Tuesday, November 25, 2008

ವಾಟಾಳ್ ನಾಗರಾಜ್ ಉಚ್ಚೆ ಹೊಯ್ತಾರಂತೆ !

ವಾಟಾಳ್ ನಾಗರಾಜರ ಹೊಸ ಸಾಹಸದ ಬಗ್ಗೆ ಯಾರಾದರೂ ಬರೆದಿರಬಹುದೇ ಎಂದು ಗೊತ್ತಿರುವ ಬ್ಲಾಗ್ ಗಳನ್ನೆಲ್ಲಾ ಜಾಲಾಡಿದೆ. ಕಾಣಿಸಲಿಲ್ಲ. ’ಬೊಗಳೆ-ರಗಳೆ’ಯಲ್ಲಾದರೂ ಕಾಣಿಸಿಕೊಳ್ಳಬಹುದೆಂದು ಭಾವಿಸಿದ್ದೆ. ಅಲ್ಲೂ ಇರಲಿಲ್ಲ. ಹಾಗಾಗಿ ಈ ಕಾಯಕಕ್ಕೆ ಕೈ ಹಾಕುತ್ತಿದ್ದೇನೆ.

ವಿಷಯ ಏನಪ್ಪಾ ಅಂದ್ರೆ, ನಿನ್ನೆ ಇದ್ದಕ್ಕಿದ್ದಂತೆ ನಮ್ಮ ಕನ್ನಡದ ಉಟ್ಟು ಓರಾಟಗಾರ, ಪ್ರತಿಭಟನೆಗಳ ಸರದಾರ ವಾಟಾಳ್ ನಾಗರಾಜ್ ಪತ್ರಿಕಾ ಗೋಷ್ಟಿ ಕರೆದಿದ್ದರು. ಅಲ್ಲಿ ಅವರು ಹೇಳಿದ್ದು; ಸರಕಾರವು ರಾಜ್ಯಾದ್ಯಂತ ಸರ್ವಾಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ಡಿಸೆ.ಬರ ಅಂತ್ಯದೊಳಗಾಗಿ ಸರಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದರೆ ತಾವು ರಾಜಭವನದ ಎದುರು ’ಉಚ್ಚೆ ಹೊಯ್ಯುವ ಚಳುವಳಿ’ ನಡೆಸುವುದಾಗಿ ಹೇಳಿದರು. ಮುಂದೆ ಈ ಚಳುವಳಿಯನ್ನು ಹಂತ ಹಂತವಾಗಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಲೋಕಸಭಾ ಸದಸ್ಯರು ಹಾಗು ಐಎ ಎಸ್ ಅಧಿಕಾರಿಗಳ ನಿವಸಕ್ಕೂ ವಿಸ್ತರಿಸುವುದಾಗಿಯೂ ಸ್ಪಷ್ಟಪಡಿಸಿದರು

ಶೌಚಾಲಯಗಳ ಸಮಸ್ಯೆಗಳ ಕುರಿತು ಚರ್ಚಿಸಲು ನವೆಂಬರ ೨೯ರಂದು ಹಿರಿಯರ ಸಭೆ ಕರೆದಿರುವುದಾಗಿಯೂ ತಿಳಿಸಿದರು. ಇವರಿಗೆ ಹಿರಿಯರೇ ಯಾಕೆ ಬೇಕಿತ್ತು? ಅವರಲ್ಲಿ ಬಹಳಷ್ಟು ಜನರು ಡಯಾಬಿಟಿಕ್ ಇರಬಹುದು; ಅವರಿಗೆ ಮೂತ್ರ ಹಿಡಿದಿಟ್ಟುಕೊಳ್ಳುವುದು ಕಷ್ಟವೆಂದೇ? ಆದ ಕಾರಣ ಇವರ ಚಳುವಳಿಗೆ ಅವರ ಸಾಥ್ ಸಿಗಬಹುದೆಂಬ ಆಶಾ ಭಾವನೆಯಿರಬಹುದೇ?


ಪತ್ರಕರ್ತರ ಬುದ್ಧಿಯನ್ನು ಶತಶತಮಾನಗಳಿಂದ ಬಲ್ಲವರು ಈ ವಾಟಾಳ್. ಹಾಗಾಗಿಯೇ ಅವರು ಪತ್ರಕರ್ತರಿಗೆ ಅಲ್ಲಿಯೇ ತಾಕೀತು ಮಾಡಿದರು; ’ನೀವು ಬರೆಯುವಾಗ ಉಚ್ಚೆ ಹೊಯ್ಯುವ ಚಳುವಳಿ ಎಂದೇ ಬರೆಯಬೇಕು, ಬದಲಾಗಿ ಮೂತ್ರ ವಿಸರ್ಜನೆ ಚಳುವಳಿ ಎಂದು ಬರೆಯಬಾರದು’ ಪಾಪ ಸಜ್ಜನ ಪತ್ರಕರ್ತರು ಮುಸಿಮುಸಿ ನಗುತ್ತಾ ತಲೆಯಲ್ಲಾಡಿಸಿದರು.

