Saturday, October 25, 2008

ಡಾರ್ಕ್ ರೂಂನಲ್ಲಿ ಕುಳಿತ್ಯಾಕೆ ಬರೀಬೇಕು?


ಕೆಲವು ಜನ ಮೆಸೇಜ್ ಮಾಡಿ ’ಸುರಗಿ ನಿಮ್ಮ ನಿಜವಾದ ಹೆಸರಾ॥?’ ಎಂದು ಕೇಳಿದ್ದಾರೆ। ಹೆಸರಿನಲ್ಲೇನಿದೆ ಮಹಾ ಎಂದುಕೊಂಡರೂ, ಎಲ್ಲಾ ಇರುವುದು ಹೆಸರಲ್ಲೇ ಎಂಬುದು ನನಗೆ ಗೊತ್ತಿದೆ.

ಸಾರ್ವಜನಿಕ ಬದುಕಿನಲ್ಲಿ, ಸಮಾಜದಲ್ಲಿ ನಾವು ’ಎನೋ’ ಆಗಿರುತ್ತೇವೆ। ನಾವು ಆಡುವ ಮಾತುಗಳು, ವ್ಯಕ್ತಪಡಿಸುವ ಅಭಿಪ್ರಾಯಗಳು ’ನಮ್ಮವರ’ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಹಾಗಾಗಿ ಅಳೆದು, ತೂಗಿ ಮಾತಾಡುತ್ತೇವೆ. ಆದರೆ ಹೇಳಲಾರದ ದುಃಖ-ದುಮ್ಮಾನಗಳು, ಆಸೆ-ಆಕಾಂಕ್ಷೆಗಳು, ಸಿಟ್ಟು-ಸೆಡವುಗಳು ಮನಸ್ಸಿನೊಳಗೆ ಹಾಗೇ ಉಳಿದು ಬಿಡುತ್ತಲ್ಲ, ಅದಕ್ಕೇನು ಮಾಡೋಣ?

’ಡೈರಿ ಬರೆದು ಬಿಡಿ’ ಅಂದು ಬಿಡಬಹುದು। ಆದರೆ, ಅದು ಖಾಸಗಿ ಹಂತದಲ್ಲೇ ಉಳಿದು ಬಿಡುತ್ತದೆ. ತನ್ನ ಕ್ರಿಯೆಗಳನ್ನು ಬೇರೆಯವರು ಗಮನಿಸಬೇಕು ಎಂಬುದು ಮನುಷ್ಯ ಸಹಜ ಗುಣ. ಹಾಗಾಗಿ ಬ್ಲಾಗ್ ಬರೆಯಲು ಆರಂಭಿಸಿದೆ. ಇದು ’ನನ್ನೊಡನೆ ನಾನು’ ಮಾತಾಡಿಕೊಂಡಂತೆ. ಇದನ್ನೇ ನಾನು ನನ್ನ ಬ್ಲಾಗ್ ಬರವಣಿಗೆಯ ಆರಂಭದಲ್ಲಿ ಹೇಳಿಕೊಂಡಿದ್ದೇನೆ.

’ಮನಸ್ಸಿಗೆ ತೋಚಿದಂತೆ ಬರೆಯಲು ಬ್ಲಾಗೇನು ಪರ್ಸನಲ್ ಡೈರಿಯಾ?’ ಎಂದು ವಿಜಯ ಕರ್ನಾಟಕದಲ್ಲಿ ಲೇಖಕರೊಬ್ಬರು ಪ್ರಶ್ಣಿಸಿದ್ದಾರೆ। ಹೌದು, ಒಂದು ರೀತಿಯಲ್ಲಿ ಅದು ಪರ್ಸನಲ್ ಡೈರಿಯೇ. ಯಾರೂ ಓದುಗರಿಲ್ಲದಿದ್ದರೂ ನಾನು ಮನಸ್ಸು ಬಂದಾಗಲೆಲ್ಲಾ ಬರಿತಾನೇ ಇರ್ತಿನಿ. ಇಷ್ಟಕ್ಕೂ ಬರವಣಿಗೆ ಅನ್ನೊದು ಬಿಡುಗಡೆ. ಅದು ಲೇಖಕನ ಮಡುಗಟ್ಟಿದ ಭಾವನೆಗಳ ಅಭಿವ್ಯಕ್ತಿ.

ಇಂತಹ ಬರವಣಿಗೆಯಲ್ಲಿ ಆತ್ಮಚರಿತ್ರೆಯ ಛಾಯೆಯಿರಬಹುದು। ಹೆಂಗಸರಲ್ಲಿ ಸ್ವಂತ ಐಡೆಂಟಿಟಿ ಇರುವವರು ಕಡಿಮೆ. ’ಇಂತಹವರ’ ಪತ್ನಿ, ಮಗಳು, ತಂಗಿ, ತಾಯಿ ಅಥವಾ ಗೆಳತಿ ಎಂದೇ ಗುರುತಿಸುತ್ತಾರೆ. ಅದರಲ್ಲೂ ಗಣ್ಯ ವ್ಯಕ್ತಿಯ ಪತ್ನಿಯಾಗಿದ್ದು, ಗಂಡನ ಕ್ಷೇತ್ರದಲ್ಲೇ ಚೂರು ಪಾರು ಹೆಸರು ಮಾಡಿದ್ದರೆ ಅವಳನ್ನು ಸಂಶಯದಿಂದಲೇ ನೋಡಲಾಗುತ್ತದೆ. ಪತಿಯ ನೆರಳಲ್ಲೆ ಪತ್ನಿಯ ಪ್ರತಿಭೆಯನ್ನು ಗುರುತಿಸಲಾಗುತ್ತದೆ.

