Sunday, October 12, 2008

’ಲಿವಿಂಗ್ ಟುಗೆದರ್’ ಯಾಕೀ ರಗಳೆ?ಶಾಸ್ತೋಕ್ತ ಅಥವಾ ಕಾನೂನು ಬದ್ಧ ವಿಧಿ ವಿಧಾನಗಳ ಹೊರತಾಗಿ ಯಾವುದೇ ಪುರುಷ ಮತ್ತು ಮಹಿಳೆ ಸಕಾರಣಗಳಿಂದಾಗಿ ದೀರ್ಘಕಾಲ ಒಟ್ಟಿಗೇ ವಾಸಿಸುತ್ತಿದ್ದರೆ ಅಂತಹ ಪ್ರಕರಣಗಳಲ್ಲಿ ಅವರನ್ನು ದಂಪತಿ ಎಂದೇ ಮಾನ್ಯ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಸರಕಾರ ಯಾಕೆ ಈ ನಿರ್ಧಾರಕ್ಕೆ ಬಂತು?
ಯಾಕೆಂದರೆ, ಆನೇಕ ವರ್ಷಗಳ ಕಾಲ ಸಹಜೀವನ ನಡೆಸಿದ ಪುರುಷ ಸಂಗಾತಿ ಒಂದು ದಿನ ಇದ್ದಕ್ಕಿದ್ದಂತೆ ’ನಿನಗೂ ನನಗೂ ಯಾವ ಸಂಬಂಧವೂ ಇಲ್ಲ’ ಎಂದು ಎದ್ದು ಹೊರಟುಬಿಡುತ್ತಿದ್ದ. ಬಹುತೇಕ ಸಂದರ್ಭಗಳಲ್ಲಿ ಆತನ ಮುಂದೆ ಎರಡು ಆಯ್ಕೆಗಳಿರುತ್ತಿದ್ದವು. ಮೊದಲನೆಯದಾಗಿ ಆತ ಇನ್ನೊಂದು ಹೆಣ್ಣಿನತ್ತ ಈ ಮೊದಲೇ ಆಕರ್ಷಿತನಾಗಿರುತ್ತಿದ್ದ ಹಾಗಾಗಿ ಇಲ್ಲಿ ಸಂಬಂದ ಹರಿದುಕೊಂಡು ಅಲ್ಲಿ ಮುಂದುವರಿಸುತ್ತಿದ್ದ. ಎರಡನೆಯದಾಗಿ ಮನೆಯವರ ಒತ್ತಡಕ್ಕೆ ಮಣಿದು ಮದುವೆಯ ಬಂಧನಕ್ಕೆ ಒಳಗಾಗುತ್ತಿದ್ದ. ಇಲ್ಲಿ ಈ ಹುಡುಗಿ ಭಾವನಾತ್ಮಕವಾಗಿ ಕುಸಿದು ಹೋಗುತ್ತಿದ್ದಳು.
ಇಂತಹ ಸಂದರ್ಭಗಳಲ್ಲಿ ಕೆಲವು ಮಹಿಳೆಯರು ತಮಗಾಗಿರುವ ಅನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಲೇರಿದ್ದರು. ಆದರೆ ಹಿಂದು ವಿವಾಹ ಕಾಯ್ದೆಯ ಪ್ರಕಾರ ಒಟ್ಟಿಗೆ ಬದುಕುವುದು ಮದುವೆ ಅನ್ನಿಸಿಕೊಳ್ಳುವುದಿಲ್ಲ. ಹಾಗಾಗಿ ಪುರುಷರು ’ಮದುವೆ’ ಯ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದರು. ಆಕೆಗೆ ಯಾವುದೇ ಪರಿಹಾರವನ್ನು ಕೊಡುತ್ತಿರಲಿಲ್ಲ.
ಒಬ್ಬ ಮಹಿಳೆಯ ಗುಣಮಟ್ಟದ ಕ್ರಿಯಾಶೀಲ ಬದುಕು ನಲ್ವತ್ತನೇ ವಯಸ್ಸಿಗೆ ಮುಗಿದು ಹೊಗುತ್ತದೆ. ಅಥವಾ ಮಸುಕಾಗುತ್ತಾ ಬರುತ್ತದೆ. ಅದರಲ್ಲೂ ಭಾರತಿಯ ಸಮಾಜದಲ್ಲಿ ಮತ್ತೊಮ್ಮೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಪೂರಕ ವಾತಾವರಣವಿಲ್ಲ. ಪರಂಪರೆಯ, ಸಂಪ್ರದಾಯದ ಚೌಕಟ್ಟುಗಳನ್ನು ಮೀರಿದವರನ್ನು ಬಂಧುಬಾಂಧವರು ಅಷ್ಟು ಸುಲಭವಾಗಿ ತಮ್ಮೊಡನೆ ಸೇರಿಸಿಕೊಳ್ಳುವುದಿಲ್ಲ. ಹಾಗಾಗಿ ಅವರು ಒಂಟಿಯಾಗಿಬಿಡುತ್ತಾರೆ. ಇಳಿ ವಯಸ್ಸಿನಲ್ಲಿ ಒಂಟಿತನ ಸಹಿಸುವುದು ಕಷ್ಟ.
ಇದನ್ನೆಲ್ಲಾ ಮನಗಂಡ ಸರಕಾರ ’ಲೀವಿಂಗ್ ಟುಗೆದರ್’ಗೆ ಕಾನೂನಿನ ಮಾನ್ಯತೆ ನೀಡಲು ನಿರ್ಧರಿಸಿದೆ.
ಇಲ್ಲಿ ಉದ್ಭವಿಸುವ ಪ್ರಶ್ನೆ ಏನೇಂದರೆ, ಎಷ್ಟು ಪರ್ಸೆಂಟ್ ಜನ ಲಿವಿಂಗ್ ಟುಗೆದರ್ ಬದುಕನ್ನು ಆಯ್ಕೆ ಮಾಡಿಕೊಳ್ಳುತ್ತಾರೆ? ಎಂತಹ ಮನಸ್ಥಿತಿಯ ಜನ ಆಯ್ಕೆ ಮಾಡಿಕೊಳ್ಳುತ್ತಾರೆ?
ಇದು ನಗರ ಸಂಸ್ಕ್ರ್‍ಅತಿಯ ಬಳುವಳಿ. ಇದಕ್ಕೆ ಬದಲಾದ ಕೌಟುಂಬಿಕ ಮೌಲ್ಯಗಳೇ ಕಾರಣ. ಮೌಲ್ಯ ಬದಲಾವಣೆಗೆ ಜಾಗತೀಕರಣವೂ ಒಂದು ಕಾರಣ. ಹಾಗಾಗಿ ಸಮಾಜಮುಖಿಯಾದ ಸಮೂಹ ಕೇಂದ್ರಿತ ಬದುಕು ಈಗಿಲ್ಲ. ಈಗ ಏನಿದ್ದರೂ ವ್ಯಕ್ತಿ ಕೇಂದ್ರಿತ ಬದುಕು. ’ನಾವು, ನಮ್ಮದು’ ಇಲ್ಲ; ’ನಾನು, ನನ್ನದು’ ಎಲ್ಲಾ. ಹಾಗಾಗಿ ಜನರು, ಮುಖ್ಯವಾಗಿ ಯುವ ಜನಾಂಗ ಸ್ವಾರ್ಥಿಗಳೂ, ಅಂತರ್ಮುಖಿಗಳೂ, ಭಾವರಹಿತರೂ ಆಗುತ್ತಿದ್ದಾರೆ. ಅವರ ಕೈಯಲ್ಲೊಂದು ಮೊಬೈಲ್, ಎದುರುಗಡೆ ಕಂಪ್ಯೂಟರ್, ಓಡಾಡಲೊಂದು ವೆಹಿಕಲ್ ಇದ್ದುಬಿಟ್ಟರೆ ಪ್ರಪಂಚ ತಮ್ಮ ಮುಷ್ಟಿಯಲ್ಲಿರುತ್ತೆ ಎಂಬ ನಂಬಿಕೆ ಅವರಲ್ಲಿರುತ್ತೆ.
ಇಂತಹ ಯುವ ಮನಸ್ಸುಗಳೇ ’ಲೀವಿಂಗ್ ಟುಗೆದರ್’ನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇವರು ನೈತಿಕ ಕಟ್ಟುಪಾಡು ಇಲ್ಲದವರು, ಮುಕ್ತ ಲೈಂಗಿಕತೆಯ ಪ್ರತಿಪಾದಕರು.. ಎಂಬೆಲ್ಲಾ ಅಭಿಪ್ರಾಯಗಳಿವೆ. ಆದರೆ ಅದು ಸರಿಯಲ್ಲ. ಇವರಲ್ಲಿ ಹೆಚ್ಚಿನವರು ಭಾವನಾತ್ಮಕ ಆಸರೆಗಾಗಿ ಹಾತೊರೆಯುತ್ತಾ ಇಂಥಹ ಬಂಧದಲ್ಲಿ ಒಂದಾಗುತ್ತಾರೆ. ಇನ್ನು ಕೆಲವರು ಮದುವೆಯ ಬಂಧ ಹೊರಿಸುವ ಹೊಣೆಗಾರಿಕೆಯನ್ನು ನಿಭಾಯಿಸಲಾರೆವೆನ್ನುವ ಭಯದಿಂದ ಇಂಥ ಸಂಬಂಧದಲ್ಲಿ ಸಿಲುಕಿಕೊಳ್ಳುತ್ತಾರೆ. ಕೆಲವರು ಭಾವಿಸುವಂತೆ ಸೆಕ್ಸೇ ಮುಖ್ಯವಾಗುವುದಾದರೆ ಈಗೆಲ್ಲಾ ’ಟೈಂಪಾಸ್ ಸೆಕ್ಸ್’ ಎನ್ನುವುದು ಅತಿ ಸುಲಭವಾಗಿ ಸಿಗುವ ಮನೋರಂಜನೆ.
ಆರ್ಥಿಕವಾಗಿ ಸ್ವತಂತ್ರಳಿದ್ದು ಎಂತಹ ಪರಿಸ್ಥಿತಿಯನ್ನು ಕೂಡ ಸಮರ್ಥವಾಗಿ, ಒಂಟಿಯಾಗಿ ಎದುರಿಸಬಲ್ಲೆ ಎನ್ನುವ ಆತ್ಮವಿಶ್ವಾಸದ, ಭಾವುಕವಾಗಿದ್ದರೂ- ನಿರ್ಣಾಯಕ ಘಟ್ಟಗಳಲ್ಲಿ ನಿರ್ಧಾಕ್ಷಣ್ಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಹುಡುಗಿಯೊಬ್ಬಳು ’ಲಿವಿಂಗ್ ಟುಗೆದರ್’ನತ್ತ ವಾಲಿದರೆ ಅದವಳ ಅತ್ಯುತ್ತಮ ಆಯ್ಕೆಯಾಗಬಲ್ಲುದು.
ಯಾಕೆಂದರೆ ಒಬ್ಬ ಗೆಳೆಯ ಕೊಡುವ ಸಾಂಗತ್ಯವನ್ನು ಒಬ್ಬ ’ಗಂಡ’ ಕೊಡಲಾರ. ಹಿಂದೆ ಬದ್ರತೆಯನ್ನು ನೀಡುತ್ತಿದ್ದ ಕುಟುಂಭ ಈಗ ಹೊಣೆಗಾರಿಕೆಯನ್ನು ಮಾತ್ರ ನೀಡುತ್ತಿದೆ. ಆಕೆ ಗೃಹಿಣಿಯಾಗಿದ್ದಾಗ ಗೃಹಸ್ಥನಾಗಿ ಆತ ಹೊಣೆಗಾರಿಕೆಯಲ್ಲಿ ಪಾಲುದಾರನಾಗುತ್ತಿದ್ದ. ಆದರೆ ಈಗ ಆಕೆ ಉದ್ಯೋಗಸ್ಥ ಮಹಿಳೆ. ಆತನ ಪಾಲುದಾರಿಕೆ ಶೂನ್ಯ. ’ಅಲೆಮಾರಿತನ’ ಎಂಬುದು ಗಂಡಸಿನ ಸ್ಥಾಯಿ ಭಾವ. ಬೇಜವಾಬ್ದಾರಿತನ, ಉಡಾಫೆ, ಸೋಮಾರಿತನ...ಇತ್ಯಾದಿ ಸಂಚಾರಿ ಭಾವಗಳು.
ಇಷ್ಟೆಲ್ಲ ಹೇಳಿದರೂ ’ಲೀವಿಂಗ್ ಟುಗೆದರ್’ನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಶೇ.೧ನ್ನೂ ದಾಟಿಲ್ಲ. ಹಾಗಾಗಿ ಇಷ್ಟು ಬೇಗನೇ ಸರಕಾರ ಇದನ್ನು ಕಾನೂನಿನ ವ್ಯಾಪ್ತಿಗೆ ತರಬೇಕಾದ ಅವಶ್ಯಕತೆ ಇದ್ದಂತಿಲ್ಲ. ಈಗ ಬದಲಾಗಬೇಕಾದ್ದು ಪುರುಷ ಮನಸ್ಥಿತಿ. ಗಂಡ ಹೆಂಡತಿಯಲ್ಲಿ ಭರವಸೆಯನ್ನು ತುಂಬಬೇಕು. ಬದುಕಿನ ಬದ್ರತೆಯನ್ನು ಮೂಡಿಸಬೇಕು. ಇಲ್ಲವಾದರೆ..... ಇಂದು ’ಲೀವಿಂಗ್ ಟುಗೆದರ್’ -ನಾಳೆ ಮದುವೆಯ ನಿರಾಕರಣೆ.

4 comments:

Chamaraj Savadi said...

ಸಕಾಲಿಕ ಲೇಖನ. ಸರಿಯಾದ ಅಂಶಗಳನ್ನೇ ಗುರುತಿಸಿದ್ದೀರಿ. ಸಮಾಜ ಬದಲಾದಂತೆ ಕಟ್ಟುಪಾಡುಗಳು ಬದಲಾಗುತ್ತವೆ. ಕಾನೂನೂ ಬದಲಾಗಬೇಕಾಗುತ್ತದೆ. ಅಂಥದೊಂದು ಅನಿವಾರ್ಯತೆಯನ್ನು ’ಲಿವಿಂಗ್‌ ಟುಗೆದರ್‌’ (ಜೊತೆಯಾಗಿರುವುದು) ತಂದುಕೊಟ್ಟಿದೆ.

- ಚಾಮರಾಜ ಸವಡಿ

shreedevi kalasad said...

ಚೆನ್ನಾಗಿದೆ ಲೇಖನ. ವಾಸ್ತವವನ್ನೇ ಹಿಡಿದಿಟ್ಟಿದ್ದೀರಿ. ಒಳನೋಟ ಹಾಗೂ ಮುನ್ನೋಟ ಮೆಚ್ಚುಗೆಯಾಯಿತು

ಸಂಭವಾಮಿ ಯುಗೇ ಯುಗೇ said...

ಲೇಖನ ಚೆನ್ನಾಗಿದೆ. ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿ

ಸಂದೀಪ್ ಕಾಮತ್ said...

ಲಿವಿಂಗ್ ಟುಗೆದರ್ ನಮ್ಗೆ ನಿಅಮಗೆ ಏನೂ ಪ್ರಾಬ್ಲೆಮ್ ಕೊಡೋದಿಲ್ಲ .ಅದು ಪ್ರಾಬ್ಲೆಮ್ ಕೊಡೋದು ನ್ಯಾಯಾಧೀಶರಿಗೆ!!

ಮೊನ್ನೆ ಯಾರೋ ಹುಡುಗಿ ಹೀಗೆ ಒಟ್ಟಿಗೆ ಇದ್ದು ಆಮೇಲೆ ಸಪರೇಟ್ ಆಗಿ ಹುಡುಗನ ಹತ್ರ ಪರಿಹಾರ ಕೇಳ್ತಾ ಇದ್ದಾಳಂತೆ.
ಜಡ್ಜ್ ಗೆ ಮಂಡೆ ಬಿಸಿ ಏನ್ ಮಾಡೋದು ಅಂತ!!
ಈ ಕಾನೂನು ಅನ್ನೋದು ಇಲ್ಲ ಅಂತಿದ್ರೆ ಉಪೇಂದ್ರ ಥರ ಹೇಳ್ ಬಹುದಿತ್ತು "ಈ ಜಗತ್ತಿನಲ್ಲಿ ಯಾರು ಯಾರ್ ಜೊತೆ ಇರ್ಬೇಕು ಅಂತಿದ್ದಾರೋ ಅವರ್ ಜೊತೆ ಇರೋದಿಕ್ಕೆ ಬಿಡ್ಬೇಕು ಮ್ಯಾನ್ ಬಿಡ್ಬೇಕು " ಅಂತ.