Friday, June 24, 2016

ಓಡಿ ಹೋಗುವ ಹಂಬಲ.ಎಲ್ಲಿಯಾದರೂ ಓಡಿ ಹೋಗಬೇಕೆಂಬ ನನ್ನ ಹಂಬಲ ಇಂದು ನಿನ್ನೆಯದ್ದಲ್ಲ. ಅದು ಜನ್ಮಾಂತರಗಳಿಂದ ನನ್ನ ಬಿನ್ನಿಗೆ ಬಿದ್ದ ಭೂತವಾಗಿರಬೇಕು. ಬಹುಶಃ ಓಡಿ ಹೋಗಬೇಕೆಂಬ ಹಂಬಲ ಏಕಾಂತದ ಒಂದು ಭಾಗವಾಗಿರಬೇಕು.
ಓಡಿ ಹೋಗುವುದು ಅಂದರೇನು? ಈಗಿರುವ ಸ್ಥಿತಿಯನ್ನು ಮೀರುವುದು, ಇನ್ನೊಂದರ್ಥದಲ್ಲಿ ಪಲಾಯನ. ತುಳುವಿನಲ್ಲಿ ಇದಕ್ಕೊಂದು ಒಳ್ಳೆಯ ನುಡಿಗಟ್ಟಿದೆ. ’ಪದರಾಡು ಪಾಡುನ’ ಈ ನುಡಿಗಟ್ಟಿಗೆ ಕನ್ನಡದ ಹತ್ತಿರದ ಸಂವಾದಿ ನುಡಿಗಟ್ಟು ಇದ್ದಂತಿಲ್ಲ.’ಕುಂಡೆಗೆ ಕಾಲು ಕೊಟ್ಟು ಓಡಿದ’ ಇದು ಓಟದ ತೀವ್ರತೆಯನ್ನು ಹೇಳುತ್ತದೆಯೇ ಹೊರತು. ಓಡಿ ಹೋಗುವುದಕ್ಕಿರುವ ಅಲೌಕಿಕ ಸ್ಪರ್ಶವನ್ನು ಪ್ರತಿಫಲಿಸುವುದಿಲ್ಲ.

ಈ ’ಓಡಿ ಹೋಗುವುದು’ ಇದೆಯಲ್ಲಾ.. ಇದು ಗಂಡುಮಕ್ಕಳಿಗೆ ಸಾಧ್ಯವಾದಷ್ಟು ಹೆಣ್ಣು ಮಕ್ಕಳಿಗೆ ಸುಲಭವಲ್ಲ.. ನನಗೀಗಲೂ ನೆನಪಿದೆ. ನಮ್ಮಣ್ಣ ಆಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದಿರಬೇಕು. ನಮ್ಮಪ್ಪನಿಗೂ ಅವನಿಗೂ ಯಾತಕ್ಕೋ ಜೋರು ಜಗಳವಾಯ್ತು. ನಮಗಾದರೆ ಅಂದರೆ ಹೆಣ್ಣು ಮಕ್ಕಳಿಗೆ ಅಪ್ಪ ದನಕ್ಕೆ ಬಡಿದ ಹಾಗೆ ಬಡಿಯುತ್ತಿದ್ದರು. ಆದರೆ ಗಂಡು ಮಕ್ಕಳಿಗೆ ಅಪ್ಪಂದಿರು ಹೊಡೆಯುತ್ತಿದ್ದುದು ಕಡಿಮೆ. ಕುಲೋದ್ದಾರಕ ಮನೆ ಬಿಟ್ಟು ಹೋಗುವುದೆಂದರೇನು?! ಜಗಳವಾಯ್ತು ಅಂದೆನಲ್ಲಾ, ನಮ್ಮಣ್ಣ ನೇಲೆಯಲ್ಲಿದ್ದ [ಬಟ್ಟೆ ಹಾಕಲು ಮಾಡಿನ ಜಂತಿಯಲ್ಲಿ ಆ ಕಡೆಯಿಂದ ಈ ಕಡೆಯವರೆಗೆ ಕಟ್ಟಿದ್ದ ಹಗ್ಗ] ತನ್ನ ಬಟ್ಟೆಗಳನ್ನು ಎಳೆಯುತ್ತಾ ತಾನು ಮನೆ ಬಿಟ್ಟು ಹೋಗುವುದಾಗಿ ಅನೌನ್ಸ್ ಮಾಡಿದ. ನಮ್ಮಮ್ಮ ಬಹುದೊಡ್ಡ ಅನಾಹುತವೊಂದು ಜರುಗಿ ಹೋದಂತೆ ಜೋರಾಗಿ ದನಿಯೆತ್ತಿ ಅಳತೊಡಗಿದರು. ತಂಗಿಯರು ದನಿಗೂಡಿಸಿದರು. ನಮ್ಮಪ್ಪ ಕೋಪ ಜರ್ರಂತ ಇಳಿದು ಬೆಪ್ಪಾಗಿ ನಿಂತುಕೊಂಡರು. ನಾನೂ ಸುಮ್ಮನೆ ನಿಂತಿದ್ದೆ.

