Sunday, October 30, 2016

ಬಲಿಚಕ್ರವರ್ತಿ ಮತ್ತೆ ಬೇರೆ ರಾಜ್ಯ ಕಟ್ಟಿದನೇ?ದೀಪಾವಳಿಯನ್ನು ವಾಮನ ಜಯಂತಿಯನ್ನಾಗಿ ಆಚರಿಸಬೇಕೆಂದು ಕೆಲವು ವಾರಗಳ ಹಿಂದೆ ಬಿಜೆಪಿಯ ಅಧ್ಯಕ್ಷ ಅಮಿತಾ ಶಾ ಅಪ್ಪಣೆ ಕೊಡಿಸಿದಾಗ ನನಗೆ ನಗುವುಕ್ಕಿ ಬಂದದ್ದನ್ನು ಬಿಟ್ಟರೆ ಇನ್ನೇನೂ ಪ್ರತಿಕ್ರಿಯೆ ಇರಲಿಲ್ಲ. ನಮ್ಮ ಜನಪದರ ಬದುಕಿನಲ್ಲಿ ಬಲಿ ಚಕ್ರವರ್ತಿ ಎಷ್ಟು ಹಾಸುಹೊಕ್ಕಾಗಿದ್ದಾನೆ ಎಂದರೆ ಇಂತಹ ಹತ್ತು ಅಮಿತ್ ಶಾಗಳು ಉರುಳಾಡುತ್ತಾ ಬಂದು ತಿಪ್ಪರಲಾಗ ಹಾಕಿದರೂ ಅವರ ನಂಬುಗೆಯ ಜಗತ್ತನ್ನು ಕಿಂಚಿತ್ತು ಅಲ್ಲಾಡಿಸಲಾರರು.

ದೀಪಾವಳಿಯೆಂದರೆ ಬೆಳಕಿನ ಹಬ್ಬ. ಕತ್ತಲನ್ನು ದೂರ ಓಡಿಸುವ ಹಣತೆ ಹಬ್ಬ.
ಪುರಾಣದ ಪ್ರಕಾರ ವಿಷ್ಣುವಿನ ಅವತಾರನಾದ ವಾಮನ ಅಸುರ ಚಕ್ರವರ್ತಿ ಬಲಿಯ ಅಸ್ಥಾನಕ್ಕೆ ಬಂದು ಮೂರಡಿ ಭೂಮಿಯನ್ನು ಬಿಕ್ಷೆಯಾಗಿ ಕೇಳುತ್ತಾನೆ. ಬಲಿ ’ತಥಾಸ್ತು ಅನ್ನುತಾನೆ. ವಾಮನ ಆಕಾಶದೆತ್ತರಕ್ಕೆ ಬೆಳೆದು ನಿಂತು ಒಂದು ಪಾದದಿಂದ ಭೂಮಿಯನ್ನೂ ಇನ್ನೊಂದು ಪಾದದಿಂದ ಆಕಾಶವನ್ನೂ ಅಳೆದು ಇನ್ನೊಂದು ಪಾದವನ್ನು ಎಲ್ಲಿಡಲಿ? ಎಂದು ಕೇಳಿದಾಗ ಸತ್ಯಸಂಧನಾದ ಆ ಅಸುರ ದೊರೆ ಮೂರನೆಯ ಪಾದವನ್ನು ತನ್ನ ತಲೆಯ ಮೇಲಿಡುವಂತೆ ಹೇಳುತ್ತಾನೆ. ಅಲ್ಲಿಗೆ ಕಾಲಿಟ್ಟ ವಾಮನ ಅವನನ್ನು ಪಾತಾಳಕ್ಕೆ ತಳ್ಳಿಬಿಡುತ್ತಾನೆ.

 ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಇನ್ನೆಂದೂ ತನ್ನ ದೇಶವನ್ನು, ತನ್ನ ಪ್ರೀತಿಪಾತ್ರ ಪ್ರಜೆಗಳನ್ನು ಕಾಣಲು ಸಾಧ್ಯವಿಲ್ಲವೆಂಬುದು ಅರಿವಾದಾಗ ಆತ ತೀವ್ರ ಸಂಕಟಗೊಳಗಾಗುತ್ತಾನೆ. ಅದಕ್ಕಾಗಿ ವರ್ಷದಲ್ಲಿ ಮೂರು ದಿನಗಳ ಮಟ್ಟಿಗೆ ತನ್ನ ರಾಜ್ಯಕ್ಕೆ ಬೇಟಿ ಕೊಡಲು ಅನುಮತಿಯನ್ನು ನೀಡುವಂತೆ ತನ್ನ ಶತ್ರುವಾದ ವಾಮನನನ್ನೇ ಕೇಳಿಕೊಳ್ಳುತ್ತಾನೆ. ವಾಮನ ಅವನ ಕೋರಿಕೆಯನ್ನು ಮನ್ನಿಸುತ್ತಾನೆ. ಆ ಮೂರು ದಿನಗಳೇ ದೀಪಾವಳಿ. ತಮ್ಮ ಪ್ರಿಯ ಪ್ರಜೆಗಳು ಹೇಗಿದ್ದಾರೆಂದು ನೋಡಲು ಬಲಿ ಚಕ್ರವರ್ತಿ ಪಾತಾಳದಿಂದ ಭೂಲೋಕಕ್ಕೆ ಬರುತ್ತಾನೆ. ತಮ್ಮ ಪ್ರೀತಿಯ ರಾಜನ ಬರವನ್ನು ಸ್ವಾಗತಿಸಲು ಜನರು ನಡೆಸುವ ತಯಾರಿಯೇ ದೀಪಾವಳಿ.

ನನಗೆ ದೀಪಾವಳಿಯೆಂದರೆ ನೆನಪಾಗುವುದು ನನ್ನ ಬಾಲ್ಯದ ದೀಪಾವಳಿ. ಮುಖ್ಯವಾಗಿ ನಾವು ಸಂಗ್ರಹಿಸುತ್ತಿದ್ದ ವಿವಿಧ ಜಾತಿಯ ಹೂಗಳು. ಅದರಲ್ಲಿಯೂ ಕುರುಡಿ ಹೂ ಎಂಬ ವಿಶೇಷ ಪರಿಮಳವುಳ್ಳ ಬಳ್ಳಿ ಜಾತಿಯ ಹೂ. ಇದರ ಪರಿಮಳ ಪರ್ಲಾಂಗ್ ಗಟ್ಟಲೆ ದೂರ ಪಸರಿಸುತ್ತಿರುತ್ತದೆ. ಆ ಹೂವನ್ನು ಹುಡುಕಿಕೊಂಡು ನಾವು, ಮಕ್ಕಳು ಅಡ್ಕ. ಕಾಡುಗಳಲ್ಲಿ ಮೈಲಿಗಟ್ಟಲೆ ಅಲೆದಾಡುತ್ತಿದ್ದೆವು. ಹಬ್ಬ ಇನ್ನೇನು ಒಂದುವಾರ ಇದೆಯೆನ್ನುವಾಗಲೇ ಅಲೆದಾಡಿ ಅದಿರುವ ಜಾಗವನ್ನು ಗುರುತು ಮಾಡಿ ಇಡುತ್ತಿದ್ದೆವು. ದೀಪಾವಳಿಯಂದು ಬೆಳಿಗ್ಗೆಯೇ ಹೋಗಿ ಅದನ್ನು ಕಿತ್ತು ತರುತ್ತಿದ್ದೆವು.

