Thursday, December 4, 2014

ಸುದ್ದಿಯಾದ ಮುತ್ತು !




ಕಳೆದ ವಾರವಿಡೀ ಬೆಂಗಳೂರು ನಗರದಲ್ಲಿ ಮುತ್ತು ಅರ್ಥಾತ್ ಕಿಸ್ ಸುದ್ದಿಯಲ್ಲಿತ್ತು.
ನಾನಾಗ ಬೆಂಗಳೂರಿನಲ್ಲಿರಲಿಲ್ಲ. ಹಿಮಾಲಯಕ್ಕೆ ಮುತ್ತಿಕ್ಕಲು ಚಾರಣಕ್ಕೆ ತೆರಳಿದ್ದೆ.
ಅಲ್ಲಿಂದ ಬಂದಮೇಲೆ ಇದೇನಿದು ಪ್ರಳಯಾಂತಕ ಸುದ್ದಿ ಅಂತ ಪೇಸ್ಬುಕ್ ಸೇರಿದಂತೆ ಅಂತರ್ಜಾಲಕ್ಕೊಂದು ಸುತ್ತು ಹಾಕಿ ಬಂದೆ.
ಕೆಲವು ಪತ್ರಿಕೆಗಳನ್ನು, ಅಂಕಣಗಳನ್ನು ಓದಿದೆ.
’ಕಿಸ್ ಅಫ್ ಲವ್’’ ಭಯಂಕರ ಸುದ್ದಿ ಮಾಡಿತ್ತು; ಅದು ನೈತಿಕ ಪೋಲಿಸ್ ಗಿರಿಯ ವಿರುದ್ಧದ ಪ್ರತಿಭಟನೆ ಎಂಬುದು ಗೊತ್ತಾದರೂ  ಎಲ್ಲಿಯೂ ಅದರ ಸ್ವರೂಪದ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿಲ್ಲ. ಹಾಗಾಗಿ ನಾನು ಯೂಟ್ಯೂಬ್ ಎಂಬ ವಿಷುವಲ್ ಕೊಳಕ್ಕೆ ದುಮುಕಿದೆ. ಅಲ್ಲಿ ಸಿಕ್ಕ ಪ್ರಥಮ ಮಾಹಿತಿ ಪ್ರಕಾರ ಅದು ಪ್ರಣಯೋನ್ಮಾದದ [ಇರೋಟಿಕ್ ಲವ್] ಮುತ್ತಾಗಿತ್ತು. ಅಂತಹ ಬಹಿರಂಗ ಮುತ್ತಿಗೆ ಈ ಕಾಲಘಟ್ಟದಲ್ಲಿ ನಾಗರಿಕ ಸಮಾಜದಿಂದ ಬೆಂಬಲ ನಿರೀಕ್ಷಿಸುವುದು ಸಾಧ್ಯವಿಲ್ಲದ ಮಾತು.
ಆದರೆ...
ನಾನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವಳು. ಅಲ್ಲಿ ಮೋರಲ್ ಪೋಲಿಸಿಂಗ್ ಹೇಗೆ ನಡೆಯುತ್ತಿದೆಯೆಂಬುದರ ಬಗ್ಗೆ ನನಗೆ ಅಲ್ಪಸ್ವಲ್ಪ ಜ್ನಾನವಿದೆ. ಹಾಗಾಗಿ ಮೋರಲ್ ಪೋಲಿಸಿಂಗ್ ವಿರುದ್ಧ ಯಾವುದೇ ರೀತಿಯ ಪ್ರತಿಭಟನೆ ನಡೆದರೂ ಅದಕ್ಕೆ ನನ್ನ ಬೆಂಬಲವಿದ್ದೇ ಇದೆ. ಅದರೆ ’ಕಿಸ್ ಆಪ್ ಲವ್’ ಬಗ್ಗೆ..?
ಕೇರಳದಲ್ಲಿ ಹುಟ್ಟಿದ್ದ ಈ ಪ್ರತಿಭಟನೆ  ರಾಷ್ಟ್ರದಾದ್ಯಂತ ಸುದ್ದಿ ಮಾಡಿತ್ತು. ಇದಕ್ಕೆ ಬೆಂಗಳೂರಿನ ಯುವ ಜನತೆಯೂ ಹೊರತಾಗಲಿಲ್ಲ. ಆದರೆ ಬೆಂಗಳೂರಿನಲ್ಲಿ ರಚಿತ ತನುಜಾ ಎಂಬಾಕೆಯ ನೆತ್ರುತ್ವದಲ್ಲಿ ನಡೆಯಲುದ್ದೇಶಿಸಿದ್ದ ’ಕಿಸ್ ಅಪ್ ಲವ್’ ಪ್ರತಿಭಟನೆಗೆ ಸರಿಯಾದ ರೂಪರೇಷೆಗಳಿರಲಿಲ್ಲ. ಹಾಗಿದ್ದರೂ ಅದಕ್ಕೆ ಸರಕಾರದಿಂದ ಯಾವುದೇ ವಿರೋಧವಿರಲಿಲ್ಲ. ಆದರೆ ಪೋಲಿಸ್ ಇಲಾಖೆ ಅನುಮತಿಯನ್ನು ನೀಡಲಿಲ್ಲ. ಮುತಾಲಿಕ್ ಮತ್ತು ಅವರ ಸಮಾನಾಸಕ್ತ ಸಂಘಟನೆಗಳು ಇದನ್ನು ಬಲವಾಗಿ ವಿರೋಧಿಸಿದ್ದವು. ಆ ಕಾರಣದಿಂದಲೋ ಏನೋ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದ್ರುಷ್ಟಿಯಿಂದ ನಗರ ಪೋಲಿಸ್ ಆಯುಕ್ತರು ಪ್ರತಿಭಟನೆಗೆ ಅವಕಾಶ ನೀಡಲಿಲ್ಲ.
ಪ್ರತಿಭಟನೆಯನ್ನು ನಾವು ಹಿಂತೆಗೆದುಕೊಂಡಿಲ್ಲ. ಮುಂದೆ ಸೂಕ್ತ ಬದಲಾವಣೆಯೊಂದಿಗೆ ಮತ್ತೆ ಬರುತ್ತೇವೆ ಎಂದು ಇದರ ಆಯೋಜಕರು ಹೇಳಿದ್ದಾರೆ. ಬರಲಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡ ನಮ್ಮ ದೇಶದಲ್ಲಿ ಪ್ರತಿಭಟನೆಯೆಂಬುದು ಸಾಂವಿಧಾನಿಕ ಹಕ್ಕು. ಆದರೆ ಆ ಹಕ್ಕನ್ನು ಚಲಾಯಿಸುವಾಗ ಕೆಲವು ಕರ್ತವ್ಯಗಳೂ ಅದರೊಳಗೆ ಮಿಳಿತವಾಗಿರುತ್ತದೆ.
ಈಗ ಮುತ್ತಿನ ಮೋಹ ಕತೆಯ ಜಾಲಕ್ಕೆ ಬರೋಣ.


