Wednesday, September 3, 2008

ಚೌತಿ ಎಂದರೆ.... ಬರಹ ಹಿಡಿಸುವುದು

ನಾನು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯವಳು. ನಮ್ಮ ತಾಲೂಕಿನಲ್ಲಿ ಬ್ರಾಹ್ಮಣರ ಮನೆಯಲ್ಲಿ, ಅದು ಕೂಡ ಉಳ್ಳವರ ಮನೆಯಲ್ಲಿ ಮಾತ್ರಾ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುತ್ತಿದ್ದರು. ಅದು ಖಾಸಗಿ ಮಟ್ಟದಲ್ಲಿ ಮಾತ್ರ. ಹಾಗಾಗಿ ಗಣೇಶ ನನಗೇನೂ ಇಷ್ಟದೈವವಲ್ಲ.ಆದರೂ ಗಣಪ ನನ್ನ ಭಾವಕೋಶದಲ್ಲಿನ ಒಂದು ಪ್ರಮುಖ ದೇವರು. ಚೌತಿ ಅಂದ್ರೆ ಗಣೇಶ ಚತುರ್ಥಿಯಂದು ನನಗೆ ನೆನಪಾಗುವುದು ನನ್ನ ಬಾಲ್ಯ.ಶಾಲೆಯಲ್ಲಿ ಆನೇಕ ರಾಷ್ಟೀಯ ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಸಾಂಸ್ಕ್ರತಿಕವಾಗಿ ಆಚರಿಸುವ ಹಬ್ಬವೆಂದರೆ ಬಹುಶಃ ಗಣೇಶ ಚತುರ್ಥಿ ಒಂದೇ. ಬೆಂಗಳೂರಿನಂತಹ ಪಟ್ಟಣಗಳಲ್ಲಿ ಶಾಲೆಗಳಲ್ಲಿ ಚೌತಿಯನ್ನು ಆಚರಿಸುವುದನ್ನು ನಾನು ನೋಡಿಲ್ಲ. ಕೇಳಿಲ್ಲ. ಚೌತಿ ನೆನಪಿರುವುದು ನನಗೆ ಎರಡು ಕಾರಣಗಳಿಗಾಗಿ. ಒಂದು; ಅಂದು ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಆರಂಭಿಸುತ್ತಾರೆ. ಅಥವ ಬರಹ ಹಿಡಿಸುತ್ತಾರೆ. ಇನ್ನೊಂದು; ಮಕ್ಕಳಿಗೆಲ್ಲಾ ಅವಲಕ್ಕಿ ಪಂಚಕಜ್ಜಾಯವನ್ನು ಯಥೇಚ್ಚವಾಗಿ ಹಂಚುತ್ತಾರೆ. ಇದರಲ್ಲಿನ ಕೆಲವು ಸ್ವಾರಸ್ಯಕರ ಸಂಗತಿಗಳನಿಲ್ಲಿ ಹಂಚಿಕೊಳ್ಳುವುದು ನನ್ನ ಉದ್ದೆಶ. ದ.ಕ. ಸೆಖೆನಾಡದ್ದರಿಂದ ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದವರೆಲ್ಲ ಸಂಜೆ ಸ್ನಾನ ಮಾಡುವುದು ರೂಢಿ. ಆದರೆ ಚೌತಿಯಂದು ಶಾಲಾಮಕ್ಕಳೆಲ್ಲ ಮುಂಜಾನೆಯೇ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಶಾಲೆಗೆ ಬರುತ್ತಾರೆ. ಪ್ರತಿ ವಿದ್ಯಾರ್ಥಿಯೂ ಮೂರರಿಂದ ಐದು ಸೇರಿನಷ್ಟು ಅರಳನ್ನು ತರಬೇಕು. ಅನುಕೂಲವಿದ್ದವರು ಒಂದು ಬಾಳೆಗೋನೆಯನ್ನು ತರಬಹುದು. ಪಂಚಕಜ್ಜಾಯಕ್ಕೆ ಬೇಕಾದ ಬೆಲ್ಲವನ್ನು ಶಾಲಾವತಿಯಿಂದಲೇ ಖರೀದಿಸಲಾಗುತ್ತಿತ್ತು. ನಮ್ಮೂರಿನಲ್ಲಿ ಕಬ್ಬು ಬೆಳೆಯುವುದಿಲ್ಲ. ಹಾಗಾಗಿ ಪಂಚಕಜ್ಜಾಯಕ್ಕೆ ಅತ್ಯಗತ್ಯವಾಗಿ ಬೇಕಾದ ಕಬ್ಬು ಎಲ್ಲಿ ಸಿಗುತ್ತದೆಯೆಂದು ತಿಂಗಳುಗಳ ಮೊದಲೇ ಹೆಡ್ಮಾಸ್ತರರು ಹೊಂಚಿ ಇಟ್ಟಿರುತ್ತಿದ್ದರು. ಶಿಷ್ಟ ಭಾಷೆಯಲ್ಲಿ ವಿದ್ಯಾರಂಭವೆಂಬ ’ಬರಹ ಹಿಡಿಸುವ’ ಈ ವಿಶಿಷ್ಟ ಪದ್ಧತಿ ಈಗ ಮರೆಯಾಗಿದೆ. ಈಗ ಮಗು ಅಂಬೆಗಾಲಿಡಲು ಆರಂಭಿಸಿದಾಗಲೇ ಅದರ ಕೈಗೆ ಮೌಸ್ ಹಿಡಿಸುತ್ತಾರೆ. ಹಿಂದೆಲ್ಲಾ ಮಗುವನ್ನು ಶಾಲೆಗೆ ಸೇರಿಸಲು ಐದು ವರ್ಷ ಹತ್ತು ತಿಂಗಳು ತುಂಬಬೇಕಾಗಿತ್ತು. ಇದಕ್ಕೆ ಒಂದೆರಡು ವರ್ಷ ಮೊದಲು ಅದಕ್ಕೆ ಬರಹ ಹಿಡಿಸುತ್ತಿದ್ದರು. ಅದಕ್ಕಾಗಿ ಚೌತಿಯಂದು ಒಂದು ಸೇರು ಬೆಳ್ತಿಗೆ ಅಕ್ಕಿ-ಇಲ್ಲಿ ಒಂದು ವಿಷಯ ಹೇಳಬೇಕು, ಅಲ್ಲಿಯ ಜನಸಾಮನ್ಯರು ಊಟ ಮಾಡುವುದು ಕುಚ್ಚಲಕ್ಕಿ. ದೇವರು ಇದಕ್ಕಿಂತ ಸ್ವಲ್ಪ ಭಿನ್ನವಾಗಿರಬೇಕಲ್ಲ ಅದಕ್ಕಾಗಿ ದೇವರಿಗೆ ಬೆಳ್ತಿಗೆ ಅಕ್ಕಿ- ಇದರ ಜೊತೆ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಮಗುವಿನ ಜೊತೆ ಶಾಲೆಗೆ ಬರಬೇಕು. ಊರ ಜನರು, ಉಪಾಧ್ಯಾಯರುಗಳು, ವಿದ್ಯಾರ್ಥಿವೃಂದ ಎಲ್ಲರೂ ಸೇರಿ ವಿಜೃಂಭಣೆಯಿಂದ ಆದಿ ದೈವವನ್ನು ಪೂಜಿಸುತ್ತಾರೆ. ನಂತರ ಮುಖ್ಯೋಪಧ್ಯಾಯರು ’ಬರಹ ಹಿಡಿಸುವವರು ಯಾರಾದರು ಇದ್ದರೆ ಬನ್ನಿ.’ ಎಂದು ಹೇಳುತ್ತಾ ಗಣೇಶನ ಮುಂದೆ ಚಕ್ಕಲ ಮಕ್ಕಲ ಹಾಕಿ ಕುಳಿತುಕೊಳ್ಳುತ್ತಾರೆ. ಮಗುವಿನ ಹಿರಿಯರು ತಂದ ಅಕ್ಕಿಯನ್ನು ದೇವರ ಮುಂದೆ ಒಂದಿಂಚು ದಪ್ಪದಲ್ಲಿ ಹರಡುತ್ತಾರೆ. ಮಗುವನ್ನು ಎತ್ತಿ ತಮ್ಮ ಎಡತೊಡೆಯ ಮೇಲೆ ಕುಳ್ಳಿರಿಸಿಕೊಳ್ಳುತ್ತಾರೆ. ಅದನ್ನು ಎಡಗೈಯಿಂದ ಬಳಸಿ ಮಗುವಿನ ತೋರುಬೆರಳನ್ನು ಅಕ್ಕಿಯ ಮೇಲಿಟ್ಟು ಓಂ ಎಂದು ಬರೆದು, ನಂತರ ಅದನ್ನು ಅಳಿಸಿ ಓಂ ಗಣೇಶಾಯ ನಮಃ ಎಂದು ಬರೆಯಿಸುತ್ತಾರೆ. ನಂತರ ಮಗು ತೊಡೆಯಿಂದಿಳಿದು ಗುರುಗಳಿಗೆ ನಮಸ್ಕರಿಸಿ ಗಣೇಶನಿಗೂ ವಂದಿಸಿ ಪ್ರಸಾಧ ಸ್ವೀಕರಿಸಲು ಸಾಲಿನಲ್ಲಿ ಅಪ್ಪನ ಜೋತೆ ಕುಳಿತುಕೊಳ್ಳುತ್ತದೆ. ನಮ್ಮ ಶಾಲೆಯ ಉಪಾಧ್ಯಾಯರುಗಳು ಜಾಣರು!. ಒಂದು ದೊಡ್ಡ ಅಂಡೆಯಲ್ಲಿ ಪಂಚಕಜ್ಜಾಯವನ್ನು ಯಾರಿಗೂ ಗೊತ್ತಾಗದಂತೆ ಎತ್ತಿಡುತ್ತಿದ್ದರು. ಮರುದಿನ ನಮಗೆಲ್ಲಾ ಅದನ್ನು ಹಂಚುತ್ತಿದ್ದರು. ಅದು ಎಷ್ಟಿರುತ್ತಿರುತ್ತೆಂದರೆ ನಮಗೆಲ್ಲ ಹೊಟ್ಟೆ ತುಂಬಿ ಮನೆಗೂ ಕೊಂಡೊಯ್ಯುತ್ತಿದ್ದೆವು. ನನಗೆ ಈಗಲೂ ನೆನಪಿದೆ; ನನಗೆ ಬರಹ ಹಿಡಿಸುವಾಗ ದೇವರಿಗೆ ದೊಡ್ಡ ತೆಂಗಿನಕಾಯಿಯನ್ನು ನಾನು ಇಟ್ಟಿದ್ದೆ. ಪೂಜೆ ಭಟ್ರಿಗೇಕೆ ದೊಡ್ಡ ಕಾಯಿ ಎಂದು ನಮ್ಮಪ್ಪ ಅದನ್ನು ಬದಲಾಯಿಸಿ ಸಣ್ಣ ಕಾಯಿ ಇಟ್ಟರು. ಪೂಜೆಯ ಅಕ್ಕಿ ಮತ್ತು ಕಾಯಿಯನ್ನು ಪೂಜೆ ಭಟ್ರೇ ಕೊಂಡೊಯ್ಯುತ್ತಿದ್ದರು. ಅದವರ ಹಕ್ಕು. ಅದೇ ಅವರ ಜೀವನಾಧಾರ. ನಾನು ಮತ್ತೆ ದೊಡ್ಡ ಕಾಯಿ ಇಡುತ್ತಿದ್ದೆ. ಭಟ್ರ ಕಾಯಿ ಅಂದ್ರೆ ಸಣ್ಣ ಕಾಯಿ ಇಡಲು ಬಿಡುತ್ತಿರಲಿಲ್ಲ. ಎಲ್ಲಾ ಮಕ್ಕಳು ಹೀಗೆ ಮಾಡುತ್ತಿದ್ದರಂತೆ. ನಾವು ಗೆಳೆಯರೆಲ್ಲ ಒಟ್ಟು ಸೇರಿ ಬಾಲ್ಯದ ಮೆಲುಕು ಹಾಕಿದಾಗ ಇಂತಹ ಹತ್ತಾರು ಘಟನೆಗಳು ನೆನಪಾಗುತ್ತಾವೆ. ಕೆಲವು ವಿಷಾಧಕ್ಕೆ, ಪಶ್ಚತ್ತಾಪಕ್ಕೆ ಕಾರಣವಾದರೆ ಇನ್ನು ಕೆಲವು ತುಟಿಯಂಚಿನಲ್ಲಿ ನಗು ಮೂಡಿಸುತ್ತವೆ.

8 comments:

Sushrutha Dodderi said...

ನಿಮ್ಮ ಹೆಸರು ತುಂಬಾ ಇಷ್ಟವಾಯ್ತು.

suragi \ ushakattemane said...

ಬರಹ ಇಷ್ಟ ಆಗಲಿಲ್ವಾ?’ಸುರಗಿ’ ಅಂದ್ರೆ ನಂಗೂ ವಿಪರೀತ ಮೋಹ. ಆದರೆ ಅವಳಿಗೆ ದಟ್ಟ ಕಾಡನಲ್ಲಿರುವುದೇ ಇಷ್ಟ ಅಂತೆ.[ಸುರಗಿ ಅಂದ್ರೆ ಸುಗಂಧಬರಿತವಾದ ಒಂದು ಕಾಡು ಹೂ.ಒಣಗಿದ ಮೇಲೂ ತಿಂಗಳುಗಟ್ಟಲೆ ಪರಿಮಳ ಸೂಸುತ್ತಿರುತ್ತದೆ.

ಲೋಕೇಶ್ ಗೌಡ said...

ನಿಮ್ಮ ಬ್ಲಾಗ್ ನೋಡಿದೆ.ಚೆನ್ನಾಗಿದೆ. ಬರವಣಿಗೆ ಸ್ವಲ್ಪ ದೊಡ್ಡದಾಯಿತು. ಮುಂದೆ ಬರೆಯುವಾಗ ಪ್ಯಾರಾ ಮಾಡಿದರೆ ಓದಲಿಕ್ಕೆ ಅನಕೂಲ.
ನನಗೆ ಒಂದು ಆಶ್ಚರ್ಯವಾಯಿತು. ನನ್ನ ಮೊಬೈಲ್‌ ಗೆ ಬ್ಲಾಗ್ ನೋಡಿ ಎಂದು ಮೆಸೇಜ್ ಕಳಿಸಿದ್ದೀರಾ. ನನ್ನ ಸಂಚಾರಿ ವಾಣಿ ಸಂಖ್ಯೆ ಹೇಗೆ ಸಿಕ್ಕಿತು. ನಿಜವಾಗಿಯೂ ನಿಮ್ಮ ಹೆಸರು ಸುರಗಿನಾ? ಅಥವಾ ನಿಮ್ಮ ಕಾವ್ಯ ನಾಮನಾ. ಸುರಗಿ ಹೆಸರು ತುಂಬಾ ಇಷ್ಟವಾಯಿತು. ನಿಜವಾಗಿಯೂ ಸುರಗಿ ಮರದ ನೆರಳಲ್ಲಿ ನಿಂತೆನೋ ಎನಿಸಿತು. ಗಾಳಿ ಬೀಸಿದಾಗ ಸುರಗಿ ಮರದ ಶಬ್ದವೇ ಒಂದು ರೀತಿ. ಅದು ನನಗೆ ತುಂಬಾ ಇಷ್ಟ.
ನನ್ನ ಬ್ಲಾಗ್ ನೇಗಿಲು.ಬ್ಲಾಗ್‌ಸ್ಪಾಟ್.ಕಾಂ

ಲೋಕೇಶ್ ಗೌಡ said...

ನನ್ನ ಹೆಸರು ಬಾಲಚಂದ್ರ. ಊರು ಧರ್ಮಸ್ಥಳ. ಸದ್ಯ ಬೆಂಗಳೂರು ನಿವಾಸಿ. ನಿಮ್ಮ ಬರಹ ಚೆನ್ನಾಗಿದೆ. ಆದರೆ ಯಾಕೋ ನಿಮ್ಮ ಚೌತಿ ಲೇಖನದಲ್ಲಿ ಎನೋ ಹೇಳಲು ತವಕಿಸಿದಂತಿದೆ. ಇಷ್ಟೆ ಆಗಿದ್ದರೆ ಪರವಾಗಿಲ್ಲ. ಆದರೆ ಬಲವಂತವಾಗಿ ತೂರಕುವ ಯತ್ನ ಒಳ್ಳೆಯ ಬೆಳವಣಿಗೆಯಂತೇ ಕಾಣುತ್ತಿಲ್ಲ. ಮತ್ತೆ ಮತ್ತೆ ಜಾತಿ ಪ್ರಸ್ತಾಪಿಸಬೇಕಾದ ಅಗತ್ಯವಾದರೂ ಇತ್ತೇ ಎಂಬ ಪ್ರಶ್ನೆ ಮೂಡಿತು. ಉತ್ತರ ಎದುರು ನೋಡುತಿದ್ದೇನೆ.

ರಾಮಸ್ವಾಮಿ ಹುಲಕೋಡು said...

ನಿಮ್ಮ ಲೇಖನ ಚೆನ್ನಾಗಿದೆ. ಕೊನೆಗೂ ನಿವು ಯಾರೆಂದು ಪತ್ತೆ ಹಚ್ಚಿದೆ.

suragi \ ushakattemane said...

ಸುರಗಿ ಅಂದ್ರೆ ಹರಿತವಾದ ಕತ್ತಿ ಅಂತಲೂ ಅರ್ಥವಿದೆ ಲೋಕೇಶ್! ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.
ರಮಾ ಅಥವಾರಾಮರಿಗೆ;’ನಾನು’ ಯಾರೂಂತ ನನಗೇ ಅರ್ಥವಾಗಿಲ್ಲ.ಇನ್ನು ನಿಮಗೆ ಹೇಗೆ ಅರ್ಥವಾಯಿತು?. ನೀವು ಬಿಡಿ ಅಸಾಧ್ಯರಪ್ಪಾ!

ರಾಮಸ್ವಾಮಿ ಹುಲಕೋಡು said...

ಬೆಂಗಳೂರಿನ ಅಡಿಕೆ ಬೆಳೆಗಾರರೆ, ನೀವು ನನಗೆ ಅರ್ಥವಾಗಿದ್ದೀರಿ ಎಂದು ನಾನು ಬರೆದೇ ಇಲ್ಲ. ನೀವು ಯಾರು ಎಂದು ನನಗೆ ಗೊತ್ತಾಯಿತು ಎಂದೆ ಅಸ್ಟೇ. ಇರಲಿ ಬಿಡಿ. ಬಜರಂಗದಳದ ಪುಂಡಾಟದ ಬಗ್ಗೆ ಏನಾದರೂ ಬರೆಯಿರಿ.

bhadra said...

ಬರಹ ಚೆನ್ನಾಗಿದೆ - ಬ್ಲಾಗೂ ಚೆನ್ನಾಗಿದೆ - ಇನ್ನೂ ಹೆಚ್ಚು ಹೆಚ್ಚು ಬರಹಗಳಿಗಾಗಿ ಬರುತ್ತಿರುತ್ತೇನೆ

ಅಂದ ಹಾಗೆ, ನಮ್ಮೂರಿನ ಸಾರ್ವಜನಿಕ ಗಣೇಶೋತ್ಸವವೂ ಬಲು ಮುದ ಕೊಡುವುದು

ಗುರುದೇವ ದಯಾ ಕರೊ ದೀನ ಜನೆ