ಇಲ್ಲಿ, ಡಾರ್ಕ್ ರೂಂನಲ್ಲಿ ನಾನು ’ನಾನು’ ಮಾತ್ರ ಆಗಿರುತ್ತೇನೆ। ನನ್ನ ಬರಹ ಮಾತ್ರ ನಿಮ್ಮ ಮುಂದಿರುತ್ತದೆ. ಅದು ಮಾತ್ರ ನಿಮ್ಮನ್ನು ತಲುಪುತ್ತದೆ. ಸಮಾಜವನ್ನು ತಿದ್ದುವ, ಬದಲಿಸುವ ದೊಡ್ಡ ದೊಡ್ಡ ಹೊಣೆಗಾರಿಕೆಗಳು ಖ್ಯಾತ ನಾಮರಿಗೇ ಇರಲಿ.

ಕನ್ನಡದ ಕೆಲವು ಪತ್ರಿಕೆಗಳು ಮತ್ತು ನಿಯತಕಾಲಿಕಗಳು ನನ್ನ ಲೇಖನಗಳನ್ನು ಪ್ರಕಟಿಸಲಿಲ್ಲ। ಹಿಂದೆ ಪ್ರಕಟಿಸುತ್ತಿದ್ದವು. ಯಾಕಿರಬಹುದೆಂದು ಕೆದಕಿದಾಗ ಗೊತ್ತಾಗಿದ್ದು; ನಾನು ’ಇಂತವರ’ ಪತ್ನಿಯೆಂದು, ಮತ್ತೊಂದು ಕಾರಣ ಆ ಪತ್ರಿಕೆಯ ದ್ಯೇಯಧೋರಣೆಗಳಿಗೆ ವ್ಯತಿರಿಕ್ತವಾಗಿ ನನ್ನ ಬರಹ ಇದ್ದದ್ದು. ’ನಿಮ್ಮ ಬರಹದಲ್ಲಿ ಸತ್ವ ಇದ್ದಿರಲಾರದು ಬಿಡಿ’ ಎಂದು ನೀವನ್ನಬಹುದು. ಆದರೆ ಅದೇ ಬರಹಗಳನ್ನು ಪ್ರಜಾವಾಣಿ ಸಮೂಹ ಪ್ರಕಟಿಸಿತು.’ ಓ॥ಗೊತ್ತಾಯ್ತು ಬಿಡಿ ನೀವು ಎಲ್ಲಿ ಗುರುತಿಸಲ್ಪಡುತ್ತೀರಿ ’ ಅಂತ ರಾಗ ಎಳೆದ್ರಾ.. ಇದೇ ಸ್ವಾಮಿ, ಪೂರ್ವಗ್ರಹ ಅಂದ್ರೆ.

ಮೊನ್ನೆ ’ಕೆಂಡ ಸಂಪಿಗೆ’ಯಲ್ಲಿ ಜೋಗಿ ಬರೆದ ಬೈರಪ್ಪನವರ ಬರಹಕ್ಕೆ ಕಮೆಂಟ್ ಬರೆಯೋಣವೆಂದುಕೊಂಡೆ। ಯಾಕೆಂದರೆ ಬೈರಪ್ಪನವರ ಸ್ತ್ರೀ ಪಾತ್ರಗಳು ಜೋಗಿಗೆ ಕಾಡದಿರಬಹುದು.ಆದರೆ ನನಗಂತೂ ಕಾಡಿವೆ. ಅವರ ಸ್ತ್ರೀ ಪಾತ್ರಗಳು ಕಾದಂಬರಿಕಾರರನ್ನು ಮೀರಿ ಬೆಳೆಯಲು ಪ್ರಯತ್ನಿಸುತ್ತವೆ. ಕಾದಂಬರಿಕಾರ ಅವರನ್ನು ಉಸಿರುಗಟ್ಟಿಸಿದರೂ ನನ್ನಂಥ ಓದುಗಳಲ್ಲಿ ಅದು ಮರು ಜೀವ ಪಡೆದು ಚಿಗುರಿಕೊಳ್ಳುತ್ತದೆ.

ಆದರೆ ಬರೆಯಲಿಲ್ಲ। ಅಲ್ಲಿರುವ ಕಮೆಂಟ್ ರಾಶಿ ನೋಡಿ ಬೆರಗಾಗಿ ಹೋದೆ. ನಮ್ಮ ಪರಿಸರ ನಮ್ಮ ವ್ಯಕ್ತಿತ್ವವನು ರೂಪಿಸುತ್ತದೆ. ಓದು ಮತ್ತು ಅನುಭವ ಅದಕ್ಕೆ ಇನ್ನೊಂದು ಆಯಾಮ ನೀಡಬಹುದು. ಆದರೆ ನಮ್ಮದಲ್ಲದ ವ್ಯಕ್ತಿತ್ವವನ್ನು ಅರೋಪಿಸಿ ಜಗ್ಗಾಡಿದರೆ ನೋವಾಗುವುದಿಲ್ಲವೇ? ಜೋಗಿಯ ಬರವಣಿಗೆ ಹಿನ್ನೆಲೆಗೆ ಸರಿದು ಜೋಗಿ ’ಇಂಥವರು’, ಕಮೆಂಟ್ ಮಾಡಿದವರು ’ಇಂತವರಿಗೆ ಸಂಬಂದಿಸಿದವರು’ ಎಂಬುದರ ಮೇಲೆ ಚರ್ಚೆ ಮುಂದುವರಿಯುತ್ತಿತ್ತು. ಸೂಕ್ಷ ಮನಸ್ಸಿನವರಿಗೆ ಇದನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟ.