ಮುತ್ತಿಕ್ಕುವುದು ಪ್ರೀತಿಯ ಸಂಕೇತ, ಅದರಲ್ಲಿ ಅನುಮಾನವಿಲ್ಲ. ಅಂತಹ ಪ್ರೀತಿಯನ್ನೇ ಪ್ರತಿಭಟನೆಯ ಸಂಕೇತವಾಗಿ, ದ್ವೇಷದ ಅಸ್ತ್ರವಾಗಿ ಬಳಸಿಕೊಳ್ಳಬಹುದೆ? ಯಾಕಿಲ್ಲ. ಮಹಾಭಾರತವನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳಿ. ಗಾಂಧಾರಿ ಧ್ರುತರಾಷ್ಟ್ರನನ್ನು ಮದುವೆಯಾಗಿ ಹಸ್ತಿನಾಪುರಕ್ಕೆ ಬರುತ್ತಾಳೆ. ಆಕೆಯ ಜೊತೆ ತಮ್ಮನಾದ ಶಕುನಿಯು ಬರುತ್ತಾನೆ. ಇಲ್ಲಿ ಬಂದಾಗ ಆತನಿಗೆ ತಿಳಿಯುತ್ತದೆ, ತನ್ನ ಭಾವ ಹುಟ್ಟು ಕುರುಡನೆಂದು. ಆತನಿಗೆ ಹೀಗೆ ಸುಳ್ಳು ಹೇಳಿ ತನ್ನ ಪ್ರಿಯ ತಂಗಿಯನ್ನು ಹಸ್ತಿನಾಪುರದ ಸೊಸೆಯನ್ನಾಗಿಸಿದ ಬೀಷ್ಮನ ಮೇಲೆ ಅಸಾಧ್ಯವಾದ ಕೋಪ ಬಂದು ಈ ವಂಶದ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಮನದಲ್ಲಿಯೇ ಸಂಕಲ್ಪ ಮಾಡಿ ಇಲ್ಲಿಯೇ ಉಳಿದು ಬಿಡುತ್ತಾನೆ. ತಾಯ್ನಾಡಿಗೆ ಹಿಂದಿರುಗುವುದೇ ಇಲ್ಲ. ತನ್ನ ಸೋದರಳಿಯಂದಿರನ್ನು ಅಪಾರವಾಗಿ ಪ್ರೀತಿಸುತ್ತಾ ಅವರ ಮನದಲ್ಲಿ ದಾಯಾದಿ ಮತ್ಸರವನ್ನು ತುಂಬುತ್ತಾ ಹೋಗುತ್ತಾನೆ. ಆ ವಿಷಬೀಜವೇ ಮಹಾಭಾರತ ಸಂಗ್ರಾಮಕ್ಕೂ ಕಾರಣವಾಗಿ ಕುರುಕುಲವೇ ನಿರ್ನಾಮವಾಗಿ ಹೋಗುತ್ತದೆ.
ಚಾಣಕ್ಯನ ಕಾಲದಲ್ಲಿ ವಿಷಕನ್ಯೆಯರ ಪ್ರಸ್ತಾಪ ಬರುತ್ತದೆ. ಅವರದು ಮ್ರುತ್ಯು ಚುಂಬನ.
ಪ್ರತಿಭಟನೆ ಹೇಗೆ ಬೇಕಾದರೂ ಇರಬಹುದು..ಅನ್ಯರ, ಮುಖ್ಯವಾಗಿ ಈ ವಿಷಯಕ್ಕೆ ಸಂಬಂಧಪಟ್ಟವರ ಗಮನ ಸೆಳೆಯುವುದೇ ಅದರ ಉದ್ದೇಶವಾಗಿರುತ್ತದೆ.  ಕಿಸ್ ಅಫ್ ಲವ್ ಹಿನ್ನೆಲೆಯಲ್ಲಿ ನಾನು ೨೦೦೮ರಲ್ಲಿ ಮಣಿಪುರದ ಮಹಿಳೆಯರು ನಡೆಸಿದ ಬೆತ್ತಲೆ ಪ್ರತಿಭಟನೆಯನ್ನು ನೋಡಿದೆ. ತಮ್ಮ ಮೇಲೆ ಭಾರತೀಯ ಸೈನಿಕರು ನಡೆಸುತಿದ್ದ ರೇಪ್ ಮತ್ತು ಲೈಂಗಿಕ ದೌರ್ಜ್ಯನ್ಯವನ್ನು ವಿರೋಧಿಸಿ ನಡೆಸಿದ ಅಂದೋಲನವಾಗಿತ್ತದು.ಈ ಎರಡೂ. ಪ್ರತಿಭಟನೆಯ ಉದ್ದೇಶದಲ್ಲಿ ಅಂತಹ ವ್ಯತ್ಯಾಸವೇನೂ ನನಗೆ ತೋರಲಿಲ್ಲ. ಮಣಿಪುರದ ಮಹಿಳೆಯರು ಸಂಪೂರ್ಣ ಬೆತ್ತಲಾಗಿದ್ದರು. ಅವರ ಮುಂಬದಿಯನ್ನು ಪ್ರತಿಭಟನಾ ಬ್ಯಾನರ್ ಗಳು ಮರೆ ಮಾಡಿದ್ದವು. ಆದರೆ ಹಿಂಬದಿ ಕ್ಯಾಮಾರಗಳಿಗೆ ಮುಕ್ತವಾಗಿತ್ತು. ಅದು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಯುಟ್ಯೂಬ್ ನಲ್ಲಿರುವ ಇದರ ಕ್ಲಿಪಿಂಗ್ಸ್ ಗಳನ್ನು ನೋಡಿದರೆ ಆ ಸ್ತ್ರೀಯರ ಆಕ್ರಂದನ, ಪ್ರತಿಭಟನೆಯ ಕಾವು ನಮ್ಮ ಎದೆಯಾಳಕ್ಕೂ ಇಳಿಯುತ್ತದೆ..
ಆದರೆ ಈ ಕಿಸ್ ಅಫ್ ಲವ್?


ಮುತ್ತಿಕ್ಕಿದ ಮಾತ್ರಕ್ಕೇ ಶಾಪವಿಮೋಚನೆಗೊಂಡ ಕಪ್ಪೆ ರಾಜಕುಮಾರನ ಕಥೆಯನ್ನು ನೀವು ಕೇಳಿಯೇ ಇರುತ್ತೀರಿ.


ಇಂಥ
ಜೀವ ಚೈತನ್ಯದ ಸಂಕೇತವಾದ ಮುತ್ತಿನ ಮೂಲಕವೇ ನೈತಿಕ ಪೋಲಿಸ್ ಗಿರಿಯನ್ನು ವಿರೋಧಿಸುವ  ಆಲೋಚನೆಯೇ ವಿನೂತವಾದುದು. ಮತ್ತು ಮೋಹಕವಾದುದು. ಅದರೆ ನಾವಿಲ್ಲಿ ತಿಳಿದುಕೊಳ್ಳಬೇಕಾದುದು.ಮುತ್ತಿಕ್ಕುವ ಕ್ರಿಯೆಗೆ ಹಲವು ಆಯಾಮಗಳಿವೆ; ಸಂಕೇತಗಳಿವೆ.
ಬೆತ್ತಲೆಯೆಂಬುದು ನಿರ್ವಾಣವನ್ನು ಸೂಚಿಸುತದೆ. ಅಧ್ಯಾತ್ಮದ ನೆಲೆಯಲ್ಲಿ ಬೆತ್ತಲೆಯೂ ಪೂಜನೀಯವಾದುದು. ಅಧ್ಯಾತ್ಮದ ಆವರಣದಿಂದ ಹೊರಬಂದರೆ ಎರಡು ವ್ಯಕ್ತಿಗಳ ಖಾಸಗಿ ಆವರಣದಲ್ಲಿ ಅದು ಶ್ರುಂಗಾರಮಯ. ಅದರೆ ಅದೇ ನಾಗರಿಕ ಸಮಾಜದೆದುರಿನಲ್ಲಿ ಬೆತ್ತಲೆ ಪ್ರದರ್ಶನವೆಂಬುದು ಅಶ್ಲೀಲ. ಅದು ನೋಡುವ ಕಣ್ಣುಗಳ ಮೇಲೆ ನಿಧಾರಿತವಾಗುತ್ತದೆ. ಲೈಂಗಿಕ ವರ್ತನೆಗಳೆಲ್ಲವೂ ಅಶ್ಲೀಲತೆಯೊಡನೆ ಥಳಕು ಹಾಕಿಕೊಂಡಿರುತ್ತದೆ.
ಸಾರ್ವಜನಿಕವಾಗಿ ಮುತ್ತಿಕ್ಕುವುದು ತಪ್ಪೇ? ಯಾಕೆ ತಪ್ಪಾಗುತ್ತದೆ. ಖಂಡಿತಾ ತಪ್ಪಲ್ಲ.ಅದರೆ ಯಾರು, ಎಲ್ಲಿಗೆ ಮುತ್ತಿಕ್ಕುತ್ತಾರೆ ಅದು ಮುಖ್ಯ. ಯಾಕೆಂದರೆ ಮುತ್ತಿಕ್ಕುವ ಕ್ರಿಯೆ ಹಲವು ಅರ್ಥಗಳನ್ನು ಧ್ವನಿಸುತ್ತದೆ.
ಮುತ್ತಿಕ್ಕುವುದು ಅಂದರೇನು? ಅದು ಇಬ್ಬರು ವ್ಯಕ್ತಿಗಳ ನಡುವಿನ ಸಾಮೀಪ್ಯವನ್ನು, ಸ್ಪರ್ಶವನ್ನು ಹೇಳುತ್ತದೆ. ಪ್ರೇಮಿಗಳಲ್ಲಾದರೆ ಅದು ಪ್ರಣಯದ ಸಂಕೇತ ದೈಹಿಕ ಮಿಲನದ ಕೀಲಿ ಕೈ. ಆದರೆ ಅದಕ್ಕೂಮೀರಿ ಅದು ಮನಸು ಹರಿಯುವ ಪ್ರಕ್ರಿಯೆ. ಏಕಾಂತದಲ್ಲಿ ಅದು ಶ್ರುಂಗಾರಮಯ.. ಅದುವೇ ಬಹಿರಂಗಗೊಂಡು ವಿಪ್ರಲಂಭ ಶ್ರುಂಗಾರವಾದಾಗ ಅದು ಅಸಭ್ಯತೆಯೆನಿಸಿಕೊಳ್ಳುತ್ತದೆ. ಅಶ್ಲೀಲವೂ ಎನಿಸಬಹುದು.ಅಂದರೆ ಶೀಲ-ಅಶ್ಲೀಲವೆಂಬುದು ನೋಡುವ ನೋಟದಲ್ಲಿರುತ್ತದೆ, ನಮ್ಮ ನಡವಳಿಕೆಯಲ್ಲಿರುತ್ತದೆ.
ಕೆಲವು ಉದಾಹರಣೆಗಳ ಮೂಲಕ ಇದನ್ನು ಇನ್ನೂ ಸ್ಪಷ್ಟವಾಗಿ ಹೇಳಬಹುದೆನಿಸುತ್ತದೆ. ಹೇಳಬಹುದೆನಿಸುತ್ತದೆ. ಒಂದು ಸುಂದರವಾದ ಹೂವಿನಂತಹ ಮಗು ಅಂಬೆಗಾಲಿಡುತ್ತಾ ನನ್ನೆದುರು ಹಾದು ಹೋದರೆ ನಾನು ಮಂಡಿಯೂರಿ ಕುಳಿತು ತೋಳು ಚಾಚಿ ಅ ಮಗುವನ್ನು ನನ್ನೆದೆಗೆ ಒತ್ತಿಕೊಳ್ಳುತ್ತೇನೆ. ಹಗುರವಾಗಿ ಅದರ ಕೆನ್ನೆಗೆ ನನ್ನ ತುಟಿ ಸಾಗಿಸುತ್ತೇನೆ. ಆದರೆ ಒಂದು ವರ್ಷದವರೆಗಿನ ಯಾವುದೇ ಮಗುವನ್ನು ತುಟಿಯಿಂದ ಮುತ್ತಿಕ್ಕಿದ ನೆನಪು ನನಗಿಲ್ಲ. ಅದರ ಕೆನ್ನೆಗೆ ನನ್ನ ಕೆನ್ನೆ ತಾಗಿಸುವ ಅಭ್ಯಾಸ ಮಾತ್ರ ನನ್ನಲ್ಲಿದೆ. ಅದು ಕೂಡಾ ಅಪರೂಪ. ಮೂಗು ಮುಟ್ಟಿ, ಕೂದಲು ಸವರಿ ಮಾತಾಡಿಸುವುದೇ ಹೆಚ್ಚು. ಎಳೆಯ ಮಕ್ಕಳ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತೆ. ಅದಕ್ಕೆ ನಮ್ಮ ಉಸಿರು, ಎಂಜಲು ಕೂಡಾ ಹಾನಿ ತರಬಲ್ಲದು.
ಹಾಗೆಯೇ ತೀರಾ ಆತ್ಮೀಯರಾದ ಹುಡುಗರು ಸಿಕ್ಕಿದಾಗ ಅವರ ಬೆನ್ನಿಗೊಂದು ಗುದ್ದಿ, ಭುಜ ತಟ್ಟಿ, ತಲೆ ಮೊಟಕಿ ಮಾತಾಡಿಸುವ ಅಭ್ಯಾಸವೂ ನನ್ನಲ್ಲಿದೆ. ಗುರುಸ್ಥಾನದಲ್ಲಿರುವವರ ಕಾಲನ್ನು ,ಕೈಯ್ಯನ್ನು ಚುಂಭಿಸುವ ಹಾಗೆಯೇ ಅಂಥ ಎತ್ತರದ ಸ್ಥಾನದಲ್ಲಿರುವವರು ಕಿರಿಯರ ನೆತ್ತಿಯನ್ನು ಆಘ್ರಾಣಿಸಿ ಹಣೆಯನ್ನು ಮುತ್ತಿಕ್ಕುವ ಕ್ರಮವೂ ಇದೆ.
