ಮಧ್ಯರಾತ್ರಿ..ನಾನು
ಪಾರಿಜಾತದ ಕಂಪಿನಲ್ಲಿದ್ದೆ.
ನನ್ನ ಬೆಡ್
ರೂಮಿನ ಕಿಟಕಿಯತ್ತ ಬಾಗಿದ ಆ ದೇವಲೋಕದ ವೃಕ್ಷದಲ್ಲಿ ಬಿರಿಯುತ್ತಿದ್ದ ದೇವಪುಷ್ಪದ ಸುಂಗಂಧಲ್ಲಿ
ಮೈಮರೆತು ನಿದ್ರೆಯಾಳಕ್ಕೆ ಜಾರುತ್ತಲಿದ್ದೆ..
ಆಗ ನನ್ನ
ಮೊಬೈಲ್ ಪೋನ್ ರಿಂಗುಣಿಸಿತು…
ಆತ
ರಣರಂಗದಲ್ಲಿದ್ದ.. ನನ್ನ ಹೆಸರನ್ನು ಹೇಳುತ್ತಾ ತಡೆ ತಡೆದು ಬಿಕ್ಕಳಿಸುತ್ತಿದ್ದ..
’ಏನಾಯ್ತು?’
ಎನ್ನುತ್ತಲೇ ತಟ್ಟನೆದ್ದು ಕುಳಿತವಳು, ನನ್ನ ಮಾತಿನಿಂದ ಮನೆಯಲ್ಲಿದ್ದವರಿಗೆ
ತೊಂದರೆಯಾಗಬಾರದೆಂದು ಟೆರೇಸ್ ಮೇಲೆ ಹೋದೆ. ಪಾರಿಜಾತದ ಗೆಲ್ಲಿನ ನೆರಳಲ್ಲಿ ಹಾಕಿದ ಕುರ್ಚಿಯಲ್ಲಿ
ದೊಪ್ಪನೆ ಕುಳಿತೆ..ಅಲ್ಲಿಗೆ ಬರುವ ತನಕ ’ಹೆದರಬೇಡಿ ನಾನಿದ್ದೇನೆ’ ಎಂದು ಸಮಾಧಾನಿಸುತ್ತಲೇ
ಬಂದಿದ್ದೆ.
ಅಂದೇ ಮೊದಲ
ಬಾರಿ ಗಂಡಸೊಬ್ಬ..ಅದರಲ್ಲೂ ಬಹಳಷ್ಟು ಜೀವನವನ್ನು ಕಂಡಿದ್ದ, ಮಧ್ಯವಯಸ್ಸನ್ನು ಸಮೀಸುತ್ತಿರುವ
ವ್ಯಕ್ತಿಯೊಬ್ಬ ಮಗುವಿನಂತೆ,ಅಸಹಾಯಕನಾಗಿ ಅತ್ತದ್ದನ್ನು ನಾನು ನನ್ನ ಕಿವಿಯಾರೆ
ಕೇಳುತ್ತಲಿದ್ದೆ..
ಆತ ನಡುಗಿ,
ಜರ್ಜರಿತನಾಗುವುದಕ್ಕೆ ಕಾರಣವಿತ್ತು..ಆತನ ಸಹೋದ್ಯೋಗಿಯಾಗಿದ್ದ, ಆತನ ಜೀವದ ಗೆಳೆಯ ಅವನ
ಕಣ್ಣೆದುರಿನಲ್ಲೇ ಬಾಂಬ್ ಸ್ಪೋಟದಿಂದಾಗಿ ಛೀದ್ರ ಛೀದ್ರವಾಗಿ ಸತ್ತು ಬಿದ್ದಿದ್ದ. ನನ್ನನ್ನೂ ಸೇರಿದಂತೆ ಜಗತ್ತಿನಾದ್ಯಂತ ಬಹಳಷ್ಟು ಜನರು ಆ ಸುದ್ದಿಯನ್ನು ಟೆಲಿವಿಶನ್ ನಲ್ಲಿ ವೀಕ್ಷಿಸಿದ್ದರು..…ಆ ಕ್ಷಣದಲ್ಲಿ
ಆತನಿಗೆ ನನ್ನ ನೆನಪಾಗಿದೆ..ಪೋನ್ ಮಾಡಿದ್ದಾನೆ..ಅದು ಅಂತರಾಷ್ಟ್ರೀಯ ಕರೆ..ಆದರೂ ಒಂದು ಘಂಟೆಗೂ
ಮಿಗಿಲಾಗಿ ಆತ ನನ್ನೊಡನೆ ಮಾತಾಡಿದ..ಆತ ರಣರಂಗದ ಮಾತಾಡುತ್ತಲಿದ್ದರೆ..ನಾನು ಪಾರಿಜಾತದ
ಕಂಪಿನೊಡನೆ ಅಲೌಕಿಕತೆಯ ಗಂಧವನ್ನು ಬೆರೆಸಿ ಅವನಿಗೆ ರವಾನಿಸುತ್ತಿದ್ದೆ…
ನಿಮಗೀಗ
ಅನ್ನಿಸಬಹುದು..ಆತ ನಿಮ್ಮ ಆತ್ಮೀಯ ಗೆಳೆಯನಾಗಿರಬೇಕೆಂದು. ಖಂಡಿತಾ ಅಲ್ಲ. ಅದೊಂದು ಪೇಸ್ ಬುಕ್
ಗೆಳೆತನ ಅಷ್ಟೇ.. ಅದನ್ನೇ ಆತ ಮಾತಿನ ಮಧ್ಯೆ ಹೇಳಿದ..’ಇಷ್ಟೊಂದು ಗೆಳೆಯ-ಗೆಳತಿಯರಿದ್ದಾರೆ ನನಗೆ..