ದೃಶ್ಯ ಮಾದ್ಯಮದವರು ಅವರು ಹೇಳಿದ್ದೆಲ್ಲವನ್ನೂ ಅಪ್ಪಣೆ ಸಮೇತ ಪ್ರಸಾರಮಾಡಿದರು. ಮುದ್ರಣ ಮಾದ್ಯಮದವರು ಪಾಪ ಮಾನವಂತರು, ಮೂತ್ರವಿಸರ್ಜನೆ ಚಳುವಳಿ ಎಂದೇ ಪ್ರಕಟಿಸಿದವು. ಪ್ರಜಾವಾಣಿ ಇವರ ಸಹವಾಸವೇ ಬೇಡ ಎಂದು ದಿವ್ಯ ನಿರ್ಲಕ್ಷ್ಯ ವಹಿಸಿತು. ಅಥವಾ ನಾಳೆ ಪ್ರಕಟಿಸುತ್ತೋ ಏನೋ, ಯಾಕೆಂದರೆ ಅದು ಪ್ರಜಾವಾಣಿ!

ಈಗ ನನ್ನಲ್ಲಿ ಕುತೂಹಲವಿದೆ; ಹಲವಾರು ಅನುಮಾನಗಳಿವೆ. ಅವರು ಹಿರಿಯರ ಸಭೆ ಕರಿದಿದ್ದಾರೆ. ಅದರಲ್ಲಿ ಮಹಿಳೆಯರು ಸೇರಿದ್ದಾರೆಯೇ? ಯಾಕೆಂದರೆ ಶೌಚಾಲಯದ ಸಮಸ್ಯೆಗಳು ಇದುವರೆಗೆ ಮಹಿಳೆಯರನ್ನು ಮಾತ್ರ ಕಾಡಿವೆ. ಪುರುಷರು ಮೋಟು ಗೋಡೆಯ ಮುಂದೆ ಬೇಕಾದರೂ ಪ್ಯಾಂಟ್ ಬಿಚ್ಚಿ ನಿಲ್ಲುತ್ತಾರೆ.

ಇವತ್ತು ವಿಜಯ ಕರ್ನಾಟಕ ಮೂತ್ರ ವಿಸರ್ಜನೆ ಎಂದೇ ಬರೆದಿದೆ. ಈಗ ವಾಟಾಳರು ವಿಜಯ ಕರ್ನಾಟಕದೆದುರು ಮೂತ್ರ ವಿಸರ್ಜಿಸಿ ಇದನ್ನು ಪ್ರತಿಭಟಿಸುತ್ತಾರೆಯೇ?

ನನ್ನ ಅಲ್ಪ ತಿಳುವಳಿಕೆಯ ಪ್ರಕಾರ ವಾಟಾಳ್ ಪಡೆಯಲ್ಲಿ ಮಹಿಳೆಯರಿಲ್ಲ. ಒಂದು ವೇಳೆ ಇದ್ದಲ್ಲಿ ಅವರೂ ಕೂಡ ಈ ಚಳುವಳಿಯಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುತ್ತಾರೆಯೇ?

ಇನ್ನೊಂದು ಅನುಮಾನವಿದೆ; ಅಲ್ಲಾ,ಅದು ಕುತೂಹಲ ಶೋಭಾ ಕರಂದ್ಲಾಜೆ ಮನೆಯೆದುರು.... ಮಹಿಳಾ ಪೋಲಿಸರೆದುರು...

ದೊಂಬರಾಟಕ್ಕೂ ಒಂದು ಮಿತಿಯಿರಬೇಕಲ್ಲವೇ?
’ ಏನಕೇನಾ ಪ್ರಕರಣಂ ಪ್ರಸಿದ್ಧ ಪುರುಷಂ’

Friday, November 21, 2008

ಪುಸ್ತಕಗಳೊಂದಿಗೆ ನೆನಪುಗಳ ಮೆರವಣಿಗೆ





ಪುಸ್ತಕಗಳನ್ನು ಕೊಳ್ಳುವುದು ನನ್ನ ಹುಚ್ಚುಗಳಲ್ಲೊಂದು. ಎಲಿಮೆಂಟರಿ ಶಾಲೆಯಲ್ಲಿದ್ದಾಗ ಗೆಳತಿಯರ ಮನೆಯಿಂದ ಕಾಡಿ, ಬೇಡಿ ಚಂದಮಾಮ, ಬಾಲಮಿತ್ರಗಳನ್ನು ತರಿಸಿಕೊಂಡು ಓದುತ್ತಿದ್ದೆ. ಅವರಿವರ ಮನೆಯಿಂದ ಕಸ್ತೂರಿ, ಪ್ರಜಾಮತ, ಮಯೂರ, ತುಷಾರ ಮುಂತಾದವುಗಳನ್ನು ಬೇಡಿ ಪಡೆದು ಊಟ ತಿಂಡಿ ಬಿಟ್ಟು ಓದುತ್ತಿದ್ದೆ.

