Thursday, December 27, 2012

ಪೂರ್ಣಾಹುತಿಯ ಸಮಯದಲ್ಲೇಕೆ ಬಂತು ವಿಶ್ವಾಮಿತ್ರ ಹಸ್ತ..?!ಅಂದು ನಾನಿನ್ನೂ ಪುಟ್ಟ ಬಾಲೆ. ಕನಸಿನ ಕೋಟೆಗೆ ಲಗ್ಗೆಯಿಡುವ ಕಾಲ. ಆಕಾಶದಿಂದ ಇಳಿಬಿಟ್ಟ ಹೂವಿನುಯ್ಯಾಲೆಯಲ್ಲಿ ಕುಳಿತಿದ್ದೆ. ಅರೆಗಣ್ಣು ಮುಚ್ಚಿತ್ತು. ಸಪ್ತ ಸಮುದ್ರದಾಚೆಯಿಂದ ಬಿಳಿಯ ಕುದುರೆಯನ್ನೇರಿ ನೀನು ಬಂದೆ. ಕಯ್ಯಲ್ಲಿ ಕುಂಚವಿತ್ತು. ಕಣ್ಣುಗಳಲ್ಲಿ ತುಂಟತನವಿತ್ತು. ನಿರಂತರ ನಾಲ್ಕು ವರ್ಷಗಳ ಕಾಲ ನನ್ನ ಹೃದಯವನ್ನೇ ನೀ ಕ್ಯಾನ್ವಾಸ್ ಮಾಡಿಕೊಂಡೆ. ಒಂದು ದಿನ ಇದರ ಮೇಲೆ ಜಡಿ ಮಳೆ ಸುರಿಯಿತು...

ನೀನು ನನ್ನ ಎದೆಯ ಚೆತ್ತಾರಕ್ಕೆ ತಣ್ಣಿರು ಎರಚಿದ ದಿನ ನಾನು ಎಷ್ಟೊಂದು ಅತ್ತಿದ್ದೆ. ನೀನು ಕೂಡಾ ಅಳುತ್ತಿದ್ದೆ.ನಿನ್ನ ಕಣ್ಣೀರು ನನಗೆ ಕಾಣಬಾರದೆಂದು ನನಗೆ ಬೆನ್ನುಮಾಡಿ ಚಾಪೆಯ ಮೇಲೆ ಕುಳಿತ್ತಿದ್ದೆ. ಹೆಣ್ಣು ಹೃದಯ ನೋಡು ನನ್ನದು, ಬಿಕ್ಕಳಿಸಿ ಅಳುತ್ತಿದ್ದೆ. ಜೀವ ಚೈತನ್ಯವೇ ಉಡುಗಿಹೋದಂತಾಗಿ ನಿನ್ನ ಬೆನ್ನ ಮೇಲೆ ಮುಖವಿಟ್ಟಿದ್ದೆ. ಇಡೀ ಒಂದು ರಾತ್ರಿ ನಿನ್ನ ಬೆನ್ನ ಮೇಲೆ ಕಣ್ಣೀರಿನಲ್ಲಿ ಚಿತ್ತಾರ ಬಿಡಿಸಿದ್ದೆ. ಹೇಳು ಶರೂ, ನಿಜವಾಗಿಯೂ ನನ್ನಲ್ಲಿ ನಿನಗೆ ಪ್ರೀತಿಯಿರುತ್ತಿದ್ದರೆ ನೀನು ನನ್ನನ್ನು ಎದೆಗವಚಿಕೊಂಡು ಸಂತೈಸುತ್ತಿರಲಿಲ್ಲವೇ?

ಈಗ ಅರ್ಥವಾಗುತ್ತಿದೆ; ಆಗ ನೀನು ತುಂಬಾ ಹಿರಿಯನಾಗಿದ್ದೆ. ನಾನು ಚಿಕ್ಕವಳಿದ್ದೆ. ಮಾದರಿಗಳನ್ನು,ಆದರ್ಶ ವ್ಯಕ್ತಿಗಳನ್ನು ಆರಾಧಿಸುವ ವಯಸ್ಸು ಅದು. ನನ್ನ ಪ್ರೀತಿಗೆ ನೀನು ಮಾದರಿಯಾಗಿದ್ದೆ. ನಿನ್ನಂತಹ ಗುಣ ಲಕ್ಷಣಗಳಿರುವ ವ್ಯಕ್ತಿ ನನ್ನ ಬಾಳ ಗೆಳೆಯನಾಗಬೇಕೆಂದು ಆಶಿಸಿದ್ದೆ. ಮನಸ್ಸಿನಲ್ಲಿಯೇ ನಿನಗೆ ಶರಣಾಗಿಬಿಟ್ಟೆ. ಒಬ್ಬ ಚಿತ್ರ ನಟನನ್ನೋ, ಒಬ್ಬ ಲೇಖಕನನ್ನೋ, ಒಬ್ಬ ಇತಿಹಾಸ ಪುರುಷನನ್ನೋ, ಕೊನೆಗೆ ಒಂದು ಪ್ರಾಣಿಯನ್ನಾದರೂ ಪ್ರೀತಿಸುವ ವಯಸ್ಸು ಅದು. ಅಂದರೆ ಒಂದು ರೀತಿಯಲ್ಲಿ ತನ್ನನ್ನೇ ತಾನು ಪ್ರೀತಿಸಿಕೊಳ್ಳುವ ಕಾಲಘಟ್ಟ ಅದು. ನಾನೂ ನಿನ್ನನ್ನು ಪ್ರೀತಿಸಿಬಿಟ್ಟೆ. ನನ್ನ ರಕ್ತ ಮಾಂಸಗಳೊಡನೆ ಸೇರಿಸಿಕೊಂಡು ಬಿಟ್ಟೆ. ಮೊದಲ ಪ್ರೇಮ ಯಾವತ್ತೂ  ಬಾಳ ಪಯಣಕ್ಕೆ ಕಟ್ಟಿಕೊಂಡ ನೆನಪಿನ ಅಕ್ಷಯ ಪಾತ್ರೆಯಲ್ಲವೇ?

ಈಗ ನೀನು ಹೇಗಿದ್ದಿ ಶರೂ? ಇತ್ತೀಚೆಗೆ ಟೀವಿ ಚಾನಲ್ಲೊಂದರಲ್ಲಿ ನಿನ್ನ ಸಂದರ್ಶನ ನೋಡಿದೆ. ಅದೇ ಗಾಂಭೀರ್ಯ ಅದೇ ಸ್ಪಷ್ಟ ನುಡಿಗಳು. ಅದೇ ಕುರುಚಲು ಗಡ್ಡ. ಈಗ ಒಂದೆರಡು ಬೆಳ್ಳಿ ಕೂದಲು ಇಣುಕುತ್ತಿವೆ. ನಿನಗೆ ಗೊತ್ತೇ ಗೆಳೆಯಾ, ಗಡ್ಡವಿರುವ ವ್ಯಕ್ತಿಯೊಬ್ಬ ನನ್ನ ಮುಂದಿನಿಂದ ಹಾದು ಹೋದರೆ ನನಗೆ ನಿನ್ನದೇ ನೆನಪು. ಒಮ್ಮೆಯಾದರೂ ಹಿಂತಿರುಗಿ ಆತನನ್ನು ನೋಡಬೇಕೆನಿಸುತ್ತದೆ. ಆತ ಜುಬ್ಬ ಧರಿಸಿದರಂತೂ ಒಂದು ಕ್ಷಣ ನನ್ನ ಕಣ್ಣುಗಳು ಆತನ ಕಣ್ಣುಗಳಲ್ಲಿ ಸೇರಿಹೋಗುತ್ತದೆ.

ಒಂದೂ ಮಾತಿಲ್ಲದೆ, ಯಾವುದೇ ಸಂಪರ್ಕ ಮಾಧ್ಯಮವಿಲ್ಲದೆ ನಾನು ನಿನ್ನನ್ನು ನಾಲ್ಕು ವರ್ಷಗಳ ಕಾಲ ಆರಾಧಿಸಿದೆ ಎಂದರೆ ನನ್ನ ಬಗ್ಗೆಯೇ ನನಗಿಂದು ಅಚ್ಚರಿ ಮೂಡುತ್ತದೆ. ಮನುಷ್ಯನ ಭಾವನಾತ್ಮಕ ಜಗತ್ತು ಎಷ್ಟೊಂದು ನಿಗೂಢ ಅಲ್ಲವೇ? ನಿನ್ನನ್ನು ಹೋಲುವ ಯಾವನೇ ವ್ಯಕ್ತಿ ನನಗೆ ಕಾರಣವಿಲ್ಲದೆ ಹತ್ತಿರದವನೆನಿಸುತ್ತಾನೆ.

ಮೊನ್ನೆ ಹೀಗಾಯ್ತು ನೋಡು, ತುಂಬಾ ದಿನಗಳಿಂದ ನನ್ನ ಮನಸ್ಸಿನಲ್ಲೊಂದು ಚಿಂತೆ ಕಾಡುತ್ತಿತ್ತು. ಮಾನಸಿಕವಾಗಿ ನಾನು ನಲುಗಿ ಹೋಗಿದ್ದೆ; ದುಭಲಳಾಗಿದ್ದೆ. ನಿನ್ನನ್ನೇ ಹೋಲುವ ಪರಿಚಯದವರೊಬ್ಬರು ನನ್ನ ಮುಂದೆ ಕುಳಿತಿದ್ದರು. ಮಾತಿನ ಮಧ್ಯೆ ನಾನು ಅವರಿಗೆ ನನ್ನ ಚಿಂತೆಗೆ ಕಾರಣವನ್ನು ಹೇಳಲು ಹೊರಟೆ. ಹೇಳಲಾಗಲೇ ಇಲ್ಲ. ಮೈ ನಡುಗಿ, ತುಟಿ ಅದುರಿ, ಕಣ್ಣು ಕತ್ತಲಿಟ್ಟಂತಾಗಿ ನನ್ನನ್ನು ನಾನು ನಿಯಂತ್ರಿಸಿಕೊಳ್ಳದಾದೆ. ಹೊಕ್ಕಳಿನಾಳದಿಂದ ಬಿಕ್ಕಳಿಕೆ ಉಮ್ಮಳಿಸಿ ಬಂತು. ಹೀಗಾಗುತ್ತಿರುವುದು ಇದು ನಾಲ್ಕನೆಯ ಬಾರಿ. ಮೊದಲ ಬಾರಿ ನಿನ್ನೆದುರು ಸಂಭವಿಸಿದ್ದು ಇನ್ನೆರಡು ಬಾರಿ ನನ್ನೆದುರು ನನ್ನ ಪತಿಯಿದ್ದ. ನೀನು ಅಂದು ನನಗೆ ಬೆನ್ನಿನಾಸರೆಯನ್ನಾದರೂ ನೀಡಿದ್ದೆ... ಯಾಕೆ ಶರೂ, ಹೆಣ್ಮಕ್ಕಳ ಬಿಕ್ಕಳಿಕೆಗೆ ಪುರುಷ ಜಗತ್ತು ಬೆನ್ನು ಹಾಕಿ ಪಲಾಯನ ಮಾಡುತ್ತಿದೆ? ಅವರನ್ನು ಎದುರಿಸುವ ಧೈರ್ಯ ನಿಮ್ಮಲಿಲ್ಲವೇ? ನಿಮ್ಮ ಕಲಾಜಗತ್ತಿನಲ್ಲಾದರೂ ಇದಕ್ಕೊಂದು ನ್ಯಾಯ ಒದಗಿಸಬಾರದೇ?

ಹೊಗಲಿ ಬಿಡು, ನನ್ನ ಪಾಲಿಗೆ ಆಕಾಶದ ಅನಂತತೆ, ಸಾಗರದ ಆಳ, ಹಿಮಾಲಯದ ಔನತ್ಯ ಎಲ್ಲವನ್ನೂ ನನ್ನೆಡೆಗೆ ಹೊತ್ತು ತಂದವನು ನೀನು. ಮಲೆನಾಡಿನ ಹಸಿರ ಸೆರಗಿನಲ್ಲಿ ಸುರಗಿ ಹೂವಿನ ಸುವಾಸನೆಗೆ ಕಣ್ಣೆತ್ತಿ ನೋಡಿದಾಗ ಬೊಗಸೆ ತುಂಬಾ ಹೂವಿನ ಮಳೆಗೆರೆದವನು... ಕುಮಾರ ಪರ್ವತದ ತುದಿಯಿಂದ ಅಷ್ಟಮೂಲೆಯ ಕಲ್ಲುಗಳನ್ನು ಆಯ್ದು ತಂದು ನಮ್ಮ  ಸಂಬಂಧಕ್ಕೊಂದು ಪಾವಿತ್ರ್ಯತೆಯ ಆಯಾಮ ಕೊಟ್ಟವನು... ನಿರಂಜನರ ’ಚಿರಸ್ಮರಣೆ’ ಕಾದಂಬರಿಯನ್ನು ಮೊದಲ ಉಡುಗೊರೆಯಾಗಿ ನೀಡಿ, ನನ್ನ ಯೋಚನಾ ಲಹರಿಗೆ ಸ್ಪಷ್ಟತೆಯ ಸಾಣೆ ಹಿಡಿದವನು... ಬದುಕು ಬರಡು ಎನಿಸಿದಾಗ ತನ್ನೆದೆಯ ಬಗೆದು ಪ್ರೀತಿಯ ಜೀವಜಲದ ಕುಂಭವನು ನನ್ನೆದುರಲ್ಲಿ ಹಿಡಿದು ನಿಂದವನು... ಸ್ಪರ್ಶ ಮಾತ್ರದಲ್ಲೇ ನನ್ನ ಮೈಮನದಲ್ಲಿ ಚೈತ್ರ ಪಲ್ಲವಿಸಿದವನು... ಪೂರ್ಣಾಹುತಿಯ ಸಮಯದಲ್ಲೇಕೆ ವಿಶ್ವಾಮಿತ್ರ ಹಸ್ತ ತೋರಿಸಿದೆ. ನನ್ನಿಂದಾದ ಅಪರಾಧವೇನು ಗೆಳೆಯಾ?

ಹೆಜ್ಜೆ ಹೆಜ್ಜೆಗೂ ನಾನು ನಿನ್ನನು ಅನುಸರಿಸಿದೆ. ಪೂರ್ಣ ನಂಬಿಕೆಯಿಂದ ಜೊತೆಯಾದೆ. ನೀನು ನನಗೆ ಗುರುವಾದ;ಗೆಳೆಯನಾದೆ; ತಂದೆಯಾದೆ; ಸಖನಾದೆ;ಕೊನೆಗೆ ದೇವರೇ ಆದೆ. ಹಾಗಾಗಿಯೇ ಆಕಾಶದ ನಕ್ಷತ್ರವೇ ಆದೆ.

ನಾನಿಲ್ಲಿ ಈ ಭೂಮಿಯಲ್ಲಿ ಬಂದು ಬಿದ್ದಿದ್ದೇನೆ ನೋಡು. ನೀನು ನನ್ನನ್ನು ತೊರೆದು ಹೋದ ದಿನ ಆತ ಬಂದಿದ್ದ....ಮರುದಿನವೂ ಬಂದಿದ್ದ...ಆಮೇಲೆಯೂ ಬಂದ...ನನ್ನನ್ನು ಹಿಡಿದೆತ್ತಿದ...ಕಣ್ಣೀರು ಒರೆಸಿದ...ಎದೆಗೊತ್ತಿಕೊಂಡ...ಉಮ್ಮರ್ ಖಯ್ಯಾಮನ ಹಾಡು ಹೇಳಿ ಕಣ್ಣೀರಲ್ಲೂ ನಗುವುದ ಹೇಳಿಕೊಟ್ಟ. ದುಖಃದ ಕಡಲಿಗೆ ಇಳಿತವಿಲ್ಲ..ಭರತ ಮಾತ್ರ...!

ಬದುಕು ಸಾಗಿತು ಮುಂದು ಮುಂದಕೆ...ನೆನಪು ಹಿಂಬಾಲಿಸಿತು ನೆರಳಿನಂತೆ...ಸಂಬಂಧಗಳು ವಿಸ್ತರಿಸಿಕೊಂಡವು ಬಲೆಯಂತೆ...ಯಾವ ದಡದಲ್ಲೂ ಹಡಗು ನಿಲ್ಲಲೇ ಇಲ್ಲ. ಅಲ್ಲಿ ಇತ್ತಾದರೂ ಏನು? ಎಲ್ಲವನ್ನೂ ನೀನು ಬಹು ಹಿಂದೆಯೇ ಲೂಟಿ ಮಾಡಿದ್ದೆ. ನಿನ್ನ ನೆನಪಿನ ಧಾರೆಯಲಿ ನಾನು ತೊಯ್ದು ಹೋಗುತ್ತಲೇ ಇದ್ದೆ...ಆ ಒಂದು ಸಂಜೆ....ಹತ್ತಾರು ವರ್ಷಗಳ ನಂತರ ಅವನು ಬಂದಿದ್ದ. ನನ್ನನು ನೋಡಿ ವಿಸ್ಮಯ ಪಟ್ಟ. ನಾನೇರಿದ ಎತ್ತರಕ್ಕೆ ಬೆಕ್ಕಸ ಬೆರಗಾದ. ನನ್ನ ತಲೆಗೊಂದು ಮೊಟಕಿ ಅವನಂದ ’ ಅವನು ಬಿಟ್ಟು ಹೋದ ದಿನ ನೀ ಅಕ್ಷರಶಃ ಹೆಣವಾಗಿದ್ದೆ. ನಿನಗೆ ಗೊತ್ತಿದೆಯೋ ಇಲ್ಲವೋ ಅಂದು ನಿನಗೆ ನಾನು ಕುಡಿಸಿದ್ದು ಎರಡು ಬಾಟಲ್ ಬಿಯರ್. ನಿನಗೆ ತಾಗಲೇ ಇಲ್ಲ. ಕೊನೆಗೆ ಕುಡಿಸಿದ್ದು ರಮ್. ಆಗ ಒಂದೇ ಸಮನೆ ವಾಂತಿ ಮಾಡಿಕೊಂಡು ಎರಡು ದಿನ ಮಲಗಿದ್ದೆ. ಎಲ್ಲಿ ಗೊತ್ತಾ? ನನ್ನ ತೊಳತೆಕ್ಕೆಯಲ್ಲಿ... ಈಗ ನಾನು ನಿನ್ನನು ಮುಟ್ಟಲೂ ಹಿಂದೇಟು ಹಾಕುವ ರೀತಿಯಲ್ಲಿ ಬೆಳೆದುಬಿಟ್ಟಿದ್ದಿಯಲ್ಲೇ’ ಅಂದುಬಿಟ್ಟ. ಬೆನ್ನು ತಟ್ಟಿದ. ಇದು ನಿಜವಿರಬಹುದೇ? ಅಂತಹದೊಂದು ಸ್ಥಿತಿಯನ್ನು ನಾನು ದಾಟಿ ಬಂದಿರಬಹುದೇ? ಆತ ನಿನ್ನ ಗೆಳೆಯನಲ್ಲವೇ? ನಿನ್ನ ರಾಯಭಾರಿಯಾಗಿ ನನ್ನಲ್ಲಿಗೆ ಬಂದ್ದಿರಬಹುದಲ್ಲವೇ?

ಸಂಬಂಧದ ಕೊಂಡಿ ಮತ್ತೆ ಸೇರಿಕೊಳ್ಳುವುದು ನನಗೆ ಬೇಕಾಗಿರಲಿಲ್ಲ. ಅಷ್ಟರಲ್ಲೇ ನನಗೆ ಅರ್ಥವಾಗಿಬಿಟ್ಟಿತ್ತು. ಪ್ರೀತಿಯ ಜಗತ್ತೇ ಬೇರೆ. ವಾಸ್ತವವೇ ಬೇರೆ. ಸಾಮಾಜಿಕ ಸ್ಥಾನ-ಮಾನ ನನ್ನ ಘನತೆ ಅಂತಸ್ತುಗಳನ್ನು ಹೆಚ್ಚಿಸಿರಬಹುದು. ಆದರೆ ಒಳಗೊಳಗೇ ನಾನು ಕುಸಿದುಹೋಗಿದ್ದೇನೆ ಶರೂ...ಆತನಿಗೆ ಗೊತ್ತಿಲ್ಲದ ಇನ್ನೊಂದು ವಿಚಾರವಿದೆ ಗೆಳೆಯಾ..ಅಸಹಾಯಕ ಘಳಿಗೆಯಲ್ಲಿ ಆತ ನನ್ನ ತುಟಿಗೆ ಮಧು ಪಾತ್ರೆ ಸೋಕಿಸಿರಬಹುದು. ಆದರೆ ಇವತ್ತು ಅದೇ ನನಗೆ ಜೀವಜಲ. ನನ್ನ ಮನೆಯ ಬೀರು ತೆಗೆದು ನೋಡು; ಲಂಚ್ ಗೆ ರೆಡ್ ವೈನ್, ಡಿನ್ನರ್ ಗೆ ಓಡ್ಕ.. ಅದು ರಕ್ತದೊಡನೆ ಸೇರಿದ ಹೊತ್ತು ನಾನೀ ಕಾಂಕ್ರೀಟ್ ಕಾಡಿನಲ್ಲಿರುವುದಿಲ್ಲ. ಮಲೆನಾಡಿನ ದಟ್ಟ ಕಾಡಿನ ನಡುವಿನ ಸುರಗಿ ಮರದ ಅಡಿಯಲ್ಲಿ ನಿಂತಿರುತ್ತೇನೆ. ತೊಟ್ಟಿದ್ದ ಲಂಗವನ್ನು ಎರಡೂ ಕೈಯ್ಯಲ್ಲಿ ಜೊಂಪೆಯಾಗಿ ಹಿಡಿದಿರುತ್ತೇನೆ. ನೀನು ಮರದ ಮೇಲಿನಿಂದ ಹೂಗಳನ್ನು ಬಿಡಿಸಿ ನನ್ನ ಲಂಗದೊಳಗೆ ಹಾಕುತ್ತಿ. ಆಮೇಲೆ ನಾವಿಬ್ಬರೂ ಸೇರಿ ಅದನ್ನು ಮಾಲೆ ಮಾಡುತ್ತೇವೆ. ಒಂದು ಮಾಲೆಯನ್ನು ದೇವರಿಗೆಂದು ತೆಗೆದಿರಿಸುತ್ತೇನೆ. ಇನ್ನೊಂದನ್ನು ನೀನು ನನಗೆ ಮುಡಿಸುತ್ತಿ. ಅದರ ಪರಿಮಳದ ಮತ್ತಿನಲ್ಲಿ ನಾನು ನಿನ್ನ ಭುಜಕ್ಕೊರಗಿ ನಿದ್ರಿಸುತ್ತೇನೆ........ಬೆಳಿಗ್ಗೆ ಎದ್ದಾಗ ಮನಸ್ಸು ಹಗುರವಾಗಿರುತ್ತದೆ. ಆಪೀಸಿನಲ್ಲಿ ಲವಲವಿಕೆಯಿಂದ ಕಾರ್ಯ ನಿರ್ವಹಿಸುತ್ತೇನೆ...ಇದು ನನ್ನ ದಿನಚರಿ. ಕೊನೆ ಉಸಿರಿರುವ ತನಕ ಇದೇ. ನಿನ್ನನ್ನು ನಂಬಿಸುವ ಇರಾದೆ ನನ್ನಲಿಲ್ಲ. ಆದರೂ ಹೇಳುತ್ತಿದ್ದೇನೆ; ನಿನ್ನ ಮೇಲಿನ ನನ್ನ ಪ್ರೀತಿಗೆ ಪಾಲುದಾರರಿಲ್ಲ. ಅದಕ್ಕೆ ನೀನು ಮಾತ್ರ, ಕೇವಲ ನೀನು ಮಾತ್ರ ಹಕ್ಕುದಾರ..

ಬಾಗಿದರೆ ಹಿಮಾಲಯದೆದುರು ಬಾಗಬೇಕು. ಸೋತರೆ ಕಡಲಿನೆದುರು ಸೋಲಬೇಕು. ಒಂದಾಗಿ ಬೆರೆತರೆ ಆಕಾಶದ ಅನಂತತೆಯಲ್ಲಿ ಕರಗಬೇಕು ಎಂಬುದು ನನ್ನ ಹದಿಹರೆಯದ ಕನಸು. ನನ್ನ ಪಾಲಿಗೆ ನೀನು ಇದೆಲ್ಲವೂ ಆಗಿ ಬಂದೆ. ಆದರೂ ಭ್ರಮೆಯಾಗಿ ಉಳಿದೆ. ಯಾಕೆ ಹೀಗಾಯ್ತು? ನಾನು ಎಲ್ಲಿ ತಪ್ಪಿದೆ? ನೀನು ಎಲ್ಲಿ ಸಂದೇಹಿಸಿದೆ? ಕೊನೆಗೂ ಎಲ್ಲವೂ ಪ್ರಶ್ನೆಗಳಾಗಿ ಉಳಿದವು...!

ಮೊನ್ನೆ ಊರಿಗೆ ಹೋದಾಗ ನೋಡಿದೆ; ಸುರಗಿ ಮರವಿದ್ದ ಕಾಡು ಈಗ ರಬ್ಬರ್ ತೋಟವಾಗಿದೆ. ನಾವು ಈಜು ಕಲಿತ ಉಪ್ಪಂಗಳ ಹೊಳೆ ಬತ್ತಿ ಹೋಗಿದೆ. ಭೂಮಿ ತೂಕದ ಹಕ್ಕಿಗೆ ಗೂಡು ಕಟ್ಟಲು ಪೊದೆಗಳೇ ಇಲ್ಲ. ಹುಡುಕಿದರೂ ಕೇದಗೆ ಹೂ ಸಿಗಲಿಲ್ಲ...
ಏನಿಲ್ಲದಿದ್ದರೂ ಏನಂತೆ.?..ನನ್ನೊಳಗೆ ಇವೆಲ್ಲಾ ಸದಾ ಹಸಿರು...![ ನಿಯತಕಾಲಿಕವೊಂದರ ಅಂಕಣವೊಂದರಲ್ಲಿ  ನಾನು ಬರೆಯುತ್ತಿದ್ದ ಪ್ರೇಮ ಪತ್ರದಲ್ಲಿ ಇದೂ ಒಂದು. ಅಲ್ಲಿ ನಾನು ಅನಾಮಧೇಯಳು..!]

3 comments:

ravivarma said...

ನಿನ್ನ ಮೇಲಿನ ನನ್ನ ಪ್ರೀತಿಗೆ ಪಾಲುದಾರರಿಲ್ಲ. ಅದಕ್ಕೆ ನೀನು ಮಾತ್ರ, ಕೇವಲ ನೀನು ಮಾತ್ರ ಹಕ್ಕುದಾರ..

ಬಾಗಿದರೆ ಹಿಮಾಲಯದೆದುರು ಬಾಗಬೇಕು. ಸೋತರೆ ಕಡಲಿನೆದುರು ಸೋಲಬೇಕು. ಒಂದಾಗಿ ಬೆರೆತರೆ ಆಕಾಶದ ಅನಂತತೆಯಲ್ಲಿ ಕರಗಬೇಕು ಎಂಬುದು ನನ್ನ ಹದಿಹರೆಯದ ಕನಸು. ನನ್ನ ಪಾಲಿಗೆ ನೀನು ಇದೆಲ್ಲವೂ ಆಗಿ ಬಂದೆ. ಆದರೂ ಭ್ರಮೆಯಾಗಿ ಉಳಿದೆ. ಯಾಕೆ ಹೀಗಾಯ್ತು? ನಾನು ಎಲ್ಲಿ ತಪ್ಪಿದೆ? ನೀನು ಎಲ್ಲಿ ಸಂದೇಹಿಸಿದೆ? ಕೊನೆಗೂ ಎಲ್ಲವೂ ಪ್ರಶ್ನೆಗಳಾಗಿ ಉಳಿದವು...!excellent....naanu ii nimma patravannu hindeye odidde.. aaga nanna mana muttiralilla adeko iiga mmanamutti manatatti..nimma baraha,bhavanegala julu julu hariyuva tore ellavu kushi niiduvantive....
D.Ravivarma hosapete

ಕಾವ್ಯಾ ಕಾಶ್ಯಪ್ said...

hmmm.. Adbhuta prema patra... :)

ಆಸು ಹೆಗ್ಡೆ said...

"ಪ್ರೀತಿ ಪ್ರೇಮ"ದ ಸುಖಾನುಭವ ಅನ್ನುವುದು ಎಲ್ಲರ ಬಾಳಿನಲ್ಲೂ ಹಾದುಹೋಗಬೇಕಾದ ಪ್ರಮುಖ ವಿಷಯ. ಯಾರು ಈ ಅನುಭವದಿಂದ ವಂಚಿತರಾಗುತ್ತಾರೋ ಅವರು ತಮ್ಮ ಬಾಳನ್ನು ಬಾಳಿಲ್ಲವೆಂದೇ ಅರ್ಥ. ಕೆಲವರ ಬಾಳಿನಲ್ಲಿ ಈ ಅನುಭವ ಕೆಲಕಾಲ ಬಂದು ಹೋಗಬಹುದು. ಕೆಲವರ ಪಾಲಿಗೆ ಈ ಅನುಭವ ನಿರಂತರವಾಗಿ ಇದ್ದು, ಅವರಿಗೆ ಆಂತರಿಕ ಆನಂದ ನೀಡುತ್ತಾ ಸಾಗುತ್ತದೆ. ವಯಸ್ಸಿನ ಜೊತೆಗೆ ಅನಿವಾರ್ಯವಾಗಿ ಮಾಗದ ಮನಸ್ಸು ಈ ಸದಾಕಾಲ ಈ ಅದ್ಭುತ ಅನುಭವವನ್ನು ಸುಖಿಸುತ್ತಾ ಸಾಗುತ್ತದೆ. ನಿಜ ಹೇಳಬೇಕೆಂದರೆ, ಪ್ರೆತಿ ತುಂಬಿದ ಮನಸ್ಸಿಗೆ, ಇಂಥ ಕತೆಗಳ ಓದು ಸದಾ ರೋಮಾಂಚನ ಉಂಟುಮಾಡುತ್ತಿರುತ್ತದೆ.