Friday, February 16, 2018

ಆ ನಗುವಿನಲ್ಲಿತ್ತು ಪ್ರಶ್ನಿಸುವ ಸೊಕ್ಕು !




ಮಹಾಭಾರತದಲ್ಲಿ ಒಂದು ಪ್ರಸಂಗ ಬರುತ್ತದೆ;
ಪಾಂಡವರು ಖಾಂಡವವನವನ್ನು ದಹಿಸಿ ಇಂದ್ರಪ್ರಸ್ಥವೆಂಬ ಸುಂದರನಗರವನ್ನು ಕಟ್ಟುತ್ತಾರೆ. ದಾನವಶಿಲ್ಪಿಯಾದ ಮಯ ವರಿಗಾಗಿ ವಿಶಿಷ್ಟವಾದ ಭವ್ಯ ಅರಮನೆಯೊಂದನ್ನು ಕಟ್ಟಿಕೊಡುತ್ತಾನೆ. ಅದನ್ನು ನೋಡುವ ಕುತೂಹಲದಿಂದ ಕೌರವ ಪರಿವಾರ ಹಸ್ತಿನಾಪುರದಿಂದ  ಇಂದ್ರಪ್ರಸ್ಥಕ್ಕೆ ಬರುತ್ತಾರೆ. ಅರಮನೆಯ ಸೌಂದರ್ಯವನ್ನು ವೀಕ್ಷಿಸುತ್ತಾ ಬಂದ ದುರ್ಯೋಧನ ಒಂದೆಡೆ ನೀರಿನ ಕೊಳವಿದೆಯೆಂದು ಭಾವಿಸಿ ತನ್ನ ಪಂಚೆಯನ್ನು ಮೇಲೆತ್ತಿಕೊಳ್ಳುತ್ತಾನೆ. ಅದನ್ನು  ನೋಡಿದ ದ್ರೌಪಧಿ ಕಿಸಕ್ಕನೆ ನಕ್ಕುಬಿಡುತ್ತಾಳೆ. ಈ ನಗುವೇ ಕುರುಕ್ಷೇತ್ರ ಮಹಾಸಂಗ್ರಾಮಕ್ಕೆ ಬೀಜವಾಯ್ತು ಎಂಬು ಪುರಾಣ ಪ್ರತಿತಿ.
ಮೊನ್ನೆ, ಪೆಭ್ರವರಿ ೭ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರು, ಭಾರತಿಯರ ವಿಶಿಷ್ಟ ಗುರುತಿನ ಚೀಟಿ ಆಧಾರ್ ಎಂಬುದು ೧೯೯೮ರಲ್ಲಿ ಗೃಹಮಂತ್ರಿಯಾಗಿದ್ದ   ಲಾಲ್ ಕೃಷ್ಣ ಅಡ್ವಾಣಿಯವರ ಕನಸಾಗಿತ್ತು. ಅವರು ಇಪ್ಪತ್ತು ವರ್ಷದ ಹಿಂದೆ ಹೇಳಿದ ಆಧಾರ್ ಇವತ್ತು ಇಲ್ಲಿದೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಾಗ ಕಾಂಗ್ರೇಸ್ ನ ವಕ್ತಾರಳಾಗಿರುವ ರೇಣುಕಾ ಚೌದರಿ ಸದನಕ್ಕೆ ಸದನವೇ ಪ್ರತಿಧ್ವನಿಸುವಂತೆ ಗಟ್ಟಿಯಾಗಿ ಅಲೆಯಲೆಯಾಗಿ ನಕ್ಕರು.

