Thursday, August 18, 2011

ಒಳಗೂ ಹೊರಗೂ ವ್ಯಾಪಿಸಿರುವ ’gloomy Sunday’ _ ಆತ್ಮಹತ್ಯೆಯ ಹಾಡು…..


ಕೆಲವು ದಿನಗಳ ಹಿಂದೆ ನನ್ನ ಗೆಳತಿಯೊಬ್ಬಳು ಲ್ಯಾಪ್ ಟಾಪ್ ನಲ್ಲಿ ಹಾಡೊಂದನ್ನು ಕೇಳುತ್ತಾ… ಈ ಹಾಡನ್ನು ನೀನು ಕೂಡಾ ಆಲಿಸು. ನಿನ್ನ ಮನಸ್ಸಿಗೇನಾದರೂ ಡಿಸ್ಟರ್ಬ್ ಅನ್ನಿಸ್ತ ಇದ್ರೆ ನನಗೆ ಹೇಳು’ ಅಂದ್ಲು.
ಅವಳು ಸೈಕಾಲಾಜಿ ವಿದ್ಯಾರ್ಥಿ. ಎನೋ ನನ ಮೇಲೆ ಪ್ರಯೋಗ ಮಾಡ್ತಿರಬೇಕು ಎಂದುಕೊಂಡು ಆಯ್ತು ಎಂದು ಹಾಡು ಆಲಿಸತೊಡಗಿದೆ. ’ಗಮನವಿಟ್ಟು ಕೇಳಬೇಕು’ ಎಂದು ಮತ್ತೆ ಎಚ್ಚರಿಸಿದಳು.

ಅದರ ಸಾಹಿತ್ಯ ಸರಿಯಾಗಿ ಅರ್ಥವಾಗದ ಕಾರಣಕ್ಕೋ ಎನೋ ನನಗೆ ಏನೂ ಅನ್ನಿಸಲಿಲ್ಲ. ಅಮೇಲೆ ಅವಳು ’ಗ್ಲೂಮಿ ಸಂಡೆ’ ಎಂಬ ಆ ಹಾಡಿನ ಅರ್ಥ, ಅದರ ಹಿನ್ನೆಲೆ, ಅದರ ಪರಿಣಾಮ ಎಲ್ಲದರ ಬಗ್ಗೆಯೂ ಪುಟ್ಟ ವಿವರಣೆ ನೀಡಿ ಮತ್ತೊಮ್ಮೆ ಆ ಹಾಡನ್ನು ಪ್ಲೇ ಮಾಡಿದಳು. ಆಸಕ್ತಿಯಿಂದ ಅದರಲ್ಲಿ ನಾನು ಲೀನಳಾದೆ. ಹಾಡು ಮುಗಿದ ಮೇಲೆ ಅವಳು ನನ್ನತ್ತ ನೋಡಿದಳು. ಈಗ ನನಗೆ ಮೈಯೆಲ್ಲಾ ಭಾರವಾದ ಹಾಗೆ ಅನಿಸತೊಡಗಿತು.ಸಣ್ಣಗೆ ತಲೆ ನೋಯಲಾರಂಬಿಸಿತು.
ಅಮೇಲೆ ನಾನದನ್ನು ಮರೆತುಬಿಟ್ಟೆ.

ಆದರೆ ಮೊನ್ನೆ ಭಾನುವಾರ ಕನ್ನಡದ ಸುದ್ದಿವಾಹಿನಿಯೊಂದು ’ಗ್ಲೂಮಿ ಸಂಡೆ’ಯ ಬಗ್ಗೆ ಅರ್ಧ ಘಂಟೆಯ ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಿತು. ನಾನದನ್ನು ನೋಡಿದೆ. ಹಾಡನ್ನು ವೈಭವಿಕರಿಸಲಾಗಿದೆ ಅನ್ನಿಸಿತ್ತು. ಅದರ ಬಗ್ಗೆ ಇನ್ನೂ ಹೆಚ್ಚಿನದನ್ನು ತಿಳಿದುಕೊಳ್ಳಬೇಕೆನಿಸಿತು. ನೆಟ್ ನಲ್ಲಿ ಸರ್ಚ್ ಮಾಡಿದೆ. ಒಂದಷ್ಟು ವಿಚಾರಗಳು ತಿಳಿಯಿತು.

’ಗ್ಲೂಮಿ ಸಂಡೆ’ ಎಂಬ ಹಾಡಿಗೆ ಸೂಸೈಡ್ ಸಾಂಗ್ ಎಂಬ ಅನ್ವರ್ಥ ನಾಮವಿದೆ. ಇದಕ್ಕೆ ಈ ಅಡ್ಡ ಹೆಸರು ಬರಲು ಕಾರಣ ಅದು ಪ್ರಪಂಚದಾದ್ಯಂತ ಹಲವಾರು ಜನರ ಆತ್ಮಹತ್ಯೆಗೆ ಕಾರಣವಾಗಿದ್ದು. ಒಂದು ಹಾಡು ನೂರಾರು ಜನರ ಸಾವಿಗೆ ಕಾರಣವಾಗುತ್ತದೆ ಎಂಬುದೇ ತುಂಬಾ ಕುತೂಹಲದ ಸಂಗತಿ. ಹಾಗಾದರೆ ಆ ಹಾಡಿನಲ್ಲೇನಿದೆ? ಅದನ್ನು ಬರೆದಾತನಾರು?
ಗ್ಲೂಮಿ ಸಂಡೆಯನ್ನು ಬರೆದಾತನ ಹೆಸರು ರೆಜೊ ಸೆರೆಸ್.ಆತ ಹಂಗೇರಿಯನ್ ದೇಶದ ಫಿಯೋನಿಸ್ಟ್.

ಒಂದು ಭಾನುವಾರ. ಆತ ಕಿಟಿಕಿಯ ಬಳಿ ಕುಳಿತು ಹೊರನೋಡುತ್ತಿದ್ದ. ಮ್ಲಾನವಾದ ವಾತಾವರಣ. ಅವನೊಳಗಿನ ಒಂಟಿತನವನ್ನು ಅದು ಇನ್ನಷ್ಟು ಉದ್ದೀಪಿಸುತ್ತಿತ್ತು ಖಿನ್ನತೆಯನ್ನು ಹೆಚ್ಚಿಸುತಿತ್ತು.
ಅವನೊಬ್ಬ ಮ್ಯೂಸಿಕ್ ಕಂಪೋಸರ್, ಗೀತ ರಚನೆಗಾರ. ಆದರೆ ಅವನ ಪ್ರತಿಭೆಯನ್ನು ಯಾರೂ ಗುರುತಿಸಿರಲಿಲ್ಲ. ನಿರ್ದಿಷ್ಟ ವರಮಾನವಿಲ್ಲ. ಇದೇ ಕಾರಣಗಳಿಂದ ಅವನ ಪ್ರೇಯಸಿ ಅವನಿಂದ ದೂರವಾಗಿದ್ದಳು. ಅವನು ಏಕಾಂಗಿಯಾಗಿದ್ದ. ಅವನಿಗೆ ಆ ಭಾನುವಾರ ನಿರ್ಜೀವವಾಗಿ ಭಾಸವಾಗುತ್ತಿತ್ತು.ಅವನಲ್ಲಿ ಹೆಪ್ಪುಗಟ್ಟಿದ ಭಾವನೆಗಳು ಶಬ್ದದ ರೂಪದಲ್ಲಿ ಹೊರ ಬರಲು ಒದ್ದಾಡುತ್ತಿದ್ದವು.

ರೆಜೋ ಸೆರೆಸ್ ಎದುರಿನಲ್ಲಿ ಅವನ ಪ್ರೀತಿಯ ಪಿಯೋನೋ ಇತ್ತು. ಅವನ ಬೆರಳುಗಳು ಅದರ ಮೇಲೆ ಹರಿದಾಡತೊಡಗಿದವು. ದೂರಾದ ಗೆಳತಿ ನೆನಾಪಾಗಿ ದಹಿಸತೊಡಗಿದಳು. ಹೃದಯ ಬದುಕಿಗೆ ಚರಮ ಗೀತೆ ಬರೆಯುತ್ತಿತ್ತು. ಅವನ ಎದುರುಗಡೆ ಹಳೆಯ ಪೋಸ್ಟ್ ಕಾರ್ಡೊಂದು ಬಿದ್ದಿತ್ತು. ಮೂಲೆಯಲ್ಲಿದ್ದ ಪೆನ್ಸಿಲನ್ನು ಕೈಗೆತ್ತಿಕೊಂಡ. ವಿಷಾಧದ ನದಿ ಹರಿಯತೊಡಗಿತು;

