Friday, October 5, 2018

ಅಂತಃಪುರದಲ್ಲಿ ಅತ್ಯಾಚಾರ.Image courtesy; Internet
 ವೈವಾಹಿಕ ಅತ್ಯಾಚಾರ ಅಪರಾಧವಾದರೆ ವಿವಾಹ ಸಂಬಂಧವೇ ಅಸ್ಥಿರವಾಗುತ್ತದೆ.  ಪತಿಗೆ ಕಿರುಕುಳ ನೀಡಲು ವಿವಾಹಿತ ಮಹಿಳೆಯರಿಗೆ ಸುಲಭವಾದ ಅಸ್ತ್ರ ದೊರೆತಂತಾಗುತ್ತದೆ. ಹಾಗಾಗಿ ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿ ಪರಿಗಣಿಸಬಾರದು.ಎಂದು ಕೇಂದ್ರ ಸರಕಾರ ಕಳೆದ ವರ್ಷ ದೆಹಲಿ ಹೈಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಆಗ ಅದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು, ಈಗಲೂ ಆಗುತ್ತಲಿದೆ.

ವೈವಾಹಿಕ ಅತ್ಯಾಚಾರವೆಂದರೇನು? ಪತ್ನಿಯ ಸಮ್ಮತಿಯಿಲ್ಲದೆಯೂ ಅವಳ ಇಚ್ಚೆಗೆ ವಿರುದ್ಧವಾಗಿ ಬಲತ್ಕಾರದಿಂದ ಲೈಂಗಿಕ ಸಂಪರ್ಕ ನಡೆಸುವುದೇ ವೈವಾಹಿಕ ಅತ್ಯಾಚಾರ. ಅದಕ್ಕೆ ಪತ್ನಿಯ ಒಪ್ಪಿಗೆಯನ್ನು ಎಂತಕ್ಕೆ ಕೇಳುವುದು? ಗಂಡನಿಗೆ ಬಯಕೆಯಾದರೆ ಸಹಕರಿಸಬೇಕಾದುದು ಪತ್ನಿಯ ಧರ್ಮ ಎನ್ನುತ್ತದೆ ಭಾರತೀಯ ಸಂಪ್ರದಾಯ. ಅದು ಆ ಕಾಲ., ಈ ಕಾಲದಲ್ಲಿ ತನ್ನ ದೇಹದ ಮೇಲೆ ತನ್ನದೇ ಹಕ್ಕು. ತಾನು ಅವನಂತೆಯೇ ದುಡಿಯುತ್ತೇನೆ, ದಣಿಯುತ್ತೇನೆ, ನನಗೂ ಅನೇಕ ಒತ್ತಡಗಳಿರುತ್ತವೆ. ಕೆಲವು ಸಂದರ್ಭಗಳಲ್ಲಿ ತನಗದು ಬೇಡ ಅನ್ನಿಸುತ್ತದೆ. ಅದನ್ನು ನಯವಾಗಿಯೇ ಅನುನಯಿಸಿ ಹೇಳುತ್ತೇನೆ. ಅದರವನು ಅದನ್ನು ಧಿಕ್ಕರಿಸಿ ತನ್ನ ದೇಹದ ಮೇಲೆ ಅತಿಕ್ರಮಣ ಮಾಡಿದರೆ ಅದು ಅತ್ಯಾಚರವಾಗುತ್ತದೆ. ಆ ಸಂದರ್ಭದಲ್ಲಿ ತನಗೆ ಕಾನೂನಿನ ರಕ್ಷಣೆ ಬೇಕಾಗುತ್ತದೆ. ಆದರೆ ಭಾರತೀಯ ದಂಡ ಸಂಹಿತೆಯಲ್ಲಿ ಅಂತಹದೊಂದು ಕಲಂ ಇಲ್ಲವಲ್ಲ ಎಂದು ಘಾಸಿಗೊಂಡ ಮಹಿಳೆ ಪ್ರಶ್ನಿಸುತ್ತಿದ್ದಾಳೆ. ಈಗ ಇರುವ ಐಪಿಸಿ ೩೭೫ ಕಲಂ೨ರಪ್ರಕಾರ ಹೆಂಡತಿ ಜೊತೆ ಗಂಡ ನಡೆಸುವ ಬಲತ್ಕಾರದ ಲೈಂಗಿಕ ಕ್ರಿಯೆ ಅಪರಾಧವಲ್ಲ.

 ಮಹಿಳಾ ಮತ್ತು ಮಕ್ಕಳಕಲ್ಯಾಣ ಸಚಿವರಾದ ಮನೇಕಾಗಾಂಧಿಯೇ ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ ಅಪರಾಧದ ಅಡಿಯಲ್ಲಿ ತರುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬೇರೆ ದೇಶಗಳಲ್ಲಿ ವೈವಾಹಿಕ ಅತ್ಯಾಚಾರದ ಬಗೆಗಿನ ನಿಲುವುಗಳನ್ನು ಅವಲೋಕಿಸಿದರೂ ಅದೂ ಕೂಡಾ ಅಷ್ಟೇನೂ ಆಶಾಧಾಯಕವಾಗಿಲ್ಲ. ಹೆಣ್ಣು ಗಂಡಸಿನ ಖಾಸಾಗಿ ಆಸ್ತಿ, ಉಪಭೋಗದ ವಸ್ತು ಎಂಬ ಪುರುಷಮನಸ್ಥಿತಿ ಜಗತ್ತಿನ ಎಲ್ಲೆಡೆ ಇದೆ. ಆದರೂ ೧೦೬ ದೇಶಗಳಲ್ಲಿ ವೈವಾಹಿಕ ಅತ್ಯಾಚಾರವೆಂಬುದು ಶಿಕ್ಷಾರ್ಹ ಅಪರಾಧ. ಇವುಗಳಲ್ಲಿ ೩೨ ದೇಶಗಳಲ್ಲಿ ಇದು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿದೆ.

 ಸ್ವತಃ ನಾನೇ ಸಾಕ್ಷಿಯಾಗಿರುವ ಎರಡು ಘಟನೆಗಳನ್ನು ನಿಮ್ಮ ಮುಂದಿಡುತ್ತೇನೆ.

ಆಗ ನಾನು ಚಿಕ್ಕವಳೇನಾಗಿರಲಿಲ್ಲ. ಆದರೆ ಕೆಲವು ವಿಷಯಗಳಲ್ಲಿ ಲೋಕಜ್ನಾನ ಕಮ್ಮಿಯಿತ್ತು. ಹಿಂದಿನ ದಿನ ಸಂಬಂಧಿಯೊಬ್ಬರ ಮದುವೆಯಲ್ಲಿ ಪಾಲ್ಗೊಂಡಿದ್ದೆ. ರಾತ್ರಿ ಮದುಮಗನ ರೂಮಿಗೆ ಮದುಮಗಳು ಹೋಗಿದ್ದಳು. ಬೆಳಿಗ್ಗೆ ಅಡುಗೆಮನೆಯಲ್ಲಿ ದೊಡ್ಡವರ ಜೊತೆ ಕುಳಿತಿದ್ದೆ. ಮದುಮಗಳು ಅಡುಗೆ ಮನೆಗೆ ಬಂದಳು. ಅವಳ ಒಂದು ಕೆನ್ನೆ ರಕ್ತ ಹೆಪ್ಪುಗಟ್ಟಿದಂತಾಗಿ ಕಂದು ಬಣ್ಣಕ್ಕೆ ತಿರುಗಿತ್ತು. ಹಿಂದಿನ ಬೆಳ್ಳಗೆ ಕೆಂಪು ಕೆಂಪಾಗಿ ತುಂಬಾ ಸುಂದರವಾಗಿ ಕಂಡಿದ್ದರು. ಏನಾಯ್ತು ಎಂಬ ಆತಂಕದಲ್ಲಿ ನಾನು ನಿಮ್ಮ ಕೆನ್ನೆ ಯಾಕೆ ಸುಟ್ಟಬದನೆಕಾಯಿಯಂತಾಗಿದೆ? ಪಕ್ಕದಲ್ಲಿದ್ದ ಹಿರಿಯರು ನನ್ನ ತೊಡೆಗೆ ಚುವುಟಿದರು. ಅಲ್ಲಿದ್ದವರು ಕಿರುನಗೆಯಿಂದಲೇ ಪರಸ್ಪರ ಮುಖ ನೋಡಿಕೊಂಡರು. ಮದುಮಗಳು ಯಾವುದೇ ಭಾವನೆಯನ್ನು ವ್ಯಕ್ತಪಡಿಸದೆ ಅಲ್ಲಿಂದ ಬಚ್ಚಲು ಮನೆಗೆ ಹೋದಳು. ದೇಹದ ಮೇಲಿನ ಕಲೆಯೂ ಒಮ್ಮೊಮ್ಮೆ ಪ್ರೇಮದ ಗುರುತಾಗಬಹುದು