ಸಭಾಧ್ಯಕ್ಷರಾಗಿದ್ದ ಉಪಪ್ರಧಾನಿ ವೆಂಕಯ್ಯನಾಯ್ಡುರವರು ತಕ್ಷಣ ’ ’ನಿಮಗೆ ಆರೋಗ್ಯದ ಸಮಸ್ಯೆಯಿದ್ದರೆ ವೈದ್ಯರನ್ನು ಕಾಣಿ’ ಎಂದು ಸಿಡುಕಿದರು. ಆಗ ಮೋದಿಯವರು ’ರೇಣುಕಾಜಿಯವರನ್ನು ತಡೆಯಬೇಡಿ ಸಭಾಧ್ಯಕ್ಷರೆ. ಬಹಳ ದಿನಗಳ ನಂತರ ರಾಮಾಯಣ ಧಾರಾವಾಹಿಯಲ್ಲಿ ಕೇಳಿದಂತ ನಗುವನ್ನು ಮತ್ತೆ ಕೇಳಿ ಆನಂದವಾಗುತ್ತಿದೆ’ ಎಂದರು. ಮೋದಿಯವರು ಕೊಟ್ಟ ವ್ಯಂಗ್ಯಲೇಪನದ ಹಗುರ ಮಾತುಗಳು ಈಗ ವ್ಯಾಪಕ ಚರ್ಚೆಯಾಗುತ್ತಿದೆ. ಕೆಲವರು ವಾದಿಸುವಂತೆ ಮೋದಿಯವರದ್ದು ತಮಾಶೆಯ ಪ್ರತಿಕ್ರಿಯೆಯೆಂದೇ ಅಂದುಕೊಳ್ಳೋಣ. ಆದ್ರೆ ಮೇಜುಗುದ್ದಿ ಉಡಾಪೆಯಿಂದ ನಕ್ಕ ಸಂಸತ್ ಸದಸ್ಯರ ನಡವಳಿಕೆಯ ಬಗ್ಗೆ ಯಾಕೆ ಯಾರೂ ಮಾತಾಡುತ್ತಿಲ್ಲ? ಬಹುತೇಕ ಇಡೀ ಸದನ ಹಾಸ್ಯಗೋಷ್ಠಿಯಂತಿತ್ತು.  ಹೆಣ್ಣಿನ ಘನತೆಯ ಬದುಕಿನ ಬಗ್ಗೆ ಮಾತಾಡುವ ಪಕ್ಷ ಅವಳ ಮನೋಸ್ಥೆರ್ಯವನ್ನು ಕುಗ್ಗಿಸುವ ರೀತಿಯಲ್ಲಿ ಅಂದು ವರ್ತಿಸಿತ್ತು. ಇದರ ಬಗ್ಗೆ ಆಕ್ಷೇಪ ಯಾಕಿಲ್ಲ?

ರೇಣುಕಾ ಚೌದರಿ ಹಾಗೆ ಗಹಗಹಿಸಿ ನಕ್ಕಿದ್ದು ಸದನದ ಗೌರವಕ್ಕೆ ತಕ್ಕುದಾಗಿರಲಿಲ್ಲ, ನಿಜ.  ಅದನ್ನೇ ಸಭಾಧ್ಯಕ್ಷರು ಸೌಮ್ಯ ರೀತಿಯಲ್ಲಿ ಅಕ್ಷೇಪಿಸಬಹುದಿತ್ತು. ಅವರ ಮಾತಿನ ಧಾಟಿ ಚೌದರಿಯವರ ಮಾನಸಿಕ ಆರೋಗ್ಯವನ್ನೇ ಪ್ರಶ್ನಿಸುವಂತಿತ್ತು. ಅವರ ಪ್ರತಿಕ್ರಿಯೆ ಸಭಾಧ್ಯಕ್ಷರ ಸ್ಥಾನಘನತೆಗೆ ಹೊಂದುವಂತದ್ದಾಗಿರಲಿಲ್ಲ. ಎಲ್ಲರನ್ನೂ ಸಮತೂಗಿಸಿಕೊಂಡು ಹೋಗಬೇಕಾದ ಸ್ಥಾನದಲ್ಲಿದ್ದ ವ್ಯಕ್ತಿ ಆಡುವ ಮಾತಾಗಿರಲಿಲ್ಲ ಅದು?  ಅದರ ಬಗ್ಗೆ ಚರ್ಚೆಯಾಗಬೇಕಿತ್ತು, ಅದಾಗಲಿಲ್ಲ.
 ಅಂದು ಸಂಸತ್ ಅವಮಾನಿಸಿದ್ದು ಸುದೀರ್ಘ ಮೂವತ್ತನಾಲ್ಕು ವರ್ಷ ರಾಜಕೀಯ ಅನುಭವವುಳ್ಳ ಪ್ರತಿಪಕ್ಷದ ಒಬ್ಬ ಮಹಿಳಾರಾಜಕಾರಣಿಯನ್ನು, ಇಂತಹ ಅನುಭವಿಯ ಸ್ಪೋಟಗೊಂಡ ನಗುವಿಗೆ ಕಾರಣವೇನಿರಬಹುದು ಎಂದು ತಿಳಿದುಕೊಳ್ಳುವ ವ್ಯವಧಾನ ಅಲ್ಲಿರುವ ಒಬ್ಬರ ಮನಸಿಗೂ ಬರಲಿಲ್ಲ ಯಾಕೆ?

ರೇಣುಕಾ ಚೌದರಿ.