ನನ್ನ ಈ ನಿರ್ಲಿಪ್ತತೆಯನ್ನು ಮನೆಯವರೆಲ್ಲಾ ತಪ್ಪಗಿ ಭಾವಿಸಿಕೊಂಡು ಇವಳಿಗೆ ಅಹಂಕಾರ. ಹಂದಿ ಗರ್ವ ಎಂದೆಲ್ಲಾ ಮೂದಲಿಸುತ್ತಿದ್ದರು. ನನಗೊತ್ತು, ಆದು ಅಹಂಕಾರವಾಗಿರಲಿಲ್ಲ; ಮತ್ತೆ ಸ್ವಾಭಿಮಾನವಾಗಿತ್ತೇ? ಗೊತ್ತಿಲ್ಲ
 ಸ್ವಾಭಿಮಾನವೆಂಬುದು ಹುಟ್ಟಿನಿಂದ ಬರುವುದೇ? ಸ್ವಾಭಿಮಾನಿಗಳೆಲ್ಲಾ ಏಕಾಂತ ಪ್ರಿಯರೇ? ಅದೂ ಗೊತ್ತಿಲ್ಲ. ಆದರೆ ನಂಗೆ ಒಬ್ಬಳೇ ಇರುವುದು ತುಂಬಾ ಇಷ್ಟವಾಗುತ್ತಿತ್ತು.

ಹೆಣ್ಣು ಮಕ್ಕಳು ಹುಡುಗರ ಹಾಗೆ ಲಾರಿ ಹತ್ತಿ ಎಲ್ಲಿಗೋ ಓಡಿ ಹೋಗುವ ಹಾಗಿರಲಿಲ್ಲ. ಅವರು ಓಡಿಹೋಗುವುದೆಂದರೆ ಒಬ್ಬ ಹುಡುಗನ ಜೊತೆ ಓಡಿ ಹೋಗುವುದೇ ಆಗಿತ್ತು. ಅದು ಮನೆ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕುವ ದುರಂತವೇ ಆಗಿತ್ತು. ಅವಳು ಆ ಹುಡುಗನನ್ನು ಮದುವೆಯಾಗಿ ಸುಖ ಸಂಸಾರ ಮಾಡುತ್ತಿದ್ದರೂ ಅವಳೆಂದೂ ಮತ್ತೆ ಆ ಮನೆಯ ಮೆಟ್ಟುಕಲ್ಲನ್ನು ಹತ್ತುವಂತಿರಲಿಲ್ಲ. ಆದರೆ ಗಂಡು ಹುಡುಗನೊಬ್ಬ ಓಡಿ ಹೋದರೂ ಕಾಲಾಂತರದಲ್ಲಿ ತಾನು ಆ ಮನೆಮಗನೆಂಬ ಗತ್ತಿನಿಂದ ಹಿಂದಿರುಗಲೂಬಹುದು. ಆತನನ್ನು  ಎಲ್ಲವನ್ನು ಮರೆತು ಕುಟುಂಬ ಆದರದಿಂದ ಬರಮಾಡಿಕೊಳ್ಳುತ್ತದೆ.

ಅದೇನು ಕಾರಣವೋ ಗೊತ್ತಿಲ್ಲ, ನಾನು ಏಳನೇ ಕ್ಲಾಸಿನಲ್ಲಿ ಪೈಲಾದರೆ ಸತ್ತು ಹೋಗುವುದೆಂದು ತೀರ್ಮಾನಿಸಿದ್ದೆ. ವಿಧ್ಯೆ ಕಲಿಯುವುದು, ಶಾಲೆಗೆ ಹೋಗುವುದೆಂದರೆ ಬಿಡುಗಡೆಯೆಂದೇ ನನಗಾಗಲೇ ಅರ್ಥವಾಗಿತ್ತು. ಹಾಗಾಗಿ ಇಲಿ ಪಾಷಾಣದ ಡಬ್ಬವೊಂದನ್ನು ತಂದು ಕಿಂಡಿ ಗೂಡಿನಲ್ಲಿಟ್ಟಿದ್ದೆ. ಆಗ ಅದಕ್ಕೆ ಟಿಕ್ ಟ್ವೆಂಟಿ ಎಂದು ಕರೆಯುತ್ತಿದ್ದರೆಂದು ನೆನಪು. ಅಥವಾ ಇವರೆಡೂ ಬೇರೆ ಬೇರೆಯಾಗಿದ್ದವೇ? ನೆನಪಿಲ್ಲ. ನಾನಾಗ ಶಾಲೆಗೆ ಹೋಗಲೆಂದು ಅಜ್ಜಿಮನೆಯಲ್ಲಿದ್ದೆ. ಮನೆಯಲ್ಲಿ ನಾನು ಅಜ್ಜಿ ಇಬ್ಬರೇ ಇದ್ದೆವು. ಆದರೆ ನಾನು ಪಾಸಾಗಿಬಿಟ್ಟೆ.

ಚೊರೆ ಮಾಡುವವರಿಂದ, ಗುಂಪಿನಿಂದ, ಜಾತ್ರೆಯ ಮನಸ್ಸಿನವರಿಂದ ನಾನು ಆಗಾಗ ಓಡಿ ಹೋಗುವುದಿದೆ. ಇದೆಲ್ಲಾ ಬಿಡಿ, ನನ್ನನ್ನು ಪ್ರೀತಿಸುತ್ತಿದ್ದ ಹುಡುಗನ ವಲಯದಿಂದಲೂ ಒಮ್ಮೆ ಓಡಿ ಹೋಗಿದ್ದೆ. ಅವನು ನಾನು ಊರಿಗೆ ಹೋಗಿರಬಹುದೆಂದು ಮಂಗಳೂರು, ಸುಳ್ಯದಲ್ಲೆಲ್ಲಾ ಅಲೆದಾಡಿ ನನ್ನಣ್ಣನನ್ನು ಪ್ರಥಮ ಬಾರಿಗೆ ಬೇಟಿಯಾಗಿ ನಿರಾಳವಾಗಿ ಬೆಂಗಳೂರಿಗೆ ಹಿಂದಿರುಗಿದ್ದ. ನಾನು ಆಪೀಸಿಗೂ ಹೋಗದೆ ಆರಾಮವಾಗಿ ಹಾಸ್ಟೇಲ್ ನಲ್ಲಿದ್ದೆ.
ಯಾವುದೋ ಜನ್ಮದ ವಾಸನೆಯ ಈ ಓಡಿ ಹೋಗುವ ಹಂಬಲ ಇನ್ನೂ ಹಾಗೆಯೇ ಉಳಿದುಕೊಂಡಿದೆ. ಈಗ ಪ್ರತಿವರ್ಷ ಹಿಮಾಲಯಕ್ಕೆ ಓಡಿ ಹೋಗುತ್ತಿದ್ದೇನೆ. ಒಂದು ದಿನ ಅಲ್ಲಿಂದಲೂ ಓಡಿ ಹೋಗಬಹುದು. ಆದರೆ ಎಲ್ಲಿಗೆ? ಅದಂತೂ ದೇವರಾಣೆ ಗೊತ್ತಿಲ್ಲ!

ಈ ಓಡಿ ಹೋಗುವ ಹಂಬಲದ ಮುಂದುವರಿಕೆಯಾಗಿ ದಟ್ಟ ಅರಣ್ಯದ ನದಿ ದಂಡೆಯ ಮೇಲೆ ನಾನೊಂದು ಜಮೀನು ಖರೀದಿಸಿದೆ. ಆದರೆ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ..

 [ ಚಲಿತ ಚಿತ್ತ ಕಲಾಂ ಬರಹ ]
0 comments: