Thursday, March 5, 2009

ಕಡಲ ತಡಿಯ ತಲ್ಲಣ

ನನ್ನ ಜಿಲ್ಲೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ.
ನನ್ನ ಜಿಲ್ಲೆಯ ಬಗ್ಗೆ ನನಗೆ ಅತೀವ ಮೋಹ.
ಬೋರ್ಗೆರೆವ ಕಡಲು, ಪಶ್ಚಿಮ ಘಟ್ಟ ಶ್ರೇಣಿ, ಝುಳು ಝುಳು ಹರಿಯುವ ನದಿ, ಹಚ್ಚ ಹಸಿರಿನ ವನಸಿರಿ, ಸದಾ ಕ್ರಿಯಾಶೀಲರಾಗಿರುವ ಜನ- ಪುರಾಣದಲ್ಲಿ ವರ್ಣಿತವಾಗಿರುವ ನಾಗಲೋಕವಿದು.
’ತುಳುನಾಡು’ ಎಂದು ಕರೆಯಲ್ಪಡುವ ಈ ಕರಾವಳಿ ಸಮೃದ್ದವಾದ ಕಲಾ ಪರಂಪರೆಯನ್ನು ಹೊಂದಿದೆ. ಇಲ್ಲಿ ನಾಗಾರಾಧನೆ, ಭೂತಾರಾಧನೆಯಂತ ಆರಾಧನ ಪದ್ದತಿಯಿದೆ. ಕಂಬಳ, ಚೆನ್ನೆಮಣೆ, ಕಾಯಿ ಕುಟ್ಟುವುದು, ಕೋಳಿ ಅಂಕದಂತ ಜಾನಪದ ಕ್ರೀಡೆಗಳಿವೆ. ಆಟಿಕಳಂಜ, ಚೆನ್ನುನಲಿಕೆಯಂತ ಜಾನಪದ ಕುಣಿತವಿದೆ. ಧರ್ಮ ಸಮನ್ವಯಕ್ಕೆ ಕಾರಣವಾದ ಅಲಿ, ಬಬ್ಬರ್ಯ ಭೂತವಿದೆ. ಸರ್ವಧರ್ಮದವರಿಂದಲೂ ಪೂಜಿಸಲ್ಪಡುವ ಅತ್ತೂರು ಚರ್ಚ್ ಇದೆ. ಜೈನ-ಶೈವ ಸಂಗಮದ ಧರ್ಮಸ್ಥಳವಿದೆ. ಉಳ್ಳಾಲದ ದರ್ಗವಿದೆ. ಬಪ್ಪಬ್ಯಾರಿಯಿಂದ ಕಟ್ಟಲಾಗಿದೆಯೆನ್ನುವ ಮುಲ್ಕಿಯ ಕಾರ್ನಾಡ್ ದುರ್ಗಪರಮೇಶ್ವರಿ ದೇವಸ್ಥಾನವಿದೆ.

ಹಾಗಿದ್ದರೂ ನನ್ನ ಜಿಲ್ಲೆಯಿಂದು ಕೋಮು ಗಲಭೆಗಳಿಂದ ತತ್ತರಿಸಿದೆ. ಮಾತೃಮೂಲ ಸಂಸ್ಕೃತಿ ಇನ್ನೂ ಜೀವಂತವಾಗಿರುವ ಈ ನಾಡಿನಲ್ಲಿ ಮಹಿಳೆಯರ ಮೇಲೆ ನಿರಂತರ ಹಲ್ಲೆಗಳಾಗುತ್ತಿದೆ. ಜನ ಭಯಭೀತರಾಗಿದ್ದಾರೆ. ದನಿಯೆತ್ತಿದವರ ಧ್ವನಿಯನ್ನು ಅಡಗಿಸಲಾಗುತ್ತಿದೆ.

ಏನಾದರೂ ಮಾಡಬೇಕಲ್ಲಾ....... ಎಂದಾಗ ಹುಟ್ಟಿಕೊಂಡದ್ದೇ ಈ ಆಲೋಚನೆ.

ನಾನು ಮತ್ತು ಪುರುಷೋತ್ತಮ ಬಿಳಿಮಲೆ ಸೇರಿ ’ಕಡಲ ತಡಿಯ ತಲ್ಲಣ’ ಎಂಬ ಪುಸ್ತಕವನ್ನು ಸಂಪಾದಿಸುತ್ತಿದ್ದೇವೆ. ನಮ್ಮ ಗೆಳೆಯರ ಬಳಗ ಒತ್ತಾಸೆಯಾಗಿ ನಿಂತಿದೆ.

ತುಳುನಾಡನ್ನು ಕೇಂದ್ರಿಕರಿಸಿರುವ ಈ ಪುಸ್ತಕದಲ್ಲಿ ಕಡಲ ಕಿನಾರೆಯ ಬಹಳಷ್ಟು ಲೇಖಕರ ಬರಹಗಳಿರುತ್ತವೆ. ಅವುಗಳು ಈಗ ತಾನೆ ಅಚ್ಚಿನ ಮನೆ ಪ್ರವೇಶಿಸುತ್ತಲಿದೆ.
ಇನ್ನು ಕೆಲವೇ ದಿನಗಳಲ್ಲಿ ಅದು ನಿಮ್ಮ ಕೈ ಸೇರಲಿದೆ. ಅದಕ್ಕೆ ಮೊದಲು ನಿಮ್ಮನ್ನೊಂದು ಸಲಹೆ ಕೇಳೋಣ ಅನಿಸಿತು.
’ಕಡಲ ತಡಿಯ ತಲ್ಲಣ’ ಕುರಿತಂತೆ ತಮ್ಮ ಸಲಹೆ ಸೂಚನೆಗಳಿಗೆ ಸ್ವಾಗತವಿದೆ. ನಾವು ಮುನ್ನಡೆಯುವಲ್ಲಿ ಅದು ಸಹಾಯಕವಾಗಬಹುದೆಂಬ ನಂಬಿಕೆ ನಮ್ಮದು.

7 comments:

sunaath said...

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅತ್ಯಂತ ಮುಂದುವರೆದ ಜಿಲ್ಲೆ.
ಪಂಜೆ ಮಂಗೇಶರಾಯರು, ಗೋವಿಂದ ಪೈ, ಶಿವರಾಮ ಕಾರಂತ
ಮೊದಲಾದವರು ಈ ಜಿಲ್ಲೆಯ ಸಾಹಿತ್ಯಕ ಹೆಗ್ಗಳಿಕೆಯನ್ನು ಎತ್ತಿ ಹಿಡಿದಿದ್ದಾರೆ. (ಕಾಸರಗೋಡು ಕರ್ನಾಟಕದಲ್ಲಿ ಸೇರಿದ್ದರೆ, ಕಯ್ಯಾರ ಕಿಞ್ಞಿಣ್ಣ ರೈ ಅವರ ಹೆಸರನ್ನೂ ಸಹ ಸೇರಿಸಬಹುದಾಗಿತ್ತು.)
ದಕ್ಷಿಣ ಕನ್ನಡದವರು ಭಾರತದ ಒಳಗೂ ಹೊರಗೂ ಎಲ್ಲೆಡೆ ವ್ಯಾಪಿಸಿದ್ದಾರೆ.
ಇಂತಹ ಒಂದು ಜಿಲ್ಲೆಯ ಬಗೆಗೆ ನಿಮ್ಮ ಕಳಕಳಿ ಸ್ತುತ್ಯಾರ್ಹ.

ಸಂದೀಪ್ ಕಾಮತ್ said...

ಒಳ್ಳೆಯ ವಿಚಾರ .....

ದುರ್ಗಾಪರಮೇಶ್ವರಿ ದೇವಸ್ಥಾನ ಇರೋದು ಬಪ್ಪನಾಡಿನಲ್ಲಿ .
ಕಾರ್ನಾಡಿನಲ್ಲಿ ಒಂದು ಸದಾಶಿವನ ದೇವಸ್ಥಾನವಿರೋದು ..
ಬಪ್ಪಬ್ಯಾರಿಯ ನಾಡು ಬಪ್ಪನಾಡು.

ಪುಸ್ತಕದ ಯೋಚನೆ ಚೆನ್ನಾಗಿದೆ.ಶುಭವಾಗಲಿ.

ನಾನು ಈ ಜಿಲ್ಲೆಯಲ್ಲಿ ಹುಟ್ಟಿದ್ದಕ್ಕೆ ಯಾವಾಗಲೂ ಹೆಮ್ಮೆ ಪಡ್ತೀನಿ.ನನ್ನಲ್ಲಿ ನಯಾಪೈಸೆಯ ಯೋಗ್ಯತೆ ಇರದಿದ್ದರೂ ನಾನು ಮಂಗಳೂರಿನವನು ಅಂತ ಗೊತ್ತಾದ ತಕ್ಷಣ ಗೌರವ ಕೊಡ್ತಾರೆ.
ಅದಕ್ಕಾಗಿ ಮಂಗಳೂರಿಗೆ ಥ್ಯಾಂಕ್ಸ್.

ಸಂದೀಪ್ ಕಾಮತ್ said...

ಇನ್ನೊಂದು ವಿಷಯ ಹೇಳೋದಕ್ಕೆ ಮರೆತೆ.

ಬುದ್ಧಿವಂತರ ಜಿಲ್ಲೆಯಲ್ಲೂ ದಡ್ಡರಿರ್ತಾರಲ್ವ...ಹಾಗಾಗಿ ನಾವು ಪ್ರಚಲಿತ ವಿದ್ಯಮಾನಗಳ ಬಗ್ಗೆ ನಿರಾಶರಾಗೋದು ಬೇಡ ಅಂತ ನನ್ನ ಅನಿಸಿಕೆ.

Anonymous said...

naavellaru namma jilleya bage naave kaaLaji maadodu vichaara maadtive... adannu neevu kratiya moolaka horataruttiruvud olle sangati... nimage nanna shubha haaraikegaLive

suragi said...

ಸಂದಿಪ್,ತಿದ್ದುಪಡಿಗೆ ಧನ್ಯವಾದಗಳು.
ಅವಧಿಯಲ್ಲೂ ನಿಮ್ಮ ಕಮೆಂಟ್ ಓದಿದೆ. ನಿಮ್ಮ ಸಲಹೆ ಸಂದೇಹಗಳು ನಮ್ಮ ಗಮನದಲ್ಲಿವೆ.
ನಮ್ಮ ಪುಸ್ತಕದಲ್ಲಿ ಆಕ್ರೋಶವಿಲ್ಲ, ಹೇಳಿಕೆಗಳಿಲ್ಲ.
ಅಲ್ಲಿ ಕಥೆಯಿದೆ, ಕವನವಿದೆ, ಪತ್ರವಿದೆ, ಅನುಭವ ಕಥನವಿದೆ, ಹಿರಿಯರ ಆಳ ಮುನ್ನೋಟದ ಮುನ್ನುಡಿಯಿದೆ.
ಮುಖ್ಯವಾಗಿ ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸುತ್ತಿದ್ದೇವೆ.
ಸ್ಯಾಂಪಲ್ ಬರಹಕ್ಕೆ ಕನ್ನಡಪ್ರಭ ಭಾನುವಾರದ ಪುರವಣಿಯನ್ನು ಸಾಧ್ಯವಾದರೆ ನೋಡಿ.
ಸಂದಿಪ್, ಪುಸ್ತಕ ಅಚ್ಚಿನ ಮನೆಗೆ ಹೋಗ್ತಾ....ಇದೆ. ಹಾಗಾಗಿ ಸಲಹೆಗಳಿಗೆ ಈಗಲೂ ಸ್ವಾಗತವಿದೆ. ಪೋನ್ ಅಥವಾ ಮೆಸೇಜ್ ಮಾಡ್ಬಹುದು.

ಸಂದೀಪ್ ಕಾಮತ್ said...

'ಸುರಗಿ’ಯವರೇ ,
ಮೊನ್ನೆ ನನ್ನ ಉತ್ತರ ಭಾರತದ ಸ್ನೇಹಿತನೊಬ್ಬ ’ಅಬೇ ತುಮ್ಹಾರೇ ಮ್ಯಾಂಗಲೂರ್ ಮೇ ಲಡ್ಕೀಯೋಂ ಪೇ ಹಾತ್ ಉಠಾತೇ ಹೇಂ ನಾ ’ ಅಂದಿದ್ದ ....
’ನಹೀಂ ಯಾರ್ ಸಬೇನೇ ಜೀನ್ಸ್ ಪೆಹನಾ ಥಾ ನ ಶಾಯದ್ ಲೋಗ್ ಕನ್ಫ್ಯೂಸ್ ಹೋಗಯೇ ’ ಅಂತ ಹೇಳಿ ತಮಾಷೆಯಲ್ಲೇ ತೆಗೆದೆ ಆ ಸಂಗತಿಯನ್ನ ...
ಆದ್ರೆ ನಿಜಕ್ಕೂ ಬೇಸರವಾಗುತ್ತೆ ....
ನಾವೆಲ್ಲಾ ಮನಸ್ಸು ಮಾಡಿದ್ರೆ ಎಲ್ಲ ಸರಿ ಹೋಗಬಹುದೇನೋ ಅಲ್ವಾ?
ಪುಸ್ತಕ ಬಿಡುಗಡೆಯ ದಿನಾಂಕ ಹೇಳಿ ... ಎಲ್ಲಾ ಬರ್ತೀವಿ...
ಶುಭವಾಗಲಿ.

ಅಸತ್ಯ ಅನ್ವೇಷಿ said...

ಒಳ್ಳೆಯ ಕೆಲಸ ಸುರಗಿಯವರೆ,

ಕರಾವಳಿಯ ಮಣ್ಣಿನ ಕಣ ಕಣದಲ್ಲಿ ಹಾಸು ಹೊಕ್ಕಾಗಿರುವ ಯಕ್ಷಗಾನದ ಉಲ್ಲೇಖ ಇದ್ದೇ ಇರುತ್ತದೆಯಲ್ಲ... ಯಕ್ಷಗಾನ ಇಲ್ಲದೆ ನಾವು ಇಲ್ಲ. ನಾವೇನಾಗಿದ್ದೇವೆಯೋ ಅದಕ್ಕೆಲ್ಲ ಯಕ್ಷಗಾನದ ಪ್ರತ್ಯಕ್ಷ-ಪರೋಕ್ಷ ಪ್ರಭಾವ ಖಂಡಿತಾ ಕಾರಣ.