ಅಡಿಕೆ ತೋಟಕ್ಕೆ ಗೊಬ್ಬರ ಖರೀದಿಗೆಂದು ಊರಿಗೆ ಹೋದವಳು ಇಂದು ತಿರುಗಿ ಬಂದೆ.
ಕಳೆದ ಸರ್ತಿ ರಾಸಾಯನಿಕ ಗೊಬ್ಬರ ಅಂದ್ರೆ, ಯೂರಿಯ, ಪೊಟಾಶ್, ರಾಕ್ ಫಾಸ್ಪೇಟ್ ಗಳನ್ನು ೧;೨;೩ರ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಹಾಕಿದ್ದೆ. ನಾನು ಸಾವಯವಕೃಷಿಯ ಪರವಾಗಿದ್ದರೂ ಕಳೆದ ಬಾರಿ ರಾಸಾಯನಿಕ ಹಾಕುವುದು ಅನಿವಾರ್ಯವಾಗಿತ್ತು. ಯಾಕೆಂದರೆ, ನಾನು ಖರೀದಿಸಿದ ಆ ತೋಟಕ್ಕೆ ಕಳೆದ ಹತ್ತು ವರ್ಷಗಳಿಂದ ಗೊಬ್ಬರ ಹಾಕಿರಲಿಲ್ಲವಂತೆ. ಹಾಗಾಗಿ ಮರಗಳಿಗೆ ಒಮ್ಮೆ ಚೈತನ್ಯ ತುಂಬಲು ರಾಸಾಯನಿಕ ಗೊಬ್ಬರ ಕೊಡಲೇ ಬೇಕಾಗಿತ್ತು.
ಭಾನುವಾರ ಬೆಳಿಗ್ಗೆ ತೋಟದ ಮನೆ ತಲುಪಿ, ತೋಟವೆಲ್ಲಾ ಸುತ್ತಾಡಿ, ಗಿಡಮರಗಳ ಮೈದಡವಿ, ತುಂಬಿ ಹರಿಯುವ ಕಪಿಲೆಯ ಭೊರ್ಗೆರೆತಕ್ಕೆ ಬೆರಗಾಗುತ್ತ ಮನೆ ತಲುಪಿದಾಗ ಶಿವಾನಂದ ಹಂಡೆ ತುಂಬ ಬಿಸಿ ನೀರು ಕಾಯಿಸಿ ಇಟ್ಟಿದ್ದ. ಸ್ನಾನ ಮಾಡಿ ಬರುವುದರೊಳಗೆ ಅವನ ಹೆಂಡ್ತಿ ರೇಖಾ ಮನೆಯನ್ನು ಚೊಕ್ಕಟ ಮಾಡಿ ಟೀಗೆ ನೀರಿಡುತ್ತಿದ್ದಳು
ಟೀ ಕುಡಿದು ಲೋಕಸಂಚಾರಕ್ಕಾಗಿ ಟಿ.ವಿ ಅನ್ ಮಾಡಿದಾಗ ಲಾರಿ ಹಾರ್ನ್ ಕೇಳಿಸಿತು. ದೂರದಲ್ಲಿ ಮಮ್ಮದೆಬ್ಯಾರಿಯ ಲಾರಿ ಕಾಣಿಸುತ್ತಾ ಗೇಟಿನೊಳಗೆ ನುಸುಳಿ ಅಂಗಳದೊಳಗೆ ಬಂದೇಬಿಟ್ಟಿತು. ೮೦ ಚೀಲ ಅಂದರೆ ೪ಟನ್ ಗೊಬ್ಬರವನ್ನು ಅವರದೇ ಜನ ಕೊಟ್ಟಿಗೆಯಲ್ಲಿ ನೀಟಾಗಿ ಜೋಡಿಸಿಟ್ಟರು. ಟೀ ಮಾಡಿ ಕೊಟ್ಟರೆ ’ರಂಜಾನ್ ತಿಂಗಳಲ್ವಾ.. ಹಾಗಾಗಿ ಉಪವಾಸದಲ್ಲಿದ್ದೇವೆ’ ಎಂದು ನಗುತ್ತಲೇ ನಿರಾಕರಿಸಿದರು.