ಕ್ರಮೇಣ ಎನ್ ನರಸಿಂಹಯ್ಯನವರ ಪತ್ತೇದಾರಿ ಜಗತ್ತಿಗೆ ಹೊರಳಿಕೊಂಡೆ. ಆಮೇಲೆ ತ್ರಿವೇಣಿ, ಉಷಾನವರತ್ನರಾಮ್, ಕಾರಂತ, ಬೈರಪ್ಪ, ನಿರಂಜನ ಕುವೆಂಪು, ಬೇಂದ್ರೆ, ಅಡಿಗ, ಚಿತ್ತಾಲ,ಶರ್ಮ, ರಾಮಾನುಜನ್, ಶೆಲ್ಲಿ, ಕೀಟ್ಸ್, ಮ್ಯಾಥ್ಯು ಅರ್ನಾಲ್ಡ್, ಎಲಿಯೇಟ್, ಐ ಎ ರಿಚರ್ಡ್ಸ್ ......ವಿಶಾಲ ಜಗತ್ತು ತೆರೆದುಕೊಳ್ಳತೊಡಗಿತು.

ನನ್ನೂರಿನಲ್ಲಿ ಹೈಸ್ಕೂಲ್ ಇಲ್ಲ. ಸುತ್ತಮುತ್ತಲಿನ ಹಳ್ಳಿಗಳಲ್ಲೂ ಆಗ ಹೈಸ್ಕೂಲ್ ಇರಲಿಲ್ಲ. ಹಾಗಾಗಿ ಅವರಿವರ ಮನೆಯಲ್ಲಿದ್ದುಕೊಂಡು ಓದಿದವಳು ನಾನು. ರಜೆಯಲ್ಲಿ ಮನೆಗೆ ಹೋದಾಗ ಇಲ್ಲವೇ ಮನೆಯವರು ನಾನಿರುವಲ್ಲಿಗೆ ಬಂದಾಗ ’ಏನಾದರು ತಗೋ’ ಎಂದು ನನ್ನ ಕೈಲಿ ಒಂಚೂರು ದುಡ್ಡಿಡುತ್ತಿದ್ದರು. ಏನಾದರು ಎಂದರೆ ಅವರ ದೃಷ್ಟಿಯಲ್ಲಿ ತಿಂಡಿ. ನಾನದರಲ್ಲಿ ನಂಗೆ ಇಷ್ಟವಾದ ಪುಸ್ತಕ ಕೊಳ್ಳುತ್ತಿದ್ದೆ.

ಕಾಲೇಜು ಮೆಟ್ಟಲು ಹತ್ತಿದ ಮೇಲೆ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಹಣ ನನ್ನ ಕೈಸೇರುತ್ತಿತ್ತು. ಅದಕ್ಕೆ ಮುಖ್ಯ ಕಾರಣ ಸರಿಕರ ಎದುರು ತಮ್ಮ ಮಗಳು ಒಳ್ಳೊಳ್ಳೆಯ ಬಟ್ಟೆ ಹಾಕಿಕೊಂಡು ಓಡಾಡಲಿ ಎಂಬುದೇ ಆಗಿತ್ತು. ಹಾಗಂತ ಆಗಾಗ ನನ್ನ ಹೆತ್ತವರು ಹೇಳುತ್ತಿದ್ದರು. ಆದರೆ ನಾನು ಬಹುಪಾಲು ದುಡ್ಡನ್ನು ಪುಸ್ತಕ, ನಿಯತಕಾಲಿಕಗಳನ್ನು ಕೊಳ್ಳಲು ಉಪಯೋಗಿಸುತ್ತಿದ್ದೆ.

ಎಂ.ಎ ಮಾಡುವಾಗ ನನಗೆ ಜೊತೆಯಾದವನು ಶರು. ಒಂದೇ ಅಭಿರುಚಿಯ ನಾವು ಬಹು ಬೇಗ ಆತ್ಮೀಯ ಸ್ನೇಹಿತರಾದೆವು. ಕಮ್ಮಟಗಳು, ವಿಚಾರ ಸಂಕಿರಣಗಳು, ನಾಟಕ, ಸಿನೇಮಾ... ಎಲ್ಲೆಲ್ಲೂ ನಾವೇ. ಮುಂಜಾವಿನ ದಿವ್ಯ ಮೌನದಲ್ಲಿ ಗಂಗೋತ್ರಿಯ ಕ್ಯಾಂಪಸ್ಸಿನಲ್ಲಿ ಜಾಗಿಂಗ್. ಎಳೆ ಬಿಸಿಲಿಗೆ ಮೈಯೊಡ್ಡಿ ಬೆಚ್ಚನೆಯ ಚಹ ಹೀರಿದರೆ ಅದೇ ಆ ದಿನಕ್ಕೆ ಸುಂದರ ಮುನ್ನುಡಿ.

