Tuesday, June 7, 2016

ಕೊನೆಯ ಬಾರಿ ನೋಡಿದ್ದು ಮುಖವಲ್ಲ, ಬೆನ್ನು !
ಅವನು ಮಂಗಳೂರಿನ ಎ.ಜೆ. ಆಸ್ಪತ್ರೆಯ ಆರನೇ ಮಹಡಿಯ ೧೬ನೇ ಬೆಡ್ ಮೇಲೆ ಮಲಗಿದ್ದ. ’ಏನೋ ಮಾರಾಯ ಇದು.? ಅಂತ ಸಹಜತೆಯನ್ನು ನಟಿಸುತ್ತಾ ಕೇಳಿದೆ. ಎಂದಿನ ಹಾಗೆ ಮಗುವಿನಂತೆ ಮುಗುಳ್ನಕ್ಕ. ಮುಖದ ತುಂಬಾ ಹಲ್ಲು ಮಾತ್ರ ಕಾಣಿಸಿತು. ನನ್ನ ಗಂಡ, ಮಕ್ಕಳ ಬಗ್ಗೆ ವಿಚಾರಿಸಿಕೊಂಡ. ನನ್ನಣ್ಣ ಬಂದು ಮಾತಾಡಿಸಿಕೊಂಡು ಹೋಗಿದ್ದರ ಬಗ್ಗೆ ಹೇಳಿದ. ತನ್ನ ಜಾಂಡೀಸ್ ಕಾಯಿಲೆ ಇಲ್ಲಿ ಗುಣವಾಗುವಂತದ್ದಲ್ಲ, ಮನೆಗೆ ಹೋಗಿ ಹಳ್ಳಿ ಮದ್ದು ಮಾಡುವುದಾಗಿ ಹೇಳಿದ. ಅವನ ಮರಣಾಂತಿಕ ಕಾಯಿಲೆ ಬಗ್ಗೆ ಅವನಿಗೆ ಅರಿವಿದ್ದಂತಿರಲಿಲ್ಲ. ನಾನೂ ಅದರ ಸುಳಿವುಗೊಡದಂತೆ ಮಾತಾಡುತ್ತಿದ್ದೆ.

 ಬೆಂಗಳೂರಿಗೆ ಹಿಂತಿರುಗುವ ಹೊತ್ತಾಯಿತು. ಪಕ್ಕದಲ್ಲಿದ್ದ ಅವನ ತಮ್ಮನ ಕೈಗೆ ಒಂದಿಷ್ಟು ಐನೂರರ ನೋಟುಗಳನ್ನು ಕೊಡಲು ಹೋದೆ. ಆತ ಅಣ್ಣನ ಕೈಗೆ ಕೊಡಲು ಹೇಳಿದ. ನಾನು ಅವನತ್ತ ಕೈ ಚಾಚಿದ. ಅವನದನ್ನು ಕೈ ಚಾಚಿ ತಗೊಂಡ. ಹಾಗೆಯೇ ಕೈಯ್ಯಲ್ಲಿಟ್ಟುಕೊಂಡ. ಅದರತ್ತ ಕಣ್ಣು ಕೂಡಾ ಹಾಯಿಸಲಿಲ್ಲ.

ಅಷ್ಟಾಗುವಾಗ ಡ್ಯೂಟಿ ಡಾಕ್ಟರ್ ಬಂದರು. ಪರೀಕ್ಷಿಸಿದರು. ನಕ್ಕು ತಮಾಶೆ ಮಾತಾಡಿದರು. ಅವರು ಹೊರಹೋಗುವಾಗ ನಾನು ಹಿಂದೆಯೇ ಹೋದೆ. ಪೇಶೆಂಟ್ ಸ್ಥಿತಿಯ ಬಗ್ಗೆ ವಿಚಾರಿಸಿದೆ. ಅವರು ವಿವರಿಸಿದರು.ಹೋಪ್ಸ್ ಇದೆಯಾ ಅಂದೆ. ಅವರು ತಲೆಯಾಡಿಸುತ್ತಾ ’ಝೀರೋ ಪರ್ಸೆಂಟ್’ ಎಂದರು.