ಅದರೆ ಮದುವೆಯಾಗಿ ಹತ್ತಾರು ವರ್ಷಗಳು ಕಳೆದಮೇಲೆ ಪತ್ನಿಯಾದವಳು ಬೆಳಿಗ್ಗೆ ಕೆನ್ನೆ ಊದಿಸಿಕೊಂಡು ದಾಂಪತ್ಯದ ಕೋಣೆಯಿಂದ ಬೆಳಿಗ್ಗೆ ಹೊರಬಂದರೆ ಅಸಹಜವಾದುದು ಅಲ್ಲೇನೋ ನಡೆದಿದೆ ಎಂದು ಹತ್ತಿರದವರಿಗೆ ತಿಳಿದೇ ತಿಳಿಯುತ್ತದೆ. ಆದರೆ ಅಲ್ಲೇನೋ ನಡೆದಿದಿದೆ ಎಂದು ಹೊರಗಿನವರು ತರ್ಕಿಸಬಹುದಷ್ಟೇ. ಆದರೆ ಏನು ನಡೆದಿದೆಯೆಂಬುದನ್ನು ಅವರಿಬ್ಬರಲ್ಲಿ ಒಬ್ಬರು ಬಾಯಿಬಿಟ್ಟು ಹೇಳಿದರೆ ಮಾತ್ರ ಉಳಿದವರಿಗೆ ಗೊತ್ತಾಗುತ್ತದೆ.

Image courtesy; Internet
ನಮ್ಮ ಹತ್ತಿರದ ಬಂಧುವೊಬ್ಬರ ಮನೆಯಲ್ಲಿ ಒಂದು ರಾತ್ರಿ ಉಳಿದುಕೊಳ್ಳುವ ಸಂದರ್ಭ ಬಂದಿತ್ತು. ಆ ಮನೆಯ ಯಜಮಾನಿ ತನ್ನ ಮೊಮ್ಮಗಳೊಡನೆ ನಾನು ಮಲಗಿದ್ದ ಹಾಲಿನಲ್ಲೇ ಮಲಗಿದ್ದರು. ಆ ಮನೆಯ ಯಜಮಾನನಾಗಿದ್ದ ಆಕೆಯ ಗಂಡ ಪಕ್ಕದ ರೂಮಿನಲ್ಲಿದ್ದರು. ಮಧ್ಯರಾತ್ರಿ ಯಾರೋ ನರಳಿದಂತೆ ಶಬ್ದ ಕೇಳಿಸಿ ಎಚ್ಚರಾಗಿ ಸುತ್ತ ಕಣ್ಣಾಡಿಸಿದಾಗ ಆ ಮಹಿಳೆ ಕಾಣಿಸಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಅವರು ಪಕ್ಕದ ರೂಮಿನಿಂದ ಬಂದು ಮೊಮ್ಮಗಳ ಪಕ್ಕದಲ್ಲಿ ಮಲಗಿಕೊಂಡರು. ಕಾಲುಗಳನ್ನು ಅಗಲಿಸಿಕೊಂಡು ತೊಡೆ ಮದ್ಯಕ್ಕೆ ಲಂಗದಿಂದ ಗಾಳಿಹಾಕಿಕೊಳ್ಳುತ್ತಾ ಆಗಾಗ ಕೈಮುಚ್ಚಿಕೊಳ್ಳುತ್ತಿದ್ದರು.  ಆಗ ನನಗೂ ಮದುವೆಯಾಗಿತ್ತು. ಲೈಂಗಿಕ ಸಮಸ್ಯೆಗಳ ಬಗ್ಗೆ ಕುರಿತಾಗಿಯೇ ಆಪ್ತ ಸಲಹಾ ತರಬೇತಿಯನ್ನೂ ಪಡೆದುಕೊಂಡಿದ್ದೆ. ಹಾಗಾಗಿ ಅರುವತ್ತು ದಾಟಿದ ಆ ಮಹಿಳೆಗಾದ ಹಿಂಸೆಯನ್ನು ನಾನು ಊಹಿಸಿಕೊಳ್ಳಬಲ್ಲವಳಾಗಿದ್ದೆ..