ಒಂದು ಒಳ್ಳೆಯ ಪುಸ್ತಕ ಓದಿದರೆ ಅದನ್ನು ಓದುವಂತೆ ಆತ ನನಗೆ ಸಲಹೆ ನೀಡುತ್ತಿದ್ದ. ತನಗೊಂದು ಪುಸ್ತಕ ಇಷ್ಟವಾದರೆ ತನ್ನ ಜೊತೆ ನನಗೂ ಒಂದು ಪ್ರತಿ ಖರೀದಿಸುತ್ತಿದ್ದ. ನಾನೂ ಕೂಡ ಅಷ್ಟೇ; ಯ್ಯಾವ್ಯಾವುದೋ ನೆಪ ಮಾಡಿಕೊಂಡು ಅವನಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದೆ.

ಬಿಸಿ ರಕ್ತದ ಆ ದಿನಗಳಲ್ಲಿ ಎಲ್ಲವನ್ನೂ ಪ್ರಶ್ನಿಸುವ, ಉಲ್ಲಂಘಿಸುವ ಮನೋಭಾವ. ಅದಕ್ಕೆ ಸಾಹಿತ್ಯದ ಹಿಮ್ಮೇಳ. ಆದರ್ಶಗಳ ಗುಂಗು. ಸಮಾಜ ಪರಿವರ್ತನೆಯ ಕನಸು. ಅದನ್ನವನು ಬದುಕಿನ ಭಾಗವಾಗಿಸಿಕೊಂಡ. ಪಶ್ಚಿಮ ಘಟ್ಟ ಶ್ರೇಣಿಯಲೆಲ್ಲೋ ಕರಗಿ ಹೋದ. ಆಮೇಲೆ ಅಂಥ ಗೆಳೆಯನನ್ನು ನನಗೆ ಪಡೆದುಕೊಳ್ಳಲಾಗಲಿಲ್ಲ.

ಇಂದು ನಾನು ಬೆಂಗಳೂರಲ್ಲಿದ್ದೇನೆ. ನನ್ನ ಮನೆಯಲ್ಲಿ ಒಳ್ಳೆಯ ಲೈಬ್ರರಿಯಿದೆ. ಅದರೆಡೆಗೆ ಕಣ್ಣು ಹಾಯಿಸಿದಾಗ ಮನಸ್ಸು ಮ್ಲಾನಗೊಳ್ಳುತ್ತದೆ. ಯಾಕೆಂದರೆ ಅದರಲ್ಲಿರುವ ಬಹಳಷ್ಟು ವೈಚಾರಿಕ ಪುಸ್ತಕಗಳು ಶರು ನನಗೆ ಉಡುಗೊರೆಯಾಗಿ ನೀಡಿದ್ದು. ಅದನ್ನು ಮತ್ತೆ ಓದುವುದಕ್ಕೆ ನನಗೆ ಒಂಥರ ಹಿಂಸೆ. ಅದರಲ್ಲಿ ಅತನ ಹಸ್ತಾಕ್ಷರವಿರುತ್ತದೆ. ನಲ್ಮೆಯ ಮಾತಿರುತ್ತದೆ. ಭರವಸೆಯ ನುಡಿಗಳಿರುತ್ತವೆ.

ಇಂದಿಗೂ ನಾನು ನನ್ನ ಆತ್ಮೀಯರಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುತ್ತೇನೆ. ಮದುವೆ, ಹುಟ್ಟುಹಬ್ಬ, ಉಪನಯನ ಮುಂತಾದ ಶುಭ ಸಂದರ್ಭಗಳಲ್ಲಂತೂ ಪುಸ್ತಕಗಳಿಗೇ ಆದ್ಯತೆ. ಓಶೋನ ’ಸ್ತ್ರೀ ಮುಕ್ತಿ-ಆಧುನಿಕ ದೃಷ್ಟಿಕೋನ’ ನಾನು ಮದುಮಗಳಿಗೆ ಖಾಯಂ ಆಗಿ ಕೊಡುವ ಪುಸ್ತಕ. ನೀನು ಹರಸುವುದಕ್ಕಾಗಿ ಕೊಡುತ್ತಿಲ್ಲ, ಸಂಸಾರ ಒಡೆಯುವುದಕ್ಕಾಗಿ ಆ ಪುಸ್ತಕ ಕೊಡುತ್ತಿ ಎಂದು ನನ್ನ ಪತಿ ದೇವರು ಆಗಾಗ ತಮಾಷೆ ಮಾಡುತ್ತಿರುತ್ತಾರೆ.