ಇಬ್ಬರು ಪರಿಚಿತ ವ್ಯಕ್ತಿಗಳು ಪರಸ್ಪರ ಎದುರಾದಾಗ ಹಗುರವಾಗಿ ಅಪ್ಪಿಕೊಂಡು ಸ್ವಾಗತಿಸುವುದು ಈಗ ನಾಗರಿಕ ನಡವಳಿಕೆಯೇ ಆಗಿದೆ.. ಹಾಗೆಯೇ ಅವರು ತೀರಾ ಆತ್ಮೀಯರಾಗಿದ್ದರೆ ಹಗುರವಾಗಿ ಚುಂಬಿಸುವುದು ಕೂಡ ಸಾಮಾನ್ಯವಾಗಿದೆ.
ಅದರೆ ನನಗದು ಮುಜುಗರದ ವಿಷಯ, ಇನ್ನೊಬ್ಬರ ಸ್ಪರ್ಶಕ್ಕೆ ನಾವು ನಿಲುಕುವುದು, ತೆರೆದುಕೊಳ್ಳುವುದು ತೀರಾ ಖಾಸಗಿ ವಿಷಯ. ನಾನು ಯಾರ ಕೈಯ್ಯನ್ನು ಬೇಕಾದರೂ ಕುಲುಕಬಲ್ಲೆ. ಆದರೆ ಸಾರ್ವಜನಿಕವಾಗಿ ಯಾರನ್ನಾದರೂ ಅಪ್ಪಿಕೊಳ್ಳಬೇಕಾಗಿದ್ದಲ್ಲಿ ಅವರು ನನ್ನ ಆತ್ಮ ಸಂಬಂಧಿಯಾಗಿರಬೇಕು.  
ಮುತ್ತೆಂಬುದನ್ನು ಆತ್ಮದ ಬೆಸುಗೆಯೆಂದು ನಾನು ಪರಿಗಣಿಸುತ್ತೇನೆ.ಅದಕ್ಕೆ ಎರಡು ಮನಸ್ಸುಗಳು ಒಂದಾಗಿರಬೇಕು. ಅದಕ್ಕೆ ಪೂರ್ವಸಿದ್ಧತೆ ಬೇಕಾಗಿಲ್ಲ. ಅದು ಆಕ್ಷಣದಲ್ಲಿ ಘಟಿಸಬಹುದಾದ ಮೋಹಕ ಮಿಂಚು. ನನಗೀಗಲೂ ನೆನಪಿದೆ..ನಾನಂದು ಮಾನಸಿಕವಾಗಿ ಜರ್ಜಳಿತಳಾಗಿದ್ದೆ. ಅತು ಅತ್ತು ಬಸವಳಿದಿದ್ದೆ. ತುಂಬಾ ದೂರದಲ್ಲಿದ್ದ ಹಾಸ್ಟೇಲ್ ಗೆ ಹೋಗುವ ಸ್ಥಿತಿಯಲ್ಲಿರಲಿಲ್ಲ. ಕತ್ತಲಾಗಿತ್ತು. ಇಂದು ನನ್ನ ರೋಂ ನಲ್ಲಿ ಮಲಗು ಎಂದ ಆತ. ನನಗೆ ಹಾಸಿಗೆಗೆ ಮೈ ಚೆಲ್ಲಿದ್ದರೆ ಸಾಕೆನಿಸಿತ್ತು. ಹಾಸಿಗೆಯೂ ಆ ಪುಟ್ಟ ರೂಮಿನಲ್ಲಿರಲಿಲ್ಲ. ಪ್ಲಾಸ್ಟಿಕ್ ವೈರ್ ನ ಮಂಚವೊಂದು ಗೋಡೆ ಬದಿಯಲ್ಲಿತ್ತು. ಅದಕ್ಕೊಂದು ಜಮಖಾನ ಹಾಸಿತ್ತು. ನಾನಲ್ಲಿ ಬಿದ್ದುಕೊಂಡೆ. ಆತ ಇನ್ನೊಂದು ಗೋಡೆಯ ಬದಿಯಲ್ಲಿದ್ದ ಚಿಟ್ಟೆಯಂತಹ ಎತ್ತರದ ಜಾಗದಲ್ಲಿ ಚಾಪೆ ಹಾಸಿಕೊಂಡು ಮಲಗಿದ. ಮತ್ತೆ ಅಂದು ನಡೆದ ಕಹಿ ಘಟನೆಯತ್ತ ಮಾತು ಹೊರಳಿತು...ಆತ ಎಷ್ಟು ಸಮಾಧಾನದ ಮಾತುಗಳಾಡಿದನೆಂದರೆ ನಾನು ನನಗರಿವಿಲ್ಲದೆ ಎದ್ದು ಹೋಗಿ ಮಲಗಿದ್ದ ಅವನ ಕೆನ್ನೆಗೊಂದು ಕ್ರುತಜ್ನತೆಯ ಮುತ್ತಿಟ್ಟೆ...ಆಮೇಲೆ  ಬಂದು ಮಲಗಿದವಳಿಗೆ ಬೆಳಿಗ್ಗೆ ಅವನ ಮನೆಯ ಓನರ್ ಹುಡುಗಿ  ಟಿ ಕುಡಿಯಲು ಎಬ್ಬಿಸಿದಾಗಲೇ ಎಚ್ಚರವಾಗಿದ್ದು. ’ಅವತ್ತು ನೀನು ನನ್ನನ್ನು ಯಾಕೆ ಹಾಳು ಮಾಡಿಲ್ಲ..ನಾನಾದರೂ ಎಂತಹ ದಡ್ಡನಿದ್ದೆ’ ಎಂದು ಈಗಲೂ ಅವನು ನನ್ನನ್ನು ಗೋಳು ಹೊಯ್ದುಕೊಳ್ಳುತ್ತಾನೆ.
ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ ಮುತ್ತಿಕ್ಕುವುದು ಎಂಬುದು ಪೂರ್ವನಿರ್ಧಾರಿತವಲ್ಲ. ಅದು ಅಕ್ಷಣದಲ್ಲಿ ಘಟಿಸುವಂತಹದ್ದು..ಒಂದು ವೇಳೆ ಸಾರ್ವಜನಿಕವಾಗಿ ಯಾರದರೂ ನನ್ನನ್ನು ಮತ್ತು ನನ್ನ ಸಂಗಾತಿಯನ್ನು  ಅವಮಾನಿಸಿದರೆ, ನಮ್ಮ ನಡವಳಿಕೆಯನ್ನು ಅನೈತಿಕವೆಂದು ಜರೆದು ನೈತಿಕ ಪೋಲಿಸ್ ಗಿರಿಯನ್ನು ನಮ್ಮ ಮೇಲೆ ಹೇರಿದರೆ ಸಮಾಜ ಯಾವುದನ್ನು ಅನೈತಿಕವೆಂದು ಹೇಳುತ್ತದೆಯೋ ಅದನ್ನು ಆ ಕ್ಷಣದಲ್ಲಿ ಮಾಡಬಹುದೆನೋ..ಗೊತ್ತಿಲ್ಲ. ಆದರೆ ಅದಕ್ಕಾಗಿಯೇ ಒಂದು ಕಾರ್ಯಕ್ರಮವೇರ್ಪಡಿಸಿ ಮಾಡುವುದು...ಉಹೂಂ ಸಾಧ್ಯವಿಲ್ಲ.