ಮಹಿಳೆಯ ಹೆಸರು ನನ್ನ ನೆನಪಿನ ಕೋಶದಲ್ಲಿ ದಾಖಲಾದದ್ದು ಹಲವಾರು ವರ್ಷಗಳ ಹಿಂದೆ. ಬಹುಶಃ ಅದು ನನ್ನ ಕಾಲೇಜು ದಿನಗಳು. ಪರಿಸರ ಮತ್ತು ಕಥೆ ಕಾದಂಬರಿಗಳ ಮೂಲಕ ಪುರುಷ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಕಾಲ. ಆಗ ಆಂದ್ರಪ್ರದೇಶದ ರೇಣುಕಾ ಚೌದರಿಯೆಂಬ ಮಹಿಳೆ ನಮಗೆ ಗಂಡಸರ ಅಗತ್ಯ ಇಲ್ಲ..... ದೇಶದಾದ್ಯಂತ ವೀರ್ಯ ಬ್ಯಾಂಕ್ ಗಳನ್ನು ಸ್ಥಾಪಿಸಬೇಕು”. ಎಂಬ ಹೇಳಿಕೆ ನೀಡಿಬಿಟ್ಟರು. ಸಂದರ್ಭ ನೆನಪಿಲ್ಲ.

೨೦೦೯ರಲ್ಲಿ ಮಂಗಳೂರಿನ ಪಬ್ ದಾಳಿಗೆ ಸಂಬಂಧಪಟ್ಟಂತೆ ಅವರು ’ಮಂಗಳೂರು ತಾಲಿಬಾನ್ ಗೊಳ್ಳುತ್ತಿದೆ. ಎಂಬ ಹೇಳಿಕೆ ನೀಡಿದಾಗ ಮಂಗಳೂರು ಮೇಯರ್ ಆಕೆಗೆ ಶೋಕಾಸ್ ನೋಟೀಸ್ ಜಾರಿ ಮಾಡಿದ್ದರು. ಆಗ ಅವರು ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಖಾತೆಯ ರಾಜ್ಯಸಚಿವರಾಗಿದ್ದರು.ಪಬ್ ಧಾಳಿಗೆ ಸಂಬಂಧಪತ್ತಂತೆ ರಾಷ್ಟ್ರೀಯ ಮಹಿಳಾ ಆಯೋಗದ ವರದಿ ತಮಗೆ ತೃಪ್ತಿ ತಂದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದಾಗನನ್ನ ವರದಿಯ ಬಗ್ಗೆ ಅಸಮಧಾನ ತೋರಲು ಈಕೆ ಯಾರು?’ ಎಂದು ಪ್ರಶ್ನಿಸಿದ ರಾಷ್ಟ್ರೀಯ ಆಯೋಗದ ಸದಸ್ಯೆ ನಿರ್ಮಲಾ ವೆಂಕಟೇಶರಿಗೆ ಶೋಕಾಶ್ ನೋಟಿಸ್ ಜಾರಿ ಮಾಡಿದರು. ಮಾತ್ರವಲ್ಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಕಿರಣ್ ಚಡ್ಡಾರನ್ನು ಮಂಗಳೂರಿಗೆ ಕಳುಹಿಸಿ ಪ್ರತ್ಯೇಕ ವರದಿ ತರಿಸಿಕೊಂಡರು. ’ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಪಬ್ ಪರ ಚಳುವಳಿ ನಡೆಸಬೇಕಾದೀತುಎಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.

 ಕನ್ನಡದ ಹಿರಿಯ ಪತ್ರಕರ್ತರೊಬ್ಬರೊಬ್ಬರು ರೇಣುಕಾ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದರು.; ರೇಣುಕಾ ಸಕ್ರೀಯ ರಾಜಕಾರಣಕ್ಕೆ ಬರುವ ಮೊದಲು ಆತ್ಮರಕ್ಷಣೆಗಾಗಿ ತಮ್ಮ ಬಳಿ ಸದಾ ಪಿಸ್ತೂಲ್ ಇಟ್ಟುಕೊಂಡಿರುತ್ತಿದ್ದರಂತೆ. ಅವರ ದಾಢಸಿತನವನ್ನು ಮೆಚ್ಚಿಯೇ ತೆಲುಗು ದೇಶಂನ ಸಂಸ್ಥಾಪಕ ಎನ್ ಟಿ ರಾಮರಾವ್ ತಮ್ಮ ಪಕ್ಷಕ್ಕೆ ಅವರನ್ನು ಬರಮಾಡಿಕೊಂಡರಂತೆ.

ರೇಣುಕಾ ೧೯೫೪ರ ಅಗಸ್ಟ್೧೩ರಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಹುಟ್ಟಿದರು. ತಮ್ಮ ೩೦ನೇ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿದರು. ಈಗ ಅವರಿಗೆ ೬೪ ವರ್ಷ. ಅಂದರೆ ಅವರಿಗೆ ೩೪ ವರ್ಷಗಳ ಸಕ್ರಿಯ ರಾಜಕೀಯ ಅನುಭವವಿದೆ. ಅನುಭವ ಎಂತವರನ್ನೂ ಮೆತ್ತಗಾಗಿಸುತ್ತದೆ. ಆದರೆ ರೇಣುಕಾಳ ವಿಚಾರದಲ್ಲಿ ಅದು ಇನ್ನಷ್ಟು ಪ್ರಖರಗೊಂಡಿದೆ.