ಅರಮನೆ ಮೈದಾನದಲ್ಲಿ ನಡೆಯುವ ಪುಸ್ತಕ ಮೇಳಕ್ಕೆ ನಾನು ಪ್ರತಿ ವರ್ಷ ಹೋಗುತ್ತೇನೆ. ಒಂದಷ್ಟು ಪುಸ್ತಕಗಳನ್ನು ಖರೀದಿ ಮಾಡುತ್ತೇನೆ. ಅದರಲ್ಲಿ ಒಂದೆರಡು ಪುಸ್ತಕಗಳು ನನ್ನ ಆತ್ಮೀಯರಿಗೆ. ಈ ಮಹಾನಗರದಲ್ಲಿ ಶರುವನ್ನು ಹೋಲುವ ವ್ಯಕ್ತಿಯೊಬ್ಬ ಹಲವು ವರ್ಷಗಳ ಹಿಂದೆ ನನಗೆ ಪರಿಚಯವಾಗಿದ್ದ. ಅವನಿಗೂ ಯ್ಯಾವ್ಯಾವುದೋ ನೆಪವಿಟ್ಟುಕೊಂಡು ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದೆ. ನನ್ನ ಕಾಟ ತಡೆಯಲಾರದೆ ಏನೋ ಇತ್ತೀಚೆಗೆ ಆತನೂ ದೂರ್‍ಅವಾದ.

ಪುಸ್ತಕಗಳ ಜೋತೆಯೇ ಒಡನಾಡಿದ, ಅವುಗಳ ಜೊತೆಯೇ ಸಹಚರ್ಯ ಬೆಳೆಸಿಕೊಂಡ ನನಗೆ ಬೆಂಗಳೂರಿನಲ್ಲಿ ಪುಸ್ತಕಗಳೇ ಇಲ್ಲದ ಮನೆಗಳನ್ನು ಕಂಡಾಗ ಆಶ್ಚರ್ಯ ಆಗುತ್ತದೆ. ಅಲ್ಲಿ ವಾಸಿಸುವ ಜನರು ತಮ್ಮ ಬಿಡುವಿನ ವೇಳೆಯನ್ನು ಹೇಗೆ ಕಳೆಯುತ್ತಾರೆ? ಅವರು ತಮ್ಮೊಳಗಿನ ಆನಂದವನ್ನು ಹೇಗೆ ಕಂಡು ಕೊಳ್ಳುತ್ತಾರೆ?

ನಾವೇನೋ ಪುಸ್ತಕಗಳನ್ನು ಖರೀದಿಸುತ್ತೇವೆ. ಓದುತ್ತೇವೆ. ಉಡುಗೋರೆ ಕೊಡುತ್ತೇವೆ. ಆದರೆ ನಮ್ಮ ಮಕ್ಕಳು......?ಅವರಿಗೆ ಓದಿನ ಅಭಿರುಚಿಯನ್ನು ಚಿಕ್ಕಂದಿನಲ್ಲಿಯೇ ಕಲಿಸಬೇಕು.ಮಾಲ್ ಗಳಿಗೆ ಭೇಟಿ ಕೊಟ್ಟಂತೆಯೇ ಪುಸ್ತಕ ಮಳಿಗೆಗಳಿಗೂ ಭೇಟಿ ಕೊಡುತ್ತಿರಬೇಕು. ನಮ್ಮಲ್ಲಿ ಓದುವ ಹವ್ಯಾಸವಿದ್ದರೆ ನಮ್ಮ ಮಕ್ಕಳಲ್ಲಿಯೂ ಅದು ಮುಂದುವರಿಯುತ್ತದೆ. ಪುಸ್ತಕಗಳನ್ನು ಸಂಗಾತಿಯಾಗಿ ಒಪ್ಪಿಕೊಂಡವರು ಎಂದೂ ಒಂಟಿಯಲ್ಲ.

Tuesday, November 11, 2008

’ಬಿಂಬ’ದಿಂದ ’ಬಿಂಬ’ಕ್ಕೆ




ಅವನನ್ನು ನೋಡಿದ ಮೊದಲ ದಿನವೇ ಅವಳಿಗನ್ನಿಸಿತ್ತು ’ಇವನು, ಅವನನ್ನು ಹೋಲುತ್ತಾನಲ್ಲಾ..!’
ಅವಳು ನೋಡಿಯೇ ನೋಡಿದಳು... ಮತ್ತೆ ಮತ್ತೆ ನೋಡಿದಳು. ನೋಡುತ್ತಾ ಹೋದಳು.


