Saturday, March 22, 2008

’ಹೋಗು ದಕ್ಷನ ಮಗಳೇ’

ಅವಳ ಹೆಸರು ದಾಕ್ಷಾಯಿಣಿ.ತನ್ನ ಹೆಸರಿನ ಬಗ್ಗೆ ಅವಳಿಗೆ ವಿಪರಿತ ಮೋಹ ತನ್ನನು ಪರಿಚಯಿಸಿಕೊಳ್ಳುವಾಗಲೆಲ್ಲ ಹೆಚ್.ಎಸ್.ಶಿವಪ್ರಕಾಶ್ ಅವರ

’ಹೋಗು ದಕ್ಷನ ಮಗಳೇ
ನೀನು ತಿರುಗಿ ಬರುವೆ ಅಂತ
ಕರಗದೆ ಕಾಯುತ್ತವೆ ಈ ನೂರು ಮಂಜಿನ ಬೆಟ್ಟ
ಅಲ್ಲಿ ಕೊರೆವ ಗವಿ ಕತ್ತಲಿನಲ್ಲಿ
ಅರಳುತ್ತಲೇ ಇರುತ್ತವೆ ನೀಲಿ ಮಂಜು ತಾವರೆ
ಹೋಗು ದಕ್ಷನ ಮಗಳೆ...ಕೈಯ ಕೊಳ್ಳಿ ಮಾಡಿ
 ಜೀವದೆಣ್ಣೆ ಬತ್ತಿ ದೀಪಗಳ
ಉರಿಸುತ್ತ ಕಣ್ಣಲ್ಲಿ ಸುತ್ತ
ನಿನ್ನ ಬರವಿನ ಹಗಲು ಇರುಳಿನ
 ಗೆಜ್ಜೆಯುಲಿವಿಗೆ ಹೆಜ್ಜೆಗಳನಿಕ್ಕುತ್ತ......
ಹೊಟ್ಟೆ ಎದೆಗಳ ಡೊಳ್ಳು ಬಾರಿಸುತ
ಪಾತಾಳ ಮೆಟ್ಟಿ, ಗೌರಿಶಂಕರ ನೆತ್ತಿ ನಡುಗುವ ಹಾಗೆ....’

ಎಂದು ಏರು ಧ್ವನಿಯಲ್ಲಿ ಅಭಿನಯಿಸಿ ಹೇಳುತ್ತಿದ್ದಳು. ಎದುರಿಗಿದ್ದವರು ಒಂಥರ ಖುಶಿಯಾಗಿ ಬಹುಬೇಗನೆ ಆಪ್ತರಾಗಿಬಿಡುತ್ತಿದ್ದರು. ಸದಾ ಜೀವಂತಿಕೆಯ ಖನಿ ಅವಳು.