ಕೆಲವು ವರ್ಷಗಳ ಹಿಂದೆ ಆಕೆ ಕೊಟ್ಟ ಹೇಳಿಕೆಯನ್ನೇ ನೋಡಿ, ’ಮಹಿಳೆಯರೇ ನಿಮ್ಮ ಗಂಡಂದಿರನ್ನು ನಂಬಬೇಡಿ, ಸದಾ ನಿಮ್ಮ ಬಳಿ ಕಾಂಡಮ್ ಗಳನ್ನು ಇಟ್ಟುಕೊಂಡಿರಿಈಕೆಯನ್ನು ವಿರೋಧಿಸಲು ಪುರುಷ ಪ್ರಧಾನ ಸಮಾಜಕ್ಕೆ ಇಷ್ಟು ಸಾಕಲ್ಲವೇ?

ಆಕೆ ಕರ್ನಾಟಕಕ್ಕೆ ಇನ್ನೂ ಹತ್ತಿರದವರು. ಅವರು ಇಂಡಸ್ಟ್ರಿಯಲ್ ಸೈಕಾಲಾಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದದ್ದು ಬೆಂಗಳೂರು ವಿಶ್ವವಿದ್ಯಾಲಯದಿಂದ. ೧೯೮೪ರಲ್ಲಿ ತೆಲುಗುದೇಶಂ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದರೂ ೧೯೯೮ರಲ್ಲಿ ಪಕ್ಷ ತೊರೆದು ಕಾಂಗ್ರೇಸ್ ಸೇರಿದರು. ಮೂರು ಸಲ ರಾಜ್ಯಸಭಾ ಸದಸ್ಯರಾಗಿದ್ದರು. ಕುಪ್ಪಂ ಲೋಕಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ದೇವೇಗೌಡರ ಕ್ಯಾಬಿನೇಟ್ ನಲ್ಲಿ[೧೯೯೭-೯೮] ಸಚಿವೆಯೂ ಆಗಿದ್ದರು. ಪ್ರಸ್ತುತ ಅವರು ಕಾಂಗ್ರೆಸ್ ಪಕ್ಷದ ವಕ್ತಾರರಾಗಿದ್ದಾರೆ.

ಹೌದು ಆಕೆ ಪ್ರಖರ ಸ್ತ್ರೀವಾದಿ. ಮಹಿಳಾಪರವಾದ ನಿಲುವುಗಳನ್ನು ತೆಗೆದುಕೊಳ್ಳುವಾಗ ಆಕೆ ಕೇವಲ ಕಾಂಗ್ರ್ಏಸ್ ಪಕ್ಷದ ವಕ್ತಾರಳಾಗುವುದಿಲ್ಲ ಸಮಸ್ತ ಮಹಿಳಾ ಧ್ವನಿಯಾಗುತ್ತಾಳೆ. ’ನಮ್ಮವಳುಅನ್ನಿಸಿಕೊಂಡುಬಿಡುತ್ತಾಳೆ. ಅದು ಅವಳ ಹೆಚ್ಚುಗಾರಿಕೆ. ಮಹಿಳೆಯರ ಹಕ್ಕುಗಳಿಗೆ ಚ್ಯುತಿ ಬಂದಾಗಲೆಲ್ಲ ಅವಳು ಸಿಡಿದೇಳುತ್ತಾಳೆ. ಹಾಗಾಗಿ ಆಕೆ ಉಳಿದ ರಾಜಕಾರಣಿಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತಾಳೆ. ಜಯಲಲಿತ, ಉಮಾಭಾರತಿ, ಮಾಯಾವತಿ, ಶೋಭಾ ಕರಂದ್ಲಾಜೆ ರೂಪಿಸಿದ\ ರೂಪಿಸುವ ರಾಜಕೀಯ ತಂತ್ರಗಾರಿಕೆಗಳು ಈಕೆಯಲ್ಲಿಲ್ಲ. ರೇಣುಕಾಳದ್ದು ಏನಿದ್ದರೂ ನೇರಾನೇರ. ಇಲ್ಲವಾದರೆ ಮುತಾಲಿಕನಂತ ಧರ್ಮಾಂಧ ಬ್ರಹ್ಮಚಾರಿಗೆ ಪ್ರೇಮಿಗಳ ದಿನಾಚರಣೆಯಂದು ಗಿಪ್ಟ್ ಕಳುಹಿಸುತ್ತೇನೆಂದು ಹೇಳಲು ಸಾಧ್ಯವಾಗುತ್ತಿತ್ತೆ? ಅದು ರೇಣುಕಾಗೆ ಮಾತ್ರ ಸಾಧ್ಯ.
;
ಮೂರು ದಶಕಗಳ ಆಕೆಯ ರಾಜಕೀಯ ಅನುಭವದ ಹಿನ್ನೆಲೆಯಲ್ಲಿ ನೋಡುವುದಾದರೆ ಮೊನ್ನೆಯ ನಗುವಿನಲ್ಲಿತ್ತು ಪುರುಷಮದವನ್ನು ಪ್ರಶ್ನಿಸುವ ಸೊಕ್ಕು. ಆ ಸೊಕ್ಕನ್ನು ಕೆಲವರಿಗೆ, ಅಲ್ಲ ಹಲವರಿಗೆ ಅರಗಿಸಿಕೊಳ್ಳುವುದು ಕಷ್ಟ.





