Friday, January 14, 2011

ಯಾರಿಲ್ಲಿ ಅಂತಕನ ದೂತರು...?!






ಕಳೆದ ವಾರ ಹಾಸನ ಸಮೀಪ ಬೋಸ್ಮನ ಹಳ್ಳಿ ಮತ್ತು ನವಿಲಹಳ್ಳಿಗಳಲ್ಲಿ ಎರಡು ಪುಟ್ಟ ಆನೆ ಮರಿಗಳು ಸತ್ತು ಬಿದ್ದವು.ಅದನ್ನು ಕಂಡ ತಾಯಿ ಆನೆ ಸಂಕಟದಿಂದ ಘೀಳಿಟ್ಟು ರೋಧಿಸುತ್ತಿದ್ದ ಪರಿ ಎಂತಹ ಕಲ್ಲೆದೆಯವರನ್ನೂ ಕರಗಿಸುವಂತಿತ್ತು. ವಿಕ್ಷಕರೆದೆಯಲ್ಲಿ ಕರುಣ ರಸ ಉಕ್ಕುವಂತೆ ದೃಶ್ಯ ಮಾದ್ಯಮ ಅವುಗಳನ್ನು ಬಿತ್ತರಿಸಿತ್ತು. ಮರುದಿನ ಕನ್ನಡದ ಪ್ರಮುಖ ಪತ್ರಿಕೆಯಾದ ’ವಿಜಯ ಕರ್ನಾಟಕ’ ಈ ಸಾವಿಗೆ ಹೀಗೆ ಪ್ರತಿಕ್ರಿಯೆ ನೀಡಿತ್ತು ’ಅಂತಕನ ದೂತರಿಗೆ ಕಿಂಚಿತ್ತೂ ಕರುಣವಿಲ್ಲ’. ಅತ್ಯಂತ ಸೂಕ್ತವಾದ ಶೀರ್ಷಿಕೆ.

ಹಿಂದೆ ದಾಸರು ಆಡಿದ ಮಾತಿದು; ಆಗ ಅಂತಕನ ದೂತರು ಯಾರು ಎಂಬುದರ ಬಗ್ಗೆ ಸ್ಪಸ್ಟ ಕಲ್ಪನೆಯಿತ್ತು. ಇಂದಿನ ಸಂದರ್ಭದಲ್ಲಿ ಯಾರು ಈ ಅಂತಕನ ದೂತರು?

ನಮಗೊಂದು ಚುನಾಯಿತ ಸರಕಾರವಿದೆ. ಅದರಲ್ಲೊಂದು ಅರಣ್ಯ ಖಾತೆಯಿದೆ. ಅದಕೊಬ್ಬ ಸಚಿವರಿದ್ದಾರೆ. ಅವರು ಸ್ಥಳಕ್ಕೆ ಬರುವುದಿರಲಿ ಕನಿಷ್ಟ ಒಂದು ಹೇಳಿಕೆಯನ್ನೂ ನೀಡಿಲ್ಲ. ಉಂಡಬತ್ತಿ ಕೆರೆಯಿಂದ ಸಾಲು ಸಾಲು ಹೆಣಗಳನ್ನು ಮೇಲಕ್ಕೆತ್ತುತ್ತಿದ್ದಾಗಲೇ ಹಣಿಕಿ ನೋಡದ ಸರಕಾರಕ್ಕೆ ಯಕಶ್ಚಿತ್ ಆನೆಮರಿಗಳು ಸತ್ತದ್ದು ಗಮನಕ್ಕೆ ಬಂದೀತಾದರು ಹೇಗೆ?!

ಮನುಷ್ಯ, ಜೀವ ಸರಪಳಿಯಲ್ಲಿನ ಒಂದು ಕೊಂಡಿ. ಪ್ರಾಣಿ, ಪಕ್ಷಿಗಳೂ ಸೇರಿದಂತೆ ಉಳಿದ ಜೀವಸಂಕುಲಗಳೂ ಆ ಸರಪಳಿಯಲ್ಲಿನ ಇತರ ಕೊಂಡಿಗಳು. ಈ ನಿಸರ್ಗದ ಮೇಲೆ ನಮಗೆಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಅವುಗಳಿಗೂ ಇದೆ. ಅದರೆ ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ಅವುಗಳ ಮೇಲೆ ನಿಯಂತ್ರಣ ಸಾಧಿಸಿ ತನ್ನ ಅನುಕೂಲತೆಗೆ ತಕ್ಕಂತೆ ಬಳಸಿಕೊಂಡಿದ್ದಾನೆ. ಇಂಥ ಬಳಸುವಿಕೆಯಿಂದ ಜೀವ ಜಾಲದ ಕೊಂಡಿಗಳು ಒಂದೊಂದಾಗಿ ಕಳಚಿ ಬೀಳುತ್ತಾ ಪ್ರಾಕೃತಿಕ ಅಸಮತೋಲಕ್ಕೆ ಕಾರಣವಾಗುತ್ತಿದೆ.

ಇದನ್ನು ಬರೆಯುತ್ತಿರುವಾಗಲೇ ಬೆಂಗಳೂರಿನ ಬಾಗಲೂರಿನ ಗುಡಿಸಲೊಂದರಲ್ಲಿ ಮಲಗಿಸಿದ್ದ ಒಂದೂವರೆ ವರ್ಷದ ಮಗುವನ್ನು ಬೀದಿನಾಯಿಗಳು ಹರಿದು ಕಿತ್ತು ತಿಂದಿವೆ. ಇದಕ್ಕೆ ಯಾರು ಹೊಣೆ?
ಯಾರಿಲ್ಲಿ ಅಂತಕನ ದೂತರು?
ಆನೆ ಹತ್ಯೆಗೆ ಮನುಷ್ಯನ ಆಸೆಬುರುಕತನ ನೇರ ಕಾರಣವಾದರೆ ಇಲ್ಲಿಯೂ ಅದೇ ಮನಸ್ಥಿತಿ ಕೆಲಸ ಮಾಡಿದೆ. ಸಮಸ್ಯೆಯ ಆಳಕ್ಕೆ ಇಳಿದು ಪರಿಹಾರವನ್ನು ಹುಡುಕುವುದರ ಬದಲು ’ಪ್ರಭುತ್ವ’ವು ನಾಯಿಯನ್ನು ಅರೆಸ್ಟ್ ಮಾಡಿದೆ. ನಾಡಿನ ಪುಣ್ಯ; ಮರಿಗಳನ್ನು ರೈತರ ಜಮೀನಿಗೆ ನುಗ್ಗಿಸಿದ ಆರೋಪದ ಮೇಲೆ ತಾಯಿ ಆನೆಯ ಅರೆಸ್ಟ್ ಮಾಡಲು ಕೈಯ್ಯಲ್ಲಿ ಲಾಠಿ ಹಿಡಿದು ನಮ್ಮ ಪೋಲಿಸರು ಹೋಗಿಲ್ಲ!

ಮನುಷ್ಯ ಕಾಡನ್ನು ಒತ್ತುವರಿ ಮಾಡಿಕೊಂಡಿದ್ದಾನೆ. ಪ್ರಾಣಿಗಳು ಆಹಾರ ಹುಡುಕಿಕೊಂಡು ಊರಿಗೆ ಬಂದಿವೆ. ಹಾಗೆಯೇ ಹಳ್ಳಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ; ರೈತರಿಗೆ, ಆತ ಬೆಳೆದ ಬೆಳೆಗೆ ಬೆಲೆಯಿಲ್ಲದಂತಾಗಿದೆ. ಜೊತೆಗೆ ವಿಶೇಷ ಅರ್ಥಿಕ ವಲಯ ಮತ್ತು ಕೈಗಾರಿಕೆ ಸ್ಥಾಪನೆಯ ನೆಪದಲ್ಲಿ ರೈತರ ಫಲವತ್ತಾದ ಜಮೀನುಗಳನ್ನು ಸರಕಾರವೇ ವಶಪಡಿಸಿಕೊಳ್ಳುತ್ತಿದೆ. ಹಾಗಾಗಿ ಸ್ವಾವಲಂಬಿಯಾಗಿದ್ದ ರೈತ ದಿಕ್ಕುಗೆಟ್ಟು ಪಟ್ಟಣ ಸೇರಿ ಕೂಲಿಯಾಳಾಗಿದ್ದಾನೆ. ಹಳ್ಳಿ ಮತ್ತು ಪಟ್ಟಣದ ಮಧ್ಯೆ ದೊಡ್ಡ ಕಂದಕ ಏರ್ಪಟ್ಟಿದೆ.

ಹಳ್ಳಿ-ಪಟ್ಟಣದ ಎಲ್ಲಾ ಜನರು ದುಡ್ಡಿನ ಹಿಂದೆ ಓಡುತ್ತಿದ್ದಾರೆ; ಅದು ಕೊಡಬಹುದಾದ ಸುಖದ ಕಲ್ಪನೆಯಲ್ಲಿ ಮಾನವೀಯತೆಯನ್ನೇ ಮರೆಯುತ್ತಿದ್ದಾರೆ.

ನಿಸರ್ಗದಲ್ಲಿರುವ ಪ್ರತಿ ಪ್ರಾಣಿಯೂ ತನಗೊಂದು ಸುರಕ್ಷಿತ ವಲಯವನ್ನು ತಾನೇ ನಿರ್ಮಿಸಿಕೊಳ್ಳುತ್ತದೆ. ಹಾಗೆ ನಿರ್ಮಿಸಿಕೊಳ್ಳುವಾಗ ತನ್ನ ಸಹಜೀವಿಗಳಿಗೆ ತೊಂದರೆಯಾಗದಂತೆಯೂ ನೋಡಿಕೊಳ್ಳುತ್ತದೆ. ತನ್ನ ರಹದಾರಿಯನ್ನು ಬಿಟ್ಟು ಆಚೀಚೆ ಹೋಗುವುದಿಲ್ಲ. ಅತಿಕ್ರಮಣ ಮಾಡುವುದಿಲ್ಲ.
ಉದಾಹರಣೆಗೆ ದೂರದ ಸೈಭಿರಿಯಾದಿಂದ ಸಾವಿರಾರು ಮೈಲಿಗಳನ್ನು ಕ್ರಮಿಸಿ ಮಂಡ್ಯದ ಬೆಳ್ಳೂರಿಗೆ ಕೊಕ್ಕರೆಗಳು ವಲಸೆ ಬರುತ್ತವೆ. ಇಲ್ಲಿ ಮೊಟ್ಟೆಯಿಟ್ಟು, ಮರಿ ಮಾಡಿ ಮತ್ತೆ ಅಲ್ಲಿಗೇ ಮರಳುತ್ತವೆ. ಅದವುಗಳ ಹೆದ್ದಾರಿ.ಅಂಥವೇ ಹೆದ್ದಾರಿ ಇರುವೆಗಳಿಗೂ ಇದೆ. ಗುಂಪು ಗುಂಪಾಗಿ ವಾಸಿಸುವ ಪಶು-ಪಕ್ಷಿಗಳಿಗೂ ಇದೆ. ಪ್ರಾಣಿಗಳಿಗೂ ಇದೆ. ಅವುಗಳ ಹೆದ್ದಾರಿಗಳನ್ನು ಮಾನವ ಆಕ್ರಮಿಸಿಕೊಳ್ಳುತ್ತಿದ್ದಾನೆ. ಆಗ ಅವುಗಳೇನು ಮಾಡಬೇಕು?
ಗಂಡು ನಾಯಿಗಳು ಗಿಡ-ಮರ, ಕಲ್ಲು, ಮೋಟು ಗೋಡೆ ಕಂಡಲ್ಲಿ ಕಾಲೆತ್ತಿ ಮೂತ್ರ ಮಾಡುವುದನ್ನು ಎಲ್ಲರೂ ನೋಡಿರುತ್ತೇವೆ. ಹಾಗೆ ಮಾಡುವುದರ ಮುಖಾಂತರ ಅದು ತನಗೆ ಬೌಂಡರಿಯನ್ನು ಹಾಕಿಕೊಳ್ಳುತ್ತದೆ. ಅಲ್ಲದೆ ಅನ್ಯ ನಾಯಿಗಳಿಗೆ ಇದು ತನ್ನ ಏರಿಯಾ ಎಂಬ ಸಂದೇಶವನ್ನು ರವಾನಿಸುತ್ತದೆ. ಬೇಕಾದರೆ ಗಮನಿಸಿ; ತನ್ನ ಏರಿಯಾದಲ್ಲಿ ಆ ನಾಯಿಯ ಬಾಲ ನೆಟ್ಟಗೆ ಇದ್ದರೆ ಇನ್ನೊಂದು ನಾಯಿಯ ಏರಿಯಾಕ್ಕೆ ಹೋದಾಗ ಅದರ ಬಾಲ ಬಾಗಿ ಕಾಲುಗಳ ಮಧ್ಯದಲ್ಲಿ ಅಡಗಿರುತ್ತದೆ.

ಕಾಡು ಪ್ರಾಣಿಗಳಿಗೆ ಕಾಡಿನಲ್ಲಿಯೇ ಆಹಾರವಿದೆ. ಬಿದಿರು ಮೆಳೆಗಳೇ ಆನೆಗಳ ಮುಖ್ಯ ಆಹಾರ. ಅದರ ಜೊತೆ ಹೆಬ್ಬಲಸು, ನೆಲ್ಲಿಕಾಯಿ, ಚೂರಿಕಾಯಿ, ಮೊಗ್ಗರೆಕಾಯಿ, ಕೋಳಿಕುಡ್ತಹಣ್ಣು, ಗೊಟ್ಟೆಹಣ್ಣು[ಮುಳ್ಳುಹಣ್ಣು], ಬೈನೆಮರ, ರಾಂಪತ್ರೆ...ಸಮೃದ್ಧ ಆಹಾರ.ಜೊತೆಗೆ ಯಥೇಚ್ಚ ನೀರು. ಸ್ವಛ್ಚಂದ ಬದುಕು. ಇಂದು ಅದಿಲ್ಲ. ಕಾಡು ಉತ್ಪನ್ನಗಳನ್ನು ಸಂಗ್ರಹಿಸುವ ಗುತ್ತಿಗೆಯನ್ನು ಸರಕಾರವೇ ಹರಾಜು ಹಾಕುತ್ತದೆ. ಗುತ್ತಿಗೆದಾರನ ಕೆಲಸಗಾರರು ಕಾಡಿಗೆ ದಾಳಿಯಿಟ್ಟು ಕಾಡು ಉತ್ಪನ್ನಗಳನ್ನು ಸಂಗ್ರಹಿಸುತ್ತಾರೆ. ಪ್ರಾಣಿಗಳ ಸ್ವಚ್ಚಂದ ಬದುಕು ಅಲ್ಲೋಲ ಕಲ್ಲೋಲವಾಗುತ್ತದೆ. ಪ್ರಾಣಿ ಸಂಕುಲ ಉಪವಾಸ ಬೀಳುತ್ತವೆ. ಆಹಾರಕ್ಕಾಗಿ ಅವು ಊರಿಗೆ ಧಾಳಿಯಿಡುತ್ತವೆ.
ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ ಹರಡಿಕೊಂಡಿರುವ ಪಶ್ಚಿಮಘಟ್ಟ ಶ್ರೇಣಿಯ ಆನೆ ಹೆದ್ದಾರಿ [ಕಾರಿಡಾರ್]ಯಲ್ಲೊಮ್ಮೆ ಹೊಕ್ಕು ಬಂದರೆ ತಿಳಿಯುತ್ತದೆ. ಅಭಿವೃದ್ದಿ ಮತ್ತು ಪ್ರವಾಸೋಧ್ಯಮದ ನೆಪದಲ್ಲಿ ನಿತ್ಯ ಹರಿದ್ವರ್ಣದ ಕಾಡು ಮಾನವನ ಆಕ್ರಮಣಕ್ಕೆ ನಲುಗಿ ಹೋಗಿದೆ. ನದಿಮೂಲಗಳು ಬತ್ತುತ್ತಿವೆ, ಜೊತೆಗೆ ಕಲುಷಿತಗೊಳ್ಳುತ್ತಿವೆ. ಇದರಿಂದಾಗಿ ಮತ್ಸ್ಯ ಸಂತತಿ ನಾಶವಾಗುತ್ತಿದೆ.

ಸುತ್ತಲಿನ ಚಾರಚರ ವಸ್ತುಗಳು ತನ್ನ ಉಪಭೋಗಕ್ಕಾಗಿಯೇ ಅಸ್ತಿತ್ವದಲ್ಲಿವೆಯೆಂದು ಮಾನವ ಭಾವಿಸಿದ್ದಾನೆಯೇ? ಈ ಧರೆಯಲ್ಲಿ ತಾನು ಏಕಮೇವಾದ್ವಿತೀಯನಾಗಿ ಮೆರೆಯಬೇಕೆಂದು ಆತ ಬಯಸುತ್ತಿದ್ದಾನೆಯೇ? ಆ ಕಾರಣಕ್ಕಾಗಿಯೇ ಆತ ತನ್ನ ಸಹ ಜೀವಿಗಳನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಾನೆಯೇ?

ನಾನೊಂದು ನಾಯಿ ಸಾಕಿದ್ದೇನೆ. ಅದನ್ನು ಆಗಾಗ ಪಶುವೈದ್ಯರ ಬಳಿ ಕರೆದೊಯ್ಯುತ್ತೇನೆ. ಅಲ್ಲಿ ವಿವಿಧ ತಳಿಯ ನಾಯಿಗಳನ್ನು ನೋಡುವ ಅವಕಾಶ ನನಗೆ ಸಿಗುತ್ತದೆ. ಅವುಗಳು ಮನುಷ್ಯನ ಪ್ರೀತಿಗೆ ಪಾತ್ರವಾದ ಪರಿಯನ್ನು ನೋಡಿದರೆ ಒಂದು ಘಳಿಗೆ ಅವುಗಳ ಬಗ್ಗೆ ಅಸೂಯೆ ಮೂಡುತ್ತೆ. ಅದರೆ ಕೆಲವು ನಾಯಿಗಳ ರೂಪವನ್ನು ಅದರ ಮಾಲೀಕರು ತಮಗೆ ಬೇಕಾದಂತೆ ಬದಲಾಯಿಸುತ್ತಿರುವುದನ್ನು ಕಂಡಾಗ ಹಿಂಸೆಯೆನಿಸುತ್ತದೆ. ಜೋಲು ಕಿವಿ, ಸುರುಳಿಬಾಲ ನಾಯಿಗಳ ಸಹಜ ಸೌಂದರ್ಯ. ಆದರೆ ಅಪರೇಷನ್ ಮಾಡಿ ಅದರ ಕಿವಿಯನ್ನು ನೆಟ್ಟಗೆ ನಿಲ್ಲಿಸುತ್ತಾರೆ. ಬಾಲವನ್ನು ಮೊಂಡು ಮಾಡಿಸುತ್ತಾರೆ. ಅದನ್ನು ಸದಾ ಕಾಲ ಕಟ್ಟಿ ಹಾಕಿ ಒಂಟಿಯಾಗಿ ನರಳಿಸುತ್ತಾರೆ. ಅದಕ್ಕೂ ಒಂದು ಲೈಂಗಿಕ ಸಂಗಾತಿ ಬೇಕೆಂಬುದರ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ. ಹಸುಗಳಿಗೂ ಅಷ್ಟೆ. ಕೃತಕ ಗರ್ಭದಾರಣೆಯನ್ನು ಮಾಡಿಸುತ್ತಾರೆ.

ಮೊನ್ನೆ ದೀಪಾವಳಿಗೆ ಊರಿಗೆ ಹೋಗಿದ್ದಾಗ ನನ್ನ ಮಕ್ಕಳು ಕೆಂಪಿಯ ಕರು ಮಂಗಳೆಯನ್ನು ಮುದ್ದಿಸಿ ಆನಂದ ಪಟ್ಟಿದ್ದರು. ಅದರ ನೆಗೆದಾಟವನ್ನು ಅಚ್ಚರಿಯ ಕಣ್ಣುಗಳಿಂದ ಹಿಂಬಾಲಿಸುತ್ತಾ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು. ಆದರೆ ಕಳೆದ ವಾರ ಅಲ್ಲಿಂದ ಸುದ್ದಿ ಬಂತು; ಮಂಗಳೆ ಸತ್ತು ಹೋಯ್ತು.

ನನಗೆ ಗೊತ್ತಿತ್ತು, ಮಂಗಳೆ ಬದುಕುವುದಿಲ್ಲವೆಂದು, ಹಾಗೆ ಅನ್ನಿಸಲಿಕ್ಕೆ ಕಾರಣವಿತ್ತು. ಅಮ್ಮನ ಮೊಲೆ ಹಾಲು ಕುಡಿಯುವುದು ಮಗುವಿನ ಹಕ್ಕು. ಹಸುವಿನ ಕೆಚ್ಚಲಲ್ಲಿ ಹಾಲು ಉತ್ಪಾದನೆಯಾಗುವುದು ಕರು ಕುಡಿಯಲೆಂದು. ಆದರೆ ಅದರಲ್ಲಿ ನಾವು ಪಾಲು ಪಡೆಯುತ್ತೇವೆ. ಅದನ್ನು ನಾವು ಸಹಜವೆಂದು ಒಪ್ಪಿಕೊಂಡಿದ್ದೇವೆ. ಆದರೆ ಕರುವಿಗೆ ಕೆಚ್ಚಲನ್ನು ಚೀಪಲು ಅವಕಾಶವನ್ನೇ ನೀಡದಿದ್ದರೆ....ಅದು ಸತ್ತು ಹೋಗುತ್ತದೆ.
ಹಸುವನ್ನು ಹಾಲು ಉತ್ಪಾದನೆಯ ಪ್ಯಾಕ್ಟರಿಯೆಂದು ಪರಿಗಣಿಸಿದ ಅಮೇರಿಕ ಅದಕ್ಕೆ ಸಹಜವಲ್ಲದ ಮಾಂಸಹಾರವನ್ನು ನೀಡಲಾರಂಬಿಸಿತು. ಪರಿಣಾಮವಾಗಿ ಹಸುಗಳಿಗೆ ಹುಚ್ಚು ಹಿಡಿಯಿತು. ಮನುಷ್ಯರ ಅರೋಗ್ಯದ ದೃಷ್ಟಿಯಿಂದ ಹಸುಗಳ ಮಾರಣ ಹೋಮ ನಡೆಯಿತು.
ಮಹತ್ವಕಾಂಕ್ಷಿಯಾದ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕುರಿ, ಕೋಳಿ, ಮೀನು, ಹಂದಿ, ದನ- ಎಲ್ಲವನ್ನೂ ಅಸಹಜ ರೀತಿಯಲ್ಲಿ ಬೆಳೆಸಿ ಅದನ್ನು ತನ್ನ ಆಹಾರವನ್ನಾಗಿಸಿಕೊಂಡಿದ್ದಾನೆ. ಆತನ ಭಕ್ಷಣೆಗೆ ನಿಲುಕದ್ದು ಬಹುಶಃ ಈ ಸೃಷ್ಟಿಯಲ್ಲಿ ಯಾವುದೂ ಇದ್ದಂತಿಲ್ಲ.

ಕಾಡುನಾಶ, ಅದರಿಂದಾಗಿ ಅವಸಾನದ ಅಂಚಿನತ್ತ ಸಾಗುತ್ತಿರುವ ಸಸ್ಯ, ಪ್ರಾಣಿ ಮತ್ತು ಪಕ್ಷಿ ಪ್ರಭೇದಗಳು; ಇದನ್ನೆಲ್ಲಾ ಮನಗಂಡ ವಿಶ್ವ ಸಂಸ್ಥೆಯು ೨೦೧೧ರನ್ನು ’ಅಂತರಾಷ್ಟೀಯ ಅರಣ್ಯ ವರ್ಷ’ವೆಂದು ಘೋಷಣೆ ಮಾಡಿದೆ. ಅದರೆ ಕೇವಲ ಘೋಷಣೆಯಿಂದ ನಮ್ಮ ಪರಿಸರವನ್ನು, ಅರಣ್ಯ ಜೀವಿಗಳನ್ನು, ಒಟ್ಟು ಜೀವಸಂಕುಲವನ್ನು ರಕ್ಷಿಸಲು ಸಾಧ್ಯವೇ?

[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ ]

3 comments:

Badarinath Palavalli said...

ಮನುಷ್ಯ ಪದೇ ಪದೇ ನಿಸರ್ಗ ಮತ್ತು ಅದರ ಭಾಗವೇ ಆಗಿರುವ ಪ್ರಾಣಿ ಸಂಕುಲದ ಮೇಲೆ ದಬ್ಬಾಳಿಕೆ ನಡೆಸುತ್ತಾ ಬಂದಿದ್ದಾನೆ. ಒಂದು ದಿನ ಇದು ಮಹಾ ಏರುಪೇರಿಗೆ ಕಾರಣವಾಗಿ ಪ್ರಳಯ ಸದ್ರುಶ ಸ್ಫೋಟಕ್ಕೆ ಎಡೆಮಾಡಿಕೊಡುತ್ತದೆ.
ಮೇಡಂ ನಿಮ್ಮ ಪ್ರಜ್ಞಾಪೂರ್ಣ ಬರಹ ನಮ್ಮ ಮನ ಗೆದ್ದಿತು.

www.kumararaitha.com said...

ಎಲ್ಲೆಡೆಯೂ ತನ್ನ ಅಸ್ತಿತ್ವ ಮೂಡಿಸಲು ಮಾನವ ಹೊರಟಿರುವುದರಿಂದಲೇ ಪ್ರಕೃತಿ ಮಾರಣಹೋಮ ನಡೆಯುತ್ತಿದೆ. ವನ್ಯಮೃಗಗಳು ದಾರುಣವಾಗಿ ಸಾವನ್ನಪುತ್ತಿವೆ. ಇದು ಕೂಡ ಕಗ್ಗೊಲೆ. ವನ್ಯಮೃಗಗಳ ತಾಣಗಳನ್ನು ಮಾನವ ಆಕ್ರಮಿಸಿಕೊಳ್ಳುತ್ತಿದ್ದಾನೆ ಹೊರತು ಮಾನವ ತಾಣವನ್ನು ವನ್ಯಮೃಗಗಳು ಅತಿಕ್ರಮಿಸಿಕೊಂಡಿಲ್ಲ.

ವಿಷಾದದ ಸಂಗತಿಯೆಂದರೆ ಪುರಾಣ-ಪುಣ್ಯಕಥೆ-ಮಹಾಕಾವ್ಯಗಳಲ್ಲಿನ ಪ್ರಕೃತಿ ವರ್ಣನೆ ಕೇಳಿಕೊಂಡು ಬೆಳೆದ ಭಾರತೀಯರನೇಕರು ನಡೆಸುತ್ತಿರುವ ನಿಸರ್ಗದ ನಾಶ. ಇದು ನಡೆಯುತ್ತಲೇ ಹೋದರೆ ಅನಾಹುತ ಕಟ್ಟಿಟ್ಟದ್ದು. ಈ ಬಗ್ಗೆ ಮತ್ತೆ ನಿಮ್ಮ ಲೇಖನ ಕ್ಷಣಕಾಲವಾದರೂ ಚಿಂತಿಸುವಂತೆ ಮಾಡಿತು

ಸುಮ said...

ಕಟುಸತ್ಯ ಮೇಡಂ ನೀವು ಹೇಳುತ್ತಿರುವುದು . ಕಣ್ಣಿಗೆ ಕಾಣದ ಬ್ಯಾಕ್ಟಿರಿಯಾಗಳಿಗೂ ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಅದರದೇ ಆದ ಪಾತ್ರವಿದೆ . ಆದರೆ ಎಲ್ಲ ತಿಳಿದ ಮನುಷ್ಯನ ಅತ್ಯಾಚಾರಕ್ಕೆ , ದಬ್ಬಾಳಿಕೆಗೆ ಕೊನೆ ಇಲ್ಲ. ಇಂದಷ್ಟೇ ಮೈಸೂರು ಜೂ ನಲ್ಲಿ ಕಾಡಿನಲ್ಲಿ ಸ್ವಚ್ಚಂದವಾಗಿ ರಾಜನಂತಿರಬೇಕಾಗಿದ್ದ ಹುಲಿ ಚಿಕ್ಕ ಬೋನಿನಲ್ಲಿ ಗುರುಗುಡುವುದನ್ನು ನೋಡಿ ಬೇಸರವಾಗಿತ್ತು . ತನ್ನ ಅನುಕೂಲಕ್ಕಾಗಿ ಎಲ್ಲ ಪ್ರಾಣಿಗಳನ್ನು ದುಡಿಸಿಕೊಳ್ಳುವ ಮಾನವನಿಗೆ ಅವುಗಳ ಭಾವನೆಗಳೆಲ್ಲಿ ಅರ್ಥವಾಗಬೇಕು? ಇಂತಿರುವಾಗ ಕೆಲವಾದರೂ ಪ್ರಾಣಿಗಳು ತಿರುಗಿ ಬಿದ್ದರೆ ಯಾರು ಹೊಣೆ?