭಾಗಿಯಾಗಬೇಕು.ಆರೋಗ್ಯವಂತ ಸಮಾಜವನ್ನು ಕಟ್ಟಬೇಕು. ಆದರೆ ಅದು ಸಾಧ್ಯವೇ?

ನಮ್ಮ ಕೆಲವು ಜನಪ್ರತಿನಿಧಿಗಳನ್ನು ನೋಡಿದರೆ ಕಾನೂನನ್ನು ರೂಪಿಸುವವರೇ ಕಾನೂನನ್ನು ಉಲ್ಲಂಘಿಸುವವರೂ ಆಗಿರುತ್ತಾರೆ ಎಂಬುದು ಗೊತ್ತಾಗುತ್ತದೆ. ನಮ್ಮ ಜನಪ್ರತಿನಿಧಿಗಳಲ್ಲೇ ಎಷ್ಟೋ ಜನರು ಹಲವಾರು ಮಹಿಳೆಯರೊಡನೆ ವಿವಾಹಬಾಹಿರ ಸಂಬಂಧಗಳನ್ನು ಇಟ್ಟುಕೊಂಡಿದ್ದಾರೆ. ಇನ್ನು ಕೆಲವರು ಅತ್ಯಚಾರ ಪ್ರಕರಣ್ಗಳಲ್ಲಿ ಭಾಗಿಯಾಗಿದ್ದಾರೆ. ಅಷ್ಟೆಲ್ಲ ಯಾಕೆ ಪ್ರಜಾಪ್ರಭುತ್ವದ ದೇಗುಲದಂತಿರುವ ವಿಧಾನಸೌಧದಲ್ಲೇ ಬ್ಲೂಪಿಲಂ ನೋಡಿದ ಚಪಲಚೆನ್ನಿಗರಾಯರಿದ್ದಾರೆ. ಇಂತವರಿಂದ ಯಾವ ಕಾನೂನು ರಚನೆಯನ್ನು ನಾವು ನಿರೀಕ್ಷಿಸಬಹುದು?

ಚಿತ್ರ ಕೃಪೆ; ಅಂತರ್ಜಾಲ
 ಇದರ ಜೊತೆಗೆ ಮೀಡಿಯಾಗಳು, ಸಿನೇಮಾಗಳು,ಜಾಹೀರಾತುಗಳು, ಟೀವಿ ಧಾರಾವಾಹಿಗಳು, ರಿಯಾಲಿಟಿ ಶೋಗಳು ಹೆಣ್ಣನು ಭೋಗದ ವಸ್ತುಗಳಾಗಿ, ಮಾರುಕಟ್ಟೆಯ ಸರಕುಗಳಾಗಿ ಕಾಣುತ್ತವೆ. ಹೆಣ್ಣಿನ ಕೊಬ್ಬು ಇಳಿಸಬೇಕಾದರೆ ಆಕೆಯ ಮೇಲೆ ಅತ್ಯಚಾರ ಮಾಡಬೇಕೆಂಬುದು ಸಿನೇಮಾರಂಗ ಒಪ್ಪಿಕೊಂಡ ಮೌಲ್ಯಗಳಲ್ಲಿ ಒಂದು. ನನಗೆ ಈಗಲೂ ನೆನಪಿದೆ. ಬಹುಶಃ ಅದು ಸುನಿಲ್ ಕುಮಾರ್ ದೇಸಾಯಿ ನಿರ್ದೇಶಿಸಿದ ಸಿನೇಮಾವಿರಬೇಕು. ಒಂದು ಬ್ಯಾಂಕ್ ದರೋಡೆ ನಡೆಯುತ್ತದೆ. ಬ್ಯಾಂಕಿನೊಳಗಿದ್ದ ಸುಮನ್ ನಗರ್ ಕರ್ ಅದನ್ನು ಪ್ರತಿಭಟಿಸುತ್ತಾಳೆ.”ಅವಳ ಕೊಬ್ಬು ಇಳಿಸು’ ಎಂದು ಖಳ ನಾಯಕ ತನ್ನ ಸಹಚರನಿಗೆ ಹೇಳುತ್ತಾನೆ. ಆಗ ದಡಿಯನೊಬ್ಬ ಎಲ್ಲರ ಎದುರಿನಲ್ಲೇ ಅವಳ ಮೇಲೆ ಅತ್ಯಚಾರ ಎಸಗುತ್ತಾನೆ. ನನ್ನ ದೃಷ್ಟಿಯಲ್ಲಿ ಹೆಣ್ಣನ್ನು ಶೋಷಣೆ ಮಾಡುತ್ತಿರುವವರಲ್ಲಿ ಚಿತ್ರರಂಗ ಮತ್ತು ಮೀಡಿಯಾಗಳು ಮೊದಲ ಸಾಲಿನಲ್ಲಿ ಬರುತ್ತವೆ. ಹೆಣ್ಣನ್ನು ಸೂಕ್ಷ್ಮಸಂವೇದನೆಯಿಂದ ಕಾಣುವ ಮಾಧ್ಯಮವಿದ್ದರೆ ಅದು ರಂಗಭೂಮಿ ಮಾತ್ರ. ಅತ್ಯಾಚಾರಕ್ಕೆ ಒಳಗಾಗದ ಮಹಿಳೆಯೊಬ್ಬಳು ಆತನ ಮರ್ಮಾಂಗವನ್ನು ಕತ್ತರಿಸಿ ಸೇಡು ತೀರಿಕೊಳ್ಳವ ವಸ್ತುವುಳ್ಳ ’ಪುರುಷ’ ನಾಟ್ಕವನ್ನು ಕೆಲವು ತಿಂಗಳುಗಳ ಹೀದೆ ನಾನು ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನೋಡಿದ್ದೆ. ಇದು ಸಮಕಾಲೀನ ಸಮಸ್ಯೆಯೊಂದಕ್ಕೆ ಕಲಾ ಮಾಧ್ಯಮವೊಂದು ಪ್ರತಿಕ್ರಿಯಿಸಿದ ರೀತಿ. ಆ ರೀತಿಯ ಗುಣಾತ್ಮಕವಾದ ಪ್ರತಿಕ್ರಿಯೆಯನ್ನು ನಾವು ಮಾಧ್ಯಮದಿಂದ ನಿರೀಕ್ಷಿಸುತ್ತೇವೆ.

ಪ್ರತಿ ಮಹಿಳೆಯೂ ಒಂದಲ್ಲ ಒಂದು ರೀತಿಯಲ್ಲಿ ಲೈಂಗಿಕ ಅತ್ಯಚಾರಕ್ಕೆ ಒಳಗಾಗಿಯೇ ಆಗಿರುತ್ತಾಳೆ. ಅದು ಮಾನಸಿಕವಾಗಿ ಆಗಿರಬಹುದು, ಇಲ್ಲವೇ ದೈಹಿಕವಾಗಿ ಆಗಿರಬಹುದು. ಅದು ಕುಟುಂಬದ ಒಳಗೇ ಆಗಿರಬಹುದು ಅಥವ ಹೊರಗೇ ಅಗಿರಬಹುದು. ಆದರೆ ಆಕೆ ಲೈಂಗಿಕ ಆಟಿಕೆಯಾಗಿರುವುದು ಸತ್ಯ. ಅದನ್ನು ನಾವು ಬಹಿರಂಗವಾಗಿ ಹೇಳಿಕೊಳ್ಳಲಾರೆವು. ಒಂದು ವೇಳೆ ಯಾರದರೂ ಅದನ್ನು ಹೇಳಿಕೊಳ್ಳುವ ದೈರ್ಯ ಮಾಡಿದರೆ ಆಕೆಯನ್ನು ಸಮಾಜ ನೋಡುವ ದೃಷ್ಟಿಯೇ ಬದಲಾಗುತ್ತದೆ. ಆಗ ನಡೆಯುವುದೇ ನಿಜವಾದ ಅತ್ಯಚಾರವಾಗುತ್ತದೆ. ಹಾಗಾಗಿ ಬಹಳಷ್ಟು ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ಅಲ್ಲಿ ಕ್ರೌರ್ಯ ಇತ್ತೋ ಇಲ್ಲವೋ ಗೊತ್ತಾಗುವುದಿಲ್ಲ. ಆದರೆ ಲೈಂಗಿಕ ಲಾಲಸೆಯೇ ಪರಾಕಾಷ್ಠೆಯಲ್ಲಿರುತ್ತದೆ ಎಂಬುದು ಸತ್ಯ. ಹಾಗಾಗಿ ಪುಟ್ಟ ಕಂದಮ್ಮಗಳ ಮೇಲೂ, ಇಳಿ ವಯಸ್ಸಿನವರ ಮೇಲೂ ಅತ್ಯಚಾರ ನಡೆಯುತ್ತದೆ. ಆದರೆ ಸಾಮೂಹಿಕ ಅತ್ಯಚಾರ ನಡೆದಾಗ ಅಲ್ಲಿ ವಿಜೃಂಭಿಸುವುದೇ ಕೌರ್ಯ. ಹಾಗಾಗಿ ಅಲ್ಲಿ ಮೃಗೀಯ ವರ್ತನೆಯಿರುತ್ತದೆ. ತಾವು ಧಾಳಿ ಮಾಡುತ್ತಿರುವುದು ಒಂದು ಜೀವಂತ ಹೆಣ್ಣಿನ ದೇಹದ ಮೇಲೆ, ಅದರಲ್ಲಿಯೂ ಮಿಡಿತವಿದೆ ಎಂಬುದನ್ನವರು ಮರೆತುಬಿಡುತ್ತಾರೆ. ಹಾಗಿಯೇ ಅವಳನ್ನು ಸಾರ್ವಜನಿಕವಾಗಿ ಬೆತ್ತಲೆ ಮಾಡುತ್ತಾರೆ, ಅವಳ ಜನನೇಂದ್ರಿಯಕ್ಕೆ ಕಬ್ಬಿಣದ ಸಲಾಕೆಯನ್ನು ತೂರಿಸುತ್ತಾರೆ. ಹಿಂದೊಮ್ಮೆ ಅಲ್ಲಿಂದಲೇ ತಾವು ಮಾಂಸದ ಮುದ್ದೆಯಂತೆ ಈ ಜಗತ್ತಿಗೆ ಅವತರಿಸಿದ್ದೆವು ಎಂಬುದನ್ನು ಅವರಿಗೆ ತಿಳಿಸಿ ಹೇಳುವವರು ಯಾರು? ಪುರುಷಪ್ರಧಾನವಾದ, ಪುರುಷ ಮನಸ್ಥಿತಿಯ ಪೋಲಿಸ್ ಇಲಾಖೆಯಲ್ಲಿ ಈ ಕಾರ್ಯಕ್ಕೆ ಲಾಠಿಯ ಬಳಕೆಯಾಗುತ್ತದೆ ಅಷ್ಟೇ. ಕ್ರಿಮಿನಲ್ ಕೇಸ್ ಗಳಲ್ಲಿ ಪೋಲಿಸ್ ಠಾಣೆಯಲ್ಲಿ ಅತೀಥ್ಯ ಪಡೆದು ಬಂದ ಮಹಿಳೆಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆತ್ಮೀಯವಾಗಿ ಮಾತಾಡಿಸಿ ನೋಡಿ, ಭೀಕರ ಸತ್ಯಗಳು ಹೊರಬರುತ್ತವೆ!.

ಆದರೆ ಲೈಂಗಿಕ ತಜ್ನರು ಹೇಳುವ ಸತ್ಯ ಬೇರೆಯದೇ ಆಗಿರುತ್ತದೆ. ಅವರು ಹೇಳುತ್ತಾರೆ. ಪುರಷನಿಗಿಂತಲೂ ಸ್ತ್ರೀಯ ಲೈಂಗಿಕ ಕಾಮನೆಗಳು ದುಪ್ಪಟ್ಟಾಗಿರುತ್ತವೆ. ಓಶೋ ತಮ್ಮ ’ಸ್ತ್ರೀ’ ಪುಸ್ತಕದಲ್ಲಿ ಇದಕ್ಕೆ ಸಮರ್ಥನೆಗಳನ್ನು ನೀಡುತ್ತರೆ. ಇದಕ್ಕೆ ವರ್ತಮಾನದಲ್ಲಿ ಪುರಾವೆಗಳು ಸಿಗುತ್ತವೆ. ಒಬ್ಬಳು ವೇಶ್ಯ ದಿನವೊಂದರಲ್ಲಿ ಹತ್ತು ಗಿರಾಕಿಗಳನ್ನಾದರೂ ತೃಪ್ತಿ ಪಡಿಸಬಲ್ಲಳು. ಆದರೆ ಒಬ್ಬ ಗಂಡಸು ಎಷ್ಟು ಜನರನ್ನು ಹಾಸಿಗೆಯಲ್ಲಿ ಗೆಲ್ಲಬಲ್ಲ ಹೇಳಿ? ಆಗ ಅವನಿಗೆ ನೆನಪಾಗುವುದೇ  ರಾಡ್, ಲಾಠಿಗಳು...

ಮೊನ್ನೆ ನನ್ನ ಸ್ನೇಹಿತರೊಬ್ಬರೊಡನೆ ದೆಹಲಿ ಘಟನೆ ಬಗ್ಗೆ ಮಾತಾಡುತ್ತಿದ್ದೆ. ಮಾತಿನ ಮಧ್ಯೆ ಅವರಲ್ಲಿ ಹೇಳಿದೆ. ನೀವು ಗಂಡಸರು ಮಾಡಿದ ಹಾಗೆ ಹುಡುಗಿಯರು ಕೂಡಾ ಮಾಡಿದರೆ ಹೇಗಿರುತ್ತೆ ಸ್ವಲ್ಪ ಕಲ್ಪ್ಪಿಸಿಕೊಳ್ಳಿ; ಒಂದು ಆರೇಳು ಹುಡುಗಿಯರು ಹುಡುಗನೊಭ್ಭನನ್ನು ಅಪಹರಿಸಿ ಅವನ ಬಾಯಿಗೆ ಒಂದೆರಡು ವಯಾಗ್ರ ಮಾತ್ರೆ ತುರುಕಿಸಿ ಅವನನ್ನು ಕಬ್ಬಿನ ರಸ ಹೀರಿದಂತೆ ಹೀರಿ ಬಿಟ್ಟರೆ ಹೇಗಿರುತ್ತೆ? ಎಂದೆ. ಬಿಟ್ಟ ಬಾಯಿ ಬಿಟ್ಟಂತೆ ನಿಂತ ಅವರನ್ನು ನಾನು ಮೈ ಮುಟ್ಟಿ ಎಚ್ಚರಿಸಬೇಕಾಯ್ತು. ವಿದೇಶದಲ್ಲಿ ಎಲ್ಲಿಯೋ ಒಂದು ಪ್ರಕರಣ ಈ ರೀತಿ ನಡೆದದ್ದು ವರದಿಯಾಗಿದ್ದು ಬಿಟ್ಟರೆ ಇನ್ನೆಲ್ಲೂ ನಡೆದಂತಿಲ್ಲ. ಆದ್ರೆ ಮುಂದೆ ನಡೆಯಲಾರದು ಎಂದು ಹೇಳುವುದು ಹೇಗೆ?.ಹಾಗಾಗಿ ನನ್ನ ಪುರುಷ ಸಂಗಾತಿಗಳಲ್ಲಿ ಕೇಳಿಕೊಳ್ಳುವುದಿಷ್ಟೇ; ನಿಮ್ಮ ಉಳಿವಿಗಾಗಿಯಾದರೂ ನಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳಿ.......

[’ಅಗ್ನಿ’ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ ]









·          
·          


3 comments:

ಶ್ರೀವತ್ಸ ಕಂಚೀಮನೆ. said...

ನನ್ನ ಯೋಚನೆ ಎಷ್ಟು ಸರಿಯೋ ನಂಗೆ ಗೊತ್ತಿಲ್ಲ. ಆದರೆ ಹೀಗನ್ನಿಸುತ್ತೆ - ಇಂದಿನ ಸ್ಥಿತಿಯಲ್ಲಿ ಬೆಳೆದ ಹೆಣ್ಣುಮಗಳಿಗಿಂತ ಹೆಚ್ಚಾಗಿ ಬೆಳೆಯುತ್ತಿರುವ ಗಂಡು ಪ್ರಾಣಿಗಳಿಗೆ ಸ್ವಚ್ಛ ಮತ್ತು ಗೌರವಯುತ ಲೈಂಗಿಕ ಶಿಕ್ಷಣದ ಅಗತ್ಯ ಇದೆ ಅಂತ. ಹೆಣ್ಣನ್ನು ಗೌರವದಿಂದ ಕಾಣುವ ಮತ್ತು ಲೈಂಗಿಕತೆಯನ್ನೂ ಗೌರವಯುತವಾಗಿ ನಿಭಾಯಿಸುವ ಬಗೆಗಿನ ಶಿಕ್ಷಣ ಎಳವೆಯಲ್ಲೇ (ಅಗತ್ಯವಿದ್ದಾಗಲೇ) ಮನೆಯಲ್ಲೇ ನೀಡುವಂತ ವಾತಾವರಣ ನಿರ್ಮಾಣವಾಗಬೇಕು. ಹುಡುಗಿಯೊಬ್ಬಳು ಮೈನೆರೆದಾಗ ತಾಯಿ ಹೇಗೆಲ್ಲ ಆಕೆಯ ಜವಾಬ್ದಾರಿಗಳ ಬಗ್ಗೆ ಆಕೆಗೆ ತಿಳಿ ಹೇಳ್ತಾಳೋ ಅಂತೆಯೇ ಬೆಳೆಯುತ್ತಿರುವ ಮಗನಿಗೂ ಹೇಳಬೇಕಾದ್ದು ತಂದೆ ತಾಯರ ಕರ್ತವ್ಯ. ಆದರೆ ನಮ್ಮ ಕುಟುಂಬಗಳಲ್ಲಿ ಗಂಡು ತಾನೆ ಎಲ್ಲಾ ತಿಳ್ಕೋತಾನೆ ಅಂತ ಸುಮ್ಮನಾಗಿಬಿಡೋದೇ ಜಾಸ್ತಿ. ಎಲ್ಲೋ ಓದಿ, ಯಾರಿಂದಲೋ ಕೇಳಿ, ಇನ್ನೆಲ್ಲೋ ನೋಡಬಾರದ್ದನ್ನು ನೋಡಬಾರದ ವಯಸ್ಸಲ್ಲಿ ನೋಡಿ, ಸೆಕ್ಸ್ ಬಗ್ಗೆ ಅತಿರಂಜಿತ ಕಲ್ಪನೆ ಬೆಳೆಸಿಕೊಂಡು ಅದನ್ನು ನಿಗ್ರಸಿಕೊಳ್ಳುವಲ್ಲಿ, ತನ್ನನ್ನು ತಾನು ನಿರ್ವಹಿಸಿಕೊಳ್ಳುವಲ್ಲಿ ಗೊಂದಲಕ್ಕೆ ಬೀಳುವುದೇ ಹೆಚ್ಚು. ಸಭ್ಯ ಕುಟುಂಬದಲ್ಲಾದರೆ ಹೇಗೋ ನಿಭಾಯಿಸಿಕೊಂಡು ಬಿಡ್ತಾರೆ. ಅದಿಲ್ಲದೇ ಕ್ರೌರ್ಯದ ಸಾಥ್ ಸಿಕ್ಕಿಬಿಟ್ಟರೆ ಎಂದಿಗಿದ್ದರೂ ಹೆಪ್ಪುಗಟ್ಟಿದ ಅತಿರಂಜಿತ ಕಲ್ಪನೆ ಅಪಾಯವೇ. ಕಾಮ ಕೆಟ್ಟದ್ದು ಅನ್ನುವ ಬದಲು ಯಾಕೆ ಮತ್ತು ಹೇಗಾದಾಗ ಕೆಟ್ಟದ್ದು ಎಂಬುದನ್ನು, ಅಲ್ಲದೇ ಹೆಣ್ಣನ್ನು ಗೌರವಿಸು ಅಂತಷ್ಟೇ ಹೇಳುವ ಬದಲು ಹೇಗೆ ಮತ್ತು ಯಾಕೆ ಗೌರವಿಸಬೇಕೆಂಬುದನ್ನು ತಮ್ಮ ಬದುಕುಗಳ ಮೂಲಕ ಮನೆಯಲ್ಲೇ ಪಾಲಕರೇ ತಿಳಿಹೇಳುವಂತ ವಾತಾವರಣ ನಮ್ಮ ಸಮಾಜದಲ್ಲಿ ರೂಪುಗೊಂಡಾಗ ಇಂಥ ಹೇಯ ಅತ್ಯಾಚಾರಗಳು ನಡೆಯುವುದು ಕಡಿಮೆ ಆಗಬಹುದೇನೋ.
ಬದುಕನ್ನು ಕಂಡ, ಸಂಸಾರಸ್ತ ಮಧ್ಯವಯಸ್ಕರು ಯಾಕೆ ಹಿಂಗಾಡ್ತಾರೆ ಎಂಬುದು ಅರ್ಥವಾಗದ ಸಂಗತಿ..ಅಂಥವರಿಗೆ ನೀವು ಹೇಳಿದ ಶಿಕ್ಷೆಯೇ ಸರಿಯಾದದ್ದು...
ಏನೋ ತೀವ್ರ ಗೊಂದಲ ಕಾಡುತ್ತಿದೆ.

ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡ said...

ತುಯ್ಯುವವರು (Rapists) ಹಾಗಾಗುವುದಕ್ಕೆ ಪರಿಸರ ಕಾರಣ ಅನ್ನುವುದು ದಿಟ. ಇವತ್ತು ಹೆಚ್ಚು ಗಮನ ಹೋಗಬೇಕಿರುವುದು ಪರಿಸರವನ್ನ ಸರಿಮಾಡುವ ಕಡೆಗೆ. ಅವರಿಗೆ ಮರಣದಂಡನೆ ಇಲ್ಲಾ ಜೀವಂತವಾಗಿ ಇರೋವರೆಗೂ ಚುಚ್ಚುವುದನ್ನ ಮಾಡಬೇಕಿಲ್ಲದಿರುವುದೂ ಅದೇ ಕಾರಣಕ್ಕೆ. ಎರಡು ಬಾರಿ ಚುಚ್ಚಿದ ಮೇಲೆ ಆ ಮಯ್ಯಲ್ಲಿ ತುಯ್ದವ ಉಳಿದಿರುವುದಿಲ್ಲ. ಬರೀ ಮಯ್ಯಿ ಮಾತ್ರ ಉಳಿದಿರುತ್ತದೆ.
ಅಂದಹಾಗೆ, 'ಹೆಂಗಸು' ಒಂದು ಕನ್ನಡ ಪದ ಮಾತ್ರ. ಮತ್ತಿನ್ನೇನೂ ಅಲ್ಲ. ಸಂಸ್ಕ್ರುತದ ಮಹಿಳೆ ಬಳಸಿದರೆ ನೋಡುಬಗೆ ಬದಲಾಗದು.
Woman = ಕನ್ನಡ. ಹೆಂಗಸು., ಸಂಸ್ಕ್ರುತ. ಸ್ತ್ರೀ.
Lady = ಕನ್ನಡ. ಅಮ್ಮಣಿ., ಸಂಸ್ಕ್ರುತ. ಮಹಿಳೆ.

Unknown said...

I am surprised to know some extreme thoughts that this author harbours about sex and the ability of a woman to have sex as compared to that of a man! First of all I pity her understanding and her thought process! A man can can 'win' a woman in bed only if she is able and willing to play! After the game is over, even a well played woman can't play again for some time!
This is true for both men and women. And again, achieving an orgasm for a woman much depends upon her own level of arousal and openness, unless her partner is impotent!
The author also thinks that a 'MAN's weapon is 'THAT' and without that he is just a worm to be crushed! I can see that in a single stroke of great disdain to menfolk, she has sanctified the present status of women, because women don't have 'THAT'!
And as I've seen among many women and also in this author as conveyed through the above article, one common aspect is, they all regret the lack of THAT, which a man boastingly has!
May be, prostitutes satisfy ten men in a day! But they do it grudgingly and passively! And always suffer from nausea and addiction problems! It is not a positive thing, its negetive! The condition of prostitutes is not something to be proud of!
And yes, everyone accepts that rape is a crime and it should be punished.