Monday, December 29, 2008

ಮಲೀನಗೊಳ್ಳದಿರಲಿ ಭಾವಕೋಶಯುಗಾದಿಯನ್ನು ವರ್ಷದ ಆರಂಭ ಎಂದು ನಮ್ಮ ಪರಂಪರೆಯಿಂದ ಒಪ್ಪಿಕೊಂಡು ಬಂದರೂ ಜನವರಿ ಒಂದನ್ನು ಹೊಸ ವರ್ಷದ ಸಂಭ್ರಮಾಚರಣೆಯಾಗಿಸುವುದು ಇತ್ತೀಚೆಗೆ ಜನಪ್ರಿಯವಾಗುತ್ತಲಿದೆ.

ಮನುಷ್ಯ ಯಾವಾಗಲೂ ಭವಿಷ್ಯದಲ್ಲಿಯೇ ಬದುಕುತ್ತಿರುತ್ತಾನೆ. ಯಾವತ್ತೂ ಆತ ವರ್ತಮಾನದಲ್ಲಿ ಸುಖಿಯಲ್ಲ. ಮುಂದೆ ಇನ್ನೂ ಒಳ್ಳೆಯ ದಿನಗಳು ಬರಬಹುದು ಎಂಬ ನಿರೀಕ್ಷೆಯಲ್ಲಿ ಬದುಕಿನ ಸವಾಲುಗಳನ್ನು ಎದುರಿಸುತ್ತಾ ಹೋಗುತ್ತಾನೆ.

ವರ್ಷದ ಕೊನೆಯಲ್ಲಿ ನಾವೀಗ ನಿಂತಿದ್ದೇವೆ. ಬರಲಿರುವ ವರ್ಷ ಹರ್ಷದಾಯಕವಾಗಿರಬಹುದೆಂಬ ನಿರೀಕ್ಷೆ ಎಲ್ಲರದ್ದು. ಅದಕ್ಕಾಗಿ ಅನೇಕರು ಹೊಸ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಆದರೆ ಅವುಗಳಲ್ಲಿ ಬಹಳಷ್ಟು ಕಾರ್ಯರೂಪಕ್ಕೆ ಬರುವುದೇ ಇಲ್ಲ. ಅವು ಮುಂದಿನ ವರ್ಷಾಂತ್ಯಕ್ಕೆ ಮತ್ತೆ ಹೊಸ ನಿರ್ಣಯಗಳಾಗಿ ಆವರ್ತನಗೊಳ್ಳುತ್ತವೆ.

ನನ್ನಲ್ಲೂ ಹೊಸ ನಿರ್ಣಯಗಳಿವೆ. ಅವುಗಳನ್ನಿಲ್ಲಿ ದಾಖಲಿಸುವುದರಲ್ಲಿ ಸ್ವಾರ್ಥವಿದೆ. ಮಾತುಗಳು ಗಾಳಿಯಲ್ಲಿ ಹಾರಿ ಹೋಗುತ್ತವೆ; ಯೋಚನೆಗಳು ಮನಸ್ಸಿನಯೇ ಇಂಗಿ ಹೋಗುತ್ತವೆ. ಅವುಗಳನ್ನು ಬರಹರೂಪಕ್ಕಿಳಿಸಿದರೆ ಅವು ದಾಖಲೆಗಳಾಗುತ್ತವೆ. ಅದಕ್ಕೆ ಬದ್ಧತೆ ಪ್ರಾಪ್ತವಾಗುತ್ತದೆ. ಅವುಗಳನ್ನು ಹೀಗೆ ಸಾರ್ವಜನಿಕಗೊಳಿಸಿದಾಗಲಂತೂ ಅದು ಸಾಮಾಜಿಕ ಜವಾಬ್ದಾರಿಯ ರೂಪ ಪಡೆದುಕೊಳ್ಳುತ್ತದೆ.

ಬೆಂಗಳೂರಿನಲ್ಲಿ ನನ್ನಂತವಳಿಗೆ ಕನಸುಗಳು ಹುಟ್ಟಿಕೊಳ್ಳುವುದು ಕಷ್ಟ. ಏನು ಮಾಡಬೇಕಾದರೂ ಬೇರೆಯವರನ್ನು ಅವಲಂಬಿಸಬೇಕಾದುದು ಅನಿವಾರ್ಯ. ಹಾಗಾಗಿ ಓದದೆ ಉಳಿಸಿಕೊಂಡ ಪುಸ್ತಕಗಳನ್ನು ಓದಬೇಕೆಂದುಕೊಂಡಿದ್ದೇನೆ. ಅದರ ಪೂರ್ವಭಾವಿಯಾಗಿ ನಿನ್ನೆ ತಾನೆ ಮಾರ್ಕೆಟಿಗೆ ಹೋಗಿ ಆರಡಿ ಎತ್ತರ ಮೂರಡಿ ಅಗಲದ ನಾಲ್ಕು ಬುಕ್ ಶೆಲ್ಪ್ ಗಳನ್ನು ತಂದು ಪುಸ್ತಕಗಳನ್ನು ನೀಟಾಗಿ ಜೋಡಿಸಿ ಇಟ್ಟೆ. ಪುಸ್ತಕದ ರಾಶಿ ಎಷ್ಟಿದೆಯೆಂದರೆ ಇನ್ನೂ ಇಂತಹ ಮೂರು ಶೆಲ್ಪ್ ಗಳಾದರೂ ಬೇಕು.

ಎಲ್ಲಿಯೋ ಹುಟ್ಟಿ ಇನ್ನೆಲ್ಲಿಯೋ ಬೆಳೆದು, ಮತ್ತೆಲ್ಲೋ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿ, ಕೊನೆಗೆಲ್ಲೋ ನೆಲೆ ಕಂಡುಕೊಳ್ಳುವುದು ಬದುಕಿನ ಸೋಜಿಗಗಳಲ್ಲೊಂದು. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ.

ಹಲವು ಬಾರಿ ನಾವು ವ್ಯವಸ್ಥೆಯೊಡನೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಮಾಡಿಕೊಳ್ಳಬೇಕು. ಇಲ್ಲವೇ ವ್ಯವಸ್ಥೆಯೊಳಗಿದ್ದುಕೊಂಡೇ ಅದನ್ನು ಬದಲಾಯಿಸುವ ಪ್ರಯತ್ನ ಮಾಡಬೇಕು. ವ್ಯವಸ್ಥೆಯ ಲೋಪದೋಶಗಳನ್ನು ಸರಿಪಡಿಸುವ ಪ್ರಯತ್ನಕ್ಕೆ ಸಾಂಘಿಕ ಹೋರಾಟದ ಅಗತ್ಯ ಇದೆ. ಅದು ಒಂಟಿ ದನಿಯಾದರೆ ವ್ಯವಸ್ಥೆ ನಮ್ಮನ್ನು ರಿಜೆಕ್ಟ್ ಮಾಡುತ್ತಾ ಹೋಗುತ್ತದೆ. ಆಗ ನಾವು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲೇ ಬೇಕು. ಇಲ್ಲವಾದರೆ ನಮ್ಮ ಅಸ್ತಿತ್ವಕ್ಕೆ ಕಾರಣವೂ ಇರುವುದಿಲ್ಲ; ಬೆಲೆಯೂ ಬರುವುದಿಲ್ಲ. ಹಾಗೆ ನಾನು ಕಂಡು ಕೊಂಡ ಹಾದಿ ’ಬ್ಯಾಕ್ ಟು ನೇಚರ್’ ಅಂದರೆ ಕೃಷಿ. ನೆಲದೊಡನೆ ಮಾತು. ಗಿಡ-ಮರಗಳ ಒಡನಾಟ, ಖಗ-ಮೃಗಗಳ ಮಿಂಚು, ನದಿಯ ಸಂಗೀತ. ಅಲ್ಲೀಗ ನನ್ನ ಕನಸುಗಳು ಮೊಳಕೆಯೊಡೆಯುತ್ತಿವೆ.

ನಾನು ಮಲೆನಾಡಿನ ಸೆರಗಿನಲ್ಲಿ, ಕಪಿಲೆಯ ದಂಡೆಯಲ್ಲಿ ಜಮೀನು ಖರಿದಿಸಿ ಒಂದು ವರ್ಷವಾಯಿತು. ಮೂರು ಎಕ್ರೆ ಫಲ ಬರುವ ಅಡಿಕೆ ತೋಟವಿದೆ. ತೆಂಗು, ಮಾವು, ಹಲಸು, ಹುಣಸೆ, ಬಾಳೆ ಸೇರಿದಂತೆ ಎಲ್ಲಾ ರೀತಿಯ ಹಣ್ಣಿನ ಗಿಡಗಳಿವೆ. ಹದಗೆಟ್ಟ ಸ್ಥಿತಿಯಲ್ಲಿದ್ದ ಅದನ್ನು ಕಳೆ ಕಿತ್ತು ಗೊಬ್ಬರ ಹಾಕಿ ನಳನಳಿಸುವಂತೆ ಮಾಡಿದ್ದಾಯ್ತು. ಜೊತೆಗೆ ಇನ್ನೂರೈವತ್ತು ಕೊಕ್ಕೊ ಗಿಡ ನೆಡಿಸಿದೆ.
ಮುಂದಿನ ವರ್ಷ ಇಡೀ ಜಮೀನಿಗೆ ಸೋಲಾರ್ ಬೇಲಿ ಹಾಕಿಸಬೇಕು.ಖಾಲಿ ಇರುವ ಒಂದೆಕ್ರೆ ಜಾಗದಲ್ಲಿ ಉಳ್ಳಾಲ-೩ ಗೇರು ಸಸಿ ಹಾಕಬೇಕೆಂದಿದ್ದೇನೆ. ಅಡಿಕೆ ಗಿಡಗಳು ತುಂಬಾ ಹಳೆಯದಾಗಿ ಮುಗಿಲು ಮುಟ್ಟುತ್ತಿವೆ. ಹಾಗಾಗಿ ಮದ್ದು ಬಿಡಲು, ಅಡಿಕೆ ಕೊಯ್ಯಲು ಕಷ್ಟವಾಗುತ್ತಿದೆ. ಅದಕ್ಕಾಗಿ ರೀಪ್ಲಾಂಟ್ ಮಾಡಲು ನಿರ್ಧರಿಸಿದ್ದೇನೆ. ಕಳೆದ ವರ್ಷವೇ ಎರಡು ಸಾವಿರ ಮಂಗಳ ಗಿಡಗಳ ಬೀಜ ಹಾಕಿಟ್ಟಿದ್ದೇನೆ. ಕಳೆದ ವಾರ ಹೊಂಡ ತೆಗೆಯಲು ಕಾಂಟ್ರಾಕ್ಟ್ ಕೊಟ್ಟು ಬಂದಿದ್ದೇನೆ. ಇಡೀ ತೋಟಕ್ಕೆ ಸ್ಪಿಂಕ್ಲರ್ ಹಾಕುವ ಯೋಚನೆಯೂ ಇದೆ. ಸ್ವಲ್ಪ ನೇಂದ್ರ ಬಾಳೆ ಗಡ್ಡೆ ಹಾಕಬೇಕು.

ಇನ್ನೈದು ವರ್ಷಕ್ಕೆ ಅದನ್ನು ನಂದನ ವನವಾಗಿಸುವ ಕನಸು ನನ್ನದು. ಬಳಲಿದ ಮೈ ಮನಸ್ಸುಗಳು ಅಲ್ಲಿ ಬಂದು ಜೀವ ಚೈತನ್ಯ ತುಂಬಿಕೊಳ್ಳಬೇಕು.ಅಲ್ಲಿಗೆ ನನ್ನ ಆಪ್ತರೆಲ್ಲಾ-ನಿಮ್ಮನ್ನೂ ಸೇರಿಸಿ-ಆಗಾಗ ಬರುತ್ತಿರಬೇಕು. ಒಂದು ಧ್ಯಾನ ಮಂದಿರ...ಲೈಬ್ರರಿ...ಮ್ಯೂಸಿಕ್....ಇನ್ನೂ ಏನೇನೆನೋ ಕನಸು ಕನವರಿಕೆಗಳು.

ಇದು ನಾನು ಕಂಡ; ಕಾಣುತ್ತಿರುವ ಕನಸು. ವೈಯಕ್ತಿಕ ಮಟ್ಟದಲ್ಲಿರುವ ಈ ಕನಸು ನನಸಾಗುವುದು ನನ್ನ ಶ್ರದ್ಧೆ ಮತ್ತು ಪರಿಶ್ರಮದ ಮೇಲೆ ನಿಂತಿದೆ. ಅಂದರೆ ಇಂತಹ ಕೆಲಸ ಕಾರ್ಯಗಳು ವ್ಯಕ್ತಿಯೊಬ್ಬನ ದೈಹಿಕ ಶ್ರಮ ಮತ್ತು ಕ್ರಿಯಾಶೀಲತೆಯನ್ನಷ್ಟೇ ಬೇಡುತ್ತವೆ. ಆದರೆ ಭಾವಕೋಶದ ವಿಚಾರ ಹಾಗಲ್ಲ.

ಭಾವಕೋಶಕ್ಕೆ ಸಂಬಂಧಪಟ್ಟಂತೆ ಎರಡು ಸಂಗತಿಗಳನ್ನಿಲ್ಲಿ ಹೇಳುತ್ತಿದ್ದೇನೆ. ನನ್ನ ’ಡಾರ್ಕ್ ರೂಂನಲ್ಲಿ ಕುಳಿತ್ಯಾಕೆ ಬರೆಯಬೇಕು?’ ಎಂಬ ಬರಹಕ್ಕೆ ಕಮೆಂಟ್ ಬರೆಯುತ್ತಾ ಸುಧನ್ವಾ ಹೇಳುತ್ತಾರೆ, ’ನಮ್ಮ ಭಾವ ಪ್ರಪಂಚವನ್ನು ಉಳಿಸಿಕೊಳ್ಳುವುದೇ ಈಗಿನ ದೊಡ್ಡ ಕೆಲಸ’. ಜೋಗಿ ತಮ್ಮ ಇತ್ತಿಚೆಗಿನ ಕಾದಂಬರಿ ’ಯಾಮಿನಿ’ ಯಲ್ಲಿ ತಮ್ಮ ಬಗ್ಗೆ ಬರೆಯುತ್ತಾ,”ಹಳೆಯ ಗೆಳೆಯರು ಧ್ರುವತಾರೆ. ಹೊಸಬರು ನಾಳಿನಾಚೆಯ ಬಾಗಿಲು” ಎನ್ನುತ್ತಾರೆ. ಅಂದರೆ ಏನರ್ಥ? ನಮ್ಮ ಭಾವಕೋಶ ಮಲೀನಗೊಳ್ಳುತ್ತಿದೆ! ಅದನ್ನು ಕಾಯ್ದುಕೊಳ್ಳುವ ಭರದಲ್ಲಿ ನಾವೆಲ್ಲಾ ಒಬ್ಬಂಟಿಗರಾಗುತ್ತಿದ್ದೇವೆ; ದ್ವೀಪವಾಗುತ್ತಿದ್ದೇವೆ.

ನಿಜ. ನಮಗೊಂದು ಖಾಸಗಿ ಬದುಕಿದೆ. ಅಲ್ಲಿ ಒಳ್ಳೆಯ ಮನಸ್ಸುಗಳು ಮಾತ್ರ ಹರಿದಾಡುತ್ತಿರಲಿ ಎಂದು ಆಶಿಸುವುದು ತಪ್ಪಲ್ಲ. ಆದರೆ ಅಂತವರನ್ನು ಎಲ್ಲಿಂದ ಹುಡುಕಿ ನಮ್ಮವರನ್ನಾಗಿಸಿಕೊಳ್ಳೋಣ? ಅದು ಒಳ್ಳೆಯ ಪುಸ್ತಕಗಳನ್ನು ಹುಡುಕಿ ತಂದು ಶೆಲ್ಪ್ ನಲ್ಲಿಟ್ಟುಕೊಂಡಷ್ಟು ಸುಲಭವಲ್ಲ. ಒಳ್ಳೆಯ ಗೆಳೆಯರನ್ನು ಪಡೆಯುವುದಕ್ಕೆ ಪುಣ್ಯ ಮಾಡಿರಬೇಕು. ಅಂತಹ ಪುಣ್ಯ ಹೊಸ ವರ್ಷದಲ್ಲಿ ಎಲ್ಲರಿಗೂ ಲಭಿಸಲಿ. ಯಾರ ಭಾವಕೋಶವೂ ಛಿದ್ರಗೊಳ್ಳದಿರಲಿ.

6 comments:

Chamaraj Savadi said...

ಭಾವಕೋಶ ಮಲಿನವಾಗಲು ಸಾಧ್ಯವೇ ಇಲ್ಲ. ಏಕೆಂದರೆ, ಅದನ್ನು ನಿಯಂತ್ರಿಸುವವರು ನಾವೇ ತಾನೆ? ಮನಸ್ಸೆಂಬುದು ಮನೆಯಂತೆ. ನಿತ್ಯ ಗುಡಿಸಲೇ ಬೇಕು, ಒರೆಸಲೇ ಬೇಕು. ಅಚ್ಚುಕಟ್ಟುತನ ಇದ್ದಷ್ಟೂ ಮನೆ ನೀಟು. ಗೆಳೆತನದ ವೃತ್ತದಲ್ಲಿ ಹಳಬರು ಹೋಗುತ್ತಾರೆ, ಹೊಸಬರು ಬರುತ್ತಾರೆ. ಕೂಡುಕಳೆಯುವ ಲೆಕ್ಕಾಚಾರದ ನಂತರ ಸಂಖ್ಯೆ ದೊಡ್ಡದೇ ಆಗಿರುತ್ತದೆ.

