ಚಿತ್ರದಲ್ಲಿರುವವರು ನಮ್ಮ ಅಪ್ಪ ಕಟ್ಟೆಮನೆ ನೇಮಣ್ಣಗೌಡರು. ಇವರು ದಶಂಬರ ೨ರಂದು ದೈವಾಧೀನರಾದರು. ಅವರಿಗೆ ೮೫ ವರ್ಷವಾಗಿತ್ತು.
ನಮ್ಮ ಅಪ್ಪ ಎಂದೊಡನೆ ನನ್ನ ಕಣ್ಮುಂದೆ ಬರುವುದು ಸಣಕಲು ದೇಹದ, ಸ್ವಲ್ಪ ಬಾಗಿದ ಬೆನ್ನಿನ ಎತ್ತರದ ವ್ಯಕ್ತಿ. ಅವರನ್ನು ಮೊದಲು ನೋಡಿದಾಗ ನನ್ನ ಮಗ ಪ್ರಶ್ನಿಸಿದ್ದು ಹೀಗೆ ”ನನ್ನ ಅಜ್ಜನ ಮನೆಯಲ್ಲಿ ಗಾಂದೀಜಿ ಯಾಕಿದ್ದಾರೆ?” ಇದವರ ಹೊರನೋಟದ ವ್ಯಕ್ತಿತ್ವ. ನನ್ನ ದೊಡ್ಡಮ್ಮನ ಮಗ, ಪುರುಷೋತ್ತಮ ಬಿಳಿಮಲೆ ಹೇಳಿದ್ದು, ” ನಾನು ಕಂಡ ಅತ್ಯಂತ ಮುಗ್ಧ, ಪ್ರಾಮಾಣಿಕ ವ್ಯಕ್ತಿ ನನ್ನ ಚಿಕ್ಕಪ್ಪ”. ನನ್ನ ಪತಿ ಶಶಿಧರ್ ಭಟ್ ಕೂಡಾ ನನ್ನಪ್ಪನಲ್ಲಿ ಅದೇ ಮುಗ್ದತೆಯನ್ನು ಕಂಡಿದ್ದರು. ವ್ಯಕ್ತಿಗತವಾಗಿ ಕೂಡಾ ಅವರು ಗಾಂದೀಜಿಯ ಅನುಯಾಯಿಯಂತೆಯೇ ಸ್ವಾವಲಂಬಿಯಾಗಿ ಬದುಕಿದ್ದರು.
೧೯೨೫ನೇ ಇಸವಿ ಮೇ ೧೦ರಂದು ಜನಿಸಿದ ಅಪ್ಪ, ಈ ಲೋಕಕ್ಕೆ ಬಂದೊಡನೆಯೇ ತಾಯಿಯನ್ನು ಕಳೆದುಕೊಂಡರು. ನನ್ನಜ್ಜ ನಾಗಪ್ಪ ಗೌಡರು ಇನ್ನೊಂದು ಮದುವೆಯಾದರು. ಆ ನನ್ನಜ್ಜಿ ನಿಜವಾದ ಅರ್ಥದಲ್ಲಿ ಮಲತಾಯಿಯೇ ಆಗಿದ್ದರು ಎಂದು ಆಕೆಯನ್ನು ಕಣ್ಣಾರೆ ಕಂಡವರ ಬಾಯಿಯಿಂದ ನಾನು ಕೇಳಿದ್ದೇನೆ.
ಅಪ್ಪನಿಗೆ ಒಬ್ಬ ಅಣ್ಣ ಮತ್ತು ಒಬ್ಬ ಅಕ್ಕ ಇದ್ದರು. ಹಾಗೆಯೇ ಚಿಕ್ಕ ಅಜ್ಜಿಯಿಂದ ಹುಟ್ಟಿದ ಇಬ್ಬರು ತಮ್ಮಂದಿರು ಮತ್ತು ಒಬ್ಬ ತಂಗಿ ಇದ್ದರು. ಈ ಆರು ಮಂದಿ ಮಕ್ಕಳಲ್ಲಿ ಎಲ್ಲರ ಅನಾಧರಣೆಗೆ ತುತ್ತಾಗಿ ಬೆಳೆದವರು ನಮ್ಮಪ್ಪನಂತೆ. ಇದೆಲ್ಲಾ ಅಂತೆ-ಕಂತೆಗಳ ಸಂತೆಯಾದರೂ ಆಸ್ತಿ ಹಂಚಿಕೆಯ ವಿಷಯದಲ್ಲಿ ಅಪ್ಪನಿಗೆ ಕೊನೆಯ ಆಯ್ಕೆ ಸಿಕ್ಕಿದ್ದು ಮಾತ್ರ ನಮ್ಮ ಗಮನಕ್ಕೂ ಬಂದಿತ್ತು.
ಅಣ್ಣ-ತಮ್ಮಂದಿರ ಮಧ್ಯೆ ಆಸ್ತಿ ಪಾಲು ಮಾಡುವ ಊರ ಪ್ರಮುಖರು ಯಾರಿಗೂ ಅನ್ಯಾಯವಾಗದಂತೆ ಸಮ ಪಾಲು ಮಾಡುತ್ತಾರೆ. ಪಾಲನ್ನು ಆಯ್ದುಕೊಳ್ಳುವ ಮೊದಲ ಅವಕಾಶ ಅತೀ ಕಿರಿಯರಿಗೆ ಹೋಗುತ್ತದೆ. ಹಾಗೆ ಎಲ್ಲರೂ ಬಿಟ್ಟು ಉಳಿದ ಕಲ್ಲು ಮುಳ್ಳುಗಳಿಂದ ಕೂಡಿದ ಜಾಗ ಮತ್ತು ಕೊಳೆ ರೋಗದ ಹಾಳು ತೋಟ ನಮ್ಮಪ್ಪನ ಪಾಲಿಗೆ ಬಂದಿತ್ತು. ಆ ವರ್ಷ ನಮಗೆ ಸಿಕ್ಕಿದ ಅಡಿಕೆ ಒಂದು ಕ್ವಿಂಟಾಲ್ ಮಾತ್ರ. ಆದರೆ ಫಲವತ್ತಾದ ಕಂಬಳದ ಗದ್ದೆ ಆ ಪಾಲಿನಲ್ಲಿತ್ತು.
ನಾನು ಮತ್ತು ನನ್ನಣ್ಣ ದಯಾನಂದ ನಮ್ಮ ಆದಿ ಮನೆ ಕಟ್ಟೆಮನೆಯಲ್ಲೇ ಜನಿಸಿದ್ದೆವು. ಅದು ತುಂಬಾ ವಿಸ್ತಾರವಾದ ಮನೆ. ಹತ್ತಾರು ಕೊಟಡಿಗಳಿದ್ದವು. ಒಟ್ಟು ಕುಟುಂಬವಾದ ಕಾರಣ ಪ್ರತಿ ದಂಪತಿಗೂ ಪ್ರತ್ಯೇಕವಾದ ಕೊಟಡಿಗಳು. ಆಸ್ತಿ ಹಂಚಿಕೆಯಾದ ಮೇಲೆ ಒಬ್ಬೊಬ್ಬರಾಗಿ ಆ ಮನೆಯಿಂದ ಹೊರನಡೆದರು. ಆದರೆ ನಮಗೆ ಬೇರೆ ಮನೆಯಿರಲಿಲ್ಲ.
ಆದಿಮನೆಯನ್ನು ನಾವೆಲ್ಲಾ ಇಂದಿಗೂ ದೊಡ್ಡಮನೆ ಎಂದೇ ಕರೆಯುತ್ತೇವೆ. ಚಿತ್ರ ಚಿತ್ತಾರದ ಗೋದಿ ಕಂಬಗಳಿರುವ ಪಡಸಾಲೆ ಆ ಮನೆಯ ವಿಶೇಷ ಆಕರ್ಷಣೆ. ಇಂತಹದೇ ಇನ್ನೊಂದು ಮನೆ ಆ ಊರಲ್ಲಿದೆ. ಅದು ಕೂಜುಗೋಡು ಮನೆ. ಒಂದು ತಿಂಗಳ ಹಿಂದೆ ನಿರ್ದೇಶಕ ಪಿ. ಶೇಷಾದ್ರಿಯವರು ಇದೇ ಮನೆಗಳಲ್ಲಿ ತಮ್ಮ ಹೊಸ ಚಿತ್ರ ’ಬೆಟ್ಟದ ಜೀವ’ ದ ಚಿತ್ರೀಕರಣ ಮಾಡಿದ್ದರು.
ಒಂದೇ ತರಹದ ಆ ಮನೆಗಳ ಬಗ್ಗೆ ಹೇಳುವ ಮೊದಲು ಕಟ್ಟೆಮನೆ ಮನೆತನದ ಬಗ್ಗೆ ಹೇಳಬೇಕು. ನಾವು ವಲಸಿಗರು. ಘಟ್ಟದ ಮೇಲಿನಿಂದ ಇಳಿದು ಬಂದವರು. ಸುಮಾರು ಕ್ರಿಸ್ತ ಶಕ ೧೫೦೦ರಲ್ಲಿ ಹೇಮಾವತಿ ನದಿ ತೀರದಿಂದ ಬಿಸಿಲೆ ಘಾಟ್ ಮಾರ್ಗವಾಗಿ ದನ ಹೊಡೆದುಕೊಂಡು ತುಳುನಾಡಿಗೆ ಬಂದವರು ನಾವು. ಜಾನಪದ ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆಯವರು ಮೌಕಿಕ ಪರಂಪರೆಯಿಂದ ತಿಳಿದುಕೊಂಡಂತೆ ಎರಡು ಕಾರಣಗಳಿಂದ ನಮ್ಮ ಹಿರಿಯರು ಆ ಊರನ್ನು ಬಿಟ್ಟಿರಬಹುದು ಎಂದು ಅಭಿಪ್ರಾಯಪಡುತ್ತಾರೆ. ಒಂದು ಆಗ ಆ ಬಾಗವನ್ನು ಆಳುತ್ತಿದ್ದ ಲಿಂಗಾಯಿತ ಧರ್ಮದವರಾದ ಇಕ್ಕೇರಿ ವಂಶಸ್ಥರ ಕಿರುಕುಳಕ್ಕೆ ಬೆದರಿ ಓಡಿ ಹೋಗಿರಬಹುದು. ಇನ್ನೊಂದು ಆ ಕಾಲಘಟ್ಟದಲ್ಲಿ ಹೇಮಾವತಿ ನದಿ ಪ್ರದೇಶದಲ್ಲಿ ಕೆಂಡದ ಮಳೆ ಸುರಿದಿತ್ತೆಂಬ ಐತಿಹ್ಯವಿದೆ. ಅಂದರೆ ಭೀಕರ ಬರಗಾಲ ಬಂದಿರಬೇಕು. ಒಟ್ಟಿನಲ್ಲಿ ನಮ್ಮ ಹಿರಿಯರಲ್ಲಿ ಒಂದು ಗುಂಪು ಮಡಿಕೇರಿ ಮಾರ್ಗವಾಗಿ ಬಾಗಮಂಡಲಕ್ಕೆ ಬಂದು ನೆಲೆ ನಿಂತು ಕುಂಭಗೌಡನ ಮನೆ ಎಂಬ ಪ್ರತ್ಯೇಕ ಮನೆತನವಾಯ್ತು.
ತುಳುನಾಡಿಗೆ ಬಂದು ಕುಮಾರಧಾರ ನದಿ ಸುತ್ತಮುತ್ತಲಲ್ಲಿ ನೆಲೆ ನಿಂತ ನಮ್ಮ ಇನ್ನೊಂದು ಶಾಖೆ ಕಟ್ಟೆಮನೆ ಮೊತ್ತಮೊದಲ ಬಾರಿಗೆ ಆ ಪ್ರದೇಶಕ್ಕೆ ನೇಗಿಲನ್ನು ಪರಿಚಯಿಸಿತಂತೆ. ಅಂದರೆ ಆಧುನಿಕ ಕೃಷಿ ಪದ್ಧತಿಯನ್ನು ಜನಪ್ರಿಯಗೊಳಿಸಿತಂತೆ. ಅಲ್ಲಿಯವರೆಗೆ ಅಲ್ಲಿನ ಜನ ಕುಮೇರಿ ಬೆಳೆ ಮಾತ್ರ ಬಿತ್ತುತ್ತಿದ್ದರು. ನೇಗಿಲಿಗೆ ತುಳು ಭಾಷೆಯಲ್ಲಿ ’ನಾಯೆರ್’ ಎನ್ನುತ್ತಾರೆ. ನಮ್ಮ ’ಬಳಿ’ ಅಂದರೆ ಗೋತ್ರ ಕೂಡಾ ನಾಯೆರ್. ಇಲ್ಲಿಗೆ ಬಂದ ನಮ್ಮ ಕುಟುಂಬ ಮತ್ತೆ ಎರಡು ಹೋಳಾಗಿ ಒಂದು ’ಕೂಜುಗೋಡು’ ಮನೆತನವಾಯ್ತು. ಇನ್ನೊಂದು ’ಕಟ್ಟೆಮನೆ’ ಮನೆತನವಾಯ್ತು.
ಐನಿಕಿದು ಮತ್ತು ಬಾಳುಗೋಡು ಗ್ರಾಮಗಳಲ್ಲಿ ಹಂಚಿಕೊಂಡಿರುವ ಈ ಮನೆತನಗಳಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿವೆ. ಜನಸಂಖ್ಯೆ ಸಾವಿರದ ಹತ್ತಿರ ತಲುಪಬಹುದು. ಬಹುಶಃ ಕೂಜಗೌಡ, ಕಟ್ಟೆಗೌಡ ಮತ್ತು ಕುಂಭಗೌಡ ಎಂಬ ಅಣ್ಣ- ತಮ್ಮಂದಿರ ಹೆಸರಿನಲ್ಲಿ ಮೂರು ಮನೆತನಗಳು ಜನ್ಮ ತಾಳಿರಬಹುದು. ಯಾಕೆಂದರೆ ಈ ಮೂರೂ ಮನೆತನಗಳಿಗೆ ಘಟ್ಟದ ಮೇಲಿನ ಹಾಸನ ಜಿಲ್ಲೆಯ ಹೊಸಕೋಟೆ ಕೆಂಚಮ್ಮ ಮನೆದೇವರು. ಪರಸ್ಪರ ಈ ಕುಟುಂಬಗಳ ನಡುವೆ ವೈವಾಹಿಕ ಸಂಬಂಧಗಳಿಲ್ಲ.
ಕಟ್ಟೆಮನೆ ಮನೆತನದ ಬಗ್ಗೆ ಸುಳ್ಯ ಪರಿಸರದ ಒಕ್ಕಲಿಗ ಗೌಡರಲ್ಲಿ ವಿಶೇಷ ಗೌರವವಿದೆ. ದೈವ-ದೇವತಾ ಕಾರ್ಯಗಳಲ್ಲಿ ಮೊದಲ ಗೌರವವನ್ನು ಈ ಮನೆತನದವರಿಗೆ ನೀಡಲಾಗುತ್ತಿದೆ. ನನಗೆ ಈಗಲೂ ನೆನಪಿದೆ; ನಾನು ಚಿಕ್ಕಂದಿನಲ್ಲಿ ಒಂದು ಸತ್ಯನಾರಾಯಣ ಪೂಜೆಗೆ ಹೋಗಿದ್ದೆ. ಅಲ್ಲಿ ಪೂಜೆ ಮುಗಿದ ಮೇಲೆ ’ಯಾರದರೂ ಕಟ್ಟೆಮನೆಯವರು ಇದ್ದರೆ ಮುಂದೆ ಬನ್ನಿ’ ಎಂದು ಕರೆದು ಮೊದಲ ಪ್ರಸಾದವನ್ನು ನನಗೆ ಕೊಟ್ಟಿದ್ದರು. ನಾವಿಲ್ಲವಾದರೆ ನಮ್ಮ ಸಂಬಂಧಿಕರಿಗೆ ಆ ಗೌರವ ಸಲ್ಲುತ್ತಿತ್ತು. ಈಗ ಆ ಸಂಪ್ರದಾಯ ಇದ್ದಂತಿಲ್ಲ.
ಈ ಗೌರವಕ್ಕೆ ಕಟ್ಟೆಮನೆ ಪಾತ್ರವಾಗಲೂ ಇನ್ನೂ ಒಂದು ಕಾರಣವಿದೆ. ಅದು ಶೃಂಗೇರಿ ಪೀಠಕ್ಕೂ ಕಟ್ಟೆಮನೆಗೂ ಇರುವ ಸಂಬಂಧ. ಸುಳ್ಯ ಸೀಮೆಯ ಒಕ್ಕಲಿಗರಿಂದ ಕಾಣಿಕೆಯನ್ನು ಸಂಗ್ರಹಿಸುವ ಅಧಿಕಾರವನ್ನು ಶೃಂಗೇರಿ ಪೀಠ ಕಟ್ಟೆಮನೆಗೆ ನೀಡಿತ್ತು. ಪೀಠ ಕೊಟ್ಟ ತಾಮ್ರದ ತೋಳಬಂದಿಯನ್ನು ಧರಿಸಿ ಕಟ್ಟೆಯ ಮೇಲೆ ಕುಳಿತು ಆ ಮನೆತನದ ಹಿರಿಯ ಕರ ವಸೂಲು ಮಾಡುತ್ತಿದ್ದರಂತೆ. ಆ ತೋಳಬಂದಿ ಈಗಲೂ ನಮ್ಮ ಆದಿಮನೆಯಲ್ಲಿದೆ. ಅದಕ್ಕೆ ಶೃಂಗೇರಿ ಪೀಠದಲ್ಲಿ ದಾಖಲೆಗಳಿವೆ.
೧೮೩೭ರಲ್ಲಿ ಕೊಡಗು ಮತ್ತು ದಕ್ಷಿಣಕನ್ನಡ ಜಿಲ್ಲೆಯೊಳಗೊಂಡಂತೆ ಬ್ರಿಟಿಷರ ವಿರುದ್ಧ ದಂಗೆಯೆದ್ದ ’ಅಮರ ಸುಳ್ಯ ದಂಗೆ’ ಅಥವಾ ’ಕಲ್ಯಾಣಪ್ಪನ ಕಾಟಕಾಯಿ’ ಹೋರಾಟದ ಮುಂಚೂಣಿಯಲ್ಲಿ ಕಟ್ಟೆಮನೆಯವರಿದ್ದರು.
ಇಂಥ ಕಟ್ಟೆಮನೆಯಲ್ಲಿ ಜನಿಸಿದವರಿಗೆ ಕೆಲವು ಕಟ್ಟುಪಾಡುಗಳಿದ್ದವು. ಬಹುಶಃ ಎಲ್ಲಾ ಐತಿಹಾಸಿಕ ಹಿನ್ನೆಲೆಯುಳ್ಳ ಮನೆತನಗಳಲ್ಲಿ ಇದಿರುತ್ತದೆ. ಅದೆಂದರೆ ಸಾರಾಯಿ ಕುಡಿಯಬಾರದು, ಜೂಜಾಡಬಾರದು, ಕೋಳಿಅಂಕದಲ್ಲಿ ಭಾಗವಹಿಸಬಾರದು.... ಒಟ್ಟಿನಲ್ಲಿ ಮನೆತನದ ಗೌರವಕ್ಕೆ ಕುಂದುಂಟಾಗುವ ಯಾವ ಕೆಲಸವನ್ನೂ ಮಾಡಬಾರದು. ನಮ್ಮಪ್ಪ ಅದನ್ನು ಚಾಚೂ ತಪ್ಪದೆ ಪಾಲಿಸಿದ್ದರು.
ಇಂತಹ ಹಿನ್ನೆಲೆಯುಳ್ಳ ನಮ್ಮಪ್ಪ ಆದಿಮನೆಯನ್ನು ಬಿಟ್ಟು ತಮ್ಮ ಸ್ವಂತ ಗೂಡು ಕಟ್ಟಿಕೊಳ್ಳಲು ಹೊರಟರು.
ಕುಕ್ಕೆಸುಬ್ರಹ್ಮಣ್ಯ ಸಮೀಪದ ಐನಕಿದು ಗ್ರಾಮದ ಆದಿಮನೆಯಿಂದ ಸುಮಾರು ನಾಲ್ಕು ಮೈಲು ದೂರದಲ್ಲಿರುವ ಬಾಳುಗೋಡು ಗ್ರಾಮದ ಪನ್ನೆ ಎಂಬಲ್ಲಿ ನಮ್ಮ ಆಸ್ತಿ ಇತ್ತು. ಬೆಳಿಗ್ಗೆ ಬೇಗನೆ ಎದ್ದು ಬುತ್ತಿ ಕಟ್ಟಿಕೊಂಡು ಕೆಲಸದಾಳು ಗುಂಡ ಬೈರನನ್ನು ಕರೆದುಕೊಂಡು ನಮ್ಮಪ್ಪ ಪನ್ನೆಗೆ ಬರುತ್ತಿದ್ದರು. ಗುಂಡ ಮತ್ತು ನಮ್ಮಪ್ಪ ಇಬ್ಬರೇ ಸೇರಿ ಒಂದು ರೂಂ, ಅಡಿಗೆ ಮನೆ ಮತ್ತು ವಿಶಾಲವಾದ ವರಾಂಡದ ಗಟ್ಟಿಯಾದ ಸೋಗೆ ಮನೆಯೊಂದನ್ನು ಕಟ್ಟಿದ್ದರು. ಅವರು ತಂದ ಬುತ್ತಿಯನ್ನು ಪಕ್ಕದಲ್ಲಿಯೇ ಇದ್ದ ಅಂಟುವಾಳ ಕಾಯಿಯ ಪುಟ್ಟ ಗಿಡವೊಂದಕ್ಕೆ ನೇತು ಹಾಕುತ್ತಿದ್ದರು. ಅನಂತರ ದೊಡ್ಡ ಮರವಾಗಿ ಕ್ವಿಂಟಾಲ್ ಗಟ್ಟಲೆ ಕಾಯಿ ಬಿಡುತ್ತಿದ್ದ ಆ ಮರ ಭಾವನಾತ್ಮಕವಾಗಿ ನಮಗೆಲ್ಲಾ ತುಂಬಾ ಹತ್ತಿರವಾಗಿತ್ತು.
ಕಷ್ಟ ಕಾರ್ಪಣ್ಯಗಳ ಮಧ್ಯೆಯೂ ಸ್ವಸಾಮರ್ಥ್ಯದಿಂದ ಬದುಕನ್ನು ಕಟ್ಟಿಕೊಂಡ ನಮ್ಮಪ್ಪ ಕ್ರಮೇಣ ಅರ್ಥಿಕವಾಗಿ ಸಧೃಢವಾಗತೊಡಗಿದರು. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಎಂಟನೇ ಕ್ಲಾಸ್ ತನಕ ಓದಿದ್ದ ನನ್ನಪ್ಪ ವಿಧ್ಯೆಯ ಮಹತ್ವವನ್ನು ಅರಿತಿದ್ದರು. ನಮ್ಮನ್ನೆಲ್ಲಾ ವಿದ್ಯಾವಂತರಾಗಿಸುವುದೇ ಅವರ ಗುರಿಯಾಗಿತ್ತು, ಹೈಸ್ಕೂಲ್, ಕಾಲೇಜುಗಳು ದೂರದೂರಿನಲ್ಲಿ ಇದ್ದ ಕಾರಣದಿಂದ ಅದು ಸುಲಭ ಸಾಧ್ಯವಾಗಿರಲಿಲ್ಲ.
ಒಂದು ದಿನ ಸೊಸೈಟಿಯ ಜಪ್ತಿ ವಾಹನ ನಮ್ಮ ಮನೆ ಮುಂದೆ ಬಂದು ನಿಂತಿತು. ನಾವೆಲ್ಲಾ ಕಂಗಾಲಾದೆವು. ಯಾಕೆಂದರೆ ನಾವು ಸಾಲ ಮಾಡಿರಲಿಲ್ಲ. ವಿಚಾರಿಸಿದಾಗ ತಿಳಿಯಿತು; ನಮ್ಮಪ್ಪನ ಹೆಸರಲ್ಲಿ ನಮ್ಮ ದೊಡ್ಡಪ್ಪ ಸಾಲಮಾಡಿದ್ದರು. ಅಪ್ಪನಿಂದ ಉಪಾಯವಾಗಿ ಸಹಿ ಹಾಕಿಸಿಕೊಂಡಿದ್ದರು. ಜಪ್ತಿಯನ್ನು ತಾತ್ಕಾಲಿಕವಾಗಿ ತಡೆಯಲಾದರೂ ಅವರಿಗೆ ಸ್ವಲ್ಪ ಹಣ ನೀಡಲೇಬೇಕಾಗಿತ್ತು. ಮನೆಯಲ್ಲಿ ಒಂದು ಪೈಸೆಯೂ ಇರಲಿಲ್ಲ. ಆದರೆ ಹಿಂದಿನ ದಿನ ತಾನೇ ನಮ್ಮ ಆಮ್ಮ ತವರು ಮನೆಗೆ ಹೋಗಿ ಬಂದಿದ್ದರು. ನಮ್ಮ ಅಜ್ಜ ಶ್ರೀಮಂತರು. ಅವರಿಗೆ ಇಬ್ಬರೇ ಹೆಣ್ಣುಮಕ್ಕಳು. ಬರುವಾಗ ನಮ್ಮ ತಾಯಿಗೆ ಅವರು ಸ್ವಲ್ಪ ದುಡ್ಡು ಕೊಟ್ಟಿದ್ದರು. ಅದನ್ನೇ ನನ್ನ ಅಮ್ಮ ತಂದು ಅಪ್ಪನ ಕೈಯ್ಯಲಿಟ್ಟರು.ಸೊಸೈಟಿಯವರು ಸಾಲ ಕಟ್ಟಲು ವಾಯಿದೆ ಕೊಟ್ಟು ಹೊರಟರು. ಆದರೆ ಇದರಿಂದಾಗಿ ನಾವು ಬಹು ದೊಡ್ಡ ಪಾಠ ಕಲಿತೆವು.
ನನ್ನ ಅಣ್ಣ ಆಗ ಪಿಯುಸಿ ಓದುತ್ತಿದ್ದ. ಆತ ಓದು ನಿಲ್ಲಿಸಿ ಮನೆಯ ಜವಾಬ್ದಾರಿ ವಹಿಸಿಕೊಂಡ. ಮಣ್ಣಿನೊಡನೆ ಗುದ್ದಾಟಕಿಳಿದ. ’ಭೂಮಿ ನನ್ನನ್ನು ನೋಡಿ ಹೆದರಬೇಕು’ ಅಂದುಕೊಳ್ಳುತ್ತಲೇ ಒಂದಿಂಚೂ ಭೂಮಿಯನ್ನೂ ಬಿಡದೆ ಕೃಷಿ ಮಾಡಿದ. ಅಡಿಕೆ, ತೆಂಗು, ಬಾಳೆ, ಕರಿಮೆಣಸು, ಕೊಕ್ಕೋ... ನಮ್ಮ ಜಮೀನು ಸಮೃದ್ಧಿಯಿಂದ ಬೀಗತೊಡಗಿತು. ತಾಯಿ ಕೆಂಚಮ್ಮನ ದಯೆಯಿಂದ ಮಿನಿ ಲಾರಿ, ಕಾರು ಕೊಂಡುಕೊಂಡ. ವಿಶಾಲವಾದ ಮನೆ ಕಟ್ಟಿಸಿದ. ಅಧುನಿಕ ದನದ ಕೊಟ್ಟಿಗೆ ಕಟ್ಟಿಸಿದ. ಪ್ರಗತಿಪರ ಕೃಷಿಕನಾಗಿ ಬೆಳೆದ. ಅವುಗಳ ನಡುವೆಯೇ ತಂಗಿಯರನ್ನೂ ಓದಿಸಿದ.
ಅಪ್ಪ, ಅಣ್ಣನಿಗೆ ಮಾರ್ಗದರ್ಶಕರಾದರು. ಅಮ್ಮ ಎಲ್ಲರಿಗೂ ಬೆನ್ನೆಲುಬಾಗಿ ನಿಂತರು. ಸರಿಕರ ಎದುರು ನಾವೆಲ್ಲಾ ತಲೆಯೆತ್ತಿ ನಡೆದೆವು. ಬದುಕಿನ ಇಳಿಸಂಜೆಯಲ್ಲಿ ಅಪ್ಪ ನೆಮ್ಮದಿಯ ಜೀವನವನ್ನು ಕಂಡರು. ಕೊನೆಯದಿನಗಳಲ್ಲಿ ನಾವೆಲ್ಲಾ ಮಕ್ಕಳು ಅವರ ಬಳಿಯಲ್ಲೇ ಇದ್ದೆವು. ಅದರಲ್ಲೂ ಅತ್ತಿಗೆ ಮತ್ತು ಅಮ್ಮ ಅವರನ್ನು ಮಗುವಿನಂತೆ ನೋಡಿಕೊಂಡರು. ಇಡೀ ಊರು ಅವರ ಅಂತಿಮ ಯಾತ್ರೆಯಲ್ಲಿ ಭಾಗಿಯಾಗಿ ಗೌರವ ಸಲ್ಲಿಸಿತು. ಈಗವರು ನಮ್ಮ ತೆಂಗಿನ ತೋಟದ ನಡುವೆ ನೆಮ್ಮದಿಯಿಂದ ಮಲಗಿದ್ದಾರೆ.
7 comments:
'ಕಟ್ಟೆಮನೆ ನೇಮಣ್ಣಗೌಡ ಅವರಿಗೆ ನೆನಪಿನ ಬರಹದ ಶ್ರದ್ದಾಂಜಲಿ ಸಲ್ಲಿಸಿದ್ದಿರಿ. ಸುದೀರ್ಘ ಕಾಲ ಬಾಳಿ-ಬದುಕಿದ-ನಂಬಿದ ಜೀವಗಳನ್ನೂ ಬದುಕಿಸಿದ ಜೀವಕ್ಕೆ ಸಂದ ನಿಜವಾದ ಗೌರವ. ತಂದೆ ನೆನಪು ಮಾಡಿಕೊಳ್ಳುತ್ತಲೇ ವಂಶದ ಮೂಲ ನೆನೆದಿರುವುದು ಆಸಕ್ತಿಕರ. ಬ್ರಿಟಿಷರ ವಿರುದ್ಧದ ’ಅಮರ ಸುಳ್ಯ ದಂಗೆ’ ಅಥವಾ ’ಕಲ್ಯಾಣಪ್ಪನ ಕಾಟಕಾಯಿ’ ಹೋರಾಟದಲ್ಲಿ ಕಟ್ಟೆಮನೆಯವರಿದ್ದರು ಎನ್ನುವುದು ನಿಮಗಷ್ಟೆ ಅಲ್ಲ; ನಾಡಿಗೂ ಅಭಿಮಾನದ ಸಂಗತಿ. ಇಂಥ ನೆನಪು ಅಮರ...
ಬಹಳ ಚೆನ್ನಾದ ಬರಹ.
ಚಿಕ್ಕಪ್ಪನ ಬಗೆಗೆ ಬರೆದ ಬರೆಹ ಆಪ್ತವಾಗಿದೆ. ಕಳೆದ ೫೦ ವರ್ಷಗಳಿಂದ ನಾನು ಅವರನ್ನು ಬಲ್ಲೆ. ಕಮಿಲದಿಂದ ಗುತ್ತಿಗಾರು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ನಾನು ಅಜ್ಜಿ- ಕಮಿಲದವ್ವನ ಜೊತೆ ಆಗಾಗ ಚಿಕ್ಕಪ್ಪನನ್ನು ಭೇಟಿಯಾಗುತ್ತಿದ್ದೆ. ಮುಂದೆ ಸಂಶೋಧನೆ ಗೆ ಕೆಲಸ ಮಾಡುತ್ತಿದ್ದಾಗ ಅವರು ನನ್ನ ಪ್ರಮುಖ ಮಾಹಿತಿದಾರ ಆಗಿದ್ದರು. ಎಳವೆಯ ಕಷ್ಟಗಳು ಅವರ ಮನಸನ್ನು ಕಹಿ ಮಾಡಿರಲಿಲ್ಲ. ಮನಸಿನ ಮುಗ್ಧತೆಯನ್ನು ಅವರು ಎಂದೂ ಕಳೆದುಕೊಂಡಿರಲಿಲ್ಲ. ಬಿಡುವಿನಲ್ಲಿ ನಾನು ಆಗಾಗ ನನ್ನ ವೈಚಾರಿಕತೆಯ ಬಗ್ಗೆ ಹೇಳುವಾಗ ಅವರು ಬಹಳ ಕುತೂಹಲದಿಂದ ಅವನ್ನು ಕೇಳಿಸಿಕೊಳ್ಳುತ್ತಿದ್ದರು. ಆದರೆ ಅವರ ನಿರ್ಮಲ ಮನಸಿನ ಮುಂದೆ ನನ್ನ ವಾದಗಳೆಲ್ಲ ಹರಿತ ಕಳೆದು ಕೊಳ್ಳುತ್ತಿದ್ದವು. ಬೆಟ್ಟದ ಜೀವದ ಗೋಪಾಲಯ್ಯನ ಹಾಗೇ / ದೇರಣ್ಣನ ಹಾಗೇ ಅವರು ನನ್ನನ್ನು ಗದ್ದೆ ತೋಟ ಹೊಳೆಯ ಬದಿಗೆ ಕರೆದುಕೊಂಡು ಹೋಗುತ್ತಿದ್ದರು. ಪರಿಸರದ ಅವರ ತಿಳುವಳಿಕೆಯನ್ನು ಹಂಚಿಕೊಳ್ಳುತ್ತಿದ್ದರು. ಕರ್ವಾಲೋದ ಮಂದಣ್ಣನ ಹಾಗೇ ಅವರು ಪ್ರಕೃತಿಯಲ್ಲಿ ಅದ್ಭುತವಾದದ್ದನ್ನು ಕಾಣುತ್ತಿದ್ದರು, ಕಂಡದ್ದನ್ನು ಮಕ್ಕಳ ಹಾಗೇ ನಮಗೆ ಹಂಚುತ್ತಿದ್ದರು. ನನ್ನ ೫೫ ವರ್ಷಗಳ ಜೀವಿತಾವಧಿಯಲ್ಲಿ ನಾನು ಕಂಡ ಶುಭ್ರ ಮನಸಿನ ಕೆಲವೇ ವ್ಯಕ್ತಿಗಳಲ್ಲಿ ನನ್ನ ಚಿಕ್ಕಪ್ಪ ಕೂಡ ಒಬ್ಬರು. ಅವರ ಬಗ್ಗೆ ನನಗೆ ಹೆಮ್ಮೆ ಮತ್ತು ಅದರ. ಅವರ ನೆನಪು ಸದಾ ಹಸಿರಾಗಿರುತ್ತದೆ.
--
ತುಂಬಾ ಒಳ್ಳೆಯ ಬರಹ ಮೇಡಂ.. ಯಾರದೋ ಅಪ್ಪನ ಚಿತ್ರದಲ್ಲಿ ನನ್ನಪ್ಪನ ಚಿತ್ರ; ನನ್ನ ಕಣ್ಣಲ್ಲಿ ನೀರು.
ಸುಶ್ರುತ ನಿಮ್ಮ ಕಾಮೆಂಟ್ ಓದಿ ಕಣ್ಣು ಮಂಜಾಯಿತು. ಎಲ್ಲಾ ಅಪ್ಪಂದಿರೂ, ಅಮ್ಮಂದಿರೂ ಒಂದೆಯೇ. ಆದರೆ ಅವರನ್ನು ಸರಿಯಾಗಿ ನಾವು ಅರ್ಥ ಮಾಡಿಕೊಳ್ಳುವುದು ನಾವು ಅಪ್ಪ-ಅಮ್ಮಂದಿರಾದ ಮೇಲೆಯೇ! ಆದರೆ ಅಷ್ಟರಲ್ಲಾಗಲೇ ಅವರ ಎದೆಯ ಮೇಲೆ ನಾವು ಬಹಳಷ್ಟು ಸಲ ಒದ್ದಾಗಿರುತ್ತದೆ.ಕರುಳ ಸಂಬಂಧದಲ್ಲಿ ಅದನ್ನು ಪರಸ್ಪರ ಮರೆತಿರುತ್ತೇವೆ ಅಷ್ಟೆ.
ನನ್ನೆಲ್ಲಾ ಕೆಲಸ ಕಾರ್ಯಗಳಿಗೆ ಸದಾ ನೈತಿಕ ಬೆಂಬಲ ನೀಡುತ್ತಿರುವ ಅಣ್ಣ ಬಿಳಿಮಲೆಗೆ, ಪ್ರೀತಿಯಿಂದ ಪ್ರತಿಕ್ರಿಯಿಸಿದ ಕುಮಾರರೈತ ಮತ್ತು ರಾಜೇಶ್ ನಾಯ್ಕರಿಗೆ ವಂದನೆಗಳು.
ತು೦ಬಾ ತು೦ಬಾ ಆಪ್ತ ಬರಹ :(
ನ೦ದೂ ಪ್ರತಿಕ್ರಿಯೆ ಕೂಡ ಸುಶ್ರುತ ಅವರ ಪ್ರತಿಕ್ರಿಯೆನೇ ಆಗಿದೆ.
thumba aaptha baraha... ishta aayithu...
Post a Comment