ಕೌನ್ಸಿಲಿಂಗ್ ಎಂದಾಗ ಒಂದು ಘಟನೆ ನನಗೆ ನೆನಪಿಗೆ ಬರುತ್ತದೆ. ಅವಳು ನನ್ನೆದುರು ಕೂತಿದ್ದಳು.ಒಂದು ಮಗುವಿನ ತಾಯಿ. ತುಂಬು ಯೌವನದ ಆರೋಗ್ಯದ ಕಳೆಯಿಂದ ಮಿಂಚುತ್ತಿರುವ ಹುಡುಗಿ. ತನ್ನ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಳು.; ಅವಳ ಗಂಡ ಸಂಭೋಗಪೂರ್ವ ಸಲ್ಲಾಪದ ಕಲೆಯನ್ನು ಕರಗತ ಮಾಡಿಕೊಂಡಾತ. ಅವಳ ಬಯಕೆಗಳನ್ನು ಕೆರಳಿಸಿ ಅವಳು ಉನ್ಮಾದಕ್ಕೆ ಜಾರುತ್ತಿದ್ದಾಳೆ ಎಂದೆನಿಸಿದಾಗ ತಾನು ತಣ್ಣಗೆ ಪಕ್ಕಕ್ಕೆ ಸರಿದು ಬಾಲ್ಕನ್ನಿಗೆ ಹೋಗಿ ಸಿಗರೇಟು ಹಚ್ಚಿಕೊಳ್ಳುತ್ತನಂತೆ. ಇದು ಒಂದೆರಡು ದಿನದ ಮಾತಲ್ಲ. ಹಲವಾರು ತಿಂಗಳುಗಳಿಂದ ನಡೇಯುತ್ತಾ ಬಂದಿದೆ. ಆ ಸಂದರ್ಭದಲ್ಲಿ ಬೆಂಕಿಯಂತಾಗುವ ತಾನೇನು ಮಾಡಬೇಕು? ಎಂದವಳು ನನ್ನನ್ನು ಪ್ರಶ್ನಿಸಿದ್ದಳು..
ಅವಳು ತುಂಬಾ ಸಂಕೀರ್ಣವಾದ ಪ್ರಶ್ನೆಯನ್ನು ಕೇಳಿದ್ದಳು. ಕೊಡಬಹುದಾಗಿದ್ದ ಉತ್ತರ ಸರಳವಾದುದಲ್ಲ. ಹತ್ತು ಹಲವು ಆಯಾಮಗಳನ್ನು ಮಥಿಸಿ ಉತ್ತರಿಸಬೇಕಾಗಿತ್ತು.