ಮ್ಲಾನವಾದ ಭಾನುವಾರ.
ನಿದ್ದೆಯಿಲ್ಲದ ನನ ಕ್ಷಣಗಳು.
ಹರಿದಾಡುವ ನೆರಳುಗಳೊಡನೆ ನನ್ನ ಬದುಕು.
ಶ್ವೇತ ವರ್ಣದ ಪುಷ್ಫಗಳು ಇನ್ನೆಂದೂ ನಿನ್ನನ್ನು ಪ್ರಚೋದಿಸಲಾರವು.
ದುಃಖ ತುಂಬಿದ ನಾವೆ ನಿನ್ನನ್ನು ಗಾಡಾಂಧಕಾರಕ್ಕೆ ಹೊತ್ತೊಯ್ಯಲಿದೆ.
ನೀನು ಮರಳುವುದರ ಬಗ್ಗೆ ದೇವತೆಗಳು ಕೂಡಾ ಎಂದೂ ಯೋಚಿಸಲಾರರು.
ನಾನು ನಿನ್ನನ್ನು ಸೇರುವೆಯೆಂದರೆ ದೇವತೆಗಳೂ ಮುನಿಯಬಹುದು!

ಮ್ಲಂಕು ಕವಿದ ಭಾನುವಾರ
ದುಃಖ ಮಡುಗಟ್ಟಿದ ಭಾನುವಾರ
ಇಲ್ಲಿ ಯಾರೂ ಇಲ್ಲ; ನೆರಳುಗಳೊಡನೆ ಬದುಕುತ್ತಿದ್ದೇನೆ
ಬದುಕು ಸಾಕು, ಎಲ್ಲದಕ್ಕೂ ಅಂತ್ಯ ಹಾಡಲು ನಿರ್ಧರಿಸಿ ಆಗಿದೆ.
ನನಗೆ ಗೊತ್ತಿದೆ; ಇಲ್ಲಿ ಕೆಲವೇ ಕ್ಷಣಗಳಲ್ಲಿ ಕ್ಯಾಂಡಲುಗಳು ಬೆಳಗುತ್ತವೆ, ಪ್ರಾರ್ಥನೆ ಮೊಳಗುತ್ತದೆ.
ನನಗಾಗಿ ಯಾರೂ ಅಳಬಾರದು;
ಸಾವನ್ನು ನಾನು ಪ್ರೀತಿಸಿದ್ದೇನೆ. ಅದು ನನ್ನ ಕನಸು.
ಕನಸಿನಲ್ಲಿಯೂ ನಾನು ನಿನ್ನನ್ನೇ ಹಂಬಲಿಸುತ್ತಿದ್ದೇನೆ.

ಮ್ಲಬ್ಬಾದ ಭಾನುವಾರ
ಕನಸು ಕಾಣುತ್ತಿದ್ದೇನೆ, ಕೇವಲ ಕನಸು. ಎಲ್ಲೆಲ್ಲೂ ಕನಸು
ಅದು ನಿನ್ನದೇ ಕನಸು.
ನನ್ನ ಪ್ರೇಮವೇ, ನಾನು ಎಚ್ಚರಗೊಂಡಾಗಲೂ ನನ್ನ ಮನದಾಳದಲ್ಲಿ ನೀನು ಸುಪ್ತವಾಗಿ ಮಲಗಿದ್ದಿಯೇ
ನನ್ನ ಕನಸು ನಿನ್ನನ್ನೆಂದೂ ಬಾಧಿಸದು
ನನ ಹೃದಯಕ್ಕೆ ಗೊತ್ತಿದೆ; ನಿನ್ನೆಡೆಗಿನ ನನ್ನ ತೀರಲಾರದ ಹಂಬಲ
ಓ ಮ್ಲಾನವಾದ ಭಾನುವಾರವೇ

ರೆಜೋ ಸೆರೆಸ್ ಕೇವಲ ಅರ್ಧ ಘಂಟೆಯಲ್ಲಿ ಅದನ್ನು ಬರೆದು ಮುಗಿಸಿದ. ಅದನ್ನು ಪ್ರಕಟನೆಗಾಗಿ ಪೇಪರ್ ಅಪೀಸೊಂದಕ್ಕೆ ಕಳುಹಿಸಿದ. ಮಾಮೂಲಿನಂತೆ ಅದು ತಿರಸ್ಕೃತಗೊಂಡಿತು. ಆತ ಅದನ್ನು ಇನ್ನೊಂದು ಪೇಪರ್ ಆಪೀಸಿಗೆ ಕಳುಹಿಸಿದ. ಅದು ಅಲ್ಲಿ ಪ್ರಕಟವಾಯಿತು. ಮಾತ್ರವಲ್ಲ ಅದು ಜನಪ್ರಿಯಗೊಂಡಿತು. ಬರ್ಲಿನ್ ನಲ್ಲಿ ಒಬ್ಬಾತ ಅದನ್ನು ತನ್ನ ಬಾಂಡ್ ಗಾಗಿ ಬಾರಿಸಿದ. ಮತ್ತೆ ಮಾತ್ತೆ ಅದನ್ನೇ ಹಲವು ಕಾರ್ಯಕ್ರಮಗಳಲ್ಲಿ ನುಡಿಸಿದ. ನಂತರ ಒಂದು ದಿನ ತನ್ನ ರಿವಾಲ್ವರಿನಿಂದ ಗುಂಡು ಹೊಡೆದುಕೊಂಡು ಸತ್ತ. ನಂತರ ಹಲವಾರು ಜನ ಈ ಹಾಡನ್ನು ಕೇಳಿದ ನಂತರ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡರು. ಸತ್ತವರ ಡೆತ್ ನೋಟಿನಲ್ಲಿ ಗ್ಲೂಮಿ ಸಂಡೆಯ ಪ್ರಸ್ತಾಪವಿರುತ್ತಿತ್ತು.

ಗ್ಲೂಮಿ ಸಂಡೆ ಪ್ರಪಂಚಾದ್ಯಂತ ಸೂಸೈಡ್ ಸಾಂಗ್ ಎಂದು ಪ್ರಚಾರವಾಗತೊಡಗಿತು. ಪ್ರಥಮ ಬಾರಿಗೆ ಬಿಬಿಸಿ ಆಕಾಶವಾಣಿ ಈ ಹಾಡನ್ನು ನಿಷೇಧಿಸಿತು. ಅನಂತರದಲ್ಲಿ ಹಲವಾರು ದೇಶಗಳು ಇದನ್ನು ಬ್ಯಾನ್ ಮಾಡಿದವು. ರೆಜೋ ಸೆರೆಸ್ ನ ದೇಶವಾದ ಹಂಗೇರಿಯಾ ಕೂಡಾ ಗ್ಲೂಮಿ ಸಂಡೆಯನ್ನು ಬ್ಯಾನ್ ಮಾಡಿತು.
ಯಾಕೆ ಹೀಗಾಯ್ತು? ನಿಜವಾಗಿಯೂ ಆ ಹಾಡಿನಲ್ಲಿ ಸಾವಿನ ಸಂದೇಶ ಇದೆಯಾ? ಪೋಣಿಸಲ್ಪಟ್ಟ ಶಬ್ದಗಳಿಗೆ, ಸಂಗೀತಕ್ಕೆ ಸಾವನ್ನು ತರುವ ಶಕ್ತಿ ಇದೆಯಾ? ನಾವು ಆ ಕಾಲಘಟ್ಟಕ್ಕೆ ಹೋಗಿ ನೋಡೋಣ.

ಗ್ಲೂಮಿ ಸಂಡೆ ರಚನೆಯಾದದ್ದು ೧೯೩೩ರಲ್ಲಿ. ಅದು ವಿಶ್ವಮಾಹಾಯುದ್ದದ ಕಾಲ. ಜನತೆ ಬಡತನ, ರೋಗ ರುಜಿನಗಳಿಂದ ನರಳುತ್ತಿದ್ದರು. ಹಿಟ್ಲರ್ ಅಬ್ಬರಕ್ಕೆ ಪ್ರಪಂಚವೇ ನಡುಗಿ ಹೋಗುತ್ತಿತ್ತು.ಜನ ಮಾನಸಿಕವಾಗಿ ಜರ್ಝರಿತರಾಗಿದ್ದರು. ಅದರಲ್ಲಿಯೂ ಹಂಗೇರಿಯಾ ಸೂಸೈಡ್ ರೇಟಿಂಗ್ ನಲ್ಲಿ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿತ್ತು. ಇಂತಹ ಪರಿಸ್ಥಿತಿಯಲ್ಲಿ ದುರ್ಭಲ, ಭಾವುಕ ಮನಸ್ಸುಗಳಿಗೆ ಸಾಯಲು ನೆಪವೊಂದು ಬೇಕಾಗಿತ್ತು. ಗ್ಲೂಮಿ ಸಂಡೆ ಸಿಕ್ಕಿತ್ತು.