ರಾತ್ರಿ ಎಷ್ಟೇ ಹೊತ್ತಿಗೆ ಮಲಗಿದರೂ ಬೆಳಿಗ್ಗೆ ಕರಾರುವಕ್ಕಾಗಿ ಐದು ಗಂಟೆಗೆ ಎದ್ದುಬಿಡುತ್ತಾಳೆ. ಐದೂವರೆಗೆ ಶೂ ಹಾಕಿ ಬ್ರಿಕ್ ವಾಕ್ ಹೊದ್ರೆ ಐದುಮುಕ್ಕಲಿಗೆ ಯೋಗ ಕ್ಲಾಸ್ ಬಾಗಿಲಲ್ಲಿ ಹಾಜರು. ಮುಕ್ಕಾಲು ಘಂಟೆ ಪ್ರಾಣಾಯಾಮ, ಸೂರ್ಯನಮಸ್ಕಾರ, ಗುರುವಂದನೆ. ಇನ್ನು ಮುಕ್ಕಾಲು ಘಂಟೆ ಯೋಗ. ಏಳುಮುಕ್ಕಾಲು ಘಂಟೆಗೆ ಹಾಲು ತರಕಾರಿ ಹಿಡಿದು ಮನೆ ಮೆಟ್ಟಿಲು ಹತ್ತಿ ಸೀದಾ ಅಡುಗೆ ಮನೆಗೆ. ೮ ಘಂಟೆಗೆ ಬಲಗೈಯಲೊಂದು ಶುಗರ್ ಲೆಸ್ ಟೀ ಕಪ್, ಎಡಗೈಯಲೊಂದು ವಿದ್ ಶುಗರ್ ಟೀ ಕಪ್ ಹಿಡಿದು ಹಾಲ್ ಪ್ರವೇಶ. ಶುಗರ್ ಲೆಸ್ ಅವನಿಗೆ ದಾಟಿಸಿ ಐದು ನಿಮಿಶದಲ್ಲಿ ಪೇಪರ್ ಗಳ ಮೇಲೆ ಕಣ್ಣಾಡಿಸಿ ಅಡುಗೆಮನೆಗೆ ರೀ ಎಂಟ್ರಿ.ಮೂರು ಒಲೆಯ ಗ್ಯಾಸ್ ಸ್ಟೌನಲ್ಲಿ ಕೊತ ಕೊತ ಕುದಿತ. ತರಕಾರಿಗಳ ಮಾರಣ ಹೋಮ. ಕಾಲಲ್ಲಿ ಚಕ್ರ. ಮಗನ ಹಾಸುಗೆಯೆಡೆಗೊಮ್ಮೆ; ’ಪುಟ್ಟಾ ಏಳು’ ಉಲಿತ. ಬಾತ್ ರೂಮಿಗೆ ಚುಕ್ ಬುಕ್ ರೈಲ್. ಯುನಿಫಾರ್ಮ್ ಗೆ ಇಸ್ತ್ರಿ ಪೆಟ್ಟಿಗೆಯ ಜಾರುಗುಪ್ಪೆ. ಬ್ಯಾಗ್ ಹುಡುಕಾಟ. ಡಬ್ಬ ತಯಾರಿ. ಗದರಿಕೆಯ ಕೈತುತ್ತು.ಒಂಬತ್ತಕ್ಕೆ ಸ್ಕೂಲ್ ವ್ಯಾನ್ ಗೆ ಟಾಟಾ ಹೇಳಿ ಸೋಫಾದಲ್ಲೊಮ್ಮೆ ಕುಕ್ಕುರು ಬಡಿದು ಇನ್ನೊಮ್ಮೆ ಪೇಪರಿನೆಡೆಗೆ ಸ್ಥೂಲ ನೋಟ.ರಿಂಗುಣಿಸುವ ಪೋನುಗಳಿಗೆ ಚುಟುಕು ಉತ್ತರ.ಅವನಾಗ ವಾಕ್ ಮುಗಿಸಿ ಬಂದ. ’ಮಗ ಭೂಪ ಶಾಲೆಗೆ ಹೋದ್ನಾ’ ಟವಲ್ ಹೆಗಲ ಮೇಲೆ ಹಾಕ್ಕೊಂಡು ಬಚ್ಹಲು ಮನೆಗೆ ನಡೆದ.

’ಆಮೇಲೆ ’ಈ ಲೇಖನ ಓದಬೇಕು’ ಎನ್ನುತ್ತಲೆ ಅಡಿಗೆ ಮನೆಗೆ ಒಂದೇ ನೆಗೆತ. ಕಾಲಿಗೆ ಮತ್ತೆ ಚಕ್ರ. ’ತಿಂಡಿ ರೆಡಿ ಮಾಡಿ ಇಡು’ ಆಜ್ನಾಪಿಸುತ್ತಲೇ ದೇವರ ಕೋಣೆ ಹೊಕ್ಕವನ ಮೆಡಿಟೇಷನ್ ಆರಂಭ. ಇನ್ನು ಅರ್ದ ಘಂಟೆ ಜೀವಚ್ಛವ. ತಿಂಡಿ ಟೀ ಚಡ್ಡಿ,ಬನೀನು ಕರ್ಚಿಫ್ ಶರ್ಟ್ ಪ್ಯಾಂಟ್...ಸೇವೆ ಮುಂದುವರಿಕೆ....ಹೊರಗಿನಿಂದಲೇ ಸ್ವರ ತೂರಿ ಬಂತು ’ಚೆಕ್ಕ್ ಗೆ ಸಹಿ ಹಾಕಿದ್ದೇನೆ ದುಡ್ಡು ಬೇಕಿದ್ರೆ ತಗೋ’ ಆರ್ಥಿಕ ಸುಭದ್ರತೆಗೆ ಇದಕ್ಕಿಂತಹ ಉದಾಹರಣೆ ಬೇಕೆ?!ಒಂಬತ್ತುವರೆಯಾಯ್ತು; ಆತ ಭುರ್ರನೆ ಹಾರಿ ಹೋದ.

  ಮನೆ ಗೊಬ್ಬರದ ಗುಂಡಿ ಯಾರಾದ್ರು ಬಂದ್ರೆ...ಯಾರೂ ಬರುವುದಿಲ್ಲ ಆದ್ರೂ...ಬಂದ್ರೆ ಏನಾದ್ರು ಅಂದ್ಕೊಂಡ್ರೆ..ಅಂತ ಒಂಚೂರು ಆಚೀಚೆ ಸರಿಸಿ ಜೋಡಿಸಿಡುವುದರಲ್ಲಿ ಮಗ್ನ. ಕೆಲಸದಾಕೆ ಬಂದ ಸದ್ದು ಅಡುಗೆ ಮನೆಯ ಸಪ್ಪಳದಿಂದಲೇ ಕೇಳಿಬರುತ್ತಿತ್ತು. ಸಧ್ಯ ಬಂದ್ಲಲ್ಲ ಎನ್ನುತ್ತ ಹರಿಪ್ರಸಾದ್ ಚೌರಸಿಯ ಸಿದಿ ಹಾಕಿ ಟೀಪಾಯಿ ಮೇಲೆ ಕಾಲಿಟ್ಟು ಸೋಫಾಕ್ಕೆ ಒರಗಿ ಮೋಹನಮುರಳಿಯಲ್ಲಿ ಕರಗಿ ಹೋದಳು. ಹನ್ನೊಂದಕ್ಕೆ ನ್ಯೂಸ್ ಚಾನಲ್ ಅನ್ ಮಾಡಿದಳು...ಸ್ವಲ್ಪ ಹೊತ್ತದ ಮೇಲೆ ಚಾನಲ್ ಬದಲಾಯಿಸ್ತಾ ಹೋಗಿ ಮತ್ತೆ ತನ್ನ ಸುತ್ತ ಪೇಪರು ಹರವಿಕೊಂಡು ಅದರಲ್ಲೆ ಲೀನವಾದಳು.

ಹನ್ನೆರಡು ಕಳೆಯುತ್ತಿದ್ದಂತೆ ಅದೆಂತಹದೋ ಚಡಪಡಿಕೆ.ಜಗತ್ತಿಗೂ ತನಗೂ ಕೊಂಡಿ ತಪ್ಪಿದಂತೆ. ತನ್ನದಲ್ಲದ ಯಾರದೋ ಬದುಕನ್ನು ತಾನು ಬದುಕಿದಂತೆ. ನಿನ್ನೆಯ ಅನ್ನ ಸಾರು ತಿಂದು ಮತ್ತೆ ಚಾನಲ್ ಬದಲಾಯಿಸಿದಂತೆಲ್ಲ, ಬದುಕು ಇಷ್ಟಕ್ಕೇ ಮುಗಿದು ಹೋಗುತ್ತಿದೆಯೇನೋ ಎಂಬ ಭಾವ. ಕಣ್ಣಂಚಿನಲ್ಲಿ ನೀರಿನ ಕಟ್ಟೆ.
ನಾಲ್ಕೂವರೆಗೆ ಸ್ಕೂಲ್ ವ್ಯಾನ್ ಮನೆಯೆದುರು ನಿಂತಾಗ ಜೀವ ಚೈತನ್ಯವೇ ಉಕ್ಕಿ ಹರಿದ ಭಾವ.ತಲೆ ಮುಟ್ಟಿ ಕೆನ್ನೆ ತಟ್ಟಿ ’ಸ್ಕೂಲಲ್ಲಿ ಏನೇನ್ ಮಾಡಿದ್ಯೋ’. ಮತ್ತೆ ಮಗುತನ. ಕಾಲಿಗೆ ಚಕ್ರ. ಹಗಲು ರಾತ್ರಿ ಸಂಗಮಿಸುವ ಹೊತ್ತು. ಮಸುಕು ಕತ್ತಲೆ. ಜಗತ್ತೆಲ್ಲ ಅಳುತ್ತಿದೆ; ತಾನು ಒಂಟಿ ಎನ್ನುವ ಭಾವ. ಕೈ ರಿಮೋಟ್ ಒತ್ತುತ್ತಲೇ ಹೋಗುತ್ತದೆ. ಒಂಬತ್ತಕ್ಕೆ ಮತ್ತೆ ಕಾಲಿಗೆ ಚಕ್ರ.ಜೀವದುಸಿರಿನ ತಲೆ ಮೊಟಕಿ, ಕೆನ್ನೆ ತಟ್ಟಿ, ಸುಮ್ ಸುಮ್ನೆ ತಬ್ಬಿ, ಕಚಗುಳಿ ಇಟ್ಟು ’ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು...ನಿದ್ದೆ ಬರುವಳು ಹೊದ್ದು ಮಲಗು ಮಗುವೆ...ಜೋ..ಜೋ...’

ಹನ್ನೊಂದಕ್ಕೆ ಪುಸ್ತಕದ ರ್‍ಯಾಕಿನಲ್ಲಿ ಕವಿತೆ, ವಿಮರ್ಶೆ, ಪ್ರಬಂದಸಂಕಲನ,ಜೀವನಚರಿತ್ರೆಗಳ ಹುದುಕಾಟ ರೀಡಿಯೋದಲ್ಲಿ ಅರ್ ಜೆಗಳ ಮಾತಿನಬ್ಬರದ ನಡುವೆ ಕಿಶೋರಕುಮಾರನ ವಿಷಾಧಗೀತೆ. ಮೆಲ್ಲನೆ ಅವಳಾಳಕ್ಕೂ ಪ್ರಸರಣ.
ಹನ್ನೆರಡಕ್ಕೆ ಆತನ ಆಗಮನ. ಕಾಲಿಗೆ ಚಕ್ರವಿಲ್ಲ.ತಳ್ಳುಗಾಡಿಯ ಭಾವ. ಮಾಡಿದ್ದನ್ನು ಬಡಿಸುವಾಗ ಆತ ಆಪೀಸಿನ ಬಗ್ಗೆ ಏನೇನೊ ಹೇಳುತ್ತಿದ್ದಾನೆ;ಇವಳು ಹಾಸಿಗೆಗೆ ಬಂದು ಮೈ ಚೆಲ್ಲುತ್ತಾಳೆ. ಇನ್ನೊಂದು ದಿನ ಕಳೆಯಿತು.ಇನ್ನೆಷ್ಟು ನಾಳೆಗಳು ಉಳಿದಿವೆಯೋ ಎಂಬ ಚಿಂತೆಯಲ್ಲಿ ಅವಳ ಕಣ್ಣುಗಳು ಮತ್ತೆ ಜೋಡಿ ಕೊಳ. ದಿಂಬಿಗೆ ಕೆನ್ನೆಯೊತ್ತಿ ಸದ್ದಿಲ್ಲದ ಬಿಕ್ಕಳಿಕೆ.
ಕೌಟುಂಬಿಕ ಸಹಚರ್‍ಯ ಇಲ್ಲ.ಭಾವನಾತ್ಮಕ ಒಡನಾಟವಿಲ್ಲ. ದೈಹಿಕ ಸಾಂಗತ್ಯವಿಲ್ಲ. ಭಾವಸ್ಪಂದನವಿಲ್ಲ. ಮನುಸ್ಯ ಸಂಬಂಧಗಳ ಬಿಸುಪು ಇಲ್ಲ.ಇನ್ಯಾವ ಸಂಬಂಧ ಇವರನ್ನು ಒಟ್ಟಿಗೆ ಬಂಧಿಸಿದೆ? ಮಗುವಾ...? ಆರ್ಥಿಕ ಅವಲಂಬನೆಯಾ...?