ಆದರೆ ಈ ಹೊತ್ತಿನಲ್ಲಿ ನನಗೆ ನೀವು ಮಾತ್ರ ಯಾಕೆ ನೆನಪಾದಿರೋ ಗೊತ್ತಿಲ್ಲ’
ಹೌದು…ಆತ ನನಗೆ
ಪೇಸ್ ಬುಕ್ ನಲ್ಲಿ ಪರಿಚಿತನಾದವನು..ಯಾವುದೋ ಒಂದು ಮಾಹಿತಿಗಾಗಿ ನನ್ನ ಪತಿಯ ಸಲಹೆಯಂತೆ
ನಾನವನನ್ನು ಸಂಪರ್ಕಿಸಿದ್ದೆ. ಹಾಗಾಗಿ ಆತನ ಬಳಿ ನನ್ನ ದೂರವಾಣಿ ನಂಬರ್ ಇತ್ತು..ಮುಂದೆ ಅದು
ಒಂದು ಸೌಹಾರ್ಧ ಗೆಳೆತನವಾಗಿ ಮುಂದುವರಿದಿತ್ತು…ಆದರೆ ನಡುವೆ ಒಂದು ಚಿಕ್ಕ ತಪ್ಪು ತಿಳುವಳಿಕೆಯಿಂದಾಗಿ
ನಮ್ಮಿಬ್ಬರ ನಡುವಿನ ಸಂಪರ್ಕ ಕೊಂಡಿಗೆ ತುಕ್ಕು ಹಿಡಿದಿತ್ತು..ನಾನವನನ್ನು ಪೇಸ್
ಬುಕ್ ನಲ್ಲಿ ಅನ್ಪ್ರೆಂಡ್ ಮಾಡಿದ್ದೆ.
ಹೀಗಿರುವಾಗಲೇ ಆ
ಪೋನ್..ಅದೂ ಮಧ್ಯರಾತ್ರಿಯಲ್ಲಿ ಬಂದಿತ್ತು.
ಅಂದು ಹುಣ್ಣಿಮೆಯಾಗಿರಬೇಕು. ಸುತ್ತ ಬೆಳದಿಂಗಳು ಚೆಲ್ಲಿತ್ತು. ಆ
ಹಾಲ್ಬೆಳಕಲ್ಲಿ ಮಾಯಾನಗರಿ ಬೆಂಗಳುರು ಹೇಗೆ ನಿಶಬ್ದವಾಗಿ ಮಲಗಿ ನಿಟ್ಟುಸಿರು ಬಿಡುತ್ತಿದೆಯೆಂದು
ನಾನವನಿಗೆ ವಿವರಿಸುತ್ತಾ, ತಲೆಯೆತ್ತಿ ಆಕಾಶವನ್ನು ನೋಡುವಂತೆ ಹೇಳಿದೆ. ‘ಆ
ಚಂದಿರನ್ನು ನೋಡು..ಅಲ್ಲಿ ನಿನ್ನ ಗೆಳೆಯನಿರಬಹುದು..ಅವನು ಅಲ್ಲಿಂದ ನಿನ್ನನ್ನು
ನೋಡುತ್ತಿರಬಹುದು..ನಾನು ನಿನ್ನ ಮಾತುಗಳಿಂದ
ಅವನನ್ನು ಅಲ್ಲಿ ಕಾಣುತ್ತಿದ್ದೇನೆ. ಜಗತ್ತಿಗೆ ತಂಪನ್ನು ತರಲು ಅವನು ಚಂದಿರನಲ್ಲಿ ಸೇರಿ
ಹೋಗಿದ್ದಾನೆ…ನಾವಿಬ್ಬರೂ ಏಕಕಾಲದಲ್ಲಿ ಅವನನ್ನು ನೋಡುತ್ತಲಿದ್ದರೆ ಅವನು ನಗದೆ ಇರಲು ಸಾಧ್ಯವೇ?’...
ನಾನು ಅವನೊಡನೆ ಮಾತಾಡುತ್ತಲೇ ಹೋದೆ..ಅವನು ಚಿಕ್ಕ ಮಗುವಿನಂತೆ
ಕೇಳುತ್ತಲೇ ಹೋದ.
ಅವನು ಸಹಜಸ್ಥಿತಿಗೆ ಬರುವುದು ನನ್ನ ಅರಿವಿಗೆ ಬರುತ್ತಿತ್ತು. ಹಾಗಾಗಿ
ಅವನಿಂದ ಕಳಚಿಕೊಳ್ಳುವುದರ ಬಗ್ಗೆ ಆಲೋಚಿಸುತ್ತಲೇ ಮತ್ತಷ್ಟು ಮಾತು ಮುಂದುವರಿಸುತ್ತಾ ಹೇಳಿದೆ
”ಎರಡು ಪೆಗ್ ವಿಸ್ಕಿ ಕುಡಿದು ಚಂದಿರನ ಜೊತೆ ಸೇರಿರುವ ನಿನ್ನ ಗೆಳೆಯನನ್ನು ನೆನೆಯುತ್ತಾ ಮಲಗು.
ನಾಳೆ ಬೆಳಿಗ್ಗೆ ಏಳುವಾಗ ನೀನು ಹೊಸ ಮನುಷ್ಯರಾಗಿರುತ್ತಿ’ ಎಂದು ಅಮ್ಮನಂತೆ ರಮಿಸಿ ನಾನು ಪೋನ್
ದಿಸ್ಕನೆಕ್ಟ್ ಮಾಡಿದೆ.
.jpg)
ಬೆಳಗ್ಗಿನ ಜಾವವಿರಬೇಕು. ಎಚ್ಚರವೂ ಅಲ್ಲದ ಕನಸೂ ಅಲ್ಲದ ಸ್ಥಿತಿ.
ನನ್ನ ಕೆನ್ನೆಯ ಮೇಲೆ ಸುಕೋಮಲ ಸ್ಪರ್ಶ. ’ನನ್ನ ಮೇಲೆ ನಿನಗೇಕೆ ಇಷ್ಟು ಮೋಹ’ ಕಿವಿಯ ಬಳಿ ಉಲಿದ
ಪಿಸುನುಡಿ. ನಾನು ಗಲಿಬಿಲಿಗೊಳ್ಳುತ್ತಿರುವಾಗಲೇ..ಮತ್ತೆ ಅದೇ ಇನಿದನಿ...
’ನೀನು ಯಾಕೆ ನನ್ನ
ಹಾಗೆ ಆದೆ?
ನಿನ್ನ ಹಾಗೆಯೇ...ಹಾಗೆಂದರೇನು?
ಲಜ್ಜಾಭರಣೆ..!.ನಿನ್ನ ಹಾಗೆ ನನಗೂ ಒಂದು ಕಥೆಯಿದೆ..ಹೇಳಲೇ?
ಕಥೆಯೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಕ್ಕಳ-ಪಕ್ಕಳ ಕೂತು
ಗಲ್ಲಕ್ಕೆ ಕೈನೆಟ್ಟೆ.