ಮೀನು, ಬೇವಿನ ಹಿಂಡಿ ಮತ್ತು ಎಲುಬಿನ ಪುಡಿಯ ಈ ಸಾವಯವ ಗೊಬ್ಬರ ಅಡಿಕೆ,ಕೊಕ್ಕೊ ಮತ್ತು ತೆಂಗಿನ ಮರಕ್ಕೆ ಅತ್ಯುತ್ತಮ ಗೊಬ್ಬರ .ಭೂಮಿಯಲ್ಲಿ ಸಮೃದ್ಧವಾಗಿ ಎರೆಹುಳು ಉತ್ಪತ್ತಿಯಾಗುತ್ತದೆ. ಇಂಥ ಗೊಬ್ಬರವನ್ನು ಇದೇ ಮಮ್ಮದೆಬ್ಯಾರಿ ಆ ಊರಿನ ಹಲವಾರು ಮನೆಗಳಿಗೆ ಹಲವಾರು ವರ್ಷಗಳಿಂದ ಪೂರೈಸುತ್ತಿದ್ದರು.
ಗೊಬ್ಬರದ ಬೆಲೆ ೩೦ ಸಾವಿರ ರೂಪಾಯಿಗಳಲ್ಲಿ ೧೦ ಸಾವಿರ ರೂಪಾಯಿಗಳನ್ನು ಮೊದಲ ಅಡಿಕೆ ಕೊಯ್ಲಿನ ನಂತರ ಕೊಡುವುದಾಗಿ ಹೇಳಿದಾಗ ಮಮ್ಮದೆಬ್ಯಾರಿ ’ಆಯ್ತು ಅಕ್ಕಾ.ದುಡ್ಡು ಎಲ್ಲಿ ಹೊಗುತ್ತೆ ಬಿಡಿ. ನೀವು ಚೆನ್ನಾಗಿ ಕೃಷಿ ಮಾಡಿ’ ಎಂದು ಶುಭ ಹಾರೈಸಿ ಲಾರಿ ಸ್ಟಾರ್ಟ್ ಮಾಡಿದರು.
ಈ ಘಟನೆಯನ್ನು ಯಾಕೆ ಹೇಳುತ್ತಿದ್ದೇನೆಂದರೆ ಈ ಬ್ಯಾರಿಗಳು ನಮ್ಮ ಕರಾವಳಿ ಜಿಲ್ಲೆಯ ಆರ್ಥಿಕ ಸುಧಾರಣೆಯ ಕೊಂಡಿಗಳು. ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಮಳೆಗಾಲದಲ್ಲಿ ನೆರವು ನೀಡಿ ಫಸಲು ಬಂದ ಮೇಲೆ ಅದನ್ನು ಪಡೆದು ತಮ್ಮ ಸಾಲಕ್ಕೆ ವಜಾ ಮಾಡಿಕೊಳ್ಳುತ್ತಾರೆ. ನಮ್ಮ ಕರಾವಳಿಯ ಜನರು ಲೇವಾದೇವಿಗಾರರ ಬಡ್ಡಿಯ ವಿಷವರ್ತುಲದೊಳಗೆ ಸಿಕ್ಕಿ ಬೀಳದಿರಲು ಇದೂ ಒಂದು ಕಾರಣವಿರಬಹುದು.