ಇನ್ನೊಂದು ವಿಶೇಷತೆಯೆಂದರೆ ಬಲಿಯೇಂದ್ರ ಕಲ್ಲಿನ ಮುಂದೆ ಮರ ಹಾಕುವುದು. ಮರ ಅಂದರೆ ಅದು ಹಾಲೆ ಮರ. ಈ ಹಾಲೇ ಮರಕ್ಕೆ ಗಡಿ ಹಾಕಿದಾಗ ಅಂದರೆ ಗಾಯ ಮಾಡಿದಾಗ ಅದರಿಂದ ಹಾಲಿನಂತ ದ್ರವ ಒಸರುತ್ತದೆ. ಆಟಿ ತಿಂಗಳಲ್ಲಿ- ಆಷಾಡಮಾಸದಲ್ಲಿ- ತುಳುನಾಡಿನಲ್ಲಿ ಆಚರಿಸುವ ಆಟಿ ಅಮವಾಸ್ಯೆಯೆಂಬ ಕಹಿ ಮದ್ದು ಕುಡಿಯುವ ಆಚರಣೆಯಲ್ಲೂ ಇದೇ ಮರದ ಹಾಲನ್ನೇ ಮದ್ದಿಗೆ ಬೆರೆಸುವ ಪದ್ದತಿಯಿದೆ. ದೀಪಾವಳಿಯಲ್ಲಿ ಈ ಮರದ ಮೂರು ಕವಲುಗಳುಳ್ಳ ಎರಡು ಗೆಲ್ಲುಗಳು ಬೇಕೇ ಬೇಕು.  ಇದನ್ನು ಕೂಡಾ ವಾರಕ್ಕಿಂತ ಮೊದಲೇ ಕಾಡು-ಕುಮೇರಿಯಲೆಲ್ಲ ಅಲೆದಾಡಿ ಗುರುತಿಟ್ಟುಕೊಳ್ಳುತ್ತಿದ್ದೆವು. ಅದರ ತೊಗಟೆಯನ್ನು ಪೂರ್ತಿ ಕೆತ್ತಿದರೆ ಗಂಡು. ಉದ್ದಕ್ಕೆ ಸ್ವಲ್ಪ ಸ್ವಲ್ಪ ತೊಗಟೆ ಉಳಿಸಿದರೆ ಹೆಣ್ಣು. ಇನ್ನುಳಿದಂತೆ ಅಂಬಳೆಕಾಯಿ, ಲಂಬಾಸು , ಅಡಿಕೆಹಣ್ಣಿನ ಮಾಲೆಗಳನ್ನು ವಾರಕ್ಕೆ ಮೊದಲೇ ಸಿದ್ದಮಾಡಿಕೊಳ್ಳುತ್ತಿದ್ದೆವು..

ಉಗ್ರಸ್ತಂಭ- ಹಿರಣ್ಯಕಸಿಪನ ಅರಮನೆಯ ಕಂಬವಿದಂತೆ.
ದೀಪಾವಳಿಯೆಂಬುದು ಕೃಷಿಕರ ಹಬ್ಬ. ಗೋವುಗಳಿಗೂ ರೈತಾಪಿ ಜನರಿಗೂ ಭಾವನಾತ್ಮಕವಾದ ನೆಂಟಿದೆ.
ವರ್ಷವಿಡೀ ತನ್ನ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳಿಗೆ,ದನ-ಕರುಗಳಿಗೆ ಕೃತಜ್ಞತೆಯನ್ನು ಸಲ್ಲಿಸುವ ದಿನ. ಇನ್ನೂ ಕೆಂಪಗೆ ತಿರುಗದ ಕಾಯಿ ಅಡಿಕೆಯನ್ನು ಮಧ್ಯದಲ್ಲಿ ಭಾಗ ಮಾಡಿ ಒಳಗಿನ ತಿರುಳನ್ನು ತೆಗೆದು ಅದಕ್ಕೆ ಎಣ್ಣೆ ಹಾಕಿ ಬತ್ತಿಯಿಟ್ಟರೆ ನಮ್ಮ ಹಣತೆಗಳು ಸಿದ್ದಗೊಳ್ಳುತ್ತಿದ್ದವು. ಅದನ್ನು ಮನೆಯ ಸುತ್ತಲೂ ಹಚ್ಚಿಡುತ್ತಿದ್ದೆವು.
 ನನ್ನ ಅಜ್ಜಿ ದನಗಳಿಗೆ ಬೆಳಕು ತೋರಿಸುವ ದಿನಚಿತ್ರಣ ನನಗೀಗಲೂ ನೆನಪಿದೆ.

ಅಜ್ಜಿಯ ಎಡಗೈಯಲ್ಲಿ ಒಂದು ಬುಟ್ಟಿ. ಅದರೊಳಗೆ ಬಾಳೆಹಣ್ಣು, ಅವಲಕ್ಕಿ ಮತ್ತು.ಅಪ್ಪ [ಗುಳಿಹಿಟ್ಟು] ಬಲಗೈಯಲ್ಲಿ ಊರುಗೋಲು.. ನಮ್ಮಕೈಯ್ಯಲಿ ದೊಡ್ಡ ದೊಂದಿ ಮತ್ತು ದನಗಳ ಕೊರಳಿಗೆ ಹಾಕುವ ಹೂವಿನ ಹಾರಗಳು. ಆ ಹೂಗಳನ್ನು ನಾವು ಸಂಗ್ರಹಿಸುವ ಪರಿಯನ್ನು ಹೇಳಹೊರಟರೆ ಅದೇ ಒಂದು ದೊಡ್ಡ ಪ್ರಬಂಧವಾದೀತು. ಇದರೊಂದಿಗೆ ಹಟ್ಟಿಗೆ ನಮ್ಮ ಪಯಣ. ಅಲ್ಲಿಗೆ ಹೋದ ಒಡನೆಯೇ ನಮ್ಮವ್ವ [ಅಜ್ಜಿಯನ್ನು ನಾವೆಲ್ಲಾ ಕರೆಯೋದು ಅವ್ವಾ ಅಂತ] ಬುಟ್ಟಿಯನ್ನು ಬೈಪಾಣೆ ಮೇಲಿರಿಸಿ ನಮ್ಮ ಕೈಯ್ಯಿಂದ ದೊಂದಿಯನ್ನು ತಗೊಂಡು ಸೊಂಟವನ್ನು ನೆಟ್ಟಗೆ ಮಾಡಿಕೊಂಡು ಎಲ್ಲಾ ದನಗಳ ಮುಖವನ್ನೂ ಆ ಬೆಳಕಲ್ಲಿ ನೋಡಿ..ವರ್ಷಕ್ಕೊಂದು ಹಬ್ಬ ಬೆಳಕು ನೋಡಿ ಮಕ್ಕಳೇಅಂತ ಗಟ್ಟಿಯಾಗಿ ಹೇಳುತ್ತಿದ್ದರು. ಅನಂತರ ಎಲ್ಲಾ ದನಗಳ ಕುತ್ತಿಗೆಗೂ ನನ್ನ ಕೈಯ್ಯಲ್ಲಿ ಹಾರ ಹಾಕಿಸುತ್ತಿದ್ದರು. ನನ್ನ ಕೈಯ್ಯಲ್ಲೆ ಯಾಕೆ ಗೊತ್ತಾ? ನಾನು ಅಜ್ಜಿ ಸಾಕಿದ ಪುಳ್ಳಿ. ಅಜ್ಜಿ ಸಾಕಿದ ಪುಳ್ಳಿ ಬೊಜ್ಜಕ್ಕೂ ಬಾರಅಂತ ನಮ್ಮಕಡೆ ಲೇವಡಿ ಮಾಡಿಕೊಂಡು ಆಡುವುದುಂಟು. ನಾನು ಹಾಗೇನೂ ಇಲ್ಲ ಬಿಡಿ..ಸಖತ್ ಬುದ್ಧಿವಂತಳು. ಇದು ನಿಮಗೂ ಗೊತ್ತಲ್ಲ!


 ಅಜ್ಜಿ ಹಟ್ಟಿಯಲ್ಲಿ ನಿಂತು ಹೇಳುತ್ತಿದ್ದ ಹಾಡೊಂದು ಮೂರು ದಶಕಗಳು ಕಳೆದರೂ ಇನ್ನೂ ನನಗೆ ನೆನಪಿದೆ...

ಹುಲ್ಲು ಕಂಡಲ್ಲಿ ಹುಲ್ಲು ಮೇದ್ಕೊಂಡು
ನೀರ್ ಕಂಡಲ್ಲಿ ನೀರ್ ಕುಡ್ಕೊಂಡು
ಕಾಲಲ್ಲಿ ಹೋಗಿ ಕೋಲಲ್ಲಿ ಬನ್ನಿ
ಬಾಳ್ ಮಗನೇ..ಬಾಳ್

ಇದಾದ ಮೇಲೆ ಗೊಬ್ಬರಗುಂಡಿಗೆ, ಗದ್ದೆಗೆ ಎಡೆ ಇಟ್ಟು ಕೊಲ್ತಿರಿ ಚುಚ್ಚಿ ಕೈಮುಗಿಯಬೇಕು..ಅನಂತರದಲ್ಲಿ
ಅಂಗಾರ ಕಲ್ಲಿನ ಹತ್ತಿರದಲ್ಲಿ ಹಾಕಿರುವ ಹಣ್ಣಡಿಕೆ, ಹೂ,ಪಿಂಗಾರಗಳಿಂದ ಶೃಂಗರಿಸಿದ ಬಲೀಂದ್ರ ಕಂಬದಲ್ಲಿ ಬಲೀಂದ್ರನನ್ನು ಕರೆಯುವ ಬಲೀಂದ್ರ ಪೂಜೆ. ದೀಪವಿಟ್ಟು, ಕಾಯಿ ಒಡೆದು ಪೂಜೆ ಸಲ್ಲಿಸಿ ಎಡೆಯಿಟ್ಟು  ಕೈಮುಗಿಯುತ್ತಾ ;’ ಬಲಿಯೇಂದ್ರಾ ಬಾ ಕೂ .....ಕೂ..ಕೂ..’ ಎಂದು ಕೂಗುತ್ತಾ ಬೆನ್ನು ಹಾಕಿ ಹಿಂತಿರುಗಿ ನಿಲ್ಲುವುದು
ಆಮೇಲೆ ಮನೆಗೆ ಬಂದು ಎಲ್ಲರೂ ಒಟ್ಟಾಗಿ ಕೂತು ಊಟ ಮಾಡುವುದು..ಇದೆಲ್ಲಾ ಇವತ್ತಿಗೂ ನಡೆದುಕೊಂಡು ಬರುತ್ತಿದೆ..

ನನ್ನ ತವರು ಮನೆಯಲ್ಲಿ ಹಟ್ಟಿ ತುಂಬಾ ನಾಟಿ ದನಗಳಿವೆ..ಆದರೆ ಗದ್ದೆ ಅಡಿಕೆತೋಟವಾಗಿದೆ..ಗೊಬ್ಬರ ಗುಂಡಿಯಿಲ್ಲ. ಇನ್ನು ದನಗಳನ್ನೂ ಮಾರಿಬಿಟ್ಟರೆ ದೀಪಾವಳಿ ಹಬ್ಬವೆಂಬುದು ನಗರಗಳಲ್ಲಾಗುತ್ತಿದ್ದಂತೆಯೇ ರೈತಾಪಿ ಜನರಲ್ಲಿ ಕೂಡಾ ಹೊಸ ವ್ಯಾಖ್ಯೆಯನ್ನು ಪಡೆದುಕೊಳ್ಳಬಹುದು..


ರಕ್ತಕೊಳ- ಹಿರಣ್ಯಕಶಿಪನನ್ನು ಕೊಂದಾದ ಮೇಲೆ ನರಸಿಂಹನು ಕೈತೊಳೆದುಕೊಂಡ ಕೊಳ.
ಈ ನೀರನ್ನು ತಲೆಗೆ ಪ್ರೋಕ್ಷಿಸಿಕೊಳ್ಳುವುದಿಲ್ಲ.
ಬಲಿ ಚಕ್ರವರ್ತಿಯ ಅಪ್ಪ ವಿರೋಚನ. ವಿರೋಚನನ ಅಪ್ಪ ಪ್ರಹ್ಲಾದ. ಪ್ರಹ್ಲಾದನನ ಅಪ್ಪ. ಹಿರಣ್ಯಕಶಿಪ್.  ಹಿರಣ್ಯಕಶಿಪ್ ನನ್ನು ಕೊಂದವನೇ ಅವನ ಮರಿಮಗನಾದ ಬಲಿಯ ಬದುಕನ್ನೂ ಬಲಿ ತೆಗೆದುಕೊಳ್ಳುತ್ತಾನೆ. ಅವನೇ ವಿಷ್ಣು. ಅಂದರೆ ಇದು ಶೈವ ಮತ್ತು ವೈಷ್ಣವ ಪಂಥಗಳ ನಡುವಿನ ತಿಕ್ಕಾಟವಾಗಿರಬಹುದೇ? ಗೊತ್ತಿಲ್ಲ. ಆದರೆ ತುಳುನಾಡಿನಲ್ಲಿ ಬಲಿಯೇಂದ್ರನನ್ನು ಬರಮಾಡಿಕೊಳ್ಳುತ್ತಿರುವ ಆಚರಣೆಗಳೆಲ್ಲವೂ ಮೂಲತಃ ನಿಸರ್ಗಕ್ಕೆ ಹತ್ತಿರವಾದ ಪರಿಶಿಷ್ಟ ಆಚರಣೆಗಳೇ ಆಗಿವೆ.

ಹಿರಣ್ಯಕಶಿಪ್ ರಾಜ್ಯಭಾರ ಮಾಡಿದನೆಂದು ನಂಬಲಾದ ಜಾಗವೊಂದು ಈ ಭೂಮಿಯ ಮೇಲಿದೆಯೆಂದು ನನಗೆ ಗೊತ್ತೇ ಇರಲಿಲ್ಲ. ಆದರೆ ಮೂರು ವರ್ಷಗಳ ಹಿಂದೆ ಅಂದ್ರಪ್ರದೇಶದ ನಲ್ಲಮಲ ಕಾಡಿಗೆ ಚಾರಣಕ್ಕೆಂದು ಹೋದಾಗ ದಂತಕಥೆಯಾಗಿರುವ ಆ  ಜಾಗಗಳನ್ನು ನೋಡಿ ಬಂದೆ. ಆಗ ನನಗೆ ಅನ್ನಿಸಿದ್ದು, ಹಿರಣ್ಯಕಶಿಪು ಅಂಧ್ರದ ನಲ್ಲಮಲ ಅರಣ್ಯಪ್ರದೇಶದಲ್ಲಿ ರಾಜ್ಯಭಾರ ಮಾಡಿದ್ದರೆ ಅವನ ಮರಿಮಗ ಬಲಿ ಚಕ್ರವರ್ತಿಯೂ ಇಲ್ಲೇ ರಾಜ್ಯಭಾರ ಮಾಡಿರಬೇಕು. ಅವನನ್ನು ವಾಮನ ಪಾತಾಳಲೋಕಕ್ಕೆ ತಳ್ಳಿದ ಎನ್ನುತ್ತದೆ ಪುರಾಣ. ಅಂದರೆ ಕೊಂದಿರಬಹುದೇ? ಹಾಗಿಲ್ಲದೆ ಅಲ್ಲಿಂದ ಓಡಿಸಿದ್ದರೆ ಅವನು ಓಡಿ ಹೋದ ಜಾಗ ಪಾತಾಳಲೋಕವೆಂದು ಕರೆಯುತ್ತಿದ್ದ ಇಂದಿನ ಕೇರಳವಾಗಿರಬಹುದೇ? ನಲ್ಲಮಲ ಅರಣ್ಯಕ್ಕಿಂತಲೂ ದಟ್ಟವಾದ ಸೈಲೆಂಟ್ ವ್ಯಾಲಿಯಲ್ಲಿ ಆತ ಮತ್ತೆ ತನ್ನ ರಾಜ್ಯ ಕಟ್ಟಿರಬಹುದೇ? ಇಂದಿಗೂ ಕರಾವಳಿಯ ಜನ ಬಲಿಯೇಂದ್ರನನ್ನು ಬಲು ಆದರದಿಂದ ಬರಮಾಡಿಕೊಳ್ಳುತ್ತಾರೆ. ದೂರದ ನಲ್ಲಮಲದ ಅಸುರ ರಾಜ ಇಲ್ಲಿ ಹೇಗೆ ವಂದಿತನಾದ?