ಒಂದು ದಿನ ಅವನು ತುಟಿಯಂಚಿನಲ್ಲಿ ನಕ್ಕ. ಇಲ್ಲಾ... ಅವನ ಕಣ್ಣು ನಕ್ಕಿತು. ಇವಳಲ್ಲಿ ಸಣ್ಣ ಕಂಪನ. ಅವನು ಬರುತ್ತಾನೆಂಬ ನಂಬಿಕೆಯಿಂದಲೇ ಕಲಾಕ್ಷೇತ್ರದಲ್ಲಿ ನಡೆಯುವ ಪ್ರತಿ ನಾಟಕಕ್ಕೂ ಅವಳು ಹಾಜರಾಗುತ್ತಿದ್ದಳು. ಅವನ ನಿರೀಕ್ಷೆಯೂ ಅದೇ ಆಗಿತ್ತು.

ಮನಸ್ಸಿನ ಮಾತು ಕಣ್ಣಲ್ಲಿ ಪ್ರತಿಪಲಿಸಲು ಕ್ಷಣಾರ್ಧ ಸಾಕು. ಆದರೆ ಬಾಯಿಗೆ ಬರಲು ವರ್ಷಗಳೇ ಹಿಡಿಯುತ್ತವೆ. ಬರದೆಯೂ ಹೋಗಬಹುದು. ಹಾಗೆ ಬಂದ ದಿನ ಇರುವ ಸಂಬಂಧ ಮತ್ತಷ್ಟು ಗಟ್ಟಿಯಾಗಬಹುದು, ಇಲ್ಲವೇ ಸಡಿಲವಾಗಲೂ ಬಹುದು. ಈ ಅರಿವೂ ಇಬ್ಬರಲ್ಲಿಯೂ ಇತ್ತು. ಹಾಗಾಗಿ ಆ ನವಿರು ಸಂಬಂಧ ಮೌನವಾಗಿ ಮುಂದುವರಿದಿತ್ತು.

ಆತನ ನಡವಳಿಕೆಯಲ್ಲಿ ಅವಳಿಗೆ ನಂಬಿಕೆ ಬೆಳೆಯುತ್ತಾ ಹೋಯಿತು. ಒಂದು ದಿನ ಆತ ’ಟೀ ಕುಡಿಯೋಣ ಬನ್ನಿ’ ಅಂದ. ಅವಳು ಸಮ್ಮತಿಸಿದಳು. ಇಬ್ಬರಿಗೂ ಲಿಂಬು ಟೀ ಇಷ್ಟ. ತಮ್ಮ ಅಭಿರುಚಿ ಒಂದೇ ಆಗಿರುವುದರ ಬಗ್ಗೆ ಪರಸ್ಪರ ಅಚ್ಚರಿ ವ್ಯಕ್ತಪಡಿಸಿಕೊಂಡರು.

ಅಮೇಲೆ ಅವರು ಅಲ್ಲಿ-ಇಲ್ಲಿ ಜೊತೆಯಾಗಿ ಕಾಣಿಸಿಕೊಳ್ಳತೊಡಗಿದರು. ಅದಕ್ಯಾರು ಅಂಥ ಮಹತ್ವ ಕೊಡಲಿಲ್ಲ. ಈ ಮಹಾನಗರದಲ್ಲಿ ಎಲ್ಲರೂ ಇಂಥಹದೊಂದು ಸಾಂಗತ್ಯಕ್ಕಾಗಿ ಹಾತೊರೆಯುವವರೇ ಆಗಿರುತ್ತಾರೆ. ಒಂದಷ್ಟು ಜನ ಅವರ ಭಾಗ್ಯಕ್ಕೆ ಕರುಬಿದರು.

ಅವನ ಪೀತಿಯ ಕಂಪನ ಅವಳ ಅನುಭವಕ್ಕೆ ಬರುತಿತ್ತು. ಭಾವನಾತ್ಮಕವಾಗಿ ಅವಳು ಅವನಲ್ಲಿ ಐಕ್ಯವಾಗುತ್ತಾ ಹೋದಳು. ನಂಬಿಕೆಯ ಶಿಖರದಲ್ಲಿ ಬೆಚ್ಚನೆಯ ಗೂಡು ಕಟ್ಟಿಕೊಳ್ಳತೊಡಗಿದಳು.

ಕನ್ಪೆಕ್ಷನ್ ಬಾಕ್ಸ್ ನಲ್ಲಿ ನಿಂತು ಎಲ್ಲವನ್ನೂ ಹೇಳಿಕೊಂಡ ಹಾಗೆ ಆಕೆ ಬಯಲಾಗುತ್ತಾ ಬಂದಳು. ಆತ ನಿರಂತರ ಆಲಿಸುತ್ತಲೇ ಹೋದ. ಅವಳ ಅವಲಂಬನೆ ಅತನಿಗೆ ಹಿತವೆನಿಸುತಿತ್ತು; ಹೆಮ್ಮೆಯಾಗುತಿತ್ತು.

ಈಗ ವೈಯಕ್ತಿಕ ಸಂಘರ್ಷವೊಂದರ ಸಂದರ್ಭದಲ್ಲಿ ತನ್ನ ಜೊತೆಯಾಗು ಎನ್ನುತಿದ್ದಾನೆ. ಅದವಳ ಜಾಯಮಾನಕ್ಕೆ ಒಗ್ಗಿದ್ದಲ್ಲ. ನಿರಾಕರಿಸಿದಳು.

ಅವನು ಸಿಡಿದು ನಿಂತ. ಅವನ ಹೊಸ ರೂಪ ಕಂಡು ಅವಳು ದಂಗಾದಳು. ’ನೀನು ನನ್ನಲ್ಲಿ ಎನೆಲ್ಲಾ ಹೇಳಿಕೊಂಡಿದ್ದಿ ಗೊತ್ತಾ...? ಅದನ್ನ ನಾನು ಇದುವರೆಗೂ ಯಾರಿಗೂ ಹೇಳಿಲ್ಲ...’ ಮೌನ ಮೊಗ್ಗೆಯನೊಡೆದು ಮಾತಾಗಿ ಹೊರಬರುತಿತ್ತು!

ಅವಳು ಜರ್ರನೆ ಇಳಿದು ಹೋದಳು. ಅವಳು ಪ್ರಾಕ್ಟಿಕಲ್ ಕಿಟಿಸಿಸಂ ವಿದ್ಯಾರ್ಥಿ. ಒಂದು ಶಬ್ದ ಕೊಡುವ ಹತ್ತಾರು ಅರ್ಥ, ಯಾವ ಕಾಂಟ್ಕ್ಸೆಟ್ ಒಳಗಡೆ ಯಾವ ಅರ್ಥ ಸ್ಫುರಿಸಬಲ್ಲುದು ಎಂಬುದೆಲ್ಲಾ ಅವಳಿಗೆ ಗೊತ್ತು. ಕ್ಷಣಾರ್ಧದಲ್ಲಿ ಅವಳು ನಿರ್ಧರಿಸಿಬಿಟ್ಟಳು; ಇಂದು ಈಸಂಬಂಧದ ಎಕ್ಸ್ ಪಯರಿ ಡೇಟ್. ಮುಗಿಯಿತು; ಎಲ್ಲವೂ ಮುಗಿಯಿತು.

ಆಯ್ಕೆಗಳು ಇಲ್ಲದಿದ್ದಾಗ್ಯೂ ನಿಷ್ಟೂರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಳು. ಅದವಳ ಶಕ್ತಿ.ಚಿಕ್ಕಂದಿನಿಂದಲೇ ಅದವಳಿಗೆ ಸಿದ್ಧಿಸಿತ್ತು. ಅಳು ಅವಳ ಪಾಲಿಗಂತೂ ಅಸಹಾಯಕತೆಯ ಲಕ್ಷಣ ಅಲ್ಲ. ಆಪ್ತರ ವಿಷಯಕ್ಕೆ ಬಂದಾಗ ಭಾವನೆಗಳೇ ಅವಳನ್ನಾಳುತ್ತವೆ.. ಇಷ್ಟರವರೆಗೆ ಅವನ ವಿಷಯಕ್ಕೆ ಭಾವನೆಗಳೇ ಮುನ್ನೆಲೆಗೆ ಬರುತ್ತಿದ್ದವು, ಈಗ..

ತಟ್ಟನೆ ಅವಳಿಗೆ ಹೊಳೆಯಿತು; ಅವನ ಇರವಿನ ಬಗ್ಗೆ ತನ್ನಲ್ಲಿ ಯಾವುದೇ ಆಧಾರ ಇಲ್ಲ, ಅವನ ಸಂಪರ್ಕದ ಕೊಂಡಿ ಕೇವಲ ಮೊಬೈಲ್ ಮಾತ್ರ, ಸಿಮ್ ಬದಲಾಯಿಸಿದರೆ ಅವನನ್ನು ಈ ಮಹಾನಗರದಲ್ಲಿ ಪತ್ತೆ ಮಾಡುವುದು ಸಾಧ್ಯವೇ ಇಲ್ಲ, ಆದರೆ ಅವನಿಗೆ ತನ್ನ ಮನೆ ಗೊತ್ತು, ಆಪೀಸು ಗೊತ್ತು, ಬಂಧು- ಬಾಂಧವರು ಗೊತ್ತು. ಪ್ರೆಂಡ್ಸ್ ಗೊತ್ತು. ಮನಸ್ಸು ಎಚ್ಚರಿಸಿತು ’ನೀನು ರೂಪಕಗಳಲ್ಲೇ ಉಳಿದು ಬಿಟ್ಟೆ. ವಾಸ್ತವಕ್ಕೆ ಬಾ’

ಅವನು ಯಾರಲ್ಲಿ ಹೇಳಬಹುದೆಂಬ ಸ್ಪಷ್ಟ ಕಲ್ಪನೆ ಅವಳಿಗಿತ್ತು. ಅಂದರೆ ಆತ ’ಅಲ್ಲಿಗೆ’ ತಲುಪಲು ತನ್ನನ್ನು ಏಣಿಯಾಗಿ ಬಳಸಿಕೊಂಡುಬಿಟ್ಟನೇ..?

ಅವಳಿಗೆ ತಡೆದುಕೊಳ್ಳಲಾಗಲಿಲ್ಲ. ಕುರ್ಚಿಯಲ್ಲಿ ಕುಳಿತಿದ್ದವಳು ತಟ್ಟನೆ ನೆಲಕ್ಕೆ ಕುಸಿದಳು. ಗೋಡೆಗೊರಗಿ ಮಂಡಿ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು. ತಲೆ ಭಾರವಾಯಿತು. ಗಂಟಲ ಪಸೆ ಆರಿ ಹೋಯಿತು. ನೀರು ಬೇಕೇ ಬೇಕು ಅನಿಸಿತು. ಗೋಡೆ ಹಿಡಿದುಕೊಂಡು ತಡವರಿಸುತ್ತಲೇ ಅಡುಗೆ ಕೋಣೆಗೆ ಹೋಗಿ ಜಗ್ಗಿನಿಂದ ನೀರು ಬಗ್ಗಿಸಿಕೊಂಡಳು. ಕೈ ನಡುಗಿ ನೀರು ಗ್ಲಾಸಿನ ಸುತ್ತೆಲ್ಲಾ ಹರಿದಾಡಿತು. ಜಗ್ಗಿಗೇ ಬಾಯಿಟ್ಟು ನೀರು ಹೀರತೋಡಗಿದಳು. ಧರಿಸಿದ್ದ ಟಾಪ್ ಒದ್ದೆಯಾಯಿತು,

ಹಾಸಿಗೆಯಲ್ಲಿ ಬಂದು ಬಿದ್ದುಕೊಂಡಳು. ದಿಂಬನ್ನು ಕೆನ್ನೆಗೆ ಒತ್ತಿಕೊಂಡು ಕವುಚಿ ಮಲಗಿದಳು. ತಲೆ ನೋಯಲು ಆರಂಭವಾಯಿತು. ಯಾರದಾದರು ಕೈಯನ್ನು ಬದ್ರವಾಗಿ ಹಿಡಿದುಕೊಳ್ಳಬೇಕು, ತೋಳನ್ನು ಅವುಚಿಕೊಳ್ಳಬೇಕೆನಿಸಿತು. ಆದರೆ ಇಹ ಲೋಕದ ಯಾರೂ ನೆನಪಾಗಲಿಲ್ಲ. ಡ್ರಾವರ್ ಎಳೆದು ಒಂದು ನಿದ್ರೆ ಮಾತ್ರೆ ನುಂಗಿ ಕಣ್ಮುಚ್ಚಿದಳು.

ಎಳೆ ಬಿಸಿಲು ಮುಖದ ಮೇಲೆ ಬಿದ್ದಾಗ ಎಚ್ಚರಾಯಿತು. ಕೈ ಅನಾಯಸವಾಗಿ ಮೊಬೈಲಿನತ್ತ ಹೋಯಿತು. ಮೊದಲ ಬಾರಿಗೆ ಅವನ ಮೆಸೇಜ್ ಮಿಸ್ ಆಗಿತ್ತು.

ಆಮೇಲೆಯೂ ಬರಲಿಲ್ಲ.

ಕೆಲವು ತಿಂಗಳು ಕಳೆಯಿತು. ಒಂದು ದಿನ ಅವಳು ಕೆನೆಟಿಕ್ ನಲ್ಲಿ ಹೋಗುತ್ತಿದ್ದಳು. ಪಕ್ಕದಲ್ಲೇ ಒಂದು ಪಲ್ಸರ್ ಪಾಸಾಯ್ತು ಅವಳು ತನ್ನಲ್ಲೇ ಅಂದುಕೊಂಡಳು ’ಇವನು ಅವನನ್ನು ಹೋಲುತ್ತಾನಲ್ಲಾ....’

ಅವಳು ಅಕ್ಸಿಲೇಟರ್ ತಿರುಗಿಸಿದಳು.