ಜಾನಪದದಲ್ಲಿ ಬಳೆಗಾರ ಚೆನ್ನಯ್ಯ ಹೇಗೆ ಅಂಚೆಯಣ್ಣನ ಪಾತ್ರವನ್ನು ವಹಿಸುತ್ತಿದ್ದನೋ ಹಾಗೆಯೇ ಬ್ಯಾರಿಗಳು ಕರಾವಳಿಯಲ್ಲಿ ಸರಕು ಸಾಗಾಣಿಕೆಯ ಪಾತ್ರವನ್ನು ವಹಿಸುತ್ತಿದ್ದರು. ರುಚಿಕರವಾದ ಒಣಮೀನನ್ನು ಇಂದಿಗೂ ಹಳ್ಳಿ ಹಳ್ಳಿಗಳಿಗೆ ತಲಪಿಸುವವರು ಇವರೇ. ಸೇಕುಂಝ್ ಬ್ಯಾರಿ ತಂದು ಕೋಡುತ್ತಿದ್ದ ಓಲೆ ಬೆಲ್ಲದ ರುಚಿ ಇಂದು ಕೂಡ ನನ್ನ ನಾಲಗೆಯಲ್ಲಿದೆ. ನಮ್ಮೂರಿನಲ್ಲಿ ಈಗಲೂ ವ್ಯಾಪಾರಕ್ಕಾಗಿ ಬಂದ ಬ್ಯಾರಿಗಳಿದ್ದಾರೆ. ನಮ್ಮ ಅವರ ನಡುವಿನ ಸಂಬಂಧ,ವಿಸ್ವಾಸದಲ್ಲಿ ಬಹಳ ಬದಲಾವಣೆಯೇನು ಆದಂತಿಲ್ಲ.
ಎರಡ್ಮೂರು ದಶಕಗಳ ಹಿಂದಿನ ಘಟನಾವಳಿಗಳು ಇವು; ಪುತ್ತೂರಿಗೆ ವಯಾ ಪಂಜದ ಹಾದಿಯಲ್ಲಿ ಹೋದರೆ ಬೈತಡ್ಕ ಎಂಬ ಊರು ಸಿಗುತ್ತದೆ. ಅಲ್ಲಿನ ಸೇತುವೆ ದಾಟಿ, ಮೊದಲ ತಿರ್ಗಾಸಿನ ಬಲ ಬದಿಯಲ್ಲೊಂದು ಪಳ್ಳಿ[ಮಸೀದಿ] ಸಿಗುತ್ತದೆ. ’ಬೈತಡ್ಕ ಪಳ್ಳಿ’ ಎಂದೇ ಖ್ಯಾತಿಯನ್ನು ಪಡೆದಿರುವ ಆ ಮಸೀದಿ ತುಂಬಾ ಕಾರಣಿಕವಾದುದು ಎಂದುಸುತ್ತಮುತ್ತಲ ತಾಲೂಕಿನವರು ಹೇಳುತ್ತಿದ್ದರು. ಪುತ್ತೂರಿಗೆ ಹೋಗಿ ಬರುವ ಪ್ರತಿ ಬಸ್ಸು ಅಲ್ಲಿ ಒಂದರೆಗಳಿಗೆ ನಿಂತು ಅಥವಾ ನಿಧಾನಿಸಿ ಮುಂದಕ್ಕೆ ಸಾಗುತ್ತಿತ್ತು. ಜಾತಿ-ಮತ ಭೇದವಿಲ್ಲದೆ ಜನರು ಆ ಪಳ್ಳಿಯೆಡೆಗೆ ದುಡ್ಡನ್ನು ಕಿಟಿಕಿಯಿಂದ ಹಾಕಿ ಹರಕೆ ತೀರಿಸುತ್ತಿದ್ದರು.
ನನ್ನ ಅಜ್ಜಿಗೆ ಈ ಪಳ್ಳಿಯ ಮೇಲೆ ವಿಶೇಷ ನಂಬಿಕೆಯಿತ್ತು. ಆಕೆ ತುಂಬಾ ಕೋಳಿ ಸಾಕುತ್ತಿದ್ದಳು. ಚಳಿಗಾಲದಲ್ಲಿ ಸಹಜವಾಗಿ ಕೋಳಿಹೇನುಗಳಾಗುತ್ತಿದ್ದವು. ಬೈತಡ್ಕ ಪಳ್ಳಿಗೆ ಹರಕೆ ಹೇಳಿಕೊಂಡರೆ ಹೇನುಗಳೆಲ್ಲಾ ಮಂಗಮಾಯ ಎಂಬುದು ಭಕ್ತರ ನಂಬಿಕೆ.ನಾನು ಹತ್ತಾರು ವರ್ಷಗಳಿಂದ ಆ ದಾರಿಯಲ್ಲಿ ಹೊಗಿಲ್ಲ. ಬಹುಶಃ ಈಗ ಅಲ್ಲಿ ಬಸ್ಸು ನಿಲ್ಲಲಾರದು
ಹಾಗೆ ಭಾವಿಸಲು ಕಾರಣವಿದೆ. ಹುಟ್ಟಿದೂರಿನಿಂದ ದೂರವಿರುವ ನಾನು ಅಲ್ಲಿಯ ಆಗುಹೋಗುಗಳನ್ನು ತಿಳಿದುಕೊಳ್ಳುವ ಕಾರಣದಿಂದ ’ಸುದ್ದಿ ಬಿಡುಗಡೆ’ ಎಂಬ ಪತ್ರಿಕೆಯನ್ನು ತರಿಸುತ್ತೇನೆ. ಅದರಲ್ಲಿ ನಾಲ್ಕೈದಾದರು ಭಜರಂಗಿಗಳ ದರ್ಭಾರ್ ಇದ್ದೇ ಇರುತ್ತದೆ ಹೆಚ್ಚಾಗಿ ಅವರು ಮಾಡುವುದು ಪತ್ತೆದಾರಿಕೆ ಕೆಲಸವನ್ನು. ಒಂದು ಹಿಂದು ಯುವತಿ ಒಬ್ಬ ಯುವಕನೊಡನೆ ಆತ್ಮೀಯವಾಗಿ ಮಾತಾಡುವುದು ಕಂಡು ಬಂದರೆ ಆ ಯುವಕ ಯಾವ ಕೋಮಿನವನೆಂದು ಪತ್ತೆ ಹಚ್ಚುವುದು. ಅನ್ಯ ಕೋಮಿನವನೆಂದು ಗೊತ್ತಾದರೆ ಅವನಿಗೆ ಚೆನ್ನಾಗಿ ತದಕುವುದು. ತಾನೇನು ತಪ್ಪು ಮಾಡಿದೆನೆಂದು ಅವನು ಕಕ್ಕಾಬಿಕ್ಕಿಯಾಗುತ್ತಿರುವಾಗಲೇ ಅವನ ಶರ್ಟ್ ಹರಿದು ಕೆನ್ನೆ ಊದಿಕೊಂಡಿರುತ್ತದೆ.ದೂರದ ಊರಿನವರಾಗಿದ್ದರೆ ಅಲ್ಲಿಗೆ ಮೇಸೇಜ್ ಮುಟ್ಟಿಸುತ್ತಾರೆ. ಅಲ್ಲಿ ಅವರಿಗೆ ತಕ್ಕ ಪೂಜೆ ಅಲ್ಲಿಯ ಭಜರಂಗಿಗಳಿಂದ ಆಗುತ್ತದೆ. ಭಜರಂಗಿಗಳ ಇನ್ನೊಂದು ಕೆಲಸ; ದನ ಕಾಯುವುದು. ಎಲ್ಲಿಯಾದರು ಟ್ರಕ್ ಗಳಲ್ಲಿ ದನ ಕೊಂಡೊಯ್ಯುತ್ತಿರುವ ಸುದ್ದಿ ಸಿಕ್ಕಿದರೆ ಅಲ್ಲಿಗೆ ಹಾಜರು. ಬಡ ಸಾಬರು ಹಣ್ಣುಗಾಯಿ-ನೀರುಗಾಯಿ. ಈ ಸಣ್ಣ ಕಿಡಿ ಮುಂದೆ ಕೋಮುದಳ್ಳುರಿಯಾಗುತ್ತದೆ.
