Tuesday, November 5, 2019

’ರಾಕ್ಷಸ ತಂಗಡಿ’ ನಾಟಕ ಹೇಳುವುದೇನನ್ನು?






ನೀನಾಸಂ ಅಭಿನಯಿಸಿದ ಗಿರೀಶ್ ಕಾರ್ನಾಡರ ಕೊನೆಯ ನಾಟಕ ’ರಾಕ್ಷಸ ತಂಗಡಿ’ಯನ್ನು ನೋಡಿ ಬಂದೊಡನೆಯ  ಮಾಡಿದ ಮೊದಲ ಕೆಲಸವೆಂದರೆ ಮತ್ತೊಮ್ಮೆ ನಾಟಕದ ಅಂತ್ಯವನ್ನು ಓದಿದ್ದು. ಯಾಕೆಂದರೆ ನಾಟಕದ ಅಂತ್ಯ ನನ್ನಲ್ಲಿ ಗೊಂದಲವನ್ನುಂಟು ಮಾಡಿತ್ತು.


ಪಠ್ಯದಲ್ಲಿ ಆ ದೃಶ್ಯ ಕೆತ್ತಲ್ಪಟ್ಟಿದ್ದು ಹೀಗೆ,  ರೂಮಿಖಾನ್ ರಾಮರಾಯನ ತಲೆಯನ್ನು ಕತ್ತರಿಸಿದ ಕೂಡಲೇ ಅದಿಲ್ ಶಾ ರೋದಿಸುತ್ತಾ ಓಡಿ ಹೋಗಿ ಅ ರುಂಡವನ್ನು ಎತ್ತಿಕೊಳ್ಳುತ್ತಾನೆ. ಆಗ ನಿಝಾಮ್ ಶಾ ಆಡುವ ಮಾತುಗಳಿವು; ’ತಗೋ, ಸುಲ್ತಾನ್ ಆದಿಲ್ ಶಾ ಇದನ್ನು ಕಾಶಿಗೆ ಕಳಿಸಿಕೊಡು. ನಿನ್ನ ಮಾವನ ಕಡೆಯಿಂದ ದೊರೆತ ಉಡುಗೊರೆ. ಇಡಿಯ ದಖ್ಖನ್! ಇಡಿಯ ದಖ್ಖನ್ ನಿನ್ನದು!’ ಇದು ನಾಟಕದ ಕೊನೆಯ ಡೈಲಾಗ್ ಕೂಡಾ ಹೌದು.. ನಾಟಕಾರ ಏನು ಹೇಳಬೇಕೆಂದುಕೊಂಡಿದ್ದರೋ ಅದೆಲ್ಲವೂ ಈ ಒಂದೇ ಒಂದು ಡೈಲಾಗ್ ನಲ್ಲಿತ್ತು. ಆದರೆ ಇದನ್ನು ನಾಟದಲ್ಲಿ ನಿಜಾಂ ಶಾ ಆಡಲೇ ಇಲ್ಲ. ನನ್ನ ಕಿವಿ ನನಗೆ ಮೋಸ ಮಾಡಿರಬಹುದೇ? ಎಂದು ನಾಟ ನೋಡಿದ ಒಂದೆರಡು ಮಂದಿಯಲ್ಲಿ ವಿಚಾರಿಸಿದೆ. ಅದರಲ್ಲಿ ಕೆಲವರು ಆ ಡೈಲಾಗ್ ಇರಲಿಲ್ಲ ಅಂದರು. ಇನ್ನು ಕೆಲವರು ಆ ಡೈಲಾಗ್ ಇತ್ತು. ಆದರೆ ರಾಮರಾಯನಿಗೆ ಅವನದೇ ತಲೆಯನ್ನು ಸೈನಿಕನೊಬ್ಬ ಒಪ್ಪಿಸುವಾಗ ಆ ಡೈಲಾಗ್ ಬಂತು. ಆದರೆ ಆಗ ಹಾಡು ಆರಂಭವಾಯ್ತು [ಲೋಳ ಲೋಟೆ]. ಅಂದರು. ಅಂದರೆ ಪ್ರೇಕ್ಷಕರ ಗಮನ ಗೊಂದಲದಲ್ಲಿ ರಾಮರಾಯನ ತಲೆಯ ಮೇಲೆ ನೆಟ್ಟಿತ್ತು. ಆಗ ರಂಗದ ಬಲಬದಿಯಲೆಲ್ಲೋ ಇದ್ದ ನಿಜಾಂ ಆ ಡೈಲಾಗ್ ಆಡಿರಲೂ ಬಹುದು.

. ಗೊಂದಲವಾಗುವುದಕ್ಕೆ ಇನ್ನೂ ಒಂದು ಕಾರಣವೂ ಇತ್ತು. ಸೆರೆ ಸಿಕ್ಕ ರಾಮರಾಯನನ್ನು  ನಿಜಾಂ ಶಾ ನ ಯುದ್ಧದ ಡೇರೆಯೊಳಗೆ ಬಾಗಿಲ ಬಳಿ ಕುಳ್ಳಿರಿಸುತ್ತಾರೆ. ಅವನಿಗೆ ಹಕೀಂ ಕೆಂಪು ಹೂವಿನ ಹಾರ ಹಾಕಿ, ಆರತಿ ಎತ್ತಿ, ಗಂಗೆ ನೀರಿರಿರುವ ಚೊಂಬಿನಿಂದ ನಿವಾಳಿಸುತ್ತಾನೆ. ನಂತರ ನಿಝಾಂ ಶಾನ ಕಣ್ಸನ್ನೆಯಂತೆ ರೂಮಿಖಾನ್ ರಾಮರಾಯನ  ತಲೆಯನ್ನು ಕತ್ತರಿಸುತ್ತಾನೆ.. ತಲೆ ಹೊಸ್ತಿಲಾಚೆ ಬೀಳುತ್ತದೆ. ದೇಹ ಒಳಗೇ ಉಳಿಯುತ್ತದೆ. [ಹಿರಣ್ಯಕಶಿಪ್ ನನ್ನು ನರಸಿಂಹ ಹೊಸ್ತಿಲ ಮೇಲೆ ವಧಿಸಿದ ನೆನಪು ಬಂತು!] ಅನಂತರ ತಲೆಯನ್ನು ಹರಿವಾಣದೊಳಗೆ ಇಟ್ಟು ಎದ್ದು ಕುಳಿತ ರಾಮರಾಯನಿಗೇ ಕೊಡುತ್ತಾರೆ. ತಲೆ ಚಚ್ಚಿಕೊಂಡರೂ ಇದರ ಅರ್ಥವೇನೆಂದು ಹೊಳೆಯಲೇ ಇಲ್ಲ.

.  ಇದೇ ನಾಟಕವನ್ನು ಇಂಗ್ಲೀಷನಲ್ಲಿಯೂ ನೋಡಿದ್ದೆ. ಅಲ್ಲಿ ನಾಟಕ ಕೊನೆ ತನಕ ತನ್ನ ಬಿಗಿಯನ್ನು ಕಾಯ್ದುಕೊಂಡಿತ್ತು. ರಾಮರಾಯ ನಿಜಾಂ ಶಾನಿಗೆ ತಾಂಬೂಲ ತಿನ್ನಿಸುವ ಒಂದೇ ದೃಶ್ಯವನ್ನು ತಾಳೆ ಹಾಕಿದರೂ ಸಾಕು ಅಲ್ಲಿಯ ಬಿಗಿ ಮತ್ತು ಇಲ್ಲಿಯ ಜಾಳುತನ ಅರಿವಾಗುತ್ತದೆ.  ಅಲ್ಲಿ ಅಳಿಯ ರಾಮರಾಯ ಫಿಸಿಕ್ ಆಕರ್ಷಕವಾಗಿರಲಿಲ್ಲ. ಆದರೆ ನಟನೆಯೇ ಜೀವಾಳವಾಗಿತ್ತು. ಇಲ್ಲಿ ಈತನ ಭಾವಬಂಗಿಗೆ ಯಕ್ಷಗಾನದ ಗಂಧವಿತ್ತು. ಅಲ್ಲಿ ರಾಮರಾಯನ ತಲೆ ಹಾರಿಸುವ ದೃಶ್ಯ ಬೆಳಕಿನ ಸಂಯೋಜನೆಯಲ್ಲಿ ಪೈಂಟಿಂಗ್ ನಂತೆ ಬಿಂಬಿತವಾಗಿತ್ತು. ಆತ ಓರೆಯಾಗಿ ಕುಳಿತ ಭಂಗಿ, ಇಳಿ ಬಿದ್ದ ತೋಳು  ಅಸಾಯಯಕತೆಯಲ್ಲೂ ಅತ್ಮಾಭಿಮಾನ ಚೆಲ್ಲುವಂತಿತ್ತು. ಇಲ್ಲಿ ಮತ್ತೆ ಮತ್ತೆ ಅದಿಲ್ ಶಾ ಎಲ್ಲಿ ಎಂದು ಕೇಳುವಲ್ಲಿ ರಾಮರಾಯನ ಅಸಹಾಯಕತೆಯೇ ಎದ್ದು ಕಾಣುತ್ತಿತ್ತು. ರಾಕ್ಷಸ ತಂಗಡಿಯಲ್ಲಿ ಎಲ್ಲಕ್ಕಿಂತಲೂ ಅಭಾಸ ಅನ್ನಿಸಿದ್ದು, ರಾಜಮಾತೆ ವೀಲ್ ಚೈರ್ ನಲ್ಲಿ ಬಂದಿದ್ದು. ವಿಜಯನಗರ ಕಾಲದಲ್ಲಿ ಅದು ಅಸ್ತಿತ್ವದಲ್ಲಿತ್ತೇ?

ಅಂತ್ಯವೊಂದನ್ನು ಬಿಟ್ಟು ಪೂರ್ತಿ ನಾಟಕ ಪಠ್ಯಕ್ಕೆ ನಿಷ್ಠವಾಗಿತ್ತು. ನಿದೇಶಕರು ಮಾಡಿಕೊಂಡ ಈ ಒಂದು ಬದಲಾವಣೆ ನಾಟಕದ ಆಶಯವನ್ನೇ ಪಲ್ಲಟಗೊಳಿಸಿತ್ತು.
 ನಿಜ, ಪಠ್ಯವನ್ನು ಯಾರು, ಯಾವ ಮನಸ್ಥಿತಿಯವರು ಓದುತ್ತಿದ್ದಾರೆ. ನೋಡುತ್ತಿದ್ದಾರೆ, ನಿರ್ದೇಶನ ಮಾಡುತ್ತಿದ್ದಾರೆ. ನೋಡುತ್ತಿದ್ದಾರೆ ಎಂಬುದು ಕೂಡಾ ಮುಖ್ಯವಾಗುತ್ತದೆ., ಭಿನ್ನ ಗ್ರಹಿಕೆ, ಭಿನ್ನ ನೋಟವಿರುವುದು ಅತ್ಯಂತ ಸಹಜ..

ರಾಕ್ಷಸ ತಂಗಡಿ ನಾಟಕದ ಇಂಗ್ಲೀಷ್ ಅವತರಣಿಕೆ ’ಕ್ರಾಸಿಂಗ್ ಟು ತಾಳಿಕೋಟೆ’  ಎರಡೂ ನಾಟಕಳೂ ಮೊತ್ತ ಮೊದಲ ಬಾರಿಗೆ ಒಂದೇ ತಿಂಗಳಿನಲ್ಲಿ ರಂಗದ ಮೇಲೆ ಬಂದವು. ಕನ್ನಡ ನಾಟಕವನ್ನು ನೀನಾಸಂ ರಂಗಕ್ಕೆ ತಂದರೆ ಇಂಗ್ಲೀಷ್ ನಾಟಕವನ್ನು ನಂದನ್ ನೀಲಕೇಣಿ ಮತ್ತು ಕಿರಣ್ ಮುಜುಮ್ ದಾರ್ ಪ್ರಯೋಜಿಸಿ ಅರ್ಜುನ್ ಸೆಜನಾನಿ ನಿರ್ದೆಶಿಸಿದ್ದರು. ಅಕ್ತೋಬರ್ ೨ರಂದು ಕ್ರಾಸಿಂಗ್ ಟೂ ತಾಳಿಕೋಟೆ ಬಂದರೆ ಅಕ್ಟೋಬರ್ ಅ೧೨ರಂದು ರಾಕ್ಷಸ ತಂಗಡಿ ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನ ಕಂಡಿತು. ಎರಡೂ ಪ್ರದರ್ಶನಗಳು ತುಂಬಾ ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ಪ್ರದರ್ಶನಗಳು. ಯಾಕೆಂದರೆ, ಇದು ಕಾರ್ನಾಡರು ಬರೆದ ಕೊನೆಯ ನಾಟಕ. ಮತ್ತು ವಿಜಯನಗರ ಸಾಮ್ರಾಜ್ಯದ ಪತನದ ಕಥೆಯನ್ನು ಭಿನ್ನ ರೀತಿಯಲ್ಲಿ ಹೇಳಲು ಪ್ರಯತ್ನಿಸಿದ ನಾಟವಿದು.

