
ಅದೊಂದು ದಿನ ಯಾಕೋ ಭರಿಸಲಾಗದಷ್ಟು ಒಂಟಿತನ ನನ್ನನ್ನು ಆವರಿಸಿಕೊಂಡಿತ್ತು. ಇಲ್ಲಿ, ಈ ಬೆಂಗಳೂರೆಂಬ ಮಾಹಿತಿ ನಗರದಲ್ಲಿ ತೀರಾ ಆತ್ಮೀಯತೆಯಿಂದ ಮನಸ್ಸಿನ ಒಳಹೊಕ್ಕು ಮಾತಾಡುವವರು ಯಾರೂ ಇರಲಿಲ್ಲ.
‘ಬೇಸರಿನ ಸಂಜೆಯಿದು...ಬೇಕೆನೆಗೆ ನಿನ್ನ ಜೊತೆ’ ಎಂದು ಗುಣುಗುಣಿಸುತ್ತಾ ಅದನ್ನೇ ಮೊಬೈಲ್ ನಲ್ಲಿ ಕೀ ಮಾಡತೊಡಗಿದೆ. ಆದರೆ ಯಾರಿಗೆ ಕಳುಹಿಸಲಿ?
ಹೀಗೆ ವರ್ತಮಾನ ಅಸಹನೀಯ ಅನ್ನಿಸಿದಾಗಲೆಲ್ಲಾ ಮನುಷ್ಯ ಬಾಲ್ಯಕ್ಕೆ ಮರಳುತ್ತಾನೆ. ಹುಟ್ಟಿದೂರನ್ನು ನೆನೆದು ಅಲ್ಲಿ ನಾನಿರುತ್ತಿದ್ದರೆ...ಆ ಒಡನಾಡಿ ಪಕ್ಕದಲ್ಲಿರುತ್ತಿದ್ದರೆ....ಎಂದು ಮನಸ್ಸು ಹಂಬಲಿಸುತ್ತದೆ.
ನನಗಿನ್ನೂ ನೆನೆಪಿದೆ; ಬಾಲ್ಯದಲ್ಲಿ ನನಗೆ ಅತ್ಯಂತ ದುಃಖವಾದಾಗ ಕೈಯಲ್ಲೊಂದು ಕತ್ತಿ ಹಿಡಿದು ತೋಟಕ್ಕೆ ಹೋಗುತ್ತಿದ್ದೆ. ಎತ್ತರವಾಗಿ ಬೆಳೆದು ನಿಂತಿರುತ್ತಿದ್ದ ಅಡಿಕೆ ಮರಗಳನ್ನು ಸುಮ್ಮನೆ ನೋಡುತ್ತಿದ್ದೆ. ಫಲ ತುಂಬಿ ತುಳುಕುತ್ತಿದ್ದ ತೆಂಗಿನ ಮರದ ಗರಿಗಳ ಮಧ್ಯೆ ಪುರುಳಿ ಹಕ್ಕಿಯ ಗೂಡನ್ನು ಹುಡುಕುತ್ತಿದ್ದೆ. ಕೊಕ್ಕೋ ಗಿಡದಲ್ಲಿ ಮಾಲೆಯಂತೆ ತೂಗಾಡುತ್ತಿದ್ದ ಕಾಯಿಗಳನ್ನು ಲೆಖ್ಖ ಹಾಕುತ್ತಿದ್ದೆ; ಬಾಳೆಯಲ್ಲೇ ಹಣ್ಣಾದ ಬಾಳೆಹಣ್ಣನ್ನು ಹುಡುಕಿ ತಿನ್ನುತ್ತಿದ್ದೆ.
ತೋಟದ ಬದಿಯಲ್ಲಿ ಝುಳು ಝಳು ನದಿ ಹರಿಯುತ್ತಿತ್ತು. ದಡದ ಬಂಡೆಯ ಮೇಲೆ ಕುಳಿತುಕೊಳ್ಳುತ್ತಿದ್ದೆ. ಕಾಲುಗಳಿಗೆ ಮೀನುಗಳು ಕಚ್ಚಿ ಕಚಗುಳಿಯಿಡುತ್ತಿದ್ದವು.ಕಲ್ಲಿನ ಅಡಿಯಲ್ಲಿ ಮೀನೊಂದು ನುಸುಳಿ ಮರೆಯಾದರೆ ಇನ್ನೊಂದು ಕಲ್ಲನ್ನೆತ್ತಿ ಆ ಕಲ್ಲಿನ ಮೇಲೆ ಹೊಡೆಯುತ್ತಿದ್ದೆ. ಕಲ್ಲಿನ ಅಡಿಯಲ್ಲಿದ್ದ ಮೀನು ಸತ್ತು ಹೋಗುತ್ತಿತ್ತು. ಈಗ ನೆನೆಸಿದರೆ ಮನಸ್ಸಿಗೆ ಒಂಥರ ಕಸಿವಿಸಿ.