ಭಜರಂಗಿಗಳಿಗೆ ಗೊತ್ತಿಲ್ಲದಿರಬಹುದು; ಸಾಮೂಹಿಕವಾಗಿ ದನದ ಮಾಂಸ ತಿನ್ನುವುದನ್ನೇ ಒಂದು ಸಂಭ್ರಮವನ್ನಾಗಿಸಿ ಆಚರಿಸಿಕೊಳ್ಳುವ ವೈಚಾರಿಕ ಹಿಂದುಗಳು ನಮ್ಮ ನಡುವೆಯೇ ಇದ್ದಾರೆ. ಅವರನ್ನು ಯಾವ ಕೋಮಿಗೆ ಸೇರಿಸುತ್ತಿರಿ?
ಯಾವ ಧರ್ಮದಲ್ಲಿ ತನಗೆ ನೆಮ್ಮದಿ ಸಿಗುತ್ತದೆ; ಯಾವ ಆಹಾರವನ್ನು ತಿಂದರೆ ತನಗೆ ಹಿತ ಅನ್ನಿಸುತ್ತದೆ ಎಂಬುದು ವ್ಯಕ್ತಿಯ ವೆಯ್ಯಕ್ತಿಕ ಆಯ್ಕೆ. ಅದು ವೆಯ್ಯಕ್ತಿಕ ಮಟ್ಟದಲ್ಲೇ ಇದ್ದರೆ ಅದರಿಂದ ಯಾರಿಗೂ ಹಾನಿಯಿಲ್ಲ. ಅದು ಬಹಿರಂಗಗೊಂಡು ಸಾರ್ವತ್ರಿಕಗೊಂಡಾಗ ಘರ್ಷಣೆಗಳುಂಟಾಗುತ್ತವೆ. ಸಾಮಾಜಿಕ ನೆಮ್ಮದಿ ಕದಡುತ್ತದೆ.
UP Board Roll Number 2024: Search by Name,Admit Card upmsp.edu.in
-
UP Board Roll Number: Hello friends, once again you are very welcome to our
new post. Through today’s post, we will know in detail how you can download
t...
6 months ago
13 comments:
ಕೊಂಚ unconventional aagide ನಿಮ್ಮ ಬ್ಲಾಗ್. ನೀವು ಬರಹದ ಆಯ್ಕೆ ಹಾಗು ಅಭಿಪ್ರಾಯಗಳು ಕೂಡ.
ಇನ್ನು ಬಾಲ ಲೇಖಕ ಪ್ರತಾಪ ಸಿಂಹ ನ ಅಭಿಪ್ರಾಯಕ್ಕಿಂತ ಅದನ್ನು ಓದುತ್ತಿರುವ ಓದುಗರ ಬಗ್ಗೆ ನನ್ನ ಆತಂಕ.
ಈ ಫಾಸ್ಟ್ ಫುಡ್ ಯುಗದ ಓದುಗರು ಒಂದು ಥರ ಅನಾಥರು. ಇವರಿಗೆ ಯಾವುದನ್ನು ಓದಬೇಕು ಏಕೆ ಓದಬೇಕು ಅಂತ ಗೈಡ್ ಮಾಡುವವರು ಯಾರು ಈಗ ಬದುಕಿಲ್ಲ. ಒಂದು ಪಕ್ಕ ಫಾರ್ಮುಲ ಮೂವಿ ಥರ ಇರೋ ಪ್ರತಾಪ ನ ಕಾಲಂ ಗೆ ಇವರೆಲ್ಲ ಅಭಿಮಾನಿಗಳಾಗಿ ಬಿಟ್ಟಿದಾರೆ. ಇನ್ನು ಆತಂಕದ ವಿಚಾರ ಅಂದ್ರೆ ಮಾತಾಡುವಾಗ ಅವನ ಬರಹವನ್ನೇ ಉದಾಹರಿಸುತ್ತಾರೆ.
