Saturday, December 18, 2010

’ಮಂಗ’ನ ಕೈನಲ್ಲಿ ಮಾಣಿಕ್ಯ

ಆದ್ಯಾತ್ಮದ ಸಾಧನೆಗೆ ದೇಹ ದಂಡನೆಯೂ ಒಂದು ಮಾರ್ಗ. ಅದರ ಒಂದು ಛಾಯೆಯನ್ನು ಇತ್ತೀಚೆಗೆ ಕುಕ್ಕೆಸುಬ್ರಹ್ಮಣ್ಯದಲ್ಲಿ ನಡೆದ ’ಮಡೆಸ್ನಾನ’ಗಳಲ್ಲಿ ಕಾಣಬಹುದು. ಅದರ ಬಗ್ಗೆ ಮಾದ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆಯಿತು.
ಲೌಕಿಕ ಸುಖವೆಲ್ಲವೂ ’ನಾನು ’ನನ್ನದು’ ಎಂಬ ಪರಿಧಿಯೊಳಗೇ ಸುತ್ತುತ್ತಿರುತ್ತದೆ. ಅಲೌಕಿಕದ ಮೆಟ್ಟಲು ಹತ್ತಬೇಕಾದರೆ ’ನಾನು’ ಎಂಬ ಭಾವವನ್ನು ಕಳೆದುಕೊಳ್ಳಬೇಕು. ಅಹಂಕಾರವನ್ನು ಕಳೆದುಕೊಳ್ಳುವ ಈ ಹಾದಿಯಲ್ಲಿ ’ಬಿಕ್ಷೆ ಬೇಡುವುದು’ ಒಂದು ಮೆಟ್ಟಲು.
ಋಷ್ಯಾಶ್ರಮಗಳಲ್ಲಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳಿಗೆ ಭಿಕ್ಷಾವೃತ್ತಿ ಕಡ್ಡಾಯವಾಗಿತ್ತು. ಅವರು ಸುತ್ತಲ ಹಳ್ಳಿಗಳಲ್ಲಿ ಬೇಡಿ ತಂದ ಭಿಕ್ಷೆಯನ್ನು ಗುರುಗಳಿಗೂ ಕೊಟ್ಟು ತಾವುಣ್ಣಬೇಕಾಗಿತ್ತು ಇದು ಆಶ್ರಮದ ನಿಯಮಗಳಲ್ಲೊಂದು. ಉಪನಯನದಲ್ಲಿ ವಟು ತಾಯಿಯ ಬಳಿ ಹೋಗಿ ’ಭವತಿ ಭಿಕ್ಷಾಂ ದೇಹಿ’ ಎಂದು ಬೇಡುವುದು ಇಂದಿಗೂ ರೂಢಿಯಲ್ಲಿದೆ.
ಶಿವನೂ ಭಿಕ್ಷೆ ಬೇಡಿದ್ದಾನೆ. ಬುದ್ಧನೂ ಭಿಕ್ಷೆ ಬೇಡಿದ್ದಾನೆ. ಹಿಂದೆ ನವಕೋಟಿ ನಾರಾಯಣರೆನಿಸಿದ ಪುರಂಧರ ದಾಸರೇ ಅನಂತರದಲ್ಲಿ ಭಿಕ್ಷಾಟನೆಯನ್ನು ’ಮಧುಕರ ವೃತ್ತಿ ನಮ್ಮದು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಬೌದ್ದ ಮತ್ತು ಜೈನ ಧರ್ಮದಲ್ಲಿ ಭಿಕ್ಷುಗಳಿಗೆ ವಿಶೇಷ ಗೌರವವಿದೆ.

ಅನ್ಯರ ಮುಂದೆ ಬೊಗಸೆಯೊಡ್ಡಿ ’ದೇಹಿ’ ಎಂದು ಬೇಡುವುದು ಸಾಮಾನ್ಯರಿಂದ ಆಗದ ಕೆಲಸ. ತನ್ನ ಸ್ಥಾನ-ಮಾನ, ಘನತೆ-ಗೌರವಗಳನ್ನೆಲ್ಲಾ ಆ ಕ್ಷಣಕ್ಕೆ ಮರೆತು ’ಏನೂ ಅಲ್ಲ’ವಾಗುವ ಆ ಸ್ಥಿತಿಯೇ ಬಿಕ್ಷುಕ ಸ್ಥಿತಿ. ಕೊಡುವ ಕೈ ಯಾವಾಗಲೂ ಮೇಲಿರುತ್ತದೆ.ಬೇಡುವ ಕೈ ಕೆಳಗಿರುತ್ತದೆ.

ಇಂಥ ಉದಾತ್ತ ಮೌಲ್ಯ ಕನ್ನಡದ ಸುದ್ದಿವಾಹಿನಿಯೊಂದರಲ್ಲಿ ಕ್ರೈಮ್ ಎಪಿಸೋಡುಗೆ ಆಹಾರವಾದ ಪರಿಯನ್ನು ನೋಡಿ ಬೆಚ್ಚಿಬಿದ್ದೆ.

’ಆರ್ಟ್ ಅಫ್ ಬೆಗ್ಗಿಂಗ್’ ಎಂಬ ಹೆಸರಿನಲ್ಲಿ ಪ್ರಸಾರವಾದ ಈ ಕಾರ್ಯಕ್ರಮ ಆಡಳಿತ ಪಕ್ಷಕ್ಕೆ ಹತ್ತಿರವಾದ ಆಶ್ರಮವೊಂದನ್ನು ಗುರಿಯಾಗಿರಿಸಿಕೊಂಡಂತಿತ್ತು. ಆ ಆಶ್ರಮದವರು ’ದಿವ್ಯ ಸಮಾಜ’ವನ್ನು ಕಟ್ಟುವ ಕನಸು ಕಂಡವರಂತೆ. ಅದಕ್ಕಾಗಿ ದೇಶ-ವಿದೇಶಗಳ ಒಂದಷ್ಟು ಭಕ್ತರಿಗೆ ಆಗಾಗ ಟ್ರೈನಿಂಗ್ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ.೨೧ ದಿನಗಳ ಈ ಟ್ರೈನಿಂಗ್ ನಲ್ಲಿ ಒಂದು ದಿನ ಬಿಕ್ಷೆ ಬೇಡುವುದು ಕಡ್ಡಾಯ. ಹಾಗೆ ಬಿಕ್ಷೆ ಬೇಡಲು ಬೆಂಗಳೂರಿನ ವಿಜಯನಗರಕ್ಕೆ ಬಂದ ಅನನುಭವಿ ಬಿಕ್ಷುಕರು ಸಾರ್ವಜನಿಕರ ಅನುಮಾನಕ್ಕೆ ಗುರಿಯಾಗಿದ್ದಾರೆ. ಪೋಲಿಸರೂ ಬಂದಿದ್ದಾರೆ.ಮಾದ್ಯಮದವರೂ ಧಾವಿಸಿದ್ದಾರೆ. ಕೊನೆಗೆ ಆಶ್ರಮದ ಪ್ರತಿನಿಧಿಯೂ ಓಡೋಡಿ ಬಂದಿದ್ದಾರೆ. ತಾವು ಯಾಕೆ ಇಂತಹ ಕಾರ್ಯಕ್ರಮ ಯೋಜಿಸಿದ್ದೇವೆ ಮತ್ತು ಅದಕ್ಕೆ ಪೋಲಿಸ್ ಕಮಿಷನರಿಂದ ಅನುಮತಿಯನ್ನು ಪಡೆದುಕೊಂಡಿದ್ದೇವೆ ಎಂಬುದನ್ನು ಸಾರ್ವಜನಿಕರಿಗೆ ವಿವರಿಸಿದ್ದಾರೆ. ಅಲ್ಲಿಗೆ ಸಾರ್ವಜನಿಕರ ತಪ್ಪುಗ್ರಹಿಕೆ ನಿವಾರಣೆಯಾಗಿದೆ.

ಆದರೆ ಈ ಪ್ರಹಸನ ವಿಕೃತ ವ್ಯಖ್ಯಾನದೊಡನೆ ಅರ್ಧ ಘಂಟೆಯ ಕ್ರೈಮ್ ವರದಿಯಾಗಿ ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರವಾಗಿದೆ. ಅದರಲ್ಲಿ ಆ ಆಶ್ರಮವನ್ನು ’ಬಿಕ್ಷುಕರ ಟ್ರೈನಿಂಗ್ ಸೆಂಟರ್’ ಎಂದು ಬಿಂಬಿಸಲಾಗಿದೆ. ಅದರ ಸ್ಕ್ರಿಪ್ಟ್ ಬರೆದವರಿಗೆ ಆಧ್ಯಾತ್ಮದ ಗಂಧ ಗಾಳಿಯೂ ಇದ್ದಂತಿರಲಿಲ್ಲ.
ಬಿಕ್ಷುಕರಂತೆ ಕಾಣದ ಭಿಕ್ಷುಕರು ತಮ್ಮ ಪರಿಸರದಲ್ಲಿ ಕಂಡಾಗ ಅಲ್ಲಿನ ನಾಗರಿಕರು ಅನುಮಾನಗೊಳ್ಳುವುದು ಸಹಜ. ಅನುಮಾನ ಪಡಲೇ ಬೇಕು ಕೂಡಾ. ಆದರೆ ಪೂರ್ವಾಪರ ಯೋಚಿಸಬೇಕಾದ ಮಾಧ್ಯಮವೇ ಪಕ್ಷಪಾತಿಯಾಗಿ ವರ್ತಿಸಿದರೆ....? ಆಗ ಹೊಳೆದದ್ದೇ ’ಮಂಗ’ನ ಕೈಯ್ಯಲ್ಲಿ ಮಾಣಿಕ್ಯ’

2 comments:

sunaath said...

ನಿಮ್ಮ ವಿಶ್ಲೇಷಣೆ ಸರಿಯಾಗಿದೆ.

swati said...

ಮೊದಲಿಗೆ, ಅದು ಅಧ್ಯಾತ್ಮ ವೆಂದಾಗಬೇಕು.ನಿಮ್ಮ ಲೇಖನ ಚೆನ್ನಾಗಿತ್ತು .ನಿಜ, ಅರ್ಧ ತುಂಬಿದ ಕೊಡಗಳನ್ನು ನೋಡಿದರೆ ವಿಷಾದವಾಗುತ್ತದೆ. ಭಾರತೀಯ ಸಂಸ್ಕಾರದ ಉದಾತ್ತತೆಯನ್ನು ಅರ್ಥೈಸಿಕೊಳ್ಳದೆ ಅರ್ಧ ಗಂಟೆಯ ಕಾರ್ಯಕ್ರಮ ಮಾಡುವುದೇ ಉದ್ದೆಶವಾಗಿರುವವರಿಗೆ ಭಿಕ್ಷಾಟನೆ ಎನ್ನುವುದರ ಒಳಮರ್ಮ ಹೇಗೆ ಗೊತ್ತಾಗಬೇಕು ? ಇವರಿಗೆಲ್ಲ ಒಳಗಣ್ಣು ಕುರುಡು