




ಆತ್ಮೀಯರಾದ ನಿಮಗೆಲ್ಲಾ ಸಂಕ್ರಾತಿಯ ಶುಭಾಶಯಗಳು.
ಸಂಕ್ರಾತಿ, ಮುಖ್ಯವಾಗಿ ರೈತಾಪಿ ವರ್ಗದ ಹಬ್ಬ; ಸುಗ್ಗಿಯ ಹಬ್ಬ. ರೈತ ಚಳಿಗಾಲದಲ್ಲಿ ಕಷ್ಟಪಟ್ಟು ಬೆಳೆದ ಬೆಳೆಯೆಲ್ಲವನ್ನು ಮನೆ ತುಂಬಿಸಿಕೊಳ್ಳುವ ಸಂಭ್ರಮದ ಹಬ್ಬ. ಆದರೆ ಸಂಭ್ರಮ ಪಡುವ ಸ್ಥಿತಿಯಲ್ಲಿದ್ದಾನೆಯೇ ನಮ್ಮ ರೈತ?
ಉತ್ತರ ಕರ್ನಾಟಕದ ರೈತರ ಸ್ಥಿತಿ ಏನಾಗಿದೆಯೆಂದು ವಿವರಿಸುವ ಅಗತ್ಯವೇ ಇಲ್ಲ. ಮಲೆನಾಡಿನ ರೈತರ ಸ್ಥಿತಿಯೂ ಈಗ ಚಿಂತಾಜನಕವಾಗತೊಡಗಿದೆ. ಕಾಫಿ ತೋಟದ ಮಾಲೀಕ ಚಿಂತಾಕ್ರಾಂತನಾಗಿದ್ದಾನೆ. ಮಳೆಯ ರಭಸಕ್ಕೆ ಕಾಫಿ ಬೀಜ ಗಿಡದ ಬುಡ ಸೇರಿದೆ
ನಾನು ಇಂದು ತಾನೆ ನನ್ನ ಅಡಿಕೆ ತೋಟದಿಂದ ಹಿಂದಿರುಗಿ ಬಂದೆ. ಮನಸ್ಸು ಭಾರವಾಗಿತ್ತು. ಅಂಗಳದಲ್ಲಿ ಬಿಸಿಲಲ್ಲಿ ಒಣಗಲು ಹಾಕಿದ ಅಡಿಕೆಯೆಲ್ಲಾ ಮಳೆಯಿಂದ ಒದ್ದೆಯಾಗಿತ್ತು. ನನ್ನೊಬ್ಬಳದಲ್ಲ. ಮಲೆನಾಡಿನ ಎಲ್ಲಾ ಅಡಿಕೆ ಬೆಳೆಗಾರರ ದುಸ್ಥಿತಿಯಿದು. ಈ ವರ್ಷ ಮಳೆಗಾಲಕ್ಕೆ ವಿರಾಮವೆಂಬುದೇ ಇಲ್ಲ. ಕರಾವಳಿ ಜಿಲ್ಲೆಗಳಾದ ಉಡುಪಿ, ದ.ಕ, ಉತ್ತರ ಕನ್ನಡ ಮತ್ತು ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಲೂರು, ಕೊಡಗು ಜಿಲ್ಲೆಗಳಲ್ಲಿ ಪ್ರತಿದಿನ ಸಂಜೆ ಮೋಡ ಕವಿಯುತ್ತದೆ. ದಿನಬಿಟ್ಟುದಿನವೆಂಬಂತೆ ಧಾರಾಕಾರ ಮಳೆ ಸುರಿಯುತ್ತದೆ. ಈ ಜಿಲ್ಲೆಗಳಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆ. ಅದು ನೆಲ ಕಚ್ಚಿದರೆ ರೈತ ಸತ್ತಂತೆಯೇ. ಇದಕ್ಕೆ ಕಾರಣವಿದೆ.
ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ರೈತರು ಹೆಚ್ಚಾಗಿ ತರಕಾರಿ ಮತ್ತು ಆಹಾರದ ಬೆಳೆಗಳನ್ನು ಬೆಳೆಯುತ್ತಾರೆ. ತರಕಾರಿಯಾದರೆ ಮೂರು ತಿಂಗಳ ಬೆಳೆ. ಹಾಗಾಗಿಯೇ ತರಕಾರಿ ಬೆಳೆದ ರೈತ ತಾನು ಹಾಕಿದ ಬೀಜದ ಬೆಲೆಯೂ ಸಿಗದೆಂದು ಗೊತ್ತಾದಾಗ ಸರಕಾರಕ್ಕೆ ಹಿಡಿಶಾಪ ಹಾಕುತ್ತಾ ಅದನ್ನು ಹೊಲದಲ್ಲಿಯೇ ಕೊಳೆಯಲು ಬಿಡುತ್ತಾನೆ. ಅದರ ಮೇಲೆಯೇ ಉಳುಮೆ ಮಾಡಿ ಹೊಸದೊಂದು ಬೆಳೆ ತೆಗೆಯಲು ಮಾನಸಿಕವಾಗಿ ಸಿದ್ಧನಾಗುತ್ತಾನೆ. ಆಹಾರದ ಬೆಳೆ ಬೆಳೆಯುವ ರೈತ ಕೂಡ ವರ್ಷದಲ್ಲಿ ಎರಡು ಬೆಳೆ ತೆಗೆಯುತ್ತಾನೆ. ಆದರೆ ಅಡಿಕೆ ಬೆಳೆಗಾರನದು ವರ್ಷದ ಬೆಳೆ. ಅದು ಹಾಳಾದರೆ ವರ್ಷದ ಆಧಾಯ ಹೋದಂತೆಯೇ. ಈಗ ಅಡಿಕೆ ಬೆಳೆಗಾರ ವರ್ಷದ ಆದಾಯ ಕಳೆದುಕೊಳ್ಳುತ್ತಿದ್ದಾನೆ. ಮಾತ್ರವಲ್ಲ, ಆತನ ಮುಂದಿನ ವರ್ಷದ ಆಧಾಯ ಕೂಡ ಕೈತಪ್ಪುವ ಲಕ್ಷಣಗಳಿವೆ. ಅಡಿಕೆ ಹಣ್ಣಾಗುತ್ತಿರುವ ಜೊತೆಯಲ್ಲಿಯೇ ಮುಂದಿನ ವರ್ಷದ ಫಸಲಿನ ಹಿಂಗಾರವೂ ಕುಡಿಯೊಡೆಯುತ್ತದೆ. ಈಗ ಸುರಿಯುತ್ತಲಿರುವ ಸತತ ಮಳೆಯಿಂದಾಗಿ ಅಡಿಕೆ ಮಿಡಿ ಒಣಗಿ ಬೀಳುತ್ತಲಿದೆ.
ಅಡಿಕೆ ಬೆಳೆಗಾರ ಅಡಿಕೆಯ ಜೊತೆ ಹಲವು ಉಪ ಬೆಳೆಗಳನ್ನು ಬೆಳೆಯುತ್ತಾನೆ. ಅವುಗಳಲ್ಲಿ ಕೊಕ್ಕೊ ಮಿಡಿಗಳು ಕಪ್ಪಾಗಿ ಉದುರುತ್ತಿದೆ; ಗೇರುಬೀಜದ ಹೂ ಕರಟಿ ಹೋಗಿವೆ. ಬಿಸಿಲು ಮಳೆಯಿಂದಾಗಿ ರಬ್ಬರು ಹಾಲು ಅರ್ಧಕ್ಕೆ ಇಳಿದಿದೆ. ಇದ್ದುದರಲ್ಲಿ ಬಾಳೆ ಬೆಳೆದ ರೈತನಿಗೆ ಹಾನಿಯಾದ [ಅಡಿಕೆ ತೋಟದ ಮಧ್ಯೆ ] ಬಗ್ಗೆ ಮಾಹಿತಿ ದೊರಕಿಲ್ಲ.
ಮಲೆನಾಡಿನ ರೈತ ಹಲವಾರು ಸಮಸ್ಯೆಗಳಿಂದ ತತ್ತರಿಸಿ ಹೋಗಿದ್ದಾನೆ. ಕೃಷಿ ಕೂಲಿ ಕಾರ್ಮಿಕರ ಕೊರತೆಯೇ ಇದರಲ್ಲಿ ಬಹು ದೊಡ್ಡದು. ಧರ್ಮಸ್ಥಳದ ಸ್ವಸಹಾಯ ಗುಂಪುಗಳ ಕೊಡುಗೆಯೂ ಇದರಲ್ಲಿದೆ. ನನ್ನ ಜಮೀನಿನ ಸುತ್ತ ಹಲವಾರು ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಅವರ ಮಕ್ಕಳು ದೂರದೂರುಗಳಲ್ಲಿ ಕೈತುಂಬಾ ಸಂಬಳ ತರುವ ಕೆಲಸಗಳಲ್ಲಿ ದುಡಿಯುತ್ತಿದ್ದಾರೆ. ಅವರಿಗೆ ಭೂಮಿಯ ಜೊತೆ ಭಾವಾನಾತ್ಮಕ ಸಂಬಂಧವಿಲ್ಲ.ರೈತನ ಮಕ್ಕಳಿಂದು ರೈತರಾಗಿ ಉಳಿದಿಲ್ಲ. ಹಾಗಾಗಿ ಸಂಕ್ರಾಂತಿ ಈ ವರ್ಷ ಹರ್ಷ ತರುವ ಹಬ್ಬವಾಗಿ ಬಂದಿಲ್ಲ. ರೈತನ ಕಷ್ಟ ಗೊತ್ತಿಲ್ಲದ ಪೇಟೆ ಮಂದಿಗೆ ಇದೊಂದು ಸಡಗರದ ಪ್ರದರ್ಶಕ ಹಬ್ಬವಾಗಿ ಬಂದಿದೆ ಅಷ್ಟೇ.
3 comments:
ಸುರಗಿ,
ಇದು ದುಗುಡದ ಸಂಕ್ರಾಂತಿಯಾಗಿದೆ.
ಹೌದು,,, ನಮ್ಮ ರೈತರು ಎಷ್ಟು ಕಷ್ಟ ಪಡುತ್ತಿದ್ದಾರೆ ಅಲ್ವ.... ನಗರ ವಾಸಿಗಳಿಗೆ ಇದು ಗೊತ್ತಾಗುವುದೇ ಇಲ್ಲ.....ಅಡಿಕೆ ಬೆಳೆಯುವ ರೈತರ ಬಗ್ಗೆ ನಮಗೆ ಕಾಳಜಿ ಇದೆ... ಅವರು ಬೆಳೆದ ಬೆಳೆಗೆ ಒಳ್ಳೆ ಬೆಲೆ ಸಿಗಲಿ ಅಂತ ಬೇಡಿಕೊಳ್ಳುವೆ ....
ತೋಟ, ಮನೆ, ಕಪಿಲೆ. ಮೂರೂ ತುಂಬಾ ಖುಷಿ ಕೊಟ್ಟವು :)(ಫೋಟೋಗಳು)ಇಂಥ ನಿರಾಶಾದಾಯಕ ಸ್ಥಿತಿಯಲ್ಲೂ ಕೃಷಿಗೆ ಮರಳಿ ಕನಸು ಬಿತ್ತುವ ನಿಮ್ಮ ಪ್ರಯತ್ನಕ್ಕೆ ಗುಡ್ ಲಕ್ :)
Post a Comment