[’ಸ್ವತಂತ್ರ’ ವಾರ ಪತ್ರಿಕೆಗಾಗಿ ಬರೆದ ಲೇಖನ]




Wednesday, December 3, 2014

ಉರ್ದುಇರಲಿ, ಕನ್ನಡ ಮೆರೆಯಲಿ.




ಇದು ನವೆಂಬರ್ ತಿಂಗಳು ಹಾಗಾಗಿ ಕನ್ನಡದ ಬಗ್ಗೆ ಸ್ವಲ್ಪ ಮಾತಾಡೋಣ..ಅದರಲ್ಲಿಯೂ ನಮ್ಮ ಮುಸ್ಲಿಂರು ಮುಖಂಡರು ಪ್ರಾದೇಶಿಕ ಭಾಷೆಯ ಮಹತ್ವವನ್ನು ಹೇಗೆ ಗ್ರಹಿಸಿದ್ದಾರೆ ಎಂಬುದರತ್ತ ಒಂಚೂರು ಗಮನ ಹರಿಸೋಣ.

ಇದೇ ವರ್ಷ ಜುಲೈ ತಿಂಗಳಿನಲ್ಲಿ ನಮ್ಮ ರಾಜ್ಯದ ಮುಸ್ಲಿಂ ಶಾಸಕರ ನಿಯೋಗವೊಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರನ್ನು ಬೇಟಿ ಮಾಡಿ ಮನವಿಯೊಂದನ್ನು ಅರ್ಪಿಸಿತ್ತು.ಆ ಮನವಿಯಲ್ಲಿ ರಾಜ್ಯದಲ್ಲಿರುವ ಉರ್ದು ಶಾಲೆಗಳನ್ನು ಕನ್ನಡ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಬೇಕೆಂಬ ಬೇಡಿಕೆಯಿತ್ತು. ಈ ಮನವಿಯಲ್ಲಿ ಅವರು ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಬೇಕಾದರೆ ಪ್ರಾದೇಶಿಕ ಭಾಷೆಯನ್ನು ಕಲಿಯುವುದು ಎಷ್ಟು ಅವಶ್ಯಕವೆಂಬುದನ್ನು ಒತ್ತಿ ಹೇಳಿದ್ದರು.

ಮಾತೃ ಭಾಷೆ ಮತ್ತು ಪ್ರಾದೇಶಿಕ ಭಾಷೆ ಬೇರೆ ಬೇರೆಯಾಗಿದ್ದಾಗ ಮಗುವೊಂದು ತನ್ನ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಪಡೆದುಕೊಂಡು ಮುಂದೆ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣವನ್ನು ಮುಂದುವರಿಸುವುದು ಅದರ ಸರ್ವಾಂಗೀಣ ಅಭ್ಯುದಯದ ದೃಷ್ಟಿಯಿಂದ ಮುಖ್ಯವಾದುದು. ಯಾಕೆಂದರೆ ಒಬ್ಬ ವ್ಯಕ್ತಿ ಕೌಟುಂಭಿಕ ಪರಿಸರದಲ್ಲಿ ಎದುರಿಸುವ ಸಮಸ್ಯೆಗಳೇ ಬೇರೆ,ಸಮಾಜಿಕ ಪರಿಸರದಲ್ಲಿ ಎದುರಿಸುವ ಸಮಸ್ಯೆಗಳೇ ಬೇರೆ. ತನ್ನ ಭಾಷೆಯ ಕಾರಣದಿಂದಾಗಿ ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿಯಬೇಕಾದ ಸಂದರ್ಭವೊಂದು ಉಂಟಾದರೆ ಅದು ನಿಜಕ್ಕೂ ಶೋಚನಿಯವಾದುದು. ಉರ್ದು ಭಾಷೆಯನ್ನು ಮಾತ್ರ ಕಲಿಯುವ, ಮಾತಾಡುವ ಮುಸ್ಲಿಂರ ಸಧ್ಯದ ಸ್ಥಿತಿಯೂ ಹಾಗೆಯೇ ಇದೆ.


ಈಗ ನಮ್ಮ ಕರ್ನಾಟಕದಲ್ಲಿರುವ ಮುಸ್ಲಿಂರತ್ತ ಗಮನ ಹರಿಸೋಣ. ಕರಾವಳಿ ಜಿಲ್ಲೆಗಳಲ್ಲಿ ಬ್ಯಾರಿ ಮತ್ತು ನವಾಯತ್ ಭಾಷೆಗಳನ್ನು ಬಿಟ್ಟರೆ ಉಳಿದೆಡೆಗಳಲ್ಲಿ ಅವರು ಮಾತಾಡುವುದು ಉರ್ದು ಭಾಷೆಯನ್ನು. ಹೆಚ್ಚಿನ ಮುಸ್ಲಿಮ್ ಮಕ್ಕಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮದರಾಸಗಳಲ್ಲಿ ಪಡೆಯುತ್ತಾರೆ.

ರಾಜ್ಯದಲ್ಲಿ ಉರ್ದು ಮಾಧ್ಯಮದ ೫೮೬೫ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು,೧೨೬ ಪ್ರೌಢಶಾಲೆಗಳು ಮತ್ತು ೨೩ ಪದವಿ ಕಾಲೇಜುಗಳಿವೆ. ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ. ೭೦ರಷ್ಟು ಮಕ್ಕಳು ಹೈಸ್ಕೂಲ್ ಮೆಟ್ಟಲು ಹತ್ತುವುದಿಲ್ಲ. ಈ ಮಕ್ಕಳಿಗೆ ಉರ್ದು ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಪ್ರಾದೇಶಿಕ ಭಾಷೆಯಾದ ಕನ್ನಡವನ್ನೂ ಸರಿಯಾಗಿ ಕಲಿತಿರುವುದಿಲ್ಲ. ಹಾಗಾಗಿ ಒಳ್ಳೆಯ ಉದ್ಯೋಗವೂ ದೊರೆಯುವುದಿಲ್ಲ. ಇಂತಹ ಶಾಲೆಗಳನ್ನು ಕನ್ನಡ ಅಥವಾ ಇಂಗ್ಲೀಷ್ ಭಾಷಾ ಮಾಧ್ಯಮ ಶಾಲೆಗಳಾಗಿ ಬದಲಾಯಿಸಬೇಕೆಂದು ಸರಕಾರದ ಮೇಲೆ ಒತ್ತಡವನ್ನು ತರಲಾಗುತ್ತಿದೆಯಾದರೂ ಸರಕಾರ ಈ ವಿಷಯದ ಬಗ್ಗೆ ದಿವ್ಯ ನಿರ್ಲಕ್ಷ್ಯವನ್ನು ತಾಳಿದೆ. ಈ ಶಾಲೆಗಳಲ್ಲಿ ಖಾಲಿಯಿರುವ ಸುಮಾರು ಇಪ್ಪತ್ತು ಸಾವಿರದಷ್ಟು ಶಿಕ್ಷಕರನ್ನು ಭರ್ತಿ ಮಾಡುವ ಪ್ರಯತ್ನವನ್ನೂ ಮಾಡಿಲ್ಲ.