ಮನುಷ್ಯ ಮೂಲತ; ಒಂಟಿಯೇ. ಅವನ ಬದುಕು ವಿಷಾಧದಿಂದ ಕೂಡಿರುತ್ತದೆ. ಅವನ ಸೇಹಿತರು, ಬಂಧುಗಳು. ಪ್ರೀತಿಪಾತ್ರ್ರರು ಅದನ್ನು ಸಹನೀಯವಾಗುವಂತೆ ಮಾಡುತ್ತಾರೆ. ಆದರೆ ಅಂತವರ್ಯಾರು ಅವನ ಬದುಕಿನಲ್ಲಿ ಇಲ್ಲದೇ ಹೋದರೆ? ಇದ್ದವರು ಅರ್ಧದಲ್ಲಿ ಎದ್ದು ಹೋದರೆ? ಬದುಕಿಗೆ ವಿದಾಯ ಹೇಳಬೇಕೆಂದು ಅನ್ನಿಸುವುದು ಸಹಜ. ಗ್ಲೂಮಿ ಸಂಡೆಯನ್ನು ಬರೆದವನಿಗೂ’ ಅದನ್ನು ಓದಿ ಮನಸ್ಸು ಕ್ಷೋಭೆಗೊಳಗಾದವರಿಗೂ ಹಾಗೆ ಅನ್ನಿಸಿರಬೇಕು. ಈ ಕವನದ ಇನ್ನೊಂದು ದುರಂತವೆಂದರೆ ಯಾರ ನೆನಪಿನಲ್ಲಿ ಆ ಕವನ ಹುಟ್ಟಿತೋ ಆಕೆ ಅದನ್ನು ಓದಿ ಒಡನೆಯೇ ಆತ್ಮಹತ್ಯೆ ಮಾಡಿಕೊಂಡದ್ದು.

ಇಷ್ಟೆಲ್ಲಾ ಬರೆಯಲು ನೆಪವಾಗಿದ್ದು ಗ್ಲೂಮಿ ಸಂಡೆಯಿಂದಲೇ. ಆದರೆ ಅದು ರೆಜೋ ಸೆರೆಸ್ ನ ಗ್ಲೂಮಿ ಸಂಡೆಯಿಂದಲ್ಲ. ಕಳೆದ ಸಂಡೆಯಿಂದ ಆರಂಭವಾಗಿರುವ ಬೆಂಗಳೂರಿನ ಗ್ಲೂಮಿ ವೆದರಿನಿಂದ. ಒಂದೇ ಸಮನೆ ಮಳೆ ಸುರಿಯುತ್ತಿದೆ. ಮನಸ್ಸು ಏಕಾಂತಕ್ಕೆ ಸರಿಯುತ್ತಿದೆ. ಎದ್ದು ರೇಡಿಯೋ ಹಾಕಿದರೆ ನನ್ನೂರಿನ, ನನ ಮೆಚ್ಚಿನ ಕವಿ ಸುಬ್ರಾಯ ಚೊಕ್ಕಾಡಿಯವರ’ ಮುನಿಸು ತರವೆನೇ ಮುಗುದೇ ನಗಲೂ ಬಾರದೇ…’ಎಂಬ ಹಾಡು ಪ್ರಸಾರ ಆಗುತ್ತಿತ್ತು. ಅ ಹಾಡಿನ ಬಗ್ಗೆ ನನಗೆ ಹುಚ್ಚು ಮೋಹ. ’ಆ ಹಾಡನ್ನು ನಿಮಗಾಗಿಯೇ ಬರೆದದ್ದು” ಎಂದು ಚೊಕ್ಕಾಡಿಯವರು ನನಗೆ ತಮಾಶೆ ಮಾಡುತ್ತಿರುತ್ತಾರೆ. ಅ ಹಾಡಿನ ಕ್ಯಾಸೇಟ್ ಅನ್ನು ನಾನು ತುಂಬಾ ಜನರಿಗೆ ಗಿಪ್ಟ್ ಕೊಟ್ಟಿದ್ದೇನೆ. ಹಾಗೆ ನಾನು ಮೆಚ್ಚಿಕೊಂಡಿದ್ದ ಹುಡುಗನಿಗೂ ಕೊಟ್ಟಿದ್ದೆ. ಆತ ಎಷ್ಟು ಇನ್ಸೆನ್ಸಿಟೀವ್ ಆಗಿದ್ದ ಅಂದರೆ ಅದರ ಹಿಂದಿನ ಭಾವ ಆತನಿಗೆ ಅರ್ಥವಾಗಲೇ ಇಲ್ಲ.ಸೆರಸ್ ಗೆ ಆದ ಅನುಭವವೇ ಸೂಕ್ಷ್ಮ ಮನಸ್ಸಿನವರಿಗೂ ಆಗುತ್ತಿದೆ. ಆದರೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಅದು ಮನಸ್ಸಿನೊಳಗೆ ನಡೆಯುವ ಕೆಮಿಸ್ಟ್ರಿ. ಅದರಿಂದ ಹೊರಬರಲು ನೂರಾರು ದಾರಿಗಳಿವೆ.

ಗ್ಲೂಮಿ ವೆದರ್ ಇದ್ದಾಗಲೂ ಅಣ್ಣಾ ಹಜಾರೆಯ ಪರವಾಗಿ ಜನ ಬೀದಿಗಿಳಿಯುತ್ತಿದ್ದಾರೆ. ಅದು ಬ್ರಷ್ಟಾಚಾರದಿಂದ ರೋಸಿ ಹೋಗಿರುವ ಜನ ಸಾಮಾನ್ಯರ ಆಕ್ರೋಶ. ಯುವ ಜನತೆ ಬಂಡೆಳುತ್ತಿದ್ದಾರೆ.. ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿಲ್ಲ. ಆದರೆ ಕಾರ್ಪೋರೇಟ್ ಜಗತ್ತು ಚಳುವಳಿಯನ್ನು ತಮ್ಮ ಸುಪರ್ಧಿಗೆ ತೆಗೆದುಕೊಳ್ಳಲು ಹವಣಿಸುತ್ತಿದೆ. ಬ್ರಷ್ಟ ರಾಜಾಕಾರಣಿಗಳು ಕೂಡಾ ತಾವು ಪರಿಶುದ್ಧರೆಂದು ತೋರಿಸಿಕೊಳ್ಳಲು ಚಳುವಳಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಗ್ಲೂಮಿ ವೆದರ್ ಒಳಗೂ- ಹೊರಗೂ ವ್ಯಾಪಿಸಿಕೊಳ್ಳುತ್ತಿದೆ.
[ಒರಿಜಿನಲ್ 'ಗ್ಲೂಮಿ ಸಂಡೇ' ಕೊಟ್ಟಿದ್ರೆ ಚೆನ್ನಾಗಿತ್ತು ಎಂದು ಕೆಲವರು ಕೇಳಿದ್ದಾರೆ ಅವರಿಗಾಗಿ ಇಲ್ಲಿದೆ ರೆಜೊ ಸೆರೆಸ್ ಬರೆದ ಮೂಲ ಹಂಗೇರಿಯನ್ ಹಾಡಿನ ಇಂಗ್ಲೀಷ್ ಅನುವಾದ];
sunday is gloomy
The hours are slumberless
dearest the shadows
I live with are numberless

Little white flowers
will never awaken you,
not where the dark coach
of sorrow has taken you

Angels have no thought
of ever returning you
would they be angry
if I thought of joining you?

Gloomy Sunday

Gloomy Sunday
with shadows I spend it all
my heart and I
have decided to end it all

Soon there'll be prayers
and candles are lit, I know
let them not weep
let them know, that I'm glad to go

Death is no dream
for in death I'm caressing you
with the last breath of my soul
I'll be blessing you

Gloomy Sunday

Dreaming, I was only dreaming
I wake and I find you asleep
on deep in my heart, dear

Darling, I hope
that my dream hasn't haunted you
my heart is telling you
how much I wanted you

Gloomy Sunday

It's absolutely gloomy sunday

*rezso seress

5 comments:

sunaath said...