 ವಾರ್ಡಿಗೆ ಹಿಂದಿರುಗಿದೆ. ಅವನು ಬಾಗಿಲ ಕಡೆ ನೋಡುತ್ತಾ ಮಲಗಿದ್ದ. ನೋಟಿನ ಕಂತೆಗಳನ್ನು ಹಿಡಿದೇ ಇದ್ದ. ನಾನು ಅವನ ತಮ್ಮನ ಜೊತೆ ಅದು-ಇದು ಮಾತಾಡಿ ಇನ್ನು ಹೊರಡುತ್ತೇನೆ ಎಂದೆ. ಆಗಲಿ ಎನ್ನುವಂತೆ ತಲೆಯಾಡಿಸಿದ. ಆ ನೋಟುಗಳನ್ನು ತಮ್ಮನ ಕೈಗೆ ಕೊಟ್ಟ ಬೆನ್ನು ಮಾಡಿ ಆಚೆ ತಿರುಗಿ ಮಲಗಿದ.ಭ್ರೂಣದಾಕಾರದಲ್ಲಿ ಮಲಗಿದ ಆ ಪೀಚು ದೇಹವನ್ನು ನೋಡುವುದು ಕಷ್ಟವಾಯಿತು. ನನಗಲ್ಲಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಆ ಬದಿಗೆ ಹೋದೆ. ಅವನು ಕಣ್ಣೆತ್ತಿ ನೋಡಲಿಲ್ಲ. ಕಣ್ಣುಗಳು ತುಂಬಿಕೊಂಡಿದ್ದುವಾ? ಗೊತ್ತಿಲ್ಲ. ಬುಜ ತಟ್ಟಿ ಕೂದಲುಗಳಲ್ಲಿ ಬೆರಳಾಡಿಸಿ. ’ಮನೆಗೆ ಬನ್ನಿ, ಅಲ್ಲಿ ನಿಮ್ಮನ್ನು ಬಂದು ಮಾತಾಡಿಸುತ್ತೇನೆ’ ಎಂದು ಅಲ್ಲಿಂದ ಹೊರಟೆ. ಬಾಗಿಲು ದಾಟುವಾಗ ಒಮ್ಮೆ ಹಿಂದಿರುಗಿ ನೋಡಿದೆ. ಅವನ ಬೆನ್ನು ಮಾತ್ರ ಕಾಣಿಸಿತು.

ಅಲ್ಲಿ ಹಾಗೆ ನಿಸ್ಸಾಯಕನಾಗಿ ಮಲಗಿರುವಾತ ವಾಸು, ನನ್ನ ಅಡಿಕೆ ತೋಟಕ್ಕೆ ಮದ್ದು ಬಿಡುವ ಕೊಳೆರೋಗ ಸ್ಪಷಲಿಸ್ಟ್ . ಯಾರಿಂದಲೂ ತಹಬಂದಿಗೆ ತರಲಾಗದ ನನ್ನ ತೋಟದ ಕೊಳೆರೋಗವನ್ನು ಅವನು ಕಂಟ್ರೋಲ್ ಮಾಡಿದ್ದ. ನಾನು ಆತನ ಬಗ್ಗೆ ನನ್ನ ಪೇಸ್ಬುಕ್ ಸ್ಟೇಟಸ್ ಗಳಲ್ಲಿ ಆಗೀಗ ಪ್ರಸ್ತಾಪಿಸುತ್ತಿದ್ದುದುಂಟು. ಹಾಗಾಗಿ  ಕೆಲವರಿಗಾದರೂ ಅತನ ಬಗ್ಗೆ ಗೊತ್ತಿದೆ. ಆತನನ್ನು ಕರ್ವಾಲೋದ ಮಂದಣ್ಣನಿಗೆ ಹೋಲಿಸಿದ್ದುಂಟು. ಆತ ಒಳ್ಳೆಯ ಬೇಟೆಗಾರ, ಮರ,ಗಿಡ, ನದಿ, ಹಕ್ಕಿ, ಹಾವುಗಳ ಬಗ್ಗೆ ಆತನಿಗೆ ಅಪಾರ ಜ್ನಾನವಿತ್ತು. ಹಾರ್ನ್ ಬಿಲ್ ಗಳ ವಿಶಿಷ್ಟ ದಾಂಪತ್ಯದ ಬಗ್ಗೆ ಅವನ ಬಾಯಿಯಿಂದಲೇ ಮೊದಲ ಬಾರಿಗೆ ನಾನು ಕೇಳಿದ್ದು. ಮೀನು ಹಿಡಿಯುವುದರಲ್ಲಂತೂ ಎಕ್ಸ್ ಪರ್ಟ್. ಪೇಸ್ಬುಕ್ ಪ್ರೆಂಡ್ ರಾಜೇಂದ್ರ ಆಗಾಗ ನನ್ನ ತೋಟದಲ್ಲೊಮ್ಮೆ ಕವಿಗೋಷ್ಟಿ ಏರ್ಪಡಿಸೋಣ. ಅಗ ವಾಸುವಿನ ಕೈನಲ್ಲಿ ಹೊಳೆಮೀನಿನ ಊಟ ಮಾಡಿಸ್ಬೇಕು ಅಂದಿದ್ದ. ನಾನದನ್ನು ವಾಸುವಿಗೆ ಹೇಳಿದ್ದೆ. ಆತ ಒಪ್ಪಿಕೊಂಡಿದ್ದ. ಹೊಳೆದಂಡೆಯ ಮೇಲೆ ಒಲೆ ಹೂಡಿ ಮೀನಿನೂಟ ಬಡಿಸುವುದಾಗಿ ಹೇಳಿದ್ದ. ಈಗ?

ನಾನು ಮಂಗಳೂರಿಗೆ ಹೋಗಿ ಬಂದು ಒಂದು ವಾರವೂ ಕಳೆದಿರಲಿಲ್ಲ. ಮೊನ್ನೆ ಬೆಳಿಗ್ಗೆ ನನ್ನ ತವರಿನಿಂದ ವರ್ತಮಾನ ಬಂತು; ವಾಸು ಇನ್ನಿಲ್ಲ, ಅಂತ. ಆತ ನನ್ನ ಕುಟುಂಬದವನು, ಕಟ್ಟೆಮನೆಯ ಕುಡಿ. ಸುಮಾರು ನಲ್ವತ್ತರ ಪ್ರಾಯದವನು. ಅಂತ್ಯಸಂಸ್ಕಾರಕ್ಕೆ ನಾನು ಹೋಗಲಿಲ್ಲ. ಆದರೆ ನಿನ್ನೆ ನಡೆದ ಐದನೆಯ ದಿನದ ”ಶುದ್ಧ’ ದ ವಿಧಿ ವ್ಧಾನಗಳಾಳಲ್ಲಿ ಭಾಗವಹಿಸಿ ಬಂದಿದ್ದೇನೆ. ಈಗ ಮನಸಿನಲ್ಲಿ ಅದೇ ತುಂಬಿಕೊಂಡಿದೆ.ಹಾಗಾಗಿ ಅದನ್ನೇ ನಿಮ್ಮ ಮುಂದಿಡುತ್ತಿದ್ದೇನೆ.

 ಅವನನ್ನು ಸುಟ್ಟ ಜಾಗದಲ್ಲಿ ಬೂದಿಯಾಗದೆ ಉಳಿದ ಎಲುಬುಗಳಿದ್ದವು. ಕರ್ಮಕ್ಕೆ ನಿಂತಾತ ಕುಟುಂಬದ ಹಿರಿಯನ ನಿರ್ದೇಶನದಂತೆ ಎಡಗೈಯ್ಯಲ್ಲಿ ಕಾಲಿನ ಒಂದು ಮೂಳೆಯನ್ನು ಎತ್ತಿಕೊಂಡು ಪುಟ್ಟ ಮಡಕೆಯಲ್ಲಿ ಹಾಕಿಕೊಂಡ. ಅನಂತರ ತೊಡೆಯದು, ಆಮೇಲೆ ತಲೆ ಬುರುಡೆಯದು. ಆಮೇಲೆ ಎಡಗೈಯಿಂದ ಹಾರೆಯಿಂದ ಅಲ್ಲಿಯ ಬೂದಿಯನ್ನು ಮೂರು ಬಾಗ ಮಾಡಿ ಗುಡ್ಡೆ ಹಾಕಿದರು. ಅಲ್ಲೇ ಹೊಂಡ ತೆಗೆದು ಮೊದಲು ಕಾಲಿನ ಕಡೆಯ, ನಂತರ ಮಧ್ಯದ ಭಾಗದ ಆಮೇಲೆ ತಲೆ ಕಡೆಯ ಬೂದಿಯನ್ನು ಹಾಕಿ ಮುಚ್ಚಿದರು. ಅದರ ಮೇಲೆ ಸ್ವಲ್ಪ ಮಣ್ಣು ಹಾಕಿ ಅದಕ್ಕೆ ನೀರು ಹಾಕಿ ಕಲಸಿ ಗೋಪಾಕ್ರುತಿಯನ್ನು ರಚಿಸಿದರು. ಅದರ ಸುತ್ತಲೂ ಸರೋಳಿ ಮರದ ಗೆಲ್ಲುಗಳನ್ನು ನೆಟ್ಟು ನೆರಳು ಮಾಡಿದರು. ಅದರ ಆರೇಳು ಅಡಿ ಅಂತರದಲ್ಲಿ ನಾಲ್ಕೂ ಮೂಲೆಗಳಲ್ಲಿ ಕಂಬ ನೆಟ್ಟರು. ದೇಹ ಸುಟ್ಟ ಕಾಲು ಕಡೆಯ ಭಾಗಿಲಿನ ಹಾಗೆ ಜಾಗಬಿಟ್ಟು ಅಲ್ಲಿ ಫಲಭರಿತ ಎರಡು ಬಾಳೆಕಂಬಗಳನ್ನು ಕಮಾನಿನಂತೆ ಕಟ್ಟಿದರು. ಗೋಪುರಾಕ್ರುತಿಯ [ತುಳುವಿನಲ್ಲಿ ಧೂಪೆ] ಮೇಲೆ ದೊಡ್ಡ ಗಳುವಿಗೆ ತೆಂಗಿನ ಹೂವನ್ನು ಕಟ್ಟಿ ನೆಟ್ಟರು. ಕ್ಷಣಾರ್ಧದಲ್ಲಿ ಅಲ್ಲೊಂದು ಸುಂದರ ಮಂಟಪ ಸ್ರುಷ್ಟಿ ಮಾಡಿದರು. ನಂತರ ಅಲ್ಲಿ ನೆರೆದಿದ್ದವರೆಲ್ಲಾ ಆ ಮಂಟಪದೆಡೆ ಅಕ್ಕಿಯನ್ನು ಬೀರಿ. ’ಸ್ವರ್ಗಕ್ಕೆ ಹೋಗು’ ಎಂದು ದೇವರಲ್ಲಿ ಬೇಡಿಕೊಂಡರು.

ಆದರೆ ಅನಂತರದ ದ್ರುಶ್ಯವನ್ನು ನೋಡುವುದು ಸ್ವಲ್ಪ ಕಷ್ಟವಾಯ್ತು. ವಾಸುವಿನ ಹೆಂಡತಿಯನ್ನು ಕಾಲಿನ ಭಾಗದಲ್ಲಿ ಮಂಡಿಯೂರಿ ಕುಳ್ಳಿರಿಸಲಾಯ್ತು. ಅವಳು ಕೂದಲು ಹರಡಿಕೊಂಡಿದ್ದಳು. ಅವಳ ಎರಡೂ ಕೈಯ್ಯನ್ನೆತ್ತಿ ತಲೆಯ ಮೇಲಿರಿಸಲಾಯ್ತು. ಆಕೆಯ ರೋಧನದ ಮಧ್ಯೆಯೇ ಕುಟುಂಬದ ಹಿರಿಯರು ವಾಸುವಿನ ಬಗ್ಗೆ  ಮಾತಾಡಿದರು. ಅವನ ಚಟದ ಬಗ್ಗೆಯೂ ಮಾತಾಡಿ ಅದೇ ಅವನಿಗೆ ಮುಳುವಾಯ್ತು ಎಂಬರ್ಥದಲ್ಲಿ ಮಾತಾಡಿದ್ದು ಇದ್ದುದರಲ್ಲಿ ನನಗೆ ಸಮಾಧಾನವೆನಿಸಿತ್ತು.

ಅಕಾಲ ಮ್ರುತ್ಯುವಿಗೆ ನಾವು ಕಾರಣಗಳನ್ನು ಹುಡುಕುತ್ತೇವೆ. ಹಾಗೆ ಹುಡುಕಿದ್ದೇ ಆದಲ್ಲಿ. ವಾಸುವಿನ ಬಲಹೀನತೆಗಳಾದ ತುಂಡು ಮತ್ತು ಗುಂಡು ಅವನ ಜೀವಕ್ಕೆ ಎರವಾಯ್ತೇ? ಅವನನ್ನು ಹತ್ತಿರದಿಂದ ಕಂಡವರು  ’ಹೌದು ’ಎನ್ನುತ್ತಾರೆ. ವೈದ್ಯರು ಅವನ ಲಿವರ್ ಪೂರ್ತಿ ಡ್ಯಾಮೇಜ್ ಆಗಿತ್ತು ಅಂದಿದ್ದರು.  ಕ್ಯಾನ್ಸರ್ ಅವನನ್ನು ಒಳಗಿಂದೊಳಗೇ ಇಂಚಿಂಚಾಗಿ ಕೊಂದಿತ್ತು.
ಇಂತಹ ಸಾವು ಬದುಕಿದ್ದ ಅವರ ಪ್ರೀತಿ ಪಾತ್ರರನ್ನೂ ಕೊಂದುಬಿಡುತ್ತದೆ.
ನಮ್ಮ ದೇಹದ ಮೇಲೆ ನಮಗೆ ಪ್ರೀತಿಯಿರಬೇಕು. ಅದರ ಮೇಲೆ ನಾವೇ ದೌರ್ಜನ್ಯ ಎಸಗಿಕೊಳ್ಳಬಾರದು.

[ ’ಚಲಿತ ಚಿತ್ತ’ ಕಾಲಂಗಾಗಿ ಬರೆದ ಬರಹ ]