Friday, July 11, 2008

..........ಮತ್ತೆ ಜಾರಿದಳು

ಪದ್ಮಪ್ರಿಯಳ ಆತ್ಮಹತ್ಯೆಕೊಲೆ ಇರಬಹುದೆ? ಹಾಗೆ ಗುಮಾನಿ ಪಡಲು ಸಾಕಷ್ಟು ಕಾರಣಗಳಿವೆ. ಒಂದು ವೇಳೆ ಅದು ಆತ್ಮಹತ್ಯೆಯೇ ಆದರೂ ಅದು ವ್ಯವಸ್ಥಿತವಾಗಿ ನಡೆಸಿದ ಕೊಲೆ!

 ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ, ಮಾಧ್ಯಮ ಎಲ್ಲವೂ ಕೂಡ ಪುರುಷಪ್ರಧಾನ ಮೌಲ್ಯಗಳನ್ನು ಎತ್ತಿ ಹಿಡಿಯಲು ಟೊಂಕ ಕಟ್ಟಿ ನಿಂತಿವೆ. ಸ್ಸುಧಾ, ವಿಕ್ರಾಂತ ಕರ್ನಾಟಕದಂತ ಕೆಲವೇ ನಿಯತಕಾಲಿಕಗಳು ಮಾತ್ರ ಆದಷ್ಟು ಗಂಭೀರವಾದ ಲೇಖನಗಳನ್ನು ಪ್ರಕಟಿಸಿವೆ. ಡೆಕ್ಕನ್ ಹೆರಾಲ್ಡ್ ಹಿಂದು,ಪ್ರಜಾವಾಣಿ ದಿನಪತ್ರಿಕೆಗಳು ವ್ರತ್ತಿಪರತೆ ತೋರಿಸಿವೆ. ಟ್ಯಾಬ್ಲಾಯ್ಡ್ ಗಳೆಲ್ಲ ಗೋಸುಂಬೆಗಳು. ಅನುಕೂಲಕ್ಕೆ ತಕ್ಕಂತೆ ಯಾವ ಬಣ್ಣ ಬೇಕಾದರೂ ತಳೆಯಬಲ್ಲವು.

 ನನ್ನನ್ನು ತುಂಬಾ ಕಾಡಿದ್ದು, ಕನ್ನಡಪ್ರಭದ ’ಸಖಿ’ ಪುರವಣಿಯಲ್ಲಿ ಗಿರಿಶ್ ರಾವ್ ಬರೆದ ’ಮತ್ತೆ ಜಾರಿದಳು ಅಮ್ರತಮತಿ’ ಲೇಖನ ನನ್ನ ಹಾಗೆ ಹಲವಾರು ಮಂದಿಯನ್ನು ಈ ಲೇಖನ ಡಿಸ್ಟರ್ಬ್ ಮಾಡಿದೆ. ಲೇಖನದ ಆಶಯದ ಬಗ್ಗೆ ಅಂತಹ ತಕರಾರು ಇಲ್ಲ. ಒಬ್ಬ ಪುರುಷ ಯೋಚಿಸುವ ಧಾಟಿಯಲ್ಲೇ ಇದೆ ಅದು. ಆದರೆ ಶಿರ್ಷೀಕೆ.....? ’ಮತ್ತೆ ಜಾರಿದಳು’ ಅಂದ್ರೆ ಏನರ್ಥ? ಈಗಿರುವ ಸ್ಥಿತಿಯಿಂದ ಹೀನ ಸ್ಥಿತಿ ತಲುಪುವುದು. ಔನತ್ಯದಿಂದ ಪತನದೆಡೆಗೆ ಜಾರುವುದು.
ಪದ್ಮಪ್ರಿಯ ’ಗ್ರಹಸ್ವಾಮಿನಿ’ಯ ಪಟ್ಟದಿಂದ ಜಾರತ್ವದ ಕಡೆಗೆ ಜಾರಿ ಜಾರಿಣಿಯಾದಳೆ? ಆಕೆ ಜಾರಿಣೆಯಾದಳು ಎಂದು ಹೇಗೆ ಹೇಳುತ್ತಿರಿ? ಯಾವ ಆಧಾರ ಇದೆ? ’ನಾ ಮುಡಿದ ಮಲ್ಲಿಗೆ ಅವಳೊಂದು ಘಳಿಗೆ ಮುಡಿಯಲಿ’ ಎಂದು ಹಾರೈಸಿದರೆ ಆಕೆ ಸತೀಮಣಿ ಆತ ರಸಿಕ. ಪೌರುಷವಂತ. ಆಕೆಯ ಮನಸ್ಸು ಸ್ವಲ್ಪ ಚಂಚಲಗೊಂಡರೂ ಅವಳು ಕಳಂಕಿನಿ! ಸಿತಾಮಾತೆಯನ್ನು ಕೂಡ ’ಕಳಂಕಿನಿ’ ಎಂದು ಕರೆದವರಿದ್ರು. ಗರ್ಬಿಣಿಯನ್ನು ಕಾಡಿಗೆ ಅಟ್ಟಿ ಅಲ್ಲಿ ಮಕ್ಕಳನ್ನು ಹಡೆದು ಮತ್ತೆ ನಾಡಿಗೆ ಹಿಂದಿರುವಾಗಲೂ ಮತ್ತೊಮ್ಮೆ ಅಗ್ನಿಪರೀಕ್ಷೆ. ಅವಮಾನದಿಂದ ಬೆಂದು ಆಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಉತ್ತರಪ್ರದೇಶದಲ್ಲಿರುವ ’ಸೀತಾಮಡಿ’ ಎಂಬ ಈ ಜಾಗವನ್ನು ನಾನು ನೋಡಿದ್ದೇನೆ. ಅದು ಹಿಂದೆ ವಿಶಾಲವಾದ ಕೆರೆಯಾಗಿದ್ದಿರಬೇಕು. ಕೆರೆಯ ಮಧ್ಯೆ ಸೀತೆಯ ದೇವಸ್ಥಾನವನ್ನು ನಿರ್ಮಿಸಲಾಗಿದೆ. ದೇವಸ್ಥಾನಕ್ಕೆ ಇಳಿದು ಹೋಗಬೇಕು. ಜನವಸತಿಯಿಲ್ಲದ ಆ ಭಾಗದಲ್ಲಿ ಅಪಾರ ಸಂಖ್ಯೆಯ ನವಿಲುಗಳಿವೆ. ಆ ಜಾಗ ನೋಡಿದರೆ ಸೀತೆಕೆರೆಗೆ ಹಾರಿ ಆತ್ಮಹತ್ಯೆಮಾದಿಕೊಂಡಿರಬೇಕು ಆನ್ನಿಸುತ್ತದೆ. ಮಾನಕ್ಕೆ ಅಂಜುವವರು ಮಾನಿನಿಯರು ತಾನೆ? ಭಯವಾಗುತ್ತಿದೆ ಗಂಡಂದಿರ ಬಗ್ಗೆ.

ಗಂಡಸರಿಗೆ ಹೆಂಗಸರ ಬಗ್ಗೆ ಆಕರ್ಷಣೆ ಇದೆ; ಕುತೂಹಲ ಇದೆ; ಮೋಹ ಇದೆ. ಆದರೆ ಕಾಳಜಿ ಇಲ್ಲ. ಅದು ಅವರ ಜೀನ್ಸ್ ನಲ್ಲಿ ಪ್ರೋಗ್ರಾಮ್ ಅಗಿಲ್ಲ. ಆಕರ್ಷಣೆ, ಕುತೂಹಲ’ ಮೋಹ ತಗ್ಗಿದ ಮೇಲೆ ಉಳಿಯುವುದೇನು? ಏನೂ ಇಲ್ಲ. ಎಲ್ಲಾ ಉಪಭೋಗ ವಸ್ತುಗಳಂತೆ ಆಕೆಯೂ ಒಂದು. ಅದು ಒಂದು ದಿನ ಹಳೆಯದಾಗುತ್ತದೆ. ಮೂಲೆ ಸೇರುತ್ತದೆ.

 ಬಹುತೇಕ ಎಲ್ಲಾ ಹೆಂಡತಿಯರಿಗೆ ಗಂಡನ ಬಗ್ಗೆ ಅಸಮಾಧಾನ ಇದ್ದೇ ಇರುತ್ತದೆ. ಯಾಕೆಂದರೆ ಪುರುಷರು ಕುಟುಂಬದ ವಿಚಾರದಲ್ಲಿ ಮೂಲತ: ಆಲಸಿಗರೂ. ಬೇಜವಾಬ್ದಾರಿಗಳೂ ಆಗಿರುತ್ತಾರೆ. ಅದರೆ ಅದಕ್ಕೊಂದು ಮಿತಿ ಅನ್ನುವುದು ಇರಬೇಕಲ್ಲ. ಆ ಮಿತಿ ದಾಟಿದಾಗ ಆಕೆ ಪ್ಯಾರಲಲ್ ಐಡೆಂಟಿಟಿಯನ್ನು ಹುಡುಕುವ ಪ್ರಯತ್ನ ಮಾಡುತ್ತಾಳೆ. ಗಂಡನ ಯಶಸ್ಸಿನ ಆರಮನೆಗೆ ಎಷ್ಟು ದಿನ ಮೆಟ್ಟಲಾಗಿರಲು ಸಾಧ್ಯ? ನಿಮ್ಮ ’ಅಹಂ’ ತಣಿಸಿಕೊಳ್ಳುವುದಕ್ಕಾಗಿ ದುಡಿಯುತ್ತೀರಿ...ದುಡ್ಡು ಗುಡ್ಡೆ ಹಾಕಿಕೊಳ್ಳುತ್ತೀರಿ....ಸ್ಥಾನ ಮಾನ ಪಡೆಯುತ್ತೀರಿ. ಅದನ್ನೆಲ್ಲ ಕಾಪಾಡುವ, ಕಾವಲುಗಾರಳೇ ಮಡದಿ ? ಇತ್ತೀಚೆಗಿನ ವಿದ್ಯಮಾನಗಳನ್ನು ನೋಡುತ್ತಿದ್ದರೆ ಮದುವೆಯೆಂಬ ಕಾನ್ಸೆಪ್ಟ್ ಬಗ್ಗೆಯೇ ಭಯವಾಗುತ್ತಿದೆ.

 ಹೌದು ಸ್ವಾಮಿ, ನಾವು ಅಮ್ರತಮತಿಯ ಹಾದಿಯಲ್ಲಿದ್ದೇವೆ. ನೀವ್ಯಾಕೆ ಯಶೋಧರರಾಗಬಾರದು? ಮಾರಿದತ್ತರಾಗುತ್ತೀರೇಕೆ? ಯಶೋಧರ ಚರಿತೆ’ ಯಲ್ಲಿ ಆತನೂ ಬದಲಾಗುತ್ತಾನೆ. ನೀವ್ಯಾಕೆ ಬದಲಾಗಬಾರದು? ;ತನಗೆ ಸಿಗಲಾರದ್ದು ಯರಿಗೂ ಸಿಗಬಾರದು’ ಎಂದು ಯಾಕೆ ಕೊಲೆ ಮಾಡುತ್ತೀರಿ? ಅಸಿಡ್ ಹಾಕುತ್ತೀರಿ?ಪ್ರತಿ ಪುರುಷನ ಅಂತರಂಗದಲ್ಲಿ ಒಬ್ಬ ’ಜಾರ ಕ್ರ್‍ಅಷ್ಣ’ನಿರುತ್ತಾನೆ ಹಾಗೆಯೇ ಪ್ರತಿ ಸ್ತ್ರಿಯ ಅಂತರಂಗದಲ್ಲಿ ’ಅಮ್ರತಮತಿ’ ಇರುತ್ತಾಳೆ. ಅದು ಇರುವುದೆಲ್ಲವ ಬಿಟ್ಟು ಇರದುದರೆಡೆಗಿನ ತುಡಿತ. ಆದರೆ ’ಸಂಯಮ’ ಎಂಬುದು ಎಲ್ಲರನ್ನೂ ಹದ್ದುಬಸ್ತಿನಲ್ಲಿಡುತ್ತದೆ; ಕಾಪಾಡುತ್ತದೆ: ಕಾಪಾಡಬೇಕು. ಅದು ನಾಗರಿಕ ಸಮಾಜದ ಲಕ್ಷಣ.

1 comments:

chetana said...

ನಾನು ಇದನ್ನೆಲ್ಲಿ ಚರ್ಚಿಸಲಿ ಅಂತ ಹುಡುಕುತ್ತಿದ್ದೆ. ನಿಮ್ಮ ಪೋಸ್ಟ್ ಕೈಬೀಸಿ ಕರೆಯಿತು.
ಅಮೃತ ಮತಿ ‘ಜಾರ’ಲಿಲ್ಲ. ಹಾಗೆ ಹೇಳೋದನ್ನು ನಾನು ಖಂಡಿತ ಒಪ್ಪೋದಿಲ್ಲ. ನೀವು ಹೇಳಿದಂತೆ ಲೇಖನದ ಹೂರಣ-ಆಶಯ ತಕ್ಕಮಟ್ಟಿಗೆ ಕನ್ವಿನ್ಸ್ ಆಗುವ ಹಾಗಿತ್ತಾದರೂ ‘ಏನೋ, ಹೆಣ್ಮಕ್ಕಳೇ ಅಡ್ಜಸ್ಟ್ ಆಗಿಕೊಂಡು ಹೋಗ್ಬೇಕು’ ಅನ್ನುವ ಧಾಟಿಯಲ್ಲಿತ್ತು. ತನ್ನನ್ನು ‘ಪ್ರೀತಿಸುವ’, ‘ಗೌರವಿಸುವ’ ಗಂಡಿಗಾಗಿ ಹೆಣ್ಣೂ ತನ್ನ ಇಡಿಯ ಜೀವನವನ್ನ, ಸ್ವಂತಿಕೆ- ಸ್ವಾಭಿಮಾನಗಳನ್ನೂ ಧಾರೆಯೆರೀತಾಳೆ. ಅದೇ ಹಾಗೊಮ್ಮೆ ಅವನಿಂದ ಅವಮಾನಿತಳಾದ್ರೆ, ತಾನು ನೆಗ್ಲಿಜೆನ್ಸಿಗೆ ಒಳಗಾಗ್ತಿದೀನಿ ಅನಿಸಿಬಿಟ್ರೆ ಎಷ್ಟರಮಟ್ಟಿಗೆ ಬರಬಾದ್ ಆಗಬಹುದೋ ಅಷ್ಟೂ ಆಗಿ ತನ್ನ ದಕ್ಕದ ಪ್ರೀತಿಗೆ ತಾನೇ ಶಿಕ್ಷೆ ಕೊಟ್ಕೊಳ್ತಾಳೆ.
ಹೇಗೇ ಆದರೂ ನೋವು ಹೆಣ್ಣಿಗೇ ತಾನೆ? ಜೊತೆಗೆ ಕೆಟ್ಟ ಕೆಟ್ಟ ಬಿರುದುಗಳ ಹಣೆಪಟ್ಟಿ ಬೇರೆ!

ಇರಲಿ.
ಲೇಖನಕ್ಕೆ ಧನ್ಯವಾದ.

- ಚೇತನಾ ತೀರ್ಥಹಳ್ಳಿ