ಭಾರತೀಯ ಸಂಸ್ಕ್ರುತಿಯಲ್ಲಿ ಮದುವೆಯೆಂಬುದು ಏಳೇಳು ಜನ್ಮಗಳ ಅನುಬಂಧ. ಇದರ ಮುಖ್ಯ ಉದ್ದೇಶ ಸಂತಾನವನ್ನು ಪಡೆಯುವುದೇ ಆಗಿತ್ತು. ಹಾಗಾಗಿ ಇಲ್ಲಿ ದಂಪತಿಗಳು ಮಿಲನಗೊಳ್ಳುವುದಕ್ಕೂ ಒಂದು ಶುಭಮೂಹೂರ್ತವಿದೆ. ಮುಂದೆಯೂ ದಾಂಪತ್ಯನಿಷ್ಠೆ ಎಂಬುದು ಬಹುಮುಖ್ಯ. ಆದರಿದು ಪತ್ನಿಯಾದವಳಿಗೆ ಮಾತ್ರ. ಗಂಡನಾದವನು ಎಷ್ಟು ಮದುವೆಯನ್ನಾದರೂ ಮಾಡಿಕೊಳ್ಳಬಹುದು.ಎಷ್ಟು ಹೆಂಗಸರೊಡನೆಯಾದರೂ ಸಂಬಂಧ ಇಟ್ಟುಕೊಳ್ಳಬಹುದು ಆದರೆ ಹೆಂಡತಿ ಪತಿವ್ರತೆಯಾಗಿರಲೇಬೇಕು!

ಸಪ್ತಪದಿ ತುಳಿಯುವಾಗ ಪರಸ್ಪರ ಸಮಾನತೆಯ, ಬದ್ಧತೆಯ ಏನೇ ಮಂತ್ರಪಠಣವಾಗಿರಲಿ ವಾಸ್ತವದಲ್ಲಿ ಪತ್ನಿಯಾದವಳು ಎಂದೂ ಗಂಡನ ಸಹವರ್ತಿನಿಯಲ್ಲ. ಮಹಿಳೆ ತನ್ನ ಅಸೌಖ್ಯದ, ದಣಿದ ದಿನಗಳಲ್ಲಿ ಇಂದು ಬೇಡಎಂದು ಹೇಳಲು ಸಾಧ್ಯವೇ? ಹಾಗೆ ಹೇಳಲು ಸಾಧ್ಯವಾದರೆ ಅದು ಅನುಕೂಲಕರ ದಾಂಪತ್ಯ. ಲೈಂಗಿಕಬಯಕೆ ಗಂಡಿನಂತೆ ಹೆಣ್ಣಿಗೂ ಇರುತ್ತದೆ. ಹಸಿವು ಬಾಯಾರಿಕೆ, ನಿದ್ರೆಗಳಂತೆ ಅದು ಪ್ರಕೃತಿ ಸಹಜ ಬಯಕೆ ಆದರೆ ಅವಳು ಅದನ್ನು ಬಾಯಿಬಿಟ್ಟು ಹೇಳಿದರೆ ವಾತ್ಸಯಾನ ಅಂತಃಪುರದಲ್ಲಿ ಜೀವಂತವಾಗಿರಬಹುದು1. ಇಲ್ಲವಾದರೆ ಪುರುಷಾಂಕಾರದ ಮಿಷನರಿ ಆಸನವೇ ಅಂತಃಪುರವನ್ನಾಳುತ್ತದೆ. ಹಾಂ. ಅಂದಹಾಗೆ ಮಿಷನರಿ ಆಸನದ ಬಗ್ಗೆ ಬಗ್ಗೆ ಹೇಳುವಾಗ ಕಳೆದ ವರ್ಷ ಬಿಡುಗಡೆಯಾದ ತುಳು ಸಿನೇಮಾದ ದ್ರುಶ್ಯವೊಂದು ನೆನಪಾಗುತ್ತದೆ. ಅದರಲ್ಲಿ ರೇಪ್ ಮಾಡುವುದು ಹೇಗೆ ಎಂಬುದನ್ನೂ ಹೇಳಿಕೊಡಲಾಗುತ್ತದೆಯಂತೆ. ಮತ್ತೆ ನೆನಪಿಸಿಕೊಳ್ಳುತ್ತೇನೆ; ಭಾರತದ ಮಟ್ಟಿಗೆ ಸಿನೇಮಾ ಕೂಡಾ ಪುರುಷಾಧಿಪತ್ಯದ ಕ್ಷೇತ್ರವೇ. ಅಲ್ಲಿಯೂ ಮಹಿಳಾ ಧ್ವನಿ ಕ್ಷೀಣವಾಗಿದೆ