ಈಗ ನನ್ನೆದುರು ಕುಳಿತಿದ್ದಾಳೆ. ಅವಳದು ಒಂದೇ ಪ್ರಶ್ನೆ- ’ನನಗೆ ಅವನು ಬೇಕಾ...?’
 ನನಗೆ ಗೊತ್ತಿಲ್ಲ. ಗೊತ್ತಿದ್ದ ಸಮಚಾರವೆಂದರೆ;ಅವರಿಬ್ಬರು ಗಂಡ ಹೆಂಡತಿ,ಪ್ರೀತಿಸಿ ಮದುವೆಯಾದವರು,ಜಗತ್ತನ್ನೆ ಗೆದ್ದಂತೆ ಹತ್ತು ವರ್ಷ ಜೊತೆಯಾಗಿ ಬದುಕಿದವರು. ಈಗ ಹೀಗೆ....ಯಾಕೆ ಹೀಗಾಯ್ತು?.... ಗೊತ್ತಿಲ್ಲ.
ನಿಮಗೆ ಗೊತ್ತಿದ್ದರೆ ತಿಳಿಸಿ...
ಅವಳೆಡೆಗೆಗೊಮ್ಮೆ ನೋಡಿ ಅವಳ ಇಷ್ಟದ ಕವನದ ಮುಂದಿನ ಸಾಲುಗಳನ್ನು ನಾನು ಮುಂದುವರಿಸಿದೆ

 ’ಹೋಗು ದಕ್ಷನ ಮಗಳೇ ದೇವಪುತ್ರಿಗೂ ಆಜೀವ ತಿರುಕನಿಗೂ
 ಯಾವ ಯಾತರ ನಂಟು?
 ಹೊತ್ತಾಯಿತು ಹೊರಡು ಕಟ್ಟಿಕೋ ನೆನಪಿನ ಗಂಟು
ಮುತ್ತುಗಳ ಸರನತ್ತು ಬೆಂಡೋಲೆ
ಅಪ್ಪುಗೆ ಸೋಕುಗಳ ಜರತಾರಿ ಸೀರೆ
ಕಟ್ಟಿಕೋ ಕಟ್ಟಿಕೋ ನೆನಪಿನ ಗಂಟು......’

ಆ ದಾಕ್ಷಾಯಣಿ ಯಜ್ನಕುಂಡದಲ್ಲಿ ದುಮುಕಿ ಪಾರ್ವತಿಯಾಗಿ ಮರುಹುಟ್ಟು ಪಡೆದು ಅದೇ ಶಿವನನ್ನು ಮದುವೆಯಾದಳು.ಈಕೆ ಶಿವೆಯಾಗಬೇಕೆ..? ಅವನು ಶಿವನಾಗದಿದ್ದರೂ.........ಹೇ.. ಅರ್ಧನಾರೀಶ್ವರ !

7 comments:

ಪುಚ್ಚಪ್ಪಾಡಿ said...

ಹೌದು ಸುರಗಿಯರೇ ಇಂದು ಹೆಚ್ಚಿನ ಜನರ ಬದುಕು ನೀವು ಹೇಳಿದಂತೆಯೇ ಆಗಿದೆ.ಅಲ್ಲೊಂದು ಭಾವನೆಗಳೆಂಬ ಲೋಕವೇ ಬತ್ತಿ ಹೊಗುತ್ತಿದೆ.
ಬ್ಲಾಗ್ ಚೆನ್ನಾಗಿದೆ.
ಇಂತಿ ಮಹೇಶ್ ಪುಚ್ಚಪ್ಪಾಡಿ

Guru said...

ನಮಸ್ಕಾರ ಸುರಗಿ, ನಿಮಗೊಂದು ಆಹ್ವಾನ ಪತ್ರಿಕೆ.

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.


ನಿಮ್ಮ ಬೆಂಗಳೂರುವಾಸಿ ಸ್ನೇಹಿತರಿಗೆ link forward ಮಾಡಿ ಕನ್ನಡದ ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಸಹಕರಿಸಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ಗುರು
-ಕನ್ನಡಸಾಹಿತ್ಯ.ಕಾಂ ಬಳಗ

prashant natu said...

wonderful....nimma lekhangalalli iruva aa olanota tumba hidastu

ಸಿಮೆಂಟು ಮರಳಿನ ಮಧ್ಯೆ said...

ಹರಿಯುವ ಬದುಕಿಗೆ ತಡೆಗೋಡೆ ನಾವೆ ಹಾಕಿಕೊಂಡು ಬಿಡುತ್ತೇವೆ..

ಎಲ್ಲವೂ ಹೀಗೆ ಇರುತ್ತದೆ..
ಬತ್ತಿ ಹೋದಂತಿದ್ದರೂ..
ಅಲ್ಲಿ ಹಸಿರನ್ನು ನಾವೇ ಚಿಗುರಿಸ ಬೇಕು..

ಯಾಕೆಂದರೆ ಇದು ನಮ್ಮ ಬದುಕು..

ನನ್ನಾಕೆಗೂ ಓದಿ ಹೇಳಿದೆ ಇಷ್ಟ ಪಟ್ಟಿದ್ದಾಳೆ...

ಥ್ಯಾಂಕ್ಸು ನಿಮಗೆ...

Srikanth Manjunath said...

ಗಂಡ ಮನೆ ಮಕ್ಕಳು ಗಡಿಯಾರದ ಮೂರು ಮುಳ್ಳುಗಳು ಒಂದಕ್ಕೊಂದು ಸಂಬಂಧವಿರುತ್ತದೆ..ಆದ್ರೆ ಒಂದು ಮುಂದೆ, ಒಂದು ಹಿಂದೆ ಸಾಗಿದರೆ ಸಮಯ...ಇಲ್ಲವೇ ಅಲ್ಲೇ ಸ್ತಬ್ಧ..ಜೀವನ ಚಕ್ರ ಉರುಳುತ್ತಲೇ, ಹೊರಳುತ್ತಲೇ ಸಾಗುತ್ತದೆ...ಸುಂದರ ಲೇಖನ ಉಷಾ ಮೇಡಂ...

Badarinath Palavalli said...

ಬದುಕೇ ಹಾಗೆ ಮೇಡಂ, ಎಲ್ಲಾ ಇದ್ದೂ ಏನೂ ಇರದ ಭಾವ. ವಿಭಿನ್ನ ಬರಹದ ಮೋಡಿ ವಿಶಿಷ್ಟವಾಗಿದೆ.

Anuradha said...

ಯಾವ ಸಂಬಂಧ ಒಟ್ಟಿಗೆ ಬಂಧಿಸಿದೆ ..ಗೊತ್ತಿಲ್ಲ ಉಷಾ ..!