ಅನುಮಾನ ಬಂದರೆ, ನಿಮ್ಮ ಭಾವಕೋಶದಲ್ಲಿ ಇನ್ನೂ ಉಳಿದಿರುವವರನ್ನು ಎಣಿಸಿ ನೋಡಿ. ಕಡಿಮೆಯಾಗಿದ್ದರೆ ನೀವೆಲ್ಲೋ ತಪ್ಪಿದ್ದೀರಿ ಅಂತಲೇ ಅರ್ಥ.

ಹೊಸ ವರ್ಷದಲ್ಲಿ ಲೆಕ್ಕ ತಪ್ಪದಿರಲಿ.

- ಚಾಮರಾಜ ಸವಡಿ

sunaath said...

ಶ್ರದ್ಧೆಯಿಂದ ಪ್ರಯತ್ನಿಸುತ್ತೇನೆ;ಫಲ ಕೊಡುವವನು ಅವನು!

ತೇಜಸ್ವಿನಿ ಹೆಗಡೆ- said...

ಭಾವಕೋಶ ಮಲಿನವಾಗಲು ಸಾಧ್ಯ. ಅದನ್ನು ನಾವು ಮಾತ್ರ ಮಲಿನಗೊಳಿಸಬಲ್ಲೆವು. ಹಾಗಾಗಿ ನಮ್ಮ ಮನಸಿನ ಭಾವನೆಗಳಲ್ಲಿ ಒಳಿತನ್ನು ಹೆಕ್ಕಿ(ಆದಷ್ಟು) ಮುಂದಿನ ವರುಷಕೆ ಕಾಲಿಡೋನ. ಹಳತಾದ, ಹಳಸಲಾದ ಭಾವನೆಗಳನ್ನೆಲ್ಲಾ ಮೌನಕಣಿವೆಯೊಳಗೆ ಹಾಕಿ ಅದಕ್ಕೆ ಮರೆವಿನ ಬೀಗ ಜಡಿದು ಬಿಡೋಣ. ಏನಂತೀರಾ? :)

ನಿಜವಾಗಿಯೂ ಹೊಸ ವರುಷದಾರಂಭ ಯುಗಾದಿಯಿಂದ. ಆದರೂ ಶುಭಾಶಯ ತಿಳಿಸಲು ಯಾವ ದಿನ/ಆಚರಣೆಯ ಹಂಗಿಲ್ಲ ಬಿಡಿ..:)

ನಿಮಗೂ ಕೂಡಾ ಹೊಸವರುಷ ತರಲಿ ಹರುಷ ಎಂದು ಹಾರೈಸುವೆ.

suragi said...

.ಸವಡಿ, ತೇಜಸ್ವೀನಿ
ನಿಮ್ಮ ಕಮೆಂಟ್ ತುಂಬಾ ಇಷ್ಟವಾಯ್ತು. ಮನಸ್ಸು ತುಂಬಿ ಬಂತು.
ಸುನಾಥ್,
’ಅವನು’ ಯಾರು? ನನ್ನಲ್ಲಿಗೂ ಕಳುಹಿಸ್ತೀರಾ?
ಭರವಸೆಯ ನುಡಿಗಳು ಸಾಧನೆಯ ಹಾದಿಯ ಊರುಗೋಲುಗಳು
ನಿಮಗೆಲ್ಲರಿಗೂ ಕೃತಜ್ನತೆಗಳು.

ಯಜ್ಞೇಶ್ (yajnesh) said...

ಉತ್ತಮ ಬರಹ,

ನಿಮ್ಮ ಕನಸು ನನಸಾಗಲಿ

Anonymous said...

ನಿಜ ಸುರಗಿಯವರೇ, ಹರಿದಾಡುವ ಒಳ್ಳೆಯ ಮನಸುಗಳನ್ನು ಗುರುತಿಸಿ ನಮ್ಮ ಭಾವಕೋಶದೊಳಗೆ ಒಂದಾಗಿಸಿಕೊಳ್ಳುವ ವರ್ಷ ಇದಾಗಲಿ. ನಮ್ಮೆಲ್ಲ ಕನಸುಗಳು ನನಸಾಗಲಿ.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು....

ಪ್ರೀತಿಯಿಂದ
ವೈಶಾಲಿ