Friday, November 21, 2008

ಪುಸ್ತಕಗಳೊಂದಿಗೆ ನೆನಪುಗಳ ಮೆರವಣಿಗೆ

ಪುಸ್ತಕಗಳನ್ನು ಕೊಳ್ಳುವುದು ನನ್ನ ಹುಚ್ಚುಗಳಲ್ಲೊಂದು. ಎಲಿಮೆಂಟರಿ ಶಾಲೆಯಲ್ಲಿದ್ದಾಗ ಗೆಳತಿಯರ ಮನೆಯಿಂದ ಕಾಡಿ, ಬೇಡಿ ಚಂದಮಾಮ, ಬಾಲಮಿತ್ರಗಳನ್ನು ತರಿಸಿಕೊಂಡು ಓದುತ್ತಿದ್ದೆ. ಅವರಿವರ ಮನೆಯಿಂದ ಕಸ್ತೂರಿ, ಪ್ರಜಾಮತ, ಮಯೂರ, ತುಷಾರ ಮುಂತಾದವುಗಳನ್ನು ಬೇಡಿ ಪಡೆದು ಊಟ ತಿಂಡಿ ಬಿಟ್ಟು ಓದುತ್ತಿದ್ದೆ.

ಕ್ರಮೇಣ ಎನ್ ನರಸಿಂಹಯ್ಯನವರ ಪತ್ತೇದಾರಿ ಜಗತ್ತಿಗೆ ಹೊರಳಿಕೊಂಡೆ. ಆಮೇಲೆ ತ್ರಿವೇಣಿ, ಉಷಾನವರತ್ನರಾಮ್, ಕಾರಂತ, ಬೈರಪ್ಪ, ನಿರಂಜನ ಕುವೆಂಪು, ಬೇಂದ್ರೆ, ಅಡಿಗ, ಚಿತ್ತಾಲ,ಶರ್ಮ, ರಾಮಾನುಜನ್, ಶೆಲ್ಲಿ, ಕೀಟ್ಸ್, ಮ್ಯಾಥ್ಯು ಅರ್ನಾಲ್ಡ್, ಎಲಿಯೇಟ್, ಐ ಎ ರಿಚರ್ಡ್ಸ್ ......ವಿಶಾಲ ಜಗತ್ತು ತೆರೆದುಕೊಳ್ಳತೊಡಗಿತು.

ನನ್ನೂರಿನಲ್ಲಿ ಹೈಸ್ಕೂಲ್ ಇಲ್ಲ. ಸುತ್ತಮುತ್ತಲಿನ ಹಳ್ಳಿಗಳಲ್ಲೂ ಆಗ ಹೈಸ್ಕೂಲ್ ಇರಲಿಲ್ಲ. ಹಾಗಾಗಿ ಅವರಿವರ ಮನೆಯಲ್ಲಿದ್ದುಕೊಂಡು ಓದಿದವಳು ನಾನು. ರಜೆಯಲ್ಲಿ ಮನೆಗೆ ಹೋದಾಗ ಇಲ್ಲವೇ ಮನೆಯವರು ನಾನಿರುವಲ್ಲಿಗೆ ಬಂದಾಗ ’ಏನಾದರು ತಗೋ’ ಎಂದು ನನ್ನ ಕೈಲಿ ಒಂಚೂರು ದುಡ್ಡಿಡುತ್ತಿದ್ದರು. ಏನಾದರು ಎಂದರೆ ಅವರ ದೃಷ್ಟಿಯಲ್ಲಿ ತಿಂಡಿ. ನಾನದರಲ್ಲಿ ನಂಗೆ ಇಷ್ಟವಾದ ಪುಸ್ತಕ ಕೊಳ್ಳುತ್ತಿದ್ದೆ.

ಕಾಲೇಜು ಮೆಟ್ಟಲು ಹತ್ತಿದ ಮೇಲೆ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಹಣ ನನ್ನ ಕೈಸೇರುತ್ತಿತ್ತು. ಅದಕ್ಕೆ ಮುಖ್ಯ ಕಾರಣ ಸರಿಕರ ಎದುರು ತಮ್ಮ ಮಗಳು ಒಳ್ಳೊಳ್ಳೆಯ ಬಟ್ಟೆ ಹಾಕಿಕೊಂಡು ಓಡಾಡಲಿ ಎಂಬುದೇ ಆಗಿತ್ತು. ಹಾಗಂತ ಆಗಾಗ ನನ್ನ ಹೆತ್ತವರು ಹೇಳುತ್ತಿದ್ದರು. ಆದರೆ ನಾನು ಬಹುಪಾಲು ದುಡ್ಡನ್ನು ಪುಸ್ತಕ, ನಿಯತಕಾಲಿಕಗಳನ್ನು ಕೊಳ್ಳಲು ಉಪಯೋಗಿಸುತ್ತಿದ್ದೆ.

ಎಂ.ಎ ಮಾಡುವಾಗ ನನಗೆ ಜೊತೆಯಾದವನು ಶರು. ಒಂದೇ ಅಭಿರುಚಿಯ ನಾವು ಬಹು ಬೇಗ ಆತ್ಮೀಯ ಸ್ನೇಹಿತರಾದೆವು. ಕಮ್ಮಟಗಳು, ವಿಚಾರ ಸಂಕಿರಣಗಳು, ನಾಟಕ, ಸಿನೇಮಾ... ಎಲ್ಲೆಲ್ಲೂ ನಾವೇ. ಮುಂಜಾವಿನ ದಿವ್ಯ ಮೌನದಲ್ಲಿ ಗಂಗೋತ್ರಿಯ ಕ್ಯಾಂಪಸ್ಸಿನಲ್ಲಿ ಜಾಗಿಂಗ್. ಎಳೆ ಬಿಸಿಲಿಗೆ ಮೈಯೊಡ್ಡಿ ಬೆಚ್ಚನೆಯ ಚಹ ಹೀರಿದರೆ ಅದೇ ಆ ದಿನಕ್ಕೆ ಸುಂದರ ಮುನ್ನುಡಿ.

ಒಂದು ಒಳ್ಳೆಯ ಪುಸ್ತಕ ಓದಿದರೆ ಅದನ್ನು ಓದುವಂತೆ ಆತ ನನಗೆ ಸಲಹೆ ನೀಡುತ್ತಿದ್ದ. ತನಗೊಂದು ಪುಸ್ತಕ ಇಷ್ಟವಾದರೆ ತನ್ನ ಜೊತೆ ನನಗೂ ಒಂದು ಪ್ರತಿ ಖರೀದಿಸುತ್ತಿದ್ದ. ನಾನೂ ಕೂಡ ಅಷ್ಟೇ; ಯ್ಯಾವ್ಯಾವುದೋ ನೆಪ ಮಾಡಿಕೊಂಡು ಅವನಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದೆ.

ಬಿಸಿ ರಕ್ತದ ಆ ದಿನಗಳಲ್ಲಿ ಎಲ್ಲವನ್ನೂ ಪ್ರಶ್ನಿಸುವ, ಉಲ್ಲಂಘಿಸುವ ಮನೋಭಾವ. ಅದಕ್ಕೆ ಸಾಹಿತ್ಯದ ಹಿಮ್ಮೇಳ. ಆದರ್ಶಗಳ ಗುಂಗು. ಸಮಾಜ ಪರಿವರ್ತನೆಯ ಕನಸು. ಅದನ್ನವನು ಬದುಕಿನ ಭಾಗವಾಗಿಸಿಕೊಂಡ. ಪಶ್ಚಿಮ ಘಟ್ಟ ಶ್ರೇಣಿಯಲೆಲ್ಲೋ ಕರಗಿ ಹೋದ. ಆಮೇಲೆ ಅಂಥ ಗೆಳೆಯನನ್ನು ನನಗೆ ಪಡೆದುಕೊಳ್ಳಲಾಗಲಿಲ್ಲ.

ಇಂದು ನಾನು ಬೆಂಗಳೂರಲ್ಲಿದ್ದೇನೆ. ನನ್ನ ಮನೆಯಲ್ಲಿ ಒಳ್ಳೆಯ ಲೈಬ್ರರಿಯಿದೆ. ಅದರೆಡೆಗೆ ಕಣ್ಣು ಹಾಯಿಸಿದಾಗ ಮನಸ್ಸು ಮ್ಲಾನಗೊಳ್ಳುತ್ತದೆ. ಯಾಕೆಂದರೆ ಅದರಲ್ಲಿರುವ ಬಹಳಷ್ಟು ವೈಚಾರಿಕ ಪುಸ್ತಕಗಳು ಶರು ನನಗೆ ಉಡುಗೊರೆಯಾಗಿ ನೀಡಿದ್ದು. ಅದನ್ನು ಮತ್ತೆ ಓದುವುದಕ್ಕೆ ನನಗೆ ಒಂಥರ ಹಿಂಸೆ. ಅದರಲ್ಲಿ ಅತನ ಹಸ್ತಾಕ್ಷರವಿರುತ್ತದೆ. ನಲ್ಮೆಯ ಮಾತಿರುತ್ತದೆ. ಭರವಸೆಯ ನುಡಿಗಳಿರುತ್ತವೆ.

ಇಂದಿಗೂ ನಾನು ನನ್ನ ಆತ್ಮೀಯರಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುತ್ತೇನೆ. ಮದುವೆ, ಹುಟ್ಟುಹಬ್ಬ, ಉಪನಯನ ಮುಂತಾದ ಶುಭ ಸಂದರ್ಭಗಳಲ್ಲಂತೂ ಪುಸ್ತಕಗಳಿಗೇ ಆದ್ಯತೆ. ಓಶೋನ ’ಸ್ತ್ರೀ ಮುಕ್ತಿ-ಆಧುನಿಕ ದೃಷ್ಟಿಕೋನ’ ನಾನು ಮದುಮಗಳಿಗೆ ಖಾಯಂ ಆಗಿ ಕೊಡುವ ಪುಸ್ತಕ. ನೀನು ಹರಸುವುದಕ್ಕಾಗಿ ಕೊಡುತ್ತಿಲ್ಲ, ಸಂಸಾರ ಒಡೆಯುವುದಕ್ಕಾಗಿ ಆ ಪುಸ್ತಕ ಕೊಡುತ್ತಿ ಎಂದು ನನ್ನ ಪತಿ ದೇವರು ಆಗಾಗ ತಮಾಷೆ ಮಾಡುತ್ತಿರುತ್ತಾರೆ.

ಅರಮನೆ ಮೈದಾನದಲ್ಲಿ ನಡೆಯುವ ಪುಸ್ತಕ ಮೇಳಕ್ಕೆ ನಾನು ಪ್ರತಿ ವರ್ಷ ಹೋಗುತ್ತೇನೆ. ಒಂದಷ್ಟು ಪುಸ್ತಕಗಳನ್ನು ಖರೀದಿ ಮಾಡುತ್ತೇನೆ. ಅದರಲ್ಲಿ ಒಂದೆರಡು ಪುಸ್ತಕಗಳು ನನ್ನ ಆತ್ಮೀಯರಿಗೆ. ಈ ಮಹಾನಗರದಲ್ಲಿ ಶರುವನ್ನು ಹೋಲುವ ವ್ಯಕ್ತಿಯೊಬ್ಬ ಹಲವು ವರ್ಷಗಳ ಹಿಂದೆ ನನಗೆ ಪರಿಚಯವಾಗಿದ್ದ. ಅವನಿಗೂ ಯ್ಯಾವ್ಯಾವುದೋ ನೆಪವಿಟ್ಟುಕೊಂಡು ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದೆ. ನನ್ನ ಕಾಟ ತಡೆಯಲಾರದೆ ಏನೋ ಇತ್ತೀಚೆಗೆ ಆತನೂ ದೂರ್‍ಅವಾದ.

ಪುಸ್ತಕಗಳ ಜೋತೆಯೇ ಒಡನಾಡಿದ, ಅವುಗಳ ಜೊತೆಯೇ ಸಹಚರ್ಯ ಬೆಳೆಸಿಕೊಂಡ ನನಗೆ ಬೆಂಗಳೂರಿನಲ್ಲಿ ಪುಸ್ತಕಗಳೇ ಇಲ್ಲದ ಮನೆಗಳನ್ನು ಕಂಡಾಗ ಆಶ್ಚರ್ಯ ಆಗುತ್ತದೆ. ಅಲ್ಲಿ ವಾಸಿಸುವ ಜನರು ತಮ್ಮ ಬಿಡುವಿನ ವೇಳೆಯನ್ನು ಹೇಗೆ ಕಳೆಯುತ್ತಾರೆ? ಅವರು ತಮ್ಮೊಳಗಿನ ಆನಂದವನ್ನು ಹೇಗೆ ಕಂಡು ಕೊಳ್ಳುತ್ತಾರೆ?

ನಾವೇನೋ ಪುಸ್ತಕಗಳನ್ನು ಖರೀದಿಸುತ್ತೇವೆ. ಓದುತ್ತೇವೆ. ಉಡುಗೋರೆ ಕೊಡುತ್ತೇವೆ. ಆದರೆ ನಮ್ಮ ಮಕ್ಕಳು......?ಅವರಿಗೆ ಓದಿನ ಅಭಿರುಚಿಯನ್ನು ಚಿಕ್ಕಂದಿನಲ್ಲಿಯೇ ಕಲಿಸಬೇಕು.ಮಾಲ್ ಗಳಿಗೆ ಭೇಟಿ ಕೊಟ್ಟಂತೆಯೇ ಪುಸ್ತಕ ಮಳಿಗೆಗಳಿಗೂ ಭೇಟಿ ಕೊಡುತ್ತಿರಬೇಕು. ನಮ್ಮಲ್ಲಿ ಓದುವ ಹವ್ಯಾಸವಿದ್ದರೆ ನಮ್ಮ ಮಕ್ಕಳಲ್ಲಿಯೂ ಅದು ಮುಂದುವರಿಯುತ್ತದೆ. ಪುಸ್ತಕಗಳನ್ನು ಸಂಗಾತಿಯಾಗಿ ಒಪ್ಪಿಕೊಂಡವರು ಎಂದೂ ಒಂಟಿಯಲ್ಲ.

3 comments:

ಗುರುಬಾಳಿಗ said...

"ಡೆಲ್ಲಿ ಬುಕ್ ಫೇರ್" ಗೆ ಅಡ್ಡಾದಿಡ್ಡಿ ಆಸೆಯಿಂದ ಹೋಗಿ ಏನೂ ಸಿಗದೇ ಕೊನೆಗೆ ಸುಮ್ಮನೆ ಜೋಳ ತಿಂದು ಬಂದದ್ದು ನೆನಪಾಯಿತು.

sunaath said...

ನಾನೂ ಸಹ ನಿಮ್ಮಂತೆಯೇ ಚಂದಮಾಮಾದಿಂದ ಓದು ಪ್ರಾರಂಭಿಸಿ, ನರಸಿಂಹಯ್ಯ, ತ್ರಿವೇಣಿ...ditto!ಆದರೆ ಇಂಗ್ಲಿಶ್ ಸಾಹಿತ್ಯ ಮಾತ್ರ ಪತ್ತೇದಾರಿಗೆ ಸೀಮಿತ.
ಮಕ್ಕಳಿಗೆ ಓದುವ ಹುಚ್ಚು ಹಿಡಿಸುವದು ನಮ್ಮ ಕರ್ತವ್ಯವೇ ಆಗಿದೆ. ಆದರೆ ಈಗೀಗ ಉತ್ತಮ ಸಾಹಿತ್ಯದ ಬೆಳೆ ಮೊದಲಿನಂತಿಲ್ಲವೇನೊ?

ಪುಚ್ಚಪ್ಪಾಡಿ said...

ಇಂದು ಹಣದ ಹಿಂದೆ ಹೋಗುತ್ತಿರುವುದೇ ಓದುವ ಹವ್ಯಾಸ ಕಡಿಮೆಯಾಗಲು ಕಾರಣವಿರಬಹುದೇ.? ನನಗೂ ಪುಸ್ತಕವನ್ನು ಖರೀದಿಸಿ ಓದುವ ಹವ್ಯಾಸ.ಅದು ಇಂದೇ ಓದಿ ಮುಗಿಸುತ್ತೇನೆ ಎಂಬ ಹುಚ್ಚು ಭ್ರಮೆಯಿಂದಲ್ಲ. ಹಾಗೆ ಪುಸ್ತಕ ಕೊಳ್ಳುವಾಗ ನನ್ನನ್ನು ಅನೇಕ ಮಿತ್ರರು ಕರೆದಿದ್ದರು ' ನಿನಗೆ ಹುಚ್ಚು' ಅಂತ.