ನಮ್ಮ ಮನೆಯ ಆಳು ಕರಿಯ ವಾಟೆ ಜಾತಿಯ ಬಿದಿರುಮೆಳೆಯಿಂದ ಕೊಳಲು ಮಾಡಿಕೊಡುತ್ತಿದ್ದ. ಬಂಡೆಯ ಮೇಲೆ ಕುಳಿತು ಕಣ್ಮುಚ್ಚಿ ಕೊಳಲು ನುಡಿಸುತ್ತಿದ್ದೆ. ಆಗ ನನಗೆ ನೆನಪಾಗುತ್ತಿದ್ದವನು ಯಮುನೆಯ ದಡದಲ್ಲಿ ಗೋವುಗಳ ಮಧ್ಯೆ ಕೊಳಲು ನುಡಿಸುತ್ತಿದ್ದ ಕೃಷ್ಣ. ನಂಗೆ ಕೃಷ್ಣ ಇಷ್ಟ. ಅವನ ಕಪ್ಪು ಮೈ ಬಣ್ಣ ಇಷ್ಟ. ಅವನ ಕೊಳಲ ಗಾನ ಇಷ್ಟ. ಇಂದಿಗೂ ಈ ಮೂರೂ ನನಗಿಷ್ಟ.
ಎಷ್ಟೋ ಹೊತ್ತಿನ ನಂತರ ಹೊಳೆಯ ದಡದಿಂದೆದ್ದು ನಾಣಿಲು ಮರದ ಹತ್ತಿರ ಬಂದು ಹಣ್ಣು ಕೊಯ್ದು ತಿನ್ನುತ್ತಿದ್ದೆ. ಎಲೆಯಲ್ಲಿ ಒಂದಷ್ಟು ಹಣ್ಣುಗಳನ್ನು ತಂಗಿಯರಿಗಾಗಿ ಕಟ್ಟಿಕೊಳ್ಳುತ್ತಿದ್ದೆ. ಬೇಲಿ ದಾಟಿ ತೋಟ ಹತ್ತಿ ಬಂದ ಮೇಲೆ ತಪ್ಪದೆ ಹೊಂಬಾಳೆಯನ್ನು ಆಯ್ದುಕೊಳ್ಳುತ್ತಿದ್ದೆ. ಅದು ನನ್ನ ಪ್ರೀತಿಯ ಕೆಂಪಿ ಹಸುವಿಗೆ.
ಕೆಂಪಿ ನನ್ನ ಬಾಲ್ಯದ ಒಡನಾಡಿ. ಅದು ಎಂತಹ ಹರಾಮಿ ದನ ಆಗಿತ್ತೆಂದರೆ ಊರಿನಯಾವ ಬೇಲಿಯೂ ಅದಕ್ಕೆ ಅಡ್ಡಿ ಅಲ್ಲ. ಅದನ್ನು ಮುರಿದು ಒಳನುಗ್ಗಿ ಕದ್ದು ಹುಲ್ಲು ಮೇಯುತ್ತಿತ್ತು. ನಮ್ಮೂರಿನಲ್ಲಿ ದನ-ಕರುಗಳನ್ನು ಹಟ್ಟಿಯಲ್ಲೇ ಕೂಡಿ ಹಾಕಿ ಸಾಕುವ ಪದ್ದತಿ ಇಲ್ಲ. ಬೆಳಿಗ್ಗೆ ಎದ್ದೊಡನೆ ದನಗಳ ಮುಂದೆ ಒಂದಷ್ಟು ಒಣ ಹುಲ್ಲು ಹಾಕುತ್ತಿದ್ದರು. ಆಮೇಲೆ ಹಟ್ಟಿ ಬಾಗಿಲು ತೆಗೆದು ದನಗಳನ್ನು ಬಯಲಿಗೆ ಅಟ್ಟಿ ಬಿಡುತ್ತಿದ್ದರು. ಅವು ಕಾಡಿನಲ್ಲಿ ಅಥವಾ ಗೋಮಾಳದಲ್ಲಿ ಮೇವು ಹುಡುಕಿಕೊಳ್ಳುತ್ತಿದ್ದವು. ಕೆಂಪಿಯಂತಹ ಹರಾಮಿ ದನಗಳಾದರೆ ಯಾರ್ಯಾರದೋ ತೋಟ ಗದ್ದೆಗಳಿಗೆ ನುಗ್ಗಿ, ಹೊಟ್ಟೆ ಬಿರಿಯೆ ತಿಂದು ಸೂರ್ಯ ಮುಳುಗುವ ಸಮಯಕ್ಕೆ ಸರಿಯಾಗಿ ಮನೆಗೆ ಹಿಂದಿರುಗುತ್ತಿದ್ದವು.
ಕೆಂಪಿ ಹಸುವಿನ ಬಗ್ಗೆ ಹೇಳುತ್ತಿದ್ದೆ ಅಲ್ವಾ..ಅದೆಂದರೆ ನನಗೆ ಅಚ್ಚುಮೆಚ್ಚು. ಅದಕ್ಕೆ ಬಹಳ ವಿಶಿಷ್ಟ ರೀತಿಯ ಕೊಂಬಿತ್ತು. ಆ ಕೊಂಬುಗಳ ಮೂಖಾಂತರ ಎಂತಹ ದಣಪೆಯನ್ನಾದರು ಅಲ್ಲಾಡಿಸಿ ತೆಗೆದು ಹೊಲ, ತೋಟಗಳಿಗೆ ನುಗ್ಗಿ ಬಿಡುತಿತ್ತು. ಇದು ಊರಿಗೇ ತಿಳಿದ ವಿಷಯ. ಅದು ದಣಪೆಗೆ ಹಾಕಿದ ಉದ್ದವಾದ ಕೋಲನ್ನು ಕೊಂಬುಗಳ ಮೂಲಕ ಸ್ವಲ್ಪ ಸ್ವಲ್ಪವಾಗಿ ಅಲ್ಲಾಡಿಸು ತೆಗೆಯುವುದೇ ಕಲಾತ್ಮಕ.
ಕೆಂಪಿ ಹಸುವಿನ ಈ ಕಲಾತ್ಮಕತೆಯೇ ಊರವರ ಕಣ್ಣು ಕೆಂಪಗೆ ಮಾಡಿ, ಅದರ ಬೆನ್ನಿನ ಮೂಳೆ ಮೂಳೆಯೂ ಪುಡಿ ಪುಡಿಯಾಗುತಿತ್ತು. ಅದರ ತೊಡೆ ಕೂಡಾ ಕಲ್ಲಿನ ಹೊಡೆತದಿಂದಾಗಿ ಒಂದೆರಡು ಕಡೆ ಉಬ್ಬಿಕೊಂಡಿತ್ತು. ಹೊಟ್ಟೆ, ಭುಜಗಳಲ್ಲಿ ಬಲವಾದ ಕೋಲಿನಿಂದ ಹೊಡೆದ ಉದ್ದನೆಯ ಗುರುತುಗಳಿದ್ದವು. ಅಲ್ಲಿ ರೋಮವಿರಲಿಲ್ಲ.
ಈ ಕೆಂಪಿಗೊಂದು ರೋಗವೂ ಇತ್ತು. ಅದು ಒಮ್ಮೊಮ್ಮೆ ಕಣ್ಣು ಮೆಟ್ರೆ ಮಾಡಿಕೊಂಡು ನೆಲದ ಮೇಲೆ ಬಿದ್ದು ಹೊರಳಾಡುತಿತ್ತು. ಬೇರೆ ದನಗಳೂ ಅಪರೂಪಕ್ಕೆ ಹೀಗೆ ಮಾಡುವುದುಂಟು. ಆಗ ದೃಷ್ಟಿಯಾಗಿದೆ ಎಂದುಕೊಂಡು (ಈ ದೃಷ್ಟಿ ತಾಗುವುದು ಕಲ್ಲುರ್ಟಿ, ಪಂಜುರ್ಲಿ ಮುಂತಾದ ಭೂತಗಳ ದೆಸೆಯಿಂದ) ಕಿವಿ ಸ್ವಲ್ಪ ಕೊಯ್ಯುತಿದ್ದರು. ರಕ್ತ ಬಾರದಿದ್ದರೆ ಸ್ವಲ್ಪ ಜಾಸ್ತಿಯೇ ಕೊಯ್ಯುತಿದ್ದರು. ಒಟ್ಟಿನಲ್ಲಿ ಸ್ವಲ್ಪ ರಕ್ತ ಬರಬೇಕು ಅಷ್ಟೇ. ಹೀಗೆ ಕೊಯ್ದು ಕೊಯ್ದು ನಮ್ಮ ಕೆಂಪಿ ಹಸುವಿನ ಕಿವಿಗಳು ಜೋರು ಮಳೆ ಗಾಳಿಗೆ ಸಿಕ್ಕ ಬಾಳೆ ಎಲೆಯ ಹಾಗೆ ಛಿದ್ರ ಛಿದ್ರವಾಗಿದ್ದವು.
ಹೀಗೆ ಮನೆಯವರಿಂದ, ಊರವರಿಂದ ಉಪೇಕ್ಷೆಗೊಳಗಾದ ಕೆಂಪಿ ಹಸು ಕರು ಬೇರೆ ಹಾಕಿರಲಿಲ್ಲ. ಇದರ ಹರಾಮಿ ಬುದ್ಧಿ ನೋಡಿ ಯಾವ ಎತ್ತು ಕೂಡ ಇದರ ಹತ್ತಿರ ಸುಳಿಯಲಿಲ್ಲವೇನೋ!. ಅಂತೂ ಈ ಬಂಜೆ ದನದ ಉಪಯೋಗ ಎಂದರೆ ಹಟ್ಟಿಗೆ ಗೊಬ್ಬರ ಅಷ್ಟೇ.
ಇಂತಹ ಕೆಂಪಿ ಹಸು ನನಗೆ ತೀರಾ ಅಚ್ಚುಮೆಚ್ಚಾದುದು ತೀರಾ ಸಹಜವಾಗಿತ್ತು. ಮನೆಯಲ್ಲಿ ಅಪ್ಪ ಸಿಕ್ಕಾಪಟ್ಟೆ ಹೊಡೆಯುತ್ತಿದ್ದರು. ನನ್ನ ಸೊಕ್ಕು, ಗರ್ವ, ಹಟಮಾರಿತನ ಎಲ್ಲರನ್ನು ಕೆರಳಿಸಿಬಿಡುತ್ತಿತ್ತು. ನಾನು ಎಷ್ಟು ಪೆಟ್ಟು ತಿನ್ನುತ್ತಿದ್ದೆನೆಂದರೆ ಅಪ್ಪನ ಬೆತ್ತದ ಛಡಿಯೇಟಿನಿಂದಾಗಿ ತೋಳು, ಬೆನ್ನು, ತೊಡೆಗಳಿಂದ ಕೆಲವೊಮ್ಮೆ ರಕ್ತ ಜಿನುಗುತಿತ್ತು. ಮಂಚದ ಕೆಳಗೆ ಅಡಗಿಕೊಂಡರೆ ಕಾಲಿನಿಂದಲೇ ಒದೆಯುತ್ತಿದ್ದರು.
ನಾನು ಅಪ್ಪ, ಅಣ್ಣ, ಅಮ್ಮ (ಅಮ್ಮ ಹೊಡೆಯುತ್ತಿದ್ದದ್ದು ತೀರ ಅಪರೂಪ. ಹೊಡೆದಾದ ಮೇಲೆ ಅವರು ಒಬ್ಬರೇ ಸೆರಗಿನಿಂದ ಕಣ್ಣೊರಿಸಿಕೊಳ್ಳುತ್ತಾ ಅಳುತ್ತಿದ್ದರು) ಪೆಟ್ಟು ತಿನ್ನುವಾಗಲೆಲ್ಲ ಹಲ್ಲು ಕಚ್ಚಿ ಅದನೆಲ್ಲ ಸಹಿಸಿಕೊಳ್ಳುತ್ತಿದ್ದೆ. ಕೊನೆಗೆ ಸೀದಾ ಹಟ್ಟಿಗೆ ಹೋಗುತ್ತಿದ್ದೆ. ಕೆಂಪಿ ಹಸುವಿನ ಕೊರಳನ್ನಪ್ಪಿ ಅಳುತ್ತಿದ್ದೆ. ಅದರ ಹತ್ತಿರ ಮಾತಾಡುತ್ತಿದ್ದೆ. ಅದರೊಡನೆ ದುಃಖ ತೋಡಿಕೊಳ್ಳುತ್ತಿದ್ದೆ.
‘ನಾನು ನೀನು ಇಬ್ಬರೂ ಒಂದೇ. ನಾವು ಯಾರಿಗೂ ಬೇಡವಾದವರು’ ಎಂದು ತುಂಬಾ ಹೊತ್ತು ಬಿಕ್ಕಳಿಸಿ ಅಳುತ್ತಿದ್ದೆ. ಅದಕ್ಕೆ ಇದೆಲ್ಲ ಅರ್ಥವಾಗುತ್ತಿತ್ತು. ಸುಮ್ಮನೆ ನನ್ನ ನೆತ್ತಿಯನ್ನು ಮೂಸಿ ನೋಡುತ್ತಾ ಮೈಕೈಗಳನ್ನು ನಾಲಗೆಯಿಂದ ಸವರುತಿತ್ತು.
ಇಂತಹ ಕೆಂಪಿ ಹಸು ಒಂದು ದಿನ ಮನೆಗೆ ಬರಲೇ ಇಲ್ಲ. ಯಾರೂ ಅದನ್ನು ಗಮನಿಸಲೇ ಇಲ್ಲ. ನಾನು ಹೇಳಿದರೂ ಯಾರೂ ಕ್ಯಾರೇ ಅನ್ನಲಿಲ್ಲ. ಮಾರನೆಯ ದಿನವು ಬರದಾಗ ಅಪ್ಪ, ಅಣ್ಣನಿಗೆ ಅದನ್ನು ಹುಡುಕಿಕೊಂಡು ಬರಲು ಅಮ್ಮ ಹೇಳಿದರು. ಅವರಿಗೋ ಗೊಬ್ಬರದ ಚಿಂತೆ. ಗದ್ದೆ ತೋಟಗಳಿಗೆ ಹಟ್ಟಿ ಗೊಬ್ಬರವನ್ನೇ ಉಪಯೋಗಿಸುತ್ತಿದ್ದರು. ರಾಸಯನಿಕ ಗೊಬ್ಬರಗಳಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತದೆಯೆಂಬುದು ನನ್ನ ಅಪ್ಪನ ಬಲವಾದ ನಂಬಿಕೆ. ಅದವರ ಪ್ರತಿಪಾದನೆ.
ನಮ್ಮ ಮನೆಯಿಂದ ಒಂದರ್ಧ ಮೈಲಿ ದೂರದಲ್ಲಿ ನಮ್ಮ ದೊಡ್ಡಪ್ಪನ ಜಮೀನಿತ್ತು. ಅಲ್ಲಿ ಅವರು ತೆಂಗಿನ ಸಸಿ ನೆಡಬೇಕೆಂದು ದೊಡ್ಡ ದೊಡ್ಡ ಗುಂಡಿ ತೋಡಿಟ್ಟಿದ್ದರು. ಆ ಗುಂಡಿಗಳಲ್ಲಿ ಆಗಾಗ ನಮಗೆ ಆಮೆಗಳು ಸಿಗುತ್ತಿದ್ದವು. ಇಂತಹ ಒಂದು ಗುಂಡಿಗೆ ನಮ್ಮ ಕೆಂಪಿ ಹೂತು ಬಿದ್ದಿತ್ತು. ಅದರ ಕಾಲುಗಳು ಗುಂಡಿಯ ಒಳಗಿದ್ದವು. ಕೈಗಳು ಗುಂಡಿಯ ಮೇಲ್ಭಾಗದಲ್ಲಿ ಚಾಚಿಕೊಂಡಿದ್ದವು. ದೊಡ್ಡ ಹೊಟ್ಟೆಯನ್ನು ಗುಂಡಿಯೊಳಗೆ ತುರುಕಿಸಿ ಬಿಟ್ಟಂತಾಗಿತ್ತು. ಸುತ್ತಲೂ ನೊಣಗಳು ಮುತ್ತಿಕೊಂಡಿದ್ದವು. ಬಾಲ ಅಲ್ಲಾಡಿಸಿ ಅವುಗಳನ್ನು ಓಡಿಸಲು ಸಾಧ್ಯವಿರಲಿಲ್ಲ. ಏಕೆಂದರೆ ಬಾಲ ಗುಂಡಿಯೊಳಗೆ ಇತ್ತು.
ಎರಡು ದಿನ ಹುಲ್ಲು, ನೀರಿಲ್ಲದೆ ಅದು ಬಸವಳಿದು ಹೋಗಿತ್ತು. ಅಪ್ಪನನ್ನು ನೋಡಿದೊಡನೆ ಅದರ ಕಣ್ಣು ಮಿಂಚಿತ್ತು. ಹಾಗೆಂದು ಅಪ್ಪನೇ ಮನೆಗೆ ಬಂದು ಹೇಳಿ ದೊಡ್ಡ ಕೊಡಪಾನವೊಂದರಲ್ಲಿ ಕಲಗಚ್ಚು ನೀರು ತೆಗೆದುಕೊಂಡು ಕರಿಯನನ್ನು ಕರೆದು ಪಿಕಾಶಿ, ಹಾರೆ, ಗುದ್ದಲಿಗಳನ್ನು ಒಟ್ಟು ಮಾಡಿಕೊಂಡು ದೊಡ್ಡಪ್ಪನ ಮಜಲಿನೆಡೆಗೆ ಹೋದರು.
ಮೊದಲಿಗೆ ಕೆಂಪಿಯ ಮೈಮೇಲೆ ಒಂದು ಕೊಡಪಾನ ತಣ್ಣೀರು ಸುರಿದರು. ಬಾಯಿಬಿಡಿಸಿ ಗೊಟ್ಟದಿಂದ (ಬಿದಿರಿನ ಕೊಳವೆ) ಕಲಗಚ್ಚು ಕುಡುಸಿದರು. ಅದಕ್ಕೆ ಸ್ವಲ್ಪ ಚೈತನ್ಯ ಬಂತು. ಇನ್ನು ಇವರು ತನ್ನನ್ನಿಲ್ಲಿಂದ ಮೇಲೆತ್ತುತ್ತಾರೆ ಎಂಬ ಭರವಸೆ ಮೂಡಿತು ಎಂಬಂತೆ ಕಿವಿಗಳನ್ನು ಅಲ್ಲಾಡಿಸಿತು. ಕಣ್ಣು ಮಿಟುಕಿಸಿತು.
ಅಷ್ಟು ಹೊತ್ತಿಗೆ ವಿಷಯ ತಿಳಿದು ಅಣ್ಣನೂ ಅಲ್ಲಿಗೆ ಬಂದ. ಊರಿನ ಕೆಲವರು ಬಂದರು. ಎಲ್ಲರೂ ಕೆಂಪಿಯ ಹರಾಮಿತನವನ್ನು ಕೊಂಡಾಡುವವರೇ! ಹಾಗಿದ್ದರೂ ಇದನ್ನು ಇಲ್ಲಿಂದ ಎತ್ತುವ ಬಗ್ಗೆಯೂ ಗಂಭೀರವಾದ ಸಲಹೆಗಳನ್ನು ನೀಡತೊಡಗಿದರು. ಕೊನೆಗೆ ಎಲ್ಲರೂ ಸೇರಿ ಗುಂಡಿಯನ್ನು ಇನ್ನಷ್ಟು ಅಗಲ ಮಾಡುವುದೆಂದು ತೀರ್ಮಾನಿಸಿ, ಹಾರೆ-ಗುದ್ದಲಿಗಳನ್ನು ಕೈಗೆತ್ತಿಕೊಂಡರು.
ಗುಂಡಿಯನ್ನು ಅಗೆದು ಅಗಲ ಮಾಡಿದ ಮೇಲೆ ಕೆಂಪಿಯ ಸೊಂಟಕ್ಕೆ ಹಗ್ಗ ಬಿಗಿದು ಆಚೆ ಈಚೆ ಜನ ನಿಂತು ಅದನ್ನು ಬಹು ಪ್ರಯಾಸದಿಂದ ಮೇಲೆತ್ತಿದರು. ಆದರೆ ಕೆಂಪಿ ಏಳಲೊಲ್ಲದು. ಬಹುಶಃ ಎರಡು ದಿನ ಅದೇ ಕಾಂಗರೂ ಸ್ಥಿತಿಯಲ್ಲಿ ಇತ್ತಲ್ಲ, ಅದಕ್ಕೆ ಕೈಕಾಲು ಜೋಮು ಹಿಡಿದಿರಬಹುದೆಂದು ಎಂದುಕೊಂಡರು ಎಲ್ಲ. ಅಲ್ಲೇ ನೆರಳಲ್ಲಿ ಕೂತು ಕೆಂಪಿಯ ಗುಣಗಾನ ಮಾಡುತ್ತಾ ಎಲೆಯಡಿಕೆ ಮೆಲ್ಲತೊಡಗಿದರು.
ಮತ್ತೆ ಪ್ರಯತ್ನಿಸಿದರೂ ಕೆಂಪಿಗೆ ಏಳಲು ಆಗಲೇ ಇಲ್ಲ. ನಮ್ಮ ನಾಟಿ ವೈದ್ಯ ಮಂಜಪ್ಪನೂ ಅಲ್ಲೇ ಇದ್ದ. ಆತ ಕೆಂಪಿಯ ಕೈಕಾಲನ್ನು ಮುಟ್ಟಿ ನೋಡಿ ಬಲಗಾಲು ಮುರಿದಿದೆ ಎಂದ. ನೋಡಿದರೆ ನಿಜವಾಗಿಯು ಅದು ಬಾತುಕೊಂಡಿತ್ತು. ಬಿದ್ದ ರಭಸಕ್ಕೆ ಮೊದಲು ಗುಂಡಿಗೆ ಕಾಲಿಟ್ಟ ಕಾಲು ಮುರಿದಿದೆ.
ಕೆಂಪಿಗೆ ನಡೆಯಲು ಆಗಲಿಲ್ಲ. ಅಲ್ಲೇ ಬಿಟ್ಟು ಹೋಗಲು ಯಾರಿಗೂ ಮನಸ್ಸಾಗಲಿಲ್ಲ. ಕೊನೆಗೆ ಭತ್ತ ಹೊಡೆಯುವ ತಡಿಯನ್ನು ತರಿಸಿ ಅದರ ಮೇಲೆ ಕೆಂಪಿಯನ್ನು ಮಲಗಿಸಿದರು. ಅಣ್ಣ, ಮಂಜಪ್ಪ, ಕರಿಯ, ಶೇಖರ ನಾಲ್ಕು ಜನ ತಡಿಯ ನಾಲ್ಕು ಮೂಲೆಗೆ ಹೆಗಲು ಕೊಟ್ಟರು.
ಮನೆಗೆ ಕೆಂಪಿಯನ್ನು ಹೊತ್ತು ತರುವಾಗ ದಾರಿಯಲ್ಲಿ ನಾಲ್ಕು ಕಡೆ ಇಳಿಸಿ ದಣಿವಾರಿಸಿಕೊಳ್ಳಬೇಕಾಯಿತು. ದಾರಿಯಲ್ಲಿ ಜನ ಅಲ್ಲಲ್ಲಿ ಹುಲ್ಲು, ನೀರು ನೀಡಿ ಕೆಂಪಿಗೆ ಉಪಚಾರ ಮಾಡಿದ್ದೇ ಮಾಡಿದ್ದು. ಕೆಂಪಿಯ ಆಟಾಟೋಪ ನೋಡಿ ‘ಲಟಾಂ ಕುದುರೆ’ ಎಂದು ಅಡ್ಡ ಹೆಸರು ಇಟ್ಟಿದ್ದ ಜನರು ಇವರೇನಾ ಎಂದು ನನಗಂತೂ ಆಶ್ಚರ್ಯ ಆಗಿತ್ತು.
ಮನೆಗೆ ಬಂದೊಡನೆ ಅಮ್ಮ ಅದನ್ನು ಕರುಗಳನ್ನು ಕಟ್ಟುವ ಕಂಚಿಲುನಲ್ಲಿ ಪ್ರತ್ಯೇಕವಾಗಿ ಇರಿಸಿದರು. ಹಟ್ಟಿಯಲ್ಲಿ ದನಗಳೊಟ್ಟಿಗೆ ಇಟ್ಟರೆ ಅದನ್ನು ಅವೆಲ್ಲಾದರು ತುಳಿದರೆ ಎಂಬ ಭಯ ಅವರಿಗೆ. ಅದಕ್ಕೆ ಹುಲ್ಲು ನೀರಿಟ್ಟು ಉಪಚರಿಸಿದ್ದೇ ಉಪಚರಿಸಿದ್ದು. ಮಂಜಪ್ಪ ದಿನಾ ಬಂದು ನಾರು ಬೇರಿನ ಔಷಧವನ್ನು ಗೊಟ್ಟದಲ್ಲಿ ಕುಡಿಸುತ್ತಿದ್ದ. ಕಾಲಿಗೆ ಔಷಧಿಯನ್ನು ಕಟು ಹಾಕುತ್ತಿದ್ದ. ಅದನ್ನು ಹಿಡಿದುಕೊಳ್ಳಲು ಅಪ್ಪ, ಅಣ್ಣ, ಅಮ್ಮ ಕರಿಯ ಹೆಣಗಾಡುತ್ತಿದ್ದರು. ನಾನು, ತಂಗಿಯರೆಲ್ಲಾ ಮೂಕ ಪ್ರೇಕ್ಷಕರು. ಅದರ ನೆತ್ತಿ ಸವರಿ ಸಾಂತ್ವಾನ ಹೇಳುತ್ತಿದ್ದೆವು.
ದಿನಾ ಸಂಜೆ ಮತ್ತು ಬೆಳಿಗ್ಗೆ ಅದರ ಕಾಲಿನ ಹತ್ತಿರ ಹೊಟ್ಟೆಯ ಅಡಿಗೆ ಹಗ್ಗ ಹಾಕಿ ಆಚೀಚೆ ಹಿಡಿದುಕೊಂಡು ಎದ್ದು ನಿಲ್ಲಿಸುತ್ತಿದ್ದೆವು. ಅದು ಕಾಲೂರಲು ಪ್ರಯತ್ನಿಸುತಿತ್ತು.
ಹೀಗೆ ಸುಮಾರು ದಿನ ಕಳೆಯಿತು. ಕೆಂಪಿ ನಿತ್ರಾಣವಾಗುತ್ತ ಹೋಯಿತು. ಮುರಿದ ಕಾಲು ಸರಿ ಹೋಗಲೇ ಇಲ್ಲ. ಅದಕ್ಕೆ ಇವರಿಂದ ಉಪಚಾರ ಮಾಡಿಸಿಕೊಂಡು ಸಾಕು ಎನಿಸಿತೇನೋ!
ಒಂದು ದಿನ ಬೆಳಿಗ್ಗೆ ಎಂದಿನಂತೆ ನಾನು ಚಾಪೆಯಿಂದ ಎದ್ದವಳೇ ಕೆಂಪಿಯನ್ನು ನೋಡಲು ಹೋದೆ. ಅದು ನೀಳವಾಗಿ ಕತ್ತು ಚಾಚಿ ಮಲಗಿತ್ತು. ಬಾಯಿಂದ ನಾಲಗೆ ತುಸುವೇ ಹೊರಗೆ ಬಂದಿತ್ತು. ಕಣ್ಣು ತೆರೆದೇ ಇತ್ತು. ಆಶ್ಚರ್ಯ ಎಂದರೆ ಅದರ ಕಣ್ಣು ಮಿನುಗುತ್ತಿರುವಂತೆ ಭಾಸವಾಗುತಿತ್ತು. ಮುಟ್ಟಿ ನೋಡಿದೆ. ಮುಖದಲ್ಲಿ ಕೂತಿದ್ದ ನೊಣಗಳೆಲ್ಲಾ ಹಾರಿ ಹೊದವು. ನನಗೆ ಗಾಬರಿಯಾಯಿತು. ಮನೆಗೆ ಓಡಿದೆ. ’ಕೆಂಪಿ ನೀಟ ಮಲಗಿದೆ. ಮುಟ್ಟಿದರೆ ಏಳ್ಲೇ ಇಲ್ಲ.’ ಎಂದು ಅಮ್ಮನಿಗೆ ಹೇಳಿದೆ.
‘ಕೆಂಪಿ ಸತ್ತುಹೋಯಿತು’ ಎನ್ನುತ್ತಾ ಅಪ್ಪ, ಹಾರೆ-ಗುದ್ದಲಿ ತೆಗೆದುಕೊಂಡರು. ಸುಮಾರು ಹೊತ್ತಿನ ನಂತರ ಅಪ್ಪ, ಅಣ್ಣ, ಕರಿಯ, ಅದರ ಹೊಟ್ಟೆಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋದರು. ಅದನ್ನು ಗುಂಡಿಯಲ್ಲಿಟ್ಟರು. ನನ್ಗೆ ಏನನ್ನಿಸಿತೋ ಏನೋ. ನಾನು ಯಾವಾಗಲೂ ಉಪಯೋಗಿಸುತ್ತಿದ್ದ ಬಿಳಿ ಟವಲ್ಲೊಂದನ್ನು ತಂದು ಅದರ ಮೇಲೆ ಹಾಕಿಬಿಟ್ಟೆ. "ಅಮ್ಮ ನಂಗೆ ಒಂದು ರೂಪಾಯಿ ಪಾವಲಿ ಕೊಡಿ" ಎಂದೆ. ಅಮ್ಮ ಯಾಕೆ ಎಂದರು. "ಕೆಂಪಿಯ ಹಣೆಗಿಡಲು" ಎಂದೆ. ನಮ್ಮ ಅಜ್ಜಿ ಸತ್ತಾಗ ಹೀಗೆ ಮಾಡಿದ್ದನ್ನು ನಾನು ನೋಡಿದ್ದೆ. ಅಮ್ಮ ನಂಗೆ ಒಂದು ರೂಪಾಯಿ ಕೊಟ್ಟರು.
ಇಂದು, ಇಂತಹ ಈ ಬೇಸರದ ಸಂಜೆಯಲಿ ನನಗೆ ನನ್ನ ಬಾಲ್ಯದ ಯಾವ ಒಡನಾಡಿಗಳ ನೆನಪೂ ಅಷ್ಟಾಗಿ ಕಾಡದೆ ಕೆಂಪಿಯೇ ಏಕೆ ಕಾಡುತ್ತದೆ? ಕೆಂಪಿಯ ಯಾವ ಗುಣಗಳು ನನ್ನಲ್ಲಿದ್ದವು? ಅದು ಸಾಂಪ್ರದಾಯಿಕ ಹಸುವಾಗಿರದೆ ಹರಾಮಿ ದನವಾಗಿದ್ದೇ ನನ್ನ ಮೆಚ್ಚುಗೆಗೆ ಕಾರಣವಾಗಿತ್ತೆ?
ಕೈಯಲ್ಲಿದ್ದ ಮೊಬೈಲ್ ರಿಂಗುಣಿಸಿತು. ಅಮ್ಮ ಲೈನಿನಲ್ಲಿದ್ದರು. "ಈ ಸಲ ದಸರಾಕ್ಕೆ ಬರ್ತೀಯಲ್ಲಾ, ಮಕ್ಕಳನ್ನು ಕರೆದುಕೊಂಡು ಬಾ, ಕೆಂಪಿ (ಆ ಕೆಂಪಿಯಲ್ಲ) ಕರು ಹಾಕಿದೆ. ಹೆಣ್ಣು ಕರು. ಕಂದು ಬಿಳಿ ಬಣ್ಣ. ಮಂಗಳಾ ಎಂದು ಹೆಸರಿಟ್ಟಿದ್ದೇವೆ. ಮಕ್ಕಳಿಗೆ ಇಷ್ಟವಾಗುವುದು...." ಅಮ್ಮ ಹೇಳುತ್ತಲೇ ಇದ್ದರು. ನಾನು ಕೇಳಿಸಿಕೊಳ್ಳುತ್ತಲೇ ಇದ್ದೆ.
[ ’ಮಯೂರ’ದಲ್ಲಿ ಪ್ರಕಟವಾದ ಪ್ರಬಂಧ ]