 ನಾವು ಬಾಲ್ಯದಿಂದಲೂ ಓದಿಕೊಂಡು ಬಂದಿದ್ದು. ವಿಜಯನಗರ ಸಾಮ್ರಜ್ಯದ ಮೇಲೆ ದಕ್ಷಿಣದ ಮುಸ್ಲಿಂ ರಾಜರೆಲ್ಲಾ ಒಟ್ಟಾಗಿ ಸೇರಿ ದಂಡೆತ್ತಿ ಬಂದರು. ರಕ್ಕಸ ತಂಗಡಿ ಎಂಬಲ್ಲಿ ಘೋರಕದನವಾಗಿ ವಿಜಯನಗರದ ಅರಸರು ಸೋತರು. ಮುಸ್ಲಿಮರೆಲ್ಲಾ ಬಂದು ವಿಜಯನಗರದ ಸಂಪತ್ತನ್ನು ದೋಚಿ ಅದನ್ನು ಹಾಳು ಹಂಪೆಯಾಗಿಸಿದರು ಎಂಬುದನ್ನು, ಆದರೆ ಈ ನಾಟಕ,.ವಿಜಯನಗರದ ಅರಸರೇ ಕೃಷ್ಣಾ ನದಿಯನ್ನು ದಾಟಿ ಉತ್ತರಕ್ಕೆ ದಂಡೆತ್ತಿ ಹೋಗಿದ್ದರು. ಅದಕ್ಕೆ ಅಳಿಯ ರಾಮರಾಯನ ದುರಾಂಹಕಾರವೇ ಕಾರಣವಾಗಿತ್ತು. ಸುಲಭದಲ್ಲಿ ಸೆರೆಸಿಕ್ಕ ರಾಮರಾಯನ ತಲೆಯನ್ನು ಮುಸ್ಲಿಮರು ಹಾರಿಸಿದ ಒಡನೆಯೇ ವಿಜಯನಗರದಲ್ಲಿದ್ದ ಅರಮನೆಯ ಪರಿವಾರದವರೇ ಅಲ್ಲಿದ್ದ ಸಂಪತ್ತಿನೊಡನೆ ಪೆನಗೊಂಡಕ್ಕೆ ಪರಾರಿಯಾದರು ಎಂದು ಹೇಳುತ್ತದೆ. ಇದು ನಾಟಕಾರರ ಅಧ್ಯನ ಮತ್ತು ಬರವಣಿಗೆಯ ಸ್ವಾತಂತ್ರ್ಯ ಅದರ ಬಗ್ಗೆ ತಕರಾರಿಲ್ಲ. ಆದರೆ ಅದನ್ನು ರಂಗಕ್ಕೆ ತಂದಾಗ ಅದು ರಂಗಪಠ್ಯವಾಗುತ್ತದೆ. ಅಲ್ಲಿ ಆತ ತೆಗೆದುಕೊಳ್ಳುವ ಸ್ವಾತಂತ್ಯ ಎಷ್ಟು ಎಂಬುದು ಚರ್ಚಾಸ್ಪದ ಸಂಗತಿ. 


ಎರಡೂ ನಾಟಗಳನ್ನು ನೋಡಿದ ಮೇಲೆ ಅನ್ನಿಸಿದ್ದು.  ಓದು ಕೊಟ್ಟ ಅನುಭವವನ್ನು ಪ್ರದರ್ಶನಗಳು ಕೊಡಲು ಸಾಧ್ಯವಾಗಿಲ್ಲ ಎಂಬುದು
ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗ್ಲೀಷಿನಲ್ಲಿ ಏಕಕಾಲದಲ್ಲಿ ಬಹುಮುಖ್ಯ ರಂಗತಂಡಗಳು ಅದನ್ನು ರಂಗಕ್ಕೆ ತಂದಾಗ ಅದರ ಬಗ್ಗೆ ಚರ್ಚೆಯಾಗಬೇಕಾಗಿತ್ತು. ಅದಾಗಲಿಲ್ಲ ಯಾಕೆ? ಕಾರ್ನಾಡರು ತಮ್ಮ ಕೊನೆಗಾಲದ ದಿನಗಳಲ್ಲಿ ಎದುರಿಸಿದ ಪ್ರತಿರೊಧ ಅವರು ಸತ್ತ ಮೇಲೆಯೂ ಮುಂದುವರಿದಿದೆಯೇ?
 ಇವತ್ತು [ನವೆಂಬರ್ ೫] ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ.]


·