‘ನಾನೊಬ್ಬಳು ರಾಜಕುಮಾರಿಯಾಗಿದ್ದೆ. ದಿನಾ ಬ್ರಾಹ್ಮಿ ಮುಹೂರ್ತದಲ್ಲಿ
ಎದ್ದು ಶಸ್ತ್ರಾಭ್ಯಾಸ ಮಾಡುತ್ತಿದ್ದೆ..ಪ್ರತಿಧಿನ ಸೂರ್ಯ ನಮಸ್ಕಾರ ಮಾಡುತ್ತಿದ್ದಾಗ ಅವನನ್ನು
ನೋಡುತ್ತಿದ್ದೆ..ಕೆಂಪನೆಯ ಕೆಂಡದುಂಡೆಯಂತಿದ್ದ ಆತ ಬರಬರುತ್ತಾ ಹೊಂಬಣ್ಣದ ರೂಪ ಪಡೆಯುತ್ತದ್ದ;
ನನ್ನ ಯೌವನಂತೆಯೇ! ನನ್ನ ಹೆಣ್ತನ ಅರಳುವುದನ್ನು ನೋಡುತ್ತಲೇ ಅವನೂ ಬಣ್ಣಗಾರನಾಗುತ್ತಿದ್ದ. ಅವನು
ನನ್ನ ಮೋಹಿಸಿದ. ನಾನವನನ್ನು ಅಚ್ಚರಿಯಿಂದ ನೋಡುತ್ತಿದ್ದೆ. ಪ್ರತಿದಿನ ಸೂರ್ಯ ನಮಸ್ಕಾರಕ್ಕಾಗಿ
ಕೈಯೆತ್ತಿದಾಗಲೆಲ್ಲ ಅವನು ನನ್ನ ಬೆರಳುಗಳನ್ನು ಹಿಡಿದೇ ನನ್ನೊಳಗೆ ಇಳಿಯುತ್ತಿದ್ದ.ನಾನವನನ್ನು
ಪ್ರೀತಿಸಿಬಿಟ್ಟೆ. ಮುಂಜಾನೆಯಲ್ಲಿ ಪ್ರತಿದಿನ ಅವನೊಡನೆ ಅವನ ಪ್ರಿಯ ಮಡದಿ ಉಷೆಯಿರುತ್ತಿದ್ದಳು
ಆದರೂ ಆತ ಜಾರತನದಲ್ಲಿ ನನ್ನೆಡೆಗೆ ಬಾಗಿದ..ನಾವು ಭೂಮ್ಯಾಕಾಶಗಳಲ್ಲಿ ಒಂದಾಗಿ
ಬೆರೆಯುತ್ತಿದ್ದೆವು.
.jpg)
ಮತ್ತೆ
ಬದುಕಬೇಕೆನಿಸಲಿಲ್ಲ. ಕಠಾರಿಯಿಂದ ಇರಿದುಕೊಂಡು ಸತ್ತು ಹೋದೆ. ದೇಹವನ್ನು ನಾಶಪಡಿಸಿಕೊಂಡರೇನು
ಆತ್ಮ ಅವಿನಾಶಿನಿಯಲ್ಲವೇ? ನನ್ನನ್ನು ಸುಟ್ಟ ಬೂದಿಯೇ ಬೀಜವಾಗಿ ರೂಪುವಡೆದು ಸಸಿಯಾಗಿ ಭೂಮಿಯನ್ನು
ಸೀಳಿ ನಿಂತೆ. ಹೂವಾಗಿ ಅರಳಿದೆ. ಯಾರಾದರೂ ಮುಟ್ಟಿದರೆ ಬಾಡಿ ಹೋಗುವ ಭಯ. ಅದಕ್ಕಾಗಿ ಸುತ್ತ ಒರಟು
ಎಲೆಯನ್ನು ಹೊದ್ದೆ. ಅದರ ಆಕಾರವನ್ನು
ನೋಡಿದೆಯಾ?. ಅದು ನನದೇ ಹ್ರುದಯ. ಪೂರ್ವ ಜನ್ಮದ
ಸೆಳೆತ. ದೇಹ ನಶ್ವರವಾದರೂ ಪ್ರೀತಿ ಅವಿನಾಶಿಯಲ್ಲವೇ? . ನನ್ನನ್ನು ದೂರದಲ್ಲಿ ನಿಂತು ಜನರು ನೋಡಿ
ಆನಂದಿಸಲಿ. ನಾನೆಂದೂ ಅವನನ್ನು ತಲೆಯೆತ್ತಿ ನೋಡಲಾರೆ. ನಾನು ಕತ್ತಲಲ್ಲಿಯೇ ಅರಳುತ್ತೇನೆ. ನೊಂದ
ಮನಸ್ಸುಗಳಿಗೆ ತಂಪನ್ನಿಯುತ್ತೇನೆ; ಕಂಪನ್ನು ತುಂಬುತ್ತೇನೆ. ತೊರೆದು ಹೋದವರಿಗಾಗಿ
ದುಃಖಿಸುವುದರಲ್ಲಿ ಅರ್ಥವಿಲ್ಲ. ಅವರು ಆಕಾಶದಲ್ಲೇ ಇರಲಿ..ನಾವು ಭೂಮಿಯಲ್ಲೇ ಇರೋಣ..ಅಲ್ಲವೇ
ನನ್ನ ಪ್ರಿಯ ಸಖಿ...?