ಈ ಲಿಂಕ್ ಸ್ವಲ್ಪ ನೋಡಿ
http://www.orkut.co.in/Community.aspx?cmm=15200953
ಬಜರಂಗಿಗಳ ಬಗ್ಗೆ ಬರೆದು ಮುಗಿಯುವುದಿಲ್ಲ ಬಿಡಿ. ಅವರು ನಮ್ಮ ಸಮಾಜವನ್ನೇ ಹಾಳು ಮಾಡಿ, ಅವರಿಗೆ ಬೇಕಾದ ಚಡ್ಡಿ ಸಾಮ್ರಾಜ್ಯ ಸ್ತಾಪಿಸಲು ಹೊರಟಿದ್ದಾರೆ.
ಯಬ್ಬಾ... ನೀವು ತೋಟಕ್ಕೂ ಸೈ, ಟೆಕ್ನಾಲಜಿಗೂ ಜೈ....!!! ವಿಶಿಷ್ಟ ಮಾಹಿತಿಪೂರ್ಣ ಬ್ಲಾಗಿದು....
ಇರ್ಲಿ, ಇರ್ಲಿ... ಗೊಬ್ಬರ ಎಲ್ಲಾ ಬೇಕಾಗುತ್ತೆ, ಸಮಾಜಘಾತುಕರೆಲ್ಲಾ ಬಂದಾಗ ಅವರ ತಲೆ ಮೇಲೆ ಸುರಿಯಲು...
ಮಾನವೀಯ ಸಂಬಂಧಗಳ ನಡುವೆ ರಾಜಕೀಯ ಎಂಬುದು ಬಂದಾಗ, ಇಂಥದ್ದೆಲ್ಲಾ ಸಂಘರ್ಷ ನಡೆಯುತ್ತದೆ ಅಂತ ನನ್ನ ಅಭಿಪ್ರಾಯ.
ನೀವು ಬರೆದದ್ದು ಇಷ್ಟವಾಯ್ತು. ಸಧ್ಯಕ್ಕೆ ಅಷ್ಟೇ ಹೇಳಬಲ್ಲೆ.
upame chennaagide...baandhavyada hosa reetiyannu manojnavaagi parichayisiddiri. baraha chennaagide.
Balegara Channayya..is one of the best article I read. In coastal Karnataka, we are all lived with many other communities. We created Ali Bhuta, Bappa Byari and few other Muslim deities to protect us. We are stll celebrating such happenings. Currently few organizations communalising the society. Comunalism is not a answer for communalism. Taking out one eye is not a answer for taking out another eye. Utimately all become blinds and world become dark. From centuries these people never thought about untouchables and now suddenly, they feel 'they are our people'. What a shame!
Regards- Horanada Kannadiga
ಅವರೇ ಮಾಡಬೇಕಾದದ್ದು ಎನ್ನುವಷ್ಟು ನಿಯತ್ತಿನಿಂದ ಅವರು ಮಾಡಿಕೊಂಡು ಬರುತ್ತಿರುವ ಹಲವು ವಹಿವಾಟುಗಳು ದ.ಕ.ದ ಬ್ಯಾರಿಗಳಿಗೆ ಒಂದು ರೀತಿಯ indentity ಒದಗಿಸಿಕೊಟ್ಟಿವೆ. ನಾವೂ ಕೂಡ ನಿಷ್ಠೆಯಿಂದ ಅವರು ಮಾರುವ ಮೀನೇ ಅತ್ಯಂತ ಫ್ರೆಶ್ ಆಗಿರುತ್ತದೆ ಎಂದು ನಂಬಿಕೊಂಡು ಬಂದಿದ್ದೇವೆ. ಅವರ ಕಸುಬುಗಾರಿಕೆಯಲ್ಲಿ ನಮಗೆ ಇರುವ ನಂಬಿಕೆ, ಗೌರವ ಅದು.
uttama baraha nimma lekhana
bolimaganey sabru kandrey astu estana ninagey,
Post a Comment