Tuesday, November 11, 2008

’ಬಿಂಬ’ದಿಂದ ’ಬಿಂಬ’ಕ್ಕೆ
ಅವನನ್ನು ನೋಡಿದ ಮೊದಲ ದಿನವೇ ಅವಳಿಗನ್ನಿಸಿತ್ತು ’ಇವನು, ಅವನನ್ನು ಹೋಲುತ್ತಾನಲ್ಲಾ..!’
ಅವಳು ನೋಡಿಯೇ ನೋಡಿದಳು... ಮತ್ತೆ ಮತ್ತೆ ನೋಡಿದಳು. ನೋಡುತ್ತಾ ಹೋದಳು.


ಒಂದು ದಿನ ಅವನು ತುಟಿಯಂಚಿನಲ್ಲಿ ನಕ್ಕ. ಇಲ್ಲಾ... ಅವನ ಕಣ್ಣು ನಕ್ಕಿತು. ಇವಳಲ್ಲಿ ಸಣ್ಣ ಕಂಪನ. ಅವನು ಬರುತ್ತಾನೆಂಬ ನಂಬಿಕೆಯಿಂದಲೇ ಕಲಾಕ್ಷೇತ್ರದಲ್ಲಿ ನಡೆಯುವ ಪ್ರತಿ ನಾಟಕಕ್ಕೂ ಅವಳು ಹಾಜರಾಗುತ್ತಿದ್ದಳು. ಅವನ ನಿರೀಕ್ಷೆಯೂ ಅದೇ ಆಗಿತ್ತು.

ಮನಸ್ಸಿನ ಮಾತು ಕಣ್ಣಲ್ಲಿ ಪ್ರತಿಪಲಿಸಲು ಕ್ಷಣಾರ್ಧ ಸಾಕು. ಆದರೆ ಬಾಯಿಗೆ ಬರಲು ವರ್ಷಗಳೇ ಹಿಡಿಯುತ್ತವೆ. ಬರದೆಯೂ ಹೋಗಬಹುದು. ಹಾಗೆ ಬಂದ ದಿನ ಇರುವ ಸಂಬಂಧ ಮತ್ತಷ್ಟು ಗಟ್ಟಿಯಾಗಬಹುದು, ಇಲ್ಲವೇ ಸಡಿಲವಾಗಲೂ ಬಹುದು. ಈ ಅರಿವೂ ಇಬ್ಬರಲ್ಲಿಯೂ ಇತ್ತು. ಹಾಗಾಗಿ ಆ ನವಿರು ಸಂಬಂಧ ಮೌನವಾಗಿ ಮುಂದುವರಿದಿತ್ತು.

ಆತನ ನಡವಳಿಕೆಯಲ್ಲಿ ಅವಳಿಗೆ ನಂಬಿಕೆ ಬೆಳೆಯುತ್ತಾ ಹೋಯಿತು. ಒಂದು ದಿನ ಆತ ’ಟೀ ಕುಡಿಯೋಣ ಬನ್ನಿ’ ಅಂದ. ಅವಳು ಸಮ್ಮತಿಸಿದಳು. ಇಬ್ಬರಿಗೂ ಲಿಂಬು ಟೀ ಇಷ್ಟ. ತಮ್ಮ ಅಭಿರುಚಿ ಒಂದೇ ಆಗಿರುವುದರ ಬಗ್ಗೆ ಪರಸ್ಪರ ಅಚ್ಚರಿ ವ್ಯಕ್ತಪಡಿಸಿಕೊಂಡರು.

ಅಮೇಲೆ ಅವರು ಅಲ್ಲಿ-ಇಲ್ಲಿ ಜೊತೆಯಾಗಿ ಕಾಣಿಸಿಕೊಳ್ಳತೊಡಗಿದರು. ಅದಕ್ಯಾರು ಅಂಥ ಮಹತ್ವ ಕೊಡಲಿಲ್ಲ. ಈ ಮಹಾನಗರದಲ್ಲಿ ಎಲ್ಲರೂ ಇಂಥಹದೊಂದು ಸಾಂಗತ್ಯಕ್ಕಾಗಿ ಹಾತೊರೆಯುವವರೇ ಆಗಿರುತ್ತಾರೆ. ಒಂದಷ್ಟು ಜನ ಅವರ ಭಾಗ್ಯಕ್ಕೆ ಕರುಬಿದರು.

ಅವನ ಪೀತಿಯ ಕಂಪನ ಅವಳ ಅನುಭವಕ್ಕೆ ಬರುತಿತ್ತು. ಭಾವನಾತ್ಮಕವಾಗಿ ಅವಳು ಅವನಲ್ಲಿ ಐಕ್ಯವಾಗುತ್ತಾ ಹೋದಳು. ನಂಬಿಕೆಯ ಶಿಖರದಲ್ಲಿ ಬೆಚ್ಚನೆಯ ಗೂಡು ಕಟ್ಟಿಕೊಳ್ಳತೊಡಗಿದಳು.

ಕನ್ಪೆಕ್ಷನ್ ಬಾಕ್ಸ್ ನಲ್ಲಿ ನಿಂತು ಎಲ್ಲವನ್ನೂ ಹೇಳಿಕೊಂಡ ಹಾಗೆ ಆಕೆ ಬಯಲಾಗುತ್ತಾ ಬಂದಳು. ಆತ ನಿರಂತರ ಆಲಿಸುತ್ತಲೇ ಹೋದ. ಅವಳ ಅವಲಂಬನೆ ಅತನಿಗೆ ಹಿತವೆನಿಸುತಿತ್ತು; ಹೆಮ್ಮೆಯಾಗುತಿತ್ತು.

ಈಗ ವೈಯಕ್ತಿಕ ಸಂಘರ್ಷವೊಂದರ ಸಂದರ್ಭದಲ್ಲಿ ತನ್ನ ಜೊತೆಯಾಗು ಎನ್ನುತಿದ್ದಾನೆ. ಅದವಳ ಜಾಯಮಾನಕ್ಕೆ ಒಗ್ಗಿದ್ದಲ್ಲ. ನಿರಾಕರಿಸಿದಳು.

ಅವನು ಸಿಡಿದು ನಿಂತ. ಅವನ ಹೊಸ ರೂಪ ಕಂಡು ಅವಳು ದಂಗಾದಳು. ’ನೀನು ನನ್ನಲ್ಲಿ ಎನೆಲ್ಲಾ ಹೇಳಿಕೊಂಡಿದ್ದಿ ಗೊತ್ತಾ...? ಅದನ್ನ ನಾನು ಇದುವರೆಗೂ ಯಾರಿಗೂ ಹೇಳಿಲ್ಲ...’ ಮೌನ ಮೊಗ್ಗೆಯನೊಡೆದು ಮಾತಾಗಿ ಹೊರಬರುತಿತ್ತು!

ಅವಳು ಜರ್ರನೆ ಇಳಿದು ಹೋದಳು. ಅವಳು ಪ್ರಾಕ್ಟಿಕಲ್ ಕಿಟಿಸಿಸಂ ವಿದ್ಯಾರ್ಥಿ. ಒಂದು ಶಬ್ದ ಕೊಡುವ ಹತ್ತಾರು ಅರ್ಥ, ಯಾವ ಕಾಂಟ್ಕ್ಸೆಟ್ ಒಳಗಡೆ ಯಾವ ಅರ್ಥ ಸ್ಫುರಿಸಬಲ್ಲುದು ಎಂಬುದೆಲ್ಲಾ ಅವಳಿಗೆ ಗೊತ್ತು. ಕ್ಷಣಾರ್ಧದಲ್ಲಿ ಅವಳು ನಿರ್ಧರಿಸಿಬಿಟ್ಟಳು; ಇಂದು ಈಸಂಬಂಧದ ಎಕ್ಸ್ ಪಯರಿ ಡೇಟ್. ಮುಗಿಯಿತು; ಎಲ್ಲವೂ ಮುಗಿಯಿತು.

ಆಯ್ಕೆಗಳು ಇಲ್ಲದಿದ್ದಾಗ್ಯೂ ನಿಷ್ಟೂರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಳು. ಅದವಳ ಶಕ್ತಿ.ಚಿಕ್ಕಂದಿನಿಂದಲೇ ಅದವಳಿಗೆ ಸಿದ್ಧಿಸಿತ್ತು. ಅಳು ಅವಳ ಪಾಲಿಗಂತೂ ಅಸಹಾಯಕತೆಯ ಲಕ್ಷಣ ಅಲ್ಲ. ಆಪ್ತರ ವಿಷಯಕ್ಕೆ ಬಂದಾಗ ಭಾವನೆಗಳೇ ಅವಳನ್ನಾಳುತ್ತವೆ.. ಇಷ್ಟರವರೆಗೆ ಅವನ ವಿಷಯಕ್ಕೆ ಭಾವನೆಗಳೇ ಮುನ್ನೆಲೆಗೆ ಬರುತ್ತಿದ್ದವು, ಈಗ..

ತಟ್ಟನೆ ಅವಳಿಗೆ ಹೊಳೆಯಿತು; ಅವನ ಇರವಿನ ಬಗ್ಗೆ ತನ್ನಲ್ಲಿ ಯಾವುದೇ ಆಧಾರ ಇಲ್ಲ, ಅವನ ಸಂಪರ್ಕದ ಕೊಂಡಿ ಕೇವಲ ಮೊಬೈಲ್ ಮಾತ್ರ, ಸಿಮ್ ಬದಲಾಯಿಸಿದರೆ ಅವನನ್ನು ಈ ಮಹಾನಗರದಲ್ಲಿ ಪತ್ತೆ ಮಾಡುವುದು ಸಾಧ್ಯವೇ ಇಲ್ಲ, ಆದರೆ ಅವನಿಗೆ ತನ್ನ ಮನೆ ಗೊತ್ತು, ಆಪೀಸು ಗೊತ್ತು, ಬಂಧು- ಬಾಂಧವರು ಗೊತ್ತು. ಪ್ರೆಂಡ್ಸ್ ಗೊತ್ತು. ಮನಸ್ಸು ಎಚ್ಚರಿಸಿತು ’ನೀನು ರೂಪಕಗಳಲ್ಲೇ ಉಳಿದು ಬಿಟ್ಟೆ. ವಾಸ್ತವಕ್ಕೆ ಬಾ’

ಅವನು ಯಾರಲ್ಲಿ ಹೇಳಬಹುದೆಂಬ ಸ್ಪಷ್ಟ ಕಲ್ಪನೆ ಅವಳಿಗಿತ್ತು. ಅಂದರೆ ಆತ ’ಅಲ್ಲಿಗೆ’ ತಲುಪಲು ತನ್ನನ್ನು ಏಣಿಯಾಗಿ ಬಳಸಿಕೊಂಡುಬಿಟ್ಟನೇ..?

ಅವಳಿಗೆ ತಡೆದುಕೊಳ್ಳಲಾಗಲಿಲ್ಲ. ಕುರ್ಚಿಯಲ್ಲಿ ಕುಳಿತಿದ್ದವಳು ತಟ್ಟನೆ ನೆಲಕ್ಕೆ ಕುಸಿದಳು. ಗೋಡೆಗೊರಗಿ ಮಂಡಿ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು. ತಲೆ ಭಾರವಾಯಿತು. ಗಂಟಲ ಪಸೆ ಆರಿ ಹೋಯಿತು. ನೀರು ಬೇಕೇ ಬೇಕು ಅನಿಸಿತು. ಗೋಡೆ ಹಿಡಿದುಕೊಂಡು ತಡವರಿಸುತ್ತಲೇ ಅಡುಗೆ ಕೋಣೆಗೆ ಹೋಗಿ ಜಗ್ಗಿನಿಂದ ನೀರು ಬಗ್ಗಿಸಿಕೊಂಡಳು. ಕೈ ನಡುಗಿ ನೀರು ಗ್ಲಾಸಿನ ಸುತ್ತೆಲ್ಲಾ ಹರಿದಾಡಿತು. ಜಗ್ಗಿಗೇ ಬಾಯಿಟ್ಟು ನೀರು ಹೀರತೋಡಗಿದಳು. ಧರಿಸಿದ್ದ ಟಾಪ್ ಒದ್ದೆಯಾಯಿತು,

ಹಾಸಿಗೆಯಲ್ಲಿ ಬಂದು ಬಿದ್ದುಕೊಂಡಳು. ದಿಂಬನ್ನು ಕೆನ್ನೆಗೆ ಒತ್ತಿಕೊಂಡು ಕವುಚಿ ಮಲಗಿದಳು. ತಲೆ ನೋಯಲು ಆರಂಭವಾಯಿತು. ಯಾರದಾದರು ಕೈಯನ್ನು ಬದ್ರವಾಗಿ ಹಿಡಿದುಕೊಳ್ಳಬೇಕು, ತೋಳನ್ನು ಅವುಚಿಕೊಳ್ಳಬೇಕೆನಿಸಿತು. ಆದರೆ ಇಹ ಲೋಕದ ಯಾರೂ ನೆನಪಾಗಲಿಲ್ಲ. ಡ್ರಾವರ್ ಎಳೆದು ಒಂದು ನಿದ್ರೆ ಮಾತ್ರೆ ನುಂಗಿ ಕಣ್ಮುಚ್ಚಿದಳು.

ಎಳೆ ಬಿಸಿಲು ಮುಖದ ಮೇಲೆ ಬಿದ್ದಾಗ ಎಚ್ಚರಾಯಿತು. ಕೈ ಅನಾಯಸವಾಗಿ ಮೊಬೈಲಿನತ್ತ ಹೋಯಿತು. ಮೊದಲ ಬಾರಿಗೆ ಅವನ ಮೆಸೇಜ್ ಮಿಸ್ ಆಗಿತ್ತು.

ಆಮೇಲೆಯೂ ಬರಲಿಲ್ಲ.

ಕೆಲವು ತಿಂಗಳು ಕಳೆಯಿತು. ಒಂದು ದಿನ ಅವಳು ಕೆನೆಟಿಕ್ ನಲ್ಲಿ ಹೋಗುತ್ತಿದ್ದಳು. ಪಕ್ಕದಲ್ಲೇ ಒಂದು ಪಲ್ಸರ್ ಪಾಸಾಯ್ತು ಅವಳು ತನ್ನಲ್ಲೇ ಅಂದುಕೊಂಡಳು ’ಇವನು ಅವನನ್ನು ಹೋಲುತ್ತಾನಲ್ಲಾ....’

ಅವಳು ಅಕ್ಸಿಲೇಟರ್ ತಿರುಗಿಸಿದಳು.

8 comments:

Pramod said...

ಸಣ್ಣ ಕಥೆ ಚೆನ್ನಾಗಿದೆ.

Anonymous said...

ಬಹುವಾಗಿ ಕಾಡಿದ ಲೇಖನ.

ಬರಹದ ತೀವ್ರತೆ, ಓದಿಸಿಕೊಂಡು ಹೋಗುವ ಶೈಲಿ ಚೆನ್ನಾಗಿದೆ. ನಿಮಗೆ ಕಥೆ ಹೇಳುವ ರೀತಿ ಗೊತ್ತಿದೆ. ನಿಮ್ಮಿಂದ ಇನ್ನಷ್ಟು ಕಥೆಗಳನ್ನ ನಿರೀಕ್ಷಿಸುತ್ತೇವೆ.

ಗಣೇಶ್.ಕೆ

ತೇಜಸ್ವಿನಿ ಹೆಗಡೆ- said...

ಸುರಗಿಯವರೆ,

ನಿಮ್ಮ ಮೌನಕಣಿವೆ ಮೌನವಾಗಿ ಆಳವಾದ ಭಾವನೆಗಳನ್ನು ಮನದೊಳಗೆ ಬಿತ್ತುತ್ತದೆ. ನಿಮ್ಮನ್ನು ಕಾಡುತ್ತಿರುವ ಅದೆಷ್ಟೋ ಯೋಚನೆಗಳು ನನ್ನನ್ನೂ ಕಾಡಿದ್ದವು.. ಕಾಡುತ್ತಲೇ ಇವೆ. ನೀವು ಹೇಳಿರುವಂತೆ ಸ್ತ್ರೀ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ತುಂಬಾ ಕಷ್ಟಪಡಬೇಕಾಗುತ್ತದೆ. ನಿಮ್ಮ ಈ ಪುಟ್ಟ ಕಥೆ ತುಂಬಾ ಗಂಭೀರ ಚಿಂತನೆಗೀಡುಮಾಡುತ್ತದೆ. ಸಣ್ಣ ಕಥೆಯ ಮೂಲಕ ವ್ಯಕ್ತಿ ಸೂಕ್ಷ್ಮತೆಗಳ ವಿಶ್ಲೇಷಣೆಮಾಡಿದ್ದೀರಿ. ಇಷ್ಟವಾಯಿತು. ಹೀಗೇ ಬರೆಯುತ್ತಿರಿ.

ವ್ಯಕ್ತಿಗಿಂತ ಅಭಿವ್ಯಕ್ತಿಯೇ ಮುಖ್ಯ. ನೀವೇ ಯಾರೇ ಆಗಿರಲಿ.. ನಿಮ್ಮ ಬರವಣಿಗೆಯ ಶೈಲಿ ನಿಮ್ಮದೇ ಆಗಿರಲಿ.

ಮೌನ ಕಣಿವೆಯನ್ನು "ಮಾನಸ"ದಲ್ಲಿ ಲಿಂಕ್‌ ಮಾಡಿಕೊಳ್ಳುತ್ತಿದ್ದೇನೆ. (ನಿಮಗೆ ಅಭ್ಯಂತರವಿಲ್ಲವೆಂದುಕೊಳ್ಳುವೆ)

ಗುರುಬಾಳಿಗ said...

"ಬಿಂಬದಿಂದ ಬಿಂಬಕ್ಕೆ" ಗಟ್ಟಿ ಕತೆ.
"ಪ್ರಾಕ್ಟಿಕಲ್ ಕ್ರಿಟಿಸಿಸಂ" ಅಂಶ ಕತೆಗೆ ಮಾತ್ರವಲ್ಲ ನಾಯಕಿಯ ವ್ಯಕ್ತಿತ್ವಕ್ಕೂ ವಿಭಿನ್ನ ಆಯಾಮವನ್ನು ನೀಡಿದೆ.

ಗುರು ಬಾಳಿಗ

hulakodu said...

ಕಥೆ ಚೆನ್ನಾಗಿದೆ.

suragi said...

ನಾನು ಕಥೆಗಾರಳಲ್ಲ.ನನ್ನ ಈ ಪ್ರಯತ್ನವನ್ನು ನೀವೆಲ್ಲಾ ಗಮನಿಸಿದ್ದೀರಿ.ಅದು ನನಗೆ ಹುಮ್ಮಸ್ಸು ನೀಡಿದೆ. ಪ್ರತಿಕ್ರಿಯಿಸಿದ ಪ್ರಮೋದ್, ಗಣೇಶ್,ಗುರುಬಾಳಿಗಾ,ಹುಲಕೊಡು ನಿಮಗೆಲ್ಲಾ ಕೃತಜ್ನತೆಗಳು.

ಲಿಂಕ್ ಮಾಡಿಕೊಳ್ಳೊಕೆ ಸಮ್ಮತಿ ಯಾಕೆ ಬೇಕು ತೇಜಸ್ವ್ನಿನಿ. ಪ್ರಪಂಚದಲ್ಲಿರುವ ಎಲ್ಲಾ ಮಹಳೆಯರೂ ಒಂದೇ!

anveshi anamika said...

nambike ya sulige sikki manasu kuruddaga buddhiya maatugalige jaana kivudu aavarisidante... anno haage namida mele ne manada nijavaada thallana shuru aagodu anta nanna namike..!! kathe tumbaa chennagide madam.

Anuradha said...

ಬಿಂಬದಿಂದ ಮತ್ತೆ ಬಿಂಬಕ್ಕೆ ಸರಿದ ಚಿತ್ರಣ ..ತುಂಬಾ ಇಷ್ಟವಾಯಿತು .ಅಭಿನಂದನೆಗಳು .