Monday, December 15, 2008

’ನನ್ನದಾಗಿದ್ದ ನನ್ನದಲ್ಲದ ಕ್ಷಣಗಳು’
ಕಳೆದ ರಾತ್ರಿ ರಾಧಿಕಾಳ ಫೋನ್ ಬಂದಾಗಿನಿಂದ ರಾಜೀವ, ರಾಜೀವನಾಗಿರಲಿಲ್ಲ. ಕುಳಿತಲ್ಲಿ, ನಿಂತಲ್ಲಿ ರಾಧೆಯ ಬಗ್ಗೆಯೇ ಯೋಚಿಸುತ್ತಿದ್ದ. ”ನನಗೆ ನಿನ್ನೊಡನೆ ತುಂಬಾ ಮಾತಾಡುವುದಿದೆ. ಮಂಗಳೂರಿಗೆ ಬರುತ್ತಿದ್ದೇನೆ. ಗುರುವಾರ ಬೆಳಿಗ್ಗೆ ಬಸ್ ಸ್ಟ್ಯಾಂಡಿನಲ್ಲಿ ನನಗಾಗಿ ಕಾದಿರುತ್ತಿಯಾ...?” ಎಂದು ಕೇಳಿದ್ದಳು.

ಇಪ್ಪತ್ತು ವರ್ಷಗಳ ನಂತರ ಅವಳ ಧ್ವನಿ ಕೇಳಿ ಪುಳಕಿತಗೊಂಡಿದ್ದ ರಾಜೀವ.

ಈಗ ರಾಧೆ ಹೇಗಿರಬಹುದು?. ತನ್ನ ನಂಬರು ಆಕೆಗೆ ಹೇಗೆ ಸಿಕ್ಕಿತು?.... ಎಂದೆಲ್ಲಾ ಪ್ರಶ್ನೆಗಳ ಮಳೆಗೆರೆದಾಗ ’ಅಲ್ಲಿಗೇ ಬರುತ್ತಿದ್ದೇನಲ್ಲಾ.. ಆಗ ಎಲ್ಲವನ್ನೂ ಹೇಳುತ್ತೇನೆ.’ ಎಂದು ಪೋನ್ ಕಟ್ ಮಾಡಿದ್ದಳು.

ಬದುಕು ಎಂದರೆ ಸಂಬಂಧಗಳ ಜೋಡಣೆ ಮತ್ತು ವಿಘಟನೆ. ಹಲವು ಬಾರಿ ಅದು ಬಿಡುಗಡೆಯ ಹಂಬಲವೂ ಆಗಿರುತ್ತದೆ.

ಒಂದು ಕಾಲದಲ್ಲಿ ರಾಧಿಕಾ ರಾಜೀವನ ಬದುಕಿನ ಒಂದು ಭಾಗವಾಗಿದ್ದಳು. ನಾಟಕ, ಯಕ್ಷಗಾನ, ಸೆಮಿನಾರು, ಕ್ಷೇತ್ರಕಾರ್ಯಗಳಲೆಲ್ಲಾ ಅವಳು ಅವನ ಸಂಗಾತಿ. ನಸುಗಪ್ಪು ಬಣ್ಣದ ಆ ಹುಡುಗಿ ರಾಜೀವನ ಜೀವದ ಗೆಳತಿಯಾಗಿದ್ದಳು. ಅವಳ ಗೈರು ಹಾಜರಿ ಅವನಲ್ಲಿ ಬ್ರಹ್ಮಾಂಡದಷ್ಟು ಶೂನ್ಯತೆಯನ್ನು ಉಂಟುಮಾಡುತ್ತಿತ್ತು. ರಜೆ ಬಂದಾಗಲೆಲ್ಲಾ ಕಂಬೈನ್ಡ್ ಸ್ಟಡಿಯ ನೆಪದಲ್ಲಿ ಅವಳನ್ನು ತನ್ನ ಮನೆಗೆ ಆಮಂತ್ರಿಸುತ್ತಿದ್ದ. ನಿಷ್ಕಪಟ ಮನಸ್ಸಿನ ರಾಧಿಕಳನ್ನು ಕಂಡರೆ ರಾಜೀವನ ತಾಯಿ ಅನುಸೂಯರಿಗೂ ವಿಶೇಷ ಮಮತೆ. ತಂಗಿ ಕುಸುಮ ತನಗೊಬ್ಬಳು ಜೊತೆಗಾತಿ ಸಿಕ್ಕಿದಳೆಂದು ಹಿರಿಹಿರಿ ಹಿಗ್ಗುತ್ತಿದ್ದಳು.

ರಾಜೀವನಿಗೆ ಯಕ್ಷಗಾನದ ಶೋಕಿ ಜಾಸ್ತಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ವಾರ್ಷಿಕೋತ್ಸವದಂದು ಹಳೆ ವಿದ್ಯಾರ್ಥಿಗಳವತಿಯಿಂದ ಸಾಮಾನ್ಯವಾಗಿ ಯಕ್ಷಗಾನ ಇದ್ದೇ ಇರುತ್ತಿತ್ತು. ರಾಜೀವನಿಗೆ ಪುಂಡು ವೇಷ ಕಟ್ಟಿಟ್ಟ ಬುತ್ತಿ. ರಾಧಿಕಾಳಿಗೂ ಅಷ್ಟಿಷ್ಟು ಕುಣಿತ ಬರುತಿತ್ತು. ಭಾಗವತಿಕೆಯ ಮೇಲೆ ಆಕೆಗೆ ವಿಶೇಷ ಆಸಕ್ತಿ. ಶಾಸ್ತ್ರೀಯ ಸಂಗೀತದ ಗಂಧಗಾಳಿಯೂ ಇಲ್ಲದವರು ಅಷ್ಟೊಂದು ಭಾವಪೂರ್ಣವಾಗಿ ಹಾಡುವುದನ್ನು ಕೇಳಿ ಆಕೆ ಅಚ್ಚರಿ ಪಡುತ್ತಿದ್ದಳು; ಮೈಮರೆಯುತ್ತಿದ್ದಳು.

’ತನಗೆ ಎಂಥ ಸಖಿಯಾಗಿದ್ದಳು ರಾಧೆ...!’ ಎಂದು ನಿಟ್ಟುಸಿರು ಬಿಡುತ್ತಾ ಮಗ್ಗುಲು ಬದಲಾಯಿಸಿದ ರಾಜೀವ. ಆಕೆಯನ್ನು ಮದುವೆಯಾಗಬೇಕೆಂದು ಒಂದು ದಿನವೂ ಕನಸು ಕಾಣಲಿಲ್ಲ. ವರ್ತಮಾನವೇ ಅಷ್ಟೊಂದು ಸುಂದರವಾಗಿದ್ದವು. ಭವಿಷ್ಯದ ಬಗ್ಗೆ ಯೋಚಿಸುವ ಪ್ರಮೆಯವೇ ಬರಲಿಲ್ಲ. ಆದರೆ ಆಕೆ ಮುಂದಿನ ತಿಂಗಳು ತನ್ನ ಮದುವೆ ಎಂದಾಗ ತಾನು ಒಳಗೊಳಗೆ ಕುಸಿದು ಹೋಗಿದ್ದು ಸತ್ಯ. ಅಂದು ಜುಲೈ ೧೮. ಆ ದಿನ ಈಗಲೂ ತನ್ನ ನೆನಪಿನಲ್ಲಿ ಹಚ್ಚಹಸಿರಾಗಿ ಉಳಿದಿದೆ ಅಂದರೆ ಅದಕ್ಕೆ ಏನರ್ಥ?

’ನನ್ನನು ಮದುವೆಯಾಗುತ್ತಿಯಾ?’ ಎಂದು ಕೇಳಿಬಿಡೋಣವೆಂದುಕೊಳ್ಳುತ್ತಿದ್ದ. ಆದರೆ ಇನ್ನೊಂದು ಮನಸ್ಸು ಪ್ರತಿರೋಧ ಒಡ್ಡುತ್ತಿತ್ತು. ಅದಕ್ಕೆ ಕಾರಣವೂ ಇತ್ತು. ಅವಳನ್ನು ಮೃದುವಾಗಿ ಬಳಸಿ ಎದೆಗೊರಗಿಸಿಕೊಡು ನೆತ್ತಿಯ ಮೇಲೆ ಗಲ್ಲವೂರುವವರೆಗೆ ಅವನ ಕಲ್ಪನೆಗಳು ಗರಿಗೆದರುತ್ತಿದ್ದವು. ತುಟಿಗೆ ತುಟಿ ಬೆಸೆದು ಮೈಗೆ ಮೈ ಹೊಸೆದು ರತಿಕ್ರೀಡೆಯಾಡುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಅವನಿಂದಾಗುತ್ತಿರಲಿಲ್ಲ. ತನ್ನ ಪುರುಷತ್ವದಲ್ಲೇನಾದರೂ ಕೊರತೆಯಿರಬಹುದೇ, ಎಂದು ಆತ ಯೋಚಿಸಿದ್ದೂ ಇದೆ. ಅದನ್ನು ಪರೀಕ್ಷಿಸಿ ’ಹಾಗೇನೂ ಇಲ್ಲ’ ಎಂಬುದನ್ನು ದೃಢಪಡಿಸಿಕೊಂಡದ್ದೂ ಆಯಿತು.

ತನ್ನ ಬದುಕಿನಲ್ಲಿ ರಾಧೆಯ ಸ್ಥಾನ ಏನು? ಎಂದು ರಾಜೀವ ತೊಳಲಾಡುತ್ತಿರುವಾಗ ಇತ್ತ ರಾಧಿಕ ನಗುನಗುತ್ತಲೇ ಮದುವೆ ಮಾಡಿಕೊಂಡು ಬೆಂಗಳೂರು ಸೇರಿದಳು. ಇವನು ಮಂಗಳೂರಿನಲ್ಲೇ ಲೆಕ್ಚರರ್ ಆಗಿ ಕೆಲಸಕ್ಕೆ ಸೇರಿಕೊಂಡ. ಮದುವೆಯೂ ಆಯ್ತು. ಪತ್ನಿ ವಸುಂಧರ ಸುಸಂಸ್ಕೃತ ಮಹಿಳೆ. ಚುರುಕಾದ ಇಬ್ಬರು ಮಕ್ಕಳು. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು?

ಸಾಮಾನ್ಯರಿಗೆ ಇಷ್ಟೇ ಸಾಕಾಗಿತ್ತೇನೋ, ಆದರೆ ರಾಜೀವನಿಗೆ ಇನ್ನೇನೋ ಬೇಕಾಗಿತ್ತು. ಸಂಜೆಯಾಯಿತೆಂದರೆ ಆವರಿಸಿಕೊಳ್ಳುವ ಶೂನ್ಯ. ಖಾಲಿತನ, ಪರಿಪೂರ್ಣವಾದ ಸಂಬಂಧವೊಂದರ ಹುಡುಕಾಟ. ’ರಾಧೆ ಇದ್ದಿದ್ದರೆ...’ ನಿಟ್ಟುಸಿರು...
"ನಿದ್ದೆ ಬಂದಿಲ್ವಾ?" ಎನ್ನುತ್ತಾ ವಸುಂಧರ ಮಗ್ಗುಲು ಬದಲಾಯಿಸಿ ಗಂಡನನ್ನು ತಬ್ಬಿಕೊಂಡು ಅವನ ಭುಜ ತಟ್ಟುತ್ತಾ ನಿದ್ದೆ ಹೋದಳು.

ಅತ್ತ ಎಚ್ಚರವೂ ಅಲ್ಲದ ಇತ್ತ ನಿದ್ರೆಯೂ ಅಲ್ಲದ ಸ್ಥಿತಿಯಲ್ಲಿರುವಾಗಲೇ ಅಲಾರಂ ಸದ್ದಾಯಿತು. ಎದ್ದವನೇ ಟೀ ಮಾಡಿಕೊಂಡು ಕುಡಿದು ಕಾರು ತಗೊಂಡು ಬಸ್ ಸ್ಟ್ಯಾಂಡಿಗೆ ಬಂದು ಬೆಂಗಳೂರು ಬಸ್ಸಿಗಾಗಿ ಕಾಯತೊಡಗಿದ. ರಾಧೆ ಈಗ ಹೇಗಾಗಿರಬಹುದು? ತಾಯ್ತನ, ಗೃಹಕೃತ್ಯಗಳು ಹುಡುಗಿಯರಿಗೆ ಸ್ಥೂಲಕಾಯವನ್ನು ತರುತ್ತದೆ ಎಂದುಕೊಳ್ಳುತ್ತಿರುವಾಗಲೇ ಬಸ್ ಬಂತು. ಅರೇ.... ಅದು ರಾಧೆಯಲ್ಲವೇ?

ಜುಬ್ಬ ಪೈಜಾಮ ತೊಟ್ಟ, ಸ್ವಚ್ಚಂದವಾಗಿ ಹಾರುತ್ತಿರುವ ಕೂದಲನ್ನು ಎಡಗೈನಿಂದ ಹಿಂದಕ್ಕೆ ಸರಿಸುತ್ತಾ ತನ್ನೆಡೆಗೆ ಮುಗುಳ್ನಕ್ಕ ಬಳ್ಳಿ ದೇಹದ ಯುವತಿಯನ್ನು ರಾಧಿಕಳೆಂದು ಗುರುತು ಹಿಡಿಯಲು ರಾಜೀವನಿಗೆ ಒಂದು ಕ್ಷಣ ಗಲಿಬಿಲಿಯಾಯಿತು. ಅವಳೇ ಮುಂದೆ ಬಂದು "ಹಾಯ್ ರಾಜಿ" ಎಂದು ಕೈ ಹಿಡಿದುಕೊಂಡಳು. ಅವಳನ್ನೇ ದಿಟ್ಟಿಸಿ ನೋಡುತ್ತಾ, ’ಎಷ್ಟು ಸುಂದರಿಯಾಗಿದ್ದಿಯಾ ನೀನು’ ಎಂದು ಮೆಲ್ಲನೆ ಅವಳ ಭುಜ ತಟ್ಟಿದ ರಾಜೀವ. ’ನೀನೆನೂ ಕಮ್ಮಿ ಇಲ್ಲ.’ ಎಂದು ತೋಳು ಹಿಡಿದು ತನ್ನೆಡೆಗೆ ತಿರುಗಿಸಿಕೊಂಡು ಅವನನ್ನೇ ದಿಟ್ಟಿಸಿ ’ಹಿಂದೆ ನೀನು ಹೀಗಿರಲಿಲ್ಲ’ ಎನ್ನುತ್ತಾ ಅವನ ಅಂಗೈಗಳನ್ನು ಮೃದುವಾಗಿ ಹಿಸುಕಿದಳು.

ಇಬ್ಬರೂ ಸ್ವಲ್ಪ ಹೊತ್ತು ಮೌನವಾದರು. ’ನಿನ್ನ ಪ್ರೋಗ್ರಾಂ ಏನೂಂತ ಗೊತ್ತಾಗಿಲ್ಲಾ. ಯಾವುದಾದರೂ ಹೋಟೇಲ್...’ಎಂದು ಅನುಮಾನಿಸುತ್ತಲೇ ಕೇಳಿದ ರಾಜೀವ. ತಕ್ಷಣ ರಾಧಿಕಳ ಮುಖ ಬಾಡಿ ಹೋಯಿತು. ’ನಿನ್ನ ಮನೆಗೆ ನಾ ಬರಬಾರದೇ..ನಿನ್ನ ಹೆಂಡ್ತಿಯೇನಾದರೂ.....?’ ಎಂದು ಅವನ ಮುಖ ನೋಡಿದಳು. ರಾಜೀವ ಮರುಮಾತಾಡದೆ ಅವಳ ಕೈಯಿಂದ ಬ್ಯಾಗ್ ತೆಗೆದುಕೊಂಡು ಎಡಗೈಗೆ ಬದಲಾಯಿಸಿ ಬಲಗೈಯನ್ನು ಅವಳೆಡೆಗೆ ಚಾಚಿದ.

ಕಾರು ಮುಂದಕ್ಕೆ ಚಲಿಸುತ್ತಿತ್ತು. ಮೌನ ಮಾತಾಡುತ್ತಿತ್ತು. ರಾಧಿಕ ಮೆಲ್ಲನೆ ಬಲಕ್ಕೆ ವಾಲಿ ಆತನ ಭುಜದ ಮೇಲೆ ತಲೆಯಿಟ್ಟಳು. ಅವನು ಎಡಗೈನಿಂದ ಅವಳ ಭುಜ ಬಳಸಿದ. ಅವಳು ಹಾಗೆಯೇ ಕಣ್ಮುಚ್ಚಿದಳು.

ಕಾರು ಮನೆಯ ಮುಂದೆ ನಿಂತಾಗ ರಾಧಿಕ ಭಾವಲೋಕದಿಂದ ಹೊರಬಂದಳು. ವಸುಂಧರ ಮನೆಯಿಂದ ಹೊರಬಂದಳು. ಸೇಹಿತ ಬರುತ್ತಾನೆಂದಿದ್ದರು, ಈಗ ನೋಡಿದರೆ ಸೇಹಿತೆ ಬಂದಿದ್ದಾಳೆ. ಯಾರಿರಬಹುದು? ಎಂದುಕೊಳ್ಳುತ್ತಲೇ ಸ್ವಾಗತಿಸಲು ಕಾರಿನ ಹತ್ತಿರ ಬಂದಳು.
’ಇವಳು ನನ್ನ ಬಾಲ್ಯ ಸೇಹಿತೆ ರಾಧಿಕಾ’ ಎಂದು ಪತ್ನಿಗೆ ಪರಿಚಯಸಿದ ರಾಜೀವ ರಾಧಿಕಳತ್ತ ತಿರುಗಿ, ’ಇವಳು ನನ್ನ ಗೃಹಲಕ್ಷ್ಮಿ, ವಸುಂಧರ..’ ಎಂದು ನಾಟಕೀಯವಾಗಿ ಪರಚಯಿಸಿದ.
ವಸುಂಧರ ರಾಧಿಕಳ ಕೈ ಹಿಡಿದು ಬರಮಾಡಿಕೊಂಡಳು.

ರಾಜೀವನ ಮೊದಲ ಮಗಳು ರಂಜಿತಾ ಸುಳ್ಯಕ್ಕೆ ವಾಸ್ತವ್ಯದ ಸಮ್ಮರ್ ಕ್ಯಾಂಪಿಗೆ ಹೋಗಿದ್ದಳು. ಅವಳ ರೂಮಿನಲ್ಲಿ ರಾಧಿಕಳ ಲಗೇಜನಿಟ್ಟು ಅಣಿ ಮಾಡಿದಳು ವಸುಂಧರಾ. ಸ್ನಾನ ತಿಂಡಿಗಳಾದವು. ರಾದಿಕಳಂತೆ ವಸುಂಧರಾ ಕೂಡಾ ಒಳ್ಳೆಯ ಅಭಿರುಚಿಯುಳ್ಳ ಮಾತುಗಾತಿಯಾಗಿದ್ದಳು. ಇಬ್ಬರೂ ಬಹುಕಾಲದ ಗೆಳತಿಯರಂತೆ ಹೊಂದಿಕೊಂಡುಬಿಟ್ಟರು.

ಇಬ್ಬರೂ ಹಂಪನಕಟ್ಟೆಗೆ ಹೋಗಿ ತಾಜ ಮೀನು ತಂದು ರುಚಿಯಾದ ಅಡುಗೆ ಮಾಡಿದರು. ಊಟ ಮುಗಿದ ಒಡನೆಯೇ ರಾಧಿಕಳಿಗೆ ಗಡದ್ದಾದ ನಿದ್ರೆ ಬಂತು. ನಿದ್ದೆಯಿಂದ ಎಚ್ಚೆತ್ತಾಗ ಹಬೆಯಾಡುವ ಚಹ ಜೊತೆಗೆ ಬಾಳೆಕಾಯಿ ಬಜ್ಜಿಯೂ ಬಂತು. ಇನ್ನೊಬ್ಬರ ಕೈನಲ್ಲಿ ಉಪಚಾರ ಹೇಳಿಸಿಕೊಂಡು ತಿಂಡಿ ತಿನ್ನುವುದರಲ್ಲಿ ಎಷ್ಟು ಗಮ್ಮತ್ತಿದೆ ಎಂದುಕೊಳ್ಳುತ್ತಲೇ ರ್‍ಆಧಿಕಾ ತಿಂಡಿ ತಿಂದಳು.

ಸಂಬಂಧಗಳನ್ನು ಸಂಭಾಳಿಸುವುದರಲ್ಲಿ ರಾದಿಕ ಬಹು ಜಾಣೆ. ತನ್ನ ಆತ್ಮೀಯ ವರ್ತುಲದೊಳಗಿನ ಯಾರಾದರೊಬ್ಬ ಗಂಡಸಿನ ಬಗ್ಗೆ ತನಗೇನಾದರು ಅನೂಹ್ಯವಾದ ಸೆಳೆತವೇನಾದರು ಹುಟ್ಟಿಬಿಟ್ಟರೆ ಅದನ್ನು ಅಲ್ಲಿಯೇ ಚಿವುಟಲು ಪ್ರಯತ್ನಿಸುತ್ತಾಳೆ. ಅದು ನಿಸರ್ಗ ಸಹಜವಾದ ಆಕರ್ಷಣೆ ಎಂಬುದು ಆಕೆಗೆ ಗೊತ್ತಿದೆ. ಆದರೆ ಸೆಳೆತದ ಗುಂಗು ಆವರಿಸಿಕೊಂಡರೆ ಅವಳು ಅದೀರ್‍ಅಳಾಗುತ್ತಾಳೆ. ತಕ್ಷಣ ಆಕೆ ಅತನ ಪತ್ನಿಯ ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸುತ್ತಾಳೆ. ಒಂದು ಹೆಣ್ಣು ಇನ್ನೊಂದು ಪರಿಚಿತ ಹೆಣ್ಣಿಗೆ ಮೋಸ ಮಾಡಲಾರಳು ಎಂಬುದು ಅವಳ ನಂಬಿಕೆ. ’ತಾಯ್ತನ’ ಹಾಗೆ ಮಾಡಲು ಬಿಡಲಾರದು.

ರಾಜೀವನೆಡೆಗಿನ ಆಕರ್ಷಣೆ ಆ ತೆರನಾದ್ದಲ್ಲ. ಅದು ವ್ಯಾಖ್ಯೆಗೆ ನಿಲುಕದ್ದು. ಬಹುಶಃ ಆತ್ಮವನ್ನು ಹುಡುಕಿ ಬಂದ ಜೀವದ ಆಕರ್ಷಣೆ.

ಪೈಂಟಿಂಗ್ ಕ್ಲಾಸಿಗೆ ಹೋಗಿದ್ದ ಕಾರ್ತಿಕ ಬಂದ ನಂತರ ಎಲ್ಲರೂ ಸೇರಿ ಬೀಚಿಗೆ ಹೋದರು. ಇಪ್ಪತ್ತು ವರ್ಷಗಳ ಹಿಂದೆ ಓಡಾಡಿದ ಜಾಗದಲ್ಲಿ ಈಗ ಮತ್ತೊಮ್ಮೆ ರಾದಿಕಾ, ರಾಜೀವ ಜತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಅಂದಿಗೂ ಇಂದಿಗೂ ಅಪಾರ ಅಂತರವಿತ್ತು. ವಸುಂಧರೆಗೂ ಇದು ಗೊತ್ತಾಗುತ್ತಿತ್ತು.ಹಾಗಾಗಿ ಆಕೆ ಕುರುಕು ತಿಂಡಿ ತರುತ್ತೇನೆಂದು ಮಗನೊಡನೆ ಅಂಗಡಿಯತ್ತ ಹೋದಳು.

ರಾಜೀವನಿಗೆ ಆಕೆ ಇಲ್ಲಿಗೆ ಯಾಕೆ ಬಂದಿದ್ದಾಳೆ ಎಂಬ ಚಿಕ್ಕ ಕುತೂಹಲವಿತ್ತು. ಆದರೆ ಕೇಳಲು ಮುಜುಗರ. ಏನಾದರು ಮಾತಾಡಬೇಕಲ್ಲಾ ಎನಿಸಿ
’ಮಕ್ಕಳೇನು ಮಾಡುತ್ತಿದ್ದಾರೆ?’ ಎಂದ.
’ಮೊದಲನೆಯವಳು ಸೆಕೆಂಡ್ ಪಿಯುಸಿ, ಎರಡನೆಯವನು ಎಂಟನೇ ಕ್ಲಾಸ್. ಇಬ್ಬರೂ ತುಂಬಾ ಬುದ್ಧಿವಂತರು. ಆ ಮಟ್ಟಿಗೆ ನಾನು ಪರಮ ಸುಖಿ’.
’ಆ ಮಟ್ಟಿಗೆ’ ಶಬ್ದ ರಾಜೀವನಿಗೆ ಇನ್ನೇನೋ ರವಾನಿಸಿದಂತಾಯಿತು.
’ಯಶವಂತ ಹೇಗಿದ್ದಾರೆ?’
’ಚೆನ್ನಾಗಿದ್ದಾರೆ. ಪೀಲ್ಡ್ ನಲ್ಲಿ ಒಳ್ಳೆ ಹೆಸರಿದೆ. ಪ್ರಾಮಾಣಿಕ. ತನ್ನ ಕೆಲಸದ ಮೇಲಿರುವಷ್ಟು ನಿಷ್ಟೆ, ಶ್ರದ್ಧೆ, ಇನ್ಯಾವುದರ ಮೇಲೂ ಇಲ್ಲ. ಇದೇ ನಮ್ಮಿಬ್ಬರ ನಡುವೆ.....’ ಎಂದವಳೇ ಅರ್ಧಕ್ಕೆ ನಿಲ್ಲಿಸಿದಳು.
ರಾಜೀವನಿಗೆ ಮಾತು ಬದಲಾಯಿಸಬೇಕೆನಿಸಿತು.
’ನೀನು ಇಲ್ಲಿಗೆ ಬಂದ ಕಾರಣ....’ಮುಜುಗರದಿಂದಲೇ ತಡೆ ತಡೆದು ಕೇಳಿದ.
ನಡೆಯುತ್ತಿದ್ದವಳು ತಟ್ಟನೆ ನಿಂತು ಅವನನ್ನೇ ದಿಟ್ಟಿಸುತ್ತಾ,’ ಯಾಕೋ? ನಿನ್ನನ್ನು ಕಾಣಲು ನಾನು ಬರಬಾರದೇ?’
ರಾಜೀವ ಕಿರುನಗು ನಕ್ಕು ಅವಳ ತಲೆಗೊಂದು ಮೊಟಕಿದ. ಅವಳು ಅವನ ತೋಳು ಚಿವುಟಿದಳು. ಇಬ್ಬರೂ ಏನನ್ನೋ ನೆನಸಿಕೊಂಡು ಜೋರಾಗಿ ನಕ್ಕರು.
’ಏನದು ಅಷ್ಟೊಂದು ನಗು’ ಎನ್ನುತ್ತಾ ಕೈಯಲ್ಲಿ ಬೇಲ್ ಪುರಿ ಹಿಡಿದು ಬಂದ ವಸುಂಧರಾ ಅವರ ಜೊತೆ ಸೇರಿದಳು.
ಎಲ್ಲರೂ ರುದ್ರಪಾದೆ ಹತ್ತಿ ಕಡಲಿಗೆ ಮುಖಮಾಡಿ ಕುಳಿತು ಬೇಲ್ ಪುರಿ ತಿನ್ನುತ್ತಾ ಮುಳುಗುತ್ತಿರುವ ಸೂರ್ಯನ ಕೆಂಬಣ್ಣ ತೆರೆಗಳೊಡನೆ ಚೆಲ್ಲಾಟವಾಡುತ್ತಿರುವುದನ್ನು ನೋಡುವುದರಲ್ಲಿ ಮಗ್ನರಾದರು.
ರಾದಿಕಳಿಗೆ ಕಡಲೆಂದರೆ ಹುಚ್ಚು ಮೋಹ. ಅಬ್ಬರದ ತೆರೆಗಳನ್ನು ದಡಕ್ಕಪ್ಪಳಿಸುವ ಪರಿ ನೋಡಿದರೆ ’ನನ್ನ ಮುಂದೆ ನೀನು ಅಲ್ಪ. ತಾಕತ್ತಿದ್ದರೆ ನನ್ನನ್ನು ಗೆಲ್ಲು ಬಾ’ ಎಂದು ಸವಾಲು ಹಾಕುತ್ತಿರುವಂತೆ ಭಾಸವಾಗುತ್ತಿತ್ತು.

