Monday, October 13, 2014

’ಒಪ್ಪಿಸುವಿಕೆಯ ಸೆಕ್ಸ್’ ಎಂಬುದೊಂದು ಇದೆಯಾ?
ರಾಘವೇಶ್ವರ ಭಾರತಿ-ಪ್ರೇಮಲತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಳಷ್ಟು ಜನರು ಪ್ರಶ್ನಿಸುವುದು, ಪ್ರೇಮಲತಾ ಎಂಬ ಈ ಮಹಿಳೆ ತನ್ನ ಮೇಲೆ ವರ್ಷಗಳಿಂದ ಲೈಂಗಿಕ ಅತ್ಯಾಚಾರ ನಡೆದರೂ ಅದನ್ನು ಯಾರಿಗೂ ಹೇಳದೆ ಈಗ ಯಾಕೆ ಬಹಿರಂಗಗೊಳಿಸಿದ್ದಾರೆ? ಅದರ ಹಿಂದೆ ಇನ್ನೆನೋ ಹುನ್ನಾರ ಅಡಗಿರುವಂತಿದೆ!

’ಕಾನೂನು ಕತ್ತೆಯಿದ್ದಂತೆ’ ಎಂಬ ಮಾತಿದೆ. ಅದು ಸಾಕ್ಷ್ಯಾಧಾರಗಳನ್ನು ಮಾತ್ರ ಕಲೆ ಹಾಕುತ್ತದೆ ಮತ್ತು ಪರಿಶೀಲಿಸುತ್ತದೆ. ಆದರೆ ಕಾನೂನಿನ ತೆಕ್ಕೆಗೂ ನಿಲುಕದ ಹಲವಾರು ಅಂಶಗಳಿರುತ್ತವೆ.ಅದರಲ್ಲಿಯೂ ಒಂದು ಹೆಣ್ಣಿನ ಅಂತರಂಗವನ್ನು ಹೊಕ್ಕು ನೋಡುವ ಸಾಮರ್ಥ್ಯ ಈ ಜಗತ್ತಿಗೆ ಇನ್ನೂ ಸಾಧ್ಯವಾಗಿಲ್ಲವೇನೋ!. ಹೀಗೆ ಹೇಳುವಾಗ ಪುರುಷನ ರೀತಿಯಲ್ಲೇ ಯೋಚಿಸುವುದನ್ನು ರೂಢಿಸಿಕೊಂಡ ಸ್ತ್ರೀಯರು ಕೂಡಾ ನನ್ನ ಮುಂದಿದ್ದಾರೆ. ಅವೠ ಹಾಗೇ ಯೋಚಿಸುವುದು  ತಲೆತಲಾಂತರದಿಂದ ವಿನ್ಯಾಸಗೊಂಡತಿದೆ.

ಪ್ರೇಮಲತಾ ಯಕಃಶ್ಚಿತ್ ಒಬ್ಬಳು ಹೆಣ್ಣು. ಆಕೆ ತನ್ನ ಸೌಂದರ್ಯದಿಂದಲೇ ಒಬ್ಬ ಸ್ವಾಮೀಜಿಯನ್ನು ತನ್ನ ಮೋಹ ಪಾಶದಲ್ಲಿ ಕೆಡವಿಕೊಂಡಳು, ಅನಂತರ ಬ್ಲಾಕ್ ಮೈಲ್ ಮಾಡಿದಳು ಅಂದುಕೊಳೋಣ. ಈ ಸ್ವಾಮಿಜಿಯೇನು ಕಳ್ಳೆಪುರಿ ತಿನ್ನುವ ಗಮಾರನೇ?

ಶ್ರೀ ರಾಮಚಂದ್ರಾಪುರ ಮಠವೇ ಹೇಳಿಕೊಳ್ಳುವ ಹಾಗೆ ಅದು ಸಾವಿರಾರು ವರ್ಷಗಳ ಇತಿಹಾಸವಿರುವ ಮಠ. ನಿನ್ನೆ ಮೊನ್ನೆ ಹುಟ್ಟಿದ ಸಾಮನ್ಯ ಮಠವಲ್ಲ. ಆ ಮಠದ ಪೀಠಾಧಿಪತಿ ತನ್ನನ್ನು ತಾನು ’ಗೋಕರ್ಣ ಮಂಡಲಾದೀಶ್ವರ’ ಎಂದು ಕರೆದುಕೊಳ್ಳುತ್ತಾರೆ. ಅದು ಕೇವಲ ಗುರುಪೀಠವಲ್ಲ. ರಾಜಪೀಠವೂ ಹೌದು.. ಅದಕ್ಕೊಂದು ದಂತದ ಸಿಂಹಾಸನವಿದೆ..ಅಡ್ಡಪಲ್ಲಕ್ಕಿ ಉತ್ಸವದ ಪರಂಪರೆಯಿದೆ. ಶಂಕರಾಚಾರ್ಯರ ಪಾದುಕೆಗಳು ತಮ್ಮಲ್ಲಿದೆಯೆಂದು ಅದು ಹೇಳಿಕೊಳ್ಳುತ್ತದೆ. ಇಂತಹ ಪರಂಪರೆಯ ಅಧಿಕಾರಪೀಠದಲ್ಲಿರುವ ಸರ್ವಸಂಗ ಪರಿತ್ಯಾಗಿಯಾದ ಸ್ವಾಮೀಜಿಗೆ ಸಾಮಾನ್ಯ ಗಾಯಕಿಯೊಬ್ಬಳು ಲೈಂಗಿಕ ಅತ್ಯಾಚಾರದ ಕೇಸನ್ನು ಕೊಡಲು ಸಾಧ್ಯವೇ? ಹಾಗೆಯೇ ತನ್ನ ಸ್ಥಾನದ ಘನತೆಯನ್ನು ಮರೆತು ಒಬ್ಬ ಪೀಠಾಧಿಪತಿ ಲಂಪಟನಂತೆ ವರ್ತಿಸಲು ಸಾಧ್ಯವೇ? ಇದು ಯೋಚಿಸಬೇಕಾದ ವಿಷಯ.

ಪ್ರೇಮಲತಾ ಕೊಟ್ಟಿರುವ ದೂರಿನಲ್ಲಿ ತಾನು ವಶೀಕರಣಕ್ಕೆ ಒಳಗಾಗಿ ಸ್ವಾಮೀಜಿಯ ಜೊತೆ ದೈಹಿಕ ಸಂಪರ್ಕಕ್ಕೆ ಒಳಗಾದೆ ಎಂದು ಹೇಳುತ್ತಾರೆ. ಸ್ವಾಮೀಜಿಯೊಬ್ಬರು ಹೆಣ್ಣಿನ ಸಂಗ ಮಾಡಿರಬಹುದೇ? ಅದು ತನಿಖೆಯಿಂದ ಗೊತ್ತಾಗಲಿದೆ. ಅದರ ಬಗ್ಗೆ ಎಲ್ಲೂ ಚರ್ಚೆಯಾಗುತ್ತಿಲ್ಲ.. ಅದರೆ ಪ್ರೇಮಲತಾ ನಡತೆಯ ಬಗ್ಗೆ ಎಗ್ಗಿಲ್ಲದೆ ಚರ್ಚೆ ನಡೆಯುತ್ತಿದೆ.

ಗಂಡು-ಹೆಣ್ಣಿನ ನಡುವಿನ ಸಂಬಂಧ ಅತ್ಯಂತ ಸಂಕೀರ್ಣವಾದುದು. ಅದನ್ನು ಹೀಗೇ ಎಂದು ವ್ಯಾಖ್ಯಾನಿಸಲು ಬರದು...ಆದರೆ ಮದುವೆ ಎನ್ನುವುದು ವ್ಯಾಖ್ಯಾನಕ್ಕೆ ಸಿಗುತದೆ. ಆ ಮದುವೆಯ ಬಂಧನಕ್ಕೆ ಒಳಪಟ್ಟವಳು ಪ್ರೇಮಲತಾ..ಸುಸಂಸ್ಕ್ರುತ ಮನೆತನದ ಆಕೆ ಆ ಚೌಕಟ್ಟನ್ನು ಯಾಕೆ ಮೀರಿದಳು? 

ಪ್ರೇಮಲತಾ ಒಬ್ಬ ಗಾಯಕಿ, ನ್ರುತ್ಯಗಾತಿ..ಅವರ ಕುಟುಂಬ ಮಠದ ಪರಮ ಭಕ್ತರು. ಹಾಗಿರುವಾಗ ಆಕೆ ಆ ಮಠ ಆಯೋಜಿಸುತ್ತಿರುವ ರಾಮ ಕಥಾದಲ್ಲಿ ಮುಖ್ಯ ಗಾಯಕಿಯಾಗಿ ಹಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಅದು ಆಕೆಯ ಪ್ರತಿಭೆಗೆ ಸಂದ ಗೌರವ. ಆದರೆ ಆಕೆಯಿಂದ ಏಕಾಂತ ಸೇವೆಯನ್ನು ಸ್ವಾಮಿಜಿ ಯಾಕೆ ಬಯಸಿದರು? 

ಯಾವುದೋ ಒಂದು ಸನ್ನಿವೇಶದಲ್ಲಿ ಒಂದು ಗಂಡು-ಹೆಣ್ಣಿನ ನಡುವೆ ಆಕರ್ಷಣೆ ಹುಟ್ಟುತ್ತೆ..ಮುಂದೆ ಅದೊಂದು ಬಾಂಧವ್ಯವಾಗಿ ಬೆಳೆಯುತ್ತೆ..ದೈಹಿಕ ಮಿಲನಕ್ಕೂ ಎಡೆಮಾಡಿಕೊಡಬಹುದು..ಮನುಷ್ಯ ತಾನಾಗಿಯೇ ಕಟ್ಟಿಕೊಂಡ ಗೋಡೆಗಳನ್ನೊಡೆದು ಗಂಡು-ಹೆಣ್ಣಿನ ಸಹಜ ಸಂಬಂಧವೊಂದು ಏರ್ಪಡಬಹುದು.

ಅಂತಹ ಸಂಬಂಧವೊಂದು ಸ್ವಾಮೀಜಿ ಮತ್ತು ಪ್ರೇಮಲತಾ ಮಧ್ಯೆ ಏರ್ಪಟ್ಟಿದ್ದರೆ ಅದು ಸಹಜ ಎಂದು ಒಪ್ಪಿಕೊಳ್ಳುವ ಒಂದು ವರ್ಗ ಈ ಸಮಾಜದಲ್ಲಿದ್ದಾರೆ .”ಇದ್ದಾರೆ’ ಎಂದು ಯಾಕೆ ಹೇಳುತ್ತಿದ್ದೇನೆ ಎಂದರೆ ಅಂತಹ ಸಂಬಂಧವನ್ನು ’ಇಟ್ಟುಕೊಂಡ’ ಹಲವಾರು ಸನ್ಯಾಸಿಗಳು, ದೇವಮಾನವರು ಕಾಲನ ಗರ್ಭ ಸೇರಿ ಹೋಗಿದ್ದಾರೆ. ವರ್ತಮಾನದಲ್ಲಿ ಸಭ್ಯ ಸಮಾಜವೊಂದು ಅದನ್ನು ಕಂಡೂ ಕಾಣದಂತಿರುತ್ತದೆ.

ಹಾಗೊಂದು ಸಂಬಂಧ ಬಹಿರಂಗಗೊಂಡಾಗ ಸಮಾಜದ ಚೌಕಟ್ಟಿನೊಳಗಡೆ ಬದುಕುತ್ತಿರುವವರು ಅವರನ್ನು ಅಸ್ಪರ್ಶ್ಯರಂತೆ ಕಾಣಬಹುದು. ಇದೂ ಕೂಡಾ ಸಹಜವಾದುದೇ..ಆದರೆ ಇಲ್ಲಿರುವ ಪ್ರಶ್ನೆ ಏನೆಂದರೆ ಇಲ್ಲಿ ಹೆಣ್ಣು ಮಾತ್ರ ಯಾಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕು?  ಅತ್ಯಾಚಾರ ಪ್ರಕರಣಗಳಲ್ಲಿ, ಇದು ಅತ್ಯಾಚಾರವೇ ಅಥವಾ ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆಯೇ ಎಂಬುದನ್ನು ನಿಖರವಾಗಿ ಹೇಳುವುದು ತುಂಬಾ ಕಷ್ಟಸಾಧ್ಯವಾದ ವಿಷಯ. ಆದರೆ ಈ ಪ್ರಕರಣದ ಸಂದರ್ಭವನ್ನು ಗಮನಿಸಿದರೆ ಅತ್ಯಾಚಾರ, ಸಮ್ಮತಿಯ ಸೆಕ್ಸ್ ಎಂಬುದರಾಚೆಗೂ  ’ಒಪ್ಪಿಸುವಿಕೆಯ ಸೆಕ್ಸ್’ ಎಂಬ ಇನ್ನೊಂದು ಆಯಾಮದ ಕಡೆಯೂ ಗಮನ ಹರಿಸಬೇಕಾಗಿದೆ..

ಆಯ್ತು..ಯಾವುದೋ ಮೋಹಪಾಶಕ್ಕೆ ಒಳಗಾಗಿ ಅವರಿಬ್ಬರೂ ದೈಹಿಕವಾಗಿ ಒಂದಾದರು ಅಂತಿಟ್ಟುಕೊಳ್ಳೋಣ..ಹಾಗೊಂದು ಸಂಬಂಧ ಅವರಿಬ್ಬರ ಮಧ್ಯೆ ಏರ್ಪಟ್ಟಿದ್ದರೆ, ಅದು ವರ್ಷಗಳ ತನಕ ಮುಂದುವರಿದಿದ್ದರೆ, ಅಲ್ಲೊಂದು ಅನುಬಂಧ ಬೆಳೆದಿರುತ್ತದೆ.ಆ ಸಲಿಗೆಯಲ್ಲಿ ಅಲ್ಲಿ ಹಣದ ಪ್ರಸ್ತಾಪವೂ ಬಂದಿದ್ದರೆ ಅದು ತಪ್ಪು ಅಥವಾ ಸರಿ ಎನ್ನಲು ನಾವ್ಯಾರು? ಆದರೆ ಅದು ಪೋಲಿಸ್ ಸ್ಟೇಷನ್ ನಲ್ಲಿ ದೂರು ಕೊಡುವಷ್ಟರ ಮಟ್ಟಿಗೆ ಮುಂದುವರಿದಿದ್ದರೆ ಅದಕ್ಕೆ ಬಲವಾದ ಕಾರಣ ಇರಲೇ ಬೇಕಲ್ಲವೇ?

ಆ ಸ್ವಾಮಿಜೀಯವರು ನಿಷ್ಕಳಂಕರೇ ಆಗಿದ್ದರೆ ವಿಚಾರಣೆಯನ್ನು ಎದುರಿಸಬಹುದಲ್ಲಾ..ಅದನ್ಯಾಕೆ ಮುಂದೂಡುತ್ತಿದ್ದಾರೆ? ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ.?

ತಾನು ದೇವಮಾನವ. ರಾಮನ ಅಪರಾವತಾರಿ, ತನಗೆ ನಿನ್ನನ್ನು ನೀನು ಒಪ್ಪಿಸಿಕೊಂಡರೆ ರಾಮನಲ್ಲೇ ಐಕ್ಯಗೊಂಡಂತೆ ಎಂದು ಮರುಳು ಮಾತುಗಳಿಂದ ಸ್ವಾಮಿಜಿಯವರು ತನ್ನನ್ನು ವಶೀಕರಣಕ್ಕೊಳಪಡಿಸಿ ಭೋಗಿಸಿದರು, ಕೆಲವೊಮ್ಮೆ ಪೈಶಾಚಿಕವಾಗಿಯೂ ವರ್ತಿಸಿದರು ಎಂದು ಪ್ರೇಮಲತಾ ದೂರಿದ್ದಾಳೆ. ಇಲ್ಲಿ ಒಂದು ಮಾತನ್ನು ನೆನಪಿಸಿಕೊಳ್ಳಬೇಕು. ವಶೀಕರಣವೆಂಬುದಕ್ಕೆ ಕಾಲಮಿತಿಯಿಂಟು..ಜೀವನಪೂರ್ತಿ ಯಾರೂ ಯಾರನ್ನೂ ವಶೀಕರಣಕ್ಕೆ ಒಳಪಡಿಸಲಾಗುವುದಿಲ್ಲ. ಮೋಹದ ಪರದೆ ಸರಿದಾಗ ವಾಸ್ತವದ ದರ್ಶನ ಆಗಿಯೇ ಆಗುತ್ತದೆ. ಈಗ ಇಬ್ಬರಿಗೂ ವಾಸ್ತವದ ಅರಿವಾಗಿದೆ.ಹಾಗಾಗಿ ಪರಸ್ಪರ ದೂರು ನೀಡಿದ್ದಾರೆ. ಆ ದೂರನ್ನು ಓದಿದರೆ ಪುರುಷನ ಮೂಲಭೂತ ಗುಣವಾದ ಅಕ್ರಮಣಶೀಲತೆಯ ಗಾಢ ಅನುಭವಾಗುತ್ತದೆ.ಜೊತೆಗೆ ಹೆಣ್ಣಿನ ಮನಸ್ಸನ್ನು, ಅಂಗರಚನೆಯನ್ನು ಹಾಗೆ ರೂಪಿಸಿದ ನಿಸರ್ಗದ ಮೇಲೆಯೂ ಕ್ಷಣಕಾಲ ಮುನಿಸುಂಟಾಗುತ್ತದೆ!.

 ಕಲಾವಿದರು ಸೂಕ್ಷಮತಿಗಳು, ಭಾವುಕರು ಎದುರಿಗಿರುವ ವ್ಯಕ್ತಿಯ ಭಾವನೆಗಳಿಗೆ ಪೂರಕವಾಗಿ ಸ್ಪಂಧಿಸುವವರು.ಅವರನ್ನು ವಶಪಡಿಸಿಕೊಳ್ಳುವುದು ಸುಲಭ. ಲಂಪಟರ ಕೈಯ್ಯಲ್ಲಿ ಭಕ್ತಿ,ಭಾವದ ಬೀಸಣಿಗೆಯಿದ್ದಲ್ಲಿ  ದುರ್ಭಲರನ್ನು ತನ್ನತ್ತ ಸೆಳೆದುಕೊಳ್ಳುವುದು ಕಷ್ಟವೇನಲ್ಲ.ತನ್ನೆದುರಿಗಿರುವವನು ದೇವಮಾನವನೇ..ಅವನು ತೋಳು ಚಾಚಿ ಕರೆಯುತ್ತಿರುವುದು ತನ್ನನ್ನು ಮಾತ್ರ ಎಂದು ಮನದಟ್ಟಾದಾಗ ಒಂದು ಕ್ಷಣ ಮನಸು ಚಂಚಲವಾಗದೇ? ಆದರೆ ’ಅಮ್ರುತಮತಿ ಯಾಕೆ ಜಾರಿದಳು’ ಎಂಬುದನ್ನು ಲೋಕ ಯಾಕೆ ವಿಮರ್ಶಿಸುತ್ತಿಲ್ಲ? ಜಾರುವಿಕೆಯಲ್ಲಿ ಪಾಲುದಾರರಾದವರು  ಲೌಕಿಕದ ನ್ಯಾಯಾಲಯದಲ್ಲಿ ಶಿಕ್ಷೆಗೆ ಅರ್ಹರಲ್ಲವೇ? ಅಲ್ಲ ಎಂಬುದು ಅವರನ್ನು ರಕ್ಷಿಸಲು ಹೊರಟಿರುವ ಎಲ್ಲಾ ಕಡೆ ಹರಡಿಕೊಂಡಿರುವ ಅವರ ಅಪಾರ ಪ್ರಮಾಣದ ಬೆಂಗಾವಲು ಪಡೆ ಹೇಳುತ್ತಿದೆ. ಅವರನ್ನು ರಕ್ಷಿಸುವುದೆಂದರೆ ಸನಾತನ ಧರ್ಮವನ್ನು ರಕ್ಷಿಸಿದಂತೆ ಎಂದು ಪ್ರಚಾರ ಮಾಡುತ್ತಿದೆ. ಅಷ್ಟು ಕೇವಲವಾಯಿತೇ ನಮ್ಮ ಧರ್ಮ? ಅದರಲ್ಲಿ ಹೆಣ್ಣೊಬ್ಬಳ ಆಕ್ರಂದನಕ್ಕೆ ಯಾವ ಬೆಲೆಯೂ ಇಲ್ಲವೇ?

ಅದಕ್ಕೇ ನಾನು ಮೊದಲಲ್ಲೇ ಹೇಳಿರುವುದು ಕಾನೂನು ಕತ್ತೆಯಿದ್ದಂತೆ..ಅದಕ್ಕೆ ಹೇರನ್ನು ಹೊರುವುದಷ್ಟೇ ಗೊತ್ತು. ಅದರೊಳಗೆ ಏನು ಹೂರಣವಿದೆ, ಅದು ಅದಕ್ಕೆ ಬೇಕಾಗಿಲ್ಲ. ಕಾನೂನು ಹ್ರುದಯದ ಮಾತನ್ನೂ ಕೇಳುವಂತಾದಾಗ ಮಾತ್ರ ಹೆಣ್ಣಿಗೆ ನಿಜವಾದ ನ್ಯಾಯ ದೊರಕಬಹುದೆನೋ!
8 comments:

VINOD KUMAR V. K. said...

ಅಕ್ಕಾ.. ನನಗೆ ಇಡೀ ಪ್ರಕರಣದಲ್ಲಿ..ಅತ್ಯಾಚಾರದ ಕುರುಹೇ ಕಾಣುತ್ತಿಲ್ಲ... ನೀವೇ ಹೇಳಿದಂಗೆ ಯಾವುದೋ ಒಂದು ಕ್ಷಣ ಇಬ್ಬರ ಮಧ್ಯೆ ಅನುರಾಗ ಏರ್ಪಟ್ಟು ದೈಹಿಕ ಮಿಲನವಾಗಿರಬುದು.. ಅದು ಆಕಸ್ಮಿಕ ಅಂದುಕೊಳ್ಳೋಣ.. ಆದರೆ ನಂತರ ಪುನ ಪುನ ಆದರೆ..ಅದು ನ್ಯಾಯ ಸಮ್ಮತ ಕೂಡಾ.... ಹೀಗಿರುವಾಗ..ಅತ್ಯಾಚಾರ ಹೇಗಾಯಿತು?.. ಇನ್ನು ಸ್ವಾಮಿ ದೈಹಿಕ ಸಂಪರ್ಕ ಮಾಡಿದ್ದು ಅವನ ಮೇಲೆ ಅವನು ಮಾಡಿಕೊಂಡ ಅತ್ಯಾಚಾರ..ಸನ್ಯಾಸತ್ವದ ಮೇಲೆ ಇರುವ ನಂಬಿಕೆ ಮೇಲೆ..ಗೌರವದ ಮೇಲ ಮಾಡಿದ ಅತ್ಯಾಚಾರ.. ಬಹುಷ ಆಕೆಗೆ ಯಾವುದೋ ಘಳಿಗೆ ಪಾಪಪ್ರಜ್ಞೆ ಕಾಡಿರಬಹುದು.. ಅದಕ್ಕೆ.. ಅವಳನ್ನ ಅವಳು ಸಮರ್ಥಿಸಿಕೊಳ್ಳಲು.. ಅತ್ಯಾಚಾರದ ರಾಗ ಹಾಡಿರಬಹುದು..

sunaath said...

ನಿಮ್ಮ ವಿಶ್ಲೇಷಣೆ ಸಮರ್ಪಕವಾಗಿದೆ. ಸಂಬಂಧ ಏರ್ಪಟ್ಟಿತೊ ಇಲ್ಲವೊ, ಇದು ಐಚ್ಛಿಕವೊ,ಅನೈಚ್ಚಿಕವೊ ಎನ್ನುವುದನ್ನು ತನಿಖೆಯ ಮೂಲಕ ತಿಳಿಯಬಹುದು. ಆದರೆ ಆ ಹೆಣ್ಣುಮಗಳು ತಪ್ಪಿತಸ್ಥಳು, blackmailer ಎನ್ನುವಂತೆ ಆರೋಪಿಸುವುದು ಸರಿಯಲ್ಲ.

Rajendra Prasad said...

1) ಪರಸ್ಪರ ಒಪ್ಪಿಗೆಯ ಲೈಂಗಿಕತೆಯೇ ಇದ್ದಲ್ಲಿ ಅಲ್ಲಿ ರಾಮ ಮತ್ತು ರಾಮಪ್ರಸಾದ ಎರಡು ಹೆಸರುಗಳು ಏಕೆ ಬಂದು ಹೋದುವು?? 2) ಸರಿ.. ಹಣಕ್ಕೋ ಸುಖಕ್ಕೋ ಮತ್ತೊಂದಕ್ಕೋ ಹೆಣ್ಣು ಗಂಡಿನ ಬಳಿ ಹೋಗಿರಬಾರದೇಕೆ ? ಎಂದು ಕೊಳ್ಳುವ ಮನಸುಗಳಿಗೆ ''ಗುರು ಸ್ಥಾನದಲ್ಲಿರಬೇಕಾದ ಒಂದು ಬೈರಾಗಿಯಾದ ಗಂಡು ಅಂತಹ ಅವಕಾಶವನ್ನು ಬಳಸಿಕೊಳ್ಳುವುದು'' ಎಷ್ಟರ ಮಟ್ಟಗಿನ ನೈತಿಕತೆ ಮತ್ತು ಸಂಸ್ಕಾರ ಎನ್ನುವುದು ಏಕೆ ಪರಿಗಣನೆಗೆ ಒಳಪಡುವುದಿಲ್ಲ. 3) ಇಷ್ಟೆಲ್ಲ ಆದ ಮೇಲೂ ಈ ದೇಶದ ಎರಡು ವಯಸ್ಕ ಹೆಣ್ಣು ಮಕ್ಕಳನ್ನು ಹೊಂದಿರುವ ಅದೇ ಮಠ, ಸಂಪ್ರದಾಯ, ಸಂಸ್ಕಾರಗಳಿಗೆ ನಡೆದುಕೊಳ್ಳುವ ತಾಯೊಬ್ಬಳು ಏಕಾಏಕಿ ಅದೇ ಮಠದ ಸ್ವಾಮಿಯ ವಿರುದ್ದ ಲೈಂಗಿಕ ದೌರ್ಜನ್ಯದ ದೂರು ನೀಡುವುದು ಅಷ್ಟು ಸುಲಭದ ವಿಚಾರವಲ್ಲ!! 4) ಅತ್ಯಾಚಾರ ಬಲವಂತವಾಗಿಯೇ ಆಗಬೇಕಿಲ್ಲ ಎದುರು ರಾಮ ನೆಂಬೊ ದೇವರನ್ನು ನಿಲ್ಲಿಸಿ ಅವನ ಹೆಸರಿನಲ್ಲಿ ನಗ್ನಗೊಳಿಸುವುದು, ಕಾಮಿಸುವುದು, ಕೊನೆಗೆ ಸಂಭೋಗಿಸುವುದು ಯಾವ ರೀತಿಯಲ್ಲಿ ''ಪರಸ್ಪರ ಒಪ್ಪಿಗೆಯ ಲೈಂಗಿಕತೆ'' ಎನ್ನಿಸಿಕೊಳ್ಳುತ್ತದೆ.?!

linga raju said...
This comment has been removed by the author.
shivu jamakhandi said...

Uhe avaravara aatmalochaneya sannidige bittiddu...kandu kaanadantiruva janagala gonchalalli nivu churu vibhinna... vishyakinta nimma vimarshege su aashaya

ಅಕ್ಷಯ ಕಾಂತಬೈಲು said...

madam ee sex vichara prakruthige bidi...
1.matada aasthiya durupayoga
2.jaathi bhahishkarana
3.mane bhikshe
heege dhesha bhasheya case nalli dhana bhashe gounavagiruvudu ecchettukollabekada,gamanisabekada vichara.

Badarinath Palavalli said...

ಎಂತಹ ಸರ್ವಸಂಗ ಪರಿತ್ಯಾಗಿಯೂ ಮೂಲತಃ ನರಾಧಮನೇ ಅಲ್ಲವೇ. ಸನ್ಯಾಸಿಯೂ ಹಾದಿ ತಪ್ಪುವ ಕೆಟ್ಟ ಗಳಿಗೆಗಳು ಹಲವಿದ್ದೀತು.

ವ್ಯಾಮೋಹಕ್ಕೆ ವಿವಾಹದ ಮೂರು ಗಂಟುಗಳ ನಿಜದೊಂದು ಆಯಮವಿತ್ತು ಪೀಠ ತ್ಯಜಿಸಿದ ಸ್ವಾಮಿಗಳು ನಮ್ಮಲ್ಲೇ ಇದ್ದಾರೆ. ಅವರು ಎಲ್ಲ ಸ್ವಾಮಿಗಳಿಗೂ ಮಾದರಿಯಾಗಲಿ.

Asha said...

Very well written..