ಯಾವುದೋ ಒಂದು ಸಮುದಾಯದ ಅಥವಾ ಸಿದ್ಧಾಂತದ ಚೌಕಟ್ಟಿನೊಳಗೆ ನನ್ನನ್ನು ನನಗೆ ಗುರುತಿಸಿಕೊಳ್ಳಲು ಸಾಧ್ಯವಾಗದು। ಆದರೆ ಪ್ರಭಾವಕ್ಕೊಳಗಾಗಬಹುದು. ಗುರುತಿಸಿಕೊಳ್ಳುವುದೇ ಅನಿವಾರ್ಯವಾದರೆ ಸ್ತ್ರೀವಾದಿಯಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ. ಹಾಗಾಗಿ ’ ಇಂಥವರ’ ನೆರಳಲ್ಲಿ ಗುರುತಿಸಿಕೊಂಡರೆ ನಮ್ಮ ಐಡೆಂಟಿಟಿ ಮಸುಕಾಗುತ್ತದೆ. ಇಲ್ಲವೇ ಸಂಶಯಕ್ಕೊಳಗಾಗುತ್ತದೆ.

ಡಾರ್ಕ್ ರೂಂನಿಂದ ಬರೆದಾಗಲೂ ಕಿರಿಕಿರಿಯಾಗುವುದುಂಟು। ಸುಮಾರು ಒಂದು ತಿಂಗಳಿಗೂ ಹಿಂದೆ ನಾನು ಕೆಲವು ಪರಿಚಿತರಿಗೆ ಮೆಸೇಜ್ ಮಾಡಿ ನನ್ನ ಬ್ಲಾಗ್ ನೋಡುವಂತೆ ಮನವಿ ಮಾಡಿದ್ದೆ. ಇಮೇಲ್ ಗಿಂತಲೂ ಮೆಸೇಜ್ ಸುಲಭ ಅಂದುಕೊಂಡು ಮೊಬೈಲ್ ನಂಬರ್ ಪ್ರೋಪೈಲ್ ನಲ್ಲಿ ನೀಡಿದ್ದೆ. ಇಂಗ್ಲೀಷ್ ಪತ್ರಕರ್ತನೊಬ್ಬ ’ಲೀವಿಂಗ್ ಟುಗೆದರ್’ ಲೇಖನ ಬರೆದಾಗ ಎಚ್ಚೆತ್ತುಕೊಂಡ. ಬೆನ್ನು ಬಿಡದ ಬೇತಾಳದಂತೆ ಕಾಡತೊಡಗಿದ. ಅವನು ಇನ್ನಾರೋ ಪತ್ರಕರ್ತೆ ತಾನೆಂದು ಭಾವಿಸಿದನಂತೆ!

ಈ ಬ್ಲಾಗ್ ಮನುಷ್ಯ ಸ್ವಭಾವದ ಕೆಲವು ಮುಖಗಳನ್ನು ಪರಿಚಯ ಮಾಡಿಕೊಟ್ಟಿದೆ। ಅದಕ್ಕಾಗಿ ಕೃತಜ್ನತೆಯಿದೆ. ನಿಜದ ಬದುಕಿನಲ್ಲಿ ಎಲ್ಲವನ್ನೂ ಬಿಚ್ಚಿಟ್ಟು ಬದುಕಲಾಗದು. ಇಲ್ಲಾದರೆ ಅಡ್ಡಗೊಡೆಯಲ್ಲಿಟ್ಟ ದೀಪದಂತೆ ಹೇಳಿಕೊಳ್ಳಬಹುದು. ಹೇಳಿ ಹಗುರಾಗಬಹುದು. ಕೆಲವೊಮ್ಮೆ ಪ್ರತಿಕ್ರಿಯೆಯೂ ಸಿಗಬಹುದು. ಭಾವನೆಗಳ ವಿನಿಮಯಕ್ಕೆ ಇಲ್ಲಿ ಮುಕ್ತ ಅವಕಾಶವಿದೆ. ಓದುಗರ ಜೋತೆ ನೇರ ಸಂಪರ್ಕವಿರುವುದರಿಂದ ಬ್ಲಾಗ್ ಒಮ್ಮೊಮ್ಮೆ ಆಪ್ತ ಸಲಹಾ ಕೇಂದ್ರದಂತೆಯೂ ಕೆಲಸ ಮಾಡುತ್ತದೆ.

ನನ್ನದೊಂದು ಪುಟ್ಟ ಭಾವ ಪ್ರಪಂಚ. ಅಲ್ಲಿರುವುದು ನಾನು ಮತ್ತು ನನ್ನ ಭಾವನೆಗಳು ಮಾತ್ರ. ಅಲ್ಲಿಗೆ ಆಕ್ರಮಣವಾಗದಂತೆ ನಾನು ಎಚ್ಚರ ವಹಿಸುತ್ತೇನೆ. ’ನಿನಗೆ ನೀನೇ ಗೆಳೆಯ’ ಎಂಬ ಮಾತಿನಲ್ಲಿ ನನಗೆ ಸಂಪೂರ್ಣ ವಿಸ್ವಾಸವಿದೆ.

20 comments:

shreedevi kalasad said...

ನನ್ನದೊಂದು ಪುಟ್ಟ ಭಾವ ಪ್ರಪಂಚ. ಅಲ್ಲಿರುವುದು ನಾನು ಮತ್ತು ನನ್ನ ಭಾವನೆಗಳು ಮಾತ್ರ. ಅಲ್ಲಿಗೆ ಆಕ್ರಮಣವಾಗದಂತೆ ನಾನು ಎಚ್ಚರ ವಹಿಸುತ್ತೇನೆ. ’ನಿನಗೆ ನೀನೇ ಗೆಳೆಯ’ ಎಂಬ ಮಾತಿನಲ್ಲಿ ನನಗೆ ಸಂಪೂರ್ಣ ವಿಸ್ವಾಸವಿದೆ.

ಒಳ್ಳೆಯದಾಗಲಿ ಸುರಗಿ.

ಸಂದೀಪ್ ಕಾಮತ್ said...

ನಿಮ್ಮ ಭಾವನೆಗಳನ್ನು ಆಕ್ರಮಣ ಮಾಡದೇ ಇರುವ ಗೆಳೆಯ ಸಿಗಲಿ !

Anonymous said...

yes suragi..nanagu ide anubhava agide. patrikeyondaralli nanu bared lahariyannu odi halavru idu nanna khasagi badukin anubhava andukondu nanna personal life bagge parokshavagi vicharisidru.aga nanage thumba novaythu....innobbar khasagi badukin bagge jana yake istu thalekedisikollutharo thiliyadu....
bahushaha idaralli hennobbalannu olisikolluv pattoo irbahudeno....
intha manasthitiyavara bagge hesige huttuthathade....

Chamaraj Savadi said...

ಸುರಗಿಯವರೇ,

ತುಂಬ ಆಪ್ತವಾಗಿ ಬರೆದಿದ್ದೀರಿ.

ಬಹುಶಃ ಬ್ಲಾಗ್‌ ಪ್ರಾರಂಭಿಸಿದಾಗ ನಾನೂ ಹೀಗೇ ಅಂದುಕೊಂಡಿದ್ದೆ. ಅದನ್ನು ಬರೆದುಕೊಂಡಿದ್ದೆ ಕೂಡಾ. ಬ್ಲಾಗ್‌ ಡೈರಿಯೂ ಹೌದು, ಮನಸಿನೊಂದಿಗಿನ ತಣ್ಣಗಿನ ಮಾತೂ ಹೌದು. ಅದು ಹಾಗಿದ್ದರೇ ಚೆನ್ನ ಅಂದುಕೊಂಡಿದ್ದೇನೆ.

ಮಾಧ್ಯಮ ಸೀಮಿತ ವಿಷಯಗಳಿಗೆ ಸೀಮಿತವಾಗುತ್ತಿರುವುದರಿಂದ, ಅನಿಸಿದ್ದನ್ನು ಹೇಳಿಕೊಳ್ಳಲು ಬ್ಲಾಗ್‌ ಉತ್ತಮ ದಾರಿ ಕಲ್ಪಿಸಿಕೊಟ್ಟಿದೆ. ಇಲ್ಲಿ ಮನಸ್ಸಿನ ಮಾತುಗಳನ್ನು ಸ್ವಗತದಂತೆ ಹೇಳಿಕೊಳ್ಳಬಹುದು. ಯಾರಾದರೂ ನೋಡಿದರೂ ಸರಿ, ನೋಡದಿದ್ದರೂ ಸರಿ. ನಾನಂತೂ ಹಾಗಂದುಕೊಂಡೇ ಬ್ಲಾಗ್‌ ಬರೆಯುತ್ತಿದ್ದೇನೆ.

ಎಷ್ಟೋ ಸಾರಿ, ಬ್ಲಾಗ್‌ನ ಬರವಣಿಗೆ ಇತರರ ಬರವಣಿಗೆಗೆ ಪ್ರತಿಕ್ರಿಯೆಯಾಗಿ ಹೊಮ್ಮಿದರೂ, ಅದು ನನ್ನ ಸ್ವಂತ ಅನಿಸಿಕೆಯೂ ಆಗಿರುತ್ತದೆ. ಅಥವಾ ನನ್ನಂಥವರ ಅನಿಸಿಕೆಯ ಪ್ರತಿನಿಧಿಯಾಗಿ ಮೂಡಿರುತ್ತದೆ. ನಾನಂತೂ ಮೊದಲಿನಿಂದ ನನಗೆ ಅನಿಸಿದ್ದನ್ನು ಹಾಗೇ ಹೇಳುತ್ತ ಬಂದವನು. ತೀರಾ ಇತ್ತೀಚೆಗೆ ಮನಸ್ಸಿನ ಎಲ್ಲ ಮಾತುಗಳನ್ನು ನಿಷ್ಠುರವಾಗಿ ಹೇಳುವುದನ್ನು ಕಡಿಮೆ ಮಾಡಿಕೊಂಡಿದ್ದು ಬಿಟ್ಟರೆ, ಮೂಲತಃ ಅಂತಹ ಬದಲಾವಣೆ ಮಾಡಿಕೊಂಡಿಲ್ಲ.

ಪ್ರತಿಕ್ರಿಯೆಗಳೇ ಬರವಣಿಗೆಯ ಸತ್ವ ನಿರ್ಧರಿಸುವುದಿಲ್ಲ ಎಂಬ ನನ್ನ ನಂಬಿಕೆ ಇನ್ನೂ ಅಚಲವಾಗಿಯೇ ಉಳಿದಿದೆ. ಹೀಗಾಗಿ, ನಾನು ಬರೆದುದಕ್ಕಿಂತ ಇತರರ ಬರವಣಿಗೆ ಓದಿದ್ದು ಹೆಚ್ಚು. ಉತ್ತರಿಸಬೇಕು ಅನಿಸಿದಾಗ ಮಾತ್ರ ಪ್ರತಿಕ್ರಿಯೆ. ಇಲ್ಲದಿದ್ದರೆ ಮೌನ.

ನಿಮ್ಮದಂತೂ ಹೇಳಿ ಕೇಳಿ ’ಮೌನ ಕಣಿವೆ’. ಹೀಗಾಗಿ, ದೀರ್ಘಕಾಲ ಮೌನವಾಗಿಬಿಡುತ್ತೀರಿ. ಹಾಗಾಗದಿರಲಿ. ಮನಸಿನ ಮಾತುಗಳು ಬ್ಲಾಗ್‌ನಲ್ಲಾದರೂ ಹೊರಬರಲಿ. ಎಲ್ಲವನ್ನೂ ಹೇಳಿಕೊಳ್ಳಲು ಎಲ್ಲ ಕಾಲದಲ್ಲಿ ಆಗಲಿಕ್ಕಿಲ್ಲ. ಆದರೆ, ಹೇಳಬೇಕಾದ ಕೆಲವನ್ನು ಹೇಳುತ್ತಿರುವುದೇ ಉತ್ತಮ ಅಂತ ಅಂದುಕೊಳ್ಳುತ್ತೇನೆ.

ಬರೆಯುತ್ತಿರಿ. ಬಹುಶಃ ಅದು ಕೊಡುವಷ್ಟು ನೆಮ್ಮದಿಯನ್ನು ಬೇರಾವುದೂ ಕೊಡಲಾರದು. ಏಕೆಂದರೆ, ನಾವೆಲ್ಲ ಆಯ್ದುಕೊಂಡಿದ್ದೇ ಈ ಮಾಧ್ಯಮವನ್ನು. ಇದನ್ನು ಬಿಟ್ಟು ಬೇರೆ ರೀತಿಯ ಅಭಿವ್ಯಕ್ತಿ ನಮಗೆ ಸುಲಭವಾಗಲಿಕ್ಕಿಲ್ಲ.

ಯಾರು ಇದನ್ನು ಬರೆದರು ಎಂಬುದಕ್ಕಿಂತ ಏನು ಬರೆದಿದ್ದಾರೆ ಎಂಬ ಕುತೂಹಲ ನಮ್ಮಲ್ಲಿದ್ದರೆ ಸಾಕು. ಬರಹಗಾರ ಗೌಣವಾಗಿ, ಬರವಣಿಗೆ ಮುಖ್ಯವಾಗುತ್ತದೆ. ಆ ನಂಬಿಕೆಯಿಂದ ನಾನು ಬ್ಲಾಗ್‌ ಕರ್ತೃಗಳ ಮೂಲ ಕೆದಕಲು ಹೋಗುವುದಿಲ್ಲ.

ಒಳ್ಳೆಯದಾಗಲಿ. ಬರೆಯುತ್ತಿರಿ.

- ಚಾಮರಾಜ ಸವಡಿ

ಪಲ್ಲವಿ ಎಸ್‌. said...

ಪ್ರೀತಿಯ ಸುರಗಿ ಅವರೇ,

ತುಂಬ ಚೆನ್ನಾಗಿ ಬರೆದಿದ್ದೀರಿ. ನನ್ನ ಹಲವಾರು ಅಭಿಪ್ರಾಯಗಳಿಗೆ ಪುಷ್ಠಿ ದೊರೆತಂತಾಯಿತು.

”ಇಲ್ಲಿ, ಡಾರ್ಕ್ ರೂಂನಲ್ಲಿ ನಾನು ’ನಾನು’ ಮಾತ್ರ ಆಗಿರುತ್ತೇನೆ। ನನ್ನ ಬರಹ ಮಾತ್ರ ನಿಮ್ಮ ಮುಂದಿರುತ್ತದೆ. ಅದು ಮಾತ್ರ ನಿಮ್ಮನ್ನು ತಲುಪುತ್ತದೆ. ಸಮಾಜವನ್ನು ತಿದ್ದುವ, ಬದಲಿಸುವ ದೊಡ್ಡ ದೊಡ್ಡ ಹೊಣೆಗಾರಿಕೆಗಳು ಖ್ಯಾತ ನಾಮರಿಗೇ ಇರಲಿ”

ಈ ಸಾಲುಗಳು ತುಂಬಾ ಹಿಡಿಸಿದವು. ನನ್ನ ಸ್ವಗತವನ್ನೇ ಅಕ್ಷರರೂಪದಲ್ಲಿ ಓದಿದಂತಾಯಿತು.

- ಪಲ್ಲವಿ ಎಸ್‌.

ಸುಧನ್ವಾ said...

ಬರಹ ಹದವಾಗಿದೆ. ನಮ್ಮ ಭಾವ ಪ್ರಪಂಚವನ್ನು ಉಳಿಸಿಕೊಳ್ಳುವುದೇ ಈಗಿನ ದೊಡ್ಡ ಕೆಲಸ.

Harish kera said...

ಬರಹಗಳು ಚೆನ್ನಾಗಿವೆ. ಹಿಂದಿನ ಬರಹಗಳನ್ನು ಓದಿ ಊರು ನೆನಪಾಯಿತು.
- ಹರೀಶ್ ಕೇರ

ಸುಧೇಶ್ ಶೆಟ್ಟಿ said...

ಸುರಗಿಯವರೇ,

ನಿಮ್ಮ ಬ್ಲಾಗ್ ಚೆನ್ನಾಗಿದೆ. ಇವತ್ತು ಮೊದಲ ಸಾರಿ ನೋಡಿದೆ ನಿಮ್ಮ ಬ್ಲಾಗನ್ನು. ನೀವು ಸ್ರಷ್ಟಿಸಿಕೊ೦ಡಿರುವ ಭಾವಪ್ರಪ೦ಚ ಇಷ್ಟವಾಯಿತು. ನಿಮ್ಮ ಎಲ್ಲಾ ಲೇಖನಗಳನ್ನು ಓದಿ ಮುಗಿಸಿಲ್ಲ. ಮತ್ತೆ ಬರುತ್ತೇನೆ.

ಜೋಮನ್ said...

ಯಾಕ್ರೀ ಇಷ್ಟೆಲ್ಲಾ ತಲೆಕೆಡಿಸಿಕೊಳ್ತೀರಾ, ನೀವು ಅರಾಮಾಗಿ, ಖುಷಿಯಿಂದ ಸಮಯ ಇದ್ದಾಗ ಬರೆಯುತ್ತಾ ಹೋಗಿ. ಬೇಸರವಾದಾಗ ರಜೆ ಹಾಕಿ. ನಿಮ್ಮ ಬ್ಲಾಗಿನಲ್ಲಿ ನೀವು ಲೇಖನ ಹಾಕಲು ಯಾವ ಸಂಪಾದಕರ ಒಪ್ಪಿಗೆಯೂ ಬೇಡ. ಪ್ರಕಟಗೊಳ್ಳುವುದಿಲ್ಲ ಎನ್ನುವ ಭಯವೂ ಬೇಡ.

ಅಂದಹಾಗೆ ಬರಹ ಚೆನ್ನಾಗಿದೆ. ಮುಂದುವರಿಯಲಿ...

ಪ್ರಿಯಾ ಕೆರ್ವಾಶೆ said...

ಸುರಗೀ,
ನಿಮ್ಮ ಪುಟ್ಟ ಭಾವಪ್ರಪಂಚ ಹೀಗೇ ತಲ್ಲೀನವಾಗಿ. ಅದರೊಳಗೆ ‘ಗಣ್ಯತೆ’ಯ ಗುರುತು ಖಂಡಿತಾ ಬಾರದು. ಹೌದು, ನಾವು ಹುಡುಗಿಯರು, ಇನ್ನೂ ನಮ್ಮದಲ್ಲದ ಐಡೆಂಟಿಟಿಯಲ್ಲಿ ಬದುಕುತ್ತಿದ್ದೇವೆ. ಆಧುನಿಕ ಅಂತ ಗುರುತಿಸಿಕೊಂಡ ದೇಶಗಳಲ್ಲಿ ನಮ್ಮ ಸ್ಥಿತಿ ಇನ್ನಷ್ಟು ಕುಸಿದಿದೆ...ಹೀಗೆ ನಾವು ಮಾತಿಗಾರಂಭಿಸಿದ ಕೂಡಲೇ ಸ್ತ್ರೀವಾದಿಯ ಹಣೆಪಟ್ಟಿ ಅಂಟಿಕೊಂಡು ಬಿಡುತ್ತದೆ. ಬಿಡಿ,ಚಕ್ರ ಹೀಗೇ ಇರುವುದಿಲ್ಲ

ಪ್ರಿಯಾ ಕೆರ್ವಾಶೆ said...

ಸುರಗೀ,
ನಿಮ್ಮ ಪುಟ್ಟ ಭಾವಪ್ರಪಂಚದಲ್ಲಿ ಹೀಗೇ ತಲ್ಲೀನರಾಗಿ. ಅದರೊಳಗೆ ‘ಗಣ್ಯತೆ’ಯ ಗುರುತು ಖಂಡಿತಾ ಬಾರದು. ಹೌದು, ನಾವು ಹುಡುಗಿಯರು, ಇನ್ನೂ ನಮ್ಮದಲ್ಲದ ಐಡೆಂಟಿಟಿಯಲ್ಲಿ ಬದುಕುತ್ತಿದ್ದೇವೆ. ಆಧುನಿಕ ಅಂತ ಗುರುತಿಸಿಕೊಂಡ ದೇಶಗಳಲ್ಲಿ ನಮ್ಮ ಸ್ಥಿತಿ ಇನ್ನಷ್ಟು ಕುಸಿದಿದೆ...ಹೀಗೆ ನಾವು ಮಾತಿಗಾರಂಭಿಸಿದ ಕೂಡಲೇ ಸ್ತ್ರೀವಾದಿಯ ಹಣೆಪಟ್ಟಿ ಅಂಟಿಕೊಂಡು ಬಿಡುತ್ತದೆ. ಬಿಡಿ,ಚಕ್ರ ಹೀಗೇ ಇರುವುದಿಲ್ಲ

ಲೋಕೇಶ್ ಗೌಡ said...

ಸುರಗಿ ಅವರೆ

ನಿಮ್ಮ ಡಾರ್ಕ್‌ ರೂಂ ಲೇಖನ ಅರ್ಥಪೂರ್ಣವಾಗಿದೆ. ನಮ್ಮಲ್ಲಿರುವ ಪ್ರತಿಭೆಗಿಂತ ನಮ್ಮ ಬ್ಯಾಕ್‌ಗ್ರೌಂಡ್‌ ಬಗ್ಗೆ ಯೋಚಿಸುವರೇ ಜಾಸ್ತಿ. ನಮ್ಮ ಹಿನ್ನೆಲೆ ಏನೇ ಇರಲಿ. ನಡೆ, ನುಡಿ ನಮ್ಮಿಂದ ಅವರಿಗಾಗಬೇಕಿರುವ ಕೆಲಸ ಎಷ್ಟು ಅಂತ ಯೋಚಿಸುವುದಿಲ್ಲ. ನೀವು ಹೇಳಿದ ಹಾಗೆ ನಾವು ಯಾರ ಕಡೆಯವರು. ಇವರು ಇಂತಹ ಊರಿನವರು, ಅವರ ಕುಟುಂಬದ ಸಂಬಂಧಿಯಾಗಿದ್ದರೆ ಅನುಕೂಲ ಎಂಬೆಲ್ಲ ಯೋಚನೆ ಮಾಡುತ್ತಾರೆ. ವ್ಯಾಸಂಗ ಮುಗಿಸಿ ಬೆಂಗಳೂರಿಗೆ ಬಂದಾಗ ನನಗೆ ಇಂತದ್ದೊಂದು ಅನುಭವವಾಯಿತು. ಒಂದು ಪತ್ರಿಕೆಯಲ್ಲಿ ಕೆಲಸ ಕೇಳಿಕೊಂಡು ಹೋದೆ. ಏನೋ ಬರೆಯಲಿಕ್ಕೆ ಕೊಟ್ಟರು. ಬರೆದು ಆಯಿತು. ನಿಮ್ಮ ಬರಹ ನಮ್ಮ ಎಡಿಟರ್‌ಗೆ ಓ ಕೆ ಆಗಿದೆ. ನಾಳೆ ಬರಲು ಹೇಳಿದ್ದಾರೆ ಎಂದು ಅವರ ಸಹೋದ್ಯೋಗಿ ನನಗೆ ಹೇಳಿ ಕಳಿಸಿದರು. ಇನ್ನೇನು ಕೆಲಸ ಸಿಕ್ಕೇ ಬಿಟ್ಟಿತು ಅಂತ ಎನ್ನುವಷ್ಟರಲ್ಲಿ ಅಲ್ಲಿ ಶುರುವಾಗಿದ್ದು, ನಿಮ್ಮದು ಯಾವ ಊರು, ನಿಮ್ಮ ಜಾತಿಯಾವುದು. ನಿಮ್ಮ ಕುಟುಂಬದವರು ಯಾರಾದರು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ. ಈ ಪ್ರಶ್ನೆಗಳಲ್ಲೆಲ್ಲ ನಾನು ಫೇಲಾದೆ. ನಂತರ ಅವರಿಂದ ಬಂದ ಪ್ರತಿಕ್ರಿಯೆ ಕೆಲಸ ಎಲ್ಲ ಭರ್ತಿಯಾಗಿದೆ ಎಂದು. ಇಂತಹ ಪೂರ್ವಾಗ್ರಹಪೀಡಿತರಿಗೆ ನಿಮ್ಮ ಡಾರ್ಕ್‌ ರೂಂ ಲೇಖನ ಅರ್ಥ ಪೂರ್ಣವಾಗಿದೆ ಸುರಗಿ ಅವರೆ.
ನಿಮ್ಮ ಮೌನ ಕಣಿವೆಯಲ್ಲಿ ನಿಮ್ಮ ಭಾವನೆಗಳೆಲ್ಲ ಗುಪ್ತಗಾಮಿನಿಯಾಗಿ ಹರಿದು ಬರಲಿ. ತಲಕಾವೇರಿಯಲ್ಲಿ ಹುಟ್ಟಿದ ಕಾವೇರಿ ಮಾತೆ ಸ್ವಲ್ಪ ದೂರು ಗುಪ್ತವಾಗಿ ಹರಿದು ಲೋಕ ಪ್ರಸಿದ್ಧವಾದ ರೀತಿ ನಿಮ್ಮ ಮೌನ ಕಣಿವೆ ನಾಡಿನಾದ್ಯಂತ ಪ್ರಸಿದ್ಧವಾಗಲಿ.
ಸುರಗಿ ಎಂಬ ಹೆಸರು ಮೌನವಾಗಿಯೇ ಇದೆ. ಯಾವ ಕಡೆಯಿಂದ ನೋಡಿದರೂ ಅದು ಮೌನ ಕಣಿವೆಯಾಗಿಯೇ ಇದೆ.

ಡಾರ್ಕ್‌ ರೂಂನಲ್ಲಿ ಹೆಚ್ಚು ಹೆಚ್ಚು ನಿಮ್ಮ ಭಾವನೆಗಳು ಹೊರಹೊಮ್ಮಲಿ. ಆಲ್‌ ದಿ ಬೆಸ್ಟ್‌ ಸುರಗಿ ಅವರೆ.
ಲೋಕೇಶ್‌ಗೌಡ

suragi said...

ನನ್ನ ಭಾವನೆಗಳಿಗೆ ಪ್ರತಿಸ್ಪಂದಿಸಿದ ನಿಮಗೆಲ್ಲಾ ತುಂಬು ಮನಸ್ಸಿನ ಕೃತಜ್ನತೆಗಳು.ನಿಮ್ಮ ಪ್ರೋತ್ಸಾಹದ ನುಡಿಗಳೇ ನನ್ನ ಮುಂದಿನ ಬರವಣಿಗೆಗೆ ಸ್ಪೂರ್ತಿ.

Harish - ಹರೀಶ said...

ನಿಜ, ನಿಮ್ಮ ಅಭಿಪ್ರಾಯ ಸರಿಯಾಗಿದೆ. ನಾನೂ ಕೂಡ ಬರೆಯಬೇಕೆಂದರೂ ಬರೆಯಲಾಗದ ಲೇಖನಗಳು ಸಾಕಷ್ಟಿವೆ.

ರೂಪಾ said...

ಸುರಗಿಯವರೇ ಇಂದು ಯಾವುದೋ ವಿಷ್ಯ ಹುಡುಕುತ್ತಾ ನಿಮ್ಮ ಬ್ಲಾಗಿಗೆ ಬಂದೆ.
ನಾನು ಓದುತ್ತಿರುವ ಮೊದಲ ಪುಟ ಇದು. ಈ ಪುಟ ಹಳೆಯದಾದರೂ ಈ ಹೇಳಿಕೆ ನವನವೀನ .
"ಇಷ್ಟಕ್ಕೂ ಬರವಣಿಗೆ ಅನ್ನೊದು ಬಿಡುಗಡೆ. ಅದು ಲೇಖಕನ ಮಡುಗಟ್ಟಿದ ಭಾವನೆಗಳ ಅಭಿವ್ಯಕ್ತಿ."

ಹೌದು
ಮನಸಿನೆಲ್ಲಾ ಭಾವನೆಗಳನ್ನ ಎಲ್ಲರ ಮಂದೆಯೂ ಕಕ್ಕಲಾಗುವುದಿಲ್ಲವೆಂದೇ ಡೈರಿಯಲ್ಲಿ ಎಲ್ಲವನ್ನೂ ಬರೆದುಕೊಳ್ಳುತ್ತಿದ್ದೆ. ಒಂದು ವರ್ಷದಿಂದ ಬ್ಲಾಗ್ ಲೋಕಕ್ಕೆ ಕಾಲಿಟ್ಟಿದ್ದೇನೆ ಆದರೂ ಆ ಡೈರಿಗೆ ಬ್ಲಾಗ್ ಸಮಾಂತರವಾಗಬಲ್ಲುದೇ ಅನ್ನುವುದೇ ಪ್ರಶ್ನೆಯಾಗಿ ಕಾಡುತ್ತದೆ ಒಮ್ಮೊಮ್ಮೆ.

ushakattemane said...

ಅವಧಿ ಈ ಬ್ಲಾಗಿನ ಬಗ್ಗೆ ಹೀಗೆ ಪ್ರತಿಕ್ರಿಯಿಸಿ ಈ ಲೇಖನವನ್ನು ಪ್ರಕಟಿತ್ತು...
ಮತ್ತು ಅಲ್ಲಿನ ಕಾಮೆಂತ್ ಗಳು ಹೀಗಿದ್ದವು.....
‘ಮೌನ ಕಣಿವೆ’ ಸುರಗಿ ಅವರ ಬ್ಲಾಗ್. ಸುರಗಿ ಯಾರು? ಈ ಪ್ರಶ್ನೆ ಬ್ಲಾಗ್ ಪ್ರಪಂಚದಲ್ಲಿ ಓಡಾಡುತ್ತಲೇ ಇದೆ. ಅನಾಮಿಕತೆ ಉಳಿಸಿಕೊಳ್ಳುವುದರ ಹಿಂದೆ ಇರುವ ಸ್ವಾತಂತ್ರ್ಯವನ್ನು ಸುರಗಿ ಇಲ್ಲಿ ವಿವರಿಸಿದ್ದಾರೆ. ಈ ಹಿಂದೆ ಎನಿಗ್ಮಾ ಬಳಗ ಈ ಅನಾಮಿಕತೆಯ ಬಗ್ಗೆ ಬರೆದ ಬರವಣಿಗೆಗೆ ಇದು ಪೂರಕ ಓದು-

ushakattemane said...

ಸಂದೀಪ್ ಕಾಮತ್ says:
October 30, 2008 at 9:23 am
ಎಲ್ಲಾ ಓಕೆ – ಅನಾಮಿಕ ಯಾಕೆ??

eshakumar h n says:
October 31, 2008 at 11:16 am
nivu helide reethiye nanage abivyakthiya nija roopu reshe enisithu nanna bhavanegalanu,manada tumulagalanu,madugattida talamalagalanu helalu yaava donne nayakana appane beku allave? dark room writer……

ಗಣೇಶ್.ಕೆ says:
October 31, 2008 at 7:54 pm
ಪುಟ್ಟ ಭಾವ ಪ್ರಪಂಚ ತೆರೆದಿಟ್ಟಿದ್ದಕ್ಕೆ ಧನ್ಯವಾದಗಳು. ಕೆಲವೊಮ್ಮೆ ಪೂರ್ವಾಗ್ರಹಗಳು ಯಾವಮಟ್ಟಿಗೆ ಕೆಲಸ ಮಾಡುತ್ತವೆ ಅನ್ನೋದಕ್ಕೆ ಇದು ನಿದರ್ಶನಗಳನ್ನ ಒದಗಿಸೋತ್ತೆ.

ಬರಹ ನಿರಂತರವಾಗಿರಲಿ. ಅನಾಮಿಕ ಅಥವಾ ನಾಮಧೇಯವೋ ಏನೇ ಇರಲಿ, ಭಾವ ಸರಿಗಮ ಮಿಡಿಯುತಿರಲಿ.

ಗಣೇಶ್.ಕೆ

Anuradha said...

ನಿಮ್ಮ ಭಾವ ಪ್ರಪಂಚದಲ್ಲಿ ಅಡ್ಡಾಡಿ ನಿನಗೆ ನೀನೇ ಗೆಳೆಯ ಎಂಬುದನ್ನು ಅರ್ಥ ಮಾಡಿಕೊಳ್ಳುವಾಸೆ...!

ಶ್ರೀವತ್ಸ ಕಂಚೀಮನೆ. said...

ನನ್ನದೊಂದು ಪುಟ್ಟ ಭಾವ ಪ್ರಪಂಚ. ಅಲ್ಲಿರುವುದು ನಾನು ಮತ್ತು ನನ್ನ ಭಾವನೆಗಳು ಮಾತ್ರ. ಅಲ್ಲಿಗೆ ಆಕ್ರಮಣವಾಗದಂತೆ ನಾನು ಎಚ್ಚರ ವಹಿಸುತ್ತೇನೆ. ’ನಿನಗೆ ನೀನೇ ಗೆಳೆಯ’ ಎಂಬ ಮಾತಿನಲ್ಲಿ ನನಗೆ ಸಂಪೂರ್ಣ ವಿಸ್ವಾಸವಿದೆ.
:::
ಪೂರ್ತಿ ಬರಹವೂ ತುಂಬಾ ತುಂಬಾ ಇಷ್ಟವಾಯಿತು...
ಕೊನೆಯ ಸಾಲುಗಳು ಅದು ಎಲ್ಲರದ್ದೂ...

Kishore Javali said...

ಇಷ್ಟಕ್ಕೂ ಬರವಣಿಗೆ ಅನ್ನೊದು ಬಿಡುಗಡೆ. ಅದು ಲೇಖಕನ ಮಡುಗಟ್ಟಿದ ಭಾವನೆಗಳ ಅಭಿವ್ಯಕ್ತಿ.

ಸಾಲುಗಳು ತುಂಬಾ ಹಿಡಿಸಿದವು
-ಕಿಶೋರ್