ಗಂಡನಾದವನು ಸೂಕ್ಷ್ಮಜ್ನನಾಗಿದ್ದು ಸಂವೇದನಾಶೀಲನಾಗಿದ್ದರೆ ಆತ ಅರ್ಥ ಮಾಡಿಕೊಳ್ಳುತ್ತಾನೆ. ಕೆಲವೊಮ್ಮೆ ಇಬ್ಬರಿಗೂ ಕೌನ್ಸಿಲಿಂಗ್ ಕೂಡಾ ಬೇಕಾಗಬಹುದು ಆದರೆ ಎಷ್ಟು ಜನ ಗಂಡಂದಿರು ಕೌನ್ಸಿಲಿಂಗ್ ಗೆ ಬರಲು ಒಪ್ಪುತ್ತಾರೆ?. ಹೆಚ್ಚೇಕೆ, ಕುಟುಂಬ ನಿಯಂತ್ರಣ ಸಾಧನಗಳನ್ನು ಅಳವಡಿಸಿಕೊಳ್ಳುವುದಕ್ಕೇ ಶೇ ೯೯ರಷ್ಟು ಗಂಡಸರು ಒಪ್ಪಿಕೊಳ್ಳುವುದಿಲ್ಲ. ಅದು ಹೆಂಗಸರ ಜವಾಬ್ದಾರಿ ಎಂಬುದೇ ಗಂಡಸರ ಧೋರಣೆ. ಇದು ಸಮೀಕ್ಷೆಗಳಿಂದಲೇ ಋಜುವಾತಾಗಿದೆ. ಇನ್ನು ಲೈಂಗಿಕ ವಿಷಯಗಳಿಗೆ ಸಂಬಂಧಿಸಿದಂತೆ ಕೌನ್ಸಿಲಿಂಗ್ ಗೆ ಬರುತ್ತಾನೆಯೇ? ದೈಹಿಕಹಿಂಸೆ ಅನುಭವಿಸುತ್ತಾ  ಒಳಗೊಳಗೆ ಬೇಯುತ್ತಿದ್ದ ಮಹಿಳೆ ಕೊನೆಗೊಮ್ಮೆ ಸಿಡಿದು ನಿಂತರೆ ಆಗ ಅವಳಿಗೆ ಕಾನೂನಿನ ನೆರವು ಬೇಕಲ್ಲವೇ?

ನನ್ನ ದೇಶದಲ್ಲಿ ರೇಪ್ ಅನ್ನುವುದು ಪುರುಷತ್ವದ ಸಂಕೇತ. ಅದು ಯುದ್ಧವೇ ಆಗಲಿ ಗುಂಪುಗಳ ನಡುವಿನ ಸಂಘರ್ಶವೇ ಆಗಲಿ ಎದುರಾಳಿಗಳನ್ನು ಹಣೆಯಲು ವಿರುದ್ಧ ಗುಂಪಿನ ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರವೆಸಗುವುದು ಕೂಡಾ ಅದರ ಭಾಗವೇ ಆಗಿದೆ.  ಇತ್ತೀಚೆಗೆ ಜಮ್ಮು ಕಾಶ್ಮೀರದ ಅಸಿಫಾ ಎಂಬ ಪುಟ್ಟ ಬಾಲೆಯ ಮೇಲೆ ಧರ್ಮಾಂದರು ನಡೆಸಿದ ಪೈಶಾಚಿಕ ಅತ್ಯಾಚಾರಕ್ಕೆ ಜನಾಂಗೀಯ ದ್ವೇಶವೇ ಕಾರಣವಾಗಿತ್ತು. ಇದೆಲ್ಲದರ ವಿರುದ್ಧ ನಾವು, ನಾಗರಿಕರು ಸಂಘಟಿರಾಗಿ ಹೋರಾಡಬಹುದು, ಆದರೆ ಬೆಡ್ರೂಮಿನಲ್ಲಾಗುವ ಅತ್ಯಾಚಾರದ ಬಗ್ಗೆ ಹೇಗೆ ಪ್ರತಿಕ್ರಿಯಿಸುವುದು? ಯಾರು ಪ್ರತಿಕ್ರಿಯಿಸಬೇಕು? ಯಾಕೆಂದರೆ ಇದು ಧರ್ಮಸೂಕ್ಷ್ಮದ ಸಂಗತಿ. ಭಾರತೀಯ ಕೌಟುಂಬಿಕ ಬದುಕಿನ ತಾಯಿಬೇರು ಮದುವೆ,ಅದರ ಮೇಲೆ ಪ್ರಹಾರ ಮಾಡಲು ಸಾಧ್ಯವೇ? ಹಾಗಾಗಿಯೇ ಕಾನೂನುಗಳು ಇಲ್ಲಿ ಸೋಲುತ್ತವೆ. ಕಾನೂನನ್ನು ರೂಪಿಸುವ ಸಂಸತ್ತಿನಲ್ಲಿ ಬಹುಸಂಖ್ಯಾತ ಪುರುಷರು ಕೂತಿದ್ದಾರಲ್ಲವೇ? ಪಕ್ಷರಾಜಕಾರಣಿಗಳು ಮಹಿಳೆಯರನ್ನು ನೋಡುವ ಪರಿ ಒಂದೇ ಆಗಿರುತ್ತದೆ. ಇಂತವರು ಮಹಿಳಾ ಪರವಾದ ಕಾನೂನು ರೂಪಿಸುತ್ತಾರೆಯೇ?

ಕಾನೂನು ಸೇರಿದಂತೆ ಜಗತ್ತಿನ ಎಲ್ಲಾ ನೀತಿನಡಾವಳಿಗಳನ್ನು ಧರ್ಮದ\ರಿಲೀಜಿಯನ್ನಿನ ದ್ರುಷ್ಟಿಕೋನದಿಂದ ನೋಡಲಾಗಿದೆ. ಕಾನೂನುಗಳನ್ನು ಪುರುಷನ ಮೂಗಿನ ನೇರಕ್ಕೆ ತಕ್ಕಂತೆ ರೂಪಿಸಲಾಗಿದೆ. ಬಹುಶಃ ಮಹಿಳೆಯರೇ ನೀತಿನಿರೂಪಕರು ಆಗಿದ್ದಲ್ಲಿ ಭಾನುವಾರದ ರಜೆಯ ಬದಲು, ತಮಗೆ ಬೇಕಾದ ದಿನಗಳಲ್ಲಿ ತಿಂಗಳಿಗೆ ಐದು ದಿನ ರಜೆ ತೆಗೆದುಕೊಳ್ಳುವ ಅವಕಾಶವನ್ನು ಮಾಡಿಕೊಳ್ಳುತ್ತಿದ್ದರು. ಜಗತ್ತನ್ನು ತಾಯಿನೋಟವೊಂದು ಕಾಪಾಡುತ್ತಿತ್ತು. ನಾಮಕಾವಸ್ಥೆಯ ಗಡಿರೇಖೆಗಳಿರುತ್ತಿದ್ದವು. ಮುಖ್ಯವಾಗಿ ಯುದ್ಧವೆಂಬುದು ನಡೆಯುತ್ತಿರಲಿಲ್ಲ.

ಪ್ರಜಾವಾಣಿಯ ಮುಕ್ತಛಂಧಕ್ಕಾಗಿ ಬರೆದ ಬರಹ. ಎಡಿಟ್ ಆಗಿ ಪ್ರಸಾರವಾಗಿತ್ತುನಾಲ್ಕು ತಿಂಗಳ ಹಿಂದೆ.  ]0 comments: