Wednesday, January 5, 2011

ಬ್ಲಾಗರ್‌ಗಳೆಂಬ ಜರ್ನಲಿಸ್ಟುಗಳಿಗೆ ಜಯವಾಗಲಿ

ಇವರು ಪತ್ರಕರ್ತರಲ್ಲ, ಆದರೂ ಪತ್ರಕರ್ತರು. ಇವರು ಪತ್ರಿಕೋದ್ಯಮಿಗಳಲ್ಲ, ಆದರೂ ಪತ್ರಿಕೋದ್ಯಮಿಗಳು. ಇವರು ಬ್ಲಾಗರ್‌ಗಳು. ಪರ್ಯಾಯ ಮಾಧ್ಯಮವನ್ನು ಕಟ್ಟಿಕೊಂಡವರು.

ಇವರು ತಮ್ಮ ಪಾಡಿಗೆ ತಾವು ಬರೆಯುತ್ತಾರೆ. ಪಿಕ್ನಿಕ್ಕಿಗೆ ಹೋಗಿ ಬಂದ ಖುಷಿ, ಮನೆಯಲ್ಲಿ ಮಗು ಹುಟ್ಟಿದ ಸಡಗರ, ಕಸದ ತೊಟ್ಟಿಯಲ್ಲಿ ಎಸೆಯಲ್ಪಟ್ಟು ಸತ್ತ ಮಗುವಿನ ಕುರಿತ ಮರುಕ, ಹೊಸದಾಗಿ ಓದಿದ ಕವಿತೆಯ ಕನವರಿಕೆ, ಮನೆಯಲ್ಲಿ ಘಟಿಸಿದ ಸಾವಿನ ವಿಷಾದ, ರಸ್ತೆ ಅಪಘಾತದಲ್ಲಿ ಸತ್ತೋದವರ ಕುರಿತು ನೋವು, ಹಬ್ಬಗಳ-ವಿವಿಧ ಡೇ ಗಳ ಸಂಭ್ರಮ, ಹೊಸದಾಗಿ ಶಾಪಿಂಗ್ ಮಾಡಿದ ವಸ್ತುಗಳ ವಿವರ, ರಾತ್ರಿಯಷ್ಟೇ ಕಂಡ ದುಸ್ವಪ್ನದ ಕಿರಿಕಿರಿ... ಹೀಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ.

ಇವರ ಬ್ಲಾಗುಗಳಿಗೆ ಇವರೇ ಮಾಲೀಕರು, ಇವರೇ ಸಂಪಾದಕರು, ಇವರೇ ಉಪಸಂಪಾದಕರು, ಇವರೇ ವರದಿಗಾರರು, ಇವರೇ ಡಿಟಿಪಿ ಆಪರೇಟರ್‌ಗಳು. ಯಾರ ಅಂಕೆಯಲ್ಲಿ ಇವರಿಲ್ಲವಾದರೂ ತಮ್ಮ ತಮ್ಮ ಅಂಕೆಯಲ್ಲಿ ಇದ್ದು ಬರೆಯುವವರು.
ಇಲ್ಲಿನ ಬರವಣಿಗೆಯೂ ಅಷ್ಟೆ. ಅದಕ್ಕೆ ಯಾವುದರ ಹಂಗೂ ಇಲ್ಲ. ಎದೆ ಬಿಚ್ಚಿ ಹೇಳಲು ಕವಿತೆ, ದೊಡ್ಡದೇನನ್ನೋ ಹೇಳಲು ಸಣ್ಣ ಕತೆ, ಆತ್ಮಕಥನದ ಧಾಟಿಯ ಹರಟೆಗಳು, ಸೀರಿಯಸ್ಸಾದ ಪ್ರಬಂಧಗಳು... ಹೇಳುವುದಕ್ಕೆ ಸಾವಿರ ವಿಧಾನ, ಓದುವವರಿಗೆ ವ್ಯವಧಾನವಿರಬೇಕು ಅಷ್ಟೆ.

ಈ ಬ್ಲಾಗರ್‌ಗಳು ಸದಾ ಕ್ರಿಯಾಶೀಲರು. ಒಂದು ಪೋಸ್ಟಿನ ಹಿಂದೆ ಮತ್ತೊಂದು ಪೋಸ್ಟು ಒದ್ದುಕೊಂಡು ಬರುತ್ತಿದ್ದಂತೆ ಪುಳಕ. ಒಂದೊಂದು ಕಮೆಂಟಿಗೂ ಸಣ್ಣ ಖುಷಿ. ಗಿರ್ರನೆ ತಿರುಗುವ ಹಿಟ್ ಕೌಂಟರುಗಳನ್ನು ನೋಡಿದರೆ ಹೆಮ್ಮೆ. ಕ್ಲಸ್ಟರ್‌ಮ್ಯಾಪುಗಳಲ್ಲಿ ಇವತ್ತು ಅದ್ಯಾವುದೋ ಅನಾಮಿಕ ದೇಶವೊಂದರಲ್ಲಿ ಅಪರಿಚಿತ ಗೆಳೆಯ ತನ್ನ ಸೈಟನ್ನು ನೋಡಿದ್ದನ್ನು ಗಮನಿಸಿ ಸಂಭ್ರಮ.

ಇವರು ಸ್ನೇಹಜೀವಿಗಳು. ಒಬ್ಬರನ್ನು ಮತ್ತೊಬ್ಬರು ಕೈ ಹಿಡಿದು ಮೇಲಕ್ಕೆ ಎತ್ತುತ್ತಾರೆ. ಒಬ್ಬರ ಬ್ಲಾಗಿನಲ್ಲಿ ಮತ್ತೊಬ್ಬರ ಲಿಂಕು. ಅವಳಿಗೆ ಇವನು ಫಾಲೋಯರ್, ಇವನಿಗೆ ಅವಳು ಫಾಲೋಯರ್. ಒಬ್ಬರನ್ನು ಒಬ್ಬರು ಹಿಂಬಾಲಿಸುತ್ತ, ಪರಸ್ಪರ ಮೈದಡವುತ್ತ ಸಾಗುತ್ತಾರೆ. ಸಣ್ಣ ಗೇಲಿ, ಕಚಗುಳಿಯಿಡುವ ಕೀಟಲೆ, ಕಾಲೆಳೆಯುವ ತುಂಟಾಟ ಎಲ್ಲಕ್ಕೂ ಇಲ್ಲಿ ತೆರೆದ ಮನಸ್ಸು.

ಇಲ್ಲೂ ಧರ್ಮರಕ್ಷಣೆಯ ಮಣಭಾರ ಹೊತ್ತವರಿದ್ದಾರೆ, ಜಾತಿ ಕೂಟ ಕಟ್ಟಿಕೊಂಡವರಿದ್ದಾರೆ. ಆದರೆ ಮನುಷ್ಯತ್ವದ ವಿಷಯಕ್ಕೆ ಬಂದರೆ ಎಲ್ಲರೂ ಬಾಗುತ್ತಾರೆ. ಸಮೂಹಕ್ಕೆ ಇರುವಷ್ಟು ಕೆಡುವ, ಕೆಡಿಸುವ ಆಕ್ರಮಣಕಾರಿ ಗುಣ ವ್ಯಕ್ತಿಗಿರುವುದಿಲ್ಲವಲ್ಲ.

ಇಲ್ಲಿ ಎಲ್ಲವೂ ಖುಲ್ಲಂಖುಲ್ಲಾ. ಸರಿಯೆಂದು ತೋರಿದ್ದನ್ನು ಮೆಚ್ಚುಗೆಯಿರುತ್ತದೆ, ತಪ್ಪು ಕಂಡರೆ ಎಗ್ಗಿಲ್ಲದ ಟೀಕೆಯಿರುತ್ತದೆ. ಒಮ್ಮೆಮ್ಮೆ ತೀರಾ ಆಕ್ರೋಶ ಬಂದಾಗ ಇವರು ಅಮೀರ್‌ಖಾನನ ಚಿತ್ರದಲ್ಲಿ ಮೊಂಬತ್ತಿ ಹಿಡಿದು ಹೊರಟವರಂತೆ ಪ್ರತಿಭಟಿಸುತ್ತಾರೆ.

ಇವರು ಬ್ಲಾಗರ್‌ಗಳು. ಜರ್ನಲಿಸ್ಟುಗಳಲ್ಲದ ಜರ್ನಲಿಸ್ಟುಗಳು. ಇವರಿಗೆ ಖಾದ್ರಿ ಶಾಮಣ್ಣನವರ ಹೆಸರಿನಲ್ಲಿ, ಟಿಎಸ್‌ಆರ್ ಹೆಸರಿನಲ್ಲಿ, ನೆಟ್ಟಕಲ್ಲಪ್ಪನವರ ಹೆಸರಲ್ಲಿ ಯಾರೂ ಅವಾರ್ಡು ಕೊಡುವುದಿಲ್ಲ. ರಿಪೋರ್ಟರ‍್ಸ್ ಗಿಲ್ಡಿನಲ್ಲಿ, ಕೆಯುಡಬ್ಲ್ಯುಜೆಯಲ್ಲಿ, ಪ್ರೆಸ್ ಕ್ಲಬ್‌ನಲ್ಲಿ ಮೆಂಬರ್‌ಶಿಪ್ ಕೊಡುವುದಿಲ್ಲ. ಇವರಿಗೆ ಸಂಬಳವಿಲ್ಲ, ಸಾರಿಗೆ ವೆಚ್ಚ ಯಾರೂ ಕೊಡುವುದಿಲ್ಲ, ತಾವು ಬರೆದದ್ದನ್ನು ಓದಿದ್ದಕ್ಕೆ ಯಾರಿಂದಲೂ ಚಂದಾ ಪಡೆಯುವುದಿಲ್ಲ, ಇನ್ನು ಪಿಎಫ್ಫು, ಪಿಂಚಣಿ ಇಲ್ಲವೇ ಇಲ್ಲ.

ಕೆಲವರು ಬ್ಲಾಗರ್‌ಗಳನ್ನು ಸುಖಾಸುಮ್ಮನೆ ಬೈಯುತ್ತಾರೆ. ಕೋಣೆಯೊಳಗೆ ಬಾಗಿಲು ಮುಚ್ಚಿಕೊಂಡು ದುರ್ವಾಸನೆ ಬಿಟ್ಟು ಅದನ್ನು ಆಘ್ರಾಣಿಸುವವರು ಎಂದು ಇವರನ್ನು ಜರಿದವರೂ ಉಂಟು. ಆದರೆ ಪತ್ರಿಕೋದ್ಯಮದ ಹುಲಿ ಸವಾರಿಯನ್ನು ಬಿಟ್ಟ ನಂತರ ದೊಡ್ಡದೊಡ್ಡ ಪತ್ರಕರ್ತರಿಗೆ ಆಶ್ರಯ ಕೊಟ್ಟಿದ್ದು ಇದೇ ಅಂತರ್ಜಾಲ ತಾಣ. ಹುಲಿ ಸವಾರಿ ಮಾಡಿದವರಿಗೆ ಕುರಿಯನ್ನಾದರೂ ಕೊಡುವ ಶಕ್ತಿ ಈ ಜಾಲಕ್ಕಿದೆ.

ಪತ್ರಕರ್ತರಲ್ಲದಿದ್ದರೂ ಇವರು ಸೊ ಕಾಲ್ಡ್ ಮೇನ್‌ಸ್ಟ್ರೀಮಿನ ಪತ್ರಕರ್ತರಿಗೇ ಹೆಚ್ಚು ಅಚ್ಚುಮೆಚ್ಚು. ಸಂಪಾದಕೀಯದಂಥ ಬ್ಲಾಗುಗಳನ್ನು ಪತ್ರಕರ್ತರು ತಮ್ಮ ತಮ್ಮ ಕಚೇರಿಗಳಲ್ಲಿ ಕದ್ದುಮುಚ್ಚಿ ಬ್ಲೂಫಿಲಂ ನೋಡಿದಂತೆ ನೋಡುವುದುಂಟು.

ನಿಜ, ಇವರು ಕ್ರಾಂತಿಯನ್ನೇನು ಮಾಡಲಾರರು. ತಮ್ಮ ಇತಿಮಿತಿಯಲ್ಲಿ ಜನಾಭಿಪ್ರಾಯ ರೂಪಿಸಬಲ್ಲರು. ತಪ್ಪುಗಳನ್ನು ಎತ್ತಿತೋರಿಸಬಲ್ಲರು. ಹೊಸ ಕನಸುಗಳನ್ನು ಸೃಷ್ಟಿಸಬಲ್ಲರು.

ಬ್ಲಾಗರ್‌ಗಳೆಂಬ ಈ ಪತ್ರಕರ್ತರಿಗೆ ಜಯವಾಗಲಿ. ಬ್ಲಾಗ್ ಲೋಕ ಚಿರಾಯುವಾಗಲಿ.

(ಇಷ್ಟವಾದರೆ ಈ ಪೋಸ್ಟನ್ನು ಬ್ಲಾಗರ್‌ಗಳು ತಮ್ಮ ತಮ್ಮ ಬ್ಲಾಗ್‌ಗಳಲ್ಲಿ ಬಳಸಿಕೊಳ್ಳಲು ಅನುಮತಿಯುಂಟು!)

5 comments:

www.kumararaitha.com said...

'ಬ್ಲಾಗರ್ಗಳೆಂಬ ಜರ್ನಲಿಸ್ಟುಗಳಿಗೆ ಜಯವಾಗಲಿ' ಈ ಲೇಖನವನ್ನು 'ಸಂಪಾದಕೀಯ' ಹೆಸರಿನ ಬ್ಲಾಗಿನಲ್ಲಿ ಓದಿದೆ. ಇದಕ್ಕೆ ನೀಡಿದ ತಮ್ಮ ಪ್ರತಿಕ್ರಿಯೆ ಗಮನಿಸಿದೆ. ಈ ಲೇಖನವನ್ನು 'ಮೌನಕಣಿವೆ' ಬ್ಲಾಗಿಗೆ ಪೋಸ್ಟ್ ಮಾಡಿಕೊಂಡಿರುವ ಸಂದರ್ಭದಲ್ಲಿ ನನ್ನ ಕೆಲವು ಅನಿಸಿಕೆಗಳನ್ನು ಮುಂದಿಡುತ್ತೀದ್ದೇನೆ.

ಬ್ಲಾಗಿಂಗ್ ಮಾಡುತ್ತಿರುವವರಲ್ಲಿ ಹಲವೆಂಟು ವೃತ್ತಿಯವರು ಇದ್ದಾರೆ. ಇಲ್ಲಿ ಪ್ರವಾಸ,ಸಾಹಿತ್ಯ, ರಂಗಭೂಮಿ, ಸಿನಿಮಾ,ಛಾಯಾಗ್ರಹಣ ಮತ್ತು ವೈಯಕ್ತಿಕ ಅನಿಸಿಕೆ-ಅಭಿಪ್ರಾಯಗಳನ್ನು ಬ್ಲಾಗ್ ಮಾಡುತ್ತಾರೆ. ಇವರೆಲ್ಲರಿಗೂ ಹೋಲಿಸಿದರೆ ಪತ್ರಿಕೋದ್ಯಮದಲ್ಲಿದ್ದು ಬ್ಲಾಗ್ ಮಾಡುತ್ತಿರುವವರ ಸಂಖ್ಯೆ ಅತಿಕಡಿಮೆ

ಹೀಗಿದ್ದೂ ಸಾರಾಸಗಟಾಗಿ 'ಬ್ಲಾಗರ್ಗಳೆಂಬ ಜರ್ನಲಿಸ್ಟುಗಳಿಗೆ ಜಯವಾಗಲಿ' ಎಂದು ಬರೆಯುವುದು ಎಷ್ಟು ಮಟ್ಟಿಗೆ ಸರಿ. ಬ್ಲಾಗ್ ಮಾಡುತ್ತಿರುವ ಬಹುತೇಕರು ತಮ್ಮನ್ನು ಪರ್ಯಾಯ ಮಾಧ್ಯಮಿಗಳು ಎಂದು ಗುರುತಿಸಿಕೊಳ್ಳಲು ಕೂಡ ಇಷ್ಟಪಡುವುದಿಲ್ಲ. ಇಂಟರ್ ನೆಂಟ್ ಒದಗಿಸಿರುವ ಅವಕಾಶ ಬಳಸಿಕೊಂಡು ತಮ್ಮ ಅನಿಸಿಕೆ-ಅಭಿಪ್ರಾಯ ತೇಲಿಬಿಡುತ್ತಿರುವ ನಿರುಪದ್ರವಿಗಳಿವರು. ಜೊತೆಗೆ ಇವರೆಲ್ಲರಿಗೂ "ಐಡೆಂಟಿಟಿ'ಇದೆ. ಈ ಬಗ್ಗೆ ಅವರು ಹೆಮ್ಮೆ ಪಡುತ್ತಾರೆ

"ಬ್ಲಾಗರ್ಗಳೆಂಬ ಜರ್ನಲಿಸ್ಟುಗಳಿಗೆ ಜಯವಾಗಲಿ" ಲೇಖನ ಬರೆದವರಿಗೆ ಐಡೆಂಟಿಟಿಯೇ ಇಲ್ಲ. ಇಂಥವರನ್ನು ಬ್ಲಾಗಿಗರು ಮತ್ತು ಬ್ಲಾಗಿಗ ಜರ್ನಲಿಸ್ಸ್ ಎಂದು ಹೇಗೆ ತಾನೆ ಕರೆಯಲು ಸಾಧ್ಯ...?

ಬ್ಲಾಗ್ ಅವಕಾಶ ಒದಗಿಸಿದವರ ಬಹುದೊಡ್ಡ ಆಶಯ ಐಡೆಂಟಿಟಿ ಇಟ್ಟುಕೊಂಡು ಬ್ಲಾಗ್ ಮಾಡಿ ಎನ್ನುವುದು. ಇದನ್ನು ತಾವು ಉತ್ತೇಜಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಇಂಥ ಧ್ಯೆಯ ಮರೆತ ಸಂಪಾದಕೀಯ ಬ್ಲಾಗ್ ಬರಹಗಳಿಗೆ ಮೌಲ್ಯವಾದರೂ ಎಲ್ಲಿಂದ ಬರಬೇಕು.

ವಿಕಿಲೀಕ್ಸ್ ಅಂಥ ವೆಬ್ ತಾಣಗಳಿಗೆ ಅಧಿಕೃತತೆ ಇರುವುದು ಜೂಲಿಯನ್ ಅಸಾಂಜೆ ಎನ್ನುವ ಮುಖ ಅದರ ಹಿಂದಿದೆ ಎನ್ನುವ ಕಾರಣಕ್ಕೆ ಅಂದರೆ ಐಡೆಂಟಿಟಿ ಇದೆ ಎನ್ನುವುದಕ್ಕೆ. ಸಂಪಾದಕೀಯ ಬ್ಲಾಗಿಗೆ ಕಾಮೆಂಟ್ ಬರೆದವರು ಇದು ಕನ್ನಡದ ವಿಕಿಲೀಕ್ಸ್ ಆಗುವ ಸಾಧ್ಯತೆ ಇದೆ ಎಂದಿದ್ದಾರೆ. ಆದರೆ ಮುಖವೇ ಇಲ್ಲದ ಬ್ಲಾಗ್ 'ದುರ್ವಾಸನೆಯ ಲೀಕ್ಸ್'ಆಗುತ್ತದೆ ಅಷ್ಟೆ.
ಇಲ್ಲಿರುವ ಲೇಖನಗಳನ್ನು ಇದನ್ನು ಸ್ವಷ್ಟವಾಗಿ ಹೇಳುತ್ತಿವೆ. ಬಹುತೇಕ ಲೇಖನಗಳು ವಿಶ್ವೇಶ್ವರ ಭಟ್ ಮತ್ತು ಪ್ರಜಾವಾಣಿ ಸುತ್ತಲೇ ಗಿರಕಿ ಹೊಡೆಯುತ್ತಿರುವುದು ನೋಡಿದರೆ ಸಂಪಾದಕೀಯ ಹೆಸರಿನಲ್ಲಿ ಅನಾಮಧೇಯ ಬ್ಲಾಗಿಗ್ ಮಾಡುತ್ತಿರುವವರಿಗೆ ವೈಯಕ್ತಿಕ ಹಿತಾಸಕ್ತಿಗಳಿವೆ ಎಂಬುದೂ ಸ್ವಷ್ಟ.

'ಸುದ್ದಿಮಾತು' ಎಂಬ ಬ್ಲಾಗ್ ನಿಮಗೆ ನೆನಪಿರಬಹುದು. ಈ ಬ್ಲಾಗಿನಲ್ಲೊಮ್ಮೆ ಗಣಿಧಣಿಗಳು ಬಳ್ಳಾರಿಯ ಪತ್ರಕರ್ತರಿಗೆ ಲ್ಯಾಪ್ ಟಾಪು ಕಾಣಿಕೆಯಾಗಿ ಕೊಟ್ಟಿದ್ದಾರಂತೆ ಎಂಬ ಸುದ್ದಿ ಬಂತು. ತೆಗೆದುಕೊಂಡಿರುವವರು ಯಾರು; ತೆಗೆದುಕೊಳ್ಳದೇ ಇರುವವರು ಯಾರು ಎಂದು ಸ್ವಷ್ಟವಾಗಿ ಹೇಳಿದ್ದರೆ ಇದಕ್ಕೊಂದು ಮೌಲ್ಯವಿರುತ್ತಿತ್ತು. ಲ್ಯಾಪ್ ಟಾಪ್ ತೆಗೆದುಕೊಳ್ಳದೇ ತಿರಸ್ಕರಿಸಿದ ಪತ್ರಕರ್ತರೂ ಇದ್ದರು. ತೆಗೆದುಕೊಳ್ಳದವರ ಸಾಲಿನಲ್ಲಿ ನಾನೂ ಇದ್ದೆ. ಆದರೆ ಸುದ್ದಿಮಾತು ಲೇಖನದಿಂದಾಗಿ ನಮಗಾದ ನೋವು ಅಪಾರ. ಗಾಯದ ಮೇಲೆ ಬರೆ ಎಳೆದಂತೆ ಸುವರ್ಣನ್ಯೂಸ್ ಜಿಲ್ಲಾ ಸುದ್ದಿ ಸಂಯೋಜಕ ವಿನೋದ್ ನಾಯಕ್ ಪೋನ್ ಮಾಡಿ ಈ ಬಗ್ಗೆ ಸುದ್ದಿಮಾಡಿ ಜೊತೆಗೆ ಸುವರ್ಣನ್ಯೂಸ್ ವರದಿಗಾರನಾದ ನೀವು ಲ್ಯಾಪ್ ಟಾಪ್ ತೆಗೆದುಕೊಂಡಿಲ್ಲ ಎಂಬುದನ್ನು ಪಿಟುಸಿಯಲ್ಲಿ ಹೇಳಿ ಎಂದರು. ಇದಕ್ಕಿಂತ ಹಾಸ್ಯಾಸ್ಪದ ಸಂಗತಿ ಮತ್ತೊಂದಿಲ್ಲ ಎಂದು ನನಗನಿಸಿತು. ನನ್ನ ಜೊತೆಗಿರುವ ಪತ್ರಕರ್ತರೆಲ್ಲ ಅಪ್ರಾಮಾಣಿಕರು ನಾನು ಮಾತ್ರ ಪ್ರಾಮಾಣಿಕ ಎಂದು ಹೇಳುವುದು ವೃತ್ತಿಗೆ ತೋರುವ ಅಗೌರವ. ನಮ್ಮ ಕೆಲಸವೆನ್ನಿದೆಯೋ ಅದನ್ನು ಮಾಡಿಕೊಂಡು ಹೋಗಬೇಕು. ಈ ಸಂಗತಿಯನ್ನು ಸುವರ್ಣನ್ಯೂಸ್ ನ ಆಗಿನ ಮುಖ್ಯಸ್ಥರಾದ ಶಶಿಧರ್ ಭಟ್ ಅವರಿಗೆ ಹೇಳಿದೆ. ನನ್ನ ಧ್ವನಿಯ ಹಿಂದಿರುವ ಆಶಯ-ಕಳಕಳಿಯನ್ನು ಅವರು ಅರ್ಥಮಾಡಿಕೊಂಡರು. ಸುದ್ದಿ ಮಾಡಿ ಎನ್ನುವ ಒತ್ತಾಯ ಬರಲಿಲ್ಲ.

ಈ ಸಂಗತಿ ಯಾಕೆ ಪ್ರಸ್ತಾಪಿಸಿದೆ ಎಂದರೆ ಸುದ್ದಿಮಾತು ಬ್ಲಾಗಿನಲ್ಲಿ ಯಾರು ಲ್ಯಾಪ್ ಟಾಪ್ ತೆಗೆದುಕೊಂಡಿದ್ದರೆ ಯಾರು ತೆಗೆದುಕೊಂಡಿಲ್ಲ ಎಂದು ಸ್ವಷ್ಟವಾಗಿ ಹೇಳಿದ್ದರೆ ಇಂಥ ಪ್ರಮೇಯ ಬರುತ್ತಿರಲಿಲ್ಲ

ಪ್ರಸ್ತುತ ಮುಖವಿಲ್ಲದ ಸಂಪಾದಕೀಯ ಸಹ ಅಕೌಂಟಿಬಿಲಿಟಿ ಇಲ್ಲದ ಲೇಖನಗಳನ್ನೇ ಬರೆಯಲಾರಂಭಿಸಿದೆ. ಇದು ಸರಿಯಲ್ಲ. ಇಂಥ ಬ್ಲಾಗುಗಳನ್ನು ಪ್ರೋತ್ಸಾಹಿಸುವದು ಸಮಂಜಸ ಅಲ್ಲ.

'ಸಂಪಾದಕೀಯದಂಥ ಬ್ಲಾಗುಗಳನ್ನು ಪತ್ರಕರ್ತರು ತಮ್ಮ ತಮ್ಮ ಕಚೇರಿಗಳಲ್ಲಿ ಕದ್ದುಮುಚ್ಚಿ ಬ್ಲೂಫಿಲಂ ನೋಡಿದಂತೆ ನೋಡುವುದುಂಟು' ಎಂದು ಈ ಬ್ಲಾಗಿಗರು ತಮ್ಮ ಬೆನ್ನು ತಾವೇ ಕೆರೆದುಕೊಂಡಿದ್ದಾರೆ. ಜೊತೆಗೆ ತಮ್ಮ ಬ್ಲಾಗಿಗೆ ತಾವೇ ರೇಟಿಂಗ್ ಕೊಟ್ಟುಕೊಂಡಿದ್ದಾರೆ. ಕದ್ದುಮುಚ್ಚಿ ಈ ಬ್ಲಾಗ್ ಓದುವ ಪ್ರಮೇಯ ಮುಖ ಇರುವ ಪತ್ರಕರ್ತರಿಗೆ ಖಂಡಿತ ಇಲ್ಲ

ಈ ಕಾಮೆಂಟು ಬರೆಯುವ ಮುನ್ನ ಸಂಪಾದಕೀಯ ಗಮನಿಸಿದೆ. 9, 004 ಮಂದಿ ಬ್ಲಾಗ್ ನೋಡಿದ್ದರೆ ಎಂಬ ಕೌಂಟ್ ಇತ್ತು. ಆದರೆ ಬ್ಲಾಗಿಗರ ಫ್ರೋಪೈಲ್ ನೋಡಿದವರ ಸಂಖ್ಯೆ ಕೇವಲ 161(ನೂರ ಅರವತ್ತೊಂದು)
ಇಷ್ಟೊಂದು ವ್ಯತ್ಯಾಸವೇಕೆ...? ಅರ್ಥಾತ್ ಈ ಬ್ಲಾಗನ್ನು ನೋಡಿದ ಮಂದಿಯೇ ನೋಡುತ್ತಿದ್ದರೆ. ಜೊತೆಗೆ ಮುಖ ತೋರಿಸಲು ಇಷ್ಟವಿಲ್ಲದ ಬ್ಲಾಗಿಗ ಮತ್ತೆ ಮತ್ತೆ ಪೇಜ್ ತಿರುವುತ್ತಾ ಕುಳಿತಿರಬಹುದು

ನನ್ನ ನೋವು ಕಾಳಜಿ ಇಷ್ಟೆ. ಪತ್ರಕರ್ತರು ಸಮಾಜದ ಒಂದು ಭಾಗ. ಇಲ್ಲಿ ಒಳಿತು/ಕೆಡುಕು, ಆದರ್ಶವಿರುವವರು, ಆದರ್ಶವಿಲ್ಲದೇ ಇರುವವರೂ ಇದ್ದಾರೆ. ಅಪ್ರಾಮಾಣಿಕರ ಬಗ್ಗೆ ಹೇಳುವ ಅವಶ್ಯಕತೆ ಇದೆ. ಆದರೆ ಹೇಳುವವರಿಗೆ ಮುಖವಿರಬೇಕು. ಮರೆಯಲ್ಲಿ ಕುಳಿತು ಕಲ್ಲು ಬೀಸಿದರೆ ಅದು ಪ್ರಾಮಾಣಿಕರಿಗೇ ತಗಲಬಹುದು. ಇಂಥ ಕೆಲಸವಾಗಬಾರದು. ಆದ್ದರಿಂದ ಸಂಪಾದಕೀಯ ಬ್ಲಾಗ್ ಮಾಡುತ್ತಿರುವವರಲ್ಲಿ ನನ್ನದೊಂದು ಮನವಿ.

ಮುಖ ತೋರಿಸಿ ಮತ್ತು ಕಲ್ಲು ಬೀಸಿ. ಆಗ ನಿಮ್ಮ ಬೆಂಬಲಕ್ಕೆ ಜೀವದ ಹಂಗು ತೊರೆದು ನನ್ನಂಥವರು ನಿಲ್ಲುತ್ತೇವೆ. ಅದೇನಾಗುತ್ತದೋ ನೋಡೋಣ
-ಕುಮಾರ ರೈತ, ಪತ್ರಕರ್ತ

balasubramanya said...

ನಿಮ್ಮ ಬ್ಲಾಗ್ ಚೆನ್ನಾಗಿದೆ. ಈ ಲೇಖನ ಮತ್ತೊಮ್ಮೆ ಪ್ರಕಟಿಸಿ ಒಳ್ಳೆ ಕೆಲಸ ಮಾಡಿದ್ದೀರಿ. ಥ್ಯಾಂಕ್ಸ್.ಬನ್ನಿ ನನ್ನ ಪುಟಕ್ಕೆ.ಭೇಟಿಕೊಡಿ.

ragat paradise said...

ಹಲೋ ಸರ್ ನಾನು ಕೂಡ ಒಬ್ಬ ಬ್ಲಾಗರ್ ,ನಿಮ್ಮ ಲೇಖನ ಅಕ್ಷರಶಃ ಸತ್ಯ .ನಮ್ಮನ್ನ I Mean ಬ್ಲಾಗರ್ ಗಳನ್ನ ಹೊಗಳಿದ್ದಕ್ಕೆ ಧನ್ಯವಾದಗಳು .ಜೈ ಹೋ ಬ್ಲಾಗರ್ಸ್............

V.R.BHAT said...

ನಿಮ್ಮ ಅಭಿಪ್ರಾಯ ಸಮಂಜಸವಾಗಿದೆ!

ಪುರುಷೋತ್ತಮ ಬಿಳಿಮಲೆ said...

Good article,