ತಲೆ ತಲಾಂತರದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೂ ಕನ್ನಡ ಮಾತಾಡದ ಅಲ್ಪಸಂಖ್ಯಾತರನ್ನು ನಾನು ನೋಡಿದ್ದೇನೆ. ಹೆಚ್ಚೇಕೆ ನಮ್ಮ ಪ್ರಖ್ಯಾತ ಕ್ರಿಕೇಟ್ ಪಟು ಕಿರ್ಮಾನಿ ಯಾವತ್ತದರೂ ಕನ್ನಡ ಮಾತಾಡಿದ್ದನ್ನು ಯಾರಾದ್ರೂ ಕಂಡಿದ್ದೀರಾ? ಬೆಂಗಳೂರಿನ ಲಾಲ್ ಬಾಗ್ ಎದುರುಗಡೆಯಿರುವ ಆಲ್ ಅಮೀನ್ ಕಾಲೇಜಿನಲ್ಲಿ ನಾನು ಪಾರ್ಟ್ ಟೈಂ ಲೆಕ್ಚರರ್ ಆಗಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಹೇಳುತ್ತಿದ್ದೇನೆ, ಮುಸ್ಲಿಮರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳಾಗಿಲ್ಲ.ಕಾಂಗ್ರೇಸಿನ ಹಿರಿಯ ಮುಖಂಡರಾಗಿದ್ದ ಅಜೀಜ್ ಸೇಠ್ ಅವರು  ಕನ್ನಡ ಕಲಿಕೆಯ ಮಹತ್ವವನ್ನು ಅರಿತಿದ್ದರು. ಹಾಗಾಗಿಯೇ ಅವರು 1962 ನೇ ಇಸವಿಯಲ್ಲೇ ಉರ್ದು ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಹೋರಾಟ ನಡೆಸಿದ್ದರು. ಐದು ದಶಕಗಳಿಂದ ಮುಸ್ಲಿಂ ಮುಖಂಡರು ಈ ಅಭಿಪ್ರಾಯಕ್ಕೆ ಬದ್ಧರಾಗಿಯೇ ಇದ್ದಾರೆ. ಅದರೆ ನಮ್ಮ ಆಳುವ ಸರಕಾರಗಳು ಘನ ಘೋರ ನಿದ್ದೆಯಲ್ಲಿವೆ. ಹೀಗಿರುವಾಗ ಸಮಾಜದ ಸರ್ವಾಂಗೀಣ ಅಭಿವೃದ್ಧಿಯೆಂಬುದು ಹೇಗೆ ಸಾಧ್ಯವಾಗುತ್ತದೆ. ದೇಹದಲ್ಲಿ ಒಂದು ಅಂಗ ಬಲಹೀನಗೊಂಡರೆ ಅದು ಒಟ್ಟು ವ್ಯಕ್ತಿತ್ವಕ್ಕಾಗುವ ಕುಂದಲ್ಲವೇ? ಇಂದು ಮುಸ್ಲಿಮರು ಮಾತಾಡುವ ಕನ್ನಡವೆಂದರೆ ಸಿನಿಮಾ, ಕಿರುತೆರೆ, ನಾಟಕಗಳಿಗೆ ತಮಾಶೆಯ ವಸ್ತುವಾಗಿದೆ.

ಸಂವಿಧಾನದ 30 ಬಿ ಕಲಂ ಪ್ರಕಾರ ನಿರ್ಧಿಷ್ಟ ಸಮುದಾಯಕ್ಕೆ ಭಾಷಾ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವಿದೆ. ಸಂವಿಧಾನ ಕೊಡ ಮಾಡಿರುವ ಈ ವಿಶೇಷ ಸವಲತ್ತನ್ನು ತಾವು ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಡಿ ಎಂದು ಅವರಾಗಿಯೇ ಕೇಳಿಕೊಳ್ಳುತ್ತಿದ್ದರೂ ಅದನ್ನವರಿಗೆ ಕಲ್ಪಿಸಿಸಿಕೊಡುತ್ತಿಲ್ಲವೆಂದರೆ?! ಸರಕಾರ ಅಲ್ಪಸಂಖ್ಯಾತರ ವಿಚಾರದಲ್ಲಿ ಮಾತ್ರ ಅಲ್ಲ.ಪ್ರಾಥಮಿಕ ಶಿಕ್ಷಣವನ್ನೇ ಗಂಭೀರವಾಗಿ ಪರಿಗಣಿಸಿಲ್ಲ.ಅಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮವಾಗಿಯೇ ನಗರಗಳಂತೆ ಪ್ರತಿ ಹಳ್ಳಿಯಲ್ಲಿಯೂ ನಾಯಿ ಕೊಡೆಗಳಂತೆ ಇಂಗ್ಲೀಷ್ ಮೀಡಿಯಂ ಶಾಲೆಗಳು ಹುಟ್ಟಿಕೊಳ್ಳುತ್ತಿವೆ.
ಪ್ರಾದೇಶಿಕ ಭಾಷೆಯನ್ನೇ ಯಾಕೆ ಕಲಿಯಬೇಕು? ಜಾಗತಿಕ ಭಾಷೆಯಾದ ಇಂಗ್ಲೀಷ್ ಕಲಿತರೆ ಸಾಕಲ್ಲವೇ ಎಂದು ವಾದಿಸುವವರು ಇದ್ದಾರೆ..ಶಾಲೆಗೆ ಸೇರಿದ ದಿನದಿಂದಲೇ ಇಂಗ್ಲೀಷ್ ಭಾಷೆಯನ್ನು ಮಾತ್ರ ಕಲಿತು ಪ್ರಾದೇಶಿಕ ಭಾಷೆಯತ್ತ ಕಣ್ಣೆತ್ತಿ ನೋಡದವರು ಕೂಡಾ ಇದ್ದಾರೆ.

