Thursday, October 2, 2008

ನಿಮ್ಮ ಇಷ್ಟ ದೈವ ಯಾವುದು?


ರಾಜಸ್ತಾನದ ಜೋದ್ ಪುರದ ಚಾಮುಂಡಾ ದೇವಿಯ ಸನಿಧಿಯಲ್ಲಿ ಸಂಭವಿಸಿದ ದುರಂತವನ್ನು ಟೀವಿಯಲ್ಲಿ ನೋಡುತ್ತಲಿದ್ದೆ. ಅದಕ್ಕೆ ಕಾರಣಗಳನ್ನು ಮತ್ತು ಭಕ್ತರ ನಂಬಿಕೆಯ ಜಗತ್ತನ್ನು ಭೂತಕನ್ನಡಿಯಲ್ಲಿಟ್ಟು ವಿಮರ್ಶಿಸುವುದು ನನಗಿಷ್ಟವಿಲ್ಲ. ನನಗೆ ಅನ್ನಿಸಿದ್ದೇ ಬೇರೆ...!
ನಮ್ಮಲ್ಲಿ ಅಂದ್ರೆ ಹಿಂದುಗಳಲ್ಲಿ [ಬೇರೆ ದರ್ಮದ ದೇವರ ವಿಚಾರ ಇಲ್ಲಿ ತರುವುದು ಬೇಡ ಅಲ್ವಾ.. ನಮ್ಮದು, ನಮ್ಮವರು ಅಂದ್ರೆ ಸಲಿಗೆ ಜಾಸ್ತಿ ಎನೆಂದ್ರೂ ಸಹಿಸ್ಕೋತಾರೆ!.] ಮೂವತ್ತಮೂರು ಕೋಟಿ ದೇವತೆಗಳಿದ್ದಾರೆ. ಸಾಯಿಬಾಬಾ, ಚಿಕೂನುಗುನ್ಯಾದ ಕೀಲಮ್ಮ, ಈಗ ನಡೆದಾಡುವ; ಮುಂದೆ ದೇವರಾಗಬಹುದಾದ ದೇವಮಾನವರುಗಳು, ಹೀಗೆ ಅಯಾಯ ಕಾಲಕ್ಕೆ ಈ ಪಟ್ಟಿ ಪರಿಷ್ಕರಣೆಯಗುತ್ತಲೇ ಇರುತ್ತದೆ. ವಿರೋಧವನ್ನು ಕೂಡ ತನ್ನಲ್ಲಿ ಐಕ್ಯವಾಗಿಸಿಕೊಳ್ಳುವ ಅಥವಾ ಅಫೋಶನ ತೆಗೆದುಕೊಳ್ಳುವ ಇಲ್ಲವೇ ತನಗೆ ಬೇಕಾದಂತೆ ಪರಿವರ್ತಿಸಿಕೊಳ್ಳುವ ಆಗಾಧ ಶಕ್ತಿ ಹಿಂದು ಧರ್ಮಕ್ಕಿದೆ. ಹಿಂದು ಧರ್ಮದ ಕಟ್ಟಾ ವಿರೋಧಿಗಳಾದ ಚರ್ವಾಕರು,ಬೌದ್ಧರು, ಲಿಂಗಾಯಿತರು ಮತ್ತು ತಾಂತ್ರಿಕರನ್ನು ಇಂದು ಹಿಂದು ದರ್ಮದ ಭಾಗವೆಂಬಂತೆ ಚಿತ್ರಿಸಲಾಗುತ್ತದೆ.ಹಿಂದು ಧರ್ಮಕ್ಕೆ ಸಮಾನಂತರವಾಗಿ ಅಷ್ಟೇ ಪ್ರಭಲವಾಗಿದ್ದ ಮೌಖಿಕ ಸಾಹಿತ್ಯ ಹಾಗು ಜಾನಪದ ಪರಂಪರೆಯನ್ನೊಳಗೊಂಡ ಭಾರತಿಯ ಸಂಸ್ಕ್ರ್‍ಅತಿ ಅಕ್ಷರ ಬಲ್ಲವರಿಂದ ಮೂಲೆಗುಂಪಾಯಿತು. ಒಹ್, ವಿಷಯಾಂತರವಾಯಿತು ಅಲ್ವಾ, ಕ್ಷಮಿಸಿ.
ಮುವತ್ತಮೂರು ಕೋಟಿ ದೇವತೆಗಳು ಅನ್ತಿದ್ದೆ ಅಲ್ವಾ, ಇವರಲ್ಲಿ ಹೆಣ್ಣೆಷ್ಟು? ಗಂಡೆಷ್ಟು? ನನಗೆ ಗೊತ್ತಿಲ್ಲ. ಯಾರಿಗೆ ಯಾವ ದೇವರು/ದೇವತೆ ಯಾಕೆ ಇಷ್ಟವಾಗುತ್ತಾನೆ/ಳೆ ಅದೂ ಕೂಡ ಗೊತ್ತಿಲ್ಲ. ನಾನೇನೂ ಆಸ್ತಿಕಳಲ್ಲ. ಹಾಗಂತ ನಾಸ್ತಿಕಳೂ ಅಲ್ಲ. ಒಂದು ಕಾಲದಲ್ಲಿ ನೀಲಮೇಘಶ್ಯಾಮನಾದ ಕೃಷ್ಣ ನನ್ನ ಇಷ್ಟದೈವವಾಗಿದ್ದ. ರಾಧ-ಮಾಧವರ ಪ್ರೇಮ ನನ್ನ ಆದರ್ಶವಾಗಿತ್ತು. ಮುಂದೆ ದ್ರೌಪಧಿಯ ಸಖ, ದ್ವಾರಕೆಯ ಕೃಷ್ಣ ನನ್ನ ಆತ್ಮಬಂಧುವಾದ. ಆತನ ಕಿರುಬೆರಳು ಹಿಡಿದು ಅನೇಕ ಸಂಕಷ್ಟಗಳನ್ನು ಎದುರಿಸಿದ್ದೇನೆ. ಆದರೆ ಈಗ ಆತನೂ ನನ್ನ ಜತೆಯಲಿಲ್ಲ. ಈಗ ನನ್ನನ್ನು ಸಂಪೂರ್ಣ ಆವರಿಸಿಕೊಂಡಿರುವವನು ಶಿವ.
ಅಬ್ಬಾ! ಎಂತಹ ಪರಿಪೂರ್ಣ ವ್ಯಕ್ತಿತ್ವ ಶಿವನದು!! ತನ್ನ ದೇಹದ ಅರ್ಧ ಭಾಗವನ್ನೇ ಮಡದಿಗೆ ನೀಡಿ ಅರ್ಧನಾರೀಶ್ವರನಾದ ಪ್ರೇಮಿ ಆತ. ಆತನ ಕೌಟುಂಬಿಕ ಬದುಕು ಎಷ್ಟೊಂದು ವೈರುಧ್ಯತೆಗಳಿಂದ ಕೂಡಿದೆ.. ಆದರೂ ಅಲ್ಲಿ ಸಾಮರಸ್ಯವಿದೆ. ಪಾರ್ವತಿಯ ವಾಹನಹುಲಿ. ಹುಲಿಯ ಆಹಾರ ಶಿವನ ವಾಹನವಾದ ನಂದಿ. ಶಿವನ ಕೊರಳನ್ನಲಂಕರಿಸಿರುವ ಹಾವಿನ ಕಣ್ಣು ಗಣಪನ ವಾಹನವಾದ ಇಲಿಯ ಮೇಲಿರುತ್ತದೆ. ಸುಬ್ರಹ್ಮಣ್ಯನ ವಾಹನ ನವಿಲಿನ ಆಹಾರ ಶಿವನ ಕೊರಳಲ್ಲಿರುವ ಹಾವು. ಶಿವನ ಹಣೆಯಲ್ಲಿ ಸದಾ ಪ್ರಜ್ವಲಿಸುವ ಬೆಂಕಿಕಣ್ಣಿದೆ. ಆದರೆ ತಲೆಯಲ್ಲಿ ಬೆಂಕಿ ನಂದಿಸುವ ಗಂಗೆಯಿದ್ದಾಳೆ. ಸ್ವತ ಶಿವ ಬೂದಿಬಡುಕನಾದ ಶ್ಮಶಾನವಾಸಿ ತಿರುಕ ಆದರೆ ಪಾರ್ವತಿ ಸುರಸುಂದರಿಯಾದ ರಾಜಕುಮಾರಿ.ಆದರೂ ಶಿವನನ್ನು ಮೆಚ್ಚಿ ಮದುವೆಯಾದವಳು. ಡೊಳ್ಳು ಹೊಟ್ಟೆಯ ಆನೆ ಮುಖದ ಗಣೇಶ ಇಲಿ ಮೇಲೆ ಕೂತು ಸವಾರಿ ಮಾಡುವುದು ನೆನೆಸಿದರೇ ನಗು ಬರುತ್ತದೆ. ಇನ್ನು ಅವರ ಪರಿವಾರವೋ ಭೂತ ಪ್ರೇತಾದಿ ಗಣಗಳು.
ಸಂಸಾರದಲ್ಲಿ ಸಾಮರಸ್ಯ ಸಾಧಿಸುವುದು ಹೇಗೆ ಎಂಬುದನ್ನು ಶಿವ-ಶಿವೆಯರನ್ನು ನೋಡಿಯೇ ಕಲಿತುಕೊಳ್ಳಬೇಕು. ಆತನ ಪರಿವಾರ ನೋಡಿದರೇ ಗೊತ್ತಾಗುತ್ತದೆ. ಅತನೊಬ್ಬ ಕೃಷಿಕ. ಪಶುಪತಿನಾಥ ಎಂಬ ಹೆಸರು ಆತನಿಗೆ ಅನ್ವರ್ಥನಾಮ. ಇಂತಪ್ಪ ಪಶುಪತಿನಾಥನನ್ನು ಹುಡುಕಿಕೊಂಡು ನಾನು ಯಾವುದೋ ಟ್ರಾವಲ್ಸ್ ಹತ್ತಿ ಒಂಟಿಯಾಗಿ ನೇಪಾಳಕ್ಕೆ ಹೋಗಿದ್ದೆ. ಆದರೆ ಅಲ್ಲಿ ಪಶುಪತಿನಾಥನ ಪಕ್ಕದ ಗುಡಿಯಲ್ಲಿದ್ದ ಉನ್ಮತ್ತ ಬೈರವನನ್ನು ನೋಡಿ ದಿಗ್ಮೂಢಳಾಗಿ ನಿಂತಿದ್ದೆ. ಈಗ ಎಷ್ಟು ನೆನಪಿಸಿಕೊಂಡರೂ ಪಂಚಮುಖಿ ಪಶುಪತಿನಾಥನ ಮುಖ ಸ್ಪಷ್ಟವಾಗಿ ಗೊಚರಿಸದು. ಉನ್ಮತ್ತ ಬೈರವ ಮಾತ್ರ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿದೆ. ಇನ್ನೊಮ್ಮೆ ನೇಪಾಳಕ್ಕೆ ಹೋಗಿ ಪಶುಪತಿನಾಥ ಮತ್ತು ಶಕ್ತಿಪೀಠವನ್ನು ಒಟ್ಟಾಗಿ ನೋಡಬೇಕೆಂಬ ಬಯಕೆಯಿದೆ.
ಸ್ಥೀಯ ಧೀಃಶಕ್ತಿಯ ಬಗ್ಗೆ ನನಗೆ ಅಪಾರ ಭರವಸೆಯಿದೆ. ಅವಳು ಆಧಿಶಕ್ತಿ. ಸೃಷ್ಟಿಸುವ, ಪಾಲಿಸುವ ಮತ್ತು ಪೊರೆಯುವ ಸಾಮರ್ಥ್ಯ ಅವಳಿಗೆ ಮಾತ್ರ ಇದೆ. ಪುರುಷನಲ್ಲಿ ಅದು ಇಲ್ಲ. ಸಮಸ್ತ ಹಿಂದುಗಳ ಶ್ರದ್ಧಾ ಕೇಂದ್ರವಾದ ಕಾಶಿ ವಿಶ್ವನಾಥ, ಅಷ್ಟೈಶ್ವರ್ಯವನ್ನು ಬಯಸುವವರಿಗಾಗಿ ತಿರುಪತಿ ತಿಮ್ಮಪ್ಪ, ಹಾಗು ಸ್ತ್ರೀದ್ವೇಷಿ ಅಯ್ಯಪ್ಪ ಬಿಟ್ಟರೆ ಬೇರೆ ಪುರುಷ ದೇವರುಗಳು ಅಷ್ಟು ಜನಪ್ರಿಯರಾಗಿದ್ದು ನನಗೆ ಗೊತ್ತಿಲ್ಲ.ಹಾಗೆಯೇ ಅಲ್ಲಿ ಭಕ್ತರ ನೂಕು ನುಗ್ಗಾಟದಲ್ಲಿ ಸಾವು ಸಂಭವಿಸಿದ್ದು ನನಗೆ ನೆನಪಿಲ್ಲ
ಕುಂಬಮೇಳಕ್ಕೆ ಲಕ್ಷಾಂತರ ಜನಸೇರುತ್ತಾರೆ. ಅದು ಕೂಡ ಶಕ್ತಿ ಸ್ಥಳವೇ. ಗಂಗಾ, ಯಮುನಾ, ಸರಸ್ವತಿಯರ ಸಂಗಮ ಸ್ಥಳ ಅದು. ಅಲ್ಲಿ ಪ್ರತಿ ಬಾರಿಯೂ ಸಾವು ನೋವುಗಳಾಗುವುದು ಸಾಮಾನ್ಯ. ಇತ್ತೀಚೆಗೆ ಹಿಮಾಚಲಪ್ರದೇಶದ ನೈನಾದೇವಿ ಮಂದಿರದಲ್ಲಿ, ಅದಕ್ಕೂ ಹಿಂದೆ ಮಹಾರಾಷ್ಟ್ರದ ಮಾಂದ್ರಾದೇವಿ ದೇಗುಲದಲ್ಲಿ ಭಕ್ತರ ನೂಕುನುಗ್ಗಾಟದಲ್ಲಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು.
ಈಗ ನನಗೊಂದು ಕುತೂಹಲವಿದೆ; ಮಾತೃ ದೇವತೆಗಳಿಗೆ ಹೆಚ್ಚು ಭಕ್ತರಿರುತ್ತಾರೋ ಅಥವಾ ಗಂಡು ದೇವರುಗಳಿಗೋ...! ನನಗೆ ಶಿವ ಇಷ್ಟ. ಅದಕ್ಕೆ ನಾನು ಸ್ತ್ರೀಯಾಗಿರುವುದು ಕಾರಣವಾಗಿರಬಹುದು; ನನಗೆ ಗೊತ್ತಿಲ್ಲ. ನಿಮಗೆ ಯಾರು ಇಷ್ಟ? ಲೇಖನದ ಬಲ ಬದಿಯಲ್ಲಿರುವ ಕಾಲಂನಲ್ಲಿ ಓಟು ಮಾಡ್ತೀರಲ್ಲಾ.....?

3 comments:

ಜೋಮನ್ said...

ರಾಜಸ್ತಾನದ ದುರಂತದ ಕುರಿತು ಬರೆದಿದ್ದೀರಿ ಅಂತ ಇಡೀ ಲೇಖನವನ್ನು ಓದುತ್ತಾ ಹೋದೆ. ಆದರೆ ನೀವೇನೂ ಬರೆದಿಲ್ಲ. ಧರ್ಮ ಯಾಕೋ ತುಂಬಾ ಸೀರಿಯಸ್ ವಿಷಯ ಅಲ್ವಾ?. ಈ ಲೇಖನಕ್ಕಿಂತ ಚೆನ್ನಯ್ಯನಂತಹ ಬ್ಯಾರಿಯ ಕಥೆಯೇ ಹೆಚ್ಚು ಇಷ್ಟವಾಯಿತು. ಬರೆಯುತ್ತಲಿರಿ. ಓಟು ಹಾಕಿದ್ದೇನೆ.

Harish - ಹರೀಶ said...

ನಾನು ಪುರುಷ ಹಾಗಾಗಿ ಪುರುಷ ದೇವರು
ನಾನು ಪುರುಷ ಹಾಗಾಗಿ ಮಾತೃದೇವತೆ
ನಾನು ಸ್ತೀ ಹಾಗಾಗಿ ಮಾತೃದೇವತೆ
ನಾನು ಸ್ತ್ರೀ ಹಾಗಾಗಿ ಪುರುಷ ದೇವರು

ನಿಮ್ಮ ಪ್ರಶ್ನೆಯೇ ತಪ್ಪು ಎಂದೆನಿಸುತ್ತಿದೆ. ಹಾಗಾಗಿ ಏನನ್ನೂ ಹಾಕುವುದಿಲ್ಲ. ಯಾರ ಆರಾಧ್ಯ ದೈವ ಯಾರು ಎಂಬುದು ಅವರವರ ಇಷ್ಟ. ಅದು ಅವರವರ ಲಿಂಗಕ್ಕೆ ಸಂಬಂಧಿಸಿದ್ದಲ್ಲ. "ಹಾಗಾಗಿ" ಎಂಬ ಪದ ಪ್ರಶ್ನೆಯೇ ಏಳುವುದಿಲ್ಲ.

Shivaram H said...

ಆಸ್ತಿಕಳೂ ಅಲ್ಲ, ನಾಸ್ತಿಕಳೂ ಅಲ್ಲ ಎಂದು ಮೊದಲೇ ಹೇಳಿದಿರಿ,ಮೊದಲು ಕೃಷ್ಟಣ, ಇದೀಗೆ ಶಿವ ನನ್ನ ಇಷ್ಟದೈವ ಎನ್ನುವಿರಿ... ಗೊಂದಲದಲ್ಲಿದ್ದೀರಿ ದೇವರು ದೇವತೆಗಳ ಬಗ್ಗೆ ನೀವೂ ಇನ್ನೂ ತಿಳಿಯುವುದಿದೆ ಎನಿಸುತ್ತದೆ...