Thursday, January 28, 2010

ತುಳು ಭಾಷೆಗೇ ಗಗ್ಗರ ಕಟ್ಟಿದ ’ಗಗ್ಗರ’
ತುಳು ಚಿತ್ರ ’ ಗಗ್ಗರ’ಕ್ಕೆ ೨೦೦೮ರ ಶ್ರೇಷ್ಟ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ದೊರಕಿದೆ. ತುಳು ಭಾಷೆ, ಸಂಸ್ಕೃತಿ, ಪರಂಪರೆ ರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ಮಿಂಚಿತು.

’ಗಗ್ಗರ’ ಚಿತ್ರತಂಡವನ್ನು ’ಮೌನ ಕಣಿವೆ’ ಅಭಿನಂದಿಸುತ್ತಿದೆ

ಪ್ರಶಸ್ತಿ ವಿಜೇತ ಚಿತ್ರಗಳು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತವೆ; ಮನಸ್ಸನ್ನು ಕಕ್ಕಾಬಿಕ್ಕಿಯಾಗಿಸುತ್ತದೆ. ಸಿದ್ಧಾಂತಗಳ ಹೊರೆಯನ್ನು ಹೊರಿಸುತ್ತವೆ.ಬಹು ಪ್ರಯಾಸದಿಂದ ಸಿನೆಮಾದ ಆಶಯವನ್ನು ಹುಡುಕಬೇಕಾಗುತ್ತದೆ. ಅದೇ ಅಳುಕಿನಿಂದ ’ಗಗ್ಗರ’ದ ಮುಂದೆ ಕೂತೆ.
೧೧೦ ನಿಮಿಷಗಳ ಈ ಚಿತ್ರ ನನ್ನ ಪೂರ್ವಾಗ್ರಹಗಳನ್ನೆಲ್ಲಾ ತೊಡೆದು ಹಾಕಿತು. ಒಂದು ಒಳ್ಳೆಯ ಕಲಾತ್ಮಕ ಸಿನೇಮಾ ನೋಡಿದ ಅನುಭವ ನನ್ನದಾಯಿತು. ನಿರ್ದೇಶಕರಾಗಿ ಶಿವಧ್ವಜ್ ಭರವಸೆ ಮೂಡಿಸಿದ್ದಾರೆ. ಗುರುದತ್ ಈ ಚಿತ್ರದ ನಿರ್ಮಾಪಕರು.

ಜಾಗತೀಕರಣದ ಹೊಡೆತಕ್ಕೆ ಸಿಲುಕಿ ನಮ್ಮ ಭಾಷೆ, ಸಂಸ್ಕೃತಿ, ಆಚರಣೆ, ಸಂಪ್ರದಾಯ ಎಲ್ಲವೂ ಬದಲಾಗುತ್ತಿದೆ; ರೂಪಾಂತರಗೊಳ್ಳುತ್ತಿದೆ; ಸ್ಥಿತ್ಯಂತರಗೊಳ್ಳುತ್ತಿದೆ. ಅಂತಹ ಸಂಕ್ರಮಣಾವಸ್ಥೆಯನ್ನು ಹಿಡಿದಿಡುವ ಪ್ರಯತ್ನವನ್ನು ’ಗಗ್ಗರ’ ಮಾಡಿದೆ.

ಭೂತಾರಾಧನೆ ತುಳುನಾಡಿನ ಒಂದು ವಿಶಿಷ್ಟ ಆರಾಧನಾ ಪದ್ಧತಿ. ’ಭೂತ’ ಅಂದರೆ ಅತಿಮಾನುಷ ಶಕ್ತಿ. ಅದು ಭೂಮಿ ದೈವವೂ ಹೌದು. ಅದು ಜನ, ಜಾನುವಾರು, ಬಿತ್ತಿದ ಬೆಳೆಯನ್ನು ಕಾಪಾಡುತ್ತದೆ ಎಂಬುದು ತುಳುವರ ನಂಬಿಕೆ. ಇಂತಹ ಭೂತವನ್ನು ವರ್ಷಕ್ಕೊಂದು ಬಾರಿ ಕೃತಜ್ನತೆಯಿಂದ ನೆನಪಿಸಿಕೊಳ್ಳುವ ಸಂದರ್ಭವೇ ’ಕೋಲ’

ಕೋಲದಲ್ಲಿ ’ಭೂತ’ ವ್ಯಕ್ತಿಯೊಬ್ಬನ ಮೈಯಲ್ಲಿ ಅವಾಹನೆಗೊಳ್ಳುತ್ತದೆ. ತುಳುನಾಡಿನಲ್ಲಿ ಭೂತ ಅಥವಾ ಕೋಲ ಕಟ್ಟಲು ಪರವ, ಪಂಬದ, ಅಜಿಲ, ನಲಿಕೆಯರೆಂಬ ಪ್ರತ್ಯೇಕ ಜನಾಂಗವಿದೆ. ಅವರು ಪರಿಶಿಷ್ಟ ಜಾತಿಗೆ ಸೇರಿದವರು. ಬಹುತೇಕ ಜನರಿಗೆ ಸ್ವಂತ ಮನೆ-ಜಮೀನು ಇಲ್ಲ. ಕೂಲಿ ನಾಲಿ ಮಾಡಿಕೊಂಡು ಬದುಕು ಸಾಗಿಸುತ್ತಿರುವವರು. ಉಳ್ಳವರ/ಮೇಲ್ಜಾತಿಯವರ ಮನೆಯೊಳಗೆ ಇವರಿಗೆ ಪ್ರವೇಶವಿಲ್ಲ.

ಈಗ, ವರ್ತಮಾನದಲ್ಲಿ ಭೂತ ಕಟ್ಟುವವರ ಮಕ್ಕಳು ವಿದ್ಯಾವಂತರಾಗಿದ್ದಾರೆ, ನೌಕರಿಯಲ್ಲಿದ್ದಾರೆ. ಅವರು ಭೂತ ಕಟ್ಟಲು ತಯಾರಿಲ್ಲ. ಹಳಬರಿಗೆ ಮೈಯಲ್ಲಿ ಕಸುವಿಲ್ಲ. ಇಂಥ ಸಂದರ್ಭವುಂದರ ಡಾಕ್ಯುಮೆಂಟೇಶನ್ನಿಗಾಗಿ ವಿದೇಶಿ ತಂಡವೊಂದು ಗ್ರಾಮಕ್ಕೆ, ಶಂಕರನ ಮನೆಗೆ ಬರುತ್ತದೆ. ಇದು ಸಿನೇಮಾ ಆರಂಭದ ಶಾಟ್. ಪ್ರಸ್ತುತ ಮೇಸ್ಟ್ರಾಗಿರುವ ಆತ ತನ್ನ ಭೂತ ಕಾಲದ ಬದುಕನ್ನು ಅವರೆದುರು ತೆರೆದಿಡುತ್ತಾನೆ. ಅವನ ನಿರೂಪಣೆ ಇಂಗ್ಲೀಷಿನಲ್ಲಿರುವುದರಿಂದ ನಿರ್ಮಾಪಕರು ಮೊದಲೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವಂತಿದೆ.

ಭೂತ ಕಟ್ಟುವ ವ್ಯಕ್ತಿ ಚನಿಯ ಮತ್ತು ಅವನ ವಿದ್ಯಾವಂತ ಮಗ ಶಂಕರ ’ಗಗ್ಗರ’ದ ಕೇಂದ್ರ ಪಾತ್ರಗಳು. ತುಳುವೇತರರಿಗೆ ’ಗಗ್ಗರ’ ಪರಿಚಯವಿರಲಾರದು. ಗಗ್ಗರ ಅಂದರೆ ಭೂತದ ಕಾಲಿನ ಹಿತ್ತಾಳೆಯ ಗೆಜ್ಜೆ ಆಭರಣ. ಭೂತಾರಾಧನೆಯಲ್ಲಿ ಗಗ್ಗರ ಕಟ್ಟುವುದೇ ಬಹಳ ಮುಖ್ಯವಾದ ಅಂಶ. ಭೂತ ಕಟ್ಟುವಾತ ಮೊದಲು ಅದನ್ನು ಪೂಜಿಸಿ. ಅರ್ಚಿಸಿ ಅದನ್ನು ಧರಿಸಲು ಊರ ಹತ್ತು ಸಮಸ್ತರಿಂದ ಅನುಮತಿಯನ್ನು ಬೇಡಿ ಅದನ್ನು ತನ್ನ ಕಾಲಿಗೆ ಕಟ್ಟಿಕೊಳ್ಳುತ್ತಾನೆ. ಆಗ ಅವನಿಗೆ ಆವೇಶ ಬರುತ್ತದೆ. ಭೂತ ಅವನಲ್ಲಿ ಅವಾಹನೆಗೊಳ್ಳುತ್ತದೆ. ಅಲ್ಲೊಂದು ’ಮಧ್ಯಂತರ ಜಗತ್ತು’ ಸೃಷ್ಟಿಯಾಗುತ್ತದೆ. ಊರ ಹತ್ತು ಸಮಸ್ತರ ಮನೆಯಲ್ಲಿ ಆಳಾಗಿ ದುಡಿಯುವ, ಆ ಅಸ್ಪ್ರಶ್ಯ ವ್ಯಕ್ತಿ ಆ ಹೊತ್ತಿಗೆ ಅತಿಮಾನುಷ ಶಕ್ತಿಯಾಗಿ ಮಾರ್ಪಡುತ್ತಾನೆ. ಭೂತ ನೀಡುವ ಅಭಯ ನುಡಿಗಾಗಿ ಮೆಲ್ವರ್ಗದ ಜನರು ಅವನೆದುರು ಕೈಮುಗಿದು ನಿಲ್ಲುತ್ತಾರೆ.

ಚನಿಯನ ಸೊಂಟ ಆಕಸ್ಮಿಕವಾಗಿ ಎತ್ತರದಿಂದ ಬಿದ್ದು ಮುರಿಯುತ್ತದೆ. ಅವನಿಂದ ಕೋಲ ಮಾಡಿಸಿಕೊಳ್ಳುತ್ತಿದ್ದ ಊರಿನ ಹತ್ತು ಸಮಸ್ತರು ಅವನಿಗೆ ಪುಡಿಕಾಸನ್ನು ನೀಡುತ್ತಾರೆಯೇ ಹೊರತು ಅವನ ಸಹಾಯಕ್ಕೆ ಬರುವುದಿಲ್ಲ. ಮಾನವೀಯತೆಯನ್ನೂ ತೋರುವುದಿಲ್ಲ. ಆದರೆ ವಾರ್ಷಿಕ ಕೋಲವನ್ನು ಶಂಕರ ಕಟ್ಟಬೇಕೆಂದು ಊರವರು ಹೇಳಿದಾಗ ಮೇಷ್ಟ್ರಾಗಿದ್ದ ಶಂಕರ ಒಪ್ಪುವುದಿಲ್ಲ. ಆತ ಊರವರಿಗೆ ಒಂದು ಪ್ರಶ್ನೆ ಕೇಳುತ್ತಾನೆ; ’ಈರೆಗ್ ದೈವ ಬೋಡು. ದೈವ ಕಟ್ಟುನಾಯೆ ಬೊಡ್ಚಿ’ [ನಿಮಗೆ ದೈವ ಬೇಕು, ದೈವ ಕಟ್ಟುವವನು ಬೇಡ ]. ಬಹುಶಃ ಈ ಪ್ರಶ್ನೆ ಸಿನೆಮಾದ ಅಂಡರ್ ಕರೆಂಟ್; ಸಮಾಜಕ್ಕೆಸೆದ ಪ್ರಶ್ನೆ.

ಶಂಕರನದೂ ತುಳುನಾಡ ಸಂಸ್ಕೃತಿಯೇ. ಅಲ್ಲಿ ದೇವರಿಗಿಂತಲೂ ದೈವದ [ಭೂತದ] ಮೇಲಿನ ನಂಬಿಕೆಯೇ ಹೆಚ್ಚು. ಆತ ಕೋಲ ಕಟ್ಟುತ್ತಾನೆ. ಕೋಲ ತೀರಿದ ಮೇಲೆ ಆತ ಊರವರಲ್ಲಿ ತಮ್ಮ ಜನಾಂಗದ ಬವಣೆಗಳ ಬಗ್ಗೆ ತಿಳಿಸಿ ಅದಕ್ಕೆ ಸೂಕ್ತ ಮಾನವೀಯ ಪರಿಹಾರವನ್ನು ಕೊಡಲು ಕೇಳಿಕೊಳ್ಳುತ್ತಾನೆ. ಅದನ್ನವರು ಒಪ್ಪಿಕೊಂಡರೂ ಗಂಭೀರವಾಗಿ ತೆಗೆದುಕೊಂಡ ಬಗ್ಗೆ ಸಮರ್ಥನೆಗಳು ಸಿನೆಮಾದಲ್ಲಿ ದೊರೆಯುವುದಿಲ್ಲ. ಶಂಕರ ಎಸೆದ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದು ಬಿಡುತ್ತದೆ. ಸ್ವಲ್ಪ ಅಧ್ಯಯನ ನಡೆಸಿ ಸ್ಕ್ರಿಪ್ಟ್ ತಯಾರಿಸಿದ್ದರೆ ಅತ್ಯುತ್ತಮ ಸಿನೇಮಾವಾಗುವ ಕಸುವು ’ಗಗ್ಗರ’ದಲ್ಲಿತ್ತು. ಸಿನೇಮಾದ ಕೊನೆಯಲ್ಲೇನೊ ಶಂಕರ ಸ್ಕೂಟರಿನಲ್ಲಿ ಕೋಲದ ಪರಿಕರಗಳನ್ನಿಟ್ಟುಕೊಂಡು ಪತ್ನಿ ಮಗನೊಡನೆ ಕೋಲ ಕಟ್ಟಲು ತೆರಳುತ್ತಾನೆ. ಮಾತ್ರವಲ್ಲ ಮಗನ ಬಾಯಿಯಿಂದ ’ನಾನೂ ಕೋಲ ಕಟ್ಟುತ್ತೇನೆ’ ಎಂದು ಹೇಳಿಸುತ್ತಾನೆ. ಇದು ಕೆಳಜಾತಿಯ ವಿದ್ಯಾವಂತ ತರುಣನೊಬ್ಬನ ವೈಯಕ್ತಿಕ ನಿಲುವಿನಂತೆ ಪ್ರೇಕ್ಷಕನಿಗೆ ಭಾಸವಾಗುತ್ತದೆ. ಸಮುದಾಯದ ಪಾಲ್ಗೊಳ್ಳುವಿಕೆಯ ಕುರುಹು ಸಿಗುವುದಿಲ್ಲ.

ನಿರ್ದೇಶಕರು ತಮ್ಮಷ್ಟಕ್ಕೆ ಸುಮ್ಮನೆ ಸಂಯಮದಿಂದ ಅಚ್ಚುಕಟ್ಟಾಗಿ ಸಿನೆಮಾ ಮಾಡಿಕೊಂಡು ಹೋಗಿದ್ದಾರೆ. ಆಚೀಚೆ ತಿರುಗಲಿಲ್ಲ. ಭಾರತದ ಎಲ್ಲಾ ಪ್ರದರ್ಶನ ಕಲೆಗಳ, ಆರಾಧನಾ ಕಲೆಗಳ ಇಂದಿನ ಪರಿಸ್ಥಿತಿ ಇದೇ ಆಗಿದೆ. ಯಾಕೆಂದರೆ ಅದು ಜಾತಿಯೊಡನೆ ತಳುಕು ಹಾಕಿಕೊಂಡಿದೆ. ನಮ್ಮ ಜಾನಪದ ಕಲೆ ನಮ್ಮ ಸಂಪತ್ತು. ಅದು ಉಳಿಯಬೇಕೆಂದು ನಾವು ಬಯಸುತ್ತೇವೆ. ಅಂದರೆ ಜಾತಿ ಪದ್ದತಿಯೂ ಉಳಿಯಬೇಕೆ?

ಕೆಲವು ವರ್ಷಗಳ ಹಿಂದೆ ತುಳುನಾಡಿನಲ್ಲಿ ನಡೆದ ಘಟನೆಯೊಂದು ನೆನಪಾಗುತ್ತಿದೆ. ಆಟಿಕಳಂಜ ಮತ್ತು ಸಿದ್ಧವೇಶವನ್ನು ಯಾರೂ ಹಾಕುತ್ತಿರಲ್ಲಿಲ್ಲ. ಆಗ ಮೇಲ್ಜಾತಿಯ ಜಾನಪದ ಉಪನ್ಯಾಸಕರೊಬ್ಬರು ತಮ್ಮ ಆಸಕ್ತ ಬಳಗದೊಡನೆ ಈ ವೇಷಗಳನ್ನು ಹಾಕಿ ಮನೆ ಮನೆಗೆ ಹೋಗಿ ಕುಣಿದು ಅವರು ಕೊಟ್ಟ ಕಾಣಿಕೆಯನ್ನು ಸ್ವೀಕರಿಸಿದ್ದರು. ಅವರೇನೂ ತಮ್ಮ ಗುರುತನ್ನು ಬಹಿರಂಗಪಡಿಸಿರಲಿಲ್ಲ. ಮಹಾರಾಷ್ಟ್ರದಲ್ಲಿ ತಮಾಷಾ ನೃತ್ಯವನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಕಲಿಸಲಾಗುತ್ತಿದೆ. ಹಿಂದೆ ಅದು ಮರ್ಯಾದಸ್ಥರ ಕಲೆಯಾಗಿರಲಿಲ್ಲ.

ಗಗ್ಗರದಲ್ಲಿ ಎನ್ನೇಬಿಯವರ ಸರಳವಾದ ಚಿಕ್ಕ ಚಿಕ್ಕ ಸಂಭಾಷಣೆ ಮನಸ್ಸನ್ನು ತಟ್ಟುತ್ತದೆ. ಆದರೆ ಶಂಕರ ಭೂತ ಕಟ್ಟುವ ಸಂದರ್ಭದಲ್ಲಿನ ಸಂಭಾಷಣೆ ಇನ್ನಷ್ಟು ಮೊನಚಾಗಿದ್ದರೆ ಸಿನೇಮಾದ ಆಶಯಕ್ಕೆ ಇನ್ನಷ್ಟು ಪುಷ್ಟಿ ದೊರೆಯುತ್ತಿತ್ತು ಮಾತ್ರವಲ್ಲ ಶಂಕರನಿಗೆ ಗಟ್ಟಿ ವ್ಯಕ್ತಿತ್ವ ದೊರೆಯುತ್ತಿತ್ತು. ಆತನಿಗೆ ಪ್ರತಿಭಟನೆಯ ಹಕ್ಕಿದೆ. ಕಲೆಗೊಂದು ಮುನ್ನೋಟವಿರಬೇಕು; ವಾಸ್ತವ ಸಂಗತಿಗಳನ್ನಷ್ಟೇ ತಿಳಿಸಿದರೆ ಸಾಲದು. ನಿರ್ದೇಶಕರು ತಮ್ಮ ಸ್ವಾತಂತ್ರ್ಯವನ್ನು ಪೂರ್ಣಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಲಿಲ್ಲ. ಜಾತಿ ವ್ಯವಸ್ಥೆ, ಜಾನಪದ ಕಲೆಗಳ ಉಳಿವಿನಂತಹ ಮೂಲಭೂತ ಪ್ರಶ್ನೆಗಳನ್ನು ಗಂಭೀರ ನೆಲೆಯಲ್ಲಿ ತರಬಹುದಿತ್ತು. ಒಂದು ಸಾಮಾಜಿಕ ಸಂಘರ್ಷದ ಚಿತ್ರಣವನ್ನು ಹಿಡಿದಿಡಲು ಇಲ್ಲಿ ಅವರಿಗೆ ಅವಕಾಶವಿತ್ತು .

ಚನಿಯನಾಗಿ ಎಂ.ಕೆ.ಮಠ್ ಅವರದ್ದು ಅತ್ಯುತ್ತಮ ಅಭಿನಯ. ಅವರ ಪತ್ನಿಯಾಗಿ ಜಯಶೀಲ ತನ್ನ ಮುಗ್ದತೆಯಿಂದಾಗಿ ಮನ ಗೆಲ್ಲುತ್ತಾರೆ. ಭೂತ ಆವೇಶಗೊಳ್ಳುವ ಸಂದರ್ಭವೊಂದು ಬಿಟ್ಟರೆ ಸುಚೇಂದ್ರಪ್ರಸಾದ್ ಶಂಕರನ ಪಾತ್ರಕ್ಕೆ ಜೀವತುಂಬಿದ್ದಾರೆ. ಆದರೆ ನಿರೂಪಕ ಶಂಕರ ಸಿನೇಮಾದ ಓಘಕ್ಕೆ ಭಂಗ ತರುತ್ತಾರೆ. ಟೈಟಲ್ ಕಾರ್ಡ್ ಮತ್ತು ಅದಕ್ಕೆ ಬಳಸಿದ ಸಂಗೀತ ಕೂಡ ಆಕರ್ಷಕವಾಗಿಲ್ಲ. ಭೂತರಾಧನೆಯ ಮೌಖಿಕ ಸಾಹಿತ್ಯವಾದ ’ಪಾಡ್ದನ’ವನ್ನು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಅದರೆ ಚಿತ್ರದುದ್ದಕ್ಕೂ ಮೌನವನ್ನು ಸಮರ್ಥಕವಾಗಿ ಬಳಸಿಕೊಳ್ಳಲಾಗಿದೆ. ಸುರೇಶ ಬೈರಸಂದ್ರರ ಛಾಯಗ್ರಹಣವಂತೂ ಕೆಲವು ಸಂದರ್ಭದಲ್ಲಿ ಸುಪರ್ಭ್ ಅನ್ನಿಸುವಂತಿದೆ. ಚನಿಯನ ಮನೆಗೆ ಮಾಡಿದ ಬೆಳಕಿನ ಸಂಯೋಜನೆ ಕ್ಲಾಸಿಕ್. ಸಿನೇಮಾವನ್ನು ಒಟ್ಟಂದದಲ್ಲಿ ನೋಡಿದರೆ ಅದು ಇನ್ನೂ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಳ್ಳುವ ಸಾಧ್ಯತೆಗಳಿವೆ.

2 comments:

ವಿ.ಆರ್.ಭಟ್ said...

good going

Bilimale said...

enchina andala oro gaggara sinema tovodu marayre!