ಇಲ್ಲಿ ನಾವು ಗಮನಿಸಬೇಕಾದ ವಿಷವೆನೇಂದರೆ.. ಮಾತೃ ಭಾಷೆ, ಪ್ರಾದೇಶಿಕ ಭಾಷೆ ಎರಡನ್ನೂ ಕಡೆಗಣಿಸಿ ಇಂಗ್ಲೀಷ್ ಭಾಷೆಯನ್ನು ಮಾತ್ರ ಅಪ್ಪಿಕೊಂಡ ವ್ಯಕ್ತಿಗಳು ಸೃಜನಶೀಲವಾಗಿ ಮಹತ್ತರವಾದುದನ್ನು ಯಾವುದನ್ನೂ ಸೃಷ್ಟಿಸಲು ಸಾಧ್ಯವಾಗಿಲ್ಲ ಎಂಬುದನ್ನು ಮನಗಾಣಬೇಕು. ನಮ್ಮ ದೇಶಕ್ಕೆ ಇಂಗ್ಲೀಷ್ ಭಾಷೆ ಅಡಿಯಿಟ್ಟು ಶತಮಾನಗಳೇ ಉರುಳಿದರೂ ಆ ಭಾಷೆಯಲ್ಲಿ ಅತ್ಯುತ್ತಮವೆನ್ನಬಹುದಾದ ಕೃತಿಗಳಾಗಲಿ, ಬರಹಗಾರರಾಗಲಿ ಗಮನಾರ್ಹ ಪ್ರಮಾಣದಲ್ಲಿ ರೂಪುಗೊಂಡಿಲ್ಲವೆನ್ನುವುದನ್ನು ನಾವು ಮರೆಯಬಾರದು...ಅದೇ ಪ್ರಾದೇಶಿಕ ಭಾಷೆಗಳತ್ತ ಗಮನ ಹರಿಸಿ..ಅಲ್ಲಿ ವಿಶ್ವ ಸಾಹಿತ್ಯದಲ್ಲಿ ನಿಲ್ಲಬಹುದಾದ ಅನೇಕ ಹೆಸರುಗಳು ನಮ್ಮ ಕಣ್ಮುಂದೆ ಬಂದು ಹೋಗುತ್ತವೆ. ಇಂಗ್ಲೀಷ್ ಭಾಷೆಯಲ್ಲಿ ವಿಧ್ಯಾಭ್ಯಾಸ ಪಡೆದವರು ಒಳ್ಳೆಯ ಉದ್ಯೋಗ ಪಡೆದಿರಬಹುದು, ಅಪಾರ ಪ್ರಮಾಣದಲ್ಲಿ ದುಡ್ಡು ದುಡಿರಬಹುದು.ಐಷಾರಾಮ ಬದುಕನ್ನೂ ಬದುಕುತ್ತಿರಬಹುದು. ಸಮಾಜದಲ್ಲಿ ಅಂತಸ್ತು, ಖ್ಯಾತಿ ಎಲ್ಲವನ್ನೂ ಪಡೆದಿರಬಹುದು. ಬದುಕು ಅಂದರೆ ಇಷ್ಟೆನಾ? ಇದರಾಚೆಯೂ ಇನ್ನೇನೋ ಇದೆಯಲ್ಲಾ..ಮನುಷ್ಯರಾಗುವುದಕ್ಕೆ ಇನ್ನೋನೋ ಬೇಕಾಗುತ್ತದೆಯಲ್ಲವೇ?

ಯಾವುದೇ ಭಾಷೆಯೊಂದರ ಪದಕಕೋಶಗಳನ್ನು ನೋಡಿ..ಅದು ಪರಿಸರದಿಂದ ಹುಟ್ಟಿರುತ್ತದೆ. ಅಲ್ಲಿಯ ನೆಲ, ಜಲ, ಮರ ಗಿಡ, ಪ್ರಾಣಿ ಪಕ್ಷಿ, ಕೆಲಸ ಬೊಗಸೆಯಿಂದ ಸೃಜಿಸಲ್ಪಟ್ಟಿರುತ್ತದೆ. ಇಂತಹ ಭಾಷೆಯನ್ನು ಕಡೆಗಣಿಸಲ್ಪಟ್ಟು ಅನ್ಯಭಾಷೆಯತ್ತ ನಾವು ಕೈ ಚಾಚಿದರೆ ನಾವು ಬೇರುಗಳನ್ನು ಕಳಚಿಕೊಂಡಂತೆಯೇ ಅಲ್ಲವೇ? ಒಂದು ಭಾಷೆಯನ್ನು ನಮ್ಮದಾಗಿಸಿಕೊಳ್ಳುವುದೆಂದರೆ ಆ ಸಂಸ್ಕೃತಿಯನ್ನು ನಮ್ಮದಾಗಿಸಿಕೊಂಡಂತೆ. ಯಾಕೆಂದರೆ ಭಾಷೆಯೆಂಬುದು ಒಂದು ಜನಜೀವನದ, ಬದುಕಿನ ಸಾಂಸ್ಕೃತಿಕ ಮೊತ್ತವಾಗಿರುತ್ತದೆ... ಅ ಕಾರಣದಿಂದಲೇ ಇಲ್ಲಿ ಒಬ್ಬ ಸಂತ ಶಿಶುನಾಳ ಶರೀಪ ಹುಟ್ಟಿಕೊಳ್ಳುತ್ತಾರೆ, ಕರಿಂಖಾನ್ ಜಾತಿ ಮತಗಳನ್ನು ಮೀರಿ ಜನಪ್ರಿಯರಾಗುತ್ತಾರೆ. ರಂಜಾನ್ ದರ್ಗಾ ಬಸವ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗುತ್ತಾರೆ.. ಹಾಗೆಯೇ ಮಾಧ್ಯಮಗಳಲ್ಲಿ, ಸಾಹಿತ್ಯ ಕ್ಷೇತ್ರಗಳಲ್ಲಿ ಹಲವಾರು ಜನ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಈ ಮೂಲಕವೇ ಮುಸ್ಲಿಂ ಸಂವೇಧನೆಯ ಬಾಗಿಲುಗಳು ಸಮಾಜಕ್ಕೆ ತೆರೆದುಕೊಳ್ಳುತ್ತಿವೆ.. ಇವರ ಮುಖಾಂತರವೇ ಮುಸ್ಲಿಮೇತರರು ಆ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ನಿಸಾರ ಅಹಮ್ಮದ್, ಎಂ. ಅಕಬರ್ ಅಲಿ, ಬೊಳುವಾರು ಮಹಮದ್ ಕುಂಜ್ಞಿ, ಪಕೀರ್ ಮಹಮ್ಮದ್ ಕಟ್ಪಾಡಿ ಮುಂತಾದ ಲೇಖಕರು ಕನ್ನಡ ಭಾಷೆಯನ್ನು ತಮ್ಮದಾಗಿಸಿಕೊಂಡ ಕಾರಣದಿಂದಾಗಿಯೇ ಅವರು ಜಾತಿ, ಧರ್ಮಗಳನ್ನು ಮೀರಿ ಬೆಳೆದಿದ್ದಾರೆ. ಸಮಾಜದ ಸ್ವಾಸ್ಥ್ಯಕ್ಕೆ ಇಂತಹ ಮನಸ್ಸುಗಳ ಹೆಚ್ಚಳವಾಗಬೇಕಾಗಿದೆ.

ಮಹಿಳೆಯರು ಬರೆಯಲು ಆರಂಭಿಸಿದ ಮೇಲೆ ಮಹಿಳಾ ಸಂವೇಧನೆ ಏನು ಎಂಬುದು ಪುರುಷ ಜಗತ್ತಿಗೆ ಅರ್ಥವಾಗುತ್ತಿದೆ. ಹಾಗೆಯೇ ದಲಿತ ಸಂವೇಧನೆ, ಮುಸ್ಲಿಂ ಸಂವೇಧನೆ. ಬಹುಶಃ ಸಾರಾ ಅಬುಬೂಕ್ಕರ್, ಭಾನು ಮುಸ್ತಾಕ್, ಕೆ. ಶರೀಪಾರಂತಹ ಮಹಿಳೆಯರು ಬರೆಯಲು ಆರಂಭಿಸದಿದ್ದರೆ.”ಬುರ್ಕಾ’ದೊಳಗಿನ ತಳಮಳಗಳು ಹೊರಜಗತ್ತಿಗೆ ಅರ್ಥವಾಗುತ್ತಲೇ ಇರಲ್ಲಿಲ್ಲ..ಮುಸ್ಲಿಂ ಮಹಿಳೆಯರು ವಿದ್ಯಾವಂತರಾಗಿ ಹೆಚ್ಚೆಚ್ಚು ಹೊರಜಗತ್ತಿಗೆ ತೆರೆದುಕೊಳ್ಳಬೇಕೆಂಬುದು ನನ್ನ ವಯ್ಯಕ್ತಿಕ ಆಸೆ ಮತ್ತು ಹಂಬಲ ಕೂಡಾ.. ಯಾವ ಧರ್ಮವೇ ಆಗಲಿ, ಅದರೊಳಗೇ ಒಂದು ಆಂತರಿಕ ಪ್ರಜಾಪ್ರಭುತ್ವವಿರಬೇಕು..ಅಲ್ಲೊಂದು ಆರೋಗ್ಯಕಾರಿಯಾದ ಸಂವಾದವಿರಬೇಕು, ಚರ್ಚೆಯಿರಬೇಕು, ಸಂಘರ್ಷವಿರಬೇಕು..ಹಾಗಾದಾಗ ಮಾತ್ರ ಅದು ಕಾಲಧರ್ಮಕ್ಕನುಗುಣವಾಗಿ ಪರಿಷ್ಕರಣೆಗೊಳ್ಳುತ್ತಲೇ ಹೋಗುತ್ತದೆ. ಈ ಮೂಲಕ ಹೆಚ್ಚೆಚ್ಚು ಮಾನವೀಯವಾಗುತ್ತದೆ.. ಪ್ರಶ್ನಿಸಿಕೊಳ್ಳದೇ ಹೋದ ಧರ್ಮಗಳು ಕೇವಲ ಆಚರಣೆಯಲ್ಲಿ ಮಾತ್ರ ಉಳಿದುಕೊಂಡು ನಿಂತ ನೀರಾಗಿರುವುದನ್ನು ನಾವು ವರ್ತಮಾನದಲ್ಲಿ ಕಾಣುತ್ತೇವೆ.

 ಉತ್ತರಕರ್ನಾಟಕದ ನೆಲವೆಂದರೆ ಬಿರುಬಿಸಿಲಿನ ನಾಡೆಂದೂ ನಾವು ದಕ್ಷಣದ ಜನ ಸಾರಸಗಟಾಗಿ ಭಾವಿಸುವಂತೆ ಮುಸ್ಲಿಮರನ್ನು ಬಡರೆಂದು ಭಾವಿಸುವುದು ಸಾಮಾನ್ಯದ ಮಾತು. ಅಂತಹ ಬಡ ಮುಸ್ಲಿಮನ ಬದುಕು ಈಗ ಕಾದ ಕಾವಲಿಯಮೇಲೆ ನಿಂತಂತಿದೆ. ಹಾಗಾಗಿ ಸಮಾಜದ ಮುಖ್ಯ ವಾಹಿನಿಯೊಂದಿಗೆ ಬೆರೆಯುವುದು ಇಂದಿನ ತುರ್ತು ಅಗತ್ಯ.ದಕ್ಕೆ ಭಾಷೆಯೂ ಒಂದು ದಾರಿಯಾಗಬಹುದು.

ಜಾಗತೀಕರಣಕ್ಕೆ ತೆರೆದುಕೊಂಡವರು ನಾವು. ನಾವು ಪ್ರಾದೇಶಿಕತೆಯನ್ನು ಮೀರಿ ಬೆಳೆಯಬೇಕು..ಆದರೆ ನಮ್ಮ ಕಾಲು ಇಲ್ಲೇ ಗಟ್ಟಿಯಾಗಿ ಊರಿರಬೇಕು..ಇಲ್ಲಿಯ ಪರಿಸರವನ್ನು, ನೆಲ, ಜಲ, ಭಾಷೆಯನ್ನು ನಾವು ಪ್ರೀತಿಸದಿದ್ದರೆ, ಯಾವುದಕ್ಕೋ ಕೈ ಚಾಚುತ್ತಾ ಹೋದಲ್ಲಿ ನಾವು ಒಂದು ದಿನ ಗಾಳಿಯಲ್ಲಿ ತೇಲಾಡುತ್ತಾ ಅಸ್ತಿತ್ವವನ್ನು ಕಳೆದುಕೊಳ್ಳಲಾರೆವೆ?
ನಾವು ಬೇರಿಳಿದು ಎತ್ತರಕ್ಕೆ ಬೆಳೆಯಬೇಕು..ಅದಕ್ಕೆ ನಮ್ಮ ಪರಿಸರದ ಭಾಷೆ ಕಾರಣವಾಗಬೇಕು..ಅದಕ್ಕೆ ಜಾತಿ ಮತದ ಸೋಂಕಿರಬಾರದು. ಮುಸ್ಲಿಮರು ಭಾಷೆಯ ಕಾರಣದಿಂದಾಗಿ ಸಮೂಹದಿಂದ ಅಸ್ಪರ್ಷರಾಗಿ ದೂರ ನಿಲ್ಲುವಂತರಾಗಬಾರದು. ಬಸ್ಟ್ಯಾಂಡಿನಲ್ಲಿ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿ, ಇದೀಗ ಮೆಡಿಕಲ್ ಕಾಲೇಜು ಕಟ್ಟುವುದರಲ್ಲಿ ವ್ಯಸ್ತವಾಗಿರುವ ಅನಕ್ಷರಸ್ಥ ಹರೇಕಳದ ಹಾಜಬ್ಬನಂತಹ ಸಮಾಜಮುಖಿ ವ್ಯಕ್ತಿತ್ವದವರು ಜಾತಿ ಧರ್ಮವನ್ನು ಮೀರಿ ನಿಲ್ಲುತ್ತಾರೆ. ಅಂತವರು ಮುಸ್ಲಿಂ ಜನಾಂಗಕ್ಕೆ ಆದರ್ಶವಾಗಬೇಕು..


[ಕಳೆದ ವಾರದ ’ಸ್ವತಂತ್ರ’ ವಾರ ಪತ್ರಿಕೆಗಾಗಿ ಬರೆದ ಲೇಖನ]