Tuesday, January 17, 2012

ದೆಹಲಿ ನಾಟಕೋತ್ಸವದಲ್ಲಿ ಕರ್ನಾಟಕದ ಮೂರು ನಾಟಕಗಳು



ಹ್ಯಾಮ್ಲೆಟ್, ಡೆನ್ಮಾರ್ಕಿನ ಯುವರಾಜ, ಆತನ ಮಾನಸಿಕ ತೊಳಲಾಟವನ್ನು ನೋಡಿ; ತಂದೆ ತನ್ನ ತಮ್ಮನಿಂದಲೇ ಕೊಲೆಯಾಗಿ ಪ್ರೇತವಾಗಿ ಅಂಡಲೆಯುತ್ತಿದ್ದಾನೆ. ಚಿಕ್ಕಪ್ಪ ಆ ಕೊಲೆಯನ್ನು ದಕ್ಕಿಸಿಕೊಂಡು ತನ್ನಮ್ಮನನ್ನು ಮದುವೆಯಾಗಿದ್ದಾನೆ. ತಾನು ಮನಸಾರೆ ಪ್ರೀತಿಸಿದ ಹುಡುಗಿ ತನ್ನಿಂದ ದೂರವಾಗಿದ್ದಾಳೆ. ಇಡೀ ರಾಜ್ಯ ಸುಖಲೋಲಪ್ತತೆಯಲ್ಲಿ ಮುಳುಗಿ ನೈತಿಕವಾಗಿ ಕುಸಿಯುತ್ತಿದೆ.
ಂತಹ ಹ್ಯಾಮ್ಲೆಟ್ ನ ಮನಕ್ಲೇಶವನ್ನು ರಂಗದ ಮೇಲೆ ತರುವ ಪ್ರಯತ್ನವನ್ನು ಮಾಡಿದವರು ನಿರ್ದೇಶಕ ಇಕ್ಬಾಲ್ ಅಹ್ಮದ್. ಇತ್ತೀಚೆಗಿನ ವರ್ಶಗಳಲ್ಲಿ ರಂಗಭೂಮಿಯಲ್ಲಿ ಹೆಸರು ಮಾಡುತ್ತಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿಯ ”ಕಿನ್ನರ ಮೇಳ’ ತಂಡಕ್ಕಾಗಿ ಅಹ್ಮದ್ ಅವರು ಈ ನಾಟಕವನ್ನು ನಿರ್ದೇಶಿಸಿದ್ದರು. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡದ್ದು. ಡಾ. ರಾಮಚಂದ್ರ ದೇವ ಅವರು ಅನುವಾದಿಸಿರುವ ಷೇಕ್ಸಪೀಯರನ ’ಹ್ಯಾಮ್ಲೆಟ್ ’ ನಾಟಕವನ್ನು.
ವಿಲಿಯಂ ಷೇಕ್ಸಪಿಯರ್ ಜಗತ್[ಪ್ರಸಿದ್ಧ ನಾಟಕಕಾರ. ಅವನ ನಾಟಕಗಳು ಇಂದಿಗೂ ಜಗತ್ತಿನಾದ್ಯಂತ ಪ್ರದರ್ಶನ ಕಾಣುತ್ತಲೇ ಇವೆ. ಹಾಗಾಗಿ ಇಂತಹ ನಾಟಕಗಳನ್ನು ನಿರ್ದೇಶಕನೊಬ್ಬ ಪ್ರದರ್ಶನಕ್ಕೆ ಕೈಗೆತ್ತಿಕೊಂಡಾಗ ಆತನಿಗೆ ಹಲವು ಸವಾಲುಗಳಿರುತ್ತವೆ. ಹಾಗ್ಯೇ ಪ್ರೇಕ್ಷಕರಿಗೆ ಈ ನಿರ್ದೇಶಕ ನಾಟಕವನ್ನು ಹೇಗೆ ನೋಡಿದ್ದಾನೆ ಎಂಬ ನಿರೀಕ್ಷೆ, ಕುತೂಹಲಗಳಿರುತ್ತವೆ. ಇದೇ ಪ್ರಶ್ನೆಯನ್ನು ಇಕ್ಬಾಲ್ ಮುಂದಿಟ್ಟಾಗ ಅವರು ಹೇಳಿದ್ದು ಹೀಗೆ ”ನನಗೆ ಹ್ಯಾಮ್ಲೆಟ್ ನ ಒಳತೋಟಿ ಮುಖ್ಯವಾಗಿತ್ತು. ಹಾಗಾಗಿ ಆತ ತನ್ನ ಬಂಧುಗಳ ಜೊತೆ, ಆಪ್ತರ ಜೊತೆ ಹೊಂದಿದ್ದ ಸಂಬಂಧಗಳ ಬಗ್ಗೆ ನಾನು ಹೆಚ್ಚು ಗಮನ ಹರಿಸಿದೆ”.
ನಿಜ, ಅದಕ್ಕಾಗಿ ಅವರು ನಾಟಕವನ್ನು ತಮಗೆ ಬೇಕಾದಂತೆ ಎಡಿಟ್ ಮಾಡಿಕೊಂಡಿದ್ದಾರೆ.ಸುಮಾರು ಎರಡು ಘಂಟೆಗೂ ಮೀರಿ ನಡೆಯಬಹುದಾದ ಈ ನಾಟಕವನ್ನು ಅವರು ತೊಂಬತ್ತು ನಿಮಿಷಗಳಿಗೆ ಇಳಿಸಿದ್ದಾರೆ. ಆ ಕಾರಣದಿಂದಲೇ ಏನೋ ನಾಟಕದ ಸರಾಗ ಓಘಕ್ಕೆ ಆಗಾಗ ಧಕ್ಕೆಯಾಗುತ್ತಿತ್ತು. ಮಾತ್ರವಲ್ಲ ಕಥೆ ಗೊತ್ತಿಲ್ಲದವರಿಗೆ ಸಂವಹನದ ಕೊರತೆಯಾಗುತ್ತಿತ್ತು.
ಹ್ಯಾಮ್ಲೆಟ್ ನ ಮನೋವಿಪ್ಲವಕ್ಕೆ ಒತ್ತು ಕೊಟ್ಟ ಕಾರಣದಿಂದ ಇಡೀ ರಂಗವನ್ನು ಹ್ಯಾಮ್ಲೆಟ್ ಆಳಿಬಿಟ್ಟಿದ್ದಾನೆ. ಆ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ನಾಗರಾಜ್ ಮಳವಳ್ಳಿ ತನ್ನ ಅಭಿನಯದಲ್ಲಿ ನವರಸಗಳನ್ನು ಚೆಲ್ಲಿ ವಿಜೃಂಬಿಸಿಬಿಟ್ಟಿದ್ದಾರೆ. ಆದರೆ ನಾಟಕವೆಂಬುದು ಒಂದು ಟೀಂ ವರ್ಕ್. ಎಲ್ಲಾ ಪಾತ್ರಗಳ ಪಾತ್ರ ಪೋಷಣೆ ಶಕ್ತವಾಗಿ ಮೂಡಿ ಬಂದಾಗ ಮಾತ್ರ ಒಟ್ಟು ನಾಟಕ ಪರಿಣಾಮಕಾರಿಯಾಗಲು ಸಾಧ್ಯ. ಹ್ಯಾಮ್ಲೆಟ್ ಗೆಳೆಯ ಹೊರೇಷಿಯೋ ಸೇರಿದಂತೆ ಕೆಲವು ಪಾತ್ರಗಳಲ್ಲಿ ಭಾಷಾ ಶುದ್ಧತೆ ಇರಲಿಲ್ಲ. ಆದರೆ ಎಲ್ಲಾ ಪಾತ್ರಗಳ ದೈಲಾಗ್ ದೆಲಿವರಿಯಲ್ಲಿ ಹೊಸತನವಿತ್ತು. ಅದು ಒಮ್ಮೆ ಗಮಕದ ಶೈಲಿಯನ್ನು ನೆನಪಿಸಿದರೆ ಇನ್ನೊಮ್ಮೆ ಯಕ್ಷಗಾನದ ಭಾಗವತಿಕೆಯನ್ನು ಕೇಳಿದಂತಾಗುತ್ತಿತ್ತು ವೇಷಭೂಷಣ ಮತ್ತು ಬಣ್ಣಗಾರಿಕೆಯಲ್ಲಿ ಕಥಕ್ಕಳಿ ಹಾಗೂ ಯಕ್ಷಗಾನದ ಮಿಶ್ರಣವಿದ್ದುದರಿಂದ ದೇಶೀಯತೆ ಎದ್ದು ಕಾಣುತ್ತಿತ್ತು.
ಪ್ರತಿವರ್ಷ ರಾಷ್ಟ್ರೀಯ ನಾಟಕ ಶಾಲೆ [NSD ] ದೆಹಲಿಯಲ್ಲಿ ’ಭಾರತ ರಂಗ ಮಹೋತ್ಸವ; ಎಂಬ ನಾಟಕೋತ್ಸವವನ್ನು ನಡೆಸುತ್ತದೆ. ಅದರಲ್ಲಿ ಭಾರತದ ಉಪಭಾಷೆಗಳೂ ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ನಾಟ್ಕಗಳು ಭಾಗವಹಿಸುತ್ತವೆ. ಈ ಬಾರಿ ಕರ್ನಾಟಕದಿಂದ ಮೂರು ನಾಟಕಗಳು ಭಾಗವಹಿಸುತ್ತಿವೆ. ಅವುಗಳೆಂದರೆ, ಮಣಿಪಾಲದ ’ಸಂಗಮ ಕಲಾವಿದರು’ ಅಭಿನಯಿಸುವ, ಉಡುಪಿಯ ಶ್ರೀಪಾದ ಭಟ್ ನಿರ್ದೇಶನದ ತುಳು ನಾಟಕ ’ಕರ್ಣಭಾರ’. ಭಾಸನ ಸಂಸ್ಕೃತ ನಾಟಕವನ್ನು ತುಳುವಿಗೆ ಅನುವಾದಿಸಿದವರು ಸತ್ಯ ಉಡುಪಿ, ಬೆಂಗಳೂರಿನ ಅನೇಕ ತಂಡ ಅಭಿನಯಿಸುವ ಎಚ್.ಎಸ್. ಶಿವಪ್ರಕಾಶ್ ಅವರ ’ಮಸ್ತಕಾಭಿಷೇಕ ರಿಹರ್ಸಲ್’ ಇದರ ನಿರ್ದೇಶನ ಸುರೇಶ ಅನಗಳ್ಳಿ.
’ಹ್ಯಾಮ್ಲೆಟ್ ’ ಜನವರಿ ೧೮ ದೆಹಲಿಯಲ್ಲಿ ಪ್ರದರ್ಶನಗೊಳ್ಳಲಿದೆ. ಅದಕ್ಕಾಗಿ ಹೊರಟ ತಂಡ ಮಾರ್ಗ ಮಧ್ಯದಲ್ಲಿ ಬೆಂಗಳೂರಿನಲ್ಲಿ ಅಚಾನಕ್ ಆಗಿ ಹನುಮಂತನಗರದ ಕೆ.ಎಚ್.ಕಲಾಸೌಧದಲ್ಲಿ ಒಂದು ಪ್ರದರ್ಶನ ಏರ್ಪಡಿಸಿತ್ತು.
ಕರ್ಣಭಾರ ಈಗಾಗಲೇ ಜನವರಿ ೧೪ರಂದು ಪ್ರದರ್ಶನಗೊಂಡಿದೆ. ಹ್ಯಾಮ್ಲೆಟ್ ನಂತೆಯೇ ಕರ್ಣಭಾರ ಕೂಡಾ ಕರ್ಣನ ಮನೋಕ್ಲೇಶಗಳಿಗೆ ಸಂಬಂಧಪಟ್ಟದು. ಮಹಾಭಾರತ ಯುದ್ಧ ನಿಶ್ಚಯವಾಗಿದೆ, ಅಂಥ ಸಂದರ್ಭದಲ್ಲಿ ಕೃಷ್ಣ ಮತ್ತು ಕುಂತಿ ಅವನನ್ನು ಭೇಟಿ ಮಾಡಿ ಅವನ ಜನ್ಮ ವೃತ್ತಾಂತವನ್ನು ತಿಳಿಸಿ ಅವನನ್ನು ದ್ವಂದಕ್ಕೆ ಕೆಡವುತ್ತಾರೆ. ಸಾಲದಕ್ಕೆ ಇಂದ್ರ ಬಂದು ಕರ್ಣಕುಂಡಲಗಳನ್ನು ಬೇಡುತ್ತಾನೆ. ಈ ಮೂವರ ಮಾತುಗಳೇ ಅವನಿಗೆ ಭಾರವಾಗಿ ಕರ್ಣ ಕುಸಿದು ಹೋಗುತ್ತಾನೆ. ಅವನ ಮಾನಸಿಕ ಕುಸಿತವನ್ನು ಯಕ್ಷಗಾನದ ಚಕ್ರತಾಳವನ್ನು ಬಳಸಿಕೊಂಡು ಅತ್ಯದ್ಬುತವಾಗಿ ರಂಗದ ಮೇಲೆ ತರಲಾಗಿದೆ. ಆದರೆ ತಾಂತ್ರಿಕ ಅಂಶಗಳು ನಾಟಕದ ವಸ್ತುವನ್ನು ಮಸುಕಾಗಿಸಿದವೆನೋ ಎಂಬ ಸಂಶಯವನ್ನೂ ಈ ನಾಟ್ಕವನ್ನು ದೆಹಲಿಯಲ್ಲಿ ನೋಡಿದ ಪುರುಷೋತ್ತಮ ಬಿಳಿಮಲೆಯವರು ಹೇಳುತ್ತಾರೆ. ಆದರೆ ಮೊತ್ತಮೊದಲ ಭಾರಿಗೆ ತುಳು ನಾಟಕವೊಂದು ರಂಗಮಹೋತ್ಸವದಲ್ಲಿ ಭಾಗವಹಿಸುತ್ತಿರುವುದು ತುಳು ರಂಗಪ್ರೇಮಿಗಳಿಗೆ ಹೆಮ್ಮೆಯ ವಿಷಯ.
’ಮಸ್ತಕಾಭಿಷೇಕದ ರಿಹರ್ಸಲ್’ ಕಥೆ ಎಲ್ಲರಿಗೂ ಗೊತ್ತಿರುವ ಭರತ-ಭಾಹುಬಲಿ ಎಂಬ ಅಣ್ಣತಮ್ಮಂದಿರ ಕಥೆ; ಬಾಹುಬಲಿಯ ತ್ಯಾಗದ ಕಥೆ ಜೈನಧರ್ಮದ ಮೌಲ್ಯಗಳು ನಾಟಕದ ಆವರಣವಾಗಿ ಬಂದರೆ,
ಈ ನಾಟ್ಕದೊಳಗೊಂದು ನಾಟಕದ ರಿಹರ್ಸಲ್ ಇದೆ. ಅದು ಅಂಬಾನಿ ಸಹೋದರರ ಜೊತೆ ತಳುಕು ಹಾಕಿಕೊಂಡಿದೆ. ಯಾವ ಜೈನ ಧರ್ಮ ತ್ಯಾಗ ಮತ್ತು ವೈರಾಗ್ಯವನ್ನು ಜೀವನ ಮೌಲ್ಯವಾಗಿ ಅಂಗೀಕರಿಸಿಕೊಂಡಿತ್ತೋ ಆ ಧರ್ಮವೀಗ ವ್ಯಾಪಾರೀಕರಣಗೊಂಡು ಅದೊಂದು ಸರಕಾಗಿ ಬದಲಾವಣೆಗೊಂಡಿರುವುದನ್ನು ಹೇಳುವ ಪ್ರಯತ್ನವನ್ನು ನಾಟಕ ಮಾಡುತ್ತದೆ. ವಿಚಾರವಾದಿಗಳ ವಿರೋಧ, ಮಾಧ್ಯಮದವರ ಎಡೆಬಿಡಂಗಿತನ, ಅಧುನಿಕ ತಂತ್ರಜ್ನಾನ್,ಕೋರ್ಟ್-ಕಛೇರಿ ಎಲ್ಲವೂ
ಈ ನಾಟಕದಲ್ಲಿ ಒಳ ಹೂರಣವಾಗಿ ಬರುತ್ತದೆ. ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕದ ವಿಡಿಯೋ ದೃಶ್ಯಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳಲಾಗಿದೆ, ಹಾಗಾಗಿ ಇದೊಂದು ”ಡಾಕ್ಯು ಡ್ರಾಮ’ ಎಂದು ನಿರ್ದೇಶಕ ಸುರೇಶ್ ಅನಗಳ್ಳಿ ಹೇಳುತ್ತಾರೆ. ಈ ನಾಟಕ ಜ.೨೦ ರಂದು ಪ್ರದರ್ಶನಗೊಳ್ಳಲಿದೆ.
ಕಳೆದ ವರ್ಷ ಬಿ. ಜಯಶ್ರೀ ಆಯ್ಕೆ ಸಮಿತಿಯಲ್ಲಿದ್ದರೂ ಕರ್ನಾಟಕದಿಂದ ಒಂದೂ ನಾಟಕ ಆಯ್ಕೆಯಾಗಿರಲಿಲ್ಲ. ಆದರೆ ಈ ಬಾರಿ ಮೂರು ನಾಟಕ ಆಯ್ಕೆಯಾಗಿರುವುದು ಕನ್ನಡಕ್ಕೆ ಹೆಮ್ಮೆಯ ವಿಚಾರ.
[ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ ]

1 comments:

Badarinath Palavalli said...

ಇಕ್ಬಾಲ್ ಅಹಮದ್ ಅವರ ಬಗ್ಗೆ ತುಂಬಾ ಕೇಳಿದ್ದೇನೆ.

ಆದರೆ ಅವರ ನಾಟಕಗಳನ್ನು ನೋಡುವ ಸೌಭಾಗ್ಯವಿನ್ನೂ ನನಗೆ ಕೂಡಿಬಂದಿಲ್ಲ ಮೇಡಂ!

ಉತ್ತಮವಾದ ಬರಹ.

(ನನ್ನ ಬ್ಲಾಗಿಗೂ ಬನ್ನಿ, ಕೆಲ ಹೊಸ ಕವನಗಳಿವೆ)