ಇಷ್ಟನ್ನು ಹೇಳಿದವಳೇ...ತನ್ನ ಹವಳದ ಬೆರಳುಗಳಿಂದ ನನ್ನ ಗಲ್ಲವನ್ನು
ಹಿಡಿದೆತ್ತಿ ನನ್ನ ಕಣ್ಣುಗಳನ್ನೆ ದಿಟ್ಟಿಸುತ್ತಾ..’ನನ್ನ ಹಾಗೆ ನೀನಾಗಬೇಡ.. ದಿನಾ ನನ್ನನ್ನು
ಬೊಗಸೆಯಲ್ಲಿ ತುಂಬಿಕೊಂಡು ನಿನ್ನ ಮನೆಯೊಳಗೆ ಬರಮಾಡಿಕೊಳ್ಳುತ್ತಿಯಲ್ಲಾ... ಆಗ ನಿನ್ನ
ನಿಟ್ಟುಸಿರ ಬೇಗೆಗೆ ನಾನು ಬಾಡಿ ಹೋಗುತ್ತೇನೆ. ಅದಕ್ಕೆ ಕಾರಣ ನನಗೆ ಗೊತ್ತು..ನನ್ನವನು ನನಗೆ
ಕೈಗೆಟುಕದಷ್ಟು ದೂರದಲ್ಲಿದ್ದ. ಆದರೆ ನಿನಗಾಗಿ ಹಂಬಲಿಸುವವನು ಇಲ್ಲೇ
ಹತ್ತಿರದಲ್ಲಿದ್ದಾನೆ..ನಾನು ನಿನ್ನ ಅಂತರಂಗದ ಗೆಳತಿಯಲ್ಲವೇ? ನನಗಾಗಿಯಾದರೂ
ಇವತ್ತಿನ ಒಂದು ದಿನದ ಮಟ್ಟಿಗೆ ನೀ ಅಭಿಸಾರಿಕೆಯಾಗು. ನಿನ್ನ ಜೊತೆಗೆ
ನಾನಿರುತ್ತೇನೆ..ಅವನೆದುರಲ್ಲಿ ನೀನೇನೂ ಮಾತೇ ಆಡಬೇಕಿಲ್ಲ. ಅವನ ಕೈಗೆ ನನ್ನನ್ನು
ಹಸ್ತಾಂತರಿಸು..ಮತ್ತೆ ಬರುವುದೆಲ್ಲಾ ಮೇಘಸಂದೇಶವೇ...ನೀನು ಕಾಣುವುದೆಲ್ಲಾ ಯಕ್ಷ-ಕಿನ್ನರ
ಲೋಕವೇ...!’
ಹಾಗೇ ಹೇಳುತ್ತಲೇ ಆ ದ್ವನಿ ಬಣ್ಣ-ಬಣ್ಣಗಳ ಸುಂದರವಾದ ಬೆಳಕಿನ
ರೇಖೆಗಳಾಗಿ, ನೋಡ ನೋಡುತ್ತಲೇ ಬಣ್ಣದ ಗೋಲವಾಗಿ. ನನ್ನನ್ನು ನುಂಗಲೋ ಎಂಬಂತೆ ನನ್ನತ್ತ
ಶರವೇಗದಲ್ಲಿ ಬರತೊಡಗಿತು. ನಾನು ಜೋರಾಗಿ ಕಿರುಚಿ, ದಡಕ್ಕನೆ ಎದ್ದು ಕುಳಿತೆ. ಕೆನ್ನೆ ಮುಟ್ಟಿ
ನೋಡಿಕೊಂಡೆ. ಒದ್ದೆಯಾಗಿತ್ತು. ಅಚ್ಚರಿಗೊಳ್ಳುತ್ತಾ ಪುಸ್ತಕದತ್ತ ನೋಡಿದೆ. ಪಾರಿಜಾತದ ಹೂಗಳು ನಗುತ್ತಿದ್ದವು.
ಎದುರಿಗಿದ್ದ ಕನ್ನಡಿಯತ್ತ ದಿಟ್ಟಿ ಹಾಯಿಸಿದೆ.. ಪಾರಿಜಾತದ ಕಂಪಿನಲ್ಲಿ ನನ್ನ ಬಿಂಬ ಮಸುಕು
ಮಸುಕಾಗಿ ಕಂಡಿತು.
[ 'ಪದ ಪಾರಿಜಾತ’ದಲ್ಲಿ ಪ್ರಕಟವಾದ ಕಥೆ ]
.
2 comments:
ನಿಮ್ಮ ಕಥೆ ತುಂಬಾ ಅರ್ಥಪೂರ್ಣವಾಗಿದೆ ಮೇಡಂ....., ಪದಗಳ ಜೋಡಣೆ ಅಂತೂ ಅರ್ಥಗರ್ಭಿತ .
super.. plz visit my blog....
Post a Comment