ರಾಮಾಯಣದ ಪ್ರಸ್ತಾಪ ಮಾಡಿದ ಮೋದಿಯವರನ್ನೂ ಸೇರಿಸಿ ಆ ನಗು ಶೂರ್ಪನಖಿಯದೆಂದು ಯಾರೂ ವಾಚ್ಯವಾಗಿ ಹೇಳಿಲ್ಲ. ಆದರೆ ಅದು ಆಕೆಯನ್ನೇ ಉದ್ದೇಶಿಸಿದ್ದು ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ ಅದು ಬಹಿರಂಗವಾಗಿ ಪ್ರಕಟವಾಗಿದ್ದು. ಕೇಂದ್ರ ಗೃಹಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜಿಜು ತಮ್ಮ ಪೇಸ್ಬುಕ್ ಪೇಜಿನಲ್ಲಿ ರೇಣುಕಾರನ್ನು ಶೂರ್ಪನಖಿಗೆ ಹೋಲಿಸಿ, ಅದರ ಜೊತೆಗೆ ಶೂರ್ಪನಖಿಯ ವಿಡಿಯೋ ಕ್ಲಿಪ್ಪಿಂಗ್ ಹಾಕಿದಾಗ. ರೇಣುಕಾ ಬಿಡುತ್ತಾರೆಯೇ? ಇದೀಗ  ಕಿರಣ್ ಗೆ ನೋಟೀಸ್ ಜಾರಿ ಮಾಡಿದ್ದು ಮಾತ್ರವಲ್ಲ, ರಾಜ್ಯಸಭೆಯಲ್ಲಿ ಹಕ್ಕುಚ್ಯುತಿ ನಿಲುವಳಿ ಮಂಡಿಸಿದ್ದಾರೆ.

ರೇಣುಕಾಳ ನಗು ಬುಗ್ಗೆ ಒಡೆದ ಕಾರಣ ಯಾವುದೋ ನಮಗೆ ಗೊತ್ತಿಲ್ಲ. ಆಮೇಲೆ ತಾನು ಯಾಕೆ ನಕ್ಕೆ ಎಂದು ಅವರು ಸಮಜಾಯಿಸಿ ಕೊಟ್ಟಿರಬಹುದು. ಆದ್ರೆ ಅದನ್ನು ನೋಡಿದಾಗ ನನ್ನಂತವರಿಗೆ ಹೊಳೆದದ್ದು. ಭಾರತಿಯರಿಗೆ ವಿಶಿಷ್ಟ ಗುರುತಿನ ಚೀಟಿಯನ್ನು ಕೊಡುವ ಯೋಜನೆಯನ್ನು ಮಾಡಿದ್ದು ಕಾಂಗ್ರೇಸ್ ನೇತೃತ್ವದ UPA ಸರಕಾರ. ಕಾಂಗ್ರೇಸ್ ಸರಕಾರ ತರಲೆತ್ನಿಸಿದ್ದ ಆ ಯೋಜನೆಯನ್ನು ಸ್ವತಃ ಮೋದಿಯವರೇ ವಿರೋದಿಸಿದ್ದರು. ನೆರೆಯ ಶತ್ರು ರಾಷ್ಟ್ರ ಇದರ ದುರುಪಯೋಗಪಡಿಸಿಕೊಳ್ಳಬಹುದೆಂಬ ಶಂಕೆ ವ್ಯಕ್ತಪಡಿಸಿದ್ದರು. ಆಗ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು.ಈಗ ಅದನ್ನು ತಮ್ಮ ಸಾಧನೆಯೆಂದು ಬಿಜೆಪಿ ಬಣ್ಣಿಸಿಕೊಂಡರೆ ಮೂರು ದಶಕಗಳ ರಾಜಕೀಯ ಅನುಭವವಿರುವ ರೇಣುಕಾ ಚೌದರಿಗೆ ನಗು ಉಕ್ಕಿಬಾರದೆ ಇನ್ನೇನಾದೀತು!

 ಇದಲ್ಲದೆ. ಕೇವಲ ಐನೂರು ರೂಪಾಯಿ ಕೊಟ್ಟರೆ ಯಾವ ವ್ಯಕ್ತಿಯ ಆಧಾರ ಮಾಹಿತಿಯನ್ನು ಕೂಡಾ ಪಡೆದುಕೊಳ್ಳಬಹುದು ಎಂಬುದನ್ನ್ನು ತಮ್ಮ ತನಿಖಾವರದಿಯ ಮೂಲಕ ಪ್ರಕಟಿಸಿದ ’ದಿ ಟ್ರಿಬ್ಯೂನ್’ ಪತ್ರಿಕೆಯ ವರದಿಗಾರ್ತಿ ರಚನ ಕೈರಾ ಮೇಲೆ ಎಪ್ ಐ ಆರ್ ದಾಖಲಿಸಿದ್ದು ನೆನಪಾಗಿರಲೂಬಹುದು, ಆಧಾರಕಾರ್ಡ್ ಹೊಂದಿಲ್ಲದ ಅದೆಷ್ಟೊ ಜನರಿಗೆ ವೈದಕೀಯ ಸೇವೆ. ಪಡಿತರ, ಪೆನ್ಷನ್, ಬ್ಯಾಂಕ್ ಅಕೌಂಟ್ ಸೇರಿದಂತೆ ಮೂಲಭೂತ ಸೌಲಭ್ಯಗಳು ದೊರಕದೆ ಪಾಡು ಪಡುತ್ತಿರುವುದನ್ನು ನೆನೆದು ನಗು ಬಂದಿರಬಹುದು. ರೇಣುಕಾ ಜೋರಾಗಿ ನಕ್ಕಿದ್ದಾರೆ, ನಮ್ಮಂತವರು ಮನಸ್ಸಿನಲ್ಲಿಯೇ ನಕ್ಕಿದ್ದೇವೆ. ಆ ಸದನದಲ್ಲಿದ್ದ ಉಮಾಭಾರತಿ ಬಾಯಿಗೆ ಕೈಯಿಟ್ಟು ನಗುತ್ತಿದ್ದರು. ನಿರ್ಮಲ ಸೀತರಾಮನ್ ಭಾವನೆಗಳಿಲ್ಲದೆ ಕಲ್ಲಿನಂತೆ ಕೂತಿದ್ದರು. ಭಾರತೀಯ ಜನತಾ ಪಾರ್ಟಿ ತಮ್ಮ ಮಹಿಳಾ ಸದಸ್ಯರಿಗೆ ಭಾವನೆಗಳನ್ನು ಅದುಮಿಟ್ಟುಕೊಂಡು ಬದುಕಿ ಎಂದು ಹೇಳುತ್ತಿದೆಯೇ? ಶೋಭಾ ಕರಂದ್ಲಾಜೆಯನ್ನು ನೋಡಿದರೆ ಹಾಗೆನಿಸುವುದಿಲ್ಲವಲ್ಲಾ!

ಗಂಡುದೃಷ್ಟಿಯಲ್ಲಿ ನೋಡಿದರೆ ರಾವಣನ ತಂಗಿ ಶೂರ್ಪನಖಿ ಎಂಬ ರಾಮಾಯಣದ ಪಾತ್ರವೊಂದು ಏನನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ತೀರಾ ಇತ್ತೀಚೆಗಿನ ಉದಾಹರಣೆಯನ್ನು ಕೊಡುವುದಾದರೆ ’ಪದ್ಮಾವತಿ’ ಸಿನೇಮಾದ ಬಿಡುಗಡೆ ಕುರಿತಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ಪದ್ಮಾವತಿ ಬಿಡುಗಡೆಗೆ ಯಾವುದೇ ಅಡ್ಡಿ ಇಲ್ಲ ಎಂದು ಹೇಳಿದಾಗ ಅದೇ ರಾಜ್ಯದ  ಬಿಜೆಪಿ ಮುಖಂಡರಾದ ಸೂರಜ್ ಪಾಲ್ ಮುಖ್ಯಮಂತ್ರಿಯನ್ನೇ ಬೆದರಿಸುವ ಧಾಟಿಯಲ್ಲಿ ಹೇಳುತ್ತಾರೆ; ’ಶೂರ್ಪಮಖಿ ರೀತಿಯ ಕೆಟ್ಟ ಉದ್ದೇಶಗಳನ್ನು ಇಟ್ಟುಕೊಂಡ ಕೆಲವು ಮಹಿಳೆಯರಿದ್ದಾರೆ. ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸಿ ಆಕೆಗೆ ಬುದ್ದಿ ಕಲಿಸಿದ್ದ. ಮಮತಾ ಬ್ಯಾನರ್ಜಿಯವರು ಇದನ್ನು ಮರೆಯಬಾರದು’

’ಬುದ್ದಿ ಕಲಿಸುವುದು ಅಂದರೇನು?


 ನನ್ನ ಬಾಲ್ಯದಲ್ಲಿ ನಮ್ಮಜ್ಜಿ ಹೇಳುತ್ತಿದ್ದರು; ನೆಲ ಅದುರುವಂತೆ ಹೆಣ್ಮಕ್ಕಳು ನಡೆಯಬಾರದು, ಅವರ ನಗು ಹಿತ್ತಲಿಗೆ ಕೇಳಿಸಬಾರದು. ಗಂಡಸರ ಎದುರು ಕಾಲು ಮೇಲೆ ಕಾಲು ಹಾಕಿ ಕೂತುಕೊಳ್ಳಬಾರದು,ಅವರೆದುರು ತಲೆಯೆತ್ತಿ ನಿಲ್ಲಬಾರದು. ಅವರಿಗೆ ಎದುರುತ್ತರ ಕೊಡಬಾರದು

ಆದರೆ ಅದನ್ನೆಲಾ ನಾವು ದಿಕ್ಕರಿಸಿ ನಿಂತವರೇ. ಈಗ ನಮ್ಮಜ್ಜಿಯ ಸ್ಥಾನದಲ್ಲಿ ಈ ಬಿಜೆಪಿಯ ಮುಖಂಡರು ನಿಂತಿದ್ದಾರೆ!
ಯಾಕೆ ಗಂಡಸರು ಹೆಣ್ಣಿನ ನಗೆಯನ್ನು. ಆಕೆಯ ಸ್ವಾಭಿಮಾನದ ನಿಲುವನ್ನು, ಆಕೆಯ ಜೀವನಪ್ರೀತಿಯನ್ನು ತಮ್ಮ ಅಪಮಾನ, ತಮ್ಮ ಸೋಲು ಎಂದು ಭಾವಿಸುತ್ತಾರೆ. ಅದು ಆಕೆಯ ಬೌದ್ಧಿಕ ಆಸ್ಮಿತೆಯೂ ಯಾಕಾಗಿರಬಾರದು?
ಯಾರಾದರೂ ಜೋರಾಗಿ ನಕ್ಕಾಗ, ಆ ನಗುವನ್ನು ಶೂರ್ಪನಖಿಯ ನಗೆಗೆ ಹೋಲಿಸಿದಾಗ ನನ್ನಲ್ಲಿ ಕೆಲವು ಪ್ರಶ್ನೆಗಳು ಮೂಡುವುದುಂಟು;

ಶೂರ್ಪನಖಿ ಯಾವಾಗ ಹಾಗೆ ನಕ್ಕಳು? ಯಾಕೆ ನಕ್ಕಳು? . ರಾಮಾಯಣವನ್ನು ಓದಿದದವರಿಗೆ ಗೊತ್ತಿದೆ; ಆಕೆ ರಾಮನನ್ನು ನೋಡಿ ಮೋಹಗೊಂಡವಳು. ಹಾಗಾಗಿ ಆಕೆ ಅವನನ್ನು ನೋಡಿ ಲಜ್ಜೆಯಿಂದ ಮುಗುಳ್ನಕ್ಕಿರಬಹುದು. ಕುತಂತ್ರಿ ರಾಮನಿಂದಾಗಿ ಲಕ್ಷ್ಮಣ ಆಕೆಯ ಮೊಲೆ,ಮೂಗುಗಳನ್ನು ಕೊಯ್ದು ವಿರೂಪಗೊಳಿಸುತ್ತಿರುವಾಗ ನೋವಿನಿಂದ ಆರ್ತನಾದ ಮಾಡಿರಬಹುದು. ಆದರೆ ಅಟ್ಟಹಾಸದ ನಗು? ಅಂಥ ನಗು ರಾಮಾಯಣದಲ್ಲಿ ಇದ್ದಂತಿಲ್ಲ. ಅಂದರೆ ಕಾಲಾಂತರದಲ್ಲಿ ಆಕೆಯ ಹೆಸರಿಗೆ ಆ ನಗುವನ್ನು ಆರೋಪಿಸಲಾಯ್ತು; ಹೇರಲಾಯ್ತು. ಯಾರು ಹೇರಿದರು? ಹೆಣ್ಣಿನ ಅಸ್ಮಿತೆಯನ್ನು ಸಹಿಸಲಾಗದ  ’ಪುರುಷ ಅಹಂ’ ಹುಟ್ಟು ಹಾಕಿದ್ದೇ ’ಶೂರ್ಪನಖಿ ನಗು’

ಹಿಡಿಬೆಯೂ ತನ್ನನ್ನು ಮದುವೆಯಾಗು ಎಂದು ಭೀಮನನ್ನು ಕೇಳಿದ್ದಳು; ಆತ ತನ್ನ ಆಪ್ತರ ಒಪ್ಪಿಗೆಯನ್ನು ಪಡೆದು ಅವಳನ್ನು ಮದುವೆಯಾಗಿದ್ದ. ಲೋಕ ಆ ದಾಂಪತ್ಯವನ್ನು ಒಪ್ಪಿಕೊಂಡಿತ್ತು. ಮಾತ್ರವಲ್ಲ .ಗಾಢಪ್ರೀತಿಯನ್ನು ’ಹಿಡಿಂಬೆ ಪ್ರೀತಿ’ ಎಂದೂ ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತದೆ.
ಇಲ್ಲಿ, ಹಿಡಿಂಬೆಯ ಪ್ರೀತಿ ಶ್ರೇಷ್ಟವಾದದ್ದು, ಶೂರ್ಪನಖಿಯ ಪ್ರೀತಿ ಕನಿಷ್ಟಮಟ್ಟದ್ದು ಎಂದು ಹೇಳಲು ಸಾಧ್ಯವೇ? ಪ್ರೀತಿ, ಪ್ರೀತಿ ಮಾತ್ರ. ಆದರೂ ಲೋಕದೃಷ್ಟಿಯಲ್ಲಿ ಶೂರ್ಪನಖಿಯ ಪ್ರೇಮ ಕೀಳು. ಹಿಡಿಂಬೆಯ ಪ್ರೀತಿ ಶ್ರೇಷ್ಟ!. ಒಂದು ರೀತಿಯಲ್ಲಿ ಈ ಎರಡು ಪಾತ್ರಗಳು ಎರಡು ಮಾಹಾಕಾವ್ಯಗಳ ನಡುವಿನ ಕಾಲದ ಅಂತರವನ್ನು ಕೂಡಾ ಹೇಳುತ್ತದೆ. ಎರಡು ಕಾಲಘಟ್ಟಗಳಲ್ಲಿ, ಎರಡು ಕವಿಗಳು ಕೆತ್ತಿದ, ಎರಡು ಸ್ತ್ರೀ ಪಾತ್ರಗಳು ಆ ಕಾಲದ ಸಮಾಜಿಕ ಮೌಲ್ಯಗಳನ್ನು ಕೂಡಾ ಹೇಳುತ್ತದೆ.

ಇಂದು ಈ ಕಾಲಘಟ್ಟದಲ್ಲಿ ನಿಂತು ಆ ಕಾಲದ ಹೆಣ್ಣುಗಳನ್ನು ಇಲ್ಲಿನ ಸ್ತ್ರೀಯರಿಗೆ ಹೋಲಿಸುವುದು ಎಷ್ಟು ಸರಿ?
ಈ ಲೇಖನವನ್ನು ಬರೆದು. ಈ ಹಿಂದೆಯೇ ನಿಗದಿಪಡಿಸಿದಂತೆ ಶೂರ್ಪನಖಿಯ ತವರುಭೂಮಿಯಾದ ಶ್ರೀಲಂಕಾಕ್ಕೆ ಹೋಗುತ್ತಿದ್ದೇನೆ. ಅಲ್ಲಿ ಎಲ್ಲಿಯಾದರೂ ಪುರಾಣ ಪ್ರತಿಮೆಯಾದ ದಿಟ್ಟ, ಸ್ವತಂತ್ರ ವ್ಯಕ್ತಿತ್ವದ ಸ್ವಾಭಿಮಾನಿ ಶೂರ್ಪನಖಿ ಮುಖಾಮುಖಿಯಾಗುತ್ತಾಳೋ ಅಂತ ಹುಡುಕಾಡುತ್ತೇನೆ. ಅವಳೇನಾದರೂ ಸಿಕ್ಕಿದರೆ ಅವಳನ್ನೇ ಕೇಳುತ್ತೇನೆ ’ಶೂರ್ಪನಖಿ ನಗು ಎಂದರೇನು?’


2 comments:

Unknown said...

If you know there was a Hindi serial Ramayana and Renuka Choudhuri was actor of Shurpanaka.... modi mention the same ...he recalled the same episode .... why you people connecting one thing to other always ...

Unknown said...

ಮೇಡಂ ತುಂಬಾ ಚೆನ್ನಾಗಿ ಬರೆದಿದ್ದೀರಾ.... ಅಭಿನಂದನೆಗಳು....