ನಿಮ್ಮ ಗದ್ಯಾನುವಾದವನ್ನು ಓದಿಯೇ ನನ್ನ ಮನಸ್ಸು ಖಿನ್ನತೆಗೆ ಒಳಗಾಯಿತು. ಅಂದ ಮೇಲೆ ಮೂಲ ಗೀತೆ ತುಂಬ effective ಇರಬಹುದು. ಆದರೆ ಆ ಗೀತೆಯನ್ನು ಕೇಳಿದರೆ ನನಗೆ ಏನೂ ಅನ್ನಿಸಲಿಕ್ಕಿಲ್ಲ. ಏಕೆಂದರೆ ನನಗೆ ಇಂಗ್ಲಿಶ್ ಗೀತೆಗಳನ್ನು ಕೇಳುವಾಗ ಅರ್ಥ ತಿಳಿಯುವದಿಲ್ಲ.

ಗಿರೀಶ್.ಎಸ್ said...

Very interesting story sbout that song...

ತೇಜಸ್ವಿನಿ ಹೆಗಡೆ said...

ಪರಿಚಯಿಸಿದ್ದಕ್ಕೆ ಧನ್ಯವಾದ. ಈ ಹಾಡಿನ ಕುರಿತು ತಿಳಿದೇ ಇರಲಿಲ್ಲ. ಆದರೆ ಅದ್ಯಾಕೋ ಎಂತೋ ಓದಿದ ಮೇಲೆ ಕವಿತೆ ಚೆನ್ನಾಗಿದೆ ಅನಿಸಿತು ಅಷ್ಟೇ... ಖಿನ್ನತೆ ಎನೂ ಕಾಡಲಿಲ್ಲ.. (ಸಧ್ಯ!) ಮೂಲ ಇಂಗ್ಲೀಷ್ ಹಾಡನ್ನೂ ಜೊತೆಗೆ ಹಾಕಿದ್ದರೆ ಚೆನ್ನಾಗಿತ್ತು. ನನಗೂ ಚೊಕ್ಕಡಿಯವರ ಆ ಹಾಡನ್ನು ಕೇಳಬೇಕೆನಿಸಿದೆ.. ಯಾರದರೂ ಗಿಫ್ಟ್ ಕೊಡುತ್ತಾರಾ ಎಂದು ಕಾದು ನೋಡುವೆ :) (ಹಾಡಿನ ಒಂದು ಸಾಲನ್ನು ಓದಿಯೇ ಬಲು ಇಷ್ತವಾಯಿತು.. ಪೂರ್ತಿ ಹಾಡನ್ನು ಬೇಗ ಕೊಂಡು ಕೇಳುವೆ:))

suragi \ ushakattemane said...

ಒರಿಜಿನಲ್ ಗ್ಲೂಮಿ ಸಂಡೆ ಹಾಡನ್ನು ಕೆಲವರು ಓದುವ ಆಸೆ ವ್ಯಕ್ತ ಪಡಿಸಿದ್ದಾರೆ. ಅದಕ್ಕಾಗಿ ಲೇಖನದ ಕೆಳಭಾಗದಲ್ಲಿ ಅದನ್ನು ಮತ್ತೆ ಸೇರಿಸಿದ್ದೇನೆ.
ನನಗೆ ಕವನ ಅನುವಾದ ಮಾಡಿ ಅಭ್ಯಾಸ ಇಲ್ಲ. ತಪ್ಪಿದ್ದರೆ ತಿದ್ದಿಕೊಳ್ಳಬೇಕಾಗಿ ವಿನಂತಿ.
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು

ರಾಘವೇಂದ್ರ ಜೋಶಿ said...

ಮನಸು ಗ್ಲೂಮಿ ಗ್ಲೂಮಿ..
ಈ ಹಾಡಿನ ಎಫೆಕ್ಟ್ ಗಿಂತಲೂ ಆವತ್ತಿನ ಕಾಲಘಟ್ಟ
ಬಹುಶಃ ಅವರನ್ನು ಅಷ್ಟು ಭಯಪೀಡಿತರನ್ನಾಗಿ ಮಾಡಿರಬಹುದು.
ಒಮ್ಮೊಮ್ಮೆ,ಜನರಿಗೆ ಬೇಡವಾದ ಸಂಗತಿಗಳಿಗೆ ಇನ್ಯಾರೋ ಅತಿಯಾದ
ಅತಿಯಾದ ಪ್ರಚಾರ ಕೊಡುವದರಿಂದಲೂ ಈ ರೀತಿಯ ಘಟನೆಗಳು ಘಟಿಸುತ್ತವೇನೋ..
I mean,banning, restricting..
Interesting story.