ಇಂತಹದೊಂದು ಪ್ರಶ್ನೆಯನ್ನು ನಾನು ನನ್ನ ಪೇಸ್ಬುಕ್ ನಲ್ಲಿ ಕೇಳಿದ್ದೆ. ಅದಕ್ಕೆ ನನ್ನ ಪತ್ರಕರ್ತ ಮಿತ್ರರೊಬ್ಬರು ಹೇಳಿದ್ದರು; ಪಾತಾಳಕ್ಕೆ ತಳ್ಳಿದ್ದು ಅಂದರೆ ದಕ್ಷೀಣದಂಚಿಗೆ ಓಡಿಸಿದ್ದು. ಬಲಿ ಮತ್ತೆ ಕೇರಳದಲ್ಲಿ ರಾಜ್ಯ ಕಟ್ಟುತ್ತಾನೆ. ಅದನ್ನು ಅಂಧ್ರ ತನಕ ವಿಸ್ತರಿಸುತ್ತಾನೆ. ಮತ್ತೆ ಬಲಾಢ್ಯನಾದ ಬಲಿಯನ್ನು ತಿರುಮಲ ಬೆಟ್ಟದಲ್ಲಿ ಮೋಸದಿಂದ ಹತ್ಯ ಮಾಡಲಾಯ್ತು. ಅಲ್ಲಿ ವೆಂಕಟೇಶನ ಸನ್ನಿಧಿಯಲ್ಲಿ ಆತನ ಸಮಾಧಿ ಇದೆಯಂತೆ. ಆತನಿಂದ ಬದುಕು ಕಟ್ಟಿಕೊಂಡಿದ್ದೇವೆ ಎಂದು ನಂಬಲಾದ ಭಕ್ತರು ಇಂದಿಗೂ ಅಲ್ಲಿಗೆ ತೆರಳಿ ತಮ್ಮ ಕಾಣಿಕೆಗಳನ್ನು ಅರ್ಪಿಸುತ್ತಾರಂತೆ. ಅವರಲ್ಲಿ ಕೇರಳಿಗರೇ ಹೆಚ್ಚಂತೆ. ಹಾಗೆ ಭಕ್ತರಿಂದ ಕಾಣಿಕೆಗಳನ್ನು ಪಡೆಯುತ್ತಿದ್ದ ಬಲಿ ಚಕ್ರವರ್ತಿಯ ಸಮಾಧಿ ಸ್ಥಳ ವೈಷ್ಣವರ ಆಕ್ರಮಕ್ಕೊಳಗಾಗಿ ನಂತರ ದೇವಾಲಯವಾಗಿ ಪರಿವರ್ತನೆಯಾಯಿತಂತೆ
ಇದು ದಂತಕಥೆಯೋ ಐತಿಹ್ಯವೋ ನನಗೆ ಗೊತ್ತಿಲ್ಲ. ನಾನು ಇದುವರೆಗೂ ತಿರುಪತಿಗೆ ಹೋಗಿಲ್ಲ. ಆ ಏಳು ಬೆಟ್ಟವನ್ನು ಒಮ್ಮೆ ಕಾಲ್ನಡಿಗೆಯಲ್ಲಿ ಹತ್ತಬೇಕೆಂದು ಆಸೆಯಿತ್ತು. ಇದುವರೆಗೂ ಆಗಿಲ್ಲ. ಇನ್ನು ಮುಂದೆ ಆಗುತ್ತೋ ಗೊತ್ತಿಲ್ಲ. ಒಂದು ವೇಳೆ ಹೋದರೆ  ಬಿನ್ನ ನೋಟವನ್ನು ಹೊತ್ತು ಬೆಟ್ಟವೇರುತ್ತೇನೆ.

0 comments: