Saturday, June 6, 2009

ಗೃಹಿಣಿ ಎಂಬ ಒಬ್ಬಂಟಿನಾನು ಚಿಕ್ಕವಳಿರುವಾಗ ನನ್ನೂರು ಬಾಳುಗೋಡಿನಿಂದ ಕುಕ್ಕೆಸುಬ್ರಹ್ಮಣ್ಯಕ್ಕೆ ಶಾಲೆಗೆ ಹೋಗುತ್ತಿದೆ. ಸುಮಾರು ಏಳು ಮೈಲಿಗಳ ಕಾಲುಹಾದಿ. ತುಂಬಿ ಹರಿಯುವ ನದಿಗಳು ಮತ್ತು ಹೊಳೆಗಳು ಎರಡೆರಡು. ಚಿಕ್ಕ ತೊರೆಗಳು ಮೂರು. ದಟ್ಟವಾದ ಅರಣ್ಯ.

ವಿವಿಧ ಹೂ, ಹಣ್ಣು,ಚಿಗುರುಗಳ ವನಸಿರಿ. ಆಗೀಗ ಹಂದಿ, ಮೊಲ, ಕಾಡುಕೋಳಿ, ಬರ್ಕ, ಚಣಿಲು, ಕಬ್ಬೆಕ್ಕು ಮುಂತಾದ ಪ್ರಾಣಿಗಳ ದರ್ಶನ. ವಿವಿಧ ರೀತಿಯ ಹಕ್ಕಿಗಳು. ಮಂಗಗಳದ್ದು ನಿರ್ಭಯ ರಾಜ್ಯಭಾರ.

ಆನೆಗಳ ಭಯದಲ್ಲಿ ನಮ್ಮದು ಗುಂಪುಗಳಾಗಿ ಪಯಣ. ಚೀಲದಲ್ಲಿ ಪಾಠ ಪುಸ್ತಕಗಳಿಗಿಂತ ಹೆಚ್ಚಾಗಿ ನೆಲ್ಲಿಕಾಯಿ, ಚೂರಿಕಾಯಿ, ಮೊಗ್ಗರೆಕಾಯಿ, ಹುಣುಸೆಕಾಯಿ, ಮಾವಿನಕಾಯಿ ಪೇರಲಕಾಯಿಗಳು. ಮಳೆಗಾಲದಲ್ಲಾದರೆ ಹುರಿದ ಹುಣಸೆಬೀಜ, ಸಾಂತಾಣಿ, ಕೊಬ್ಬರಿ ಬೆಲ್ಲ.

ಬೆಳಿಗ್ಗೆ ಪ್ರದೇಶ ಸಮಾಚಾರಕ್ಕೆ ಮನೆ ಬಿಡುತ್ತಿದ್ದರೆ ರಾತ್ರಿ ವಾರ್ತೆಗಳ ಸಮಯಕ್ಕೆ ಮನೆ ಸೇರುತ್ತಿದ್ದೆವು. ಇಡೀ ಹಗಲು ನಮ್ಮದು. ಸಮೃದ್ಧ ಬಾಲ್ಯ. ನದಿ, ತೋಟ, ಗದ್ದೆ, ಗುಡ್ಡ, ದನ-ಕರು, ಹಕ್ಕಿಗೂಡು, ಜೇನು ಎರಿ, ಮೀನು ಬೇಟೆ ಇವೇ ನಮ್ಮ ಕಾರ್ಯ ಕ್ಷೇತ್ರ. ಮಧ್ಯೆ ಆಗೀಗ ಓದು ಅಷ್ಟೇ. ಹಾಗೆಂದು ಪರೀಕ್ಷೆಯಲ್ಲಿ ಫೇಲಾಗುತ್ತಿರಲಿಲ್ಲ.

ಇಡೀ ಊರು ನಮ್ಮದು. ಊರಿನ ಜನ ನಮ್ಮವರು. ಪ್ರತಿಯೊಬ್ಬರಿಗೂ ನಾವು ಅಡ್ಡ ಹೆಸರಿಡುತ್ತಿದ್ದೆವು. ಆದರೂ ಅವರಿಗೆ ನಾವು ಅಚ್ಚುಮೆಚ್ಚು. ನಮ್ಮ ಕೀಟಲೆಗೆ ಅವರು ”ನಿಮ್ಮ ಅಪ್ಪನಿಗೆ ಹೇಳಿ ಬುದ್ಧಿ ಕಲಿಸುತ್ತೇವೆ” ಎಂದು ಅಬ್ಬರಿಸಿದರೂ ನಾವು ಕ್ಯಾರೆ ಅನ್ನುತ್ತಿರಲಿಲ್ಲ. ಅವರು ಹೇಳುವುದಿಲ್ಲವೆಂದು ನಮಗೆ ಗೊತ್ತಿತ್ತು. ಹೇಳಿದರೆ ಈ ಮಕ್ಕಳ ಬೆನ್ನಮೇಲೆ ನಾಗರ ಬೆತ್ತ ಅಥವಾ ಹುಣಸೆ ಬರ್ಲು ಹುಡಿಯಾಗುತ್ತೆ ಎಂಬುದು ಅವರಿಗೂ ಗೊತ್ತು.

ಆ ಊರ ಮಕ್ಕಳು ನಾವು. ಇಲ್ಲಿ ಈ ಕಾಂಕ್ರೀಟ್ ಕಾಡಿಅಲ್ಲಿ ಬಂದು ಬಿದ್ದಿದ್ದೇವೆ. ಇಲ್ಲಿಯ ಜನರ ಕ್ಷುದ್ರತೆ, ಸಣ್ಣತನ, ಬದುಕಿನ ಹೋರಾಟ; ಅದು ತಂದೊಡ್ಡುತ್ತಿರುವ ಮಾನಸಿಕ ಒತ್ತಡ, ಸಂಬಂಧಗಳ ಶಿಥಿಲತೆ, ನಶಿಸುತ್ತಿರುವ ಮಾನವೀಯ ಮೌಲ್ಯ- ಇವುಗಳನ್ನೆಲ್ಲಾ ಕಂಡು ಖಿನ್ನಳಾಗುತ್ತೇನೆ.

ನಾವೆಲ್ಲೋ ಕಳೆದುಹೋಗುತ್ತಿದ್ದೇವೆ. ಕಳೆದುಕೊಂಡದ್ದನ್ನು ಮಾತುಗಳಲ್ಲಿ, ಬರವಣಿಗೆಯಲ್ಲಿ ಕಲಾ ಮಾಧ್ಯಮಗಳಲ್ಲಿ ಪುನರ್ ಸೃಷ್ಟಿಸಲು ಪ್ರಯತ್ನಿಸುತ್ತೇವೆ. ನಾವು ಕಟ್ಟಿಕೊಳ್ಳುವ ಎಲ್ಲಾ ಸಂಬಂಧಗಳಲ್ಲಿ ಕಳೆದುಕೊಂಡದ್ದರ ಹುಡುಕಾಟವೇ ಅಂತರ್ ವಾಹಿನಿಯಾಗಿ ಹರಿಯುತ್ತಿರುತ್ತದೆ.

ಗ್ರಾಮಾಂತರ ಪ್ರದೇಶದಿಂದ ಬಂದ ಬಹಳಷ್ಟು ಜನರ ಚಡಪಡಿಕೆ ಇದು. ಅವರ ಬೇರುಗಳು ಅಲ್ಲಿ ಹರಡಿಕೊಂಡಿದೆ. ಇಲ್ಲಿ ಚಿಗುರೊಡೆಯಲು ಪ್ರಯತ್ನಿಸಿದರೂ ಆಳಕ್ಕೆ ಇಳಿಯಲಾಗದು. ಹೆಣ್ಣುಮಕ್ಕಳದಂತೂ ವಿಚಿತ್ರ ಸಮಸ್ಯೆ. ಇಲ್ಲಿಯ ಜೀವನ ಶೈಲಿ ಮನಸ್ಸನ್ನು ಇನ್ನಷ್ಟು ಸೂಕ್ಷವಾಗಿಸಿದೆ. ಹಾಗಾಗಿ ಎಲ್ಲದರತ್ತ ವಿಮರ್ಶೆಯ ನೋಟ. ಬಾಲ್ಯದ ಗೆಳೆಯ/ ಗೆಳತಿ ನಿಂತ ನೀರಾಗಿದ್ದಾರೆ ಎನಿಸುತ್ತದೆ. ಸಂವಹನ ಸಾಧ್ಯವಾಗುವುದಿಲ್ಲ. ಮನೆಗೆ ಬರುವ ಪರಿಚಿತರೆಲ್ಲ ಗಂಡನ ಸಂಬಂಧಿಕರು ಅಥವಾ ಗೆಳೆಯರೇ ಆಗಿರುತ್ತಾರೆ. ಒಂದುವೇಳೆ ತನಗೆ ಆತ್ಮೀಯರಾದ ಗೆಳೆಯರಿದ್ದರೂ ಅವರನ್ನು ಮನೆಗೆ ಆಹ್ವಾನಿಸುವಷ್ಟು ಅಥವಾ ಅವರೊಡನೆ ಹೊರಗೆ ಸುತ್ತಾಡುವಷ್ಟು ನಮ್ಮ ಸಮಾಜ ಮುಕ್ತವಾಗಿಲ್ಲ.

ಆಧುನಿಕ ವಿದ್ಯಾವಂತ ಗೃಹಿಣಿ ಒಂಟಿಯಾಗಿದ್ದಾಳೆ. ಆಕೆಗೆ ಸಂತೋಷವನ್ನು ಹಂಚಿಕೊಳ್ಳಲು ಬೇಕಾದಷ್ಟು ಜನ ಸಿಗುತ್ತಾರೆ. ಆದರೆ ದುಃಖ-ದುಮ್ಮಾನ, ಸಂದೇಹ-ಸಮಸ್ಯೆಗಳನ್ನು ಯಾರಲ್ಲಿ ತೋಡಿಕೊಳ್ಳುವುದು ಎಂದು ಗೊತ್ತಾಗುವುದೇ ಇಲ್ಲ. ಮನದಾಳವನ್ನು ಇನ್ನೊಬ್ಬರೆದುರು ತೆರೆದಿಟ್ಟರೆ ನಾಳೆ ಏನಾಗುವುದೋ ಎಂಬ ಅಳುಕು. ಹಾಗಾಗಿ ಎಲ್ಲವನ್ನು ಅಂತರಂಗದಲ್ಲೇ ಬಚ್ಚಿಟ್ಟುಕೊಳ್ಳುತ್ತಾಳೆ.

ನನ್ನನ್ನೇ ನೋಡಿ; ನನಗೊಬ್ಬ ಗೆಳೆಯನಿದ್ದಾನೆ. ಆತ್ಮೀಯ ಗೆಳೆಯನೆಂದು ಹೇಳಲಾಗದು. ಗೆಳೆತನದಲ್ಲಿ ಪರಸ್ಪರ ಭಾವ ಸ್ಪಂದನವಿರುತ್ತದೆ. ಇಲ್ಲಿ ಅದಿಲ್ಲ. ಹಾಗಿದ್ದರೆ ಆತ ಹೇಗೆ ನಿಮಗೆ ಗೆಳೆಯನಾದಾನು? ಎಂದು ಅನ್ನಿಸಬಹುದು. ಗೊತ್ತಿಲ್ಲ. ಆತ ಗೆಳೆಯನೆಂದು ಮನಸ್ಸು ಒಪ್ಪಿಕೊಂಡಿದೆ. ಬುದ್ಧಿ ತಕರಾರು ಮಾಡುತ್ತಿದೆ.

ನನ್ನ ಆತನ ಸಂಬಂಧದಲ್ಲಿ ನಾನು ಮಾತ್ರ ಮಾತಾಡುತ್ತಿರುತ್ತೇನೆ. ಮಹಿಳೆಯರು ಜಾಸ್ತಿ ಮಾತಾಡುತ್ತಿರುತ್ತಾರೆ ಎಂಬ ಆಪಾದನೆ ಇದೆ. ಅವರು ಮಾತಾಡಿ ಹಗುರವಾಗದಿದ್ದರೆ ಒಳಗಿನ ಒತ್ತಡಕ್ಕೆ ಸ್ಪೋಟಗೊಳ್ಳುವ ಅಪಾಯವಿದೆ. ಒತ್ತಡ ಹರಿಯಲೊಂದು ಚಾನಲ್ ಬೇಕು. ಮಹಿಳೆಯರ ಮಟ್ಟಿಗದು ಮಾತು ಮಾತ್ರ.

ನನ್ನ ಮಾತುಗಳಿಗೆ ನನ್ನ ಗೆಳೆಯನ ಪ್ರತಿಕ್ರಿಯೆ ಏನು ಎಂಬುದು ನನಗೆ ಗೊತ್ತಾಗುವುದಿಲ್ಲ. ಯಾಕೆಂದರೆ ನಮ್ಮ ಹೆಚ್ಚಿನ ಮಾತುಕತೆಯೆಲ್ಲಾ ನಡೆಯುವುದು ಪೋನಿನಲ್ಲಿ. ಆತ ಸುಮ್ಮನೆ ಹಾ, ಹುಂ, ಹೌದಾ, ಛೇ ಅನ್ನುತ್ತಿರುತ್ತಾನೆ.
ಬಹಳಷ್ಟು ಬಾರಿ ನನಗೆ ಅನ್ನಿಸುತ್ತದೆ; ಆತ ನನ್ನ ಪಾಲಿಗೆ ಕೇವಲ ಒಂದು ಡೈರಿ ಮಾತ್ರ. ಅಲ್ಲಿ ನನ್ನ ಮಾತುಗಳು ಮಾತ್ರ ದಾಖಲಾಗುತವೆ. ದಾಖಲಾಗುತ್ತದೆ ಎಂದು ನಂಬಿಕೊಂಡಿದ್ದೇನೆ. ಹತ್ತಾರು ವರ್ಷಗಳ ದಾಂಪತ್ಯದ ನಂತರ ಗಂಡನೊಬ್ಬ ಹೆಂಡತಿಯ ಪಾಲಿಗೆ ಮುಚ್ಚಿದ ಡೈರಿಯಾಗುವ ಸಂಭವವೇ ಹೆಚ್ಚು.

ಗಂಡಸರ ಜೀವನ ವಿಧಾನವೇ ಅಷ್ಟು. ಅಲ್ಲಿ ಯಾವುದೇ ಸ್ಥಿತ್ಯಂತರಗಳಿಲ್ಲ. ಅವರು ಯಾವುದನ್ನು ಜೀವದುಂಬಿ ಹಚ್ಚಿಕೊಳ್ಳಲಾರರು; ಹಂಚಿಕೊಳ್ಳಲಾರರು. ನಾವು ಹಾಗಲ್ಲ. ನಾವೆಲ್ಲಾ ವಸುಂಧರೆಯರು. ಒಡಲಾಳದಲ್ಲಿ ಕುದಿಯುವ ಲಾವ. ಮೇಲುಮೇಲಕ್ಕೆ ಹದವಾದ ಎರೆಮಣ್ಣು. ಉಕ್ಕುವ ಜೀವಜಲ. ಸಮೃದ್ಧ ಹಸಿರು. ಕಣ್ಣಿಗೆ ತಂಪು.

ವಸುಂಧರೆ ಎಂಬ ಶಬ್ದವನ್ನೇ ನೋಡಿ, ಅದಕ್ಕೆ ಎಷ್ಟೊಂದು ತೂಕವಿದೆ, ಸೌಂದರ್ಯವಿದೆ, ವೈಭವವಿದೆ. ವಸು ಎಂದರೆ ಬಂಗಾರ. ವಸುಂಧರೆ; ದ್ರವ್ಯವನ್ನು ಒಳಗೊಂಡಿರುವವಳು. ಆಕೆಯ ಒಡಲಲ್ಲಿ ಸಂಪತ್ತಿದೆ. ಖನಿಜವಿದೆ. ಏನಾದರೂ ’ಇದೆ’ ಅಂದರೆ ಅದನ್ನು ನೋಡುವ ಕುತೂಹಲ, ದೋಚುವ ಹಂಬಲ ಉಂಟಾಗುತ್ತದೆ. ’ಇದೆ’ ಅನ್ನುವುದು ಒಂದು ದಿನ ಇಲ್ಲವಾಗುತ್ತದೆ! ಬರಿದಾಗುತ್ತದೆ!!

ವಸುಂಧರೆಗೆ ಪರ್ಯಾಯವಾಗಿರುವ ಹಲವಾರು ಶಬ್ದಗಳಲ್ಲಿ ’ಇಳೆ’ ಎಂಬ ಶಬ್ದವೂ ಒಂದು. ವಸುಂಧರೆಯ ವೈಭವದ ಭಾರ ಇಲ್ಲಿಲ್ಲ. ಆದರೆ ಇದು ಮೈ ಮನಗಳಿಗೆ ಮುದವನ್ನು ನೀಡುತ್ತದೆ. ಇಳೆಯಲ್ಲಿ ಅರಳುವ ಪ್ರಕ್ರಿಯೆ ಇದೆ. ಇಳೆ; ಮಳೆ; ಬೆಳೆ; ಕಳೆ; ಶಬ್ದಗಳಿಗಿರುವ ಅನ್ಯೋನ್ಯ ಸಂಬಂಧವನ್ನು ಗಮನಿಸಿದರೆ ಅದು ಅಕ್ಷಯದ, ಸೃಷ್ಟಿಯ ಭಾವನೆಯನ್ನು ಮೂಡಿಸುತ್ತದೆ. ಇದು ಜೀವನ್ಮುಖಿಯಾದುದು.

ಕೋಲಾರದ ಕೆಜಿಎಫ಼್ ನೋಡಿದಾಗ ನನಗೆ ವಸುಂಧರೆ ನೆನಪಾಗುತ್ತದೆ. ಪ್ರಕೃತಿಯ ಮೇಲೆ ಪುರುಷ ದಬ್ಬಾಳಿಕೆಯ, ಆಕ್ರಮಣದ ಚಿತ್ರಣ ಸಿಗುತ್ತದೆ. ಆಧುನಿಕ ಗೃಹಿಣಿ ಕಣ್ಣೆದುರು ನಿಲ್ಲುತ್ತಾಳೆ.

ಅದೇ ಇಳೆ ಎಂದಾಗ ನನಗೆ ನನ್ನೂರು ನೆನಪಾಗುತ್ತದೆ. ಅಲ್ಲಿಯ ಸಮೃದ್ದ ಹಸಿರು, ನಿರಾಳ ಬದುಕು, ನಿಷ್ಕಲ್ಮಶ ಪ್ರೀತಿ ನೆನಪಾಗಿ ಕಾಡುತ್ತದೆ.
ಇಳೆಯಲ್ಲಿ ನನ್ನ ಬಾಲ್ಯ ಇದೆ. ವಸುಂಧರೆಯಲ್ಲಿ ವಾಸ್ತವ ಇದೆ.
ಎರಡನ್ನೂ ಸಮನ್ವಯಗೊಳಿಸುವುದು ಎಷ್ಟು ಕಷ್ಟ!

[’ಹಂಗಾಮ’ದ ವಸುಂಧರೆ ಕಾಲಂನಲ್ಲಿ ಪ್ರಕಟವಾದ ಲೇಖನ]

6 comments:

sunaath said...

ಸುರಗಿ,
ನಿಮ್ಮ ಈ ಲೇಖನ ನನಗೆ ತುಂಬ ಇಷ್ಟವಾಗಲಿಕ್ಕೆ ಅನೇಕ ಕಾರಣಗಳಿವೆ. ಅವುಗಳಲ್ಲಿ ಕೆಲವು ಹೀಗಿವೆ:
ನಿಮ್ಮ carefree ಬಾಲ್ಯಜೀವನದ ವರ್ಣನೆ. ಅದಕ್ಕೆ ಪ್ರತಿಯಾಗಿ ಈಗಿನ ನಗರಜೀವನದ ಬರಡುತನ.
ಹೆಣ್ಣುಮಕ್ಕಳ ವೈಶಿಷ್ಟ್ಯಗಳಿಗೆ ಕಾರಣವಾದ ಮನೋವಿಶ್ಲೇಷಣೆಯನ್ನು ಸಂಕ್ಷಿಪ್ತವಾಗಿ ನೀಡಿದ್ದೀರಿ. ಉದಾಹರಣೆಗೆ ಹೆಣ್ಣುಮಕ್ಕಳು ಯಾಕೆ ತಮ್ಮ ಅಂತರಂಗವನ್ನು ತೋಡಿಕೊಳ್ಳುತ್ತಾರೆ, ಇತ್ಯಾದಿ.
ಒಳ್ಳೆಯ ಬರವಣಿಗೆಗೆ ಅಭಿನಂದನೆಗಳು.

Niveditha said...

tumbaa channaagide.. vasundhare, ile ge kotta anology channagide.. baravanigeya flow ishta aaytu.

Guru's world said...

ಊಫ್ ... ಎಲ್ಲೋ ಎಲ್ಲೆ ಇಲ್ಲದ ಬಾಲ್ಯ ದಿಂದ,,,,,ಗೃಹಿಣಿ ಯಾ ವರೆಗಿನ ನಿಮ್ಮ ಬರಹ ತುಂಬ ಚೆನ್ನಾಗಿ ಇದೆ.... ವಸುಂದರೆ ಆದರೆ ಭಾವ, ಕಷ್ಟ ಎಲ್ಲವನ್ನು ತುಂಬ ಚೆನ್ನಾಗಿ ವಿವರಿಸಿದ್ದಿರ.....ತುಂಬ ಇಷ್ಟ ಆಯಿತು....
ಮೊದಲಿನ ಸಾಲುಗಳು (ಶಾಲೆಗೆ ಹೋಗುವ ದಿನಗಳು) ಯಾವುದೊ ಕಲ್ಪನಾ ಲೋಕಕ್ಕೆ ಕರೆದು ಕೊಂಡು ಹೋಗಿತ್ತು ...ಅಂತ ಪರಿಸರದಲ್ಲಿ ಬೆಳೆದ ನೀವೇ ಧನ್ಯರು......
ಗುರು

Pramod said...

ಕಾಲೈ ತಸ್ಮೈ ನಮಃ :)

Bilimale said...

edde undu marayre

AKUVA said...

ಮೇಡಂ, ನಿಮ್ಮ ಲೇಖನ ತುಂಬಾ ಹಿಡಿಸಿತ್ತು . ನನ್ನದ್ದೂ ಅದೇ ಪರಿಸ್ಥಿತಿ. ಮುಂಬೈ ಗೆ ಬಂದ ಮೇಲೆ ಪಾದೂರಿನ ಗುಡ್ಡೆಯ ನೆನಪು ಕಾಡಿದೆ. ಅದೇ ಬೈಲು...ಬೀಸಿ ಕರೆದಿದೆ. ಮುಂಬೈ ನಲ್ಲಿ ಬೇರು ಇನ್ನು ಪಸರಲಿಲ್ಲ ...ಬಹುಶ: ಕಾಂಕ್ರೀಟು ನ ಒಳಗೆ ಬೇರು ನುಸುಳುವುದಿಲ್ಲ . ಇನ್ನೂ ಚಡಪಡಿಕೆ ಇದೆ.