ಕಾಲೇಜು ದಿನಗಳಲ್ಲಿ ಕಡಲಿಗೆ ಬಂದಾಗಲೆಲ್ಲಾ ಮರಳ ಮೇಲೆ ’ ಸಮುದ್ರರಾಜ, ಐ ಲವ್ ಯೂ’ ಎಂದು ಬರೆಯುವುದು, ಅದನ್ನು ಅಲೆಗಳು ಅಳಿಸಿ ಹಾಕುತ್ತವೆಯೇನೋ ಎಂದು ಕಾತರದಿಂದ ನೋಡುವುದು, ಅಳಿಸಿದರೆ ಸಮುದ್ರರಾಜನಿಗೆ ತನ್ನಲ್ಲಿ ಪೇಮವಿದೆ ಎಂದು ಸಂಭ್ರಮವಿಸುವುದು, ಅಳಿಸದಿದ್ದರೆ ತನ್ನ ಬಗ್ಗೆ ಉಪೇಕ್ಷೆಯಿದೆ ಎಂದು ಮನಸ್ಸು ಬಾಡಿಸಿಕೊಳ್ಳುವುದು.
ಅದನ್ನೆಲ್ಲ ನೆನೆಸಿಕೊಂಡು ರಾಧಿಕಳ ಮುಖದಲ್ಲಿನಗು ಲಾಸ್ಯವಾಡಿತು.ಇನ್ನೊಮ್ಮೆ ಬಂದಾಗ ಅಂದಿನ ಎಲ್ಲಾ ಗೆಳೆಯ-ಗೆಳತಿಯರ ವಿಳಾಸ ಪತ್ತೆ ಮಾಡಿ ಸಂಬಂಧಗಳನ್ನು ಪುನರ್ ಜೋಡಿಸಬೇಕು ಎಂದುಕೊಂಡಳು.

ಯಶವಂತನ ಜೊತೆ ಬಂದು ಈ ರುದ್ರಪಾದೆಯ ಮೇಲೆ ಕುಳಿತು ಸಮುದ್ರದ ರುದ್ರ ರಮಣೀಯ ದೃಶ್ಯವನ್ನು ನೋಡಬೇಕೆಂದು ಎಷ್ಟೊಂದು ಹಂಬಲಿಸಿದ್ದಳು. ಮದುವೆಯಾದಂದಿನಿಂದ ತೀರಾ ಇತ್ತೀಚಿನವರೆಗೂ ಕಂಡಂತ ಕನಸದು. ಆದರೆ ಅದು ಕನಸಾಗಿಯೇ ಉಳಿಯಿತು. ಅವಳಿಂದ ನಿಟ್ಟುಸಿರು ಹೊಮ್ಮಿತು.
’ರಾತ್ರಿಯಿಡಿ ಪ್ರಯಾಣ ಮಾಡಿ ನಿನ್ಗೆ ಆಯಾಸ ಆಗಿರ್ಬೇಕು. ನಾಳೆ ಬೇಕಾದ್ರೆ ಬರೋಣ.’ ಎನ್ನುತ್ತಾ ಎದ್ದ ರಾಜೀವ.
’ನಾಳೆ ರಾತ್ರಿ ಬೆಂಗಳೂರಿಗೆ ವಾಪಾಸ್ಸಾಗ್ಬೇಕು’ ಎನ್ನುತ್ತಾ ಬಟ್ಟೆ ಕೊಡವಿಕೊಂಡಳು.
’ಒಂದೆರಡು ದಿನ ಇದ್ದು ಹೋಗಬಾರದೇ? ನಮ್ಮವರಿಗೆ ನೀವೊಬ್ಬರೇ ಆತ್ಮೀಯರೆಂದು ಅವರು ಆಗಾಗ ಹೇಳುತ್ತಿದ್ರು. ನಿಮ್ಮನ್ನು ನೋಡುವ ಕುತೂಹಲವೂ ನನಗಿತ್ತು. ಈಗ ನನಗೂ ನೀವು ಹತ್ತಿರದವರೆನಿಸುತ್ತಿದೆ’ ಎಂದು ವಸುಂಧರೆಯೂ ಒತ್ತಾಯಿಸಿದಳು.
’ಇನ್ನೊಮ್ಮೆ ಖಂಡಿತವಾಗಿಯೂ ಬರುತ್ತೇನೆ’ ಅವಳ ಧ್ವನಿ ಕಂಪಿಸಿದ್ದು ರಾಜೀವನ ಅನುಭವಕ್ಕೆ ಬಂತು.
ಯಾಕೆ, ನನ್ನ ರಾಧೆ ನೆಮ್ಮದಿಯಾಗಿಲ್ಲವೇ?
ಮರುದಿನ ಬೆಳಿಗ್ಗೆ ಎಷ್ಟೇ ಒತ್ತಾಯ ಮಾಡಿದರೂ ರಾಧಿಕ ನಿಲ್ಲಲಿಲ್ಲ. ಕಳುಹಿಸಿ ಕೊಡಲೆಂದು ಸಿದ್ದನಾದ ರಾಜೀವನನ್ನು ನೋಡಿ, ’ರಂಜಿತಾಳ ಮನೆಗೆ ಹೋಗುತ್ತಿದ್ದೇನೆ. ನೀನೂ ಬಂದರೆ ಚೆನ್ನಾಗಿರುತ್ತಿತ್ತು. ಎಂದಳು.
’ರಂಜಿತಾ ಇಲೆ ಇದ್ದಾಳಾ? ನನಗೆ ಗೊತ್ತೆ ಇರಲಿಲ್ಲಾ..’ಎಂದ ರಾಜೀವ.
’ಅವರೊಬ್ಬರೇ ಹುಡುಕಿಕೊಂಡು ಹೋಗ್ಬೆಕಲ್ಲಾ. ನೀವೂ ಜೋತೆಯಲ್ಲಿ ಹೋಗಿ’ ಎಂದಳು. ವಸುಂಧರಾ.
’ಹೆಂಗಸರ ಕಷ್ಟ ಹೆಂಗಸರಿಗೆ ಮಾತ್ರ ಅರ್ಥ ಆಗುತ್ತೆ, ಅಲ್ವಾ ವಸು.’ ಎಂದು ನಕ್ಕಳು ರಾಧಿಕಾ.
ರಾಧಿಕಾಳನ್ನು ಪ್ರೀತಿಯಿಂದ ವಸುಂಧರಾ ಬೀಳ್ಕೊಟ್ಟಳು.
ಕಾರು ಎಕ್ಕೂರನ್ನು ದಾಟಿ ಪಂಪ್ ವೆಲ್ ಹತ್ತಿರಕ್ಕೆ ಬಂದಾಗ ’ರಂಜಿತಳ ಮನೆ ಯಾವ ಕಡೆಗೆ’ ಎಂದ ರಾಜೀವ.
ರಾಧಿಕಾ ಅವನನ್ನೇ ಆಳವಾಗಿ ದಿಟ್ಟಿಸಿ ನೋಡಿ,’ಹೋಟೇಲ್ ನವರತ್ನಕ್ಕೆ ಹೋಗೋಣ’ ಎಂದಳು.
ಯಾಕೆ ಎಂದು ಪ್ರಶ್ನಿಸಬೇಕೆನಿಸಿದರೂ ಹಿಂದಿನ ದಿನಗಳ ಅವಳ ಹಟಮಾರಿತನ ನೆನಪಾಗಿ ಹೋಟೇಲಿನತ್ತ ಕಾರು ತಿರುಗಿಸಿದ. ಹೋಟೇಲ್ ಮುಂದೆ ಕಾರು ನಿಂತಿತು. ತಾನೇ ರಿಸೆಪ್ಷನ್ ಬಳಿ ಹೋಗಿ ರೂಂ ಪಡೆದು ಲಿಪ್ಟ್ ನತ್ತ ನಡೆದಳು. ರಾಜೀವ ಮೌನವಾಗಿ ಹಿಂಬಾಲಿಸಿದನು.

ರೂಮಿಗೆ ಬಂದವಳೇ ಹಾಸಿಗೆ ಮೇಲೆ ದೊಪ್ಪೆಂದು ಬಿದ್ದಳು. ರಾಜೀವನಿಗೆ ಏನೂ ತೋಚದೆ ಕಿಟಿಕಿಯನ್ನು ತೆರೆಯುತ್ತಾ ದೂರದಲ್ಲಿ ಕಾಣುತ್ತಿರುವ ಸಮುದ್ರವನ್ನೊಮ್ಮೆ ಆಕೆಯನ್ನೊಮ್ಮೆ ದಿಟ್ಟಿಸತೊಡಗಿದನು. ಸ್ವಲ್ಪ ಹೊತ್ತಿನ ನಂತರ ನಿಧಾನವಾಗಿ ರಾಜೀವನ ಹತ್ತಿರ ಬಂದ ರಾಧಿಕ ಅವನ ಕೈ ಹಿಡಿದುಕೊಂಡಳು. ಪವಿತ್ರ ಮುಂಜಾವಿನಲ್ಲಿ ಪಾರಿಜಾತ ಪುಷ್ಪ ಮೆಲ್ಲನೆ ಧರೆಯನ್ನು ಸ್ಪರ್ಶಿಸುವಂತೆ ಮೆಲ್ಲನೆ ಅವನ ಎದೆಗೊರಗಿದಳು. ಅರೆಗಣ್ಣು ಮುಚ್ಚಿದ ಆಕೆ ಈ ಲೋಕದಲ್ಲಿರುವಂತೆ ಕಾಣುತ್ತಿರಲಿಲ್ಲ. ರಾಜೀವ, ಅವಳನ್ನು ಮೃದುವಾಗಿ ತೋಳುಗಳಿಂದ ಬಳಸಿ ಮಂಚದ ಬಳಿ ತಂದು ಹಾಸಿಗೆಯ ಮೇಲೆ ಮಲಗಿಸಿ ಮೇಲೇಳಬೇಕೆನ್ನುವಷ್ಟರಲ್ಲಿ ಆಕೆ ಆತನ ಕೈ ಹಿಡಿದು ಕುಳ್ಳಿರಿಸಿದಳು. ಅವನು ಏನೋ ಹೇಳಲೆಂದು ಬಾಯ್ತೆರೆದಾಗ ಅವಳು ಮಾತಾಡದಂತೆ ತಡೆದಳು.

ಆ ದಿವ್ಯ ಘಳಿಗೆಯನ್ನು ಪೂರ್ತಿಯಾಗಿ ಅನುಭವಿಸುತ್ತಿರುವಂತೆ ಅವನತ್ತ ಸರಿದು ತೊಡೆಯ ಮೇಲೆ ತಲೆಯಿಟ್ಟಳು. ಹೊಟ್ಟೆಯಲ್ಲಿರುವ ಮಗುವಿನಂತೆ ಕಾಲುಗಳನ್ನು ಮಡಿಚಿ, ಗಲ್ಲದ ಮೇಲೆ ಕೈಗಳನ್ನಿಟ್ಟುಕೊಂಡು ಮಗ್ಗುಲಾಗಿ ಮಲಗಿದಳು. ರಾಜೀವನಿಗೆ ಏನೂ ತೋಚದೆ ಸುಮ್ಮನೆ ಅವಳ ಕೂದಲು ಸವರುತ್ತಾ ಕುಳಿತುಕೊಂಡ.

ಸ್ವಲ್ಪ ಹೊತ್ತಿನಲ್ಲಿ ತನ್ನ ಪ್ಯಾಂಟ್ ಒದ್ದೆಯಾದ ಅನುಭವವಯ್ತು. ಬಗ್ಗಿ ನೋಡಿದರೆ ಮುಚ್ಚಿದ ಕಣ್ಣುಗಳಿಂದ ನೀರು ಧಾರೆಯಾಗಿ ಹರಿಯುತ್ತಿದೆ. ಬಹುಕಾಲದಿಂದ ತಡೆಹಿಡಿದಿದ್ದ ಭಾವನೆಗಳ ಮಹಾಪೂರವಿರಬೇಕು. ಹರಿದುಬಿಡಲಿ. ಸ್ವಾಭಿಮಾನದ ಹೆಣ್ಣು. ಎಲ್ಲಿಯೂ, ಯಾರೆದುರೂ ಇದುವರೆಗೆ ತನ್ನ ಅಂತರಂಗವನ್ನು ಬಿಚ್ಚಿಟ್ಟಿರಲಾಳು ಎಂದುಕೊಳ್ಳುತ್ತಾ, ಬಲಗೈನಿಂದ ಅವಳನ್ನು ಬಾಚಿ ತನ್ನ ಹೊಟ್ಟೆಯೆಡೆಗೆ ಇನ್ನಷ್ಟು ಒತ್ತಿಕೊಂಡ.

ಎಷ್ಟೋ ಹೊತ್ತು ರಾಜೀವ ಹಾಗ್ಯೇ ಕುಳಿತಿದ್ದನು. ಕಾಲುಗಳು ಚೋಮುಗಟ್ಟಿ ನೋಯಲಾರಂಭಿಸಿದಾಗ ಮೆಲ್ಲಗೆ ಅವಳ ಮುಖದೆಡೆಗೆ ಬಾಗಿದ. ಶತಮಾನಗಳಿಂದ ನಿದ್ದೆಯೇ ಮಾಡಿಲ್ಲವೇನೋ ಎಂಬಂತೆ ಶಾಂತಳಾಗಿ ನಿದ್ರಿಸುತ್ತಿದ್ದಳು. ರಾಜೀವನಿಗೆ ಅಕ್ಕರೆ ಉಕ್ಕಿ ಬಂತು. ಮೆಲ್ಲನೆ ಬಾಗಿ ಅವಳ ಹಣೆಯ ಮೇಲೆ ಹೂ ಮುತ್ತನ್ನಿತ್ತ. ಆಕೆ ನಿದ್ದೆಯಲ್ಲಿಯೇ ಹೊರಳಿ ಇನ್ನಷ್ಟು ಹತ್ತಿರಕ್ಕೆ ಸರಿದಳು.

ಇವಳ ಸಂಸಾರದಲ್ಲೇನಾದರು ತೊಡಕಿರಬಹುದೇ? ಎಂದು ಚಿಂತಿಸುತ್ತಲೇ ತುಂಬಾ ಹೊತ್ತು ಸುಮ್ಮನೆ ಕುಳಿತ ರಾಜೀವ. ನೀರು ಕುಡಿಯಬೇಕೆನಿಸಿತು. ಮೆಲ್ಲನೆ ಅವಳನ್ನು ಹಾಸಿಗೆಯಲ್ಲಿ ಮಲಗಿಸಿ ಗಂಟಲಿಗೆ ನೀರು ಸುರಿದುಕೊಂಡ. ಪ್ಯಾನ್ ಹಾಕಿ ಕುರ್ಚಿಯಲ್ಲಿ ಒರಗಿಕೊಂಡ.

ಎಚ್ಚರ ಆದಾಗ ಮದ್ಯಾಹ್ನವಾಗಿತ್ತು. ’ಎನೋ ಕುಂಭಕರ್ಣ, ಬೇಗ ಎದ್ದು ರೆಡಿಯಾಗು. ಸಂಜೆ ಮರವಂತೆಗೆ ಹೋಗ್ಬೇಕು’ ಎಂದಳು ರಾಧಿಕ. ರಾಜೀವನಿಗೆ ಆಶ್ಚರ್ಯವಯ್ತು; ಸ್ವಲ್ಪ ಹೊತ್ತಿನ ಹಿಂದಿನ ರಾಧಿಕ ಇವಳೆನಾ...?

ಮರವಂತೆಗೆ ಮಂಗಳೂರಿನಿಂದ ಎರಡೂವರೆ ಘಂಟೆಗಳ ಪಯಣ. ದಾರಿಯುದ್ದಕ್ಕೂ ತಮ್ಮ ಕಾಲೇಜು ದಿನಗಳನ್ನು ಆ ಕಾಲದ ಸೇಹಿತರನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಹಾದಿ ಸವೆದದ್ದೇ ಗೊತ್ತಾಗಲಿಲ್ಲ.

ಸೂರ್ಯ ಮುಳುಗುವ ವೇಳೆಗೆ ಅವರು ಮರವಂತೆ ಬೀಚಿನಲ್ಲಿದ್ದರು. ಕಡಲಂಚಿನಲ್ಲಿ ಮರೆಯಾಗುತ್ತಿದ್ದ ರಕ್ತವರ್ಣದ ದಿನಕರನನ್ನು ಕಣ್ತುಂಬಿಸಿಕೊಂಡರು. ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಏಕಕಾಲದಲ್ಲಿ ನೋಡಬಹುದಾದ ಅಪರೂಪದ ಸ್ಥಳ ಇದು. ತಾವು ಒಂದಷ್ಟು ಜನ ಪ್ರೆಂಡ್ಸ್ ಹುಣ್ಣಿಮೆಯ ರಾತ್ರಿಯಲ್ಲಿ ಇಡೀ ದಿನ ಇಲ್ಲಿ ಕಳೆದ ರಸಘಳಿಗೆಗಳನ್ನು ಅವರು ನೆನಪಿಸಿಕೊಂಡರು.

ಒಂದು ಬದಿಯಲ್ಲಿ ಶಾಂತವಾಗಿ ಹರಿಯುವ ಸೌಪರ್ಣೀಕಾ ನದಿ. ಇನ್ನೊಂದು ಬದಿಯಲ್ಲಿ ಬೊರ್ಗೆರೆಯುತ್ತಿರುವ ಕಡಲು. ಸುತ್ತೆಲ್ಲಾ ಹಾಲು ಚೆಲ್ಲಿದಂತ ಬೆಳದಿಂಗಳು. ಕಡಲ ಕೊರೆತ ತಡೆಯಲು ಹಾಕಿದ ಬಂಡೆಗಲ್ಲುಗಳ ಮೇಲೆ ಕುಳಿತ ಆ ಜೋಡಿ. ಬಹುಶಃ ಅವರು ಶಾಪಗ್ರಸ್ತ ಕಿನ್ನರ ದಂಪತಿಗಳೇ ಇರಬೇಕು!
[ಆರು ವರ್ಷಗಳ ಹಿಂದೆ ಕಥೆ ಬರೆಯುವ ಪ್ರಯತ್ನದಲ್ಲಿ ಮೂಡಿ ಬಂದ ಬರಹ ಇದು. ]

11 comments:

ತೇಜಸ್ವಿನಿ ಹೆಗಡೆ- said...

ಸಮಾನಾಂತರ ರೇಖೆಗಳೆರಡು ಎಂದೂ ಒಂದನ್ನೊಂದು ಸೇರವು ಆದರೆ ಒಂದು ರೇಖೆ ಅಳಿದರೂ ಸಮಾನಾಂತರ ರೇಖೆಗಳೆನಿಸವು. ಕಥೆ ಚೆನ್ನಾಗಿದೆ. ಆದರೆ ತುಸು ಅವಸರದಿಂದ ಕೊನೆಗೊಳಿಸಿದಂತೆ ಅನಿಸಿತು ಅಷ್ಟೇ.

sunaath said...

ಗಂಡು ಹಾಗೂ ಹೆಣ್ಣಿನ ನಡುವೆ ಎಷ್ಟೆಲ್ಲ ಭಾವನಾತ್ಮಕ ಸಂಬಂಧಗಳು ಇರಬಹುದು ಎನ್ನುವದನ್ನು ತುಂಬಾ ಚೆನ್ನಾಗಿ ನಿರುಪಿಸಿದ್ದೀರಿ

ಶರತ್ ಚಂದ್ರ said...

Abrupt ending ಅಂತ ಅನ್ನಿಸಿದ್ರೂ ಆಮೇಲೆ ಇದೆ ಸರಿ ಅಂತ ಅನ್ನಿಸ್ತಾ ಇದೆ.

"Some relations define you...But you can't define them, no matter how hard you try..." ಅಲ್ವಾ..?!

Naveen_an_INDIAN said...

Madam... Thumba Chennagide..

Harish - ಹರೀಶ said...

ಸರಾಗವಾಗಿ ಚಲಿಸುತ್ತಿದ್ದ ಗಾಡಿ ಇದ್ದಕ್ಕಿದ್ದಂತೆ ಡೆಡ್ ಎಂಡ್ ಮುಂದೆ ಹೋಗಿ ನಿಂತಂತಾಗಿದೆ.. ಈ ಕಥೆಯನ್ನು ಮುಂದುವರೆಸಿ ಇನ್ನೂ ಚೆಂದದ ಮುಕ್ತಾಯ ಕೊಡಲು ಪ್ರಯತ್ನಿಸಿ... :-)

shreedevi kalasad said...

ಮತ್ತಷ್ಟು ಕತೆಗಳು ಇದ್ದರೆ ಬೇಗ ಬೇಗ ಹೇಳಿ

ಸಿಮೆಂಟು ಮರಳಿನ ಮಧ್ಯೆ said...

tumbaa chennaagide..!

ishtavaayitu..

ಗುರುಬಾಳಿಗ said...

ಈ ಕತೆಯನ್ನು ಉದ್ದಕ್ಕೆ ಎಷ್ಟು ಬೇಕಾದರೂ ಓದುತ್ತಲೇ ಇರಬಹುದು. ಈಗ ಇನ್ನೇನು ಅರಳಲಿದೆ ಎಂದು ಅನಿಸುವ ಮಲ್ಲಿಗೆ ಮೊಗ್ಗುಗಳ ಫ್ರೆಶ್ ನೆಸ್ಸ್ ರಾಧಿಕೆಯ ವ್ಯಕ್ತಿತ್ವದಲ್ಲಿ ನೀವು ಕಟ್ಟಿ ಕೊಟ್ಟಿದ್ದಿರಿ. ಇದು ರಾಧಿಕೆಯ ಕತೆ. ರಾಜೀವನದ್ದಲ್ಲ.
ಕೊನೆಗೂ ಹೇಳಬೇಕಾದ್ದನ್ನು ಹೇಳದೆ ರಾಧಿಕೆ ಹೊರಟು ಹೋದಂತೆ, ಓದುಗನಿಗೂ ಆಪ್ಯಾಯಮಾನ ಇರುವಿಕೆಯನ್ನಷ್ಟೇ ಫೀಲ್ ಮಾಡಿಸುತ್ತಾ ಕತೆ ಮುಗಿಯುವಾಗ ಏನಾಯಿತೆಂದರೆ ಏನೇನೂ ಇಲ್ಲ.

suragi said...

ನಿಜ ಜೀವನದ ಘಟನೆಯನ್ನಾದರಿಸಿದ ಕಾದಂಬರಿಯೊಂದನ್ನು ಬರೆಯಬೇಕೆಂದುಕೊಂಡಿದ್ದೇನೆ.
ನನ್ನ ಶೈಲಿ, ನಿರೂಪಣೆ ಓದುಗರಿಗೆ ಹಿಡಿಸಬಹುದೇ ಎಂಬ ಕುತೂಹಲಕ್ಕಾಗಿ ಒಂದೆರಡು ಸಣ್ಣ ಕಥೆ ಬರೆದೆ.
”ಹೋಗು ದಕ್ಷನ ಮಗಳೇ’’ಬಿಂಬದಿಂದ ಬಿಂಬಕ್ಕೆ’ ಹಾಗು ಈ”ನನ್ನದಾಗಿದ್ದ ನನ್ನದಲ್ಲದ ಕ್ಷಣಗಳು’
ತೇಜಸ್ವಿನಿ, ಸುನಾತ್, ಶರತ್ ಚಂದ್ರ, ನವೀನ್, ಹರೀಶ್, ಶ್ರೀದೇವಿ,ಪ್ರಕಾಶ್ ಹೆಗ್ಡೆ,ಗುರುಬಾಳಿಗಾ ನಿಮ್ಮೆಲ್ಲರ ಕಮೆಂಟ್ ಗಳಿಂದ ನಾನೂ ಬರೆಯಬಲ್ಲೆನೆಂಬ ಧೈರ್ಯ ಮೂಡುತ್ತಿದೆ.
ನಿಮಗೆಲ್ಲರಿಗೂ ಧನ್ಯವಾದಗಳು.
ಆದರೂ ಇಷ್ಟು ಆಪ್ಯಾಯಮಾನವಾಗಿ ಕಮೆಂಟ್ ಮಾಡಬಾರದು ಗುರು, ಮನಸ್ಸು ಚಂಚಲಗೊಳ್ಳುತ್ತೆ!
ಇದರ ಜೊತೆಗೆ ಹಿಂದಿನ ಕಥೆಗಳಿಗೆ ಕಮೆಂಟ್ ಮಾಡಿದ ಪ್ರಮೋದ್, ಗಣೇಶ, ಹುಲಕೊಡ್, ಪುಚ್ಚಪ್ಪಾಡಿ ಹಾಗು ಪ್ರಶಾಂತ್ ನಾತುರವರಿಗೂ ಕೃತಜ್ನತೆಗಳು.

ಶ್ರೀವತ್ಸ ಕಂಚೀಮನೆ. said...

ಭಾವಕ್ಕೆ ಮಾತ್ರ ದಕ್ಕಿ - ಭಾವಗಳಲ್ಲೇ ಉಳಿದುಹೋಗುವ - ಭಾವನಾತ್ಮಕ ಗೆಳೆತನದ ಬರಹ...
ಇಷ್ಟವಾಯಿತು...

Krishna Murthy said...

ಮರೆತವಳು ಮತ್ತೆ ಬರಬುಹುದಾದರೆ ಮತ್ತೆ ಅವಳನ್ನು ನೊಡಬುಹುದಾದರೆ, ಮರವ೦ತೆಗೆ ಹೊಗಬಹುದು. ಕಥೆಯೆ೦ದು ಓದಿದರೆ ವಿಮರ್ಷೆ ಮಾಡಬಹುದೇನೊ. ಅನುಬವಿಸಿದ್ದಾದ್ದರಿ೦ದ ಪದ ಪದಗಳೂ ದಿರ್ಘ,