Tuesday, July 5, 2011

ದುಃಖವಾಗುತ್ತಿದೆ...!


ಸ್ವಜನಪಕ್ಷಪಾತ ಮತ್ತು ಜಾತಿ ರಾಜಕಾರಣ ಇಡೀ ಕರ್ನಾಟಕವನ್ನು ಆವರಿಸಿಕೊಂಡಿದೆ. ಮುಖ್ಯಮಂತ್ರಿಗಳ ಇಂದಿನ ಹೇಳಿಕೆಯನ್ನೇ ನೋಡಿ, ’ನನ್ನ ಬಂಧುಗಳಿಗೆ ಬೇರೆ ಕಡೆ ನಿವೇಶನ ಇರಲಿಲ್ಲ. ಅದ್ದರಿಂದ ಅನುಕಂಪದ ಆಧಾರದ ಮೇಲೆ ನಿವೇಶನ ವಿತರಿಸಲಾಗಿದೆ.’

ಅನುಕಂಪ ಯಾಕೆ? ಅವರೇ ಹೇಳುವಂತೆ ಅವರ ಸಹೋದರಿ ಗಂಡನನ್ನು ಕಳೆದುಕೊಂಡಿದ್ದಾರಂತೆ. ಅನುಕಂಪದಲ್ಲೆ ಅವರಿಗೂ ಅವರ ಮಗನಿಗೂ ಮುಖ್ಯಮಂತ್ರಿಗಳ ವಿವೇಚನಾ ಕೋಟದಡಿ ಮೂಡಾ[ಮೈಸೂರು ಅಭಿವೃದ್ಧಿ ಪ್ರಾಧಿಕಾರ] ನಿವೇಶನಗಳನ್ನು ವಿತರಿಸಿದ್ದಾರಂತೆ. ಸರಕಾರಿ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿಯೆಂದು ಯಡಿಯೂರಪ್ಪನವರು ಅಂದುಕೊಂಡಿರಬೇಕು! ಲಜ್ಜೆ ಭಂಡತನಕ್ಕೊಂದು ಮಿತಿ ಬೇಡವೇ?ಇಲ್ಲವಾದರೆ ನಾಡಿನ ಎಲ್ಲಾ ವಿಧವೆಯರಿಗೂ ನಿಯಮ ಅನ್ವಯಿಸುತ್ತದೆಯೇ?

ವಿಧವೆ ಅನ್ನುವಾಗ ನೆನಪಾಯಿತು. ಮೊನ್ನೆ ಗುಲ್ಬರ್ಗದಲ್ಲಿ ಕಾಂಗ್ರೇಸ್ ಪಕ್ಷದ ಸಿದ್ದರಾಮಯ್ಯ ಬಹಿರಂಗ ಸಭೆಯಲ್ಲಿ ಹೇಳಿದ ಮಾತುಗಳನ್ನೊಮ್ಮೆ ಕೇಳಿ,” ಏನಮ್ಮಾ..ನಿಮ್ಮಲ್ಲಿ ಯಾರ್ಯಾರು ರಂಡೆ-ಮುಂಡೆಯರಿದ್ದೀರಿ..? ಕೈ ಎತ್ತಿರಿ..ವಯಸ್ಸಾದವರೂ ಪರವಾಗಿಲ್ಲ..” ಮಾನವಂತರು ಆಡುವ ಮಾತೇ ಇದು?

ಅಬ್ಬಾ! ನಿಜಕ್ಕೂ ರಾಜಕಾರಣ ಹೊಲಸೆದ್ದು ಹೋಗಿದೆ.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ಹೇಗಿದೆ?

ಮುಖ್ಯಮಂತ್ರಿಗಳು ಮಾಧ್ಯಮದ ವ್ಯಕ್ತಿಗಳಿಗೆಲಕೋಟೆವಿತರಿಸಲೆಂದೇ ವ್ಯಕ್ತಿಯೊಬ್ಬನನ್ನು ನೇಮಕ ಮಾಡಿಕೊಂಡಿದ್ದಾರೆಂದರೆ ಖರೀದಿ ವ್ಯವಹಾರ ಎಷ್ಟು ಬಿಜಿಯಾಗಿರಬಹುದೆಂದು ಊಹಿಸಿಕೊಳ್ಳಬಹುದು. ಮಾದ್ಯಮದ ಸಹಕಾರ ಹೀಗೆ ದೊರೆಯುತ್ತಿದ್ದರೆ ಸರಕಾರ ತನ್ನ ಅವಧಿ ಪೂರೈಸುವುದರೊಳಗಾಗಿ ಎಡೆಯೂರಪ್ಪ ಮತ್ತವರ ವಂಧಿ ಮಾಗಧರು ಕರ್ನಾಟಕದ ಆಯಕಟ್ಟಿನ ಜಾಗವನ್ನೆಲ್ಲಾ ಹರಿದು ಹಂಚಿಕೊಂಡು ತಿನ್ನುತ್ತಾರೆ. ಲಿಂಗಾಯತ ಮಠಾದೀಶರು, ಸ್ವಜಾತಿ ಭಾಂದವರು ಅವರನ್ನು ಕೈಯೆತ್ತಿ ಆಶೀರ್ವದಿಸುತ್ತಾರೆ.

ಆಳುವವರ ಆಟಾಟೋಪಗಳಿಗೆ ಯಾರ ಅಂಕೆಯೂ ಇಲ್ಲ.

ನನಗೊಂದು ಕುತೂಹಲ; ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ನೋಡಿಕೊಂಡು ಬರಲು ವರ್ಷಕ್ಕೊಮ್ಮೆ ಮೂರು ದಿನಗಳ ಮಟ್ಟಿಗೆ ಭೂಲೋಕಕ್ಕೆ ಬರುತ್ತಾನೆ. ಹಾಗೆಯೇ ಬಸವಣ್ಣನೇನಾದರೂ ಭೂಮಿಗೆ ಬಂದರೆ ಏನಾಗಬಹುದು? ಜಾತೀಯತೆಯ ವಿರುದ್ಧ ಹೋರಾಡಿದ ಮಹಾನುಭಾವ ಲಿಂಗಾಯಿತರ ಜಾತಿ ವ್ಯಾಮೋಹವನ್ನು ಕಂಡು ಮೂರ್ಛೆ ಹೋದವನು ಖಂಡಿತವಾಗಿಯೂ ಮೇಲೇಳಲಾರ.

ನಿಷ್ಪಕ್ಷವಾಗಿ ಕೆಲಸ ಮಾಡಬೇಕಾದ ಮಾಧ್ಯಮ ರಂಗದಲ್ಲಿಯೂ ಜಾತೀಯ ಸಂಘಟನೆಗಳಿವೆ. ಅದರ ಬೇಕು-ಬೇಡಗಳನ್ನು ಆಯಾಯ ಜಾತೀಯ ರಾಜಕೀಯ ಮುಖಂಡರು ನೋಡಿಕೊಳ್ಳುತ್ತಾರೆ. ಅದರ ವಿರಾಟ್ ಸ್ವರೂಪವನ್ನು ಸರ್ತಿ ನಡೆದ ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಕಾಣಬಹುದಿತ್ತು. ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ಪತ್ರಕರ್ತರ ಹಿಂಡು ವಲಸೆ ಹೋಗುವಲ್ಲಿಯೂ ಇದರ ಝಳಕ್ಕನ್ನು ಕಾಣಬಹುದು.

ಕೆಲವು ದಿನಗಳ ಹಿಂದೆ ಬ್ರಾಹ್ಮಣರ ಮೊಬೈಲ್ ಗಳಲ್ಲಿ, ಮುಖ್ಯವಾಗಿ ಬ್ರಾಹ್ಮಣ ಪ್ರತ್ರಕರ್ತರ ಮೊಬೈಲ್ ಗಳಲ್ಲಿ ಸಂದೇಶವೊಂದು ಹರಿದಾಡುತ್ತಿತ್ತು. ಅದುಬ್ರಾಹ್ಮಣ ಜಾಗೋಎಂಬ ಸಂದೇಶ.

ಅದಕ್ಕೊಂದು ಹಿನ್ನೆಲೆಯಿದೆ; ಜೂನ್ ೨೮ರಂದು ಬೆಂಗಳೂರಿನರಂಗಶಂಕರರಂಗಮಂದಿರದಲ್ಲಿ ಕನ್ನಡದ ಜನಪ್ರಿಯ ಕಾದಂಬರಿಕಾರ ಎಸ್.ಎಲ್.ಬೈರಪ್ಪನವರಮಂದ್ರಕಾದಂಬರಿಯ ರಂಗರೂಪದ ಪ್ರದರ್ಶನವಿತ್ತು.

ಮೊಬೈಲ್ ಸಂದೇಶದ ಸೃಷ್ಟಿಕರ್ತನಾರೋ ಗೊತ್ತಿಲ್ಲ. ಆದರೆ ಅದನ್ನು ಕಳುಹಿಸಿದಾತ ಆನಂದ ಟಿ.ಅರ್. ಎಂಬ ಮಹಾನುಭಾವ. ’ಬ್ರಾಹ್ಮಣ ಜಾಗೋಎಂಬ ತಲೆ ಬರಹದಡಿಯಲ್ಲಿ ಕಳುಹಿಸಲಾದ ಸಂದೇಶದ ಸಾರಂಶ ಇಷ್ಟು; ನಾಟಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಾಹಿತ್ಯ ಶನಿ ಅನಂತಮೂರ್ತಿಗಳಿಗೆ ತಕ್ಕ ಉತ್ತರ ನೀಡಿ.

ಅನಂತಮೂರ್ತಿಯವರನ್ನು ಸಾಹಿತ್ಯ ಶನಿ ಎಂದು ಕರೆಯಲು ಈತನ್ಯಾರು? ಮರೆಯಲ್ಲಿ ನಿಂತು ಬಾಣ ಬೀಡುವ ವಿಧ್ಯೆಯನ್ನು ಆತ ಶ್ರೀರಾಮನಿಂದ ಕಲಿತುಕೊಂಡನೆ?

ಅನಂತಮೂರ್ತಿ ಹಾಗು ಬೈರಪ್ಪನವರು ಕನ್ನಡದ ಪ್ರಮುಖ ಸಾಹಿತಿಗಳು. ಅವರ ಸಿದ್ದಾಂತಗಳು ಏನೇ ಇರಲಿ, ಬೈರಪ್ಪನವರು ನಮ್ಮಲ್ಲಿ ಓದಿನ ಅಭಿರುಚಿಯನ್ನು ಹುಟ್ಟಿಸಿದವರು. ಹಾಗೆಯೇ ಅನಂತಮೂರ್ತಿಯವರು ನಮ್ಮ ಪ್ರಜ್ನೆಯನ್ನು ವಿಸ್ತರಿಸಿದವರು. ಇವರಿಬ್ಬರ ಬಗ್ಗೆಯೂ ಸಾಹಿತ್ಯಾಭಿಮಾನಿಗಳಿಗೆ ಮೆಚ್ಚುಗೆಯಿದೆ; ಗೌರವವಿದೆ. ಇವರಿಬ್ಬರ ಮೇಲೂ ಈಗ ಕೆಸರೆರಚಾಟ ನಡೆಯುತ್ತಲಿದೆ. ದುರ್ಧೈವದ ಸಂಗತಿ ಎಂದರೆ ಕನ್ನಡದ ಪ್ರಮುಖ ಪತ್ರಿಕೆಯೊಂದು ಅದಕ್ಕೆ ವೇದಿಕೆಯಾಗಿರೋದು. ಅವಸರದ ಸಾಹಿತ್ಯ ಸೃಷ್ಟಿಸುತ್ತಿರುವ ಪತ್ರಕರ್ತ ಸಾಹಿತಿಗಳು ಅದರಲ್ಲೂ ತೀರಾ ಎಳಸು ಪತ್ರಕರ್ತರು ಅಂಥ ಹಿರಿಯರ ಮೇಲೆ ಎಗರಿ ಬೀಳುತ್ತಿದ್ದಾರೆ. ಸಂಪಾದಕರು ಅವರ ಬೆನ್ನು ತಟ್ಟುತ್ತಿದ್ದಾರೆ. ಇವರ ಬೌದ್ಧಿಕ ಅಹಂಕಾರ ಯಾವ ಕಡೆಗೆ ಇವರನ್ನು ಕರೆದೊಯ್ಯಬಹುದು?

ಇದನ್ನೆಲ್ಲಾ ನೋಡುತ್ತಿರುವಾಗ ಸೋಮೇಶ್ವರ ಶತಕದಹರ ಕೊಲ್ಲಲ್ ಪರ ಕಾಯ್ವನೇ?’ ಎಂಬ ಮಾತು ನೆನಪಾಗುತ್ತದೆ. ಯಾರು ರಕ್ಷಕರಾಗಬೇಕಿತ್ತೋ ಅವರೇ ಭಕ್ಷಕರಾಗಿಬಿಟ್ಟರೆ ನಾವು ಆಸರೆಗಾಗಿ ಯಾರತ್ತ ಕೈ ಚಾಚಬೇಕು?

2 comments:

sunaath said...

ಔಚಿತ್ಯಪೂರ್ಣ ಲೇಖನ. ಜಾತೀಯತೆಯು ರಾಜಕಾರಣಿಗಳಲ್ಲಿ ಸಾಮಾನ್ಯ. ಆದರೆ ಸಾಹಿತ್ಯರಂಗದಲ್ಲಿ ಹಾಗು ಪತ್ರಿಕಾಮಾಧ್ಯಮದಲ್ಲಿ ಹರಡಬಾರದಾಗಿತ್ತು.

Anonymous said...

ನಂಗೆ ತೇಜಸ್ವಿ ಇಷ್ಟ ಅಂದಿದ್ದಕ್ಕೆ ಯಾರೋ ಒಬ್ಬರು "ಆ ಬ್ರಾಹ್ಮಣದ್ವೇಷಿ ಗೌಡನ್ನ ಯಾಕೆ ಓದ್ತೀಯ" ಅಂತ ಹೇಳಿದ್ದು ನೆನಪಾಯ್ತು. ಜಗತ್ತು ಆಧುನಿಕವಾಗ್ತಾ ಆಗ್ತಾ ಜಾತೀಯತೆ ಹೋಗುತ್ತೆ ಅಂತ ಅಂದುಕೊಂಡಿದ್ದು ನಿಧಾನಕ್ಕೆ ಸುಳ್ಳಾಗ್ತ ಇದೆ.